ವ್ಯಾಸೋಚಿಷ್ಟಮ್ ಜಗತ್ ಸರ್ವಂ....

Date: 30-09-2020

Location: ಬೆಂಗಳೂರು


ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಶಾಂತ ಆಡೂರ ಹವ್ಯಾಸಿ ಬರಹಗಾರರು. ಹಾಸ್ಯ ಮತ್ತು ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಲಲಿತ ಪ್ರಬಂಧ ರಚಿಸುವ ಪ್ರಶಾಂತ ಅವರ ’ಕುಟ್ಟವಲಕ್ಕಿ’ ’ಗೊಜ್ಜವಲಕ್ಕಿ’ಮತ್ತು ’ಅಳ್ಳಿಟ್ಟು’ ಎಂಬ ಮೂರು ಲಲಿತ ಪ್ರಬಂಧಗಳ ಪುಸ್ತಕ ಪ್ರಕಟಿಸಿದ್ದಾರೆ. ಅವರು ತಮ್ಮ ಓದು ಹಾಗೂ ಪುಸ್ತಕ ಪ್ರೀತಿಯನ್ನು ಹಂಚಿಕೊಳ್ಳುವ ಅಂಕಣ e-ಸಂಭಾಷಣೆ. ಈ ಅಂಕಣದಲ್ಲಿ ಕೆ.ಎಂ. ಮುನ್ಶಿ ಅವರ ಕೃಷ್ಣಾವತಾರ ಕೃತಿಯ ಬಗ್ಗೆ ಬರೆದಿದ್ದಾರೆ.

ಒಮ್ಮೆ ಛೇದಿ ರಾಜ್ಯದ ರಾಜನಾದ ಉಪರಿಚರ ವಾಸುವು ಬೇಟೆಗೆ ಹೋಗಿದ್ದನು. ಬೇಟೆಯ ನಂತರ ವಿಶ್ರಾಂತಿ ಮಾಡುತ್ತಿರುವ ಸಂದರ್ಭದಲ್ಲಿ ಅವನಿಗೆ ಸ್ವಪ್ನದಲ್ಲಿ ಪತ್ನಿ ಗಿರಿಕೆಯನ್ನು ನೆನೆದು ವೀರ್ಯ ಸ್ಖಲನವಾಯಿತು. ಆಗಿನ ಕಾಲದಲ್ಲಿ ವೀರ್ಯ ನಾಶ ಮಾಡುವದು ಮಹಾ ಪಾಪವಾಗಿದ್ದರಿಂದ ಅವನು ಒಂದು ದೊನ್ನೆಯಲ್ಲಿ ತನ್ನ ವೀರ್ಯವನ್ನು ಹದ್ದಿನ ಮುಖಾಂತರ ತನ್ನ ರಾಣಿಗೆ ಕಳಿಸಿ ಕೊಟ್ಟನು. ಹದ್ದು ದೊನ್ನೆಯೊಂದಿಗೆ ಹಾರುತ್ತಿರುವಾಗ ಮಾರ್ಗದಲ್ಲಿ ಮತ್ತೊಂದು ಹದ್ದು ಎದುರಾಗಿ ಅದರೊಂದಿಗೆ ಕಾಳಗ ಮಾಡುವ ಸಂದರ್ಭದಲ್ಲಿ ದೊನ್ನೆಯು ಕೆಳಗೆ ಹರಿಯುತ್ತಿದ್ದ ಯಮುನಾ ನದಿಯಲ್ಲಿ ಬಿದ್ದಿತು. ಆ ವೀರ್ಯವು ಮೀನಿನೊಂದರ ಗರ್ಭ ಸೇರಿ ಆ ಮೀನು ಗರ್ಭ ಧರಿಸಿತು. ಮುಂದೆ ಮೀನುಗಾರನ ಬಲೆಯಲ್ಲಿ ಸಿಕ್ಕ ಈ ಮೀನನ್ನು ಸೀಳಿದಾಗ ಅದರಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಶಿಶುಗಳು ದೊರೆತವು. ಆಶ್ಚರ್ಯ ಮತ್ತು ಗಾಬರಿಗೊಂಡ ಮೀನುಗಾರನು ಆ ಎರಡು ಶಿಶುಗಳನ್ನು ಪ್ರಾಂತದ ರಾಜನಿಗೆ ಒಪ್ಪಿಸಿದನು. ರಾಜನು ಗಂಡು ಶಿಶುವನ್ನು ಇಟ್ಟುಕೊಂಡು ಮೀನಿನ ವಾಸನೆ ಇದ್ದ ಹೆಣ್ಣು ಶಿಶುವನ್ನು ಸಾಕುವಂತೆ ಮೀನುಗಾರನಿಗೆ ಆದೇಶಿಸಿದನು.

ಎರಡು ಶಿಶುಗಳಿಗೆ ಜನ್ಮವಿತ್ತ ಮೀನು ಹಿಂದಿನ ಜನ್ಮದಲ್ಲಿ ಶಾಪಗ್ರಸ್ಥವಾಗಿದ್ದ ಅಪ್ಸರೆ- ಅದ್ರಿಕಾ

ಗಂಡು ಶಿಶು ಮುಂದೆ ಮತ್ಸ್ಯ ಅಧಿಪತ್ಯವನ್ನು ಸ್ಥಾಪಿಸಿದ ಮತ್ಸ್ಯರಾಜ

ಹೆಣ್ಣು ಶಿಶು ಮತ್ಸ್ಯಗಂಧೆ, ಮೀನಿನ ವಾಸನೆ ಹೊಂದಿದವಳು ಎಂದು ಅವಳಿಗೆ ಆ ಹೆಸರ ಇತ್ತು, ಅವಳ ಇನ್ನೊಂದು ಹೆಸರು ಸತ್ಯವತಿ.

ಇದು ಒಂದು ಪುರಾಣದಲ್ಲಿ ಬರುವ ಕಥೆ................

ಇನ್ನೂ ಎರಡನೇಯ ಕಥೆ..

ಒಂದಾನೊಂದು ಕಾಲದಲ್ಲಿ ಪರಾಶರ ಎಂಬ ಮಹರ್ಷಿಗಳಿದ್ದರು. ವಿಷ್ಣು ಪುರಾಣವನ್ನು ರಚಿಸಿದ ಕೀರ್ತಿ ಅವರದಾಗಿತ್ತು. ಒಮ್ಮೆ ಅವರು ಯಮುನಾ ನದಿಯನ್ನು ನಾವೆಯಲ್ಲಿ ದಾಟುತ್ತಿರುವಾಗ ನಾವೆ ನಡೆಸುತ್ತಿದ್ದ ಸುಂದರಿಯನ್ನು ಕಂಡು ಆಕರ್ಷಿತರಾದರು. ಅವಳ ಸೌಂದರ್ಯಕ್ಕೆ ಅತ್ಯಂತ ಮೋಹಗೊಂಡ ಮುನಿಗಳು ಅವಳಿಗೆ ತಮ್ಮ ಮನಸ್ಸಿನ ಅಭಿಲಾಶೆಯನ್ನು ವ್ಯಕ್ತಪಡಿಸಿದರು. ಅವರ ಪರಿ ಪರಿ ಬೇಡಿಕೆಗೆ ನಿರಾಕರಿಸಲಾಗದೆ ಸುಂದರಿಯು ಮೂರು ಶರತ್ತುಗಳೊಂದಿಗೆ ಮುನಿಗಳೊಂದಿಗೆ ಮಿಲನಕ್ಕೆ ಒಪ್ಪಿಗೆ ನೀಡಿದಳು.

ಮೊದಲನೆಯದಾಗಿ ಅವರ ಮಿಲನವನ್ನು ಯಾರು ನೋಡದಂತೆ ಕೃತಕ ಮೋಡ ಸೃಷ್ಟಿಸಬೇಕು. ಎರಡನೆಯದಾಗಿ ಮೀನಿನ ವಾಸನೆಯುಕ್ತ ಅವಳ ಶರೀರ ಸುಹಾಸನೆಯುಕ್ತ ಶರೀರವಾಗಬೇಕು ಮತ್ತು ಮಿಲನದ ನಂತರವು ಅವಳ ಕನ್ಯತ್ವವು ಹಾಗೇಯೇ ಉಳಿಯಬೇಕು. ಕೊನೆಯದಾಗಿ ಅವರ ಮಿಲನದಿಂದ ಹುಟ್ಟುವ ಮಗುವು ಮೀನುಗಾರನಾಗದೇ ಒಬ್ಬ ಶ್ರೇಷ್ಟ ಋಷಿಯಾಗಬೇಕು ಎಂದು ಶರತ್ತುಗಳನ್ನು ವಿಧಿಸಿದಳು. ಮಹರ್ಷಿ ಪರಾಶರರು ಅವಳ ಪ್ರತಿಯೊಂದು ಶರತ್ತುಗಳಿಗೆ ತಮ್ಮ ಒಪ್ಪಿಗೆ ಸೂಚಿಸಿದರು. ಅವರ ಮಿಲನದ ಪ್ರತಿಫಲದಿಂದ ಆ ಸುಂದರಿಗೆ ಒಂದು ಗಂಡು ಮಗುವಿನ ಜನ್ಮವಾಗಿತು.

ಆ ಸುಂದರಿ ಮತ್ಸಗಂಧೆ, ಸತ್ಯವತಿ... ಅವಳ ದೇಹದ ಮೀನಿನ ವಾಸನೆ ಪರಾಶರ ಮುನಿಗಳ ವರದಿಂದ ಮಾಯವಾಗಿ ಅವಳ ದೇಹ ಪರಿಮಳಯುಕ್ತವಾದ್ದರಿಂದ ಅವಳನ್ನು ಯೋಜನಗಂಧೆ ಎಂದೂ ಕರೆಯಲಾಯಿತು.

ಅವರಿಬ್ಬರಿಂದ ಜನಿಸಿದ ಆ ಶಿಶುವೇ ವ್ಯಾಸ...

ಜನ್ಮತಃ ಕೃಷ್ಣ ಬಣ್ಣ ( ಕಪ್ಪು) ಹೊಂದಿದ್ದರಿಂದ ಮತ್ತು ದ್ವೀಪದಲ್ಲಿ ಜನಿಸಿದ್ದರಿಂದ ಆ ಶಿಶುವಿಗೆ ’ಕೃಷ್ಣ-ದ್ವೈಪಾಯನ’ ಎಂದೂ ಕರೆಯುತ್ತಾರೆ.

ನನ್ನ ಇಂದಿನ ಅಂಕಣ ವ್ಯಾಸರಿಗೆ ಸಂಬಂಧ ಪಟ್ಟಿದ್ದರಿಂದ ಅವರ ಜನ್ಮದ ವೃತ್ತಾಂತದ ರಹಸ್ಯವನ್ನು ಎರಡು ಪುರಾಣಿಕ ಕಥೆಗಳಿಂದ ಪ್ರಾರಂಭ ಮಾಡಿದ್ದೇನೆ. ಕಥೆಗಳು ಬೇರೆ ಬೇರೆ ಪುರಾಣಗಳಲ್ಲಿ, ಬೇರೆ ಬೇರೆ ಮಹನಿಯರಿಂದ ಪ್ರವಚನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ವಿಭಿನ್ನವಾಗಿ ಉಲ್ಲೇಖವಾಗಿವೆ.

ಇನ್ನು ವ್ಯಾಸರನ್ನು ಇಂದಿನ ಅಂಕಣದಲ್ಲಿ ಆಯ್ಕೆ ಮಾಡಿಕೊಳ್ಳಲು ಕಾರಣ ಅವರ ಬಗ್ಗೆ ನಾನು ಇತ್ತೀಚಿಗೆ ಓದಿದ ’ಕೃಷ್ಣಾವತಾರ’ ಎಂಬ ಅತ್ಯಂತ ಅದ್ಭುತವಾದ ಐದು ಭಾಗಗಳಲ್ಲಿ ವಿಂಗಡಿಸಿದ ಕನ್ನಡದ ಗ್ರಂಥ. ನಾಲ್ಕನೇ ಭಾಗದಲ್ಲಿ ವೇದ ವ್ಯಾಸರ ಬಗ್ಗೆ ಅತ್ಯಂತ ಸೊಗಸಾಗಿ, ಕಣ್ಣಿಗೆ ಕಟ್ಟುವಂತೆ ವ್ಯಾಸರ ಭವ್ಯ ಚರಿತ್ರೆಯನ್ನು ವಿವರಿಸಲಾಗಿದೆ. ಮೇಲಿನ ಉಪಕಥೆಗಳು ’ಕೃಷ್ಣಾವತಾರ’ ಪುಸ್ತಕದಿಂದ ಆಯ್ದು ಕೊಂಡಿರುವ ಕಥೆಗಳು ಅಲ್ಲ, ವೇದ ವ್ಯಾಸರ ಹುಟ್ಟಿನ ಬಗ್ಗೆ ಆಸಕ್ತಿಯಿಂದ ಹುಡುಕಿದಾಗ ಸಿಕ್ಕ ಅನೇಕ ಕಥೆಗಳಲ್ಲಿ ಒಂದು ಕಥೆಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇನೆ.

ಈ ಕೃಷ್ಣಾವತಾರ ಗ್ರಂಥದ ಐದು ಸಂಪುಟಗಳನ್ನು ಬರೆದವರು ಕೆ.ಎಮ್. ಮುನ್ಶಿಯವರು ಅದನ್ನು ಕನ್ನಡಕ್ಕೆ ಅನುವಾದಿಸಿದವರು ಸಿದ್ದವನಹಳ್ಳಿ ಕೃಷ್ಣಶರ್ಮರು.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ವ್ಯಾಸರು ಬ್ರಹ್ಮರಚಿತ ಕ್ಲಿಷ್ಟಕರವಾದ ವೇದಗಳನ್ನು ವಿಂಗಡಿಸಿದವರು, ಹದಿನೆಂಟು ಪುರಾಣಗಳನ್ನು, ಉಪ ಪುರಾಣಗಳು ಬರೆದವರು. ಮಹಾಭಾರತದ ರಚನೆಕಾರರು. ಭಾಗವತದ ಸೃಷ್ಟಿಕರ್ತರು, ಮಹಾಭಾರತದ ಕೇಂದ್ರ ವ್ಯಕ್ತಿಯೇ ವೇದವ್ಯಾಸರು. ಬಹುಶಃ ಮಹಾಭಾರತವನ್ನು ಓದಿದ, ತಿಳಿದ ಪ್ರತಿಯೊಬ್ಬರಿಗೂ ಅವರ ಮಹಾಭಾರತದಲ್ಲಿನ ಪಾತ್ರದ ಸಂಪೂರ್ಣ ವಿವರ ಗೊತ್ತಿದೆ. ಅದನ್ನು ಹೊರತು ಪಡಿಸಿ ವೇದವ್ಯಾಸರನ್ನು ಅರ್ಥ ಮಾಡಿಕೊಳ್ಳಲು, ಅವರು ಹೇಗೆ ಸನ್ಯಾಸಿಗಳ ಪರಂಪರೆಯ ಮೂಲ ಪುರುಷರಾಗಿ ಸನಾತನ ಧರ್ಮದ ಸ್ಪೂರ್ತಿಯನ್ನು ಕಾಯಲು ಅಮೋಘ ಸೇವೆಯನ್ನು ಮಾಡಿದರು ಎಂಬುದನ್ನು ಕೃಷ್ಣಾವತಾರದ ನಾಲ್ಕನೇ ಭಾಗದಲ್ಲಿ ವಿಸ್ತೃತವಾಗಿ ಉಲ್ಲೇಖಿಸಲಾಗಿದೆ.

ಇಂದು ನಾವು ಉಚ್ಛರಿಸುವ ಪ್ರತಿಯೊಂದು ಮಂತ್ರಗಳ ಪಠಣದ ರೀತಿ, ನಿರ್ಧಾರ, ಕ್ರಮ ಎಲ್ಲವೂ ನಿಯೋಜಿತವಾಗಿದ್ದು ವ್ಯಾಸರ ಸಮಯದಲ್ಲಿಯೇ, ಅದೇ ನಮಗೆ ಇಂದಿಗೂ ಪರಂಪರೆಯಾಗಿ ಬಂದಿದೆ.

ಮಾತೆತ್ತಿದರೇ ಸಾಮಾಜಿಕ ಸಾಮರಸ್ಯತೆ ಬಗ್ಗೆ ಇಂದು ಮಾತನಾಡುವ ನಾವು ಸಾವಿರಾರು ವರ್ಷಗಳಿಂದ ಬ್ರಹ್ಮ, ಕ್ಷತ್ರೀಯ, ವೈಶ್ಯ, ಶೂದ್ರ ಎನ್ನುವ ಚಾತುರ್ವರ್ಣಗಳು ಇನ್ನು ಸಮಾಜಿಕ ಪದ್ದತಿಯಾಗುತ್ತಿರುವ ಸಂದರ್ಭದಲ್ಲಿ ನಮ್ಮ ಇತಿಹಾಸದಲ್ಲಿ, ಸಂಸ್ಕೃತಿಯಲ್ಲಿ ಇದ್ದ ಸಾಮಾಜಿಕ ಸಾಮಾರಸ್ಯದ ಬಗ್ಗೆ ಕೆಲವೊಮ್ಮೆ ಮರೆತು ಹೋಗುತ್ತೇವೆ.

ವ್ಯಾಸರ ಮುತ್ತಜ್ಜರಾದ ವಶಿಷ್ಟರು ಒಬ್ಬ ವೈಶ್ಯೆಯ ಮಗನಾಗಿದ್ದರು, ಬ್ರಹ್ಮರ್ಷೀ ವಿಶ್ವಾಮಿತ್ರ ಜನ್ಮತಃ ಬ್ರಾಹ್ಮಣನಾಗಿರದೇ ಕ್ಷತ್ರೀಯ ದೊರೆಯ ಮಗನಾಗಿದ್ದ, ವೇದವ್ಯಾಸರೇ ಬೆಸ್ತನ ಮಗಳ ಮಗನಾಗಿದ್ದರು, ಕೃಷ್ಣನ ತಂದೆ ನಾಗಕುಮಾರಿಯ ಸಂತಾನ, ಭೀಮ ರಾಕ್ಷಸಿಯ ಮದುವೆ ಆದವನು, ಅರ್ಜುನ ನಾಗ ಕನ್ಯೆಯರನ್ನು ವಿವಾಹ ಮಾಡಿಕೊಂಡಿದ್ದ. ಈ ಪರಿಯಾಗಿ ಸಮಾಜದ ಬೇರೆ ಬೇರೆ ವರ್ಣಗಳಿದ್ದವರೆಲ್ಲಾ ಸನಾತನ ಧರ್ಮದ ವ್ಯಾಪ್ತಿಯಲ್ಲಿ ಬಂದು ಸಾಮಾಜಿಕ ಸಾಮರಸ್ಯದಿಂದ ಬದುಕಿದ್ದು ಈ ವ್ಯಾಸರ ಕಾಲದಲ್ಲಿಯೇ. ಅಖಂಡ ದೇಶ ಒಂದೇ ಎಂದು ಐಕಮತ್ಯವನ್ನು ಸ್ಥಾಪಿಸಿ ಎಲ್ಲರಿಗೂ ಇಲ್ಲಿ ಮನ್ನಣೆ ಸಿಗುವಂತೆ ಮಾಡಿದ್ದು ಈ ವ್ಯಾಸರು ಎಂದು ಮುನ್ಶಿಯವರು ವ್ಯಾಸರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.

ಕೆ. ಎಂ. ಮುನ್ಶಿಯವರು ತಮ್ಮ ಈ ಕೃಷ್ಣಾವತಾರದ ವ್ಯಾಸರ ಭಾಗದಲ್ಲಿ ಸ್ಪಷ್ಟವಾಗಿ ವ್ಯಾಸರು ಒಂದು ಮುಖದ ಬ್ರಹ್ಮ, ಎರೆಡು ಕೈಗಳ ವಿಷ್ಣು, ಮೂರನೇ ಕಣ್ಣು ಇಲ್ಲದ ಶಿವ. ಅವರು ಸಾಕ್ಷಾತ ವಿಷ್ಣುವಿನ ಅವತಾರವೇ ಎಂದು ತಮ್ಮ ಮುನ್ನಡಿಯಲ್ಲಿ ವ್ಯಾಸರನ್ನು ವ್ಯಾಖ್ಯಾನಿಸಿದ್ದಾರೆ. ಅವರೇ ಹೇಳಿದಂತೆ ಭಗವದ್ಗೀತೆಯಲ್ಲಿ ಸಾಕ್ಷಾತ ಶ್ರೀಕೃಷ್ಣನು ನಾನೇ ವ್ಯಾಸ ಎಂದು ಹೇಳಿಕೊಂಡಿದ್ದಾನೆ.

ಕೃಷ್ಣಾವತಾರದಲ್ಲಿ ಬಂದ ವ್ಯಾಸನ ಪಾತ್ರದ ಬೆನ್ನು ಹತ್ತಿ ಬೇರೆ ಬೇರೆ ಮೂಲಗಳಿಂದ ಪುರಾಣ ಪುಣ್ಯ ಕಥೆಗಳಲ್ಲಿ ವ್ಯಾಸರ ಬಗ್ಗೆ ಉಲ್ಲೇಖಗೊಂಡ ಅಲ್ಪ ಸ್ವಲ್ಪ ವಿಷಯಗಳನ್ನು ನಿಮ್ಮ ಮುಂದೆ ಪ್ರಸ್ತುತ ಮಾಡಿದ್ದೇನೆ. ಈ ಲೇಖನದಲ್ಲಿ ಗುರುರಾಜ ಕರಜಗಿಯವರ ವ್ಯಾಸನ ಬಗ್ಗೆ ನಡೆಸಿಕೊಟ್ಟ ಪ್ರವಚನದ ಕೆಲವು ಅಂಶಗಳನ್ನು ಆಯ್ದು ಕೊಂಡಿದ್ದೇನೆ. ಅವರ ವ್ಯಾಸರ ನಿರೂಪಣೆಯು ಅತ್ಯಂತ ಅದ್ಭುತವಾಗಿದೆ.

ವ್ಯಾಸನ ವ್ಯಕ್ತಿ ಚಿತ್ರಣ ಅಧ್ಯಯನಕ್ಕೆ ಕೆ.ಎಮ್.ಮುನ್ಶಿಯವರ ಕೃಷ್ಣಾವತಾರ ಕಾರಣವಾಯಿತು ಅನ್ನುವದರಲ್ಲಿ ಎರೆಡು ಮಾತಿಲ್ಲ. ಗುರುರಾಜ ಕರಜಗಿಯವರ ಉಪನ್ಯಾಸ ಮಾಲಿಕೆಯಲ್ಲಿ ವ್ಯಾಸರ ಬಗ್ಗೆ ಹೇಳುತ್ತ ಅವರು ಒಂದು ರೇಖಾ ಗಣಿತದ ಮುಖಾಂತರ ವ್ಯಾಸರ ಅನುಭೂತಿ ಮಾಡಿಸಿ ಕೊಡುತ್ತಾರೆ.

ಒಂದು ವೃತ್ತದ ಕೇಂದ್ರದಲ್ಲಿ ತ್ರಿಜ್ಯದೊಂದಿಗೆ ವರ್ತುಳವನ್ನು ಮಾಡಿದಾಗ ಅದು ಸಂಪೂರ್ಣ ಪರಿಧಿಯ ವೃತ್ತ ನಿರ್ಮಾಣವಾಗುತ್ತದೆ. ಕೇಂದ್ರದಿಂದ ಪರಿಧಿಯ ಒಂದು ತುದಿಯನ್ನು ಮುಟ್ಟುವ ರೇಖೆಗೆ ನಾವು ತ್ರಿಜ್ಯ ಎಂದು ಕರೆದರೆ, ಪರಿಧಿಯ ಎರೆಡು ತುದಿಗಳನ್ನು ಮುಟ್ಟುವ ಆದರೇ ಕೇಂದ್ರದ ಮುಖಾಂತರವೇ ಹಾದು ಹೋಗುವ ರೇಖೆಗೆ ನಾವು ವ್ಯಾಸ ಎಂದು ಕರೆಯುತ್ತೇವೆ. ಕೇಂದ್ರದ ಮೂಲಕ ಹಾಯ್ದು ಹೋಗದೆಯೂ ಪರಿಧಿಯ ಎರಡು ತುದಿಗಳನ್ನು ಮುಟ್ಟುವ ರೇಖೆ ವ್ಯಾಸ ವಾಗುವದಿಲ್ಲ.

ಇದನ್ನು ಆಧ್ಯಾತ್ಮಿಕವಾಗಿ, ತಾತ್ವಿಕವಾಗಿ ವಿವರಿಸುತ್ತ ಕರಜಗಿಯವರು ಪ್ರತಿಯೊಂದು ಜೀವಕ್ಕೆ ಕೇಂದ್ರ ಎನ್ನುವದು ಧರ್ಮ ಇದ್ದಂತೆ. ಆ ಧರ್ಮವನ್ನು ಕೇಂದ್ರವಾಗಿಟ್ಟುಕೊಂಡು ಪರಿಧಿಯ ಎರೆಡು ತುದಿಗಳನ್ನು ಮುಟ್ಟುವದು ಮಾತ್ರ ವ್ಯಾಸ. ಒಂದು ತುದಿ ಲೌಕಿಕ ಜೀವನವಾದರೇ ಮತ್ತೊಂದು ತುದಿ ಆಧ್ಯಾತ್ಮಿಕ ಇವೆರಡನ್ನು ಬಂಧಿಸಿ ಇಡುವದೇ ಕೇಂದ್ರ, ಅದೇ ಧರ್ಮ, ಅದೇ ವ್ಯಾಸ.

ಬಹುಶಃ ಇದು ಇಂದು ನಮಗೇ ಅತ್ಯಂತ ಸೂಕ್ತವಾದ ಅತ್ಯಂತ ಸುಲಭವಾಗಿ ವ್ಯಾಸರನ್ನು ಅರ್ಥಮಾಡಿಕೊಳ್ಳ ಬಹುದಾದ ಮತ್ತು ಬದುಕಿನಲ್ಲಿ ಬದುಕುವ ಪರಿಯನ್ನು ತಿಳಿಸುವ, ಕಲಿಸುವ ವಿಧಾನ ಎಂದೆನಿಸುತ್ತದೆ.

ಇಂತಹ ಮಹಾನ ಋಷಿಯ ಜನ್ಮದಿನವನ್ನೇ ನಾವು ಇಂದಿಗೂ ಗುರು ಪೂರ್ಣಿಮಾ ಎಂದು ಆಚರಿಸುವದು. ಇಂತಹ ಮಹರ್ಷಿಯ ಬಗ್ಗೆ, ಅವರ ಜ್ಞಾನ ಭಂಡಾರದ ಬಗ್ಗೆ, ಅವರ ತಪೋಶಕ್ತಿಗಳ ಬಗ್ಗೆ ಅದೇಷ್ಟೋ ಕಥೆಗಳು ಉಪಕಥೆಗಳು ಇವೆ. ಅವರನ್ನು ಅರಿಯಲು ಒಂದು ಜನ್ಮ ಸಾಕಾಗುವದಿಲ್ಲ. ಅವರ ಅಪಾರ ರಚನೆಗಳ ಬಗ್ಗೆ ಕೇಳಿದವರಿಗೆ, ಓದಿದವರಿಗೆ ಇದು ಒಬ್ಬ ವ್ಯಕ್ತಿಯಿಂದ ಸಾಧ್ಯವಾಗಿದ್ದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೀಗಾಗಿ ಕೆಲವೊಬ್ಬರು ವ್ಯಾಸ ಅನ್ನುವ ಏಕಮೇವ ವ್ಯಕ್ತಿ ಇದೆಲ್ಲವನ್ನು ಸಾಧಿಸಿಲ್ಲ, ವ್ಯಾಸ ಅನ್ನುವದು ಪರಂಪರೆ, ಪದವಿ ಆ ಪದವಿಯನ್ನು ಅಲಂಕರಿಸಿದವರೆಲ್ಲ ಸೇರಿ ಇಷ್ಟೊಂದು ಮಹಾನ ಗ್ರಂಥಗಳನ್ನೆಲ್ಲಾ ರಚಿಸಿದ್ದು ಎಂದೂ ಹೇಳಲಾಗುತ್ತದೆ. ವ್ಯಾಸ ಅನ್ನುವದು ಒಂದು ಸಮೀತಿ ಎಂದೂ ಹೇಳಿದವರು ಇದ್ದಾರೆ.

ಇಲ್ಲಿ ನಿಜವಾಗಿ ವ್ಯಾಸ ಯಾರು? ಯಾರ ವ್ಯಾಖ್ಯಾನ ಸರಿ ಅನ್ನುವದಕ್ಕಿಂತ, ವ್ಯಾಸರ ಮೂಲ ಹುಡುಕುವದಕಿಂತ ಆ ವ್ಯಾಸರು ನಮಗೆ ತೋರಿಸಿದ ಜ್ಞಾನದ ಮಾರ್ಗ, ಧರ್ಮದ ಮಾರ್ಗವನ್ನು ನಾವು ಅನುಸರಿಸುವದು ಮುಖ್ಯ ಎಂಬುದು ನನ್ನ ಅನಿಸಿಕೆ. ಅವರ ಆಧ್ಯಾತ್ಮಿಕ ಗ್ರಂಥಗಳಿಂದ ನಮಗೆ ಜ್ಞಾನದ ಬೆಳಕು ದೊರೆತರೆ ನಮ್ಮ ಜನ್ಮ ಸಾರ್ಥಕವಾದಂತೆ. ವ್ಯಾಸರ ಮೂಲ, ಅದು ಪದವಿಯೋ, ಅದು ಒಂದು ಪಂಗಡವೋ, ಪರಂಪರೆಯೋ ಎಂಬುವದು ಇಲ್ಲಿ ಸೂಕ್ತವಲ್ಲ.

ಒಂದೇ ಮಾತಿನಲ್ಲಿ ಹೇಳುವದಾದರೇ ’ವ್ಯಾಸೋಚಿಷ್ಟಮ್ ಜಗತ್ ಸರ್ವಂ....’ ಎಂದು ಶ್ಲೋಕವೇ ಹೇಳುವಂತೆ ಈ ಜಗತ್ತಿನಲ್ಲಿ ವೇದವ್ಯಾಸರು ಮುಟ್ಟದ, ತಿಳಿಯದ ಯಾವುದೇ ವಿಷಯವಿಲ್ಲ. ಮುಂದೆ ಅವತರಿಸಿದ ಎಂತಹ ಮೇಧಾವಿಗಳು ಏನೇ ಹೇಳಿದರು, ಏನೇ ವ್ಯಾಖ್ಯಾನಿಸಿದರು ಅದು ಸಾವಿರಾರು ವರ್ಷಗಳ ಹಿಂದೆ ವ್ಯಾಸರು ಒಂದಿಲ್ಲಾ ಒಂದು ಗ್ರಂಥದಲ್ಲಿ ಉಲ್ಲೇಖಿಸಿದ್ದು ಅನ್ನುವದರಲ್ಲಿ ಎರೆಡು ಮಾತಿಲ್ಲ. ನಮ್ಮ ಇಂದಿನ ಜ್ಞಾನ ವ್ಯಾಸರು ಉಂಡು ಬಿಟ್ಟ ಎಂಜಲದಂತೆ ಅಂತಲೂ ಈ ಶ್ಲೋಕವನ್ನು ಅರ್ಥೈಸಲಾಗುತ್ತದೆ.

ಅವರನ್ನು ಒಂದೇ ಶ್ಲೋಕದಲ್ಲಿ ನಮಿಸಬೇಕು ಅಂದರೆ ಆ ಶ್ಲೋಕ

’ವ್ಯಾಸಾಯ ವಿಷ್ಣು ರೂಪಾಯ ವ್ಯಾಸರೂಪಾಯ ವಿಷ್ಣವೇ |

ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ’

ವಿಷ್ಣುವಿನ ರೂಪದಲ್ಲಿರುವ ವ್ಯಾಸನಿಗೆ, ವ್ಯಾಸನ ರೂಪದಲ್ಲಿರುವ ವಿಷ್ಣುವಿಗೆ, ಸಂಪೂರ್ಣ ವೇದಗಳನ್ನು ಅರಿತ ಬ್ರಹ್ಮಜ್ಞಾನಿಯೇ, ವಶಿಷ್ಟನ ಕುಟಂಬದಲ್ಲಿ ಜನಿಸಿದವನೇ ನಿನಗೆ ನಮೋ ನಮಃ.....

*

ಈ ಅಂಕಣದ ಹಿಂದಿನ ಬರೆಹ

ರಮಣ ಮಹರ್ಷಿಗಳೊಂದಿಗೆ ಸಂಭಾಷಣೆ....

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...