Poem

ಬಾಪು ಮತ್ತು ವೈರುಧ್ಯ

ಬುದ್ಧನಂತೆ ಸಂಸಾರ ತೊರೆದು ಹೋಗದಿದ್ದರೂ
ಸಂಸಾರದಲ್ಲಿದ್ದುಕೊಂಡೆ
ಯೋಗಿಯಂತೆ ಬಾಳಿಬಿಟ್ಟರು ನಮ್ಮ ಬಾಪು

ಎಷ್ಟೇ ಉನ್ನತ ಶಿಕ್ಷಣ ಪಡೆದರೂ
ಉನ್ನತ ಹುದ್ದೆಯನ್ನೇರದೆ
ಚರಕದ ಚಕ್ರದಲ್ಲಿ ಕಳೆದುಹೋದ ಕರ್ಮಯೋಗಿ ನಮ್ಮ ಬಾಪು

ರಾಜಕಾರಣದಲ್ಲಿ ಇದ್ದರೂ
ರಾಜಕಾರಣಿ ಆಗದೆ
ಅಧಿಕಾರ, ಅಂತಸ್ತು ತ್ಯಜಿಸಿ ತ್ಯಾಗಿಯಂತಿದುಬಿಟ್ಟರು ನಮ್ಮ ಬಾಪು

ಶ್ರೀಮಂತನಾಗಿ ಹುಟ್ಟಿ
ಉಪ್ಪು ಹುಳಿ ಖಾರದ ರುಚಿ ಕಂಡೂ
ಸಿರಿಭೋಗ ಅನುಭವಿಸದೆ
ಫಕೀರನಂತೆ ಬಾಳಿಬಿಟ್ಟರು ನಮ್ಮ ಬಾಪು

ಎಷ್ಟೇ ವೈರುಧ್ಯಗಳಿದ್ದರೂ
ಅವನ್ನೆಲ್ಲ ದಾಟಿ ಮಹಾಮಾನವನಾಗಿಬಿಟ್ಟರು
ಕೆಸರನಲ್ಲಿದ್ದರು ಕೆಸರಿನಂತಾಗದೆ
ಕಮಲದಂತೆ ಅರಳಿ ಬಿಟ್ಟರು ನಮ್ಮ ಬಾಪು..

ಲಕ್ಷ್ಮೀದೇವಿ ಕಮ್ಮಾರ (ಪತ್ತಾರ)

ಕತೆಗಾರ್ತಿ ಲಕ್ಷ್ಮೀದೇವಿ ಕಮ್ಮಾರ (ಪತ್ತಾರ) ಅವರು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿ. ಯಶಸ್ಸಿನ ದಾರಿದೀಪಗಳು (ಕಥಾ ಸಂಕಲನ-ವೆಂಕಟರಾಮಯ್ಯ ಶ್ರೀನಿವಾಸ್ ರಾವ್ ದತ್ತಿ ಪ್ರಶಸ್ತಿ ಪುರಸ್ಕೃತ ಕೃತಿ) ಕತ್ತಲೆಗಂಟಿದ ಬೆಳಕು:ಈ ಕವನ ಸಂಕಲನಕ್ಕೆ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ (2017) ಲಭಿಸಿದೆ. ಅವರ ಹಲವು ಕವನ, ಲೇಖನಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬಸವಚೇತನ ಪ್ರಶಸ್ತಿ ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ. ಟೈಮ್ಸ್ ಆಫ್ ಇಂಡಿಯಾದವರ ಟಾಫಿಟ್ ಅವಾರ್ಡ್(ಶಿಕ್ಷಣಕ್ಕಾಗಿ)2018-19, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ(2019) ಲಭಿಸಿವೆ.

More About Author