ಸಾಮರಸ್ಯದ ಭಾವವನ್ನು ಯುವಜನಾಂಗ ಮೈಗೂಡಿಸಿಕೊಳ್ಳಬೇಕು: ಗುರುರಾಜ ಕರ್ಜಗಿ

Date: 06-01-2023

Location: ಹಾವೇರಿ


ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದನೆಯ ದಿನದ ಪ್ರಥಮ ಗೋಷ್ಠಿಯು ಕನಕ ಶರೀಫ-ಸರ್ವಜ್ಞ ಪ್ರದಾನ ವೇದಿಕೆಯಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಗೋಷ್ಟಿಯಲ್ಲಿ ‘ಸಾಮರಸ್ಯದ ಭಾವ-ಕನ್ನಡದ ಜೀವ’ ವಿಚಾರವನ್ನು ಮಂಡನೆ ಮಾಡಲಾಯಿತು.

ಶಿಕ್ಷಣ ಬದುಕಿಗೆ ಕೆಲಸ ಕೊಟ್ಟಿತೇ ವಿನಹಃ ಮನೋಧರ್ಮವನ್ನಲ್ಲ: ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, “ಸಾಮರಸ್ಯದ ಭಾವವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ನಾವೆಲ್ಲೇ ಹೋದರೂ ಕೂಡ ಸಾಮರಸ್ಯದ ಜೀವನವನ್ನು ನಡೆಸಬೇಕು. ಬಾಲ್ಯದಿಂದಲೇ ಮಕ್ಕಳಿಗೆ ಸರಿಯಾದ ಶಿಕ್ಷಣನ್ನು ಕೊಟ್ಟಿದ್ದರೆ, ಬೇಕು ಬೇಡಗಳ ಕುರಿತು ತಿಳಿಸಿದ್ದರೆ ಇಂತಹ ಪರಿಸ್ಥಿತಿ ನಮಗೆ ಈಗ ತಲೆದೋರುತ್ತಿರಲಿಲ್ಲ. ಆಗ ಸಾಮರಸ್ಯವು ತಾನಾಗೇ ಇಳಿದು ಹೋಗುತ್ತಿತ್ತು. ನಮ್ಮ ಶಿಕ್ಷಣ ಬದುಕಿಗೆ ಕೆಲಸವನ್ನು ಕೊಡಲು ಉಪಕಾರಿಯಾಯಿತೇ ವಿನಃ ಜೀವನ ಮನೋಧರ್ಮವನ್ನು ಕೊಡಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಸಾಮರಸ್ಯದ ಜೀವನವನ್ನು ನಡೆಸಲು ಮುಂದಾಗಬೇಕು. ಜಾತಿ ಧರ್ಮದ ಭೇದವನ್ನು ಸಮಾಜದಲ್ಲಿ ಅಳಿಸಿ, ಉತ್ತಮ ಸಮಾಜದ ಹುಟ್ಟಿಗೆ ಬುನಾದಿ ಹಾಕಬೇಕಾಗಿದೆ. ಅದು ಇಂದಿನಿಂದಲೇ ಶುರುವಾಗಲಿ” ಎಂದರು.

ಕನಕರ ಭಾವೈಕ್ಯತಾ ದೃಷ್ಟಿ: ಕವಿ ವೈ.ಎಂ ಯಾಕೊಳ್ಳಿ ಈ ವಿಚಾರದ ಮಾತನಾಡಿ, “ಕನಕದಾಸರ ಜೀವನಚಿತ್ರಗಳು ನಮ್ಮೆಲ್ಲರ ಬದುಕಿಗೆ ಒಂದು ನಿದರ್ಶನ. ಅವರು ಹಲವಾರು ಪಾಠಗಳನ್ನು ಬೋಧಿಸಿದವರು. ಜಾತಿ ಬೇಧವನ್ನು ಅಳಿಸಿ ಹಾಕುವಲ್ಲಿ ಪ್ರಯತ್ನ ಮಾಡಿದ ದಿಗ್ಗಜರು ಕೂಡ ಹೌದು. ಜನರು ಹೊಟ್ಟೆಗಾಗಿ ಬದುಕಬೇಕೇ ಹೊರತು ಜಾತಿಗಾಗಿ ಅಲ್ಲ ಎಂದು ತಮ್ಮ ದಾಸವಾಣಿಯ ಮೂಲಕ ನುಡಿದವರು. ವೇದ ಶಾಸ್ತ್ರ ಪಂಚಾಗವನ್ನು ಓದಿ, ಅನ್ಯರಿಗೆ ಪಾಠವನ್ನು ಮಾಡುವುದು ಹೊಟ್ಟೆಗಾಗಿ ಎನ್ನುವ ವಿಚಾರಗಳನ್ನು ಅವರು ಸಾರಿ ಸಾರಿ ಹೇಳುತ್ತಾರೆ. ನಾವೆಲ್ಲರೂ ನಮ್ಮ ಕೆಲಸ ಕಾರ್ಯಗಳನ್ನು ಮಾಡುವುದು ಹೊಟ್ಟೆಗಾಗಿ, ಬಟ್ಟೆಗಾಗಿ ಎನ್ನುವುದನ್ನು ಇಲ್ಲಿ ಜನರಿಗೆ ತಿಳಿಸುತ್ತಾರೆ. ಹಾಗಾಗಿ ಜಾತಿಯೇ ಮುಖ್ಯ ಅಲ್ಲ ಬದುಕುವುದು ಮುಖ್ಯವೆಂಬುದನ್ನು ನಾವು ಮನಗಾಣಬೇಕು. ಜಾತಿಯನ್ನು ಕುರಿತು ಯಾರು ಯಾಂತ್ರಿಕವಾಗಿ ಆಚಾರವನ್ನು ಮಾಡುತ್ತಾರೋ, ಅವರು ಜಾತಿಯ ಕೂಪದಲ್ಲಿ ಮುಳುಗಿ ಭಾವನೆಗಳಿಗೆ ಧಕ್ಕೆ ಮಾಡುತ್ತಾರೆ. ಇನ್ನು ಯಾವುದು ಧರ್ಮ ಅಂದರೆ, ಪರಹಿತಾರ್ಥವನ್ನು ಬಯಸುವುದು ಎನ್ನುವುದು ಕನಕದಾಸರ ಮಾತು. ಜಗತ್ತಿನಲ್ಲಿ ಶ್ರೇಷ್ಟ ಧರ್ಮವೆಂದರೆ ಅದು ಅನ್ನದಾನಮಾಡುವುದು ಹೊರತು ಜಾತಿ ಎಂದು ಯಾರಿಗೂ ಏನನ್ನು ನೀಡದೆ ಮನೆಯೊಳಗೆ ಎಲ್ಲವನ್ನೂ ಇಟ್ಟುಕೊಳ್ಳುವುದಲ್ಲ. ಬಡವರಿಗೆ ಇಕ್ಕುವ ಅನ್ನವನ್ನು ಬಡವರಿಗೆ ನೀಡಿದರೆ ಮಾತ್ರ ಅದೊಂದು ಧರ್ಮವಾಗುತ್ತದೆ. ಭಕ್ತ ಸಮಾಜವೆಂದರೆ ಅದು ಕುಲಾತಿತವಾಗಿದ್ದು. ಕುರುಬರಾಗಿ ಹುಟ್ಟಿದ ಕನಕದಾಸರು ಪರಮ ವೈಷ್ಣರ ನಡುವೆ ಹೋಗಿ ನೆಲೆನಿಂತದ್ದೆ ಒಂದು ಪರಮ ನಿದರ್ಶನ” ಎಂದು ತಿಳಿಸಿದರು.

ಶರೀಫರ ಸಾಮರಸ್ಯ ದೃಷ್ಟಿ: ಅಡಿವೆಪ್ಪ ವಾಲಿ ವಿಷಯವನ್ನು ಮಂಡಿಸಿ, “ಶರೀಫರು ಸಮರಸದ ಬದುಕನ್ನು ಬದುಕಿದವರು. ಹುಟ್ಟಿದ್ದು ಮುಸ್ಲಿಂ ಧರ್ಮದಲ್ಲಿಯಾದರೂ ಬೆಳೆದಿದ್ದು ಹಿಂದೂ ಧರ್ಮದಲ್ಲಿ ಅಲ್ಲಮ್ಮನನ್ನು ವಿಶೇಷವಾಗಿ ಪೂಜಿಸಿದ ವ್ಯಕ್ತಿ ಶರೀಫ. ಹಣತೆ ಬೆಳಗುತ್ತದೆ ಉರಿಯುದಿಲ್ಲ ಆದರೆ ಮನುಷ್ಯ ಉರಿಯುತ್ತಿದ್ದನೆ ಬೆಳಗುತ್ತಿಲ್ಲ. ಮನುಷ್ಯನ ನಡುವೆ ಜಾತಿ, ಧರ್ಮ, ಕಪ್ಪು-ಬಿಳಿ, ಶಿಕ್ಷಣ-ಶಿಕ್ಷಣ ಇಲ್ಲದೇ ಇರುವವರನ್ನು ಕೀಳಾಗಿ ನೋಡುವ ತಕಲಾಟ. ಇಂತಹ ಸಮಾಜದಲ್ಲಿ ಸಾಮರಸ್ಯದ ಬೀಜವನ್ನು ಬಿತ್ತಿದವರು ಶರೀಫರು. ಜನಮಾನಸದೊಂದಿಗೆ ಇದ್ದಂತಹ ಶರೀಫರು ಸಾಮರಸ್ಯವನ್ನು ದೂರ ಮಾಡಿ ಬದುಕಿ ತೋರಿಸಿದ್ದಾರೆ. ಶರೀಫರಿಗೆ ಓದು ಹಾಗೂ ಗುರುಗಳೊಂದಿಗಿನ ಶಿಕ್ಷಣ ಮುಖ್ಯವಾಗಿತ್ತು. ಹೀಗಾಗಿ ನಾಡು ಬೆರಗಾಗುವ ಪದಗಳನ್ನು ಕಟ್ಟುವುದು ಅವನಿಗೆ ಸುಲಭವಾಯಿತು. ನಾಡನ್ನು ಪದಗಳಲ್ಲಿ ಕಟ್ಟಿ ಕೊಟ್ಟು ಅಲ್ಲಿಯೂ ಮೇಳೈಸಿದ್ದ ಮಹಾನ್ ವ್ಯಕ್ತಿ ಶರೀಫರು. ಸಾಮರಸ್ಯ ಅನ್ನುವಂತಹದ್ದು ಕನ್ನಡಿಗರ ರಕ್ತದಲ್ಲಿ ಅಡಗಿದೆ. ಸಮರಸದ ಭಾವ ಕನ್ನಡ ಜೀವ. ಶರೀಫರ ಜೀವನ ಮೌಲ್ಯವನ್ನು ನಾವೆಲ್ಲರೂ ಅಳವಡಿಸಿ, ಅರಿಯಬೇಕು ಎಂಬುವುದೇ ನನ್ನ ಆಶಯ” ಎಂದು ತಿಳಿಸಿದರು.

ಸರ್ವಜ್ಞರ ಸಾಮಾಜಿಕ ದೃಷ್ಟಿ: ನಾಗರಾಜ ದ್ಯಾಮನಕೊಪ್ಪ ಸರ್ವಜ್ಞನ ಕುರಿತು, “ ದೇಶವನ್ನು ಸುತ್ತಿ ಕೋಶವನ್ನು ಓದಿ ಅನುಭವವನ್ನು ಪಡೆದುಕೊಂಡವನ್ನು ಸರ್ವಜ್ಞ. ಸಮಾಜದ ಓರೆ ಕೋರೆಗಳನ್ನು ಯಾವುದೇ ಮುಚ್ಚುಮರೆಗಳಿಗೆ ಅಂಜದೆ, ನಿಷ್ಟುರನಾಗಿ ತಿಳಿಸಿದವನು ಆತ. ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞನಷ್ಟು ,ಮನೋಧರ್ಮವನ್ನು ನೋಡಿದ ಕವಿ ಯಾರು ಇಲ್ಲ. ಸರ್ವಜ್ಞನಿಗೆ ಯಾವುದೇ ಮತವಿಲ್ಲ. ಅವನ ಮತ ಮನುಷ್ಯ ಮತ. ಹಾಗೆಯೇ ಸರ್ವಜ್ಞ ಬದುಕಿದ್ದನು. ಇನ್ನು ಸರ್ವಜ್ಞನ ತ್ರಿಪದಿಗಳನ್ನು ನಾವು ವಚನವೆಂದೇ ಕರೆಯುತ್ತೇವೆ. ಅಂತಹ ರೂಪವನ್ನು ತ್ರಿಪದಿಗಳು ಪಡೆದುಕೊಂಡಿದೆ. ಜಾತಿಯನ್ನು ಸಮಾಜದಿಂದ ಕಿತ್ತು ಹಾಕುವಂತಹ ದೃಷ್ಟಿಯನ್ನು ಹೊಂದಿದ್ದ ವ್ಯಕ್ತಿ ಸರ್ವಜ್ಞ. ಕಾಯಕಕ್ಕೆ ಕೈಲಾಸದ ಸ್ವರೂಪವನ್ನು ತಂದುಕೊಟ್ಟವರು ಶರಣರು. ಇಂತಹ ತತ್ವವನ್ನು ಸರ್ವಜ್ಞ ಪಾಲಿಸಿದ್ದಾನೆ. ದಾನದ ಶ್ರೇಷ್ಟತೆಯನ್ನು ಸಾಮಾಜಿಕವಾಗಿ ಸಾರಿದವ ಸರ್ವಜ್ಞ” ಎಂದರು.

- ರಂಜಿತಾ ಸಿದ್ದಕಟ್ಟೆ

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...