Story

ಬೆಂಕಿ ಕಣ್ಗಳ ರಾಕ್ಷಸ

“ಹೇ...ಹೇಯ್...ಬಿಡಿ ಅವಳನ್ನು” ದೊಡ್ಡದಾಗಿ ಚೀರುತ್ತಾ ಎದ್ದು ಕುಳಿತವನು ಗಡಿಯಾರ ನೋಡಿದೆ. ಐದು ಗಂಟೆ. ಬೆಳ್ಳಂಬೆಳಗ್ಗೆಯೇ ಕೆಟ್ಟ ಕನಸು! ಬೆವರಿನಿಂದ ಮುದ್ದೆಯಾಗಿದ್ದ ಮೈ ಕಮಟು ವಾಸನೆ ಸೂಸುತ್ತಿತ್ತು. ಎದ್ದು, ಸ್ನಾನ ಮುಗಿಸಿ ಬಂದೆ.

ಗೋಡೆ ಕೆಡವುತ್ತಿದ್ದ ಆ ಹೆಂಗಸು ಯಾರು? ಅರ್ಧ ಗೋಡೆ ಕೆಡವಿದವಳು ಇದ್ದಕ್ಕಿದ್ದಂತೆಯೇ ಎಡವಿ ಬಿದ್ದಳಲ್ಲ! ಏನಾಗಿತ್ತು ಅವಳಿಗೆ? ಗೋಡೆ ಕೆಡವುತ್ತಿದ್ದ ಅವಳ ಕಣ್ಣಿಗೆ ಸೂಜಿ ಚುಚ್ಚಿದರಲ್ಲ ಆ ಖದೀಮರು ಯಾರು? ಅವಳ ಬಟ್ಟೆ ಬಿಚ್ಚಿ ಬೆತ್ತಲಾಗಿಸಿದ ಆ ಬೆಂಕಿ ಕಣ್ಗಳ ರಾಕ್ಷಸ ಯಾರು? ಕನಸನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದೆ. ಯೋಚಿಸುತ್ತಾ ಹೋದಂತೆ ಆ ಹೆಂಗಸಿನ ಮುಖ ನನ್ನೆದುರು ಸ್ಪಷ್ಟ ರೂಪ ಪಡೆಯುತ್ತಾ ಹೋಯಿತು. ಕಡೆಗೊಮ್ಮೆ ಉದ್ಗರಿಸಿದೆ.......ಸಾಕಿ ಚಿಕ್ಕಿ...

ವಿಚಾರವೊಂದನ್ನು ತಿಳಿಸುವುದಕ್ಕೆ ಹಿಂದಿನ ರಾತ್ರಿಯೇ ಅಮ್ಮನಿಗೆ ಕರೆ ಮಾಡಿದ್ದೆ. “ಅಮ್ಮಾ, ಸಾಕಿ ಚಿಕ್ಕಮ್ಮ ಇ...” ನನ್ನ ಮಾತಿನ್ನೂ ಶುರುವಾಗುತ್ತಿದ್ದಂತೆಯೇ ಆ ಕಡೆಯಿಂದ ಅಮ್ಮನ ಆರ್ಭಟ- “ನಿನಗೆ ಬೇರೇನಾದರೂ ಮಾತನಾಡುವುದಕ್ಕಿದ್ದರೆ ಹೇಳು. ಆ ತಾಟಗಿತ್ತಿಯ ಹೆಸರೆತ್ತಿದರೆ ಜಾಗ್ರತೆ. ಮೂರುಕಾಸಿನವಳವಳು.” ನನಗೆ ಆ ವಿಚಾರ ಬಿಟ್ಟು ಮಾತನಾಡುವುದಕ್ಕೇನೂ ಇರಲಿಲ್ಲ. ಫೋನಿಟ್ಟಿದ್ದೆ.

ಅಮ್ಮ ಆಡಿದ ಮಾತು ನನಗೆ ಹೊಸತು ಎನಿಸಲಿಲ್ಲ. ಸಾಕಿ ಚಿಕ್ಕಿ ಎಂದರೆ ನಮ್ಮ ಕುಟುಂಬದವರಿಗೆಲ್ಲಾ ಈಚೆಗೆ ನಾಲ್ಕೂವರೆ ವರ್ಷಗಳಿಂದ ಇಂತಹದ್ದೇ ಕೋಪ, ತಿರಸ್ಕಾರ. ಹನ್ನೆರಡು ಜನ ಮಕ್ಕಳಲ್ಲಿ ನನ್ನಮ್ಮ ಹಿರಿಯಳಾದರೆ, ಕೊನೆಯಲ್ಲಿ ಹುಟ್ಟಿದವಳು ಈ ಸಾಕಿ ಚಿಕ್ಕಮ್ಮ. ಅನುಪಮಾ ಎಂಬ ಚಂದದ ಹೆಸರಿದ್ದರೂ ಎಲ್ಲರೂ ಅವಳನ್ನು ಸಾಕಿ ಎಂದೇ ಕರೆಯುತ್ತಿದ್ದರು. ಹಿರಿಯರನ್ನು ಅನುಕರಿಸಿದ ನನ್ನ ಪಾಲಿಗೆ ಅವಳು ಸಾಕಿ ಚಿಕ್ಕಮ್ಮಳಾಗಿ, ಕೊನೆಗೆ ಮತ್ತೂ ಸಂಕ್ಷಿಪ್ತಗೊಂಡು ಸಾಕಿ ಚಿಕ್ಕಿಯಾದಳು. ನನಗಿಂತ ಹನ್ನೆರಡು ವರ್ಷ ದೊಡ್ಡವಳು. ಏಳು ಜನ ಗಂಡುಮಕ್ಕಳು, ಐವರು ಹೆಣ್ಣುಮಕ್ಕಳ ಪೈಕಿ ಹೆಚ್ಚು ಓದಿದವಳೆಂದರೆ ಇವಳೇ. ಬುದ್ಧಿವಂತೆ ಎಂಬ ಹೆಸರೂ ಅವಳಿಗಿತ್ತು. ಆದರೆ ಯಾವಾಗ ಗಂಡನನ್ನು ಬಿಟ್ಟಳೋ ಅಂದಿನಿಂದ ಎಲ್ಲರ ಪಾಲಿಗೂ ಕೆಟ್ಟವಳಾದಳು. ಕೆಲವರು ಅವಳ ಹೆಸರನ್ನೇ ಮರೆತರು. ಗಂಡುಬೀರಿ, ಶೂರ್ಪನಖಿ, ಮರ್ಯಾದೆಗೆಟ್ಟವಳು, ಕುಲಗೇಡಿ ಹೀಗೆ ಹೊಸದು ನಾಮಕರಣದಿಂದ ಸಂಭ್ರಮಪಟ್ಟವರು ಹಲವರಿದ್ದರು.

“ಕೆಲಸಕ್ಕೆ ಹೋಗಿ ಏನಾಗಬೇಕಿದೆ ಇವಳಿಗೆ? ಓದಿದ್ದೇನೆ ಎಂಬ ಹಮ್ಮು ತಲೆಗೇರಿದೆ ಅಷ್ಟೇ” ಅವಳು ಗಂಡನನ್ನು ಬಿಟ್ಟದ್ದೇಕೆಂಬ ಸುದ್ದಿ ಹೊತ್ತುತಂದ ಸಂಕದಕಟ್ಟೆ ಅಜ್ಜಿ ನುಡಿದಿದ್ದರು. ಕೆಲಸಕ್ಕೆ ಹೋಗುವಂತಿಲ್ಲ, ಮನೆಯಲ್ಲೇ ಇರಬೇಕು ಎಂದು ಗಂಡ ಹಠ ಹಿಡಿದಿದ್ದನಂತೆ. ಮದುವೆ ಆದಮೇಲೂ ಕೆಲಸಕ್ಕೆ ಹೋಗುತ್ತೇನೆ ಎಂದು ಮದುವೆಗೂ ಮೊದಲೇ ಸಾಕಿ ಚಿಕ್ಕಿ ಎಲ್ಲರ ಎದುರಿನಲ್ಲಿಯೇ ತನ್ನ ಗಂಡನಾಗುವವನಲ್ಲಿ ಹೇಳಿ ಒಪ್ಪಿಗೆ ಪಡೆದುಕೊಂಡದ್ದು ನಮಗೆಲ್ಲರಿಗೂ ಗೊತ್ತಿತ್ತು. “ಗಂಡಸರ ಹಾಗೆ ಆಡುತ್ತಾಳೆ. ಎಲ್ಲರೆದುರು ಹಾಗೆ ಕೇಳುವುದಕ್ಕೆಷ್ಟು ಧೈರ್ಯ ಇವಳಿಗೆ!” ಎಂಬ ಪಿಸುಮಾತೂ ಅಲ್ಲಿ ಕೇಳಿಬಂದಿತ್ತು. ಆಗ ಒಪ್ಪಿಗೆ ಕೊಟ್ಟವನು ಈಗ ಹಠ ಹಿಡಿದು ಕೂತಿದ್ದ. “ಹೊಂದಿಕೊಂಡು ಹೋಗಲಾಗದಷ್ಟು ಸೊಕ್ಕು” ಸಂಕದಕಟ್ಟೆ ಅಜ್ಜಿ ಹೊರಡುವುದಕ್ಕೆ ಮೊದಲು ಈ ಮಾತು ಹೇಳಿದ್ದು ಸಾಕಿ ಚಿಕ್ಕಿಯನ್ನು ಉದ್ದೇಶಿಸಿಯೋ? ಅಲ್ಲಾ ಅವಳ ಗಂಡನನ್ನೋ? ಅಥವಾ ಇಬ್ಬರನ್ನೋ? ತಿಳಿಯಲಿಲ್ಲ.

ಗಂಡ ಬಿಟ್ಟ ಅವಳನ್ನು ಮನೆಯೊಳಕ್ಕೆ ಸೇರಿಸಿಕೊಳ್ಳುವುದಕ್ಕೆ ಅಜ್ಜ ಸಿದ್ಧರಿರಲೇ ಇಲ್ಲವಂತೆ. “ಎಲ್ಲಿಯಾದರೂ ಹೋಗಿ ಸಾಯಿ” ಎಂದು ಅಬ್ಬರಿಸಿ, ಬಾಗಿಲು ಮುಚ್ಚಿದ್ದರಂತೆ. ಕೊನೆಗೆ ಅಜ್ಜಿ ಕಾಲು ಹಿಡಿದು ಬೇಡಿಕೊಂಡ ಮೇಲೆ ಅರೆ ಮನಸ್ಸಿನಿಂದಲೇ ಒಪ್ಪಿಗೆ ಕೊಟ್ಟಿದ್ದರಂತೆ. ಈ ಎಲ್ಲಾ ಅಂತೆ ಅಂತೆಗಳೆಂಬ ಕಂತೆಗಳು ಕಂತು ಕಂತಾಗಿ ನಮ್ಮ ಮನೆ ಸೇರುವುದಕ್ಕೆ ಹೆಚ್ಚು ದಿನ ಬೇಕಾಗಲಿಲ್ಲ.

ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ನನಗೆ ಈ ವಿಚಾರದಲ್ಲಿ ಎಲ್ಲರೂ ಚಿಕ್ಕಿಯನ್ನು ಬೈಯ್ಯುತ್ತಿದ್ದದ್ದು ಸರಿಗಾಣಲಿಲ್ಲ. “ಅಷ್ಟು ವಿದ್ಯಾಭ್ಯಾಸ ಪಡೆದ ಚಿಕ್ಕಿ ಹೋರಹೋಗಿ ದುಡಿಯಲು ಬಯಸಿದ್ದರಲ್ಲೇನು ತಪ್ಪಿದೆ?” ಎಂದು ಚಿಕ್ಕಿಯನ್ನು ಬೈದ ಪುರುಷೋತ್ತಮ ಮಾವನಲ್ಲಿ ಪ್ರಶ್ನಿಸಿದ್ದೆ. ನಾನು ಪ್ರಶ್ನಿಸಿದ್ದೇ ತಪ್ಪು ಎಂಬಂತೆ ಕೂಗಾಡಿದ್ದ. ‘ಸರಿ- ತಪ್ಪುಗಳ ವಿವೇಚನೆಯಿಲ್ಲದೆ ಅಜ್ಜ ನೆಟ್ಟ ಆಲಕ್ಕೆ ಜೋತುಬೀಳುವ ಇವರೊಡನೆ ವಿತಂಡ ವಾದ ಮಾಡಬೇಡ’ ಎಂದು ನನ್ನ ಮನಸ್ಸು ನುಡಿದದ್ದನ್ನು ವಿನೀತನಾಗಿ ಒಪ್ಪಿಕೊಂಡು ಹೊರನಡೆದಿದ್ದೆ.

ಇದಾದ ಎರಡು ವರ್ಷಗಳ ನಂತರ ಪಿಎಚ್. ಡಿ. ಸಂಶೋಧನೆಗಾಗಿ ವಿಷಯ ಆಯ್ಕೆಗಾಗಿ ತಡಕಾಡುತ್ತಿದ್ದಾಗ ಮಹಿಳಾ ಸಂವೇದನೆಯನ್ನು ಕೇಂದ್ರೀಕರಿಸಿಕೊಂಡ ವಿಷಯಗಳತ್ತಲೇ ನನ್ನ ಗಮನ ಹರಿದಿತ್ತು. “ಏನ್ರೀ ಮನೋಜ್, ಇಂಥಾ ವಿಷಯ ಆರಿಸಿಕೊಂಡಿದ್ದೀರಾ? ಬೇರೇ ವಿಷ್ಯಾನೇ ಸಿಗ್ಲಿಲ್ವೇನ್ರೀ ನಿಮ್ಗೆ? ಲೈಬ್ರೆರಿಯ ಮೂಲೆಯಲ್ಲಿ ಕುಳಿತು ಓದಿ, ಬರೆದು ಪಿಎಚ್. ಡಿ. ಮುಗಿಸ್ತೇನೆ ಅಂದ್ಕೋಬೇಡಿ. ಫೀಲ್ಡ್ ವರ್ಕ್ ಮಾಡ್ಬೇಕು. ಸೂಳೆಗೇರಿಯಲ್ಲೆಲ್ಲಾ ಓಡಾಡ್ಬೇಕು. ಆಗುತ್ತೇನ್ರೀ ನಿಮ್ಮಿಂದ?”, ನಾನು ಸೂಳೆಯರ ಬಗೆಗೆ ಪಿಎಚ್. ಡಿ. ಮಾಡುತ್ತೇನೆ ಎಂದಾಗ, ನನ್ನ ಕುಟುಂಬದ ಹಿನ್ನೆಲೆ ತಿಳಿದಿದ್ದ ಪ್ರೊಫೆಸರ್ ಹೀಗೆ ಹೇಳಿ, ನಗೆಯಾಡಿದ್ದರು. ನನಗಂತೂ ಭರಪೂರ ಭರವಸೆ ಇತ್ತು. ಅವರನ್ನು ಒಪ್ಪಿಸಿ ಅದೇ ವಿಷಯವನ್ನು ಅಂತಿಮಗೊಳಿಸಿದ್ದೆ. ಯಾವಾಗ ಸಂಶೋಧನೆಗೆಂದು ಕ್ಷೇತ್ರಕಾರ್ಯಕ್ಕೆ ಹೊರಟೆನೋ ಆಗ ಆರಿಸಿಕೊಂಡ ವಿಷಯದ ಕ್ಲಿಷ್ಟತೆ ಅರ್ಥವಾಗತೊಡಗಿತ್ತು. ಪ್ರೊಫೆಸರ್ ಅವರಾಡಿದ ಮಾತಿನ ಹಿನ್ನೆಲೆಯೂ ತಿಳಿಯತೊಡಗಿತು. ಇದುವರೆಗೂ ನೋಡಿರದಿದ್ದ ಹೊಸ ಜಗತ್ತೊಂದನ್ನು ಪ್ರತಿದಿನವೆಂಬಂತೆ ಕಾಣುವ ಅವಕಾಶವೂ ಒದಗಿತು.

ಆದ ಅನುಭವಗಳಂತೂ ಭಿನ್ನ, ವಿಭಿನ್ನ. ಕ್ಷೇತ್ರಕಾರ್ಯಕ್ಕೆಂದು ಸೂಳೆಗೇರಿಗೆ ಹೋದವನು ಈ ಎರಡು ವರ್ಷಗಳಲ್ಲಿ ಕಡಿಮೆ ಎಂದರೂ ಐದು ಸಲ ಪಿಂಪ್‍ಗಳಿಂದ ಚೆನ್ನಾಗಿ ಬೈಸಿಕೊಂಡಿದ್ದೆ. ಒಂದು ಸಲವಂತೂ ಏಟು ತಿನ್ನುವ ಮಟ್ಟಕ್ಕೂ ಪರಿಸ್ಥಿತಿ ಕೈಮೀರಿತ್ತು. ನನ್ನನ್ನೂ, ನನ್ನ ಗೆಳೆಯನನ್ನೂ ಪೊಲೀಸ್ ಮಾಹಿತಿದಾರರೆಂದು ತಪ್ಪಾಗಿ ಅರ್ಥೈಸಿಕೊಂಡವರು ಮುಟ್ಟಿ ನೋಡಿಕೊಳ್ಳುವಂತೆ ತದಕಿದ್ದರು. ಇನ್ನೊಂದು ಸಲ ಸೂಳೆಗೇರಿಯಿಂದ ಹೊರಟು ಈಚೆ ಬಂದವನಿಗೆ ಎದುರಾದದ್ದು ಕೇಶವ ದೊಡ್ಡಪ್ಪ. ನನ್ನ ತಂದೆಯ ಚಿಕ್ಕಪ್ಪನ ಮಗ. ಭಯದಿಂದ ತತ್ತರಿಸಿದ್ದೆ. ಪಿಎಚ್. ಡಿ. ಮಾಡುತ್ತಿದ್ದೇನೆ ಎಂದು ತಂದೆ- ತಾಯಿಗೆ ತಿಳಿಸಿದ್ದೆನಾದರೂ ಯಾವ ವಿಷಯದ ಬಗ್ಗೆ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ತಂದೆ ಪ್ರಶ್ನಿಸಿದಾಗ ಹಾರಿಕೆಯ ಉತ್ತರ ಕೊಟ್ಟು ಪಾರಾಗಿದ್ದೆ. ನಿಜ ವಿಚಾರ ಮನೆಯವರಿಗೆ ತಿಳಿದರೆ ಗತಿಯೇನು? ಎಂಬ ಭಯ ಈಗ ಕಾಡಲಾರಂಭಿಸಿತ್ತು. “ಇಷ್ಟು ದಿವ್ಸ ಬರೀ ಹುಡ್ಗ ಆಗಿದ್ದೆ. ಈಗ ಗಂಡಸಾಗಿದ್ದೀಯ. ರಸಿಕ ಶಿಖಾಮಣಿ”, ನನ್ನ ಭಯವೆಲ್ಲಾ ಕರಗಿ ನೀರಾಗುವಂತಹ ಮಾತುಗಳನ್ನಾಡಿದ ಕೇಶವ ದೊಡ್ಡಪ್ಪ ದೊಡ್ಡ ದೊಡ್ಡ ಹೆಜ್ಜೆಗಳನ್ನಿಡುತ್ತಾ ನಾನು ಹೊರಟುಬಂದಿದ್ದ ಸೂಳೆಗೇರಿಯೆಡೆಗೆ ಸಾಗಿದ್ದರು. ಇದೇ ಕೇಶವ ದೊಡ್ಡಪ್ಪ ಅಂದು ಸಾಕಿ ಚಿಕ್ಕಿಯನ್ನು ಬೈಯ್ಯುವುದರಲ್ಲಿ ಮುಂಚೂಣಿಯಲ್ಲಿದ್ದರು.

ಈ ಎರಡೂವರೆ ವರ್ಷಗಳಲ್ಲಿ ಎಷ್ಟೋ ಜನ ವೇಶ್ಯೆಯರ ಸಂದರ್ಶನ ನಡೆಸಿದ್ದೆ. ತಿಳಿದುಕೊಂಡ ವಿಚಾರಗಳು ಹಲವು. ಬಡತನ, ಕುಡುಕ ಅಪ್ಪ, ರೋಗಿಷ್ಠೆ ಅಮ್ಮ, ತಂಗಿಯ ಮದುವೆ, ನಟಿಯಾಗುವ ಆಸೆ, ಮೋಸ, ನೋವನ್ನು ನುಂಗಿಕೊಂಡು ದಿನಕ್ಕೆ ಏಳೆಂಟು ದೇಹಗಳಿಗೆ ಸುಖ ಹಂಚುವ ಅನಿವಾರ್ಯತೆ, ಕೆಲವರ ವಿಕೃತತೆ, ವಿಕ್ಷಿಪ್ತ ವಾಂಛೆಗಳು, ಕತ್ತಲ ಹೊದಿಕೆಯೊಳಗೆ ಮತ್ತೂ ಭದ್ರವಾಗಿ ಬಚ್ಚಿಟ್ಟುಕೊಳ್ಳುವ ಕಣ್ಣೀರುಗಳು...ಸುಖದ ಕಾರ್ಖಾನೆಯೊಳಗಿದ್ದ ಕರುಳು ಹಿಂಡುವ ಕಥೆಗಳಲ್ಲಿ ಕೆಲವು ನನ್ನ ಪಿಎಚ್. ಡಿ. ಪುಟಗಳನ್ನು ಸೇರಿದ್ದವು.

ಹೀಗೆ ಸಂಶೋಧನೆಯ ಬಗ್ಗೆ ತಲೆಕೆಡಿಸಿಕೊಂಡು ಅಲೆದಾಡುತ್ತಲೇ ಅದೊಂದು ಸೂಳೆಗೇರಿಗೆ ಹೋಗಿದ್ದೆ. ಒಂದಷ್ಟು ವೇಶ್ಯೆಯರನ್ನು ಸಂದರ್ಶಿಸುವುದು ನನ್ನ ಉದ್ದೇಶವಾಗಿತ್ತು. ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದ ಪಿಂಪ್ ಮಹಾ ಒರಟ. ಹಳ್ಳಿ ಭಾಷೆಯಲ್ಲಿ ಅದೇನೋ ಬೈಯ್ಯುತ್ತಲೇ ವೇಶ್ಯೆಯೊಬ್ಬಳನ್ನು ನನ್ನೆದುರಿಗೆ ಕರೆತಂದ. ನನಗ್ಯಾಕೋ ಅವಳ ಕಣ್ಗಳನ್ನು ಎದುರಿಸಲಾಗಲಿಲ್ಲ. ನನ್ನನ್ನು ನೋಡಿದ ಅವಳು ಭಯಭೀತಳಾಗಿದ್ದಳು. ಅವಳಿಗಿಂತಲೂ ಹೆಚ್ಚು ಭಯ, ಗೊಂದಲ ನನ್ನಲ್ಲಿ. ಮಾತು ಮರೆತಿದ್ದ ನಾನು ಅವಳನ್ನು ಸಂದರ್ಶಿಸಲಿಲ್ಲ.

ಅಲ್ಲಿಂದ ಹೊರಟುಬಂದವನಲ್ಲಿ ಏನೆಲ್ಲಾ ಯೋಚನೆಗಳು. ಮೂರು ದಿನಗಳ ಹಿಂದೆ ಶಾರದಾ ಚಿಕ್ಕಮ್ಮನ ಮಗ ವಾಟ್ಸಾಪಿನಲ್ಲಿ ಅರುಹಿದ ವಿಚಾರಗಳೆಲ್ಲಾ ತಲೆಯಲ್ಲಿ ಗಿರಕಿ ಹೊಡೆದವು. ಆರು ತಿಂಗಳುಗಳ ಹಿಂದೆ ಅಜ್ಜನಿಗೂ ಸಾಕಿ ಚಿಕ್ಕಿಗೂ ವಿಪರೀತ ಜಗಳ ಆಯ್ತಂತೆ. “ನನ್ನ ಸರ್ಟಿಫಿಕೇಟ್ ಎಲ್ಲಾ ತೆಗೆದಿಟ್ಟುಕೊಂಡಿದ್ದೀರಲ್ಲಾ? ಕೊಡಿ ಅದನ್ನು. ನನ್ನ ಜೀವನ ನಾನು ನೋಡಿಕೊಳ್ಳುತ್ತೇನೆ” ಎಂದಳಂತೆ. “ನಿನ್ನಂಥವಳಿಗೆ ಓದು ಬೇರೆ ಕೇಡು” ಎಂದ ಅಜ್ಜ ಅವಳ ಸರ್ಟಿಫಿಕೇಟನ್ನೆಲ್ಲಾ ಹರಿದು ಎಸೆದರಂತೆ. ಮನೆಯಿಂದ ಹೊರದಬ್ಬಿದ್ದಾರಂತೆ...ಹಾಗಿದ್ದರೆ ಇಂದು ನಾನು ಕಂಡದ್ದು? ತಕ್ಷಣವೇ ವಿಚಾರ ತಿಳಿಸಲು ಅಮ್ಮನಿಗೆ ಕರೆ ಮಾಡಿದ್ದೆ. ತಿರಸ್ಕಾರದ ಮಾತಾಡಿದ್ದಳು. ಹಾಗಿದ್ದರೆ ನಾನೇ ಏನಾದರೂ ಮಾಡಬೇಕು...ಹೌದು...ಅದುವೇ ಸರಿ...ನಿರ್ಧರಿಸಿದವನು ಬೆಳಕು ಹರಿಯುವುದನ್ನೇ ಕಾದು ಕುಳಿತೆ.

“ಅವಳು ಬೇಕಾ? ಅವಳ ಮೇಲೆ ಆಸೆ ಆಗಿದ್ಯಾ?” ತುಟಿ ಸೊಟ್ಟಗೆ ಮಾಡಿ ಕೇಳಿದ ಹಿಂದಿನ ದಿನದ ಆ ಒರಟ ಪಿಂಪ್ ಕೆಟ್ಟದಾಗಿ ನಕ್ಕ. ಅಸಹ್ಯ ಎನಿಸಿತು. “ನೀನೆಷ್ಟು ಹಣ ಕೊಟ್ಟರೂ ಇನ್ನು ನಿನಗವಳು ಸಿಗುವುದಿಲ್ಲ. ಲಕ್ಷಕ್ಕೆ ಸೇಲ್ ಆಗಿದ್ದಾಳೆ ಸುಂದರಿ. ಇವತ್ತು ಬೆಳಗ್ಗೆಯೇ ಊರು ಬಿಟ್ಟಾಗಿದೆ” ಹೇಳಿದವನು ಮತ್ತೆ ನಕ್ಕ. “ಎಲ್ಲಿಗೆ?” ಎಂದದ್ದಕ್ಕೆ “ಅದೆಲ್ಲಾ ನಿನಗ್ಯಾಕೆ?” ಎಂದು ತೀರಾ ಒರಟಾಗಿ ಕೇಳಿದ. ಅವನ ಮಾತು ಸುಳ್ಳಾಗಿದ್ದರೆ? ಎಂಬ ಆಸೆಯೆದ್ದಿತು. “ಒಮ್ಮೆ ಮಾತಾಡಿಸಿ ಬರುತ್ತೇನೆ” ಎಂದು ಒಳಹೋಗಲು ಪ್ರಯತ್ನಿಸಿದ್ದಕ್ಕೆ ಕಾಲರ್ ಹಿಡಿದೆಳೆದು, ಹೊರದಬ್ಬಿದ. ಬರಬಾರದಿತ್ತು ಮತ್ತೆ ನಾನಿಲ್ಲಿಗೆ ಎನಿಸಿತು. ಅಲ್ಲಿಗೆ ಹೋಗುವುದೇ ಸರಿ ಎನಿಸಿತು. ಹೊರಟೆ…ಹಳೆಯ ಕಾಲದ ಆ ಮನೆಯೆದುರು ನಿಂತ ನಾನು ಹಲಸಿನ ಮರದ ಬಾಗಿಲನ್ನು ಬಲು ಜೋರಾಗಿ ಬಡಿದೆ. ಬಾಗಿಲು ತೆರೆದ ದಪ್ಪ ಮೀಸೆಯ ಮುದಿ ವ್ಯಕ್ತಿಯ ಮುಖ ಮೂತಿ ನೋಡದೆ ಬೈಯ್ಯುವುದಕ್ಕೆ ಶುರುವಿಟ್ಟುಕೊಂಡೆ. ನನ್ನ ಬೈಗಳು ಇನ್ನೂ ಮುಗಿದಿರಲಿಲ್ಲ. ಆಗಲೇ ಆರ್ಭಟಿಸಿದ.

“ನೀನೊಬ್ಬ ಹುಟ್ಟಿಕೊಂಡೆಯೇನೋ ಹೊಸ ಶತ್ರು? ಆ ದರಿದ್ರ ಹೆಣ್ಣಿನ ಪರ ನಿಂತಿದ್ದೀಯಾ ಮೂರ್ಖ. ಅವಳ ಸಂಬಂಧ ಕಡಿದುಕೊಂಡಾಗಿದೆ. ಇನ್ನುಮುಂದೆ ನೀನೂ ನನ್ನ ಪಾಲಿಗೆ ಅಷ್ಟೆ. ಮೊಮ್ಮಗನಲ್ಲ...” ದನಿಯೆತ್ತರಿಸಿ ಮಾತನಾಡುತ್ತಿದ್ದ ವ್ಯಕ್ತಿಯ ಮುದಿ ಹಣ್ಣು ಹಣ್ಣು ಮೈಯ್ಯಿಂದ ಬೆಂಕಿ ಕಣ್ಗಳ ರಾಕ್ಷಸ ಹೊರಜಿಗಿಯಲು ಮತ್ತೆ ಸಿದ್ಧನಾಗಿದ್ದ…

 

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.

More About Author