Poem

ಅಪ್ಪನ ದಣಿವು

 

ಅಪ್ಪನ ಹೆಗಲೇರಿ ಹೋಗುವಾಗ
ಅವರ ಗೋಣಿನ ನೋವು
ನನಗೆ ಎಂದೂ ಕಾಣಿಸಲೇ ಇಲ್ಲ!..
ಕಂಡದ್ದು ನನ್ನ ಜೊತೆಯೆ
ಸಾಗುತ್ತಿದ್ದ ಹಸುರು ಮರಗಳು;
ಓಡುವ ಕಲ್ಲು, ಮಣ್ಣಿನ ಗುಡ್ಡಗಳು!,
ಇಳಿದು ಹಿಡಿಯ ಬೇಕೆನಿಸಿತು!,
ಅಪ್ಪ ವೇಗವಾಗಿ ಓಡುತ್ತಲೇ
ನಡೆಯುತ್ತಿದ್ದರು!,
ಈಗ ಕಾಣಿಸುತ್ತಿದೆ .
ಅಂದಿನ ಪಾದರಕ್ಷೆ ಇಲ್ಲದ ಕಾಲು
ಹೆಚ್ಚು ಸವೆದದ್ದು.....

ರಾತ್ರಿಯಾದರೆ ಒಟಗುಟ್ಟುವ ಅಪ್ಪ!
ಮುಖವಾಡ ತೊಟ್ಟಿದ್ದನ್ನು
ಅಂದು ಗಮನಿಸಿರಲಿಲ್ಲ!,
ಈಗ ಅರ್ಥವಾಗುತ್ತಿದೆ
ಆಗ ಅವರ ಒಡಲು
ಹೆಂಡಕ್ಕೆ ಮಾರು ಹೋಗಿತ್ತು!,
ಅಮ್ಮ ಮಾತ್ರ ಅಶೋಕವನದಲ್ಲಿ
ಶೋಕಿಸುತ್ತಿದ್ದಳು!,
ಗೇಲಿ ಮಾಡಿದವರು,
ನಕ್ಕವರು,ಇನ್ನೂ ಹಲವರಿದ್ದಾರೆ!,.
ನೆನಪಿಲ್ಲ; ನಿದ್ದೆಯ ಮಂಪರು
ಅಷ್ಟು ಬಿರುಸಾಗಿತ್ತು!....

ಕಾಳು ಮುಗಿದು ಕೂಳಿಲ್ಲದಾಗ
ಆಷಾಢದ ಬಿರುಗಾಳಿಗೆ ಮೈಯೊಡ್ಡಿ
ಹೊಟ್ಟೆಗೆ ಹಿಟ್ಟಿನ ಭೇಟೆಯಾಡಿದ್ದೀಗ
ಅಸ್ಪಷ್ಟ ನೆನಪು!,
ಆಗ ತಿಳಿದಿಲ್ಲ ಕುಗ್ಗಿದ ಅಪ್ಪನ ರಕ್ತಬಲ!,
ಈಗ ಕಾಣಿಸುತ್ತಿದೆ,
ಬಲಿತವಾಗಿರುವ ನಮ್ಮ ತೋಳಿನ ಬಲ....

ಕೊಡಲಿಯ ಕಾವಿಗೆ ಹಿಡಿಕೆಯಾದರು,
ತಿರುಗುವ ಕಲ್ಲಿಗೆ ಗೂಟವಾದರು,
ಉಳುವ ನೇಗಿಲಿಗೆ ಗೋಣುಕೊಟ್ಟರು,
ನಕ್ಕವರೆದುರು ಎಡವಿದರು!,
ನಿಂತರು, ಕೂತರು,ಓಡಿದರು,
ತಲೆ ಎತ್ತಿ ಬದುಕಿದರು,
ನಮ್ಮದೇನಿದೆ,
ತಮ್ಮ ಜೋಳಿಗೆಯಲಿ
ಭದ್ರವಾಗಿ ನಮ್ಮನ್ನು ಹೊತ್ತು ದಣಿದರು!....

ಕಲೆ : ಎಸ್. ವಿ. ಹೂಗಾರ

ರಾಘವೇಂದ್ರ ಡಿ. ಆಲೂರು

 ರಾಘವೇಂದ್ರ ಡಿ ಆಲೂರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರಿನಲ್ಲಿ. 1990 ಜೂನ್‌ 21 ರಂದು ಜನನ. ಮೈಸೂರಿನ ಕರ್ನಾಟಕ ಮುಕ್ತ ವಿ.ವಿ.ಯಿಂದ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅರೆಕಾಲಿಕ ಉಪನ್ಯಾಸಕರಾಗಿ, ಭಾರತೀಯ ಜೀವವಿಮಾ ಪ್ರತಿನಿಧಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಪ್ರವೃತ್ತಿಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರು. ಅರೆಹೊಳೆ ಪ್ರತಿಷ್ಟಾನ ಮಂಗಳೂರು, ಅನಂತ ಪ್ರಕಾಶನ ಕಿನ್ನಿಗೋಳಿ ಮತ್ತು ಮಂಗಳೂರು ಆಕಾಶವಾಣಿಯ ಪ್ರಾಯೋಜಿತ 'ಪ್ರತಿಭಾನ್ವೇಷಣ- 2018' ರಾಜ್ಯ ಕವನ ಸ್ಪರ್ಧೆಯಲ್ಲಿ ಬಹುಮಾನ ಸಂದಿದೆ. ಅವರ ಚೊಚ್ಚಲ ಕವನ ಸಂಕಲನ ’ಅಂತರ್ಮುಖಿ’ ಪ್ರಕಟಗೊಂಡಿದೆ.

More About Author