Poem

ಊರ ಅಗಸಿ ಬಾಗಿಲ ಮುಂದೆ

 ಊರ ಅಗಸಿಗೆ ಚಹರೆ ಮರೆತು ಹೋಗಿ
   ನನಗೆ ಪ್ರವೇಶ ನಿಷೇಧಿಸಿದೆ ಅಘೋಷಿತವಾಗಿ
   ಅಕ್ಕರೆಯ ಅಪ್ಪ ದೊಡ್ಡ ಪಾದದ ಗುರುತ
   ಪುಟ್ಟ ಎದೆಯಲಿ ಅಚ್ಚೊತ್ತಿ ಸದಾ ಜೀವಂತ
   
   ಹಿರಿಗಣ್ಣ ಕಿರಿದಾಗಿಸಿ ದಾರಿಗುಂಟ ಬೆಳಕಾದ
   ಹೆಗಲಿಗೆ ಕಣ್ಕೊಟ್ಟ ತಂಪುಗಣ್ಣಿನವ
   ಅವ ನನ್ನವ್ವ, ಜೀವ
   ಇದೀಗ ಸಿದ್ಧವಾಗಿದೆ, ಕಸಿ ಮಾಡಿದ ಕರುಳು
   ಊರ ಬಾಗಿಲಿಗೆ ಮಮತೆಯ ತೋರಣಕಟ್ಟಲು

   ಕರಿ ಮುಗಿಲ ಸೂರ್ಯ
   ಮತ್ತೆ-ಮತ್ತೆ ಸಹಿ ಹಾಕಿದ ತಪ್ಪೊಪ್ಪಿಗೆ ಪತ್ರಕೆ
   ಮಣ್ಣನಾದದಲಿ ಎದೆಗಣ್ಣ ಕುಣಿತ
   ಅಣುಕಣದಲ್ಲಿ ಹೆಸರಿಲ್ಲದ ಹಸಿವು
   ನನ್ನೊಡಲಲ್ಲೀಗ ಬ್ರಹ್ಮಾಂಡದ ಬೀಜ
   ಭುವಿಯ ಬೇರು ತುದಿಕಾದು ಬಾನಿನೆದೆಗೂ ಮಂಕು

   ಮೊಳೆ ಬಡಿದ ಬೂಟಿಗೂ ಮುದ್ದಿಕ್ಕಿ
   ಅಂಗಾಲ ತುರಿಕಿ
   ಒಂಟಿಗಾಲಲಿ ಕಾಲನನು ಸೋಲಿಸಿ ಬದುಕ ತೂಗಿದ
   ನನ್ನಪ್ಪ, ಮಲಗಿದ ರಾತ್ರಿಗಳೇ ನೆನಪಿಲ್ಲ ಊರ ಮಂದಿಗೆ
   ತಲೆಯ ಮೇಲೊಂದು ಟೋಪಿಯ ಕಿರೀಟ
   ಮೆರೆಯಲಲ್ಲ ಶಿಸ್ತಿಗೆ
   ಕೈಯಲೊಂದು ಲಾಟಿ ಬಿಚ್ಚುಗತ್ತಿಯಂತೆ
   ಸವಾರಿ ಹೊರಟ ಸೈಕಲ್ ಥೇಟ್ ಐರಾವತ
   ಗಸ್ತು ತಿರುಗಿ ತಿರುಗಿ ಊರ ಗೋಲವ ಸುತ್ತಿದ
   ನನ್ನಪ್ಪ ಕಾಯುವ ಕಾಯಕದ ಮೂರ್ತರೂಪ

   ಹಾಕಿದ ಅಂಗಿಗೆ ನಿರಿಗೆ ಬೀಳದಂತೆ ನೀಟಾಗಿಸಿ
   ಅಲ್ಲಾಡದೆ ಎದೆ ಸೆಟೆದು ನಿಂತ;
   ಊರ ಆತಂಕಗಳ ನೀಗಿದ
   ಮಮ್ಮಲ ಮರಗಿದ ನೀಗದೆ ಹೋದಾಗ

  ಕಣ್ಣೀರ ಇಟ್ಟಿಗೆಗಳ ಒಂದೊಂದಾಗಿ ಜೋಡಿಸಿ
  ಬೆವರ ಹನಿಗಳ ಕಲಸಿ ಬೆರೆಸಿ
  ಕನಸಿನ ಮನೆಕಟ್ಟಿ ನಮಗೆ ಬಿಟ್ಟುಹೋದೆ
  ಮಕ್ಕಳು ಮೊಮ್ಮಕ್ಕಳ
  ಹೃದಯ ಬಡಿತದ ತೊದಲಿನಲೂ
  ಈಗ ಬರೀ ನಿನ್ನದೇ ಹೆಸರು 
  
  ನಿನ್ನ ಕಣ್ಣು
  ನನ್ನ ಕುಡಿಯ ಕುಡಿಯಾಗಿ ಇಡಿಯಾಗಿ
  ಮೂಡಲೆಂದು 
  ಕುಂಚಿಗೆ ಕುಲಾಯಿಗೆ ಹೇಳಿ
  ಕಪಾಟಿನಲಿ ಮುಚ್ಚಿಟ್ಟಿರುವೆ
  ಯಾರ ದೃಷ್ಟಿಯೂ ತಾಕದಂತೆ

  ಸಮುದ್ರೆಯ ಮಗನೆ
  ನಿನ್ನ ಮಮತೆಯ ಒಂದು ಬೊಗಸೆ ನಾನು
  ಬೆರಳು ಹಿಡಿದು ಕರೆತಂದು ಇಲ್ಲೀವರೆಗೆ 
  ನೀ ಹೋದದ್ದಾದರೂ ಎಲ್ಲಿಗೆ ?
  ಆ ಕೈಲಾಸಕೂ ನಿನ್ನ ಕಾವಲು ಬೇಕಾಯಿತೆ ಅಪ್ಪಾ
 

By: ಭಾಗ್ಯಜ್ಯೋತಿ ಹಿರೇಮಠ

Comments[0] Likes[3] Shares[0]

Submit Your Comment

Latest Comments

No comments are available!