ಸ್ವತಃ ಲೇಖಕರಾಗಿರುವ ಎ. ಎಂ. ಸುಬ್ರಹ್ಮಣ್ಯ ಅವರ ಪುಸ್ತಕ ಶ್ರದ್ಧೆಯ ಪರಿಣಾಮವಾಗಿ 1986ರಲ್ಲಿ ಆರಂಭವಾದ ಸಾಹಿತ್ಯ ಪ್ರಕಾಶನ, ಕಷ್ಟದ ಹಾದಿಯಲ್ಲೇ ನಡೆದು ಮಹತ್ವವಾದುದನ್ನು ಸಾಧಿಸಿದ ಸಂಸ್ಥೆ. ತಂದೆಯವರಾದ ಎಂ. ಅನಂತಮೂರ್ತಿ ಮತ್ತು ದೊಡ್ಡಪ್ಪ ಎಂ ಗೋವಿಂದರಾಯರು ಸಾಹಿತ್ಯ ಭಂಡಾರ ಪ್ರಕಾಶನ ಸಂಸ್ಥೆ ಮೂಲಕ ತೋರಿಸಿದ್ದ ಹಾದಿಯನ್ನೇ ಮಾದರಿಯಾಗಿಟ್ಟುಕೊಂಡು ಸಾಹಿತ್ಯ ಪ್ರಕಾಶನವನ್ನು ಕಟ್ಟಿ ಬೆಳೆಸಿದರು ಸುಬ್ರಹ್ಮಣ್ಯ ಅವರು.
ಯಂಡಮೂರಿಯವರ ’ಕರಿಗಂಬಳಿಯಲ್ಲಿ ಮಿಡಿನಾಗ’ ಎಂಬ ಕೃತಿಯೊಂದಿಗೆ ಆರಂಭಿಸಿ, 700ಕ್ಕೂ ಹೆಚ್ಚು ಸದಭಿರುಚಿಯ ಪುಸ್ತಕಗಳನ್ನು ಪ್ರಕಟಿಸಿದೆ ಸಾಹಿತ್ಯ ಪ್ರಕಾಶನ. ಕೆ. ಎಸ್. ನಾರಾಯಣಾಚಾರ್ಯರದ್ದೇ 100 ಕೃತಿಗಳು ಸಾಹಿತ್ಯ ಪ್ರಕಾಶನದಿಂದ ಹೊರಬಂದಿವೆ. ಪುಸ್ತಕಗಳ ಮಾರಾಟದಲ್ಲೂ ಬೆರಗುಗೊಳಿಸುವ ಸಾಧನೆ.
ಪ್ರಕಾಶನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಾಹಿತ್ಯ ಪ್ರಕಾಶನಕ್ಕೆ, ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ 2021ರಲ್ಲಿ ಸಂದಿದೆ.
©2022 Book Brahma Private Limited.