Poem

ಮೋಡಿಗಾರ

ಮೋಡಿಗಾರ

ಕನಸುಗಳ ಬಿತ್ತುವ ಹುಸಿಮಾಲೆ ಪೋಣಿಸುವ
ನಿನ್ನ ಹೊಂಚಾದರೂ ಏನು ಮೋಡಿಗಾರ?
ರಂಗೋಲಿ ಚಿತ್ತಾರ ವೇಷದ ವೈಯಾರ
ಹೃದಯದೊಳಗೆಲ್ಲ ದ್ವೇಷದ್ದೇ ಹೂಂಕಾರ

ಪಕ್ಷಿಗಳ ಹಾರಾಟ, ಪ್ರಾಣಿಗಳ ಹೋರಾಟ
ನಡುವೇ ನಿನ್ನದೇ ಸಿಂಗಾರ ವೈಯಾರ
ರಕ್ತದೋಕುಳಿಯಲ್ಲೂ ನಿನ್ನವರ ಓಕುಳಿ
ಇದು ನಿನ್ನ ಖುಷಿಯೇ ಮೋಡಿಗಾರ?

ಜಾತಿ-ಧರ್ಮದ ನಡುವೆ ಕಿಚ್ಚನ್ನು ಹಚ್ಚಿಟ್ಟು
ರೊಟ್ಟಿ ತಟ್ಟುವ ನೀನು ಮಹಾಪ್ರಸಾದಿ
ಪರರ ತಟ್ಟೆಯ ಮೇಲೆ ನಿನ್ನವರ ಕೆಂಗಣ್ಣು
ನೀ ಮಾತ್ರ ಜಾಣಂಧ ಮೋಡಿಗಾರ!

ಜಗವೆಲ್ಲ ಸುತ್ತುತ್ತ ದಂಡವ ತೋರುತ್ತ
ಸಂಮೋಹನಾಟಕ್ಕೆ ನೀ ಸೂತ್ರಧಾರ
ಕಳಚು ಆಕಳ ವೇಷ ತೋರು ನಿಜರೂಪ
ನೀನಲ್ಲವೇ ನಟವರ ನರಕಾಸುರ?

ಹೇಸಲಾರೆ ನೀ ಬಳಸಲು ಬ್ರಹ್ಮಾಸ್ತ್ರ
ಮುಗ್ದರ ಬಾಳಿನ ಕೊಲೆಗಾರ
ಅನ್ಯರ ಆಚಾರ ಪರರ ಆಹಾರ
ಸಹಿಸಲಾರೆ ನೀ ಮಹಾಮೋಡಿಗಾರ

ಸ್ಥಾವರಕೆ ಅಳಿವುಂಟು ಜಂಗಮ ನೀನಲ್ಲ
ನೀನೆಟ್ಟ ಪುತ್ಥಳಿಗೆ ಬುಡವೇ ಇಲ್ಲ
ಹುಚ್ಚರ ಸಂತೆಯ ಶ್ರೇಷ್ಠ ಸಂತನೇ ನೀನು
ನಿನಗೂ ಕೊನೆಯುಂಟು ಮೋಡಿಗಾರ

By: ಸಂಗಮೇಶ ಮೆಣಸಿನಕಾಯಿ

Comments[0] Likes[0] Shares[0]

Submit Your Comment

Latest Comments

No comments are available!