Poem

ಅರಿವಾಗುತ್ತಿದೆ

ಅರಿವಾಗುತ್ತಿದೆ
ಸರಿದಾರಿ ಯಾವುದೆಂದು
ಬಸವಳೆದು ನಿಂತಮೇಲೆ

ಎಷ್ಟೆಲ್ಲಾ ಕಂದಕಗಳ ದಾಟಿ
ಅಜ್ಞಾನ ಕೋಟೆ ಹೊಡೆದು
ಆಕಾಶ ನೋಡಲು ನೂಕು ನುಗ್ಗಲಿನಲಿ ನಿಂತು
ಮೌನದಲಿ ಹೂತುಹೋಗಿ ಕೊಳೆತು
ಕೊನೆಗೂ ಮೊಟ್ಟೆಯೊಡೆದು ಹೊರಬಂದ ಮೇಲೆ

ಸಾಗರದಲೆಗಳ ತಂಪು ಗಾಳಿಯ ಯಾರಿಗೋ ಬೀಸಿ
ಉಗುಳಿದ ಉಚ್ಚಿಷ್ಟವ ಕಣ್ಮುಚ್ಚಿ ಮೂಸಿ
ಬೆತ್ತೆಲೆಯಲಿ, ಉಂಡು ಬಿಸಿಟ ಎಲೆಗಳಮೇಲೆ ಹೊರಳಾಡಿ
ಕತ್ತಲೆಯಲ್ಲಿ ಬಿಕ್ಕಳಿಸಿ ಮಿಡುಕಾಡಿ
ಒಂದು ಆಶಾಕಿರಣ ಕಂಡ ಮೇಲೆ

ಓಡುವುದೇ ಆಯಿತು ಕತ್ತಲ್ಲಿ ನೊಗ ಹೊತ್ತು
ಸಿಕ್ಕ ಅಲ್ಪಭಾಗಕ್ಕೆ ಕಾಣಿಕೆಯ ಇತ್ತು
ಅಕ್ಕರೆ ಏನೆಂದು ಅರಿಯದೆ
ಮೈಯೆಲ್ಲಾ ಕಿವಿಯಾಗಿಸಿ ಯಾರದೋ ದನಿಗೆ
ಕಣ್ಣಮುಚ್ಚಿ, ತೆರೆದಾಗ ಮಾಯವಾದ ಲೋಕವ ಕಂಡು

ಅರಿವಾಗುತ್ತದೆ
ಹೊಸದಾರಿ ಒಂದಿದೆ ಎಂದು
ಕಲ್ಲು-ಮುಳ್ಳಾದರೂ, ಏರುದಿಬ್ಬವಾದರೂ
ಹಸನಾಗಬಹದು ಬಾಳು
ಸಸಿಯು ಮರವಾಗದೆ, ಹೊಸಗಾಳಿ ಬೀಸಿ
ಸ್ವಾಭಿಮಾನವ ಹಾಸಿ ಮುನ್ನಡೆದರೆ
ತೆರೆದುಕೊಳ್ಳದೆ ಹೊಸಜಗ?

-ಎಂ.ವಿ.ಶಶಿಭೂಷಣ ರಾಜು

 

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,

More About Author