Poem

ತುಂಬಿದ ಮನೆ

ಮುಂಜಾನೆಯು ಮೂಡಿತ್ತು ಹೆಜ್ಜೆ ಗೆಜ್ಜೆ ಗಳ ಸದ್ದಲ್ಲಿ 
ಮನೆಯ ಮುಂದಿನ ಆವರಣವೆಲ್ಲ ಬಣ್ಣಗಳ ರಂಗೋಲಿ 
ಹಲವು ಕೈಗಳು ಸೇರಿ ಮೂಡಿದ ಗೆರೆಗಳಲ್ಲಿ 
ತುಂಬಿದ ಮನೆಯ ಕತೆಯು ಮೂಡಿತ್ತು ಸುಂದರ  ಸಾಲುಗಳಲ್ಲಿ 

ಅಡುಗೆಯ ಮನೆಯ ತುಂಬೆಲ್ಲ ಮಾತಾಡುವ ಕೈ ಬಳೆಗಳು 
ಅಡುಗೆಯ ನಡುವೆ ಮೂಡುವ ದಿನದೆಲ್ಲ ಮಾತುಗಳು 
ಕೋಪ ತಾಪ ಗಳಿಗೆ ಸ್ಥಳವಿಲ್ಲದ ಬಾಂಧವ್ಯದ ಮನಗಳು 
ತುಂಬಿದ ಮನೆಯ ಕೈ ತುತ್ತಲ್ಲಿ ಬೆರೆತಿತ್ತು ಎಲ್ಲರ ಹೃದಯಗಳು 

ಮನೆಗೆಲ್ಲ ಬೆಳಕಂತಿದ್ದ ಹಿರಿಯ ಎರಡು ಜೀವಗಳು 
ಅವರನ್ನೇ ಸೇರಿ ಹಬ್ಬಿದ್ದವು ಹಲವು ಬಳ್ಳಿಗಳು 
ಒಂದೊಂದು ಬಳ್ಳಿಯಲು ಬೇರೆ ಬಣ್ಣದ ಹೂಗಳು 
ಎಲ್ಲ ಸೇರಿ ತಂದಿದ್ದವು ತುಂಬಿದ ಮನೆಯೊಳಗೂ ಬೆಳದಿಂಗಳು 

ಮನೆಯ ತುಂಬಾ ಹರಿದಾಡುವ ಪುಟ್ಟ ಪುಟ್ಟ ಜೀವಗಳು 
ಮನೆಯ ತುಂಟಾಟಕೆಲ್ಲ ಇವರೇ ರಾಯಭಾರಿಗಳು 
ಆಗಾಗ ಕೇಳುವ ಇವರ ಮುನಿಸು,ನಗು ಅಳುವಿನ ಶಬ್ದಗಳು 
ತುಂಬಿದ ಮನೆಯ ಜೀವಗಳಿಗೆ ಇವರೇ ಕಣ್ಮಣಿಗಳು 

ಮನೆಯ ಆವರಣವೆಲ್ಲ ಪೂರ್ಣ ಎಲ್ಲರಿದ್ದೂ ಸಂಜೆಯಲಿ 
ಹಚ್ಚಿದ ದೀಪವು ನಗುವುದು ಆ ಪ್ರೀತಿಯ ಸಂತೆಯಲಿ 
ತೇಲಿದ್ದವು ಹಿರಿಯ ಮನಗಳು ಆ ಖುಷಿಯ ಭಾರದಲ್ಲಿ 
ತುಂಬಿದ ಮನೆಗೆ ಕಾಲಿಡಲು ನಿಂತಿದ್ದ ಚಂದ್ರನು ಸರತಿಯಲ್ಲಿ 

ಕೂಡಿ ಬಾಳಲು ಸಾಕು ಹೃದಯಗಳ ಒಪ್ಪಿಗೆ 
ತುಂಬಿದ ಮನಗಳೇ ಸಾಕ್ಷಿ ತುಂಬಿದ ಮನೆಗೆ… 
 

By: ಷಣ್ಮುಖಾರಾಧ್ಯ ಕೆ ಪಿ

Comments[0] Likes[0] Shares[0]

Submit Your Comment

Latest Comments

No comments are available!