Poem

ಬಯಲು, ಬಡವಿ ಮತ್ತು ಬುದ್ಧ

 

ಎದೆ ತುಂಬ ಕನಸ ಹೊತ್ತು
ಬಯಲಿಗೆ ಬಿದ್ದ ಬಡವಿ
ಹೊಸ ಅನುಭವಗಳಿಗೆ ಕೊಡ್ಡ ಕೊರಡಾಗಿ
ಹೊರಟ ಗಟ್ಟಿಗಿತ್ತಿ

ಅವನೊಬ್ಬ ತೊರೆದು ಎದ್ದ
ಬಯಲಿಗೆ ಬಿದ್ದ
ಮಹಾಬೆಳಕು ಕಂಡ
ಪ್ರ-ಬುದ್ಧನಾದ
ರೂಹಿಗಂಟಿದ ದೇಹದಂಗಿಯ
ಮೋಹಬಿಟ್ಟ
ಬೆಳಗೊಳದಗಿರಿ ಮೇಲೆ
ಬೈಲಾದ ಬುಧನಾದ
ಭಾಷ್ಯವೇ ಆದ

ಜಗವನಾಳುವ ಹರೆಯು
ಜಗವನಾಳುವ ಹಣವು
ಬಡವಿಯನ್ನಾಡಿಸಿತ್ತು
ಅವನ ಮಾತ್ರ ಆಡಿಸಲಿಲ್ಲ
ಹಾ ಹೆಣ್ಣು ಬಯಲಿಗೆ ಬಿದ್ದಾಗ
ವಿಷಯಾಂತರ !
ದೈವದ ಹೆಸರಲ್ಲಿ
ದೆವ್ವ ಕೂಡ ಹೇಸುವ ಕೃತ್ಯ
ಯಾವ ಸೆಟವಿಯೂ ಬರೆದಿಲ್ಲ
ಯಾವ ಬಡವಿಗೂ ಬೆಳಕಿಲ್ಲವಂತ
ತುಕ್ಕು ಹಿಡಿದ ಬೆಳದಿಂಗಳೇಕೆ
ಅವಳ ಉಡಿತುಂಬ!

ಕದಳಿ ಕಂಬಕ್ಕೆ ಮೌಢ್ಯದ ಮದುವೆ
ಬಯಲ ತಾತ್ಸಾರ
ವಿಚ್ಛಿನ್ನ ಸ್ವಪ್ನಗಳ ಮುಂದೆ
ಕಂಬನಿಗಳ ಬಿಸಿನೀರ ಶಾಪ

ಕಲೆ : ಮಂಗಳೂರು ಜಿ. ಕಂದನ್

ವಿಭಾ ಪುರೋಹಿತ

ಕವಯತ್ರಿ ವಿಭಾ ಪುರೋಹಿತ, ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ಸದ್ಯ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡತೇರರಿಗೆ ಕನ್ನಡ ಕಲಿಕಾ ತರಬೇತಿ ನೀಡುತ್ತಿದ್ದಾರೆ. ಚಂದನ ವಾಹಿನಿಯಲ್ಲಿ ವಾರ್ತಾವಾಚಕಿಯಾಗಿ ಮತ್ತು ಹಾಸನದ ಎಫ್.ಎಂ. ಕೇಂದ್ರದಲ್ಲಿ ಉದ್ಘೋಷಕಿಯಾಗಿ ಕೆಲಸ ಮಾಡಿದ್ದಾರೆ. ಕವನ -ಪ್ರಬಂಧ ಬರೆಯುವುದು, ಅನುವಾದ ಮಾಡುವುದು ಇವರ ಹವ್ಯಾಸ. 'ಮಲ್ಲಿಗೆ ಮತ್ತು ಇತರೆ ಕವಿತೆಗಳು' ಹಾಗೂ  'ದೀಪ ಹಚ್ಚು' ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ.  ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಸೇರಿದಂತೆ ರಾಜ್ಯ ಹಲವಾರು ಕನ್ನಡ ಪರ ಮತ್ತು ಸಾಹಿತ್ಯಕ ಸಂಘ ಸಂಸ್ಥೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಸೇವೆಗೆ 'ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ' ಮತ್ತು ಹುಬ್ಬಳ್ಳಿಯ ಚೇತನ ಸಾಹಿತ್ಯ ಪ್ರಕಾಶನದ 'ಚೇತನ ಸಾಹಿತ್ಯ ಸಮ್ಯಾನ್' ದೊರತಿವೆ. 'ಕಲ್ಲೆದೆ ಬಿರಿದಾಗ' ಅವರ ಮೂರನೆ ಕವನ ಸಂಕಲನ.

More About Author