Poem

ಅಧಿಸೂಚನೆ

ಮುತ್ತಿಕ್ಕಿದರೆ ಗುಲಾಬಿಗೆ ತುಟಿಯೆಲ್ಲ ರಕುತ
ಹಾದಿಬೀದಿಯಲಿ ಹರಿದಾಡುವ ಹಾವುಗಳ ಕುರಿತು
ಹುಷಾರಾಗಿರಬೇಕು
ಹೇಸಿಗೆಯನು ಸೃಷ್ಟಿಸಿದವನೂ ಬ್ರಹ್ಮನೇ
ಎದೆ ಝಲ್ಲೆನಲು ಆಕೆಯೇ ನಕ್ಕಿರಬೇಕು
ಆ ಏಳು ಸಮುದ್ರದಾಚೆಯೆಲ್ಲೊ
ಇಲ್ಲಾ
ಬೆಳದಿಂಗಳ ಆ ಬೆಳ್ಳನೆಯ ಮೊಗ್ಗಿನೊಳಿಂದ
ಎಷ್ಟು ಸತ್ಯಗಳನ್ನು ತಾನೇ ಬಚ್ಚಿಡುವುದು
ಈ ಬದುಕಿನಿಂದ
ಹಾಳು ಹಂಬಲವೊಂದು ಹೋಗುತ್ತಿಲ್ಲ
ಖಾಲಿ ಖಾಲಿ
ಬಾಕಿ ಬಾಕಿ
ನಾನಾ 
ತಪರಾಕಿ
ಮನೆಯೊಳಿಲ್ಲ ಮನೆಯೊಡೆಯ ಮನೆಯೊಡತಿ
ಒಳಗಿರುವವರು ಅಜ್ಞಾತರು
ಅಸಂಗತ
ದುಃಖಾಂತ
ಅದೃಶ್ಯ ಸೊಗಸು
ಇನ್ನೆಷ್ಟು ಸುಳ್ಳುಗಳನ್ನು ಹೇಳುವುದು ಈ ಲೋಕಕ್ಕೆ
ಹಾಗೂ ಕೇಳುವುದು ಈ ಲೋಕದಿಂದ
ಅದಿನ್ನೆಷ್ಟು ಸುಳ್ಳುಗಳನ್ನು
ಬರೆದಿಡುವುದು ಖಾಲಿ ಖಾಲಿ ಈ
ಹಾಳೆಗಳೊಳಗೆ
ಮೂಲಕ್ಕೆ ಸೃಷ್ಟಿಯೇ ಸರ್ವನಾಶವಾಗುವುದಂತೆ
ಜಲಪ್ರಳಯವಂತೆ
ಭೂಕಂಪನವಂತೆ
ಸುನಾಮಿಯಂತೆ
ಲೋಕಲಯಾ ಅಂತೆ
ಅಂತೆ
ಕಂತೆ
ಅಂತೆಕಂತೆಯಂತೆ
ತಪರಾಕಿ ಬಾಕಿಬಾಕಿ
ರಾತ್ರಿಯೊಬ್ಬ ಎದ್ದು ಕೂಡುತ್ತಾನೆ
ಕವಿಯಂತೆ ಅಂವ
ಎದೆಹಗುರಗೊಳಿಸಿಕೊಳ್ಳಲು ಗೀಚುತ್ತಾನೆ ಸಾಲುಸಾಲು
ಅವನ ಬದುಕದೇ ಧನ್ಯ
ಬರೆದುದು ಬವಣೆಗಳ
ಬದುಕುವುದೂ ಬವಣೆಗಳ
ಹಿಡಿಸದೀ ಲೋಕತರ್ಕ ಅವನಿಗೆ
ಬೇಡ ಯಾವ ಹದಗಳೂ
ಬದುಕ ಬದುಕದೆಯೇ ಬದುಕ ಬರೆಯುತ್ತಾನೆ
ಅಂವ ಕಪಿ
ಅಂವ ಕವಿ
ಅಂವ ಮಗು
ಅಂವ ತಾಯಿ
ಅಂವ ತಂದೆ
ಅಂವ ಪುಕ್ಕಲ
ಅಂವ ಪಕ್ವ
ಅಂವ ಅಪಕ್ವ
ಎದೆಸೀಳಲು ಚೂರಿಯೇ ಬೇಕಿಲ್ಲ
ಆಕೆಯ ಮೃದು ಸುಕೋಮಲ ನಯನಗಳೇ ಸಾಕು
ನನ್ನಾಕೆ 
ಆಕೆ
ಯುಗಯುಗಾಂತರದ ಸಖಿ
ಎದೆಯೊಡೆದು ಪುಡಿಯಾದರೆ ಆಕೆಯೇನು ಮಾಡಿಯಾಳು!
 

By: ರವಿಶಂಕರ್‌ ಪಾಟೀಲ್‌

Comments[0] Likes[2] Shares[6]

Submit Your Comment

Latest Comments

No comments are available!