Poem

ಏನಂದರೆ ಏನೂ ಇಲ್ಲಾ

ಸುಖಗಳೂ ಬಾಕೀ ಉಳಿದವು

ದುಃಖಗಳೂ ಬಾಕೀ ಉಳಿದವು   _

ಮೂರ್ತ ದೇವರು ಅಮೂರ್ತ ದೇವರು ಎಂಬುದೆಲ್ಲ ಶುದ್ಧಸುಳ್ಳು

 

ಖಾಯಿಲೆಗೂ ಆರೋಗ್ಯಕ್ಕೂ  ಏನು ವ್ಯತ್ಯಾಸ ಇಷ್ಟಕ್ಕೂ!

 

ಮೊನ್ನೆ ಮಹಾನಗರವೇ ಗುಳೇ ಹೊರಟಿತ್ತು.

ಕೆಲಸಗಳಿಲ್ಲ ಕ್ಯಾಮೆಗಳಿಲ್ಲ ಎಂದೇನೋ ಹೇಳಿ.

ನÀÀನ್ನ ಹಾಡೂ ಹಳೆಯದಾಯಿತು ಪರರ ಹಾಡೂ ಹಳೆಯದಾಯಿತು.

ಯಾವೂರಲ್ಲಿ ಯಾರುತಾನೇ ಶುದ್ಧಸುಳ್ಳು ಶುದ್ಧಸತ್ಯ ಮಾತನಾಡಬಲ್ಲರು.

ಅರ್ಧಂಬರ್ಧ ಅರ್ಧಂಬರ್ಧ .

.

ಬದುಕೆಂದರೆ ಅರ್ಧಸುಳ್ಳು ಅರ್ಧಸತ್ಯ .

ಅಷ್ಟು ಮಾತ್ರವೇ ಕೆಲಸಕ್ಕೆ ಬಂದೀತು.

.

ದಾರಿಹೋಕರಿಗೇನು ಸ್ವಾಮಿ ಯಾವೂರನ್ನಾದರೂ ದೋಚಬಹುದು ಅವರು.

.

ನಾವು ಸಂಸ್ಕಾರಸಮೇತ ಬದುಕಿರುವವರು .

ನಮ್ಮದು ಅರ್ಧಸುಳ್ಳು ಅರ್ಧಸತ್ಯದ ಹಾದಿ- ಅಷ್ಟೇ! .

.

ಅಂದು ಆಕೆ ಸಿಕ್ಕಿ ಮುಂಗುರುಳನ್ನಷ್ಟೇ ನೇವರಿಸಿದ್ದು.

ನನಗಾದರೂ ಏನು? .

ಆಕೆಗಾದರೂ ಏನು?.

ನಾನೂ ಅದಾಗಹೊರಟಿದ್ದೆ .

ಆಕೆಯೂ ಇದಾಗಹೊರಟಿದ್ದಳು.

ಇಲ್ಲವೆ.

ಲೋಕ ನಮ್ಮಿಬ್ಬರನ್ನು ಮರೆತು ಕಾಲು ಶತಮಾನ ಮುಂದೆ ಸಾಗಿತ್ತು .

.

ಮೊನ್ನೆ ದೈವದೆದುರು ಮಾತಾಯಿತು.

ಅವನ ಬಣ್ಣ ಆಕಾರ ನೋಡಿ ನಾನೇ ವಾಸಿಯೆನ್ನಿಸಿತು ನನಗೆ.

ಜೈನ ಅಂತೆ ಹಿಂದೂ ಅಂತೆ  .

ಮುಸ್ಲಿಂ ಅಂತೆ ಕ್ರೈಸ್ತ ಅಂತೆ  .

ನಿನ್ನದ್ಯಾವ ಧರ್ಮ; ಅಂದ?.

ನಾನು ‘ಮಾನವಧರ್ಮ’ ಅಂದೆ.

‘ಹಾಗಾದರೆ ನಿನಗೆ ನ್ಯಾಯವಿಲ್ಲ  ಹೋಗು ಅಲ್ಲೇ ಎಲ್ಲಾದರೂ ನ್ಯಾಯ ಕೊಡುತ್ತಾರೋ ನೋಡಿಕೋ ಹೋಗು’  ಅಂದ.

.

ಆಕೆಯ ಕೈಹಿಡಿದು ಓಡಿಹೋದೆ   .

ಒಂದು ಊರು ಸಿಕ್ಕಿತು .

ಆ ಊರಿನದ್ದೇ ಒಂದು ಪ್ರತ್ಯೇಕ ಕಥೆ .

ನೋಡಿ! ಆ ಊರೆಂದರೆ ಊರಿಗೆ ರೂಪವಿಲ್ಲ ಗುಣವಿಲ್ಲ ರುಚಿಯಿಲ ಒಗರಿಲ್ಲ.

ಎಲ್ಲೆಂದರಲ್ಲಿ ಉಗುಳುವವರು.

ಎಲ್ಲೆಂದರಲ್ಲಿ ಮಲ ವಿಸರ್ಜಿಸುವವರು .

ಎಲ್ಲೆಂದರಲ್ಲಿ ವ್ಯಭಿಚಾರಿಗಳು.

ಎಲ್ಲೆಂದರಲ್ಲಿ ಏನೆಲ್ಲಾ .

ಮತ್ತೆಲ್ಲಾ ಇನ್ನೆಲ್ಲಾ ಏನೇನೆಲ್ಲಾ.

ಮೂರು ಬಗೆಯ ಮಾತುಗಾರರು ಆ ಊರಿನಲ್ಲಿ.

ಉಗುಳುವವರು ಕೆಮ್ಮುವವರು ಬಾಯಿಂದ ಮಾತಾಡುವವರು .

.

ಲೋಕದಲ್ಲಿ ಸೀದಾ ಸಾದಾ ಜನರು ಬಹಳಷ್ಟಿದ್ದಾರೆ  .

ಆ ಊರÀÀಲ್ಲೂ ಸಿಕ್ಕರು ನನಗೆ.

ಎಲ್ಲೆಂದಿರಿ?.

ಆ ಊರ ಯಾವ ಜಾಗದಲ್ಲಿ ಅಂದಿರಿ?.

‘ಹಾಳೆಗಳಲ್ಲಿ... ಸ್ವಾಮಿ’ ‘ಪುಸ್ತಕದ ಹಾಳೆಗಳಲ್ಲಿ...’.

ಮಹಾನುಭಾವರುಗಳು .

ವರ್ಷಪೂರ್ತಿ ಅವರ ದಿನಾಚರಣೆಗಳು .

ನಾವಿಬ್ಬರೂ  ಮೆಜಸ್ಟಿಕ್‍ನಲ್ಲಿ  ಅಡ್ಡಾಡಿದೆವು ಒಂದಿಡೀ ದಿನ.

ಅಣ್ಣಮ್ಮ ತಾಯಿ ದೇವಸ್ಥಾನದ ಮುಂದೆ .

ಬಲಭಾಗಕ್ಕೆ ಆಟೋ ಸರ್ಕಲ್ಲಿನ ಪಕ್ಕ .

ಆ ಮಹಾನುಭಾವರ ದಿನಾಚರಣೆ .

ಪೇಪರಿನಲ್ಲಿ... ಅಲ್ಲಲ್ಲ ಫೋಟೋ ಫ್ರೇಮಿನಲ್ಲಿ... ಅವರ ಪೂಜೆ .

ಕೈಮುಗಿದೆವು .

ಮಿಕ್ಕ ಹಾಗೆ ಹರೋಹರ .

ಆ ನಗರ.

‘ಯಾರಿಗೆ? ಏನಿಕ್ಕೆ?’ .

ಗೊತ್ತಿಲ್ಲ... ಅದು ಹಾಗೇ ಉಸಿರಾಡುತ್ತಿದೆ- ‘ಸರ್ ಈ ರಸ್ತೆ ಹಿಡ್ಕೊಂಡು ಎಡಕ್ಕೆ ಹೋದ್ರೆ ಸಿಗೋದೇ ಕಾಮಾಕ್ಷಿಪಾಳ್ಯ ಕೆ ಆರ್ ಮಾರ್ಕೆಟ್ಟು ಈಸಿಟಿ ಕಾಂಟೋನ್ಮೆಂಟು ಎಕ್ಸೆಟ್ರಾ ಎಕ್ಸೆಟ್ರಾ.

ಊರಿಗೆ ಊರೇ ದಿಗ್ಬಂಧನದಲ್ಲಿ ಅಸ್ಪøಶ್ಯತೆಯಲ್ಲಿ.

‘ಪೆಪ್ಪರ್ ಡ್ರೈ ಚಿಕ್ಕನ್ ಮಾತ್ರ ರಸ್ತೆ ಪಕ್ಕದಲ್ಲೇ ಚನ್ನಾಗೇ ಸಿಕ್ಕುತ್ತೆ ... ಅದೂ ಏನು ರುಚೀ ಅಂತೀರಾ’.

‘ಬಂಡವಾಳಶಾಹಿ ಕೈ ನಾಲಿಗೆ ನೆತ್ತರು’ .

ರಸ್ತೆ ರಸ್ತೆಗಳಲ್ಲಿ .

ಮಾಲ್ ಮಾಲ್‍ಗಳಲ್ಲಿ .

ಬಟ್ಟೆಯಂಗಡಿಗಳಲ್ಲಿ .

ಮಡಿ ಮೈಲಿಗೆಗಳಲ್ಲಿ.

ಮಾಡರ್ನ್ ಸ್ಟನ್‍ಗಳಲ್ಲಿ.

.

ನಮ್ಮ ಹಳ್ಳಿಯೇ ಚನ್ನಾಗಿತ್ತು.

.

ಸುಖಗಳೂ ಬಾಕೀ ಉಳಿದವು.

ದುಃಖಗಳೂ ಬಾಕೀ ಉಳಿದವು.

ಮೂರ್ತ ದೇವರು ಅಮೂರ್ತ ದೇವರು ಎಂಬುದೆಲ್ಲ ಬರೀ ಶುದ್ಧಸುಳ್ಳು.

.

ಖಾಯಿಲೆಗೂ ಆರೋಗ್ಯಕ್ಕೂ  ಏನು ವ್ಯತ್ಯಾಸ ಇಷ್ಟಕ್ಕೂ!.

 

 ಹಾಗೇ ರಸ್ತೆಯಲ್ಲಿ ನಡೆದು ಹೋದರೆ ಒಂದು ಮೊಟ್ಟೆ .

ನೋಡನೋಡುತ್ತಿದ್ದಂತೆಯೇ ಕಣ್ಣಮುಂದೆಯೇ ಒಡೆಯಿತೆನ್ನಿ    .

ಒಡೆದು ಮಗುವಾಯಿತು .

ಬೆಳೆದು ದೊಡ್ಡದಾಯಿತು .

ದೊಡ್ಡದಾಗಿ ವಯಸ್ಸಾಯಿತು ಮುದಿಯಾಯಿತು .

ಹಲ್ಲು ಸಟ್ಟೂ  ಹಳೆಯದಾಯಿತು.

ಕಣ್ಣು  ಮಂಜು ಮಂಜು.

ಯಬರಾ ತಬರಾ  ಬ್ಯಬ್ಯಬ್ಯಾ ಬಾಯಿಮಾತು.

ಅವನ ಮಗನಿಗೆ ಮದುವೆ.

ಅವÀನೂ ಮುದಿಗೂಬೆ ಯಾಗಿ ಅವನ ಮಗನಿಗೂ ಮದುವೆ ನೋಡನೋಡುತ್ತಿದ್ದಂತೆಯೇ ಕಣ್ಣಮುಂದೆಯೇ.

.

ಎದುರಿಗೆ ಧುತ್ತೆಂದು ಬೆಳೆದು ನಿಂತ ಮಾಲ್‍ಗಳು .

‘ಮೊನ್ನೆ ಈ ಬ್ಲಾಕಿನಲ್ಲೊಂದು ಟೀ ಅಂಗಡಿಯಿತ್ತಲ್ಲ’.

‘ಅದರ ಪಕ್ಕದಲ್ಲೊಂದು ಸಲೂನಿತ್ತು’  .

‘ಅವÀನ್ನು ಡೆಮೋಲಿಶ್ ಮಾಡೇ ಈ ಮಾಲ್ ಕಟ್ಟಿಸಿದ್ದು... ಸರ್’ .

‘ಓ...ಹಾಗೋ’ .

.

ಊರೆಲ್ಲಾ ನೋಡಿ ನೋಡಿ ಸಾಕಾಯ್ತು .

ಮನೆಯಲ್ಲೇ ಇರುವೆ ತಿಂಗಳುಗಳಿಂದ .

ಮನೆ ಮಾತ್ರ ಬಣ ಬಣ.

ನಾವಿಬ್ಬರೇ  ಮನೆಯಲ್ಲಿ ಮಕ್ಕಳಿಲ್ಲ ಮರಿಯಿಲ್ಲ ನಮಗೆ.

ಮೊನ್ನೆ ಆಸ್ಪತ್ರೆಗೆ ತೋರಿಸಿಕೊಂಡು ಬಂದದ್ದೂ ಆಯ್ತು .

 ‘ಇನ್ನೊಂದಾರ್ ತಿಂಗಳು...  ಕಾಯ್ಬೇಕು’ ಅಂದ್ರು  .

ಆಕೆ ಹೇಳಿದ ನೆನಪು .

ಮರೆವು ಜಾಸ್ತಿ ನನಗೂ ಇತ್ತೀಚೆಗೆ.

ಗಡದ್ದಾಗಿ ಊಟ ಮಾಡಿ ಮಲಗಿದ್ದಾಯ್ತು ಈ ಮಧ್ಯಾಹ್ನ .

ಫ್ಯಾನ್‍ಗಾಳಿಗೆ ಬಿಸಿ ಬಿಸಿ.

.

ಸುಖಗಳೂ ಬಾಕೀ ಉಳಿದವು.

ದುಃಖಗಳೂ ಬಾಕೀ ಉಳಿದವು.

ಮೂರ್ತ ದೇವರು ಅಮೂರ್ತ ದೇವರು ಎಂಬುದೆಲ್ಲ ಬರೀ ಶುದ್ಧಸುಳ್ಳು.

.

ಖಾಯಿಲೆಗೂ ಆರೋಗ್ಯಕ್ಕೂ  ಏನು ವ್ಯತ್ಯಾಸ ಇಷ್ಟಕ್ಕೂ!.

 

By: ರವಿಶಂಕರ್‌ ಪಾಟೀಲ್‌

Comments[0] Likes[2] Shares[23]

Submit Your Comment

Latest Comments

No comments are available!