Poem

ಅಂತರಂಗದಂಬರವೇರಿ

ಪಯಣವೀಬದುಕೆಂದರಿತು ಪಯಣಕೆ ತೆರಳಿ,
ದೂರದಾರಿಯದೂರುತ ಸಾಗಿ, ಪಕ್ವಗಾಲದಲಿ ಮಾಗಿ,
ಮತ್ತೆ ಬೆಟ್ಟವನೇರಿ, ಅಂತರಾಳದಲಿ ಮನವೂರಿ,
ಭುವನಸೌಂದರ್ಯಲಹರಿಯ ಸವಿಯುತ,
ಬಾನಬಣ್ಣಿಪವರ್ಣದೋಕುಳಿಯಲಿ ಮಿಂದಮನವು,
ನಾಮನಿನ್ನದೇ ಸ್ಮರಿಸಿಹುದು ನೋಡು.

ಮುಗಿಲುಜಾರಿದ ಮುತ್ತಿನಹನಿ,
ಮಂದಹಾಸವಬೀರಿ ಮರಳಿಮಣ್ಣಿಗೆಬರುತ,
ಇಂದ್ರಲೋಕದ ಚಂದ್ರಪ್ರಭೆಯ ಹೊತ್ತುತರುತ,
ನೀಲಸಾಗರದಲೆಗಳಲಲೆಯಾಗಿ,
ನರಳಿದಹನಿಗಳನರಳಿಸಿಮರಳಿಬಾನಸೇರಿದಂತೆ,
ಎನ್ನೆದೆಗೂಡಬಡಿತಗಳಲಿ ನಾಮನಿನ್ನದುಲೀನವಾಗಿಪುದು ನೋಡು.

ಇರುಳತಿರುಳಲಿ ಚುಕ್ಕಿಚಂದ್ರಮರಚರಿತಾಮೃತದಲಿ,
ನೆಲದಿಕಾಣುವ ಹೊನಲಹೊದಿಕೆ, ನವಹುರುಪುನೀಡಿ,
ಅಂತರಿಕ್ಷದಲಿಅಂತರ್ಗತವಾಗಿಪ ಉಲ್ಕಾಪ್ರವಾಹದಂತೆ,
ಧರೆಯಜಿಜ್ಞಾಸುಗಳ ನೂರೆಂಟುತರ್ಕಗಳಿಗೆತರ್ಪಣವನೀದು,
ರವಿಬರುವಸಮಯದಲಿ ತೆರೆಯಮರೆಯೊಳು ತೇಲುವಂತೆ,
ಕಬ್ಬಿಗನಕ್ಕರೆಯ ಕನಸು ನಿನ್ನಮನದಲೂ ಮೂಡಿಹುದು ನೋಡು.

ಅಂತರಂಗದಂಬರವೇರಿ ಅಪೂರ್ವಸಾಲಿನಲಿನಲಿದು,
ಅನನ್ಯಪಥವನಾರಿಸಿ ಅಸ್ಮಿತೆಯನರಸಿಬರುವ,
ಭಾವಸಮ್ಮಿಲನಗಳ ಸಂಭಾಷಣೆ,
ಲೇಖನಿಸ್ಪರ್ಶಿಪ ಹೊತ್ತಿಗೆಯಪುಟಸೇರಿ,
ಹೊತ್ತಾದಬಳಿಕ ಓದುಗನಲಿ ಬೆಸೆವಂತೆ,
ನಿನ್ನಾತ್ಮದಲೂ ಎನ್ನ ಹೆಜ್ಜೆ ಗುರುತು ಮೂಡಿರಬಹುದೇನೋ!ಒಂದೊಮ್ಮೆ ನೋಡು.

ಸೋಮೇಶ್ವರ ಗುರುಮಠ

ಸೋಮೇಶ್ವರ ಗುರುಮಠ ಅವರು ಲೇಖಕ, ಕಿರುಚಿತ್ರ ನಿರ್ದೇಶಕ, ಹಾಡುಗಾರ, ಕವಿ, ನಿರೂಪಕ, ಅಂಕಣಗಾರ ಹಾಗೂ ನಟನಾಗಿ ಗುರುತಿಸಿಕೊಂಡವರು. ಈಗಾಗಲೇ 'ನಾನು ನನ್ನ ಜಗತ್ತು', 'ಪಯಣಿಗನ ಕಾವ್ಯಗಳು' ಮತ್ತು 'ಅನನ್ಯ ನಮನಗಳು' ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ತಮ್ಮ ಬರವಣಿಗೆಯ ಮೂಲಕ ವಿಭಿನ್ನ ಛಾಪನ್ನು ಸಾಹಿತ್ಯ ಲೋಕದಲ್ಲಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

More About Author