Poem

ನೆರೆಯ ಸಂಭ್ರಮ‌


ನೆರೆಯ ಸಂಭ್ರಮ 

ನಮ್ಮೂರಲ್ಲಿ‌ ನೆರೆ ಬಂದಿದೆ
ಊರೆಲ್ಲ ಮುಳುಗಿದೆ
ಒಣಗಿ‌ ಸೊರಗಿದ್ದ ಕೃಷ್ಣೆಗೆ 
ಮತ್ತೆ ಹರೆಯ
ಮನೆಯ ಮೇಲೆ ಹತ್ತಡಿ ನೀರು 
ಅಡುಗೆ ,ಸ್ನಾನದ ಕೋಣೆ
ಪಡಸಾಲೆ ಗೌಡರವಾಡೆಯಲಿ 
ಮೀನು ಹಾವುಗಳು 
ತೇಲುವ ಸಾಸಿವೆ ಜೀರಿಗೆ ಡಬ್ಬಗಳ
ಜೊತೆ ಆಟವಾಡುತ್ತಿರಬಹುದು
ಬಾರಲು ತೇಲುವ ನಿರ್ವಿರೋಧಿ ಬಾಣಲಿ ಹೆಲ್ಮೆಟ್ಗಳ ಸುತ್ತ ಕಾಮಾಸಕ್ತ
ಗಂಡಾಮೆಗಳ ದಂಡು 
ಊರು ಸುಟ್ಟರೂ ಹೊರಗಿರುತಿದ್ದ 
ಹಣಮಪ್ಪ ಕೃಷ್ಣೆಯಿಂದ ಕಾಲು
ತೊಳೆಸಿಕೊಂಡು ಮುಳುಗಿದ್ದಾನೆ
ಅಲಾವಿಯ ಕೊಂಡದಾಟಿ ಕಟ್ಟೆಯೆರಿ 
ಮಸಿದಿಯ ಗುಮ್ಮಟದ ಮೇಲೆ ,ಇಮಾಮ್ ನಮಾಜು ಮಾಡುವ
ಜಾಗವೆಲ್ಲಾ ವುಜು ಮಾಡಿದಾಗ 
ಬಂದಂತಹ ನೀರು‌
ಹುಂಚಿ ಜಾಲಿ ಬೇವುಗಳ ಮೇಲೆ 
ಎತ್ತರದ ಆಳು  ಕೈಮಾಡಿದರೂ 
ಕಾಣದಂತ ಆಳ
ಗೌಡನ ಜೀಪು ಜೇಡನ‌ ಜಿನ್ನು 
ಸಾಬನ‌ ಸೈಕಲ್,ಎತ್ತಿನ ಬಂಡಿ 
ಹೋದವು ತೇಲಿ 
ಹರಿದು ಬಂದ ಹೆಣದ 
ಒಡವೆಗಳಿಗೆ ಕಚ್ಚಿಕೊಂಡ
ಕೋಲಾಪುರಿ ಚಪ್ಪಲಿ
ಮರಳು ಕದ್ದು ಮಾಡಿದ 
ಕುಣಿಗಳ ತುಂಬ ಮುರಿದ ಮನೆಗಳ
ಸಿಮೆಂಟ್ ,ಇಟ್ಟಿಗೆ, ಕಲ್ಲು 
ಕಬ್ಬು ಜೋಳ ಉಳ್ಳಾಗಡ್ಡಿ 
ಬಳ್ಳೂಳ್ಳಿ ಶೇಂಗಾದ ನೆಲದ 
ಮೇಲೆ ಮಡುಗಟ್ಟಿದ ಚಾಣಿಸದ 
ಚಹಾದಲಿ ಕೊಳೆತ ಬದ್ನಿಕಾಯಿ 
ನಾರುತಿದೆ ಇಲಿ ಸತ್ತು
ಹೊಡದಾಡಿದ ಸೀಮಿಯಲಿ ಈಗ
ಮೀನುಗಳ ಶರ್ಯತ್ತು 
ಮುರುಕು ಮನೆಯ ತಗಡೇರಿ
ಉಕ್ಕಿದ‌ಕೃಷ್ಣೆಯ ನೋಡಿದ
ಮೊಸಳೆಯ ಕಣ್ಣಲಿ ಆನಂದಬಾಷ್ಪ
ಸಗ್ಗದ ಕನಸು ತೋರಿಸಿದ 
ಸಾಧು ಸಂತ ,ಮೌಲಿ
ಮುಲ್ಲಾಗಳಿಗೆ ಕಲಕ 
ನೀರಿನ ತಂಪು ನರಕ ದರ್ಶನ 
ಗಂಜಿಯಿಲ್ಲದ ಕೇಂದ್ರದಿ
ನಡುಗುತ್ತ ಕುಳಿತ 
ನೂರೆಕ್ರೆ ಕಬ್ಬಿನ ಫಡದ 
ಮಾಜಿ ಸಾವ್ಕಾರ ಅಹಂ ಹತ್ತಿಕ್ಕಿ
ಅಛೂತನಿಗೆ ಕೇಳುತ್ತಾನೆ 
ಹೊಟ್ಟಿ ಹಸದೈತಿ 
ಗಂಜಿ ಅಂಬಲಿ ಏನರೆ ಉಳದೈತಿ ?
ಒಂದ ಬೀಡಿ ಇದ್ರ ಕೋಡು 
ಮಾರಾಯಾ
ಥಂಡಿ ಭಾಳ ಐತಿ .....
ಬೆಂಗಳೂರಿನ ಬುದ್ಧಿವಂತರು
ಕಳಿಸಿದ ಮಂಕಿ ಕ್ಯಾಪು 
ತುಟ್ಟಿಯ ಅಂಗಿ ಜೀನ್ಸು ಉಟ್ಟು 
ಪೌಡರ್ ಹಾಲಲಿ ಕಲಸಿದ 
ಬೋರ್ಮಿಟಾ ಕುಡಿದ‌ ಕೇರಿಯ ಹುಡುಗನಿಗೆ 
 ಚೊಚ್ಚಲ ನೆರೆಯ  ಸಂಭ್ರಮ 
ಆತನ ಸೈಕಲ್ ಟೈರು ಕಬ್ಬಿನ ಒಣ ಗಣಿಕೆಯೊಂದಿಗೆ ತೇಲಿ ಹೋಗಿತ್ತು 
ಸುಭಿಕ್ಷ ಊರಿನ ಉಚ್ಛ್ರಾಯ ಕಾಲದಿ
ಒಪ್ಪತ್ತು ಎರಡ್ಹೊತ್ತು ಅರ್ಧ ಹೊಟ್ಟೆ 
ಉಂಡು ,ಹಸಿವ ಮರೆಯಲು 
ಟೈರೋಡಿಸುತ್ತಿದ್ದ ,
ಗೌಡರ ಜೀಪಿನ‌ ಎಡಬಲದ ಇಂಡಿಕೇಟರ್ನಂತೆ  
ಕುಂಡಿಕಾಣುವ ಹರಕು ಚಡ್ಡಿಯವ
ಹೇಲಿಕ್ಯಾಪ್ಟರಿನಲ್ಲಿ ಹಾರಿ
ಸಿಮೆಂಟ್ ಶಾಲೆಯ ಗಂಜಿ ಕೇಂದ್ರದಿ
ಬ್ರ್ಯಾಂಡೆಡ್ ಬಟ್ಟೆತೊಟ್ಟು ,
ಬಿಸ್ಗೀಟು‌ ಬ್ರೆಡ್ಡು
 ಹೊಟ್ಟೆ ತುಂಬ ಉಂಡು 
ಕಣ್ಣ ಮುಂದೆ ನೇತಾಡುವ
 ಮಂಕಿ ಕ್ಯಾಪ್ನ ಲೇಬಲ್ 
ಉಫ್ ಉಫ್ ಎಂದು ಊದುತ್ತ
ಕುಂಟ ಮೇಕೆ‌ ಹುರುಕಿನ ನಾಯಿ‌
ಹರಕು ಗುಡಿಸಲು ಕಳಕೊಂಡು
ಗಂಜಿ ಕೇಂದ್ರದ ಸೋರುವ 
ಸೂರು ದಿಟ್ಟಿಸುತ್ತ ,ಕುಳಿತ ಅಪ್ಪನ 
ನೋಡಿ ಆನಂದದಿ ಕೇಳುತ್ತಾನೆ‌
" ಅಪ್ಪಾ ಮತ್ತ ನಮ್ಮೂರ ಯಾವಾಗ ಮುಣುಗತೈತಿ ? " 
...

By: ಡಾ ಸಲೀಮ ನದಾಫ

Comments[1] Likes[2] Shares[1]

Submit Your Comment

Latest Comments

Geetha Balu
Jul 06,2020

ನೆರೆಯ ಸಂತಸ ಮತ್ತು ದುಃಖಗಳ ಕುಣಿತ ಸುಂದರ ಮತ್ತು ದಾರುಣವಾಗಿ ಮೂಡಿದೆ . ಈವರೆಗೂ ಸೊರಗಿದ್ದ ಕೃಷ್ಣೆಗೆ ಬಂದ ಹರಯ ಅವಳನ್ನು ಹುಚ್ಚೆಬ್ಬಿಸಿದೆ . ಮೀಸೆ ಬಂದವನಿಗೆ ಲೋಕ ಕಾಣದು ಎಂಬಂತೆ ಇಡೀ ಊರನ್ನೇ ತನ್ನ ತಾಳಕ್ಕೆ ತಕ್ಕಂತೆ ಅವಳು ಕುಣಿಸಿದ್ದು ಸುಂದರ ನರ್ತನವಲ್ಲ ರೌದ್ರ ತಾಂಡವ ನೃತ್ಯ . ಇದು ಹರೆಯದವರ ಹಣೆಬರಹ ಎಂಬಂತೆ ಮಕ್ಕಳಿಗೆ ಬಿಸಿಯುಸಿರು ತಟ್ಟಿಲ್ಲ . ಶಾಲೆ ಮುಚ್ಚಿ ಗಂಜಿ ಕೇಂದ್ರದಲ್ಲಿ ಎಣೆಯಿಲ್ಲದೆ ಆಡಬಹುದೆಂಬುದೇ ಸಂತಸ . ಎಂದೂ ಕಾಣದ ಜೀನ್ಸ್ ತೊಟ್ಟು , ಸುಂದರ ಟೊಪ್ಪಿಗೆಯನ್ನು ಹಾಕಿ ಕುಣಿವ ಮಕ್ಕಳಿಗೆ ಅಪ್ಪ ಅಜ್ಜರ ಚಿಂತೆಯೇ ಕಾಣದು . ಮಕ್ಕಳಿಗೆ ನೆರೆಯ ಸಂಭ್ರಮ ಆದರೆ ಊರಿಗೆ ಮರಣ ಮೃದಂಗ . ಈ ಮರಣ ಮೃದಂಗದ ಒಂದೊಂದು ಮಟ್ಟೂಭಯಂಕರವಾಗಿ , ಕಣ್ಣಲ್ಲಿ ಹರಿದ ಕಂಬನಿಯ ಧಾರೆ ಕೃಷ್ಣೆಯ ಕಲರವದೊಡನೆ ಬೆರೆತು ಹೋಗಿದೆ . ಆದರೆ ತನ್ನ ಪಕ್ಕದ ಊರಿನ ಗೆಳೆಯ ಹಾಕಿಕೊಂಡ ಜೀನ್ಸ್ ಮಾತ್ರ ಈಚೆಯ ಊರಿನ ಹುಡುಗನ ಕಣ್ಣು ಕುಕ್ಕಿ 'ನಮ್ಮಲ್ಲಿ ನೆರೆ ಯಾವಾಗ 'ಎಂದು ಪ್ರಶ್ನಿಸಿದೆ . ಇದಕ್ಕೆ ಭವಿಷ್ಯದ ಚಿಂತೆಯಲ್ಲಿರುವ ಹಿರಿಯ ನಗಬೇಕೇ ? ಅಳಬೇಕೆ ?