Poem

ಆಹಾ! ಚಹವೇ....  

ಚುಮು ಚುಮು ಚಳಿಗೆ
ದಪ್ಪನೆಯ ರಝಾಯಿ ಹೊದ್ದು
ಮುಡುಗಿ ಮಲಗಿದ ದೇಹ
ಛಂಗನೆ ಎಚ್ಚರಾಗುವುದು
ಈ ಚಹಾದ ನೆನಪಲ್ಲಿ.

ಮತ್ತೆ ಕೇಳಬೇಕಾ?
ಬೆಳಗಿನ ಜಾವ
ನಾಲ್ಕಾಗಲಿ ಐದಾಗಿರಲಿ
ಊಹೂ ಬರಲೊಲ್ಲದು ನಿದ್ದೆ
ನನಗೆ ಬೇಕೂ ಬಿಸಿ ಬಿಸಿ ಚಹಾ
ಎದ್ದೇಳು ಬೇಗ ಎದ್ದೇಳು ಬೇಗ
ಒದ್ದು ಎಬ್ಬಿಸುವುದು
ಆಗಲೆ ಅಡಿಕ್ಟ ಆಗಿ
ತನ್ನ ಸಾಮ್ರಾಜ್ಯ ಗೂಟ ಹೊಡೆದು
ನನ್ನ ಸರ್ವಸ್ವ ಕಟ್ಟಿ ಹಾಕಿದ
ಈ ಚಹಾ ಎಂಬ ಮಾಯಾಂಗನೆ!

“ಯಾಕೆ ಸ್ವಲ್ಪವೂ ತಾಳ್ಮೆ ಬೇಡವೆನೆ
ಬೆಳಗ್ಗೆ ಎದ್ದು ನಿತ್ಯ ಕರ್ಮವ ಮುಗಿಸಿ
ದೇವರಿಗೆ ದೀಪ ಹಚ್ಚು,ಶ್ಲೋಕ ಹೇಳು,
ನಮಸ್ಕಾರ ಮಾಡೆ
ಥೊ^^^ನಿನ್ನ
ಇಷ್ಟು ವಯಸ್ಸಾತು
ಇನ್ನೂ ಶಣ್ಣ ಹೆಣ್ಣುಡ್ರಂಗೆ ಎಂತೆ ಇದು?”

ಚಟಾರನೆ ಒಂದೇಟು ಬಿಗಿದಂತಿರುವ
ಬುದ್ಧಿಯ ಮಾತಿನ ಎಚ್ಚರ.

ಓ! ಹೌದಲ್ವಾ ನಾ ಯಾಕೆ ಹೀಗಾದೆ?
ವೈದ್ಯರು ಹೇಳ್ತಾರೆ ಚಹಾ ಬಿಟ್ಟಬಿಡಿ
ಶಾಸ್ತ್ರ ಹೇಳುತ್ತದೆ
ಹೆಂಗಸರಿಕೆ ಸಂಪ್ರದಾಯ ಮುಖ್ಯ-

“ಹಂಗಾರೆ ಆ ದೇವರು ಎಂತಾ ಹೇಳ್ತಾ?”
ಅಯ್ಯೋ! ಬಿಡು
ಅವನ್ಯಾವತ್ತೂ ಯಾರಿಗೂ
ಹೀಗಿರು ಹಾಗಿರು ಅಂದವನಲ್ಲವಲ್ಲ
ಎಲ್ಲ ಈ ಮನುಜರ ಖಾರುಬಾರು.

ನನಗೇ ನಾನು ಪ್ರಶ್ನೆ ಹಾಕಿಕೊಂಡು
ಒಳಗೊಳಗೆ ಕಳ್ಳ ಸಮಾಧಾನ ತಳೆದು
ತಪ್ಪದೆ ಚಹಾಕ್ಕೆ ದಾಸಾನು ದಾಸನಾಗಿ
ನಿಧಾನವಾಗಿ ಹೀರುವ ಬಿಸಿ ಬಿಸಿ
ಚಹಾದ ಗಮ್ಮತ್ತಿನ ಸೊಗಸಿನಲಿ
ನನ್ನೊಳಗೆ ನಾನು ಲೀನವಾಗಿ
ಕಳೆದು ಹೋಗುತ್ತೇನೆ
ಇದೇ ಚಹಾದ ಸ್ವರ್ಗ ಕಂಡ್ರೀ^^^^
ಆಹಾ ಚಹವೆ!

- ಗೀತಾ ಜಿ ಹೆಗಡೆ ಕಲ್ಮನೆ

ಗೀತಾ ಜಿ ಹೆಗಡೆ ಕಲ್ಪನೆ

ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.

ಕೃತಿಗಳು: ಮನಸೆ ನಿನೇಕೆ ಹೀಗೆ (ಲೇಖನಗಳ ಸಂಗ್ರಹ) 

More About Author