ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಧನಸಹಾಯ ಹರಿದು ಬಂದಿಲ್ಲ: ದೊಡ್ಡರಂಗೇಗೌಡ ಬೇಸರ

Date: 06-01-2023

Location: ಹಾವೇರಿ


ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದೂ ನಾವು ಏನು ಸಾಧಿಸಲು ಸಾಧ್ಯ? ಡಬಲ್ ಎಂಜಿನ್ ಸರ್ಕಾರದ ಅನುಕೂಲತೆಗಳ ಬಗ್ಗೆ ಪದೇ ಪದೆ ಹೇಳುವ ಕೇಂದ್ರದ ಸರ್ಕಾರವು ಕನ್ನಡಕ್ಕೆ ಮಾಡಿರುವ ಅನುಕೂಲ ಇದೆ ಏನು? 

ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನದ ಹೊರತಾಗಿಯೂ ಭಾಷೆಯ ಅಧ್ಯಯನ, ಸಂಶೋಧನೆ, ಪ್ರಚುರ ಪಡಿಸುವಿಕೆಗೆ ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಧನಸಹಾಯ ಹರಿದು ಬಂದಿಲ್ಲ. ಅನುದಾನ ತರುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ. 

ಕನ್ನಡದಲ್ಲಿ ಎಣೆಯಿಲ್ಲದ ಪ್ರಾಚೀನ ಸಾಹಿತ್ಯ, ತತ್ವ, ವ್ಯಾಕರಣ ಶಾಸ್ತ್ರಗಳು, ವಚನ ಸಾಹಿತ್ಯ, ದಾಸ ಸಾಹಿತ್ಯ, ಶಿಲ್ಪಶಾಸ್ತ್ರ ಇವೆಲ್ಲವುಗಳಿಗೆ ಕಳಶವಿಟ್ಟಂತ ಜಾನಪದ ಮಹಾಕಾವ್ಯಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವೂ ದೊರತಿದೆ. 

ಸುಮಾರು ಎರಡು ಸಾವಿರ ವರ್ಷದಷ್ಟುಇತಿಹಾಸವನ್ನು ಹೊಂದಿರುವ ಸಾವಿರ ವರ್ಷಗಳನ್ನು ಮೀರಿದ ಸುಧಾರಿತ ಲಿಖಿತ ಭಾಷಾ ಪ್ರಯೋಗವನ್ನು ಹೊಂದಿರುವ ಕನ್ನಡ ಭಾಷೆ ಬಹುತೇಕ ಪಾಶ್ಚಿಮಾತ್ಯ ಭಾಷೆಗಳು ಶೈಶವಾಸ್ಥೆಯಲ್ಲಿವೆ. ಈ ಹೊತ್ತಿನಲ್ಲಿಯೇ, ಸಮೃದ್ಧವಾದ ಮೌಖಿಕ, ಲಿಖಿತ ಸಾಹಿತ್ಯ, ಶಾಸ್ತ್ರ ಗ್ರಂಥಗಳನ್ನುಹೊಂದಿತ್ತು. ವಿಪರ್ಯಾಸವೆಂದರೆ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನದ ಹೊರತಾಗಿಯೂ ಭಾಷೆಯ ಅಧ್ಯಯನ, ಸಂಶೋಧನೆ, ಪ್ರಚುರ ಪಡಿಸುವಿಕೆಗೆ ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಧನಸಹಾಯ ಹರಿದು ಬಂದಿಲ್ಲ ಎಂದು ಸಮ್ಮೇಳನಾಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ. 

ಈ ಆಕ್ಷೇಪಣೆ ಕನ್ನಡ ಭಾಷೆಯೊಂದರದ್ದು ಮಾತ್ರವಲ್ಲ, ಶಾಸ್ತ್ರೀಯಭಾಷಾ ಸ್ಥಾನಮಾನ ಪಡೆದಿರುವ ತಮಿಳು, ತೆಲುಗು, ಮಲಯಾಳಂ, ಒಡಿಯಾ ಭಾಷೆಗಳ ಆಕ್ಷೇಪಣೆಯೂ ಆಗಿದೆ. ಇತರ ಶಾಸ್ತ್ರೀಯ ಭಾಷೆಗಳ ಹೋಲಿಕೆಯಲ್ಲಿ 2017 ರಿಂದ 2020ರ ಅವಧಿಯಲ್ಲಿ ಸಂಸ್ಕೃತ ಭಾಷೆಗೆ ಕೇಂದ್ರವು ನೀಡಿದ ಅನುದಾನದ ಮೊತ್ತ ರೂ. 643 ಕೋಟಿ ಆಗಿದೆ. ಇದೇ ಅವಧಿಯಲ್ಲಿ ಶಾಸ್ತ್ರೀಯ ಭಾಷಾ ಸ್ಥಾನಮಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕನ್ನಡದ ಅಧ್ಯಯನ, ಸಂಶೋಧನೆಗಳಿಗೆ ಬಿಡುಗಡೆಯಾದ ಹಣ ಕೇವಲ ರೂ. 3 ಕೋಟಿ.

ನೆರೆಯ ತಮಿಳು ಭಾಷೆಗೆ ಈ ಅವಧಿಯಲ್ಲಿ ದೊರೆತ ಹಣ ರೂ. 23 ಕೋಟಿ, ತಮಿಳು ಭಾಷೆಗೆ 2017ರಿಂದ 2021ರ ವರೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾದ ಹಿನ್ನೆಲೆಯಲ್ಲಿ ಬಿಡುಗಡೆಯಾದ ಒಟ್ಟು ಹಣ ರೂ.42 ಕೋಟಿ ಎನ್ನುವ ಮಾಹಿತಿ ಇದು ಕನ್ನಡಕ್ಕೆನೀಡಲಾಗಿರುವ ಅನುದಾನ ಪರಿಸ್ಥಿತಿಯಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿಯೂ ಗಣನೀಯ ಸುಧಾರಣೆಯೇನೂ ಆಗಿಲ್ಲ ಎನ್ನುವುದು ನನಗಿರುವ ಮಾಹಿತಿ, ಹೆಚ್ಚೆಂದರೆ 2017ರಿಂದ ಇಲ್ಲಿಯವರೆಗೆ ಐದಾರು ಕೋಟಿ ರೂಪಾಯಿ ಅನುದಾನಸಿಕ್ಕಿರಬಹುದು.

ಹೀಗಾದರೆ, ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದೂ ನಾವು ಏನು ಸಾಧಿಸಲು ಸಾಧ್ಯ? ಡಬಲ್ ಎಂಜಿನ್ ಸರ್ಕಾರದ ಅನುಕೂಲತೆಗಳ ಬಗ್ಗೆ ಪದೇ ಪದೇ ಹೇಳುವ ಕೇಂದ್ರ ಸರ್ಕಾರವು ಕನ್ನಡಕ್ಕೆ ಮಾಡಿರುವ ಅನುಕೂಲ ಇದೆ ಏನು? ಅನುದಾನದ ವಿಚಾರದಲ್ಲಿ ನನಗಿರುವ ಮಾಹಿತಿಯಲ್ಲಿ ತಪ್ಪಿದ್ದರೆ ಸರ್ಕಾರ, ಸಂಬಂಧಪಟ್ಟ ಸಚಿವರು ಅದನ್ನು ಸರಿಪಡಿಸಲಿ. ನಿಖರ ಮಾಹಿತಿಯನ್ನು ಹಂಚಿಕೊಳ್ಳಲಿ. ಆದರೆ ಒಂದಂತೂ ಸತ್ಯ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಕೇವಲ ಕಣ್ಣೊರೆಸುವ ತಂತ್ರವಾಗಿದೆಯೇ ಹೊರತು ಭಾಷೆ, ಸಂಶೋಧನೆಯ ದೃಷ್ಟಿಯಿಂದ ಮಹತ್ವದ್ದೇನನ್ನೂ ಸಾಧಿಸಲು ಸಾಧ್ಯವಾಗಿಲ್ಲ.

ಈ ವಾಸ್ತವದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಾನು ಹೇಳುವ ಮಾತೊಂದೇ, ಶಾಸ್ತ್ರೀಯ ಭಾಷಾ ಸ್ಥಾನಮಾನದ ಹಿನ್ನೆಲೆಯಲ್ಲಿ ಕನ್ನಡಕ್ಕೆ ದೊರೆಯಬೇಕಾದ ಹಕ್ಕಿನ ಹಣವನ್ನು ತರುವ ಜವಾಬ್ದಾರಿ ನಿಮ್ಮದು ಅದನ್ನು ಹೇಗೆ ಸಾಧಿಸಿ ತೋರಿಸುತ್ತೀರೋ ನೋಡಿ. ಉಳಿದಂತೆ, ಕೇಂದ್ರದ ಹಣ ಒಂದು ಭಾಗವಾದರೆ ರಾಜ್ಯವು ಈ ನಿಟ್ಟಿನಲ್ಲಿ ಮಾಡಬೇಕಾದ ಕೆಲಸಗಳೂ ವ್ಯಾಪಕವಾಗಿವೆ. ಹೆಚ್ಚು ಕಾರ್ಯೋನ್ಮುಖರಾಗುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...