Poem

ಆಕೆ.......

ಕನ್ನಡ ಅಧ್ಯಾಪಕರಾಗಿರುವ ಮಾರುತಿ ದಾಸಣ್ಣವರ ಬೆಳಗಾವಿ ಜಿಲ್ಲೆಯ ಗೋಕಾವಿ ತಾಲೂಕಿನ ಹೊಸಹಟ್ಟಿ ಗ್ರಾಮದವರು. ಸಾಹಿತ್ಯ ಓದು, ಬರವಣಿಗೆಯಲ್ಲಿ ಅಪಾರ ಆಸಕ್ತಿ. ಅವರ ‘ಮಬ್ಬುಗತ್ತಲೆಯ ಮಣ್ಣ ಹಣತೆ’ ಕತಾ ಸಂಕಲನ, ನಾನೂರುವ ಹೆಜ್ಜೆಗಳು, ನಡೆದೂ ಮುಗಿಯದ ಹಾದಿ( ಕವನ ಸಂಕಲನ) ಅವರ ಪ್ರಕಟಿತ ಕೃತಿಗಳು. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ದತ್ತಿನಿಧಿ ಬಹುಮಾನ, ದಲಿತ ಸಾಹಿತ್ಯ ಪರಿಷತ್ತು ಪುಸ್ತಕ ಬಹುಮಾನಗಳು ಲಭಿಸಿವೆ. ಅವಳ ಅಸಂಖ್ಯ ವಿಷಾದವನ್ನು ಭೇಧಿಸುವ ಅವರ ‘ಆಕೆ....’ ಕವಿತೆ ಇಲ್ಲಿದೆ.

 

ಆಕೆ ಒಮ್ಮೊಮ್ಮೆ
ಹಾಳೆಯನು ಹಾಸಿ
ಚಿತ್ರ ಬರೆಯತೊಡಗುತ್ತಾಳೆ
ಅವಳಿಟ್ಟ ಹೆಜ್ಜೆ, ನಡೆದ ನಡಿಗೆ,
ಸವೆಸಿದ ದಾರಿಗಳೇ ನೇರ - ವಕ್ರ,
ಅಂಕು - ಡೊಂಕು, ಉದ್ದ - ಗಿಡ್ಡ
ರೇಖೆಗಳಾಗಿ ಮೂಡುತ್ತ
ಅವುಗಳಲೇ ಅವಳೂ
ಬಂದಿಯಾಗುತ್ತಾಳೆ..
ಮೂಗಿಲ್ಲದ, ಮುಖವಿಲ್ಲದ
ಆಕೃತಿಗಳೇ ಕಣ್ತುಂಬ
ಕುಣಿಯತೊಡಗುತ್ತವೆ

ತರಾವರಿ ಬಣ್ಣಗಳಲದ್ದಿದ
ಕುಂಚದಿಂದ ಕ್ಯಾನವಾಸನ್ನು
ತುಂಬಿಸಿಬಿಡುತ್ತಾಳೆ…
ಕಣ್ಣಿಂದ ತೊಟ್ಟಿಕ್ಕುವ
ಹನಿಗಳಿಂದ ಕದಡಿ ಹರಡುವ ಬಣ್ಣ
ಚಿತ್ರ ವಿಚಿತ್ರ ಆಕಾರ ತಳೆಯುತ್ತದೆ
ಎಷ್ಟೋ ದಿನಗಳಿಂದಲೂ ಹಾಗೇ ಇದೆ
ಹಸಿಹಸಿಯಾಗಿ ಅವಳ ಪೇಂಟಿಂಗ್...
ಒಣಗುತ್ತಲೇ ಇಲ್ಲ
ಈ ಚೋದ್ಯವ ಕಂಡು
ವಿಷಾದವ ನಗುವ ಆಕೆ
ಪ್ರೀತಿಗೆ ಅರ್ಥ ಹುಡುಕತೊಡಗುತ್ತಾಳೆ
ಗದ್ದಕ್ಕೆ ಕೈಯೂರಿ ಕೂತು...

ಒಮ್ಮೊಮ್ಮೆ ....
ನೆಲವ ತೊಳೆದು, ಒರೆಸಿ
ಬಟ್ಟಲು ಹಿಡಿದು ತನ್ಮಯತೆಯಿಂದ
ರಂಗೋಲಿ ಹಾಕಲು ಕೂರುತ್ತಾಳೆ
ತಾನೇ ಇಟ್ಟ ಅಸಂಖ್ಯ ಬಿಂದುಗಳ ಜೋಡಿಸಲರಿಯದೇ
ಗಲಿಬಿಲಿಗೊಳ್ಳುತ್ತಾಳೆ.
ಪ್ರೀತಿಯನೊಪ್ಪಲೊಲ್ಲದ
ಸಂಬಂಧಗಳ ರೇಖೆಗಳ ಮಣಿಸಲು
ಹರಸಾಹಸಪಡುತ್ತಾಳೆ

ಬಾಡಿದೆಲೆಗಳ ತೆಗೆದು
ಸಸಿಗಳ ಮೈದಡವಿ,
ಕುಂಡಗಳಿಗೆ ಬಣ್ಣಹಚ್ಚಿ,
ಚಿಗುರಿಗಾಗಿ ಕಾದು,
ಹೂವಿಗಾಗಿ ಹಾತೊರೆದು,
ನೀರ ಹಣಿಸುತ್ತಾಳೆ
ಇಂದಲ್ಲ ನಾಳೆ ತನ್ನ ತಲ್ಲಣಗಳೂ
ಅರ್ಥವಾದಾವೆಂದು.....

ಒಮ್ಮೊಮ್ಮೆ ....
ಬಣ್ಣ ಬಣ್ಣದ ದಾರದುಂಡೆಯ ಹಿಡಿದು
ಕಸೂತಿ ಹಾಕಲು ಕೂರುತ್ತಾಳೆ.
ಬೆರಳಿಗೆ ಸುತ್ತಿಕೊಂಡ
ನಾಜೂಕು ಕನಸುಗಳ ಜೋಡಿಸಿ
ಎಲ್ಲ ಎಳೆಗಳನು ಹೆಣೆದು
ಬೆಚ್ಚನೆಯ ರಕ್ಷೆಯಾಗಿಸುವ
ಹಂಬಲದಲ್ಲಿ....

ಶತ ಶತಮಾನಗಳಿಂದಲೂ ಆಕೆ
ಹೀಗೇ ಇದ್ದಾಳೆ
ರೇಖೆಗಳ ಚಿತ್ರವಾಗಿಸುವ
ಬಣ್ಣಗಳ ಕಲೆಯಾಗಿಸುವ
ಬಿಂದುಗಳ ರಂಗೋಲಿಯಾಗಿಸುವ
ಎಳೆಗಳ ಕಸೂತಿಯಾಗಿಸುವ
ಕಲಾವಿದೆಯಾಗಿ;
ಚಿಗುರಾಗಿ, ಎಲೆಯಾಗಿ, ಹೂವಾಗಿ ಹಣ್ಣಾಗಿ.
ಆದರೆ...............

ಕಲಾಕೃತಿ : ಮಹಾಂತೇಶ ದೊಡ್ಡಮನಿ

ಮಾರುತಿ ದಾಸಣ್ಣವರ

ಕವಿ, ಕತೆಗಾರ ಮಾರುತಿ ದಾಸಣ್ಣವರ ಬೆಳಗಾವಿ ಜಿಲ್ಲೆಯ ಗೋಕಾವಿ ತಾಲೂಕಿನ ಹೊಸಹಟ್ಟಿ ಗ್ರಾಮದವರು. ವೃತ್ತಿಯಿಂದ ಕನ್ನಡ ಅಧ್ಯಾಪಕರು. ಸಾಹಿತ್ಯ ಓದು, ಬರವಣಿಗೆಯಲ್ಲಿ ಅಪಾರ ಆಸಕ್ತಿ. ಉತ್ತಮ ವಾಗ್ಮಿಯೂ ಆದ ಅವರ ಶೈಕ್ಷಣಿಕ, ಸಾಹಿತ್ಯಕ ಕಾರ್ಯಕ್ರಮಗಳು, ಚಿಂತನೆಗಳೂ ಸೇರಿದಂತೆ 23ರೇಡಿಯೊ ಕಾರ್ಯಕ್ರಮಗಳು ಮಡಿಕೇರಿ ಆಕಾಶವಾಣಿಯಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ. ಇತ್ತಿಚಿನ ದಿನಗಳಲ್ಲಿ ವಿಮರ್ಶೆಗೂ ಹೆಜ್ಜೆ ಇಟ್ಟಿದ್ದಾರೆ. ಅವರ ‘ಮಬ್ಬುಗತ್ತಲೆಯ ಮಣ್ಣ ಹಣತೆ’ ಕತಾ ಸಂಕಲನ, ನಾನೂರುವ ಹೆಜ್ಜೆಗಳು, ನಡೆದೂ ಮುಗಿಯದ ಹಾದಿ( ಕವನ ಸಂಕಲನ) ಅವರ ಪ್ರಕಟಿತ ಕೃತಿಗಳು. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ದತ್ತಿನಿಧಿ ಬಹುಮಾನ, ದಲಿತ ಸಾಹಿತ್ಯ ಪರಿಷತ್ತು ಪುಸ್ತಕ ಬಹುಮಾನ, ಎಚ್ಚೆಸ್ಕೆ ಸಾಹಿತ್ಯ ಪುರಸ್ಕಾರ, ಕೆ. ಎಸ್. ನ. ಕಾವ್ಯ ಪುರಸ್ಕಾರಗಳು ಲಭಿಸಿವೆ. 

More About Author