Poem

ಅಲೆಗಳ ಜೊತೆಗೊಂದು ಅಲೆದಾಟ

ನಿಷ್ಟಾವಂತ ಬೆಳಕಿನಲಿ ಶ್ರೇಷ್ಟ
ದೃಷ್ಟಾಂತಗಳ ಕನಸು ಕಾಣುತ್ತಾ
ಕಾರ್ಮೋಡಗಳ ನಡುವೆ
ನೂರಾರು ಬಾರಿ
ಕಣ್ತೆರೆದರು ಏನೂ ಕಾಣಲೇ ಇಲ್ಲ
ಬಾಯ್ದೆರೆದು ನಿಂತಿದ್ದು ಮಾತ್ರ
ಸೋಲಿನ ಸಂಕೇತವೇ
ಆಗಿತ್ತು

 

ಖಾಲಿ ಕೈಲಿ ಹೊರಟಿದ್ದು ತಿಳಿಯದೇ
ಬೊಗಸೆಗಳ ತುಂಬಿಕೊಂಡು
ಅಪ್ಪಿಕೊಂಡು
ಉಡಿಯೊಳಗೆ ಸುರಿದಂತಹ ಭಾವ
ನಡೆಯುವಾಗ ಎಡವಿದೆ
ಕೆಡವಿದ ಕಲ್ಲುಗಳು
ಕೈಬಿಟ್ಟು ಹೋದ ಕನಸುಗಳ
ಆತ್ಮಗಳಾಗಿದ್ದವು

 

ಎದೆಯಲ್ಲಿ ಹರಿಯುತ್ತಿರುವ ನದಿಯೊಳಗೆ
ಹರಿದ ಸೀರೆಗಳ ಗಂಟೊಂದು
ತೇಲಿಬಂತು
ತೆರೆದು ನೋಡಿ ತಲೆಕೊಟ್ಟುಬಿಟ್ಟೆ
ಅದರೊಟ್ಟಿಗೆ ಅಲೆಯುತ್ತ ಸಾಗಿದೆ
ತೀರವನ್ನು ಹುಡುಕುತ್ತಲೇ ಇದ್ದೇನೆ
ತಡೆಹಿಡಿದುಕೊಂಡ
ಮುಳ್ಳುಕಂಟಿಯೊಂದು
ಇನ್ನಷ್ಟು ದಿನ ಇಲ್ಲೆ ಇದ್ದು ಹೋಗೆಂದು
ಮನವಿ ಮಾಡಿಕೊಳ್ಳುತಿದೆ

 

ನರನಾಡಿಗಳು ನಗರದಲ್ಲಿರುವ
ಗಾಳಿಯ ಊಟ ಸೇವಿಸಿ
ಸಂಕಟಪಡುತ್ತಿವೆ
ಬಾಳಿನ ಜೀವಂತಿಕೆಗಾಗಿ
ಬಾಗಿನಡೆಯುವ ಯೋಚನೆಯಲ್ಲಿದ್ದೆ
ನಗುವನ್ನು ನಾಜುಕಿನಿಂದ
ಹೊದ್ದುಕೊಂಡಾಗಿನಿಂದ
ನಗುವುದೊಂದೆ ಸಧ್ಯದ
ಯೋಚನೆ ಮತ್ತು ಯೋಜನೆಯಾಗಿಹೋಗಿದೆ.

 

ನನ್ನೆಡೆಗೆ ತೇಲಿ ಬರುವ ಗೇಲಿಮಾತುಗಳಿಗೆ
ಪೋಲಿ ಉತ್ತರಗಳನ್ನು ಕಂಡುಕೊಂಡು
ಹೋಲಿ ಬಣ್ಣಗಳಲಿ ಅದ್ದಿ
ಕೈ ಮೈಗೆಲ್ಲ ಬಳಿದುಕೊಂಡು
ಸಂಭ್ರಮಿಸುತ್ತಿರುವೆ
ಕೆಣಕುವವರ ನಡುವೆಯೇ ಬದುಕಲು
ಧೀರ್ಘ ಉಸಿರಿನ್ನು ನೀಡುವ ಮ(ನೆ)ನ
ಹುಡುಕುತ್ತಾ
ಅಲೆಯುತ್ತಿರುವೆ

ಕಲಾಕೃತಿ : ಎಸ್‌. ವಿಷ್ಣುಕುಮಾರ್‌

ಸುರೇಶ ಎಲ್. ರಾಜಮಾನೆ

ಸುರೇಶ ಎಲ್. ರಾಜಮಾನೆ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೋಕಿನವರು. ಸದ್ಯ ರಾಯಚೂರು ಜಿಲ್ಲೆ ಲಿಂಗಸಗೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಸುರೇಶ್ ಅವರು 'ಸುಡುವ ಬೆಂಕಿಯ ನಗು' ಮತ್ತು 'ಮೌನ ಯುದ್ಧ' ಎಂಬ ಎರಡು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. 

More About Author