Poem

ಮರಗಳ ಕೊರಗು

ಮರಗಳ ಕೊರಗು

ದಶಕ ದಶಕಗಳಿಂದ ನೀಡುತ್ತಿವೆ 
ತಂಪಾದ ನೆರಳು, ಉಸಿರಾಡಲು ಸ್ವಚ್ಛ ಗಾಳಿ;
ವರುಣನ ಆರ್ಭಟಕ್ಕೆ, ಬಿದ್ದು ಒದ್ದಾಡುತ್ತಿವೆ
ಅಲ್ಲಲ್ಲಿ ಮರಗಳು ಧರೆಗುರುಳಿ!

ಮರೆತಿದ್ದೇವೆ ನಾವು ನೀವೆಲ್ಲ 
ಮರಗಳು ಮನುಕುಲಕ್ಕೆ ನೀಡಿದ ಆಶ್ರಯ;
ರಸ್ತೆಯ ಮೇಲೆ ಉರುಳಿದೊಡೆ
ಯಾರಿಗಿದೆ ಯೋಚನೆ ಅದಕಾಗುವ ಗಾಯ? 

ಕೈಗಾರೀಕರಣ ಜಾಗತೀಕರಣದ ಅಂಧಕಾರದಿ
ನೀಡಲಿಲ್ಲ ಅವುಗಳ ಬೇರಿಗೆ ಬೇಕಿದ್ದ ಜಾಗ;
ಕಸುವು ಕಳೆದು, ನಿಸರ್ಗದ ಕೋಪಕ್ಕೆ ತುತ್ತಾಗಿ
ಅರ್ಪಿಸಿಕೊಳ್ಳುತ್ತಿವೆ ಜೀವವ ಆಗಾಗ!

ಒಂದೆಡೆ ನಿಸರ್ಗದ ಕೋಪ
ಇನ್ನೊಂದೆಡೆ ಅಭಿವೃದ್ಧಿಯ ಮಂತ್ರ;
ಇವೆರಡರ ಮಧ್ಯೆ ಸಿಲುಕಿ ನಲುಗುತ್ತಿರುವ
ಗಿಡ ಮರಗಳಿಗೆ ಎಲ್ಲಿದೆ ಬದುಕುವ ಸ್ವಾತಂತ್ರ?

ನೂರಾರು ವರ್ಷಗಳ ನಿಸ್ವಾರ್ಥ
ಬದುಕು ಸಾಗಿಸಿ ನೀಡುವಾಗ ವಿದಾಯ;
ಮೋಹದ ಮನುಜನ ತಲೆಯಲ್ಲಿ ಓಡುವದು
ಬಿದ್ದ ಮರದಿಂದ ಮತ್ತೇನಿದೆ ಆದಾಯ?

ಅಭಿವೃದ್ದಿಯ ಜಪದಲ್ಲಿ ಕಟ್ಟುತ್ತಿದ್ದೇವೆ
ಡಾಂಬರು ಸಿಮೆಂಟಿನ ಕಾಂಕ್ರೀಟ್ ಕಾಡು
ಮರಗಳಿಲ್ಲದೆ ಹೊಗೆ ತುಂಬಿದ ಗಾಳಿ
ಕಲ್ಮಶ ತುಂಬಿದ ಪರಿಸರದ ಪಾಡು!

ಕಟ್ಟಿಕೊಳ್ಳಲು ನಮ್ಮ ನಮ್ಮ ಗೂಡು
ಬಗೆಯುವದು ಬೇಡ ಪರಿಸರಕ್ಕೆ ಕೇಡು;
ನಾವು ಬೆಳೆಯುತ್ತಾ, ಬೆಳೆಸೋಣ ಮರಗಳ
ಆರೋಗ್ಯಕರ ಜೀವನಕ್ಕೆ ಅವುಗಳೇ ನಮಗೆ ಜೋಡು!

By: ಮಹಾಂತೇಶ ಮಾಗನೂರ

Comments[2] Likes[15] Shares[0]

Submit Your Comment

Latest Comments

Vidya Shashidhar Moji
Jul 06,2020

Very well written,

Chaitra
Jul 06,2020

ಸುಂದರ ಆಶಯದ ಕವನ! ಚೆನ್ನಾಗಿದೆ 😊