Story

ಅನುದಿನದ ಅಂತರಗಂಗೆ - ಎರಡು ಅಧ್ಯಾಯಗಳು

ಅದು ಕನಸೋ ನನಸೋ?

ವಯಸ್ಸಿನಲ್ಲಿ ನನಗೆ ಅವರಿಗಿಂತ ಅರ್ಧದಷ್ಟು ಕಡಿಮೆಯಾಗಿತ್ತು. ನನಗೆ ಮೂವತ್ತ ಮೂರಾಗಿದ್ದಾಗ ಅವರಿಗೆ ಅರವತ್ತೊಂದು.

‘You are not even half my age’!. ಅಂತ ಉದ್ಗಾರ ತೆಗೆದರು.

'ಪರವಾಗಿಲ್ಲ' ಅಂದೆ.

‘ನಿನಗೆ ಮದುವೆಯಾಗಿ ಮಕ್ಕಳಾಗಿದೆ' ಅಂದರು.

‘ಪರವಾಗಿಲ್ಲ' ಅಂದೆ.

'ನಾನು ನಿನಗೇನೂ ಕೊಡಲಾರೆ, ನನ್ನಿಂದ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳಬೇಡ' ಅಂದರು.

‘ಪರವಾಗಿಲ್ಲ. ನನಗೆ ಯಾವ ನಿರೀಕ್ಷೆಗಳೂ ಇಲ್ಲ' ಅಂದೆ.

'ಮತ್ತೆ?!' ಅವರಿಗೆ ಆಶ್ಚರ್ಯವಾಗಿತ್ತು.

ತುಂಟ ನಗೆ ನಕ್ಕು, ನಾನು ಹೇಳಿದೆ ‘ನನ್ನ ಪ್ರೀತಿ ಸ್ವೀಕರಿಸಿ, ಸಾಕು’

ಅವರಿಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. 'ಹೆಗೆ ಸ್ವೀಕರಿಸಲಿ?' ಎಂದು ನನ್ನನ್ನೇ ಕೇಳಿದರು.

‘ನಿಮ್ಮ ಜೊತೆ ವಾಕಿಂಗ್‌ಗೆ ಬರಲೇ?’ ಎಂದೆ. ಅಷ್ಟೇನೆ ಎನ್ನುವ ಧ್ವನಿಯಲ್ಲಿ 'ಬಾ, ಅದಕ್ಕೇನು!' ಅಂದರು.

ಅವರು ಇಲ್ಲಿರಲಿಲ್ಲ. ಬೇರೆ ದೂರದ ದೇಶದಲ್ಲಿದ್ದರು. ಪ್ರೊಫೆಸರ್ ಆಗಿದ್ದರು. ಜೊತೆಗೆ ಜಗತ್ತಿನ ನೂರೆಂಟು ಕಡೆಗಳಿಂದ ಅವರಿಗೆ ಲೆಕ್ಟರ್‌ಗೆ ಆಹ್ವಾನ ಬರುತ್ತಲೇ ಇತ್ತು. ಸದಾಕಾಲ ಓಡಾಡುತ್ತಲೇ ಇದ್ದರು. ಹಾಗೇ ಬೆಂಗಳೂರಿಗೂ ಬರುತ್ತಿದ್ದರು. ಬಂದಾಗೆ ನಮ್ಮ ಮನೆಯ ಹತ್ತಿರದಲ್ಲೇ ಇದ್ದ ಅವರ ತಂಗಿಯ ಮನೆಯಲ್ಲಿ ತಂಗುತ್ತಿದ್ದರು.

ಪ್ರತಿದಿನ ಸಂಜೆ ಜಯನಗರದ ಸ್ಟೇಡಿಯಂನಲ್ಲಿ ವಾಕಿಂಗ್‌ಗೆ ಹೋಗುತ್ತಿದ್ದರು. ನಾನು ಅವರ ಜೊತೆ ವಾಕಿಂಗ್ ಹೋಗತೊಡಗಿದೆ. ಅವರ ಪಕ್ಕ ನಡೆಯುತ್ತಾ ನಡೆಯುತ್ತಾ Animated ಆಗಿ ವಿಷಯ ವಿವರಿಸುತ್ತಾ ಹಿಂದುಮುಂದಾಗಿ ನಡೆಯುತ್ತಿದೆ. ಹಿಂದೆ ಕಂಬವೋ, ಕಲ್ಲೋ ಬಂದರೆ ಅವರು ಎಚ್ಚರಿಸುತ್ತಿದ್ದರು.

ಪ್ರತಿದಿನ ಒಂದು ಕವನ. ಒಂದು ಕಾರ್ಡ್ ಮಾಡಿಕೊಂಡು ಹೋಗುತ್ತಿದ್ದೆ. ಅದನ್ನು ಮನೆಯಲ್ಲಿ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮಾಡಬೇಕಿತ್ತು. ನಡುರಾತ್ರಿ ಎಲ್ಲರೂ ಮಲಗಿದಾಗ ಎದ್ದು ಸದ್ದಿಲ್ಲದೆ ಮಾಡಿಟ್ಟು ಅದನ್ನು ಒಂದು ಕವರಿಗೆ ಹಾಕಿ ಸೀಲ್ ಮಾಡಿ ಆಮೇಲೆ 'ಸಂಪಾದಕರು' ಎಂದು ಬರೆದು ಪ್ರಜಾವಾಣಿಯೋ, ಕನ್ನಡಪ್ರಭವೋ ಯಾವುದಾದರೂ ಪತ್ರಿಕೆಯ ವಿಳಾಸ ಬರೆದು ಭ್ಯಾಗ್ ಒಳಗೆ ಇಡುತ್ತಿದ್ದೆ. ಅಕಸ್ಮಾತ್‌ ಇವನು ಕೇಳಿದರೆ ಪತ್ರಿಕೆಗೆ ಕಳಿಸಲು ಕವನ ಆರಿಶ ಹೇಳಿಬಿಡಬಹುದು ಅನ್ನುವ ಎಚ್ಚರಿಕೆ.

ಇವನಿಗೆ ಆಗ ಸಂದೇಹ ಮೂಡಿರಲಿಲ್ಲ. ನಾನು ಎನ್‌ಜಿಇಎಫ್‌ನಲ್ಲಿ ಕೆಲಸಕ್ಕೆ ಇದ್ದುದರಿಂದ ಬೆಳಿಗ್ಗೆ ಐದೂವರೆಗೇ ಎದ್ದು ಅಡಿಗೆ ತಿಂಡಿ ಮಾಡಿ, ಆರೂವರೆಗೆ ವ್ಯಾಕ್ಷರಿ ಆಸ್ ಹಿಡಿಯಬೇಕಾಗಿತ್ತು. ಆಮೇಲೆ ಅಮ್ಮ ಮತ್ತು ಅವನು ಮಕ್ಕಳನ್ನು ಸ್ಕೂಲಿಗೆ ಕಳಿಸುತ್ತಿದ್ದರು. ನಾನು ವಾಪಸ್ಸು ಬರುತ್ತಿದ್ದುದು ಸಂಜೆ ನಾಲ್ಲೂಕಾಲಿಗೆ ಫ್ಯಾಕ್ಟರಿ ಬಸ್‌ನಲ್ಲಿ.

ಸಾಮಾನ್ಯವಾಗಿ ಮನೆಕೆಲಸ ಅಷ್ಟು ಬೇಗ ಪೂರೈಸಲು ಸಾಧ್ಯವಾಗದೇ ಪ್ರತಿದಿನ ತಡವಾಗಿ ಹೋಗಿ ಸಂಬಳ ಕಟ್ ಆಗುತ್ತಿತ್ತು. ಹದಿನೈದು ವರ್ಷ ಕೆಲಸ ಮಾಡಿದ ಕಡೆ ಒಂದೇ ಒಂದು ತಿಂಗಳೂ ನಾನು ಪೂರ್ತಿ ಸಂಬಳ ತೆಗೆದುಕೊಳ್ಳಲಿಲ್ಲ. ಸಂಜೆ ಮನೆಗೆ ಬಂದ ಮೇಲೆ ಮಕ್ಕಳು, ಅವರ ಹೋಂವರ್ಕ್, ರಾತ್ರಿ ಅಡಿಗೆ ಅದೂ ಇದೂ ಅಂತ ಹೊರಗೆ ಹೋಗುವುದೇ ಸಾಧ್ಯವಾಗುತ್ತಿರಲಿಲ್ಲ. ಈಗ ಸಂಜೆ ವಾಕಿಂಗ್ ಅಂತ ಬೇರೆ ಶುರುಮಾಡಿದ್ದು ಮನೆಯಲ್ಲಿ ರಾಮಾಯಣಕ್ಕೆ ಕಾರಣವಾಯಿತು.

ವಾಕಿಂಗ್ ಯಾಕೆ ಹೋಗಬೇಕು? ಸುಮ್ಮನೆ ಮನೆಯಲ್ಲಿ ಇರಕ್ಕೆ ಆಗಲ್ಲವಾ?' ಅನ್ನುವ ಪ್ರಶ್ನೆಗೆ ಏನು ಉತ್ತರ ಕೊಡುವುದು?

ಆದರೆ ನಾನು ಅವರ ಜೊತೆ ಕಾಲ ಕಳೆಯಲೇ ಬೇಕಾಗಿತ್ತು. ಈ ಕ್ಷಣ ಬಿಟ್ಟರೆ ಮತ್ತೆ ಬರುವುದಿಲ್ಲ. Grab the moment ಅನ್ನುವುದು ನನ್ನ ಸಿದ್ಧಾಂತವಾಗಿತ್ತು.

ಅದಕ್ಕೆ ಇನ್ನೊಂದು ಉಪಾಯ ಮಾಡಿದೆ. ಅವರು ಊರಿನಲ್ಲಿ ಇರುವಾಗ ಬೆಳಗ್ಗೆ ಎದ್ದು ಫ್ಯಾಕ್ಟರಿಗೆ ಹೋಗುವ ಹಾಗೆಯೇ ಸಿದ್ದವಾಗಿ ಹೊರಡುತ್ತಿದ್ದೆ. ಹೇಗೋ ಎಂಟೂವರೆ ತನಕ ಅಲ್ಲಿ ಇಲ್ಲಿ ಕಾಲ ಕಳೆದು ಒಂದೊಂದು ಸಲ ಅವರ ಫ್ಲಾಟ್ ಹತ್ತಿರ ಹೋಗಿ ಕೆಳಗೆ ಮೆಟ್ಟಿಲ ಮೇಲೆ ಕಾಯುತ್ತ ಕೂತು- ಎಂಟೂವರೆಗೆ ಅವರ ಮನೆ ಬೆಲ್ ಮಾಡುತ್ತಿದ್ದೆ.

ಬಾಗಿಲು ತೆಗೆದು ನೋಡಿ ಅವರು ಆಶ್ಚರ್ಯದಿಂದ 'ಅರೆ! ಇವತ್ತು ಫ್ಯಾಕ್ಟರಿಗೆ ಹೋಗಲಿಲ್ವಾ?' ಅನ್ನುತ್ತಿದ್ದರು. ಬಸ್ ಮಿಸ್ ಆಯ್ತು' ಅಂತ ತಣ್ಣಗೆ ಹೇಳಿ ಇಡೀ ದಿನ ಅವರ ಜೊತೆ ಕಾಲಕಳೆಯುತ್ತಿದ್ದೆ. ಅವರಿಗೆ ಬೇಕಾದ ಪುಸ್ತಕ ಖರೀದಿಸಲು ಹೋಗುವುದು. ಲೈಬ್ರರಿಗೆ ಹೋಗುವುದು, ಯಾರದಾದರೂ ಮನೆಗೆ, ಕಾಲೇಜಿಗೆ, ಯೂನಿವರ್ಸಿಟಿಗೆ, ಅವರು ಎಲ್ಲಿ ಹೋದರಲ್ಲಿಗೆ ಅವರ ಜೊತೆ ಹೊರಡುವುದು, ಸಂಜೆ ನಾಲ್ಕಾಗುತ್ತಿದ್ದ ಹಾಗೆ ಆ ಆಟೋ ಹಿಡಿದು ವಾಪಾಸ್ಸು ಬಂದು ಬಿಡುತ್ತಿದ್ದೆ. ಮನೆಯಲ್ಲಿ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಇಡೀ ದಿನ ಅವರ ಜೊತೆ ಕಳೆದ ಸಂಭ್ರಮವಿರುತ್ತಿದ್ದ ಕಾರಣ ಸಂಜೆ ಮಕ್ಕಳ ಜೊತೆ ಆಟವಾಡುತ್ತಾ ಸಂಭ್ರಮದಲ್ಲಿ ಕಳೆದು ರಾತ್ರಿಗೆ ತರಹಾವಾರಿ ಅಡಿಗೆ ಮಾಡುತ್ತಿದ್ದೆ. ಎಂಟು ಹತ್ತು ದಿನ ಇದ್ದು ಅವರು ವಾಪಸ್ಸು ಹೊರಟುಹೋಗುತ್ತಿದ್ದರು. ತಕ್ಷಣದಿಂದಲೇ ಪತ್ರ ಬರೆಯುತ್ತಿದ್ದೆ. ಅವರು ತಿಂಗಳಿಗೆ ಒಂದರಂತೆ ಉತ್ತರಿಸುತ್ತಿದ್ದರು.

ಒಂದು ವರ್ಷ ಉರುಳಿತು. ಒಂದು ದಿನ ನಾವಿಬ್ಬರೂ ಆಟೋದಲ್ಲಿ ಬರುತ್ತಿದ್ದೆವು. Oxford University Pressಗೆ ಹೋಗಿ ಅವರ ಪುಸ್ತಕಗಳನ್ನು ಕೊಂಡು ಬರುತ್ತಿದ್ದೆವು. ಅಲ್ಲಿಯ ಕೆಲಸವಾದ ಮೇಲೆ ಹೋಟೆಲಿಗೆ ಹೋಗಿ ಮಾತಾಡುತ್ತಾ ತಲಾ ಆರು ಕಪ್ ಕಾಫಿ ಕುಡಿದಿದ್ದೆವು. ಅವರು ತಮ್ಮ ಪುಸಕ್ತದ ಮೇಲೆ ನನಗಾಗಿ ಬರೆದುಕೊಟ್ಟರು. ನನಗೆ ಹೃದಯ ತುಂಬಿ ಬಂದಿತ್ತು.

ಆಟೋದಲ್ಲಿ ಏನೂ ಮಾತನಾಡುವುದು ಸಾಧ್ಯವಾಗಲೇ ಇಲ್ಲ. ಸಿದ್ದಾಪುರ ದಾಟುತ್ತಿದ್ದೆವು. ಇನ್ನೇನು ನಾಲ್ಕನೇ ಬ್ಲಾಕ್ ಬಂದುಬಿಡುತ್ತೆ ನಾನು ಇಳಿಯಬೇಕಾಗುತ್ತೆ ಅನ್ನುವ ಆತಂಕ ಕ್ಷಣಕ್ಷಣಕ್ಕೂ ಹಣ್ಣು ಮಾಡುತ್ತಿತ್ತು.

‘ನಿನ್ನನ್ನು ಬಿಟ್ಟು ಆಮೇಲೆ ಇದೇ ಆಟೋದಲ್ಲಿ ನಾನು ಮನೆಗೆ ಹೋಗ್ತನೆ' ಅಂದರು. ನಾನು ಮನೆ ಹತ್ತಿರ ಬರುವುದಕ್ಕೆ ಮೊದಲೇ ಸರ್ಕಲ್ ಹತ್ತಿರ ಆಟೋ ನಿಲ್ಲಲು ಹೇಳಿದೆ. ಅವರು ಇಳಿದು ನನಗೆ ಇಳಿಯಲು ಜಾಗಕೊಟ್ಟರು. ಇಳಿದೆ, ಇಡೀ ಮೈ ಕಂಪಿಸುತ್ತಿತ್ತು. ನಡುಗುವ ದನಿಯಲ್ಲಿ ಕೇಳಿದೆ.

"Can I shake hands with you?’

ನನಗೆ ಅವರನ್ನು ಸ್ಪರ್ಶಿಸುವುದು ಅಷ್ಟು ಅಗತ್ಯವಾಗಿತ್ತು. ಅವರು ಒಂದು ಕ್ಷಣ ನನ್ನನ್ನೆ ದಿಟ್ಟಿಸಿ ನೋಡಿದರು. ಏನನ್ನಿಸಿತೋ, ಬಾಗಿ, ಹಗುರವಾಗಿ ನನ್ನ ಭುಜ ಬಳಸಿ, ಜಯನಗರ ನಾಲ್ಕನೇ ಬ್ಲಾಕಿನ ಸಮಸ್ತ ಜನ ಜಂಗುಳಿಯ ನಡುವೆ, ಇಡೀ ಭೂಮಿ, ಆಕಾಶಗಳ ಸಾಕ್ಷಿಯಲ್ಲಿ ಪಂಚಭೂತಗಳ ಸನ್ನಿಧಿಯಲ್ಲಿ ನನ್ನ ಕೆನ್ನೆಗೆ ಹಗುರವಾಗಿ ಮುತ್ತಿಟ್ಟರು.


 

 

 

 

 

 

 

 

 

 

 

ಸಾವಿನ ಹೊಸ್ತಿಲಲ್ಲಿ....

ನೋವು ನೋವು ಅಂತ ಅಳತೊಡಗಿದಾಗ ನರ್ಸ್ ಬಂದು ಸ್ಟ್ರಾಂಗ್ ಡೋಸ್ ಪೇನ್ ಕಿಲ್ಲರ್ ಕೊಟ್ಟು ಹೋದಳು. ಆದರೆ ಇದರಿಂದ ನೋವು ಸಹಿಸುವಷ್ಟೇನೂ ಕಡಿಮೆಯಾಗಲಿಲ್ಲ. ಇಡೀ ರಾತ್ರಿ ಸಂಕಟದಲ್ಲೇ ಕಳೆಯಿತು.

ಮಾರನೆಯ ದಿನ ಬೆಳಿಗ್ಗೆ ಡ್ರೆಸಿಂಗ್‌ಗೆ ಬಂದರು ಡಾಕ್ಟರ್. ಪೂರಾ ಎರಡೂವರೆ ಗಂಟೆ ಹಿಡಿಯಿತು. ಡ್ರೆಸಿಂಗ್ ಎಲ್ಲ ತೆಗೆದು ಕ್ಲೀನ್ ಮಾಡಿ, ಔಷಧಿ ಹಾಕಿ ಮತ್ತೆ ಡ್ರೆಸಿಂಗ್ ಮಾಡಲು, ಮಾಡಿ ಮುಗಿಸಿ ಸ್ಟಾಂಗ್ ಪೇನ್ ಕಿಲ್ಲರ್ ಕೊಟ್ಟ ಮೇಲೆ ನಿದ್ದೆ ಬಂದಿತು. ಸುಮಾರು ಹನ್ನೆರಡು ಗಂಟೆ ಹೊತ್ತಿಗೆ ಎಚ್ಚರವಾಯಿತು. ಎದುರಿಗೆ ಮೂವರು ಖಾಕಿ ಧರಿಸಿದವರು ಕೂತಿದ್ದರು. ಪೊಲೀಸ್. ಇವನು ತುಂಬ tensionನಲ್ಲಿ ಅವರ ಪಕ್ಕ ನಿಂತಿದ್ದ. ನಾನು ಎದ್ದಿದ್ದು ನೋಡಿ ಪೊಲೀಸರು ಅವನನ್ನು ಹೊರಗೆ ಕಳಿಸಿ, ನನ್ನ ಮಂಚದ ಪಕ್ಕದಲ್ಲೇ ಸ್ಕೂಲ್ ಹಾಕಿಕೊಂಡು ಕೂತರು.

'ಏನಾಯ್ತಮ್ಮ?”

ಬೆಂಕಿ ಹತ್ತಿಕೊಂಡು ಬಿಟ್ಟಿತು' ಅಂದೆ.

`Statement’ ಬೇಕು ಅಂದರು.

'ಯಾಕೆ?” ಅಂದೆ ಆಶ್ಚರ್ಯದಿಂದ.

ಎಲ್ಲಾ ಬೆಂಕಿ ಅಪಘಾತಗಳಿಗೂ ಪೊಲೀಸ್ ಕ್ಲಿಯರೆನ್ಸ್ ಬೇಕಂತೆ. 'ವರದಕ್ಷಿಣೆ ಕೇಸಾ?” ಅಂದರು

ನಾನು ಜೋರಾಗಿ ನಕ್ಕುಬಿಟ್ಟೆ. ನಿಜಕ್ಕೂ, 'ಏನ್ರೀ ಹೀಗೆ ಕೇಳ್ತೀರಾ? ಅಕಸ್ಮಾತ್ ಬೆಂಕಿ ಹತ್ತಿಕೊಂಡರೆ ಅದಕ್ಕೆ ಹೀಗೆ ಕೇಳೋದಾ?’ ಅಂದೆ.

ಅವರ ಮುಖದಲ್ಲಿ ಕೂದಲೆಳೆಯಷ್ಟೂ ಬದಲಾವಣೆ ಕಾಣಲಿಲ್ಲ. ಒಬ್ಬ ಪೇಪರ್ ಹಿಡಿದುಕೂತ. ಎಷ್ಟು ಹೊತ್ತಿಗೆ, ಹೇಗಾಯಿತು. ಎಲ್ಲಾಯಿತು. ಮನೆ ಒಳಗೋ, ಹೊರಗೋ. ಅಡಿಗೆ ಮನೆಯಲ್ಲೋ, ಹಾಲಿನಲ್ಲೋ, ಹೇಗೆ ಹೊತ್ತಿಕೊಂಡಿತು, ಯಾವ ಥರ ಬಟ್ಟೆ ಹಾಕ್ಕೊಂಡಿದ್ರಿ, ಎಷ್ಟು ಬೇಗ ಹತ್ತಿಕೊಂಡಿತು. ತಕ್ಷಣ ಏನು ಮಾಡಿದ್ರಿ, ನೀರು ಎಲ್ಲಿ ಹಾಕಿದ್ರಿ, ಹೇಗೆ ಹಾಕಿದ್ರಿ, ಎಷ್ಟು ನೀರು ಹಾಕಿದ್ರಿ, ಗಂಡ ಮನೆಯಲ್ಲಿ ಇದ್ರಾ, ಎಲ್ಲಿದ್ರು, ಹೇಗೆ ಬಂದ್ರು, ಹೇಗೆ ನೀರು ಹಾಕಿದ್ರಿ, ಬಕೆಟ್‌ನಲ್ಲೋ, ಚೆಂಬಿನಲ್ಲೋ, ಹೇಗೆ ಬಂದ್ರಿ ಆಸ್ಪತ್ರೆಗೆ….

ಎಳೆಎಳೆಯಾಗಿ ಬಿಡಿಸಿ ಬಿಡಿಸಿ ಕೇಳಿದರು. ಪೂರ್ತಿ ಬರೆದುಕೊಂಡರು. ಕೊನೆಗೆ ‘ಇದು ಅಪಘಾತ’ ಎಂದರು ಬರೆದು ಸಹಿ ಹಾಕಿಸಿಕೊಂಡರು.

‘ಏನೋ ನಿಮ್ ಅದೃಷ್ಟ. ಇಷ್ಟರಲ್ಲಿ ಬಚಾವಾದ್ರಿ, ಇಲ್ದಿದ್ರೆ ಪ್ರಾಬ್ಲಂ ಆಗೋಗಿರೋದು’ ಅಂದ ಒಬ್ಬ.

‘ನೋಡಿ ನೀವು ನಮಗೆ co-oparate ಮಾಡಬೇಕು. ನಾವು ನಿಮಗೆ co-oparate ಮಾಡಬೇಕು’ ಅಂದ

‘ಅಂದ್ರೆ?!’ ಅಂದೆ.

ಇನ್ನೊಬ್ಬ ‘ಇರ್ಲಿ ಬಿಡಿ, ಬಾರೊ ಹೋಗೋಣಾ' ಅಂತ ಕಣ್ಣು ಮಿಟುಕಿಸಿದ ಎಲ್ಲರೂ ಹೊರಗೆ ಹೋದರು. ನನ್ನ ಗಂಡ ಅರ್ಧಗಂಟೆ ಆದ ಮೇಲೆ ಬಂದ

'ಎಲ್ಲಿಗೆ ಹೋಗಿದ್ದೆ?' ಅಂದೆ. ‘ಅವರಿಗೆಲ್ಲ ಕಾಫಿ ಕುಡಿಸಕ್ಕೆ' ಅಂದ.

ಸುಮ್ಮನಿದ್ದೆ. ಅವನೇ ಹೇಳಿದ 'ವರದಕ್ಷಿಣೆ ಕೇಸು ಅಂತ ಬುಕ್ ಆದರೆ ಒಳಗೆ ಹೋಗಿ ಬಿಡ್ತೀರಾ, ಸ್ವಲ್ಪ ನೋಡ್ಕೊಳ್ಳಿ' ಅಂದ್ರು.

'ದುಡ್ಡು ಕೊಟ್ಯಾ?’ ಅಂತ ಕೋಪದಲ್ಲಿ ಕೇಳಿದೆ.

'ಜಾಸ್ತಿ ಇಲ್ಲ, ಮೂರು ಜನಕ್ಕೂ ಸೇರಿ ಮುನ್ನೂರು ಕೊಟ್ಟೆ’ ಅಂದ.

‘ಯಾಕೆ ಕೊಟ್ಟೆ?’ ಅಂತ ಸ್ವಲ್ಪ ಜಗಳ ಆಡಿದೆ. ಆದರೆ ನನಗೆ ಮಾತಾಡಲು ಕಷ್ಟವಾಗುತ್ತಿತ್ತು. ಉಸಿರಾಡಲೂ ಕಷ್ಟವಾಗುತ್ತಿತ್ತು. ಸುಮ್ಮನೆ ಮಲಗಿಬಿಟ್ಟೆ. ಆ ರಾತ್ರಿ ಏನಾಯತು ನನಗೆ ಗೊತ್ತಿಲ್ಲ. ಸಂಜೆ ಬಂದಿದ್ದ ಅವನು ಆಮೇಲೆ ಹೇಳಿದ್ದು, ನಾನು ಏನೇನೋ ಬಡಬಡಿಸುತ್ತಿದ್ದೆನಂತೆ ಅಸಂಬದ್ಧವಾಗಿ ಮಾತಾಡುತ್ತಿದ್ದೆನಂತೆ. ಬೆಳಗ್ಗೆ ಡಾಕ್ಟರ್ ಬಂದಾಗ ಉಸಿರಾಡಲು ಕಷ್ಟ ಆಗ್ತಿದೆ ಅಂತ ಹೇಳಿದೆ. ತಕ್ಷಣ ಅವರು ದಡಬಡಿಸಿ, ಆಕ್ಸಿಜನ್ ತರಿಸಿ ಮೂಗಿಗೆ ಟ್ಯೂಬ್ ತೂರಿಸಿದರು. ಕ್ಷಣಾರ್ಧದಲ್ಲಿ ನರ್ಸ್‌ಗಳೂ ಬಂದು ಎಲ್ಲರೂ ಗಡಿಬಿಡಿಯಿಂದ ನನ್ನನ್ನು ಐಸಿಯುಗೆ ಶಿಫ್ಟ್ ಮಾಡಲು ಅವಸರಪಡತೊಡಗಿದರು. ನನಗೆ ಕಣ್ಣು ಕತ್ತಲೆ ಬರತೊಡಗಿತು. ಎಲ್ಲರೂ ಓಡೋಡಿಕೊಂಡು ನನ್ನ ಮಂಚವನ್ನು ತಳ್ಳಿಕೊಂಡು ಲಿಫ್ಟ್‌ನಲ್ಲಿ superfast ಆಗಿ ಐಸಿಯೂಗೆ ತಲುಪಿಸಿ ನೂರೆಂಟು ಟ್ಯೂಬ್ಗಳು, ಇಂಜೆಕ್ಷನ್‌ಗಳನ್ನು ಚುಚ್ಚತೊಡಗಿದರು.

ನನಗೆ ಆಳಕ್ಕೆ ಧುಮುಕುತ್ತಿರುವಂತೆ ಭಾಸವಾಗತೊಡಗಿತು. ಸುತ್ತ ಜನರು ಯಾಕೆ ಗೋಡೆಗಳ ಮೇಲೆ ಓಡಾಡುತ್ತಿದ್ದಾರೆ? ಡಾಕ್ಟರ್ ತಲೆ ಕೆಳಗಾಗಿ ಬರುತ್ತಿದ್ದರು. ಕುರ್ಚಿಗಳು ತಾರಸಿಗೆ ಅಂಟಿಕೊಂಡಿದ್ದವು. ಬಾಲ್ಯದಲ್ಲಿ ಮೈಸೂರಿನ ನಮ್ಮ ಮನೆಯ ಹತ್ತಿರ ಇದ್ದ ಪಾರ್ಕಿನಲ್ಲಿ ಕೂರುತ್ತಿದ್ದ ಒಬ್ಬ ಸನ್ಯಾಸಿ ಕೈಗಳ ಮೇಲೆ ನಡೆದುಕೊಂಡು ಬರುತ್ತಿದ್ದ. ಗಾಳಿ ಜೋರಾಗಿ ಬೀಸುತ್ತಿತ್ತು. ಪರದೆಗಳು ಹಾರಿ ಹಾರಿ ಪಟಪಟ ಬಡಿಯುತ್ತಿದ್ದವು.

ನಾನು 'ಡಾಕ್ಟರ್ ಡಾಕ್ಟರ್' ಅಂತ ಜೋರಾಗಿ ಕೂಗುತ್ತಿದ್ದೆ. ಎಷ್ಟು ಬಡಕೊಂಡರೂ ಯಾರಿಗೂ ನನ್ನ ಧ್ವನಿ ಕೇಳಿಸುತ್ತಿರಲಿಲ್ಲ. ನನ್ನ ಪಕ್ಕದಲ್ಲೇ ನಡೆದು ಹೋಗುತ್ತಿದ್ದರೂ ನನ್ನನ್ನು ನೋಡದೆಯೇ, ಕೇಳಿಸಿಕೊಳ್ಳದೆಯೇ ಹೋಗುತ್ತಿದ್ದರು. ನಾನು ಕೈಚಾಚಿ ಒಬ್ಬ ಡಾಕ್ಟರ್‌ನ ಬಿಳಿಕೋಟಿನ ಜೇಬು ಹಿಡಿದಳೆದೆ. ನನ್ನ ಕೈಯಲ್ಲಿ ಕೆಂಪಗೆ ಹೊಳೆಯುವ ಮಣಿ ಕಾಣಿಸಿತು. ಆಕಾಶದಲ್ಲಿ ನನ್ನ ಮಂಚವೊಂದೇ ತೇಲಾಡುತ್ತಿತ್ತು. ನಾನು ಚೀರಿ ಹೀರಿ ಸುಸ್ತಾಗುತ್ತಿದ್ದೆ. ಬಣ್ಣ ಬಣ್ಣದ ವರ್ತುಲಗಳು ಸುತ್ತಿ ಸುತ್ತಿ ನನ್ನನ್ನು ಆವರಿಸುತ್ತಿತ್ತು. ದೊಡ್ಡ ಬೃಹದಾಕಾರದ ಜೇನು ನೋಣಗಳು ಹಾರಿಬಂದು ನನ್ನನ್ನು ಕುಕ್ಕಿ ತಿನ್ನಲು ನೋಡುತ್ತಿದ್ದವು. ನಾನು ಅವನ್ನು ಓಡಿಸಬೇಕೆಂದು ಕೈ ಬೀಸಿದರೆ ನನ್ನ ಕೈಗಳು ಬರೀ ಮೂಳೆಗಳಾಗಿದ್ದವು. ಹಟಾತ್ತಾಗಿ ನಾನೊಂದು ಹಳ್ಳಕ್ಕೆ ಬೀಳತೊಡಗಿದೆ. ಆಳ ಆಳ ಆಳ... ಆಮೇಲೆ ಎಲ್ಲಾ ಕತ್ತಲೆ.

ಎಚ್ಚರವಾದಾಗ ನಿಶ್ಯಬ್ದ, ಮೆಲ್ಲಗೆ ಕತ್ತು ಹೊರಳಿಸಿ ನೋಡಿದೆ. ನರ್ಸ್ ಒಬ್ಬಳು ಕರ್ಚಿಯಲ್ಲಿ ಕೂತು ತೂಕಡಿಸುತ್ತಿದ್ದಳು. ಮಂಚದ ಅಂಚು ಹಿಡಿದು ಹೊರಳಲು ನೋಡಿದೆ. ನನ್ನ ಕೈಗೆ ಹಾಕಿದ್ದ ಟ್ಯೂಬಿನ ತುದಿಯ ಒಂದು 'ಟ್ಯಾಪ್'ನ ಮೇಲೆ ಕೆಂಪುದೊಂದು ಚಿಕ್ಕ ದೀಪ ಇತ್ತು. (ನನಗೆ ಕೆಂಪು ಹರಳಿನಂತೆ ಕಂಡಿದ್ದು ಅದೇ - ಆಮೇಲೆ ಗೊತ್ತಾಯಿತು) ನರ್ಸ್ ಎದ್ದು ನಾನು ಕಣ್ಣು ಬಿಟ್ಟಿದ್ದು ನೋಡಿ ಹೋಗಿ ಡಾ. ಸುಧಾನ ಕರೆದುಕೊಂಡು ಬಂದಳು, ಅವರು ಮಲ್ಲನೆ ನನ್ನ ಕೈ ಸವರಿದರು. ಅವರ ಕಣ್ಣಲ್ಲಿ ನೀರಿನ ಹನಿಯಿತ್ತು ಎಂದು ನನಗನ್ನಿಸಿತು. ಆಮೇಲೆ ನನಗೆ ಗೊತ್ತಾದ ಸಂಗತಿ ಎಂದರೆ: ಸುಟ್ಟ ಗಾಯದವರಿಗೆ ಮೂರು ಮತ್ತು ನಾಲ್ಕನೇ ದಿನ ತುಂಬಾ ಮಹತ್ವದ್ದು. ಅವತ್ತು toxic reaction set in ಆಗುತ್ತದೆ. ಆಗ ಬದುಕಿದರೆ ಬದುಕಿದಂತೆ. ಹೆಚ್ಚಿನವರು ಸಾಯುವುದು ಆಗಲೇ. Toxic reactionನ ಮೊದಲ ಸೂಚನೆ ಉಸಿರಾಟದ ತೊಂದರೆ ನನಗೆ ಉಸಿರಾಟ ಕಷ್ಟವಾಗುತ್ತಿದೆ ಎಂದು ತಿಳಿದ ತಕ್ಷಣ ಎಲ್ಲರೂ ಅಷ್ಟು ಅವಸರಪಟ್ಟದ್ದು ಅದಕ್ಕೆ. ಐಸಿಯೂನಲ್ಲಿ ನನ್ನನ್ನು ಉಳಿಸಿಕೊಳ್ಳಲು ಡಾಕ್ಟರುಗಳೆಲ್ಲ ಒದ್ದಾಡುತ್ತಿದ್ದಾಗ ಪರಲೋಕದ ಅಂಚು ಮುಟ್ಟಿದ ನನಗೆ hallucination ಆಗುತ್ತಿತ್ತು. ಅದನ್ನು ಭ್ರಾಂತಿ ಅನ್ನುವುದಾ? ಭೂಮಿ ಮತ್ತು ಆಕಾಶಗಳ ನಡುವಿನ ಲೋಕ ತಲುಪಿದ್ದೆ ಅನ್ನುವುದಾ? ಆ ಚಿತ್ರವಿಚಿತ್ರ ಆಕಾರಗಳು, ಬಣ್ಣಗಳು, ವೇಗ ಎಲ್ಲವೂ ನಿಜವೆನ್ನುವಷ್ಟು ಸ್ಪುಟವಾಗಿದ್ದವು. ನಾನು ಇನ್ನೇನು ಸತ್ತೇ ಹೋಗುತ್ತೇನೆಂದು ಡಾ. ಸುಧಾ ತೀರಾ ದುಃಖಿತರಾಗಿ ಐಸಿಯು ಒಳಗೆ ಬರದೇ ಡಾಕ್ಟರ್‌ಗಳ ಕೊಠಡಿಯಲ್ಲಿ ಜೋರಾಗಿ ಅಳುತ್ತಾ ಕೂತು ಬಿಟ್ಟರಂತೆ. ಮುಖ್ಯಸ್ಥರಾದ ಡಾ. ಶೇಖರ್ ತಮ್ಮ ಎಲ್ಲ ಸಾಮರ್ಥ್ಯವನ್ನೂ ಒತ್ತೆಯಿಟ್ಟು ಹೋರಾಡಿದರಂತೆ. ಆರು ಡಾಕ್ಟರ್‌ಗಳು ಜಾರಿ ಹೋಗುತ್ತಿದ್ದ ಜೀವವನ್ನು ಹಿಡಿದು ಮತ್ತೆ ನನ್ನ ದೇಹಕ್ಕೆ ತುಂಬಿದರಂತೆ. ಹಿಂದಕ್ಕೆ ಎಳೆದುಕೊಂಡು ಬಂದರಂತೆ.

ಮಾರನೆಯ ದಿನ ಬೆಳಿಗ್ಗೆ ನಾನು ಮಂಚದ ಮೇಲೆ ಕಷ್ಟಪಟ್ಟು ಸ್ವಲ್ಪ ಎದ್ದು ಕೂತೆ. ನರ್ಸ್ ನೆರವಾದಳು, ಹಿಂದಕ್ಕೆ ದಿಂಬು ಹಾಕಿ ಒರಗಿಸಿದಳು. ನನಗೆ ತಲೆ ಬಾಚು ಅಂದೆ. ಬಾಚಿದರೆ ರಾಶಿ ರಾಶಿ ಕೂದಲು ಹಾಗೆ ಹಾಗೇ ಕಿತ್ತು ಬಂತು. ಮುಖ ತೋಳಿಸಿದಳು. ಹೊಸದಾಗಿ ಬಿಂದಿ ಅಂಟಿಸಿದಳು. ಸುಟ್ಟ ಚರ್ಮದ ವಾಸನೆ ಎಷ್ಟು ದಟ್ಟವಾಗಿರುತ್ತದೆಂದರೆ ಅದು ಸಾಯುವವರೆಗೂ ಮರೆಯಾಗುವುದಿಲ್ಲ. ಅದನ್ನು ಮೀರುವಂತೆ ನನ್ನ ಮೈಯ ಉಳಿದ ಕಡೆಗೆ Eu-de-colognic ಸಿಂಪಡಿಸಿದಳು.

ಒಂಬತ್ತು ಗಂಟೆಗೆ ಡಾಕ್ಟರುಗಳ ತಂಡ ಬಂದಿತು. ನಾನು ನಕ್ಕೆ. ಅವರೆಲ್ಲ ಒಂದೂ ಮಾತಾಡದೇ ನನ್ನನ್ನೇ ದಿಟ್ಟಿಸಿದರು. ಡಾ. ಶೇಖರ್ ಮೃದುವಾಗಿ ನನ್ನ ತಲೆಗೆ ಬಡಿದು. 'ಹೆದರಿಸಿಬಿಟ್ಟೆಯಲ್ಲಾ ಹುಡುಗಿ' ಅಂದರು. ಅವರ ಅಸಿಸ್ಟೆಂಟ್ ಇನ್ನೊಬ್ಬ ಡಾಕ್ಟರ್ ಕೇಳಿದ, ‘ನಿನ್ನೆ ಸಾವಿನ ಬಾಗಿಲು ತಟ್ಟುತ್ತಿದ್ದವಳು ಇವಳೇನಾ?’ ‘ಸಾವಿನ ಬಾಗಿಲೇ? ಯಾರು ಹೇಳಿದರು? ಅಷ್ಟು ಸುಲಭವಾಗಿ ನಾನು ಸಾಯುವವಳಲ್ಲ ನಾನಿನ್ನೂ ಬದುಕಬೇಕು’ ಅಂದೆ.

ಕಲೆ : ಕಂದನ್ ಜಿ. ಮಂಗಳೂರು

ವಿಡಿಯೋ

ಪ್ರತಿಭಾ ನಂದಕುಮಾರ್

ಲೇಖಕಿ ಪ್ರತಿಭಾ ನಂದಕುಮಾರ್ ಅವರು ಮೂಲತಃ ಬೆಂಗಳೂರಿನವರು. 1955 ಡಿಸೆಂಬರ್ 25ರಂದು ಜನಿಸಿದರು. ತಂದೆ-ವಿ. ಎಸ್. ರಾಮಚಂದ್ರರಾವ್, ತಾಯಿ- ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದಿರುವ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪತಿ ನಂದಕುಮಾರ್ ಹಾಗೂ ಮಕ್ಕಳು ಅಭಿರಾಮ್ ಮತ್ತು ಭಾಮಿನಿ ಜೊತೆ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ತಮ್ಮ ಮನೋಧರ್ಮವನ್ನಾಗಿಸಿಕೊಂಡಿರುವ ಕವಿ. ಅವರ ವೈಯಕ್ತಿಕ ಮತ್ತು ವೃತ್ತಿ ಬದುಕುಗಳೆರಡರಲ್ಲೂ ನಿರಂತರ ಸಾಹಸ ಮತ್ತು ಪ್ರಯೋಗಗಳನ್ನು ನಡೆಸಿದವರು. ಉತ್ಕಟವಾಗಿ ಜೀವಿಸುವುದೇ ಬದುಕಿನ ಪರಮ ಸತ್ಯವನ್ನು ತಿಳಿಯಲು ಇರುವ ಏಕೈಕ ದಾರಿ ಎಂದು ನಂಬಿರುವ ಪ್ರತಿಭಾ ಅದೇ ಉತ್ಕಟತೆಯನ್ನು ತಮ್ಮ ಕವಿ ಸಮಯದುದ್ದಕ್ಕೂ ಕಾದುಕೊಂಡಿದ್ದಾರೆ. ಅವರ ಪ್ರಕಟಿತ ಪುಸ್ತಕಗಳು- ನಾವು ಹುಡುಗಿಯರೇ ಹೀಗೆ, ಈ ತನಕ, ರಸ್ತೆಯಂಚಿನ ಗಾಡಿ, ಕವಡೆಯಾಟ, ಆಹಾ ಪುರುಷಾತಾರಂ, ಅವರು ಪುರಾವೆಗಳನ್ನು ಕೇಳುತ್ತಾರೆ, ಮುನ್ನುಡಿ ಬೆನ್ನುಡಿಗಳ ನಡುವೆ, ಕಾಫಿ ಹೌಸ್, ಮುದುಕಿಯರಿಗಿದು ಕಾಲವಲ್ಲ ಅವರ ಕವನ ಸಂಕಲನಗಳು. ಯಾನ- ಕಥಾಸಂಕಲನ, ಆಕ್ರಮಣ- ಅನುವಾದಿತ ಕಥೆಗಳು, ಸೂರ್ಯಕಾಂತಿ- ಅನುವಾದಿತ ಡೋಗ್ರಿ ಕವನಗಳು. 

ಸಾಹಿತ್ಯ ಕ್ಷೇತ್ರದ ಕೃಷಿಗಾಗಿ ‘ಮಹಾದೇವಿ ವರ್ಮಾ ಕಾವ್ಯ ಸಮ್ಮಾನ್’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಮುದ್ದಣ್ಣ ಕಾವ್ಯ ಪ್ರಶಸ್ತಿ’, ‘ಡಾ.ಶಿವರಾಮ ಕಾರಂತ ಪ್ರಶಸ್ತಿ’, ‘ಪು.ತಿ.ನ ಕಾವ್ಯ ಪ್ರಶಸ್ತಿ’ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ‘ಅನುದಿನದ ಅಂತರಗಂಗೆ’ ಪ್ರತಿಭಾ ನಂದಕುಮಾರ್ ಅವರ ಆತ್ಮಕಥನ

More About Author