ಯಯಾತಿಯ ಮನವೇ ನುಡಿದ ಮುಕುಲಿಕೆ ಮತ್ತು ಮನೋವಿಜ್ಞಾನ

Date: 08-04-2020

Location: ಬೆಂಗಳೂರು


ರಾಜನ ಕಣ್ಣುಗಳ ಮೂಲಕವೇ ಆತನ ಇಡೀ ವ್ಯಕ್ತಿತ್ವವನ್ನು ಖಚಿತವಾಗಿ ಹೇಳುವ ಸಾಧಾರಣ ವೇಶ್ಯೆಯೊಬ್ಬಳು ಯಾವೊಬ್ಬ ಮನೋವಿಜ್ಞಾನಿಗಿಂತ ಕಡಿಮೆಯೇನಲ್ಲ. ನೀವು ಯಾವುದನ್ನು ಮುಚ್ಚಿಡಬೇಕೆಂದು ಬಯಸುತ್ತೀರೋ ಅದನ್ನೇ ಕಣ್ಣುಗಳು ಹೇಳುತ್ತಿರುತ್ತವೆ. ಮನೋವಿಜ್ಞಾನದ ಇಂತಹ ಸೂಕ್ಷ್ಮತೆಗಳನ್ನು ಒಳಗೊಂಡ ಶ್ರೇಷ್ಠ ಕಾದಂಬರಿ-ಯಯಾತಿ. ಒಂದು ಸಣ್ಣ ಪ್ರಸಂಗದ ಒಂದೇ ಒಂದು ಸಾಲಿನ ಮೂಲಕ ಈ ಅಂಶವನ್ನು ಗುರುತಿಸಿ, ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿದ ಪತ್ರಕರ್ತ ವೆಂಕಟೇಶ ಮಾನು ಅವರು ಬರಹ ಇಲ್ಲಿದೆ.

‘ಹೌದು ಮಹಾರಾಜರೇ, ನೀವೇನೋ ನಾಳೆ ಬರುತ್ತೀರೆಂದಿರಿ. ಆದರೆ, ನಿಮ್ಮ ಕಣ್ಣುಗಳು ಹೇಳುತ್ತಿದ್ದವು; ಇದೀಗ ಬರುತ್ತೇನೆ ಎಂದು!’

ಮನೋ-ವೈಜ್ಞಾನಿಕ ಅಧ್ಯಯನದ ದೃಷ್ಟಿಯಿಂದ ಯಯಾತಿ (ಮೂಲ: ವಿ.ಸ.ಖಾಂಡೇಕರ್, ಕನ್ನಡಕ್ಕೆ ವಿ.ಎಂ. ಇನಾಂದಾರ) ಕಾದಂಬರಿಯ ದಾಸಿ ‘ಮುಕುಲಿಕೆ’ಯ ಮಾತುಗಳು ಬಹಳ ಮಹತ್ವಪೂರ್ಣ. ‘ಮುಖ ಮನಸ್ಸಿನ ಕನ್ನಡಿ’ (Face is the index of Mind) ಎಂದು ಸಾರ್ವಜನಿಕರೆಲ್ಲೂ ಹೇಳುವಂತಿಲ್ಲ. ಸೂಕ್ಷ್ಮ ಕಾಣ್ಕೆಯ ಒಳನೋಟದ ಭಾವವನ್ನು ಹೊಂದಿದವರು ಮಾತ್ರ ಈ ಮಾತು ಹೇಳಲು ಅರ್ಹರು ಮತ್ತುಸಮರ್ಥರು. ಏಕೆಂದರೆ, ಸುಂದರ ಮುಖದ ವ್ಯಕ್ತಿಯ ಮನಸ್ಸು ಹತ್ತಿಯ ಹಣ್ಣಿನಂತೆ ಒಳಗೆ ಹುಳಗಳನ್ನು ತುಂಬಿಕೊಂಡಿರಬಹುದು. ಅಷ್ಟವಕ್ರನಂತೆ ಕಾಣುವ ವಿಕೃತ ಮುಖದ ವ್ಯಕ್ತಿಯ ಹೃದಯ ಮಾತ್ರ (ಅನಾನಸ್ ಹಣ್ಣಿನಂತೆ, ಹೊರಗೆ ಮುಳ್ಳುಮುಳ್ಳಾಗಿ ಕಂಡರೂ ಒಳಗೆ ಸಿಹಿಯಾಗಿರುವಂತೆ, ಮೃದುವಾಗಿರಬಹುದು. ಆದ್ದರಿಂದ, ‘ಮುಖ ಮನಸ್ಸಿನ ಕನ್ನಡಿ’ ಎಂದು ಖಚಿತವಾಗಿ ಹೇಳಲು ಅದಕ್ಕೆ ಬೇಕಿರುವುದು ವಿಶೇಷ ಸೂಕ್ಷ್ಮತೆ ಹೊರತು ಯಾವುದೇ ವಿಶ್ವವಿದ್ಯಾಲಯದ ಪದವಿಯಲ್ಲ ಎಂಬುದು. ಮುಕುಲಿಕೆ ಒಬ್ಬ ಮನೋವಿಜ್ಞಾನಿಗಿಂತ ಕಡಿಮೆ ಏನಲ್ಲ ಮತ್ತು ‘ಮುಖ ಮನಸ್ಸಿನ ಕನ್ನಡಿ’ ಎಂದು ಮುಕುಲಿಕೆಗೆ ಹೇಳಲು ಮಾತ್ರ ಸಾಧ್ಯವಿತ್ತು ಎಂಬುದಕ್ಕೆ ಈ ಮುಂದಿನ ಪೀಠಿಕೆ.

ಕೋಣೆ ಅಲಂಕರಿಸಿದ್ದು ಯಾರಿಗಾಗಿ?:

ಕಾದಂಬರಿಯಲ್ಲಿ ಈಕೆಯ ಪಾತ್ರ-ಸನ್ನಿವೇಶ ಕಿರಿದು. ಆದರೆ, ಯಯಾತಿಯ ಅತಿಭೋಗದ ಕಾಮವಾಂಚೆಗೆ ‘ಮುಕುಲಿಕೆ’ ಮೊದಲ ಪ್ರೇರಣೆಯಾದಳು. ‘ಅಂದು ರಾತ್ರಿ ನಾನು ಆಕೆಯನ್ನು ಚುಂಬಿಸಿದ್ದೆಷ್ಟು,- ಆಕಾಶದಲ್ಲಿಯ ಚುಕ್ಕೆಗಳನ್ನು ಯಾರಾದರೂ ಎಣಿಸುವುದು ಸಾಧ್ಯವೇ?’ ಎಂದು ರಾಜ ಯಯಾತಿಯು ತನ್ನ ದಾಸಿಯೊಂದಿಗಿನ ಪ್ರಣಯದ ಮೊದಲ ಅನುಭವವನ್ನುಉದ್ಗರಿಸುತ್ತಾನೆ

ಒಂದು ದಿನ ಯಯಾತಿ ಈಕೆಯ ಮನೆಯಲ್ಲಿರುವಾಗ ತಂದೆ ನಹೂಷ ಕೊನೆ ಉಸಿರೆಳೆಯುತ್ತಿರುತ್ತಾನೆ. ಈ ವಾರ್ತೆ ಯಯಾತಿಗೆ ತಲುಪಿ ಅಲ್ಲಿಂದ ತೆರಳುವ ಅನಿವಾರ್ಯತೆ ಉಂಟಾಗುತ್ತದೆ. ‘ಮತ್ತೆ ನಾಳೆ ಬರುತ್ತೇನೆ’ ಎಂದು ಹೊರಡುತ್ತಿದ್ದಂತೆ ರಥವು ಅರಮನೆ ಕಡೆಗೆ ಓಡುತ್ತದೆ. ದಾರಿ ಮಧ್ಯೆ, ಸವಾರರನ್ನು ಗದರಿಸಿ, ‘ಬಂದ ದಾರಿಗೆ ಮರಳಿ ನಡೆ’ ಎಂದು ಆದೇಶಿಸುತ್ತಾನೆ. ರಥವು ಮತ್ತೆ ಮುಕುಲಿಕೆಯ ಮನೆ ಮುಂದೆ ನಿಲ್ಲುತ್ತದೆ.

‘ಪ್ರತಿ ದಿನ ರಾಜನು ಬರುತ್ತಾನೆ ಎಂದು ಆ ಮನೆಯ ವಿಶೇಷ ಕೋಣೆ ಎಷ್ಟು ಅಲಂಕೃತವಾಗಿರುತ್ತದೋ ಅಷ್ಟೇ ಅಲಂಕೃತವಾಗಿರುತ್ತದೆ. ಇದನ್ನು ಕಂಡ ಯಯಾತಿ ‘ತಾನೇನೋ ನಾಳೆ ಬರುವೆ ಎಂದಿದ್ದೆ. ಆದರೆ, ಈ ಕೋಣೆ ಶೃಂಗರಿಸಿದ್ದು ಯಾರಿಗಾಗಿ? ಮೊದಲೇ ಈಕೆ ದಾಸಿ. ಮತ್ತೊಬ್ಬನಿಗಾಗಿ ಕಾಯುತ್ತಿರಬೇಕು’ ಎಂದು ಸಂಶಯಿಸಿ ಕೇಳುತ್ತಾನೆ-‘ ನಾನು ನಾಳೆ ಬರುವೆ ಎಂದಿದ್ದರೂ ಈ ಶೃಂಗಾರವೆಲ್ಲ ಯಾರಿಗಾಗಿ?’ ಮುಕುಲಿಕೆ ಒಂದೇ ಮಾತು ಹೇಳುತ್ತಾಳೆ. ಹೌದು ಮಹಾರಾಜರೇ, ನೀವೇನೋ ನಾಳೆ ಬರುತ್ತೀರೆಂದಿರಿ, ಆದರೆ, ನಿಮ್ಮ ಕಣ್ಣುಗಳು ಹೇಳುತ್ತಿದ್ದವು, ಇದೀಗ ಬರುತ್ತೇನೆ ಎಂದು’

ಮನೋವಿಜ್ಞಾನದ ಪ್ರವೇಶ

ಒಬ್ಬ ಮನೋವಿಜ್ಞಾನಿಗೆ ಈ ಮುಕುಲಿಕೆಯ ಮಾತು ಸಾಕು.ಒಬ್ಬ ರಾಜನ ಕೇವಲ ಕಣ್ಣುಗಳ ಮೂಲಕ ಆತನ ಇಡೀ ವ್ಯಕ್ತಿತ್ವವನ್ನು ಖಚಿತವಾಗಿ ಹೇಳಲು ಸಾಧ್ಯವಾದರೆ, ಕಣ್ಣುಗಳಿಂದ ಮಾತ್ರವೇ ಒಬ್ಬನ ಮನಸ್ಸಿನಲ್ಲಿರಬಹುದಾದ ಆಸೆ-ಆಕಾಂಕ್ಷೆ-ಹಂಬಲ-ಬಯಕೆ ಎಲ್ಲವನ್ನೂ ತಿಳಿಯಬಹುದೆ? ಅಥವಾ, ಕಣ್ಣುಗಳಂತೆ ಮುಖದ ಇತರೆ ಅಂಗಗಳು-ಹುಬ್ಬು, ಗಲ್ಲ, ಮೂಗು, ತುಟಿ, ಹಣೆ ಅಷ್ಟೇಕೆ ದೇಹದ ಚಲನಾಂಗಗಳು, ಇಡೀ ದೇಹದ ಹಾವ-ಭಾವ ಹೀಗೆ ನಮ್ಮ ಗುಪ್ತ -ಸುಪ್ತ ಬಯಕೆಗಳನ್ನು- ಈ ಎಲ್ಲ ಅಂಗಗಳ ಮೂಲಕ ತಿಳಿಯಬಹುದೆ? ಈ ಅಂಗಗಳ ಪ್ರತಿ ಸೂಕ್ಷ್ಮ ಚಲನೆಯು ಬಹುತೇಕ ವೇಳೆ ನಮ್ಮ ಮನಸ್ಸಿನ ವಿರುದ್ಧವೂ ಆಗಿರುತ್ತದೆಯೇ? ಹಾಗಾದರೆ, ಸತ್ಯವನ್ನು ಸತ್ಯದ ತಲೆ ಮೇಲೆ ಬಡಿದಂತೆ ಹೇಳುತ್ತಾರಲ್ಲ; ಅವರನ್ನು ಅರ್ಥ ಮಾಡಿಕೊಳ್ಳಲು ಅಸಾಧ್ಯವೇ? ಅರ್ಥ ಮಾಡಿಕೊಳ್ಳಬಹುದಾದರೆ ‘ಮುಕುಲಿಕೆ’ಗಿರುವ ವಿಶೇಷತೆ ಏನು? ಇಂತಹ ಪ್ರಶ್ನೆಗಳು ಗರಿಗೆದರುತ್ತವೆ; ಅಲ್ಲವೆ?

ಕಣ್ಣು ಮನದ ಕಿಂಡಿ

ಮನುಷ್ಯ ಯಾವುದನ್ನು ಮುಚ್ಚಿಡಲು ಬಯಸುವನೋ ಅದನ್ನು ಅವನಿಗರಿವು ಇಲ್ಲದಂತೆ ಕಣ್ಣುಗಳು ಹೇಳುತ್ತಲೇ ಇರುತ್ತವೆ. ಉದಾ: ನಿಜ ನುಡಿಯುವ, ತನ್ನನ್ನು ಪ್ರಶ್ನಿಸುವವನ ಕಣ್ಣುಗಳಲ್ಲಿ ಕಣ್ಣಿಟ್ಟು ಮಾತನಾಡುತ್ತಾನೆ. ಈ ಧೈರ್ಯ ಸುಳ್ಳು ಹೇಳುವವನಿಗಿರುವುದಿಲ್ಲ. ಸಾಮಾನ್ಯ ಬದುಕಿನಲ್ಲೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆಗ ‘ನೀ ಸತ್ಯ ನುಡಿಯುವುದಾದರೆ ನನ್ನ ಮುಖ ನೋಡಿ ಹೇಳು?’ ಎಂದು ಗದರಿಸುವುದಿಲ್ಲವೆ? ‘ಇಲ್ಲಿ ಮುಖ ನೋಡು ಎಂದರೆ ಕಣ್ಣುಗಳನ್ನು ಎದುರಿಸು ಎಂತಲೇ ಅರ್ಥ. ಹೀಗೆ ಹೇಳಿದವರು ಮನೋವಿಜ್ಞಾನಿಗಳಿರುತ್ತಾರೆ ಎಂತಲ್ಲ. ಇದು ಸಾಮಾನ್ಯ ಜ್ಞಾನ.

ಕಣ್ಣುಗಳು, ಮನದಲ್ಲಿ ಅಡಗಿರುವ ಭಾವನೆಗಳನ್ನು ವ್ಯಕ್ತ ಮಾಡುತ್ತಲೇ ಇರುತ್ತವೆ. ಅದೇ ರೀತಿ, ಹುಬ್ಬುಗಳ ಚಲನೆ, ತುಟಿಗಳ ಚಲನೆ, ಗಲ್ಲಗಳ ಚಲನೆ, ಧ್ವನಿಯ ಏರಿಳಿತ, ಕೈಕಾಲು ಬೆರಳುಗಳ ಚಲನೆ, ಇಡೀ ದೇಹದ ಹಾವ -ಭಾವ ಎಲ್ಲವೂ ಮನೋವಿಜ್ಞಾನಿಗೆ ಅಧ್ಯಯನದ ವಿಷಯ ವಸ್ತುಗಳೇ ಆಗಿರುತ್ತವೆ.

ವ್ಯಕ್ತಿ ಏನು ಹೇಳುತ್ತಾನೆ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ಬದಲಾಗಿ; ಯಾವುದನ್ನು ಮುಚ್ಚಿಡುತ್ತಿದ್ದಾನೆ ಎಂದು ತಿಳಿಯಲು ಮನೋವಿಜ್ಞಾನಿಯ ಸೂಕ್ಷ್ಮ ನೋಟವು ಈ ಅಂಗಗಳ ಸೂಕ್ಷ್ಮ ಚಲನೆಗಳನ್ನು ಅಧ್ಯಯನ ಮಾಡುತ್ತಿರುತ್ತದೆ. ಎಲ್ಲ ಅಂಗಗಳ ಪೈಕಿ-ಕಣ್ಣು ಮಾತ್ರ, ಅವರ ಮನದಲ್ಲಡಗಿದ ನಿಗೂಢ ಕೋಟೆ ಪ್ರವೇಶಕ್ಕೆ ಇರುವ ಒಂದು ಸಣ್ಣ ಕಿಂಡಿ. ಇದರ ಮೂಲಕವೇ ಮನೋಕೋಟೆಯ ಆವರಣವನ್ನು ಸ್ವಲ್ಪಮಟ್ಟಿಗಾದರೂ ಸ್ಪಷ್ಟವಾಗಿ ಊಹಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಸುಳ್ಳು ಹೇಳುವವರು ಎದುರಿದ್ದವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಬಯಸುವುದಿಲ್ಲ.ಇದೇ ರೀತಿ, ಹುಬ್ಬು, ತುಟಿ, ಗಲ್ಲ ಇತ್ಯಾದಿ ಚಲನೆಯ ಸ್ವರೂಪವನ್ನು ತಿಳಿಯಲು ಸಾಧ್ಯವಾಗುವುದಾದರೆ ಅದೇ ಮನೋವಿಜ್ಞಾನ. ಆಗಲೇ, ಮುಖ ಮನಸ್ಸಿನ ಕನ್ನಡಿ ಎಂದು ಹೇಳುವ ಅರ್ಹತೆ ಬರುತ್ತದೆ. ಸಾಮಾನ್ಯ ಜ್ಞಾನಕ್ಕೆ ಎಟಕುವ ಈ ಸಾಧಾರಣಾ ಅಂಶಗಳಿಂದ ಪ್ರೊಫೆಶನಲ್ ಕ್ರಿಮಿನಲ್ಸ್ ಗಳ ಮನಸ್ಥಿತಿಯನ್ನು ತಿಳಿಯಲಾಗದು. ಏಕೆಂದರೆ, ಅವರಿಗೆ ಈ ಸಂಗತಿಗಳು ಮೊದಲೇ ತಿಳಿದಿರುತ್ತವೆ. ಆ ಕಾರಣಕ್ಕಾಗಿಯೇ ಅವರು ಪ್ರೊಫೆಶನಲ್ ಆಗಿರುತ್ತಾರೆ. ಅವುಗಳಿಗೆ ಬೇರೆ ವಿಧಾನಗಳಿವೆ. ಇಲ್ಲಿ ಪ್ರಸ್ತಾಪಿಸುವುದು ಅನಗತ್ಯ.

‘ಮುಕುಲಿಕೆ’ ಮನೋವಿಜ್ಞಾನಿಯೇ!

ರಾಜನ ಕಣ್ಣುಗಳ ಮೂಲಕ ಆತನ ಇಡೀ ವ್ಯಕ್ತಿತ್ವವನ್ನು ಖಚಿತವಾಗಿ ಹೇಳುವುದಾದರೆ ಮುಕುಲಿಕೆ ಒಬ್ಬ ಮನೋವಿಜ್ಞಾನಿಯೇ! ಆಕೆಗೆ ದಿವ್ಯದೃಷ್ಟಿ ಇದೆ. ಭವಿಷ್ಯ ತಿಳಿಯುವ ಕಾಲಜ್ಞಾನವಿದೆ ಎಂದರ್ಥವಲ್ಲ; ಅದು ಸಾಮಾನ್ಯ ಜ್ಞಾನ. ಅದನ್ನು ಸೂಕ್ಷ್ಮವಾಗಿ ಬಳಸುವ ವಿಶೇಷತೆ, ಅಷ್ಟೆ! . ಈ ಅರ್ಹತೆ-ಸಾಮರ್ಥ್ಯ ಪಡೆಯಲು ಯಾವುದೇ ಕೋರ್ಸ್ ಗಳು ಇಲ್ಲ.

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...