Poem

ಪಂಜರದ ಗಿಳಿ

ಪಂಜರದ ಗಿಳಿಯು ನಾನು,
ರೆಕ್ಕೆ ನನಗೇತಕೆ!
ಹಾರಲು ಮರೆತಿರುವೆ,
ಬಿಡುಗಡೆ ಇನ್ನೇತಕೆ!

ನೀಲಿ ಆಗಸ ನನಗೆ,
ಇಲ್ಲೇ ಕಂಡಿದೆಯಲ್ಲ!
ರವಿಯ ಕಿರಣದ ಸ್ಪರ್ಶ,
ನಾನೆಂದೂ ಅರಿತವನಲ್ಲ!

ಕಾಳಿನ ಅಭಾವ ಇಲ್ಲ,
ಬಟ್ಟಲು ತುಂಬಿದೆಯಲ್ಲ!
ವಲಸೆ ಏತಕೆ ಇನ್ನು,
ತುತ್ತಿಗೆ ಬರವಿಲ್ಲ!

ಗೂಡಿದು ನನ್ನದು ಗಟ್ಟಿ,
ಮಳೆಗೆ ಬೀಳುವುದಿಲ್ಲ!
ಹುಲ್ಲನು ಹುಡುಕುತ ನಾನು,
ಗೂಡನು ಕಟ್ಟಲೇ ಇಲ್ಲ!

ಪಂಜರದ ಗಿಳಿಯು ನಾನು,
ರೆಕ್ಕೆ ನನಗೇತಕೆ!
ಹಾರಲು ಮರೆತಿರುವೆ,
ಬಿಡುಗಡೆ ಇನ್ನೇತಕೆ!

By: ಸಹನಾ ಕಾರಂತ್‌

Comments[0] Likes[36] Shares[0]

Submit Your Comment

Latest Comments

No comments are available!