Poem

ಅಪ್ಪ

ಅಪ್ಪ

ಮರುಭೂಮಿಯಲ್ಲಿನ ಓಯಸಿಸ್ ತರವಿರುವ ಅಪ್ಪ
ಮೋಡಗಳೆರಡು ಬೆತ್ತಲಾಗಿ
ಒಂದೆರಡನಿ ಸುರಿಸಿದ್ದೆ ತಡ
ಆಗಸ ವೃಕ್ಷದಲಿ
ನಕ್ಷತ್ರದ ಮಲ್ಲಿಗೆ ಅರಳಿಸಿದವನು.

ಸಿಂಬಳ ಸುರಿಸುವ 
ಬಸವನ ಹುಳು ಲಿಂಗದಲಿ
ಸಂಸಾರ ಹೂಡಿದವನು
ಕುಡಿಕೆ ತುಂಬ ಹೆಂಡ ಕುಡಿದು
ಹಣೆಬರಹಕೆ ಬೈದವನು.

ಈ ನೆಲದ ಅಳುವಿನೊಂದಿಗೆ
ಸ್ವರ ಸೇರಿಸಿ
ಹುಟ್ಟು ಹಾಡಾಗಿಸಿದವನು
ಕೂಸಿನ ಹರಕು ಚಡ್ಡಿಯಲಿ
ಭಾರತ ನಕ್ಷೆ ಕೆತ್ತಿ
ನೀಲಾಗಸ ತೋರಿಸಿದವನು.

ಅವ್ವನ ಸೆರಗಿನಲಿ ಕಣ್ಣಿರು ಕಟ್ಟಿ
ಅಂಗೈಯಲಿ ಬೆಳದಿಂಗಳ ಕದ್ದು ತಂದವನು
ಕತ್ತಲೆಯ ಹುತ್ತಗಳಲ್ಲಿ
ಚುಕ್ಕಿ ಮಲಗುವ ಹೊತ್ತು ಎದ್ದು
ಒಡೆವ ಕಲ್ಲಿನಲ್ಲಿಯೂ
ಬುದ್ದನ ನಗುವನ್ನರಳಿಸಿದವನು.

By: ವೀರೇಶ್‌ ನಾಯಕ್‌

Comments[0] Likes[0] Shares[0]

Submit Your Comment

Latest Comments

No comments are available!