'ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ' : ಕವಿ ಸಿದ್ದಲಿಂಗಯ್ಯ ನೆನಪು


"ಪಾರಂಪರಿಕವಾಗಿ ಬೆಳೆದಿದ್ದ ಶುದ್ಧ ಸಾಹಿತ್ಯದ ಕಲ್ಪನೆ ಅಬದ್ಧವೆಂದಾಯಿತು. 'ಇಕ್ರಲಾ ಒದಿರಲಾ ಈ ನನ್ಮಕ್ಕಳ ಚರ್ಮ ಎಬ್ರಲಾ' ಇವರ ಕಾವ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಪರಿಭಾಷೆಗಳು ಸೇರ್ಪಡೆಯಾದವು. ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು..' ಎನ್ನುವ ಕವಿತೆಯ ಮೂಲಕ ಇಡೀ ಶ್ರಮಿಕ ವರ್ಗದ ಜನರ ಜೀವನ ಚಿತ್ರಣವನ್ನು ಸಿದ್ದಲಿಂಗಯ್ಯ ಅವರು ಕಟ್ಟಿಕೊಟ್ಟಿದ್ದಾರೆ" ಎಂದು ಬಣ್ಣಿಸಿದ್ದಾರೆ ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಪಿ.ನಂದಕುಮಾರ್. ಕವಿ ಸಿದ್ದಲಿಂಗಯ್ಯ ಅವರ ಜನ್ಮದಿನ ಅಂಗವಾಗಿ ಬರೆದಿರುವ ಲೇಖನ ನಿಮ್ಮ ಓದಿಗಾಗಿ.

ಕವಿ ಜನ್ಮದಿನದ ಈ ಘಳಿಗೆಯಲ್ಲಿ ಕೆಲ ನುಡಿಗಳೂಟ್ಟಿಗೆ ನೆನವು. ಡಾ. ಸಿದ್ದಲಿಂಗಯ್ಯ ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ. ದಲಿತ್ವತ್ವ ಅವರ ಜೀವನ ದ್ರವ್ಯವಾದರೂ ಅದನ್ನು ಮೀರಿಸಿದಂತೆ ಮಾನವೀಯ, ಜೀವಪರ ನೆಲೆಯಲ್ಲಿ ಬದುಕನ್ನು ಕಾಣುವ, ಒಲವಿನ ಚೇತನವಾಗಿದ್ದವರು. ಶತಮಾನಗಳ ನೋವು, ಅವಮಾನ, ಹಸಿವುಗಳ ಒಳಸಂಕಟ ಪ್ರತಿಕ್ರಿಯಾತ್ಮಕವಾಗಿ ಕಾವ್ಯದ ಮೂಲಕ ದನಿಯೆತ್ತಿದವರು ಸಿದ್ದಲಿಂಗಯ್ಯನವರು. ಇವರ ಕಾವ್ಯವೂ ಎಲ್ಲ ವರ್ಗದ ಜನ ಸಮುದಾಯಗಳಿಗೆ ಹಾಡಿನ ಮೂಲಕ ಚಿರಪರಿಚಿತ.

ಪ್ರೊ. ಬಿ ಕೃಷ್ಣಪ್ಪ , ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಚಂದ್ರಪ್ರಸಾದ್ ತ್ಯಾಗಿ, ಕೊಠಗನಹಳ್ಳಿ ರಾಮಯ್ಯ ಕಾಳೆಗೌಡ ನಾಗವಾರ್ ಇನ್ನು ಮುಂತಾದವರ ಪ್ರಾಮಾಣಿಕ ಹೋರಾಟದ ಮನೋಭಾವ,ದಮನಿತ ವರ್ಗಗಳ ಶೋಷಣೆ ಮುಕ್ತಿಯ ಆಶಯ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ವಿಚಾರಧಾರೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹುಟ್ಟಿಕೊಂಡಿದ್ದೆ 'ದಲಿತ ಸಂಘರ್ಷ ಸಮಿತಿ'. ಎಪ್ಪತ್ತರ ಕಾಲಘಟ್ಟದಲ್ಲಿ ದಲಿತ ಚಳುವಳಿ ಕರ್ನಾಟಕದ ಇತಿಹಾಸದ ಮಟ್ಟಿಗೆ ಬಹು ಮಹತ್ವದ ಚಳುವಳಿಯಾಗಿತ್ತು.

ದನಿಯಿಲ್ಲದ ಸಮಾಜದ ಕಟ್ಟಕಡೆಯ ಮನುಷ್ಯ ಮೊದಲ ಬಾರಿಗೆ ದನಿಯತ್ತಿ ಪ್ರತಿಭಟಿಸಲಾರಂಭಿಸಿದ ಚಳುವಳಿ. ಬೂಸಾ ಚಳುವಳಿಯ ನಂತರದಲ್ಲಿ ಈ ಚಳುವಳಿಯು ಮತಷ್ಟು ಪ್ರಖರತೆಯನ್ನು ಪಡೆದುಕೊಂಡಿತ್ತು. ಶೋಷಿತ ಸಮುದಾಯಕ್ಕೆ ಮತ್ತು ಮೊದಲ ತಲೆಮಾರಿನ ದಲಿತ ಯುವ ವಿದ್ಯಾರ್ಥಿಗಳಿಗೆ ಅಸಮಾನತೆಯ ದಾರಿದ್ರ್ಯದಿಂದ ಬಿಡುಗಡೆಯ ಆಲೋಚನಾ ಸ್ವರೂಪ ಭಿನ್ನ ರೂಪವನ್ನು ಪಡೆದುಕೊಳ್ಳುವುದರ ಮೂಲಕ ಪ್ರಜ್ಞಾವಂತರನ್ನಾಗಿಸಿತು. ಈ ಸಂದರ್ಭದಲ್ಲಿ ಹಳ್ಳಿಗಾಡಿನ ದಲಿತರಿಗೆ ಅಸ್ಪೃಶ್ಯತೆ, ಅಸಮಾನತೆ, ಜಮೀನ್ದಾರಿ ಪದ್ದತಿಯ ವಿರುದ್ದದ ಹೋರಾಟಕ್ಕೆ ಅಣಿ ಗೊಳಿಸಿದ್ದು ಸಿದ್ದಲಿಂಗಯ್ಯ ನವರ ಕವಿತೆಗಳು. ಇವುಗಳ ಜೊತೆಗೆ ದಲಿತ ಸಂಘರ್ಷ ಸಮಿತಿಯ ವತಿಯಿಂದ ಶಿಬಿರಗಳನ್ನು ಮಾಡುತ್ತ ಯುವ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಸಮಿತಿಯು ಬುನಾದಿ ಹಾಕಿತು.

ಅತ್ಯಾಚಾರ, ಬಿಟ್ಟಿ ದುಡುಮೆ , ದೌರ್ಜನ್ಯ ನಿರಂತರವಾಗಿ ನಡೆಯುತ್ತ ಅದೊಂದು ಜೀವನಕ್ರಮವಾಗಿತ್ತು. ಅದೊಂದು ಸಹಜವೆಂಬಂತೆ ಶೋಷಣೆಯನ್ನೂ ಒಪ್ಪಿಕೊಂಡಿದ್ದ ಅನಕ್ಷರಸ್ಥ ದಲಿತ ಸಮುದಾಯಕ್ಕೆ ಅದರಿಂದ ಬಿಡುಗಡೆ ಹೊಂದಲು ಹೋರಾಟದ ಮಹತ್ವವನ್ನು ತಿಳಿಹೇಳಿದವರೂ. ಕರ್ನಾಟಕದ ಎಲ್ಲ ಊರು- ಕೇರಿಗಳನ್ನೂ ಜೋಳಿಗೆ ಹಾಕಿಕೊಂಡು ಪಕೀರನಂತೆ ಸುತ್ತಿದವರು. ತಮ್ಮ ಭಾಷಣದ ಮೂಲಕ ದಲಿತ ಸಮುದಾಯಗಳಲ್ಲಿ ಹೋರಾಟದ ಕಿಡಿಯನ್ನ ಬಿತ್ತುತ್ತಿದ್ದರು ಹಾಗೆ ಯುವ ಸಮೂಹದ ಜೊತೆಗೂಡಿ ಹಳ್ಳಿ ಹಳ್ಳಿಗಳಲ್ಲಿ ಕ್ರಾಂತಿಯ ಕಹಳೆಯನ್ನು ಮೊಳಗಿಸಿದರೂ.

ಕನ್ನಡ ದಲಿತ ಸಾಹಿತ್ಯ ಆರಂಭವಾದಾಗ ಕನ್ನಡ ಸಾಹಿತ್ಯದ ಹೊಸ ಸೌಂದರ್ಯ ಮೀಮಾಂಸೆಯನ್ನೇ ಸಿದ್ದಲಿಂಗಯ್ಯನವರ ಕಾವ್ಯ ಸೃಷ್ಟಿಮಾಡಿತು. ಪಾರಂಪರಿಕವಾಗಿ ಬೆಳೆದಿದ್ದ ಶುದ್ಧ ಸಾಹಿತ್ಯದ ಕಲ್ಪನೆ ಅಬದ್ಧವೆಂದಾಯಿತು. 'ಇಕ್ರಲಾ ಒದಿರಲಾ ಈ ನನ್ಮಕ್ಕಳ ಚರ್ಮ ಎಬ್ರಲಾ' ಇವರ ಕಾವ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಪರಿಭಾಷೆಗಳು ಸೇರ್ಪಡೆಯಾದವು. ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು..' ಎನ್ನುವ ಕವಿತೆಯ ಮೂಲಕ ಇಡೀ ಶ್ರಮಿಕ ವರ್ಗದ ಜನರ ಜೀವನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಸಿದ್ದಲಿಂಗಯ್ಯ ನವರ ಅತ್ಯಂತ ಪ್ರಭಾವಿಶಾಲಿ ಕವಿತೆಯೆಂದರೆ ' ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ' ಕರ್ನಾಟಕದಲ್ಲಿನ ದಲಿತ ಹೋರಾಟ ಮತ್ತು ಚಳುವಳಿಗೆ ಇವರ ಕವಿತೆಗಳು ಘೋಷಣಾ ಮಂತ್ರಗಳಾಗಿದ್ದವು.

ನಲವತ್ತೇಳರ ಕವಿತೆ ಕೇವಲ ಆ ಕಾಲಘಟ್ಟಕ್ಕೆ ಮಾತ್ರ ಅನ್ವಯಿಸಬಹುದಾದ ಕವಿತೆ ಅಲ್ಲ, ಇವತ್ತಿನ ಪ್ರಭುತ್ವಕ್ಕೆ ಕೂಡ ಹಿಡಿದ ಕನ್ನಡಿಯಾಗಿದೆ. ಅದು ಕಾಲಾತೀತಿವಾಗಿ ಪ್ರಸ್ತುತಗೊಳ್ಳುವುದಾಗಿದೆ. 'ದಲಿತರು ಬಂದರೂ ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ' ಕವಿತೆಯೂ ಕರ್ನಾಟಕದ ಬಹುತೇಕ ಚಳುವಳಿಗಳಲ್ಲಿ ಘೋಷ್ಯವಾಕ್ಯವಾಗಿ ಬಳಕೆಗೊಂಡಿದ್ದು ನಮಗೆಲ್ಲ ಗೊತ್ತಿರುವ ಸಂಗತಿನೆ. ರೋಷ , ಆವೇಶದಿಂದ ಕೂಡಿದ ಕ್ರಾಂತಿ ಕವಿತೆಗಳನ್ನು ಬರೆದ ಇವರು 1983 ರಲ್ಲಿ ಬಂದ 'ಧರಣಿ ಮಂಡಲ ಮಧ್ಯದೊಳಗೆ' ಎಂಬ ಚಲನಚಿತ್ರಕ್ಕೆ ಗೆಳತಿ ಓ...ಗೆಳತಿ...! ಅಪ್ಪಿಕೊ ಎನ್ನ ಹಾಡನ್ನೂ ಬರೆಯುವುದರ ಮೂಲಕ ಪ್ರೇಮ ಕವಿತೆಯಲ್ಲಿ ಕೂಡ ತಮ್ಮ ಅಸಮಾನತೆ ವಿರುದ್ಧದ ಸಂಗತಿಗಳನ್ನು ವ್ಯಕ್ತಪಡಿಸಿದ್ದಾರೆ. ಕವಿಯೆಂದೇ ಹೆಸರಾಗಿದ್ದರೂ ಏಕಲವ್ಯ, ನೆಲಸಮ, ಪಂಚಮ ನಾಟಕಗಳನ್ನೂ ಕೂಡ ರಚಿಸಿದ್ದಾರೆ. ಅವರ ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಹಲವು ಬಾರಿ ಪ್ರದರ್ಶನ ಕಾಣುವುದರ ಮೂಲಕ ಜನಪ್ರಿಯತೆ ಪಡೆದಿವೆ.

ಅವರ ಊರು-ಕೇರಿ ಆತ್ಮಕಥೆ ಕೇವಲ ಒಬ್ಬ ವ್ಯಕ್ತಿಯ ಚರಿತ್ರೆಯಾಗಿರದೆ ಅದು ಅವರು ಪ್ರತಿನಿಧಿಸುವ ಸಮಾಜದ ಜೀವನಕಥನವೇ ಆಗಿದೆ. ಅವರ ಸಂಶೋಧನಾ ಕೃತಿಯಾದ ಗ್ರಾಮ ದೇವತೆಗಳು ಒಳಗೊಂಡ ಹಾಗೆ ಹಕ್ಕಿ ನೋಟ, ಉರಿಖಂಡಾಯ, ಅವತಾರಗಳು, ಜನ ಸಂಸ್ಕೃತಿ ಹೀಗೆ ಹಲವಾರು ಕೃತಿಗಳನ್ನೂ ರಚಿಸಿದ್ದಾರೆ. ಹಳ್ಳಿಗಳ ಆರ್ದ್ರತೆ, ದಲಿತರ ಬದುಕಿನ ಅಭದ್ರತೆ, ಕಣ್ಣ ಮುಂದಿನ ನಿರುದ್ಯೋಗ, ಇವೆಲ್ಲವೂ ಇವರ ಸಾಹಿತ್ಯದ ವಸ್ತುಗಳಾದವು. ಒಬ್ಬ ರಾಜಕಾರಣಿಯಾಗಿಯೂ ಸಾಂಸ್ಕೃತಿಕ, ಸಾಹಿತ್ಯಿಕ ಹೃದಯಸ್ಪಂದನೆಯನ್ನೊಳಗೊಂಡ ರಾಜಕೀಯ ಎಚ್ಚರದ ವ್ಯಕ್ತಿತ್ವ ಡಾ.ಸಿದ್ದಲಿಂಗಯ್ಯ ನವರದ್ದು. ದಂತಕಥೆಯ ರೂವಾರಿಯಿಂದ ನಾವುಗಳೂ ಕಲಿಯುದು ಬಹಳವಿತ್ತು, ಅಂತ ಒಲವಿನ ಚೇತನದ ಕವಿಯನ್ನ ಕಳೆದುಕೊಂಡ ಕನ್ನಡ ಸಾಹಿತ್ಯ ಬಡವಾಗಿದೆ. ಹಾಗಾಗಿ ಅವರ ಜನ್ಮದಿನದಂದು ಕೊನೆದಾಗಿ ಅವರ ಕವಿತೆಯ ಒಂದು ಸಾಲನ್ನು ದಾಖಲಿಸುತ್ತ, ಕವಿಯನ್ನು ಸ್ಮರಿಸೋಣ' ಜಲವಿಲ್ಲದ ಈ ಭೂಮಿಯ ಮೇಲೆ ಸಾವು ಹಸಿವುಗಳೆ ಅಲೆಯದಿರಿ ಬಲವಿಲ್ಲದ ಈ ಬಳ್ಳಿಯ ಮೇಲೆ ಘೋರ ವೃಕ್ಷಗಳೆ ಎರಗದಿರಿ'

- ಪಿ.ನಂದಕುಮಾರ್ ಲೇಖಕರ ಪರಿಚಯ

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...