ಸಮ್ಮೇಳನದ ಪುಸ್ತಕ ಪ್ರದರ್ಶನಕ್ಕೆ ಹರಿದುಬಂದ ಜನಸಾಗರ

Date: 07-01-2023

Location: ಹಾವೇರಿ


ಹಾವೇರಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿರುವಪುಸ್ತಕ ಪ್ರದರ್ಶನಕ್ಕೆ ಜನ ಸಾಗರವೇ ಹರಿದುಬಂದಿದೆ.

ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಪುಸ್ತಕ ಪ್ರಕಾಶಕರು ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗೆ ಜಾಗ ಕಾಯ್ದಿರಿಸಿ ಸಮ್ಮೇಳನ ಹಿನ್ನೆಲೆಯಲ್ಲಿ ಶೇ.50, ಶೆ.30, ಶೆ.20, ಶೆ.10 ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ‌ ಮಾಡಿದರು. ಪ್ರಸಾರಾಂಗ ವಿವಿ ಹಂಪಿ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಕಟಣೆಗಳಿಗೆ ಶೇ.50 ರಿಯಾಯಿತಿ ದರ ನಿಗದಿಪಡಿಸಿದ್ದರಿಂದ ಪುಸ್ತಕಗಳು ಹೆಚ್ಚು ಮಾರಾಟವಾದವು.

ಕನ್ನಡ ಸಾಹಿತ್ಯ ಪರಿಷತ್, ಸಪ್ನ, ಅಂಕಿತ ಪುಸ್ತಕ, ಜೀರುಂಡೆ ಪುಸ್ತಕ ಹಾಗು ಇತರ ಕೆಲ ಪ್ರಕಾಶಕರು ಎರಡಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆ ಹಾಕಿ ಪುಸ್ತಕ ಮಾರಾಟ‌ ಮಾಡಿದರು.ಹೊಸತು, ಅಭಿನವ, ಆಕೃತಿ, ಛಂದ, ಸಾವಣ್ಣ, ಲಡಾಯಿ, ಲಂಕೇಶ, ಕ್ರಿಯಾ ಮಾಧ್ಯಮ, ನ್ಯಾಷನಲ್ ಬುಕ್ ಟ್ರಸ್ಟ್, ಅಕ್ಷರ ಸಂಗಾತ, ಚಿಂತನ, ಚಿತ್ತಾರ, ಸಿವಿಜಿ ಪಬ್ಲಿಕೇಶನ್, ಧಾತ್ರಿ, ವೈಷ್ಣವಿ, ಚೈತ್ರ, ಆಕಾರ ಸೇರಿದಂತೆ ಹಲವು ಪ್ರಕಾಶನಗಳ ಪುಸ್ತಕ ಮಳಿಗೆಗಳು ಪ್ರದರ್ಶನದಲ್ಲಿ ಗಮನ ಸೆಳೆದವು.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಜಾನಪದ ವಿವಿಯ ಗೊಟಗೇಡಿಯ ವಿಸ್ತರಣೆ ಮತ್ತು ಸಲಹಾ ಕೇಂದ್ರದಲ್ಲಿ ಗ್ರಾಮೀಣ‌ ಚರಿತ್ರೆಯ ಪುಸ್ತಕಗಳು ಗಮನ ಸೆಳೆದವು. ಎಐಡಿಎಸ್ ಓ ರಾಜ್ಯ ಸಮಿತಿ ಪ್ರಕಟಿಸಿದ ಹಲವಾರು ಪುಸ್ತಕಗಳನ್ನು ಸಮ್ಮೇಳನ ಹಿನ್ನೆಲೆಯಲ್ಲಿ 200 ರೂ.ಗೆ ಎಂಟು ಪುಸ್ತಕಗಳು ಎಂದು ಕಡಿಮೆ ದರದಲ್ಲಿ ಮಾರಾಟ ಮಾಡಿ ಪುಸ್ತಕ ಓದುವ ಅಭಿರುಚಿ ಹೆಚ್ಚಿಸುವ ಪರಿ ಮೆಚ್ಚುಗೆ ಗಳಿಸಿತು.

ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಭಗವತ್ಪಾದ ಪ್ರಕಾಶನ ಅಧ್ಯಾತ್ಮದ ಪುಸ್ತಕಗಳ ಮಾರಾಟ ಕಂಡು ಬಂದಿತು. ಹಳೆಯ ಮನೋಹರ ಗ್ರಂಥಮಾಲಾ, ಸಮಾಜ ಪುಸ್ತಕಾಲಯ, ಕನ್ನಡ ಪುಸ್ತಕಾಲಯ ಮಳಿಗೆಗಳಲ್ಲು ಸಹ ಜನಸಂದಣಿ ಕಂಡು ಬಂದಿತು.

ಸಿನಮಾ ಸಾಹಿತ್ಯ ಪ್ರಕಾಶನದಲ್ಲಿ ಸಿನಿಮಾ‌‌ ದಿಗ್ಗಜರ ಜೀವನಗಾಥೆಯ ಪುಸ್ತಕಗಳನ್ನು ಮಾರಾಟಕ್ಕಿಡಲಾಗಿತ್ತು.ಚಿಲಿಪಿಲಿ ಪ್ರಕಾಶನದಲ್ಲಿ ಶಾಲಾ ಮಕ್ಕಳ ಕಲಿಕಾ ಸಾಮಗ್ರಿ ಮಾರಾಟ, ಕನ್ನಡ ರಾಜ್ಯ ವಿಜ್ಞಾನ ಪರಿಷತ್ ಮಳಿಗೆಯಲ್ಲಿ ವಿಜ್ಞಾನ ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನ ಏರ್ಪಾಡು ಮಾಡಲಾಗಿತ್ತು. ಹಳ್ಳದಮನಿ ಪಬ್ಲಿಕೇಶನ್ ಮತ್ತು ಐಬಿಎಚ್ ಪ್ರಕಾಶನದಲ್ಲಿ ಶಾಲಾ‌ ಮಕ್ಕಳ ಶಿಕ್ಷಕರ ಸಾಮಗ್ರಿಗಳ ಮಾರಾಟ ನಡೆಯಿತು.

ವಚನ ಸಾಹಿತ್ಯ ಕುರಿತಂತೆ ಬಸವ ಸಮಿತಿಯ ಪ್ರಕಟಣೆಗಳು ವಿಶೇಷ ರಿಯಾಯಿತಿಗೆ ಮಾರಾಟವಾದವು. ಸರ್ಕಾರಿ ನೌಕರರ ಪುಸ್ತಕ ಪ್ರಕಾಶನದ ಪುಸ್ತಕಗಳು ಸಹ ಮಾರಾಟಕ್ಕಿದ್ದವು. ಗದಗ ಜಿಲ್ಲೆಯ ಕಲ್ಲೂರ ಗ್ರಾಮದ ನಿವೃತ್ತ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಸಾಹಿತಿ ಎ‌.ಎಸ್‌.ನದಾಫ್ ಮತ್ತು ಲಕ್ಷ್ಮೇಶ್ವರದ ಡಾ.ಸಂಗಮೇಶ ತಮ್ಮನಗೌಡ್ರ ಅವರು ಖುದ್ದು ತಾವೇ ತಮ್ಮ ನೀಲ ಪ್ರಕಾಶನ ಮತ್ತು ಕಲ್ಮೇಶ್ವರ ಪ್ರಕಾಶನ ಮಳಿಗೆಯಲ್ಲಿ ಕುಳಿತು ಪುಸ್ತಕ ಮಾರಾಟ ಮಾಡಿದರು.

ನಾನಾ ಇಲಾಖೆಗಳಿಂದ ಮಾಹಿತಿ: ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಕೈಮಗ್ಗ ಜವಳಿ ಇಲಾಖೆ, ಖಾದಿ ಮತ್ತು ಗ್ರಾಮೋದ್ಯೋಗ, ಜಿಲ್ಲಾ ಆಯುಷ್ ಇಲಾಖೆಗಳ‌ ಮಳಿಗೆಗಳಿಗೆ ಮತ್ತು ನರೇಗಾ ಮಾಹಿತಿ ಕೇಂದ್ರಕ್ಕೆ ಜನರು ಭೇಟಿ ನೀಡಿ ಮಾಹಿತಿ ಪಡೆದರು.

ಟಿ ಶರ್ಟ್ ಮಾರಾಟ: ಕರ್ನಾಟಕ ಬಲ ತಂಡ ಮತ್ತು ಟೋಟಲ್ ಕನ್ನಡ ದಿಂದ ಕನ್ನಡ ನಾಡು ನುಡಿಯ ಅಕ್ಷರದ ಟಿ- ಶರ್ಟ್ ಮಾರಾಟ, ಡಿವಿಡಿ ಮಾರಾಟ,‌‌ ಕನ್ನಡ ಶಾಲುಗಳ ಮಾರಾಟ ನಡೆಯಿತು.

 

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...