ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ: ದೊಡ್ಡರಂಗೇಗೌಡ

Date: 07-01-2023

Location: ಬೆಂಗಳೂರು


ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇಯ ದಿನದ ಕನಕ ಶರೀಫ-ಸರ್ವಜ್ಞ ಪ್ರದಾನ ವೇದಿಕೆಯಲ್ಲಿ “ಸಮ್ಮೇಳನಾಧ್ಯಕ್ಷರ ಜೊತೆ ಮಾತು-ಮಂಥನ” ಕಾರ್ಯಕ್ರಮವು ತಲಕಾಡು ಚಿಕ್ಕರಂಗೇಗೌಡ ಅವರ ಪ್ರಧಾನ ನಿರ್ವಹಣೆಯಲ್ಲಿ ನಡೆಯಿತು. ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರು ಹಲವಾರು ವಿಚಾರಗಳಿಗೆ ಧ್ವನಿಯಾದರು.

ಸಿನೆಮಾ ಗೀತೆಗೂ ಸಾಹಿತ್ಯದ ಕವಿತೆಗೂ ಏನು ವ್ಯತ್ಯಾಸ? ಸಂಕಮ್ಮ ಜಿ. ಸಂಕಣ್ಣನವರ ಅವರ ಪ್ರಶ್ನೆಗೆ ಉತ್ತರಿಸಿ, “ಸಿನೆಮಾಗೆ ಕವಿತೆ ಬರೆಯುವಾಗ ನಿರ್ದೇಶಕ ಹೇಳಿದ ಪಾತ್ರ ಹಾಗೂ ಆ ಸನ್ನಿವೇಶಕ್ಕೆ ಅನುಗುಣವಾಗಿ ಬರೆಯುತ್ತಾ ಹೋಗುತ್ತೇವೆ. ಬರೆಯುವ ಸಂದರ್ಭದಲ್ಲಿ ಇದು ಯಾವ ಪ್ರಕಾರದ, ಯಾವ ಸ್ವರ ಪ್ರಸ್ಥಾನದಲ್ಲಿ ಇರಲಿದೆ ಎಂಬುದನ್ನು ನಾವು ಸಂಗೀತ ನಿರ್ದೇಶಕರಲ್ಲಿ ಚರ್ಚಿಸುತ್ತೇವೆ. ನಂತರದಲ್ಲಿ ಬರೆಯಲು ಪ್ರಾರಂಭಿಸುತ್ತೇವೆ. ಕವಿತೆಯಲ್ಲಿ ಮುಕ್ತ ಸ್ವಾತಂತ್ಯ್ರ ನಿರ್ಬಂಧಗಳಿಲ್ಲ. ಭಾವನಾತ್ಮಕವಾಗಿರುವಂತಹ ಅಲೆಗಳು ಸಮುದ್ರದ ತೆರೆಗಳಂತೆ ಬಂದು ಅಪ್ಪಳಿಸಬಹುದು. ಈ ಎಲ್ಲಾ ಸಂದರ್ಭಗಳಲ್ಲೂ ಸ್ವಂತಿಕೆಯ ಪ್ರದರ್ಶನವಾಗುತ್ತದೆ. ಯಾವುದು ಜನರ ನಾಲಗೆಯಲ್ಲಿ ನರ್ತಿಸುತ್ತದೆ, ಅಂತಹ ದೇಸಿ ಭಾಷೆಯನ್ನು ನಾನು ಅಳವಡಿಸಿಕೊಳ್ಳುವೆ. ಇದು ಭಾಷಾ ಸೌಂದರ್ಯ” ಎಂದು ವಿವರಿಸಿದರು.

ಅಂತರ್ಜಾಲ ಸಾಹಿತ್ಯಕ್ಕೆ ನಿಮ್ಮ ಕೊಡುಗೆ, ನಿಮ್ಮ ದೃಷ್ಟಿಯಲ್ಲಿ ಸಾಹಿತ್ಯದ ಬೆಳವಣಿಗೆ ಅಂದರೆ ಏನು? ಶೀಲಾದೇವಿ ಎಸ್. ಮಳಿಮಠ ಅವರ ಪ್ರಶ್ನೆಗೆ ಉತ್ತರವಾಗಿ, “ಶಿಕ್ಷಣ ಕ್ಷೇತ್ರದಲ್ಲಿ ಇವತ್ತಿನ ದಿನ ‘ಇ’ ಸಾಹಿತ್ಯವೂ ಕೂಡ ದಾಪುಗಾಲಿಡುತ್ತಿದೆ. ನನ್ನ ಬಹುತೇಕ ಸಾಹಿತ್ಯವನ್ನು ‘ಇ’ ಸಾಹಿತ್ಯವನ್ನಾಗಿ ಪರಿವರ್ತಿಸುವುದಕ್ಕೆ ಕನ್ನಡ ಮತ್ತು ಸಾಹಿತ್ಯ ಇಲಾಖೆ ನನ್ನೆಲ್ಲಾ ಕೃತಿಗಳ ಹಕ್ಕುಗಳನ್ನು ಪಡೆದುಕೊಂಡಿದೆ. ಅದರಿಂದ ನಾನು ಕೂಡ ಜಾಗೃತನಾಗಿದ್ದೇನೆ. ಇನ್ನು ಸಾಹಿತ್ಯದ ಬೆಳವಣಿಗೆಯ ಕಡೆಗೆ ಗಮನಹರಿಸುವುದಾದರೆ, ಸಾಹಿತ್ಯ ಪ್ರತಿಯೊಂದು ಹಂತದಲ್ಲಿಯೂ ಬೆಳವಣಿಗೆಯನ್ನು ಕಾಣುತ್ತಿದೆ. ಪ್ರತಿಯೊಬ್ಬ ಸಾಹಿತಿ, ಕವಿ, ಬರಹಗಾರ ನಿಂತ ನೀರಾಗಬಾರದು. ಹೊರಗಿನ ಸಂವೇದನೆಗಳಿಗೆ ಆತ ಸ್ಪಂದಿಸಬೇಕು. ವೈಜ್ಞಾನಿಕ ಬೆಳವಣಿಗೆಯಲ್ಲಿ ಆತ ಹೆಜ್ಜೆಯನ್ನು ಹಾಕಲು ಕಲಿತಾಗ ಮಾತ್ರ ಅವನ ಅಸ್ಥಿತ್ವವಿರುತ್ತದೆ. ಅಮೇರಿಕದಲ್ಲಿ 16 ಕನ್ನಡ ಸಂಘಗಳಿವೆ. ಅವೆಲ್ಲವೂ ಕ್ರೀಯಾಶೀಲವಾಗಿದೆ. ಅತ್ಯಾಧುನಿಕವಾಗಿರುವ ಸೌಲಭ್ಯಗಳನ್ನು ಬಳಸಿ ಕನ್ನಡದ ಕೀರ್ತಿಪತಾಕೆಯನ್ನು ವಿದೇಶದಲ್ಲೂ ಬೆಳಗಿಸುತ್ತಿದ್ದಾರೆ ಎಂಬುದೇ ವಿಶೇಷ” ಎಂದು ಉತ್ತರಿಸಿದರು.

ಚಿತ್ರಕ್ಕೆ ಸಂಗೀತವನ್ನು ಬರೆಯುವಾಗ ದೃಶ್ಯ ಮುಖ್ಯವೋ ಸಂಯೋಜನೆ ಮುಖ್ಯವೋ? ಬಾಪು ಪದ್ಮನಾಭ ಅವರ ಪ್ರಶ್ನೆಗೆ ಉತ್ತರವಾಗಿ, “ಇವತ್ತಿನ ಸಂಗೀತ ನಿರ್ದೇಶನಗಳಲ್ಲಿ ಹೊಸ ಹೊಸ ಶೋಧಗಳನ್ನು ಮಾಡಬೇಕು. ಯಾವುದೋ ಒಂದು ಸ್ವರವನ್ನು ಕದ್ದು ಅದಕ್ಕೆ ಕನ್ನಡದ ಲೇಬಲ್ ಹಚ್ಚಲು ನಾನು ಇಷ್ಟಪಡುವುದಿಲ್ಲ. ಸೃಜನಶೀಲರಾಗಿ ನಮ್ಮತನದ ಮುದ್ರೆಯನ್ನು ನಾವು ಹಾಕುವುದು ಮುಖ್ಯವಾಗುತ್ತದೆ. ಹಾಗಾಗಿ ಸಂಯೋಜನೆ ಮುಖ್ಯ ಪಾತ್ರವಹಿಸುತ್ತದೆ” ಎಂದರು.

ಸೃಜನ ಮತ್ತು ಸೃಜನೇತರ ಸಾಹಿತ್ಯದಲ್ಲಿ ಅನುವಾದ ಸಾಹಿತ್ಯ ಪಾತ್ರ? ಶಾರದಾ ಮುಳ್ಳೂರು ಅವರ ವಿಚಾರಕ್ಕೆ ಸ್ಪಂದಿಸಿ, “ 47 ಕವಿತೆಗಳ ಹಿಂದಿ ಅನುವಾದ ಮೊದಲ ನನ್ನ ಅನುವಾದ ಸಾಹಿತ್ಯವಾಗಿದೆ. ಕವಿತಾ ಕೃಷ್ಣಮೂರ್ತಿ ನನ್ನ ಅನುವಾದ ಸಾಹಿತ್ಯದಲ್ಲಿನ ಎರಡು ಕವಿತೆಗಳನ್ನು ಹಾಡಿದ್ದರು. ಬೇರೆ ಭಾಷಿಗರು ನಮ್ಮ ಸಾಹಿತ್ಯವನ್ನೂ ಹಾಡಿದಾಗ ಖುಷಿಯಾಗುತ್ತದೆ. ಒಬ್ಬ ಲೇಖಕ ಕನ್ನಡ ನಾಡಿಗೆ ಮಾತ್ರವಲ್ಲ. ಅದರಾಚೆಗೂ ಕೂಡ ಅವನ ಹೆಸರು ಬೆಳೆಯಬೇಕು ಹಾಗೂ ಪಸರಿಸಬೇಕು. ಅಲ್ಲಿಯ ಜನರಿಗೂ ಕೂಡ ಕನ್ನಡ ಸಾಹಿತ್ಯ ಅರ್ಥವಾಗಬೇಕು ಮತ್ತು ಪ್ರಚಾರವನ್ನು ಪಡೆಯಬೇಕು ಎಂಬುದು ನನ್ನ ಆಸೆ. ಅನುವಾದ ಸಾಹಿತ್ಯಕ್ಕೆ ತನ್ನದೇ ಆದ ಪರಿಭಾಷೆ ಇದೆ. ನಾನು ಅನುವಾದ ಸಾಹಿತ್ಯಕ್ಕೆ ಒಂದಿಷ್ಟು ಕಾಣಿಕೆಗಳನ್ನು ಅರ್ಪಿಸಿದ್ದೇನೆ ಎಂಬುವುದೇ ನನ್ನ ಹೆಮ್ಮೆ”.

ಚಿತ್ರ ಸಾಹಿತಿಗಳಿಗೆ, ಯುವ ಬರಹಗಾರರಿಗೆ ನಿಮ್ಮ ಕಿವಿ ಮಾತು ? ಬುಕ್ಕಾಪಟ್ಟಣ ವಾಸು ಪ್ರಶ್ನೆಗೆ ಉತ್ತರವಾಗಿ, “ಯಾರು ಜೀವನದಲ್ಲಿ ಮುಂದೆ ಬರಬೇಕು ಎಂದುಕೊಂಡಿರುತ್ತಾನೆ, ಅಂತವನಿಗೆ ಪ್ರತೀ ನಿಮಿಷ ಕೂಡ ರಸಗಳಿಗೆಯಾಗಿ ಪರಿಣಮಿಸುತ್ತದೆ ಹಾಗೂ ಅಮೂಲ್ಯ ಎನ್ನಿಸುತ್ತದೆ. ಯುವಕರು ಜಾಣ ಕುರುಡು ಹಾಗೂ ಜಾಣ ಕಿವುಡನ್ನು ಪ್ರದರ್ಶನ ಮಾಡುತ್ತಿದ್ದಾರೆ. ಇದು ನಮಗೆ ಕಷ್ಟ. ಇವತ್ತಿನ ಹೊಸ ಕವಿಗಳಿಗೆ ನನ್ನ ಕಿವಿಮಾತು ಇಷ್ಟೆ. ದಯವಿಟ್ಟು ಪೂರ್ವ ಸೂರಿಗಳನ್ನು ಓದಿ. ಪೂರ್ವ ಸೂರಿಗಳೆಂದರೆ ಹಳೇ ಕವಿಗಳು. ಇವರನ್ನು ಓದುವುದರಿಂದ ನಿಮ್ಮ ಭಾಷಾ ಕೋಶ ಬೆಳೆಯುತ್ತಾ, ಪದಗಳ ವ್ಯಾಪ್ತಿ ದೊಡ್ಡದಾಗುತ್ತಾ ಹೋಗುತ್ತದೆ. ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಯುವಕರ ಅರಿವಿನ ಪರಿಧಿ ವಿಸ್ತಾರವಾಗಲು ಓದಬೇಕು”.

ಸಂಸದೀಯ ಸಭೆಯ ಚರ್ಚೆಯ ಗುಣಮಟ್ಟ ಹೆಚ್ಚಾಗಲು ನಿಮ್ಮ ಸಲಹೆ? ರುದ್ರಣ್ಣ ಹರ್ತಿಕೋಟೆ ವಿಚಾರಕ್ಕೆ ಸ್ಪಂದಿಸಿ, “ಪ್ರಜಾಪ್ರಭುತ್ವದ ಮೌಲ್ಯಗಳು ದಿನೇ ದಿನೇ ಅರ್ಥವನ್ನು ಕಳೆದು ಕೊಳ್ಳುತ್ತಾ ಹೋಗುತ್ತಿದೆ. ದುಡ್ಡಿರುವವನು ಗೆದ್ದು ಬರುತ್ತಾನೆ. ಆದರೆ ಆ ದುಡ್ಡು ಎಲ್ಲಿಂದ ಬರುತ್ತದೆ ಎನ್ನುವುದಕ್ಕೆ ನಮ್ಮಲ್ಲಿ ಪ್ರಶ್ನೆಯೂ ಇಲ್ಲ ಉತ್ತರವೂ ಇಲ್ಲ. ಬಹಿರಂಗವಾಗಿ ಹೇಳಲಾಗದ ಕೆಲವೊಂದು ನಿಗೂಢತೆಯ ವಿಚಾರಗಳು ಅಲ್ಲಿವೆ. ನಾನೊಬ್ಬ ಆರು ವರ್ಷಗಳ ಕಾಲ ವಿಧಾನಪರಿಷತ್ತಿನ ಸದಸ್ಯನಾಗಿ ಗಮನಿಸಿದ ದೌರ್ಬಲ್ಯವೆಂದರೆ, ಒಂದು ರೀತಿಯಲ್ಲಿ ಹಣದಿಂದ ಅಧಿಕಾರವನ್ನು ಕೊಂಡುಕೊಂಡ ಅಧಿಕಾರಿಗಳ ದರ್ಪ. ಇಂತಹ ಅಧಿಕಾರಿಗಳು ವಿಧಾನಪರಿಷತ್ತನ್ನು ಪ್ರವೇಶ ಮಾಡಿದ್ದರಿಂದ ಈ ಗೊಂದಲಗಳು ಆಗುತ್ತಿದೆ. ಶಾಸಕರು ಉಪಯೋಗಿಸುವ ಭಾಷೆ, ಅವರ ವರ್ತನೆಯನ್ನು ನೋಡಿದರೆ ಮೈಯೆಲ್ಲಾ ಉರಿದುಹೋಗುತ್ತದೆ. ಇನ್ನು ಭ್ರಷ್ಟತೆಯೇ ಪರಮಾವಧಿಯಾಗಿರುವಂತಹ ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕತೆಯನ್ನು ಹುಡುಕಬೇಕಾಗಿದೆ. ವ್ಯಕ್ತಿಗಳಲ್ಲಿ ಸಾಮೂಹಿಕವಾಗಿ ಅರಿವು ಮೂಡಿದರೆ ಗುಣಮಟ್ಟದ ಚರ್ಚೆಯ ಬದಲಾವಣೆ ಸಾಧ್ಯ” ಎಂದು ನುಡಿದರು.

- ರಂಜಿತಾ ಸಿದ್ಧಕಟ್ಟೆ

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...