Poem

ನೆನಪಿನ ಎಳೆಗಳಲ್ಲಿ..


ನಾ ಉಟ್ಟಿದ್ದ ಸೀರೆ ಬಿಚ್ಚಿಟೈತೆ ನೆನಪನ್ನ 
ಅದರಾಗ ಮುಚ್ಚಿಟ್ಟ ನನ್ನ ಬದುಕನ್ನ 
ಮಿಂಚೈತೆ ತೆರೆದಿಟ್ಟು ಕಣ್ಣ ಕುಕ್ಕೋ ಹೊಳಪನ್ನ 
ಹ್ಯಾಂಗ ಹೇಳಲಿ ಅದರ ಮ್ಯಾಲಿನ ನನ್ನ ಪ್ರೀತಿನ 


ಅಪ್ಪಯ್ಯನ ಜೊತೆಗೆ ಹೋಗಿ ಸಂತೇಲಿ  ಕೊಂಡಿದ್ದೆ
ಊರ ಜಾತ್ರ್ಯಾಗ ಮೊದಲ ಸಾರಿ ಕೇಸರಿಯದು ಉಟ್ಟಿದ್ದೆ 
ಕೈಯಾಗೆ ಕಾಯಿ ಹೂ ಹಣ್ಣು ಹಿಡಿದು ಬೀದ್ಯಾಗೆ ನಿಂತಿದ್ದೆ 
ಗೆಳತೀರ ಜೊತೆ ಸೇರಿ ಜಾತ್ರೆಯೆಲ್ಲ  ಮೆರೆದಿದ್ದೇ 


ಅವ ನನ್ನ ನೋಡಲು ಬಂದಾಗ ಬೆಲ್ಲದ ಪಾನಾಕ ಕೊಟ್ಟಿದ್ದೆ 
ನಾಚಿಕೇನೆ ಉಟ್ಟಂಗೆ ಕೆಂಪು ಸೀರೆ ಉಟ್ಟಿದ್ದೆ 
ಲಗ್ನದ ಸಮಯದಾಗ  ಹಸಿ ಮಣೆ ಮ್ಯಾಲೆ ಕೂತಿದ್ದೆ 
ಬಿಳಿ ಸೀರೆ ಉಟ್ಟು ಅಪ್ಪ ಅವ್ವನ ನೆನೆದು ಕಣ್ಣೀರು ಹಾಕಿದ್ದೆ 


ಹೊಸ ಬಾಳಿಗೆ  ಕೈ ಹಿಡಿದು ಸೇರೊದ್ದು ಹೊಸಲ ದಾಟಿದ್ದೆ 
ಹಸಿರು ಸೀರೆನ ಉಟ್ಟು ಬೆಳಗೋ ದೀಪನಾ ಹಚ್ಚಿದ್ದೆ 
ಅವ ನನಗೆಂದೇ ತಂದಿದ್ದ ನೀಲಿ ಸೀರೆಯ ಉಟ್ಟಿದ್ದೆ 
ತವರು ಮನೀಗೆ ಮೊದಲ ಹಬ್ಬಕ್ಕ ಜೊತೆಗೂಡಿ ಹೋಗಿದ್ದೆ 


ಕೆನ್ನೆಗೆಲ್ಲ  ಅರಿಶಿಣ, ಕೈ ತುಂಬಾ ಬಳೆಗಳ ತೊಟ್ಟಿದ್ದೆ 
ಗುಲಾಬಿ ಸೀರೆಯಾಗ ಆರತಿ ಅಕ್ಷತೆಯ ಸೀಮಂತ ಕಂಡಿದ್ದೆ 
ಅಳುವ ಕಂದ ಸೆರೆಗ ಎಳೆದಾಗ ಬಿಗಿದಪ್ಪಿ ಮುತ್ತಿಟ್ಟಿದ್ದೆ 
ಮೊದಲ ಸಲ ತಾಯ್ತನದ ರುಚಿನಾ ಆ ಸೀರೆನ್ಯಾಗ ಸವಿದಿದ್ದೇ...

By: ಷಣ್ಮುಖಾರಾಧ್ಯ ಕೆ ಪಿ

Comments[0] Likes[0] Shares[0]

Submit Your Comment

Latest Comments

No comments are available!