ಕನ್ನಡ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದ ಪ್ರತ್ಯೇಕ ವಿಭಾಗ ಆರಂಭವಾಗಲಿ: ದೊಡ್ಡರಂಗೇಗೌಡ

Date: 06-01-2023

Location: ಹಾವೇರಿ


ಕನ್ನಡದ ಅಭಿವೃದ್ಧಿಗಾಗಿ ಆಗಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಸಾಹಿತಿ ದೊಡ್ಡರಂಗೇಗೌಡರು ಸರ್ಕಾರದ ಮುಂದಿಟ್ಟಿದ್ದಾರೆ. ಅಧ್ಯಯನ ಅಭಿವೃದ್ಧಿ ಅಡಿಯಲ್ಲಿ ಕೇಂದ್ರದಿಂದ ನೆರವನ್ನು ಪಡೆಯಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ಅವುಗಳ ಪಟ್ಟಿ ಇಲ್ಲಿದೆ.

* ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕನ್ನಡ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದ ಪ್ರತ್ಯೇಕ ವಿಭಾಗ ಆರಂಭವಾಗಬೇಕು. ಇದಕ್ಕಾಗಿ ಓರ್ವ ಹೆಚ್ಚುವರಿ ಆಯುಕ್ತರನ್ನು ನೇಮಿಸಿ ಅವರಿಗೆ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ನೀಡಬೇಕು. ಈ ವಿಭಾಗವು ಕನ್ನಡ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಮೊದಲಾದ ಸರ್ಕಾರದ ಸಂಸ್ಥೆಗಳೊಡನೆ, ವಿಶ್ವವಿದ್ಯಾನಿಲಯಗಳೊಡನೆ ಸಮನ್ವಯ ಸಾಧಿಸಿ ಶಾಸ್ತ್ರೀಯ ಭಾಷೆ ಅಭಿವೃದ್ಧಿ ಕಾರ್ಯಗಳು ಓವರ್‌ಲ್ಯಾಪ್ ಆಗದಂತೆ ನೋಡಿಕೊಂಡು ಎಲ್ಲ ಸಂಸ್ಥೆಗಳಿಗೂ ಪ್ರತ್ಯೇಕ ಯೋಜನೆ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ನೀಡಬೇಕು.

* ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗದಲ್ಲಿ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಒಂದು ಪ್ರತ್ಯೇಕ ವಿಭಾಗ ತೆರೆಯಬೇಕು. ಅದಕ್ಕೆ ನಿರ್ದೇಶಕರು ಸೇರಿದಂತೆ ಪರಿಣತ ಸಿಬ್ಬಂದಿ ವರ್ಗದವರನ್ನುನೇಮಿಸಲು ಸರ್ಕಾರ ಪೂರ್ಣ ನೆರವು ನೀಡಬೇಕು. ಅದೇ ರೀತಿ ಹೊರನಾಡಿನ ವಿಶ್ವವಿದ್ಯಾನಿಲಯಗಳಲ್ಲಿರುವ ಕನ್ನಡ ವಿಭಾಗಗಳನ್ನು ಬಲಪಡಿಸಬೇಕು. ಅಲ್ಲಿಯೂ ಕೂಡಾ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ವಿಭಾಗವನ್ನು ಮಾಡಬೇಕು. ಈ ಎರಡೂ ವಿಭಾಗಗಳಿಗೆ ರಾಜ್ಯ ಸರ್ಕಾರ ಪೂರ್ಣ ನೆರವನ್ನು ನೀಡಬೇಕು. ಈ ಬಗ್ಗೆ ಅಂದಾಜು ಮಾಡಿ ಕೇಂದ್ರಕ್ಕೆ ಕಳುಹಿಸಿ ಶಾಸ್ತ್ರೀಯ ಭಾಷೆ ಅಡಿಯಲ್ಲಿ ಹಣಕಾಸಿನ ನೆರವು ಪಡೆಯಬೇಕು.

*ವಿಶ್ವವಿದ್ಯಾನಿಲಯಗಳಿಂದ ಶಾಸನ ಸಂಪುಟಗಳ ಪ್ರಕಟಣೆ, ಹಳಗನ್ನಡ ಕಾವ್ಯಗಳ ಪ್ರಕಟಣೆ, ಹಸ್ತಪ್ರತಿಗಳಲ್ಲಿ ಉಳಿದಿರುವ ಅಮೂಲ್ಯವಾದ ಮತ್ತು ಪ್ರಮುಖವಾದ ಕಾವ್ಯಗಳನ್ನುಪ್ರಕಟಿಸುವ ಯೋಜನೆಗಳನ್ನು ರೂಪಿಸಬೇಕು. ಕನ್ನಡದ ಪ್ರಮುಖ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಕೃತಿಗಳನ್ನು ಆಯ್ಕೆ ಮಾಡಿ, ಅವುಗಳನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಬೇಕು.

* ಕನ್ನಡ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಶಾಸನಾತ್ಮಕ ಮಾನ್ಯತೆ . ರಾಜ್ಯ ಸರ್ಕಾರ ಕನ್ನಡ ಭಾಷೆಯ ಅಭಿವೃದ್ಧಿ ವಿಚಾರದಲ್ಲಿ ತರುತ್ತಿರುವ ಹೊಸ ವಿಧೇಯಕದಲ್ಲಿ ಈ ಎಲ್ಲ ಅಂಶಗಳನ್ನೂ ಸೇರ್ಪಡೆ ಮಾಡಬೇಕು. ಆಗ ಈ ಎಲ್ಲ ಕಾರ್ಯಕ್ರಮಗಳಿಗೆ ಶಾಸನಾತ್ಮಕ ಮಾನ್ಯತೆ ಇರುತ್ತದೆ. ಈ ವಿಧೇಯಕವನ್ನುವಿಧಾನಸಭಾಧ್ಯಕ್ಷರ ಮೂಲಕ ಜಂಟಿ ಸದನದ ಸಮಿತಿಗೆ ಒಪ್ಪಿಸಿ, ಮೂರು ತಿಂಗಳಲ್ಲಿ ವಿಧೇಯಕ ಸಿದ್ಧಪಡಿಸಬೇಕು. ಬರುವ ಜನವರಿ ತಿಂಗಳ ಅಧಿವೇಶನದಲ್ಲಿ ವಿಧೇಯಕವನ್ನುಅಂಗೀಕರಿಸಿ, ರಾಷ್ಟ್ರಪತಿಗಳ ಅಂಗೀಕಾರ ಪಡೆದು ಜಾರಿಗೆ ತರಬೇಕು.

* ತಮಿಳುನಾಡಿನ ಯೋಜನೆಗಳ ಮಾದರಿಯನ್ನು ಅಧ್ಯಯನ ಮಾಡಬೇಕು. ತಮಿಳು ಭಾಷೆಯನ್ನು ಶಾಸ್ತ್ರೀಯಭಾಷಾ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ತಮಿಳುನಾಡು ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ, ಯಾವ ಯಾವ ಯೋಜನೆಗಳನ್ನು ರೂಪಿಸಿದೆ ಎಂಬುದನ್ನು ಸಮಗ್ರವಾಗಿ ಅಧ್ಯಯನ ಮಾಡಲು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಬೇಕು. ಸಮಿತಿ ವರದಿಯನ್ನು ಪಡೆದು, ಅದರಂತೆ ನಮ್ಮ ರಾಜ್ಯದಲ್ಲೂ ಕ್ರಮ ಜರುಗಿಸಬೇಕು.

* ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿಉನ್ನತಮಟ್ಟದ ಸಮಿತಿ ಆಗಬೇಕು. ಕನ್ನಡ ಶಾಸ್ತ್ರೀಯ ಭಾಷೆಯ ಅಭಿವೃದ್ಧಿಯ ವಿಚಾರದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಕೇಂದ್ರದಿಂದ ನೆರವು ಪಡೆಯುವುದು ಇವುಗಳ ಬಗ್ಗೆ ಕಾಲ ಕಾಲಕ್ಕೆ ಚರ್ಚಿಸಿ ಯೋಜನೆಗಳನ್ನು ರೂಪಿಸುವ ಬಗ್ಗೆ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು. ಸಮಿತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳು, ಎಲ್ಲಾ ಅಕಾಡೆಮಿಗಳ ಅಧ್ಯಕ್ಷರು, ಬಿ.ಎಂ.ಶ್ರೀ. ಪ್ರತಿಷ್ಠಾನ, ಉದಯಭಾನುಕಲಾಸಂಘ, ಇತಿಹಾಸ ಅಕಾಡೆಮಿ ಮೊದಲಾದ ಎಲ್ಲ ಕನ್ನಡ ಸಂಘ ಸಂಸ್ಥೆಗಳ ಅಧ್ಯಕ್ಷರು ಸದಸ್ಯರುಗಳಾಗಿರಬೇಕು.

* ಕೇಂದ್ರದ ಶಾಸ್ತ್ರೀಯಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಬೇಕು. ಈ ಕೇಂದ್ರದ ನಿರ್ದೇಶಕರು ಸೇರಿದಂತೆ ಪರಿಣತ ಸಿಬ್ಬಂದಿ ವರ್ಗದವರನ್ನು ಕಚೇರಿ ಸಿಬ್ಬಂದಿ ವರ್ಗದವರನ್ನು ರಾಜ್ಯ ಸರ್ಕಾರದ ಸಲಹೆಯ ಮೇರೆಗೆ ನೇಮಿಸಬೇಕು. ಈ ಬಗ್ಗೆ ರಾಜ್ಯ ತಮಿಳುನಾಡಿನಮಾದರಿಯಲ್ಲಿಯೇ ಸ್ವಾಯತ್ತ ಕೇಂದ್ರ ರಚಿಸುವಂತೆ ಕೇಂದ್ರಕ್ಕೆ ಒತ್ತಾಯಿಸಬೇಕು. ತಮಿಳು ಭಾಷೆಗೆ ನೀಡುತ್ತಿರುವಷ್ಟೇ ನೆರವನ್ನು ಕನ್ನಡಕ್ಕೂ ನೀಡಬೇಕು.

* ಶಾಸ್ತ್ರೀಯ ಭಾಷೆಯ ಅಧ್ಯಯನ ಕೇಂದ್ರಕ್ಕೆ ಸಹಕಾರಿಯಾಗುವ ರೀತಿಯಲ್ಲಿ ಉಪಕೇಂದ್ರಗಳನ್ನುಸ್ಥಾಪಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಇತಿಹಾಸ ಅಕಾಡೆಮಿ, ಬಿ.ಎಂ.ಶ್ರೀ. ಪ್ರತಿಷ್ಠಾನ, ಉದಯಭಾನು ಕಲಾಸಂಘ, ಬೆಂಗಳೂರು, ಕರ್ನಾಟಕ ಸಂಘ ಧಾರವಾಡ, ಮೊದಲಾದ ಕನ್ನಡಪರಸಂಘಗಳನ್ನುಶಾಸ್ತ್ರೀಯ ಭಾಷೆಯ ಅಧ್ಯಯನದ ಉಪ ಕೇಂದ್ರಗಳನ್ನಾಗಿ ಸ್ಥಾಪಿಸಬೇಕು.

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...