Date: 06-12-2025
Location: ವಿಜಯಪುರ
ವಿಜಯಪುರ: ಪರಿಸರ ಸಂರಕ್ಷಣೆ ಮತ್ತು ಪಾರಂಪರಿಕ ಸ್ಮಾರಕಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಜಯಪುರದಲ್ಲಿ ಆಯೋಜಿಸಲಾಗಿದ್ದ 2 ದಿನಗಳ 'ವೃಕ್ಷಥಾನ್ - 2025' ಕಾರ್ಯಕ್ರಮದ ಮೊದಲ ದಿನದಲ್ಲಿ 4 ವಿವಿಧ ವಿಚಾರಗೋಷ್ಠಿಗಳು ನಡೆದವು. ಈ ಕಾರ್ಯಕ್ರಮವು ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಿಂದ ಕೂಡಿತ್ತು, ಮತ್ತು ಇದು ಸಮಗ್ರ ವಿಚಾರ ವಿನಿಮಯಕ್ಕೆ ವೇದಿಕೆಯಾಯಿತು.
ವಿಜಯಪುರದ ಇತಿಹಾಸ ಮತ್ತು ಪರಂಪರೆಯ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ, ಇತಿಹಾಸಕಾರ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಮಾತನಾಡಿ, ಆದಿಲ್ ಶಾಹಿಗಳ ಕಾಲದಲ್ಲಿ ಪರ್ಶಿಯಾ ದೇಶದ ಅನೇಕ ರಾಯಭಾರಿಗಳು ಇಲ್ಲಿಗೆ ಬರುತ್ತಿದ್ದರು. ಅವರು ತಮ್ಮ ಕೃತಿಗಳಲ್ಲಿ ಬಿಜಾಪುರವನ್ನು ಜಗತ್ತಿನ ಅತಿ ಶ್ರೇಷ್ಠ ನಗರ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು. ಇದಲ್ಲದೆ, ಅವರು ಆದಿಲ್ ಶಾಹಿಗಳ ಸಂಸ್ಕೃತಿಯ ಕುರಿತಾದ ವಿಚಾರಗಳನ್ನು ಹಂಚಿಕೊಂಡರು. ಇತಿಹಾಸಕಾರ ಆನಂದ ಕುಲಕರ್ಣಿ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ವಿಜಯ ಕುಮಾರ್ ಅವರು ಸಹ ವಿಜಯಪುರದ ಹೆಗ್ಗಳಿಕೆ ಮತ್ತು ಪರಂಪರೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಗೋಷ್ಠಿಯನ್ನು ಸ್ಮಾರಕ ಸಂರಕ್ಷಕ ಅಮೀನುದ್ದೀನ್ ಹುಲ್ಲೂರ್ ಅವರು ಸಂಯೋಜಿಸಿದರು.
ಆರೋಗ್ಯ ಮತ್ತು ಒತ್ತಡ ನಿರ್ವಹಣೆ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ, ಕರ್ನಾಟಕದ ಕೈಗಾರಿಕಾ ಸಚಿವರ ಕಾರ್ಯದರ್ಶಿಗಳಾದ ನರೇಂದ್ರ ಅವರು ಮಾತನಾಡಿ, "ನಾವು ದೇಹ ದಂಡಿಸಲು ವಿವಿಧ ರೀತಿಯ ವ್ಯಾಯಾಮ ಮತ್ತು ಆಹಾರ ಸೇವನೆಯನ್ನು ಮಾಡುತ್ತಿದ್ದೇವೆ. ಆದರೆ, ಕೇವಲ ಅದರಿಂದಲೇ ಮಾನಸಿಕ ಒತ್ತಡವು ಸಮತೋಲಕ್ಕೆ ಬರುತ್ತದೆಯೇ? ಇದು ನಾವೆಲ್ಲರೂ ಯೋಚನೆ ಮಾಡಬೇಕಾದ ವಿಷಯ. ಪ್ರತಿದಿನ ಯೋಗ ಮತ್ತು ಪ್ರಾಣಾಯಾಮದಂತಹ ಅಭ್ಯಾಸಗಳನ್ನು ಮಾಡುವುದರಿಂದ ದೇಹದ ಜೊತೆಗೆ ಮನಸ್ಸು ಸಹ ಚೆನ್ನಾಗಿ ಇರುತ್ತದೆ," ಎಂದು ಅಭಿಪ್ರಾಯಪಟ್ಟರು.
ವೈದ್ಯರಾದ ಶಂಕರಗೌಡ ಪಾಟೀಲ್ ಅವರು ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ಮಾತನಾಡಿದರು. ಈ ಗೋಷ್ಠಿಯಲ್ಲಿ ರಾಜಕಾರಣಿಗಳಾದ ಆರ್. ಎಸ್. ಪಾಟೀಲ್ (ಕುಚಬಾಳ) ಹಾಗೂ ವ್ಯಾಪಾರಸ್ಥರಾದ ಅನುಪಮ್ ರೂನ್ವಾಲ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಪರಿಸರ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ, ಗುರುದೇವಾಶ್ರಮ, ಕಾಖಂಡಕಿ ಮಠದ ಶಿವಯೋಗೀಶ್ವರ ಸ್ವಾಮೀಜಿಯವರು ಪರಿಸರದ ಸಂರಕ್ಷಣೆಯ ಬಗ್ಗೆ ಆಶೀರ್ವಚನ ನೀಡಿದರು. ಐಎಫ್‌ಎಸ್ ಅಧಿಕಾರಿಯಾದ ಹಾಗೂ ಕೆಎಸ್‌ಡಿಎಲ್‌ನ ಎಂಡಿ ಆದ ಪ್ರಶಾಂತ್ ಪಿಕೆಎಂ ಅವರು ಪರಿಸರ ಸಂಬಂಧಿತ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಬಳಿಕ ಬಸವರಾಜ ಬೈಚಬಾಳ ಮತ್ತು ಬಿಎಲ್‌ಡಿಇ ಇಂಜಿನಿಯರಿಂಗ್ ಕಾಲೇಜಿನ ಅನುರಾಧ ಟಂಕಸಾಲಿ ಅವರು ಪರಿಸರ ಕಾಳಜಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕ್ರೀಡೆ (ಸೈಕ್ಲಿಂಗ್ ಮತ್ತು ಓಟದ ಪ್ರಯೋಜನಗಳು) ಕುರಿತಾ ವಿಚಾರಗೋಷ್ಠಿಯಲ್ಲಿ, ಹವ್ಯಾಸಿ ಫಿಟ್ನೆಸ್ ತರಬೇತುದಾರರಾದ ಕಿರಣ್ ಬೆಟಗೇರಿ ಅವರು ದೈಹಿಕ ಫಿಟ್ನೆಸ್ ಕುರಿತು ಮಾಹಿತಿ ನೀಡಿದರು. ಕಲಬುರಗಿಯ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಸಂಗನಗೌಡ ಅವರು ಭಾಗವಹಿಸಿದ್ದರು. ಇದರ ಜೊತೆಗೆ, ನಿವೃತ್ತ ರಕ್ಷಣಾ ಅಧಿಕಾರಿ ಎಸ್ ಹರಿನಾಥ್ ಮತ್ತು ಹೋಟೆಲ್ ಉದ್ಯಮಿ ಶಾಂತೇಶ್ ಕಲಸಗೊಂಡ ಅವರು ಕ್ರೀಡಾ ಚಟುವಟಿಕೆಗಳ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಚಿವ ಎಂ.ಬಿ. ಪಾಟೀಲ್ ಅವರು ಕಾರ್ಯಕ್ರಮಕ್ಕೆ ಶುಭ ಕೋರಿ , ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು.
ಜ್ಞಾನ, ಆರೋಗ್ಯ, ಪರಂಪರೆ ಮತ್ತು ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸು ಉದ್ದೇಶದಿಂದ ನಡೆದ ಈ ಕಾರ್ಯಕ್ರಮದ ಸಂಪೂರ್ಣ ನೇರಪ್ರಸಾರವನ್ನು ಬುಕ್ ಬ್ರಹ್ಮ ಫೇಸ್ ಬುಕ್ ಮತ್ತು ಯುಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
©2025 Book Brahma Private Limited.