Story

ಅಂದಿನ ಕೆಲಸ ಅಂದೇ ಮಾಡಬೇಕು...

ಕವಯತ್ರಿ, ಕತೆಗಾರ್ತಿ ಮಾಲಾ ಮ. ಅಕ್ಕಿಶೆಟ್ಟಿ ಮೂಲತಃ ಬೆಳಗಾವಿಯವರು. ವೃತ್ತಿಯಿಂದ ಉಪನ್ಯಾಸಕಿಯಾಗಿ, ಹಲವಾರು ಕವಿತೆ, ಕತೆ, ಲೇಖನ, ಮಕ್ಕಳ ಕತೆ, ಲಲಿತ ಪ್ರಬಂಧಗಳ ಮೂಲಕ ಸಾಹಿತ್ಯ ಲೋಕದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ಮಾಲಾ ಮ ಅಕ್ಕಿಶೆಟ್ಟಿ ಅವರ ಅಂದಿನ ಕೆಲಸ ಅಂದೇ ಮಾಡಬೇಕು...ಮಕ್ಕಳ ಕತೆ ನಿಮ್ಮ ಓದಿಗಾಗಿ..

ಕ್ರಿಸ್ಮಸ್ ರಜೆ ಸಮೀಪಿಸುತ್ತಿತ್ತು. ಶಾಲೆಯಲ್ಲಿ ರಜೆಯಲ್ಲಿ ಮಾಡಬೇಕಾದ ಹೋಂವರ್ಕನ್ನು ಆಯಾ ವಿಷಯದ ಶಿಕ್ಷಕರು ನೀಡಿದರು.ಸುಮಾರು ಏಳು ದಿನಗಳ ರಜೆ ಇರುವುದರಿಂದ ಮಕ್ಕಳು ತಮ್ಮ ಆಟದ ಜೊತೆ ಪಾಠವನ್ನು ಗಮನಿಸಬೇಕೆಂದು ಹೋಂವರ್ಕ್ ಕೊಡಲಾಗಿತ್ತು. ಮಕ್ಕಳಿಗೆ ರಜೆ ಸಂತೋಷ ತಂದಿತ್ತು. 3 ನೇ ತರಗತಿಯಲ್ಲಿ ಓದುವ ಸೃಜನ್ ಕೂಡ ತುಂಬಾ ಖುಷಿಯಿಂದಿದ್ದ. ಆತ ಶಾಲೆಯಲ್ಲಿ ಜಾಣ ವಿದ್ಯಾರ್ಥಿ. ಕೊಟ್ಟ ಯಾವುದೇ ಕೆಲಸವನ್ನು ತಟ್ಟನೆ ಮಾಡುವ ಹುಡುಗ. ಪಠ್ಯೇತರ ಚಟುವಟಿಕೆಗಳಲ್ಲೂ ಬಹುಮಾನಗಳನ್ನು ಪಡೆದಿದ್ದ. ಮೊದಲ ಎರಡು ದಿನದ ರಜೆಯಲ್ಲಿ ಸ್ವಲ್ಪವೇ ಹೋಂವರ್ಕ್ ಮಾಡಿದ. ಇನ್ನೂ ಐದು ದಿನಗಳಿವೆ, ಆವಾಗ ಕೆಲಸ ಮಾಡಿದರಾಯಿತು ಎಂದು ತನ್ನ ಸ್ನೇಹಿತರ ಜೊತೆ ಆಟದಲ್ಲಿ ತಲ್ಲೀನನಾದ. ಆತ ಮಾಡಿದ್ದು ಕೇವಲ ಎರಡು ದಿನದ ಹೋಂವರ್ಕ. ಇನ್ನೂ ಐದು ದಿನಗಳದ್ದು ಹಾಗೆಯೇ ಇತ್ತು. ಈ ಮಧ್ಯೆ ಸೃಜನ್ ತಾಯಿ ಆತ ಆಟದಲ್ಲಿ ತುಂಬಾ ಬಿಜಿ ಇರುವುದನ್ನು ಗಮನಿಸಿ, ಉಳಿದ ಹೋಂವರ್ಕ್ ಮಾಡುವಂತೆ ಎಚ್ಚರಿಕೆ ನೀಡಿದರು. ಆಯಾ ದಿನದ ಕೆಲಸವನ್ನು ಆಯಾ ದಿನವೇ ಮಾಡಬೇಕೆಂದು ಮತ್ತೆ ನೆನಪಿಸಿದರು. ಮೇಲಾಗಿ ಸೃಜನ್ ಜಾಣ, ಅವನಿಗೇನು ತುಂಬಾ ಹೇಳುವ ಅವಶ್ಯಕತೆಯಿಲ್ಲ ಎಂದು ಸುಮ್ಮನಾದರು. ಜೊತೆಗೆ ತಾಯಿಯೂ ತನ್ನ ಕಚೇರಿ ಕೆಲಸ ಹಾಗೂ ಮನೆಗೆಲಸದಲ್ಲಿ ವ್ಯಸ್ತರಾದರು.

ಎಲ್ಲ ರಜಾ ಅವಧಿ ಮುಗಿದು ಇನ್ನೇನು ನಾಳೆ ಶಾಲೆ ಪ್ರಾರಂಭವಾಗುತ್ತದೆ ಎಂದಾಗ ಸೃಜನ್ ಬೆಳಿಗ್ಗೆಯಿಂದ ಉಳಿದ ಹೋಂವರ್ಕ್ ಮಾಡಲು ಪ್ರಾರಂಭಿಸಿದ. ಸಂಜೆಯಾಯಿತು ಮುಗಿಯಲಿಲ್ಲ, ಸ್ನೇಹಿತರು ಆಟಕ್ಕೆ ಬಾ ಎಂದಾಗ, ಹೋಗಲಿಲ್ಲ. ರಾತ್ರಿಯಾದರೂ ಹೋಂವರ್ಕ್ ಮುಗಿಯಲೇ ಇಲ್ಲ. ಊಟಕ್ಕೆ ರಾತ್ರಿ ಕರೆದಾಗ, ಇನ್ನೂ ಕೆಲಸವಿದೆ ಊಟ ಬೇಡ ಎಂದಾಗ, ತಾಯಿ ಒತ್ತಾಯದಿಂದ ಊಟ ಮಾಡಿಸಿ ಇನ್ನೊಂದು ಗಂಟೆ ಹೋಂವರ್ಕ್ ಮಾಡೆಂದರು. ಅದರಂತೆ ರಾತ್ರಿ 11 ಗಂಟೆ ಆದ್ರೂ ಕೆಲಸ ಮುಗಿಯಲೇ ಇಲ್ಲ. ತಾಯಿ "ಸೃಜನ್ ಅದಕ್ಕೇ ನಿನಗೆ ನಾನು ಅವತ್ತೇ ಹೇಳಿದ್ದೆ. ಪ್ರತಿ ದಿನದ ಕೆಲಸವನ್ನು ಆಗಲೇ ಮಾಡಿ ಮುಗಿಸಬೇಕು. ಈಗ ಎಲ್ಲ ಐದು ದಿನಗಳ ಕೆಲಸವನ್ನು ಒಂದೇ ದಿನ ಮಾಡಲು ಪ್ರಯತ್ನಿಸುತ್ತಿರುವೆ, ತುಂಬಾ ಒತ್ತಡವಾಗುತ್ತದೆ" ಎಂದು, ರಾತ್ರಿಯಾದ ಕಾರಣ ಮಲಗಲು ಹೇಳಿದರು. "ಆಯ್ತು" ಎಂದು ಸೃಜನ್ ಮಲಗಲು ಹೋದ.

ಹತ್ತರಿಂದ ಹದಿನೈದು ನಿಮಿಷ ಹೊರಳಾಡಿದರೂ ನಿದ್ದೆ ಬರಲಿಲ್ಲ. ಅದಾಗಲೇ ತಾಯಿಗೆ ನಿದ್ದೆ ಹತ್ತಿತ್ತು. ಸೃಜನ್ ಹಾಸಿಗೆಯಿಂದ ಎದ್ದು ಮತ್ತೆ ಅಭ್ಯಾಸ ಮಾಡಲಾರಂಭಿಸಿದ. ಕೊನೆಗೂ ಹಟದೊಂದಿಗೆ ಹಾಗೂ ತಾನು ಮೊದಲೇ ಎಲ್ಲ ಮಾಡಿ ಮುಗಿಸಬೇಕಿತ್ತು ಎಂಬ ಪ್ರಜ್ಞೆ, ಸೃಜನ್ ನ್ನು ಬೆಳಗಿನ 3 ಗಂಟೆಯವರೆಗೂ ಅಭ್ಯಾಸ ಮಾಡುವಂತೆ ಮಾಡಿತ್ತು. 3 ಗಂಟೆಯ ನಂತರ ಮಲಗಿದ ಸೃಜನ್ಗೆ ಬೆಳಿಗ್ಗೆ ಏಳಲು ಸಾಧ್ಯವಾಗಲಿಲ್ಲ. ತಾಯಿ ಎಬ್ಬಿಸಲು ಪ್ರಯತ್ನಿಸಿದಾಗ "ಅಮ್ಮ ಕಣ್ಣೂರಿ ತೆಗೆಯಲು ಆಗುತ್ತಿಲ್ಲ. ಯಾಕೊ ತಲೆನೋವು" ಎಂದಾಗ, "ಹೋಂವರ್ಕ್ ಮಾಡೆ ಮಲಗಿದೆಯಾ?" ಎಂದು ತಾಯಿ ಕೇಳಿದಾಗ,"ಹೌದು ಅಮ್ಮ" ಅಂದ. ಅಮ್ಮನಿಗೆ ಸೃಜನ್ ರಾತ್ರಿ ಬಹಳ ಹೊತ್ತಿನವರೆಗೆ ಅಭ್ಯಾಸ ಮಾಡಿದ್ದು ಗೊತ್ತಾಯಿತು. ಅದಕ್ಕಾಗಿಯೇ ನಿದ್ದೆ ಇಲ್ಲದೆ ಕಣ್ಣು ಕೆಂಪಾಗಿ ಉರಿಯುತ್ತಿತ್ತು. ಜೊತೆಗೆ ತಲೆ ನೋವು ಮತ್ತು ಜ್ವರ ಕೂಡ ಕಾಣಿಸಿತ್ತು. ಸೃಜನ್ ಶಾಲೆಗೆ ಹೋಗದ ಪರಿಸ್ಥಿತಿಯಲ್ಲಿದ್ದ.ಅಂದು ಆತ ಶಾಲೆಗೆ ಹೋಗಲೇ ಇಲ್ಲ. ಮನೆಯಲ್ಲಿ ಉಳಿದು ಔಷಧ ತೆಗೆದುಕೊಂಡ.

ಅದೇ ದಿನ ಸಂಜೆ ಆರಾಮದ ಸೃಜನ್ ಗೆ "ನೋಡು, ನಾನು ಆ ದಿನ ಹೇಳಿದ ಹಾಗೆ ನೀನು ಅಭ್ಯಾಸ ಮಾಡಿದ್ದರೆ, ಇಂದು ನಿನಗೆ ಶಾಲೆಗೆ ಗೈರು ಹಾಜರಾಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಅಂದಿನ ಕೆಲಸ ಅಂದೇ ಮಾಡಬೇಕು.ನಿನ್ನೆ ರಾತ್ರಿಯೆಲ್ಲ ಕೂತು ಅಭ್ಯಾಸ ಮಾಡಿದ್ದು ಇಂದು ಶಾಲೆಗೆ ಹೋಗಲು ಅಲ್ವಾ? ಆದ್ರೆ ಆರೋಗ್ಯ ಹದಗೆಟ್ಟ ಕಾರಣ ಆಗಲಿಲ್ಲ. ಒತ್ತಡದಲ್ಲಿ ಕೆಲಸದ ಮಾಡುವುದರಿಂದ ಆರೋಗ್ಯವೂ ಕೆಡುತ್ತದೆ ಜೊತೆಗೆ ಮಾಡುವ ಕೆಲಸವೂ ಸರಿಯಾಗಿ ಆಗಲ್ಲ" ಎಂದರು. ಸೃಜನ್ ಗೆ ತನ್ನ ತಪ್ಪಿನ ಅರಿವಾಗಿತ್ತು. ಸಪ್ಪೆ ಮೊರೆ ಹಾಕಿ "ಹೌದು ಅಮ್ಮ ,ನೀ ಹೇಳಿದ ಮಾತನ್ನು ನಾನು ಕೇಳಬೇಕಿತ್ತು. ಬರೀ ಎರಡೇ ದಿನದ ಕೆಲಸ ಮಾಡಿದ್ದೆ, ಉಳಿದದ್ದು ಹಾಗೇ ಇತ್ತು.ಐದು ದಿನದ್ದು ಒಂದೇ ದಿನ ಮಾಡುವೆ ಎಂಬ ವಿಶ್ವಾಸದಿಂದ ಹಾಗೇ ಬಿಟ್ಟು ಆಟದಲ್ಲಿ ಮುಳುಗಿದೆ. ಕೆಲಸ ಒಂದೇ ದಿನ ಜಾಸ್ತಿಯಾಗಿ ಆರೋಗ್ಯ ಕೂಡ ಹದಗೆಟ್ಟಿತು. ಶಾಲೆಯಲ್ಲಿ ಗುಡ್ ಬಾಯ್ ಎನಿಸಿಕೊಂಡ ನನಗೆ ಹೋಂವರ್ಕ್ ಉಳಿಸಿಕೊಂಡು ಹೋಗುವುದು ಅಸಾಧ್ಯವಾಗಿತ್ತು. ಅದಕ್ಕಾಗಿ ರಾತ್ರಿಯೆಲ್ಲಾ ಮಾಡಿದೆ. ಶಿಕ್ಷಕರಿಂದ ಬ್ಯಾಡ್ ಬಾಯ್ ಎಂಬ ಹೆಸರು ಬೇಡಾಗಿತ್ತು ಅಮ್ಮ. ಆದರೆ ಹದಗೆಟ್ಟ ಆರೋಗ್ಯದಿಂದ ಒಂದು ದಿನ ಗೈರು ಹಾಜರಾಗಬೇಕಾಯಿತು. ಇನ್ನು ಮುಂದೆ ಈ ರೀತಿ ಎಂದೂ ಮಾಡಲ್ಲ. ಅಮ್ಮ ನೀನು ಹೇಳಿದ ಮಾತನ್ನು ಕೇಳುವೆ. ಅಂದಿನ ಕೆಲಸ ಅಂದೇ ಮಾಡುವೆ, ಅದನ್ನು ಮುಂದುವರಿಸಲ್ಲ" ಎಂದು ಸೃಜನ್ ಅಂದಾಗ ಅಲ್ಲೇ ಇದ್ದ ಅಮ್ಮ ಸೃಜನ್ನ ತಲೆಯನ್ನು ನೇವರಿಸಿ, ಮುತ್ತು ಕೊಟ್ಟು ಅಪ್ಪಿಕೊಂಡರು.

ಮಾಲಾ ಮ. ಅಕ್ಕಿಶೆಟ್ಟಿ

ಕವಯತ್ರಿ ಮಾಲಾ ಮ. ಅಕ್ಕಿಶೆಟ್ಟಿ ಮೂಲತಃ ಬೆಳಗಾವಿಯವರು. ವೃತ್ತಿಯಿಂದ ಉಪನ್ಯಾಸಕಿ. ಅವರ ಹಲವಾರು ಕವಿತೆ, ಕತೆ, ಲೇಖನ, ಮಕ್ಕಳ ಕತೆ, ಲಲಿತ ಪ್ರಬಂಧಗ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

More About Author