Poem

ಸಿಡಿಲ ಮಿಂಚಿನ ಕವಿತೆಗಷ್ಟೊ

ಆ ಊರ ಕೇರಿಯ ಕಂಬನಿಗೆ ಕರಗಿದ
ಮೋಡಗಳೆಷ್ಟೊ
ಹೇಲುಚ್ಛೆ ಹೊತ್ತ ತಲೆಯಿಂದರಳಿದ
ಚಿಗುರುಗಳೆಷ್ಟೊ
ಉರಿವ ಕೊಳ್ಳಿಗೆ ಬೆಂದ
ಬಿಸಿ ಉಸಿರುಗಳೆಷ್ಟೊ
ಹಿಮದ ಮೇಲಿನ ಮುಳ್ಳಿಗೆ
ಸೋಕಿದ ಪಾದಗಳೆಷ್ಟೊ.

ಸಮಾನತೆ ಎನ್ನುವುದು
ಇರುಳ ಉರುಳಿಗೆ
ಶಿರವನ್ನೊಡ್ಡಿರುವಾಗ
ಬೆಳದಿಂಗಳ ಚಂದ್ರನ
ತೊಗಲ ಹಗ್ಗ ಮಸೆಯುವ 
ಕೈಗಳೆಷ್ಟೊ.

ಜಗ ಬೆಳಗಿದ ಅಣ್ಣನ
ಕಣ್ಣ ಹಣತೆಯ ಎಣ್ಣೆ ನಂದಿರುವಾಗ
ಕತ್ತಲೆಯ ಧೂಮಕೇತುವಿನ
ಕ್ಷಣಮಾತ್ರ ಬೆಳಕನ್ನು ಹಿಂಡಿದ
ಬೆರಳುಗಳೆಷ್ಟೊ.

ನಮ್ಮ ನಿಮ್ಮ ನಡುವೆ ಅಂಟಿದ
ನಂಟಿನ ಗಂಟನ್ನು ಬಿಚ್ಚುವ
ಕುಲವೆಂಬ ಸಮುದ್ರದೊಳಗೆ
ಉಪ್ಪು ಸುರಿದವರೆಷ್ಟೊ.

ಈ ಜಗವೆ ಬೆತ್ತಲಾಗಿ
ಕಾಮಾಂಧತೆಯ ಸುಡುಗಣ್ಣ ಸ್ಪರ್ಶದಲಿ
ಬೆಂಕಿಯುಂಡೆ ಸ್ಖಲಿಸುತ್ತಿರುವಾಗ,
ಬೆತ್ತಲೆಯಾಗುವುದೆಂದರೆ
ಸೂರ್ಯನನ್ನು ಸುಟ್ಟಷ್ಟೇ ಪ್ರಖರವೆಂದರಿತ
ಅಕ್ಕ ಮಲ್ಲಿಕಾರ್ಜುನರ ನೆನೆವ
ಬಟ್ಟೆ ತೊಡದ ಕಡಲಾಚೆಯ ಹೂವುಗಳೆಷ್ಟೊ.

ಬಸವನೂರಿನಲಿ ಬುದ್ದನ ನಗುವನ್ನರಳಿಸುವ
ಬಾಬಾ ಸಾಹೇಬರಂಥಹ ಸಿಡಿಲ ಮಿಂಚಿನ ಕವಿತೆಗಳೆಷ್ಟೊ
ಈ ನಮ್ಮ ದನಿಗೆ
ನೀರಿಲ್ಲದ ಕೆರೆಯಲ್ಲಿ ವಿಷಕಕ್ಕುವ
ನಾಗರ ಹೆಡೆಗಳೆಷ್ಟೊ.

By: ವೀರೇಶ್‌ ನಾಯಕ್‌

Comments[0] Likes[0] Shares[0]

Submit Your Comment

Latest Comments

No comments are available!