ವಿಮೋಚನೆಯ ಸಂದಿಗ್ಧ ಅಧ್ಯಾಯಗಳು My Liberation Notes

Date: 09-06-2022

Location: ಬೆಂಗಳೂರು


'ಬಿಡುಗಡೆ ಹೊಂದಬಯಸುವವರ ಖಾಸಗಿಯಾದ ಟಿಪ್ಪಣಿಯನ್ನು ಕೆದಕಿದರೆ ಎಲ್ಲಿಯೋ ಒಂದು ಕಡೆ ತನ್ನನ್ನು ತಾನು ಬಂಧಿಸಿಟ್ಟುಕೊಳ್ಳುವ ಬಯಕೆಯೂ ಕಾಣಿಸಿಕೊಳ್ಳಬಹುದು. ಸಂತೃಪ್ತ ಬದುಕನ್ನು ನಡೆಸುತ್ತಿರುವವರ ಮನಸ್ಸಿನ ಮೂಲೆಯಲ್ಲೆಲ್ಲೋ ಬಿಡುಗಡೆಯ ಹಂಬಲ ತನ್ನ ಸಮಯಕ್ಕಾಗಿ ಕಾಯುತ್ತಿರಬಹುದು' ಎನ್ನುತ್ತಾರೆ ಲೇಖಕಿ ಅಂಜನಾ ಹೆಗಡೆ. ಅವರು ತಮ್ಮ ಬೆಳ್ಳಕ್ಕಿ ಸಾಲು ಅಂಕಣದಲ್ಲಿ ಈ ಸಲ My Liberation Notes ವೆಬ್ ಸಿರೀಸ್ ಕುರಿತು ಬರೆದಿದ್ದಾರೆ.

ಮನುಷ್ಯನ ಹೋರಾಟಗಳ ಮೂಲ ತನ್ನನ್ನು ತಾನು ಬಂಧಿಸಿಕೊಳ್ಳುವುದರಲ್ಲಿದೆಯೇ ಅಥವಾ ಬಿಡುಗಡೆಗೊಳಿಸಿಕೊಳ್ಳುವುದರಲ್ಲಿಯೇ ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಬಂಧನಗಳೆಡೆಗಿನ ಅಭಿಲಾಷೆಯಷ್ಟೇ ತೀವ್ರವಾಗಿ ಬಿಡುಗಡೆಯ ಹಂಬಲವೂ ಹುಟ್ಟುಗುಣವಾಗಿ ಅಸ್ತಿತ್ವದಲ್ಲಿರಬಹುದೇ ಅಥವಾ ಬಂಧನಗಳನ್ನು ಬಯಸುವವರದ್ದೊಂದು ಹಾಗೂ ಬಿಡುಗಡೆಯನ್ನು ಅಪೇಕ್ಷಿಸುವವರದ್ದು ಇನ್ನೊಂದು ಹೀಗೆ ಎರಡು ಬೇರೆಬೇರೆ ವರ್ಗಗಳಿರಬಹುದೇ? ತಾನು ಬಿಡುಗಡೆಯನ್ನು ಬಯಸುತ್ತಿದ್ದೇನೆ ಎನ್ನುವುದು ಅರ್ಥವಾದ ತಕ್ಷಣ ಅದರ ಅರ್ಥವ್ಯಾಪ್ತಿ, ಇತಿಮಿತಿಗಳೂ ಅರಿವಾಗುವಂತಹ ಸುಲಭವಾದ ವಿಮೋಚನೆಯ ಹಾದಿಯೂ ತೆರೆದುಕೊಳ್ಳಬಹುದೇ? ನಿಕಟತೆ-ಅಧೀನತೆಗಳನ್ನು ಅನಿವಾರ್ಯವಾಗಿಯಾದರೂ ಒಪ್ಪಿಕೊಂಡಿರುವ ಮನುಷ್ಯ ಇದ್ದಕ್ಕಿದ್ದಂತೆ ವಿಮೋಚನೆಯ ಹಾದಿ ತುಳಿದರೆ ಅದಕ್ಕೆ ತಕ್ಕಂತೆ ಎಲ್ಲವೂ ಬದಲಾಗಬಹುದೇ? ಬಂಧನಕ್ಕೂ ಬಿಡುಗಡೆಗೂ ಇರುವ ಅತಿ ತೆಳುವಾದ ಗೆರೆಯೊಂದು ಬದುಕುಗಳನ್ನೇ ಬದಲಿಸಿಬಿಡುವಂತಹ ಗೋಡೆಯಾಗಿ ಬೆಳೆದುಬಿಟ್ಟರೆ ಯಾವ ಮಾರ್ಗ ಸುಲಭವೆನ್ನಿಸುತ್ತದೆಯೋ ಅದೇ ಮಾರ್ಗದಲ್ಲಿ ಚಲಿಸುವ ಅನಿವಾರ್ಯತೆಯೂ ತಲೆದೋರಬಹುದೇ? ಬದುಕಿನ ಪ್ರತಿ ನಾಳೆಗಳೂ ಅನಿಶ್ಚಿತವಾಗಿರುವಾಗ ಶಾಶ್ವತವಾದ ವಿಮೋಚನೆಯೆನ್ನುವುದು ಪ್ರಾಯೋಗಿಕವಾಗಿ ಸಾಧ್ಯವಿದೆಯೇ? ಹೀಗೆ ಮೇಲ್ನೋಟಕ್ಕೆ ಸರಳವೆನ್ನಿಸಿದರೂ ಉತ್ತರಗಳೇ ದೊರಕದಂತಹ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುವ ಕಥಾಸರಣಿ My Liberation Notes.

ವಿಮೋಚನೆಗಾಗಿ ಹಂಬಲಿಸುವ ಇಲ್ಲಿನ ಪಾತ್ರಗಳು ಗಂಭೀರ ಸ್ವರೂಪದ್ದೆನ್ನುವಂತಹ ಯಾವುದೇ ಸಮಸ್ಯೆಗಳನ್ನೂ ಹೊಂದಿಲ್ಲ; ಪ್ರಾಯ, ಆರೋಗ್ಯ, ಕುಟುಂಬ, ದುಡಿಮೆ ಎಲ್ಲ ಇದ್ದೂ ಸುಖವನ್ನು ನೆಮ್ಮದಿಯಾಗಿ ಪರಿವರ್ತಿಸಿಕೊಳ್ಳಲಾಗದೇ ಅತೃಪ್ತ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಯಾರನ್ನೂ ಯಾರೂ ಬಂಧಿಸಿಟ್ಟಿಲ್ಲವಾದರೂ ತಮ್ಮ ಸುತ್ತ ತಾವೇ ಕಟ್ಟಿಕೊಂಡ ಬೇಲಿಯನ್ನು ದಾಟುವ ದಾರಿಯೇ ಕಾಣದೆ ಕಂಗಾಲಾಗಿದ್ದಾರೆ. ತಮ್ಮ ಸಮಸ್ಯೆಯ ಮೂಲವೆಲ್ಲಿದೆ ಎನ್ನುವುದನ್ನೇ ಅರಿತುಕೊಳ್ಳಲಾಗದೆ, ಅರಿವಿದ್ದರೂ ಅದರಿಂದ ಹೊರಬರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡದೆ, ನಿಜದಲ್ಲಿ ಸಮಸ್ಯೆಗಳೇ ಅಲ್ಲದ ಸಂಗತಿಗಳನ್ನು ಸವಾಲಾಗಿಸಿಕೊಂಡು ಕಂಗೆಟ್ಟಿದ್ದಾರೆ. ಮನಸ್ಸುಬಿಚ್ಚಿ ನಗಲೂ ಸಾಧ್ಯವಾಗದ ಉಸಿರುಗಟ್ಟಿಸುವ ಆ ಆವರಣದಿಂದ ಹೊರಬಂದರಷ್ಟೇ ಎಲ್ಲ ಹೊಯ್ದಾಟಗಳಿಂದ ಅವರು ಪಾರಾಗಬಲ್ಲರು. ಬೇರೆಯವರಿಗೆ ಕಾಣಿಸದ, ಯಾರಲ್ಲಿಯೂ ಹೇಳಿಕೊಳ್ಳಲಾಗದ ಎಲ್ಲ ಸಂಕಷ್ಟಗಳಿಂದ ದೂರವಾಗಲು ಅವರು ತಮ್ಮನ್ನು ತಾವು ಬಂಧಮುಕ್ತರನ್ನಾಗಿಸಿಕೊಳ್ಳಬೇಕಿದೆ. ತಮ್ಮ ಮೇಲೆಯೇ ತಮಗೆ ಹುಟ್ಟಿಕೊಂಡಿರುವ ಅಸಮಾಧಾನ, ಕೀಳರಿಮೆ, ಕಿರಿಕಿರಿಗಳಿಂದ ಮುಕ್ತರಾಗಿ ತಮ್ಮನ್ನು ತಾವು ಪ್ರೀತಿಸಿಕೊಳ್ಳುವ ಬಗೆಯನ್ನು ಕಂಡುಕೊಳ್ಳಬೇಕಾಗಿದೆ. ಆ ಹುಡುಕಾಟದ ಮಾರ್ಗದಲ್ಲಿ ಅವರಿಗೆ ಎದುರಾಗುವ ಸವಾಲುಗಳು, ಬದಲಾವಣೆಯ ದಿಟ್ಟ ಹೆಜ್ಜೆಗಳು, ಅಲ್ಲಲ್ಲಿ ಕಾಣಿಸಿಕೊಳ್ಳುವ ಪ್ರೀತಿ ತುಂಬಿದ ಕ್ಷಣಗಳೇ ಈ ಸರಣಿಯ ಕಥಾವಸ್ತು.

ನಗುಮೊಗವನ್ನು ಇಷ್ಟಪಡದವರು ಯಾರಿದ್ದಾರೆ! ಯಾವುದೋ ಸ್ಥಳದಲ್ಲಿ ಅಚಾನಕ್ಕಾಗಿ ಎದುರಾಗುವ ಗುರುತು-ಪರಿಚಯವೇ ಇಲ್ಲದವರ ನಗುಮೊಗವು ಕೂಡಾ ಉಲ್ಲಾಸವನ್ನು ತರುವಂಥದ್ದು. ಆದರೆ ಇಲ್ಲೊಬ್ಬಳಿಗೆ ತನ್ನ ನಗುಮೊಗದ ಕುರಿತಾಗಿ ಬೇಸರವಿದೆ; ಎಂತಹ ಸಂದರ್ಭಗಳಲ್ಲಿಯೂ, ದುಃಖಭರಿತ ವಾತಾವರಣದಲ್ಲಿಯೂ ನಗುತ್ತಿರುವಂತೆ ಭಾಸವಾಗುವ ತನ್ನ ಮುಖಭಾವದ ಕುರಿತಾಗಿ ಅಸಮಾಧಾನವಿದೆ; ಅದರಿಂದ ಬಿಡುಗಡೆ ಬೇಕಾಗಿದೆ. ಅವಳ ಸಮಸ್ಯೆಯನ್ನು ಆಲಿಸುವವರಿಗೆ ಅದು ಬಾಲಿಶವಾಗಿಯೂ, ಸುಲಭವಾಗಿ ಬಗೆಹರಿಸಿಕೊಳ್ಳಬಲ್ಲಂಥ ತೊಂದರೆಯಂತೆಯೂ ಕಾಣಿಸಬಹುದು. ಆದರೆ ಆ ಸಮಸ್ಯೆಯನ್ನು ಅನುಭವಿಸುತ್ತಿರುವ ವ್ಯಕ್ತಿಯ ಜಾಗದಲ್ಲಿ ನಿಂತು ಯೋಚಿಸಿದರೆ, ತನ್ನ ಮುಖಭಾವದ ಮೇಲೆ ತನಗೇ ನಿಯಂತ್ರಣವಿಲ್ಲದ ಅಸಹಾಯಕ ಪರಿಸ್ಥಿತಿಯ ಗಂಭೀರತೆಯನ್ನು ಅಲ್ಲಗಳೆಯಲಾದೀತೇ! ಎಷ್ಟೇ ಮನಬಿಚ್ಚಿ ತನ್ನ ಸಮಸ್ಯೆಯ ಸ್ವರೂಪವನ್ನು ಹೇಳಿಕೊಳ್ಳಲು ಅವಳು ಪ್ರಯತ್ನಿಸಿದರೂ ಎದುರಿಗಿರುವವರಿಗೆ ಅದರ ಸಂಪೂರ್ಣ ಚಿತ್ರಣ ದೊರಕಲು ಸಾಧ್ಯವಿದೆಯೇ! ತನ್ನ ತಳಮಳವನ್ನು ತಾನೇ ಭರಿಸುತ್ತ, ಸಹಜಸ್ಥಿತಿಯ ಮುಖಭಾವವನ್ನು ಹೊಂದಲು ಅವಿರತವಾಗಿ ಪ್ರಯತ್ನಿಸುವುದೊಂದೇ ಅವಳ ಎದುರಿಗಿರುವ ದಾರಿ. ಅವಳು ವಿಮೋಚನೆಯನ್ನು ಬಯಸುತ್ತಿರುವುದು ತನ್ನ ಅಸಹಜ ಮುಖಭಾವದಿಂದಲೋ, ಅದರಿಂದಾಗಿ ತನಗುಂಟಾಗುತ್ತಿರುವ ಮುಜುಗರದಿಂದಲೋ ಅಥವಾ ಈ ಕ್ಷಣ ತನ್ನೊಳಗೆ ಯಾವ ಭಾವನೆಯಿದೆ ಎನ್ನುವುದನ್ನು ವ್ಯಕ್ತಪಡಿಸಲಾಗದ ಅಸಹಾಯಕ ಪರಿಸ್ಥಿತಿಯಿಂದಲೋ ಎನ್ನುವ ಪ್ರಶ್ನೆಗಳಿಗೆ ಅವಳಲ್ಲಿಯೇ ಉತ್ತರಗಳಿಲ್ಲ. ಈ ಸಮಸ್ಯೆಯಿಂದ ಬಿಡುಗಡೆ ದೊರಕಿದ ಸಮಾಧಾನದ ಹಿಂದೆಯೇ ಇದಕ್ಕಿಂತಲೂ ಗಂಭೀರ ಸ್ವರೂಪದ ತೊಡಕೊಂದು ಎದುರಾಗುವುದಿಲ್ಲ ಎನ್ನುವ ಖಾತರಿಯೂ ಇಲ್ಲ.

ಅವಳು ಇಷ್ಟಪಟ್ಟವರೆಲ್ಲರೂ ಒಂದಲ್ಲ ಒಂದು ಕಾರಣಗಳಿಗಾಗಿ ಅವಳಿಂದ ದೂರವಾಗಿದ್ದಾರೆ. ಅವಳೀಗ ತನ್ನನ್ನು ತಾನು ದೂಷಿಸಿಕೊಳ್ಳುವ ಹಂತವನ್ನು ತಲುಪಿದ್ದಾಳೆ. ತನ್ನನ್ನು ಆರಾಧಿಸಬಲ್ಲ ಜೀವವೊಂದರ ಹುಡುಕಾಟದಲ್ಲಿದ್ದಾಳೆ. ಪ್ರೀತಿ-ಪ್ರೇಮಗಳೆಲ್ಲ ಯಾವ ಕ್ಷಣದಲ್ಲಾದರೂ ಮುಗಿದುಹೋಗಬಹುದು, ಆರಾಧನೆಯೊಂದೇ ಬದುಕಿಗೆ ಚೈತನ್ಯ ತುಂಬಬಲ್ಲ ಸಂಗತಿಯೆಂದು ಬಲವಾಗಿ ನಂಬಿದ್ದಾಳೆ. ಕೆಟ್ಟ ನೆನಪುಗಳನ್ನು ನೀಡಿ ದೂರವಾದವರಿಂದ, ಆ ಅಗಲುವಿಕೆ ತನ್ನಲ್ಲಿ ಉಂಟುಮಾಡಿದ ಕೀಳರಿಮೆಯಿಂದ, ಎಲ್ಲರಂತೆ ಸಹಜವಾಗಿ ಬದುಕಲಾರದ ಸಂಕಟದಿಂದ ಅವಳಿಗೆ ಬಿಡುಗಡೆ ಬೇಕಾಗಿದೆ; ಹೃದಯದ ತುಂಬ ಪ್ರೀತಿಯನ್ನೇ ತುಂಬಿಕೊಂಡು, ತನ್ನನ್ನು ತಾನು ಪ್ರೀತಿಸಿಕೊಳ್ಳುವ ಸಮಯಕ್ಕಾಗಿ ಅವಳು ಹಾತೊರೆಯುತ್ತಿದ್ದಾಳೆ. ತಾನು ಪ್ರಾಮಾಣಿಕವಾಗಿ ಪ್ರೀತಿಸಿದವರೇ ತನಗೆ ಮಾಡಿದ ಮೊಸದಿಂದಾಗಿ ಅವರನ್ನು ದ್ವೇಷಿಸುವ ಹಟಕ್ಕೆ ಬಿದ್ದವಳಂತೆ ಬದುಕುತ್ತಿದ್ದಾಳೆ; ನೆಮ್ಮದಿಯ ಬದುಕು ಅವಳಿಂದ ದೂರವಾಗಿದೆ. ತನ್ನನ್ನು ಆರಾಧಿಸುವವರು ದೊರಕಿದ ದಿನ ಎಲ್ಲವೂ ಒಳ್ಳೆಯದಾಗಲಿದೆ ಎನ್ನುವ ನಂಬಿಕೆಯಲ್ಲಿ ದಿನಗಳನ್ನು ಕಳೆಯುತ್ತಿದ್ದಾಳೆ. ತಾನು ಎಲ್ಲರಂತೆಯೇ ಬದುಕಬೇಕಾಗಿಲ್ಲ, ತನ್ನ ಬದುಕಿನ ದಾರಿ ಬೇರೆಯೇ ಇದೆ ಎಂದುಕೊಂಡಿರುವ ಅವಳ ನಂಬಿಕೆಗೂ ಬಿಡುಗಡೆಯ ಅಗತ್ಯವಿದೆ ಎನ್ನುವುದು ಅವಳ ಅರಿವಿಗೆ ಬಂದಿಲ್ಲ. ಅವಳಂದುಕೊಂಡಂತೆ ಅವಳನ್ನು ಆರಾಧಿಸುವ ವ್ಯಕ್ತಿ ಜತೆಯಾದಾಗಲೂ, ಆ ಪ್ರೀತಿಯಲ್ಲಿ ಅವಳು ಬಯಸಿದ್ದ ಬಿಡುಗಡೆ ಸಿಗುತ್ತದೆಯೆನ್ನುವ ಭರವಸೆಯಿಲ್ಲ. ಪ್ರೀತಿಯ ಬಂಧನದಲ್ಲಿಯೇ ತನ್ನೆಲ್ಲ ಗೊಂದಲಗಳಿಗೆ ಪರಿಹಾರವಿದೆಯೆಂದುಕೊಂಡಿರುವ ಅವಳ ನಂಬಿಕೆಯ ಮಾರ್ಗದಲ್ಲಿ ಏನೆಲ್ಲ ಬದಲಾಗಲಿದೆಯೋ ಬಲ್ಲವರಾರು! ವಿಮೋಚನೆಯ ಹಾದಿಯ ಅನೂಹ್ಯ ತಿರುವುಗಳಲ್ಲಿ ಎದುರಾಗುವ ಸಂದಿಗ್ಧತೆಗಳಿಗೂ ಅದೇ ದಾರಿಯಲ್ಲಿಯೇ ಬಿಡುಗಡೆ ದೊರಕಬಹುದೇ!

ಅವನಿಗೆ ತನ್ನ ನಿಜವಾದ ಸಮಸ್ಯೆಯೇನು ಎನ್ನುವುದೇ ಅರ್ಥವಾಗುತ್ತಿಲ್ಲ. ಹೆಂಡತಿ ವಿಚ್ಛೇದನ ಪಡೆದು ದೂರವಾದ ಮೇಲೆ ಮಗಳು ಹಾಗೂ ಸಹೋದರಿಯರೊಂದಿಗೆ ದಿನಗಳನ್ನು ಕಳೆಯುತ್ತಿರುವ ಅವನು ಮನಬಿಚ್ಚಿ ನಗುವುದನ್ನೂ, ಮಾತನಾಡುವುದನ್ನೂ ಮರೆತಿದ್ದಾನೆ. ಅವನ ಅಂತರಂಗದ ನೋವು ವಿಚ್ಛೇದನವೇ, ಮಗಳ ಸಂತೋಷಕ್ಕಾಗಿ ತನ್ನ ವೈಯಕ್ತಿಕ ಸುಖವನ್ನು ತ್ಯಾಗಮಾಡಬೇಕಾದ ಅನಿವಾರ್ಯತೆಯೇ ಅಥವಾ ತನ್ನ ಬದುಕನ್ನು ತನ್ನಿಷ್ಟದಂತೆ ರೂಪಿಸಿಕೊಳ್ಳಲಾರದ ಅಸಮರ್ಥತೆಯೇ ಎನ್ನುವುದು ಅವನಿಗೇ ಅರ್ಥವಾಗಿಲ್ಲ. ತಾನೇ ತನ್ನ ಸುತ್ತ ಕಟ್ಟಿಕೊಂಡಿರುವ ಗೋಡೆಗಳ ನಡುವೆ ಬಂಧಿಯಾಗಿರುವ ಅವನ ವಿಮೋಚನೆಯ ಹಾದಿ ಸುಲಭವಾದದ್ದಲ್ಲ. ಪ್ರೀತಿ-ನಂಬಿಕೆಗಳೇ ನೋವಿನ ಹಾದಿಯಲ್ಲಿ ನೆಮ್ಮದಿ ತರುವ ಸಂಗತಿಗಳಾಗಬಲ್ಲ ಸತ್ಯ ಈತನ ವಿಷಯದಲ್ಲಿ ನಿಜವಲ್ಲ. ತನ್ನ ಸಂತೋಷಕ್ಕಾಗಿ ತಾನು ಏನನ್ನೂ ಮಾಡಿಕೊಳ್ಳಲಾರದವನ ಅಸಹಾಯಕತೆಗೆ ಬೇರೆ ಯಾರು ಪರಿಹಾರ ಹುಡುಕಬಲ್ಲರು; ಪರಿಹಾರವೇ ಇಲ್ಲದ ಗೊಂದಲಗಳಿಂದ ಬಿಡುಗಡೆ ಹೊಂದುವ ಪ್ರಯತ್ನವಾದರೂ ಪ್ರಾಯೋಗಿಕವಾಗಿ ಸಾಧ್ಯವಿದೆಯೇ! ಸಮಸ್ಯೆಯ ಮೂಲ, ಸ್ವರೂಪಗಳು ಅರಿವಾಗುವ ಹೊತ್ತಿಗಾಗಲೇ ಬಿಡುಗಡೆಯ ದಾರಿ ಇನ್ನಷ್ಟು ಜಟಿಲವಾಗಲಿದೆ. ವಿಮೋಚನೆಯೆಡೆಗಿನ ಉತ್ಕಟವಾದ ಬಯಕೆಯೊಳಗೆ ಬಂಧಿಯಾಗಿದ್ದುಕೊಂಡೇ ಸಣ್ಣಪುಟ್ಟ ಸಂತೋಷಗಳನ್ನು ನಮ್ಮದಾಗಿಸಿಕೊಳ್ಳುತ್ತ ಹೋಗುವುದೇ ಬದುಕನ್ನು ಸಹನೀಯವಾಗಿಸಿಕೊಳ್ಳಲು ಇರುವ ಏಕೈಕ ಮಾರ್ಗ. ಬಂಧನವೆಂದುಕೊಂಡಿರುವ ಗೋಡೆಗಳ ನಡುವೆಯೇ ಅಗೋಚರ ಕಿಟಕಿಯೊಂದು ಇದ್ದಿರಬಹುದು; ಅದನ್ನು ದಾಟಿಬರುವ ಬೆಳಕಿನ ಕಿರಣವೊಂದು ಬಿಡುಗಡೆಯ ಹೊಸ ಅಧ್ಯಾಯವನ್ನು ಬರೆಯಲು ನೆರವಾಗಬಹುದು!

ಯಾವುದನ್ನು ಸರಳವೆಂದುಕೊಳ್ಳುತ್ತೇವೆಯೋ ಅಲ್ಲೊಂದು ಸಂಕಷ್ಟ, ಸುಲಭಸಾಧ್ಯವೆಂದುಕೊಂಡಿರುವ ಸಂಗತಿಗಳಲ್ಲಿನ ಜಟಿಲತೆ, ಸಂಕೀರ್ಣ ಸಮಸ್ಯೆಯನ್ನು ಪರಿಹರಿಸಬಲ್ಲ ಸುಲಭೋಪಾಯ ಎಲ್ಲವೂ ಬದುಕಿನ ವಿವಿಧ ಆಯಾಮಗಳು. ಬಿಡುಗಡೆ ಹೊಂದಬಯಸುವವರ ಖಾಸಗಿಯಾದ ಟಿಪ್ಪಣಿಯನ್ನು ಕೆದಕಿದರೆ ಎಲ್ಲಿಯೋ ಒಂದು ಕಡೆ ತನ್ನನ್ನು ತಾನು ಬಂಧಿಸಿಟ್ಟುಕೊಳ್ಳುವ ಬಯಕೆಯೂ ಕಾಣಿಸಿಕೊಳ್ಲಬಹುದು. ಸಂತೃಪ್ತ ಬದುಕನ್ನು ನಡೆಸುತ್ತಿರುವವರ ಮನಸ್ಸಿನ ಮೂಲೆಯಲ್ಲೆಲ್ಲೋ ಬಿಡುಗಡೆಯ ಹಂಬಲ ತನ್ನ ಸಮಯಕ್ಕಾಗಿ ಕಾಯುತ್ತಿರಬಹುದು. ನನ್ನ ಬದುಕು ನನ್ನ ಕೈಯಲ್ಲೇ ಇದೆಯೆಂದುಕೊಳ್ಳುವಷ್ಟು ಸರಳ ಯಾರ ಜೀವನವೂ ಅಲ್ಲ; ಇದು ಹೀಗೆಯೇ ಎಂದು ಬೇಲಿ ಕಟ್ಟಿ ಬಂಧಿಸಿಡಬೇಕಾದಷ್ಟು ಜಟಿಲವೂ ಅಲ್ಲ. ಬಿಡುಗಡೆ ಬಯಸುವವರಿಗೆ ಬಿಡುಗಡೆಯೂ, ಬಂಧನದಲ್ಲಿ ಸುಖಕಾಣುವವರಿಗೆ ಬಂಧನವೂ ಇಲ್ಲಿ ಏಕಕಾಲಕ್ಕೆ ಲಭ್ಯವಿದೆ. ಒಮ್ಮೆ ನಮ್ಮ ಆಯ್ಕೆಗಳೇ ನಮ್ಮ ಬದುಕಿನ ತಿರುವುಗಳನ್ನು ನಿರ್ಧರಿಸಿದರೆ, ಮತ್ತೊಮ್ಮೆ ನಮಗರಿವಿಲ್ಲದೆಯೇ ಹೊಸಹೊಸ ಅಧ್ಯಾಯಗಳು ಹುಟ್ಟಿಕೊಳ್ಳುತ್ತವೆ. ಸಂದಿಗ್ಧ ತಿರುವುಗಳನ್ನೆಲ್ಲ ದಾಟಿನಿಂತ ಯಾವುದೋ ಘಳಿಗೆಯಲ್ಲಿ ವಿಮೋಚನೆಯ ಕೊನೆಯ ಅಧ್ಯಾಯವೊಂದು ಸದ್ದಿಲ್ಲದೆ ಸೃಷ್ಟಿಯಾಗುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ಅಗೋಚರ ಕತೆಗಳ ಅಂತ್ಯವಿಲ್ಲದ ಸ್ವಗತಗಳು AGE OF YOUTH
ಅವಶೇಷಗಳ ಅನ್ವೇಷಣೆ RAIN OR SHINE
ಗೆಲುವಿನ ಹಂಬಲದ ನೋವಿನ ಹಗರಣ SCAM 1992
ಅಂತ್ಯವಿಲ್ಲದ ಸಂಘರ್ಷಗಳ ಪೂರ್ವಚರಿತ್ರೆ ROCKET BOYS
ಏಕಾಂತದೊಂದಿಗೆ ಸರಳ ಸಂಭಾಷಣೆ STORIES BY RABINDRANATH TAGORE
ಬಂಧನಕ್ಕೂ ಬಿಡುಗಡೆಗೂ ಏಕೈಕ ರಹದಾರಿ MODERN LOVE
ಕೆಂಪು ಕೂದಲಿನ ರಾಜಕುಮಾರಿಯ ಕತೆ ANNE WITH AN E
https://www.bookbrahma.com/news/asahayaka-gadirekheya-kanasina-payana-crash-landing-on-you
ಮುಗುಳ್ನಗೆಯ ಆಲಿಂಗನ SOMETHING IN THE RAIN (KOREAN ROMANTIC DRAMA)
ಒಳತಾರಸಿಯ ಒಂಟಿ ಚೌಕಗಳು THE QUEEN'S GAMBIT
ಅನುರಾಗದ ಮಧುರ ಆಲಾಪ BANDISH BANDITS (INDIAN ROMANTIC DRAMA)
ಆಧುನಿಕ ಲೋಕದ ಆತ್ಮಾವಲೋಕನ MADE IN HEAVEN (INDIAN ROMANTIC DRAMA)
ನೋವು-ನಲಿವುಗಳ ಪಂಚಾಯಿತಿ PANCHAYAT (HINDI COMEDY-DRAMA)
ಬಿಡುಗಡೆಯ ಹಾದಿಯ ಪಿಸುಮಾತು IT'S OKAY TO NOT BE OKAY(KOREAN DRAMA)

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...