Poem

ಭರವಸೆಯ ಹಾಡು

ಹೊರಗೆ ಗಲಾಟೆ ಗದ್ದಲ
ಪತಾಕೆಗಳ ಪಾರುಪತ್ಯ
ಬಾವುಟಗಳ ಮಾರಾಟದ ನಡುವೆ
ಯಾರ ಮನೆಯೊಳಗೆ ನಗುವೆಂಬ ಹೂವು ಅರಳುತ್ತಿಲ್ಲ
ಉಡುಗೊರೆ ತರಲೆಂದು ಅಂಗಡಿಗೆ ಹೋದರೆ
ಮಾರಾಟಗಾರರು ತಮ್ಮ ಬಣ್ಣವನ್ನು ಮುಂದಿಡುತ್ತಾರೆ
ಹೃದಯದ ಮಾತಿಗೂ ಬೆದರಿಕೆ ಒಡ್ಡುವ ಕಾಲದಲ್ಲಿ
ಮತ್ತೆ ಮತ್ತೆ ಹೊರಗೆ ಬಾಜಾ ಭಜಂತ್ರಿಯ ಜೋರು ಚೀರಾಟ
ಗೆಳತಿ ಸದ್ದು ಸುದ್ದಿಯಾಗುವ ಹೊತ್ತಿನಲ್ಲಿ
ಕಣ್ಣಿನ ಮೂಲಕ ಮನಸಿನ ಮೂಲಕ ಹೃದಯ ತಲುಪುವುದು ಹೇಗೆ?

ಪ್ರೇಮವೆಂದರೆ ನೀನು ನನ್ನನ್ನು ಬದಲಿಸುತ್ತಲೇ ಇರುವ ಪ್ರಕ್ರಿಯೆ
ಹುಳುಕು ಸಿಟ್ಟು ಸೆಡವು ಮತ್ತೆ ಮೌನ
ಮಯ್ಯಿ ಮನಸ್ಸು ಸಂಸಾರವೆಂಬ ಸಾಗರ
ಇದು ಸಾಂಗತ್ಯಕ್ಕಿರುವ ಹಲವು ಹೆಸರು
ಸಾಕಷ್ಟು ಕೊಟ್ಟಿರುವೆ ಬೇಕಾದಷ್ಟು ನೀಡಿರುವೆ
ಬೇರು ಬಿಟ್ಟು ಹಸುರು ತೊಟ್ಟ ಮರದಂತೆ
ನೀಡಲೆಂದೇ ಇರುವ ಯೋಜನೆಯ ಕಾರಣಕ್ಕೆ
ಹುಟ್ಟಿ ಬಂದವಳು ನೀನು

ಅನ್ನ ಬೇಯುವ ಘಮಲಿಗೆ ವಿವರಣೆ ಬೇಕಿಲ್ಲ
ಹಸಿವಿಗೂ ಸಂತೃಪ್ತಿಗೂ ಮಾತಿನ ಹಂಗಿಲ್ಲ
ರುಚಿಯೆಂದರೆ ಆಹಾರಕ್ಕೆ ಸೀಮಿತ ಎಂಬುದು ಮೂರ್ಖರ ಮಾತು
ಎಂದೂ ಖಾಲಿಯಾಗದ ಸ್ವಾದಕ್ಕೆ
ಸದಾ ನೈವೇದ್ಯದ ಗುಣ ದಾಸೋಹದ ಸದ್ಗುಣ
ಗೆಳತಿ ನಿನ್ನ ಒಡನಾಟಕ್ಕೆ ಒಂದೇ ರುಚಿಯಿಲ್ಲ
ಮತ್ತೆ ಮೆತ್ತಗೆ ಹೇಳುವೆ
ಹೊರಗೆ ಅದೆಷ್ಟೇ ಗದ್ದಲವಿರಲಿ
ನನಗೆ ನೀನು ನಿನಗೆ ನಾನು
ಭರವಸೆಯ ಹಾಡು

- ಡಾ.ಬೇಲೂರು ರಘುನಂದನ್

ಬೇಲೂರು ರಘುನಂದನ್

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು.  ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ.. 

ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 2009ರಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ, ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಇವರನ್ನು ನೇಮಕ ಮಾಡಿದೆ. ಮೊದಲು ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿ, ಸದ್ಯ ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2017ರಲ್ಲಿ ಕರ್ನಾಟಕ ಸರ್ಕಾರ, ಕರ್ನಾಟಕ ನಾಟಕ ಅಕಾಡೆಮಿಗೆ ಇವರನ್ನು ಸದಸ್ಯನನ್ನಾಗಿ ನೇಮಕ ಮಾಡಿತು. ಸಾಹಿತ್ಯ, ರಂಗಭೂಮಿ, ಸಿನೆಮಾ, ಸಂಗೀತ ಹಾಗೂ ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿಯುಳ್ಳ ಇವರು ಕಾಜಾಣದ ಸಂಸ್ಥೆಯ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮಾಡುತ್ತಾ ಬಂದಿದ್ದಾರೆ. ಇವರ ಸಾಹಿತ್ಯ ಕೃತಿಗಳು ಇಂಗ್ಲಿಷ್, ಹಿಂದಿ, ಹಾಗೂ ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. 2019ನೇ ಸಾಲಿನ ಬೇಲೂರು ತಾಲೂಕು ಕನ್ನಡ  ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಇವರಿಗೆ ಲಭಿಸಿದೆ.

ಪ್ರಕಟಿತ ಕೃತಿಗಳು :
ಕಾವ್ಯ : ಶ್ವೇತಪ್ರಿಯ, ಕನ್ನಡಿ ಮುಂದೆ ನಿಂತಾಗ, ಕವಿಶೈಲದ ಕವಿತೆಗಳು, ಹಸುರು, ಸೊನ್ನೆಯಾಗುವ ಕಾಯ, ಮಗ್ಗದ ಮನೆ
ಕಟ್ಟುಪದಗಳು : ನೂರೊಂದು ವಚನಗಳು, ಅರಿವು ತೊರೆ, ಬೆತ್ತಲು, ಅಮ್ಮ
ಮಕ್ಕಳ ಸಾಹಿತ್ಯ : ಚಿನ್ನಾರಿಯ ಚಿತ್ರ, ನಿಸರ್ಗ ಮತ್ತು ಗುಬ್ಬಚ್ಚಿ, ಹಾರುವ ಆನೆ, ಬೊಂಬಾಯ್ ಮಿಠಾಯಿ (ಮಕ್ಕಳ ನಾಟಕ), ಚಿಟ್ಟೆ (ಮಕ್ಕಳ ಏಕವ್ಯಕ್ತಿ ನಾಟಕ)
ಪ್ರವಾಸ ಸಾಹಿತ್ಯ : ಜೀವನ್ಮುಖಿ ತೀಸ್ತಾ
ಅಂಕಣ ಬರಹ : ಉಮಾಸಿರಿ, ಚಿಣ್ಣರ ಅಂಗಳ, ಹೊಸ ಫಸಲು, ಬೇಂದ್ರೆ ನಾಟಕಗಳು
ನಾಟಕಗಳು : ರಕ್ತವರ್ಣೆ, ಸಾಲು ಮರಗಳ ತಾಯಿ, ತಿಪ್ಪೇರುದ್ರ, ರೂಪ ರೂಪಗಳನು ದಾಟಿ ಮತ್ತು ಬೆಳಕಿನ ಅಂಗಡಿ, ಮೋಹನ ತರಂಗಿಣಿ, (ಪ್ರಕಟಿತ), ಭೂಮಿ, ರೂಬಿಕ್ಸ್ ಕ್ಯೂಬ್, ತೊರೆದು ಜೀವಿಸಬಹುದೆ, ಉಧೋ ಉಧೋ ಎಲ್ಲವ್ವ, ಕ್ಲೀನ್ ಅಂಡ್ ಕ್ಲಿಯರ್ ಪಾಯಖಾನೆ, ಗಾರ್ಗಿ, ಹತ್ಯಾಕಾಂಡ, (ವಿದುರಾಶ್ವತ್ಥದ ವೀರಗಾಥೆ), ಮುದ್ದುಮಗಳೇ.
(ಪ್ರಯೋಗಗೊಂಡ ನಾಟಕಗಳು) ಆಯಾಮ, ದಹನಾಗ್ನಿ, ಪ್ರೇಮಮಯಿ ಶರ್ಮಿಷ್ಠೆ, (ಪ್ರಯೋಗಕ್ಕೆ ಸಿದ್ಧಗೊಂಡಿರುವ ನಾಟಕಗಳು)
ಸಂಪಾದನೆ : ಕಿ.ರಂ ಹೊಸಕವಿತೆ ಸಂಪುಟ 1 ಮತ್ತು 2
ವಿಮರ್ಶೆ : ಕ್ರಿಯೆ ಪ್ರತಿಕ್ರಿಯೆ
ರಂಗಗೀತೆಗಳು : ರಾಗರಂಗ
ಕಥಾಸಾಹಿತ್ಯ : ಅಪ್ಪ ಕಾಣೆಯಾಗಿದ್ದಾನೆ, ರಂಗಿ, ಏಡಿ ಅಮ್ಮಯ್ಯ, ಆಗಮನ, ಒಂದು ಮೂಟೆ ಅಕ್ಕಿ ಹಾಗೂ ಇನ್ನಿತರ ಕತೆಗಳು ಮಯೂರ ಸೇರಿದಂತೆ ಬೇರೆ ಬೇರೆ ಕನ್ನಡದ ಪತ್ರಿಕೆಗಲ್ಲಿ ಪ್ರಕಟಗೊಂಡಿವೆ.

ಪ್ರಶಸ್ತಿ ಪುರಸ್ಕಾರಗಳು; ಮೈಸೂರು ವಿಶ್ವವಿದ್ಯಾಲಯದಿಂದ ರಾಷ್ಟçಕವಿ ಕೆ.ವಿ ಪುಟ್ಟಪ್ಪ ಚಿನ್ನದ ಪದಕ, ಡಾ. ಚದುರಂಗ ಸುಬ್ರಮಣ್ಯ ರಾಜೇ ಅರಸ್ ಚಿನ್ನದ ಪದಕ ಮತ್ತು ಶ್ರೀಮತಿ.ಎಚ್.ಎಲ್ ನಾಗರತ್ನಮ್ಮ ಶ್ರೀ ಲಕ್ಷ್ಮಣ ಶೆಟ್ಟಿ ಚಿನ್ನದ ಪದಕಗಳೊಂದಿಗೆ ಕನ್ನಡ ಎಂ.ಎ. ಪದವಿ. ಕನ್ನಡ ಸಂಘರ್ಷ ಸಮಿತಿ ಕೊಡಮಾಡುವ ಕುವೆಂಪು ಯುವಕವಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ನೀಡುವ ಜ್ಯೋತಿ ಪುರಸ್ಕಾರ, ಬೇಲೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಸಾಲು ಮರದ ತಿಮ್ಮಕ್ಕ ಹಸುರು ಪ್ರಶಸ್ತಿ, ನಾ.ಡಿಸೋಜಾ ಎಚ್.ಎಸ್.ವಿ.ಪುಟಾಣಿ ಸಾಹಿತ್ಯ ಪುರಸ್ಕಾರ, ತೇಜಸ್ವಿ ಕಟ್ಟೀಮನಿ ಯುವ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ, ಬಿ.ಎಂ.ಶ್ರೀ ಪ್ರತಿಷ್ಠಾನದ ಷಾ. ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ, ದಿವಂಗತ ಸಾರಂಗಿ ವೆಂಕಟರಾಮಯ್ಯ ಪುಟ್ಟಚಟ್ಟಮ್ಮ ದತ್ತಿನಿಧಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ನೇಸರು ಜಾಗತಿಕ ಏಕಾಂಕ ನಾಟಕ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ. ಜೀವಪದ ಪ್ರಶಸ್ತಿ, ಕರ್ನಾಟಕ ಮತ್ತು ತೆಲುಗು ಬರಹಗಾರರ ಸಂಘದ ವತಿಯಿಂದ ಅಂತರರಾಷ್ಟ್ರೀಯ ಉಗಾದಿ ಪುರಸ್ಕಾರ, ಆರ್ಯಭಟ ಪುರಸ್ಕಾರ,ಲೇಖಿಕಾ ಸಾಹಿತ್ಯ ಶ್ರೀ ಪುರಸ್ಕಾರ, `ಆಯಾಮ’ ನಾಟಕಕ್ಕೆ ಶಿವಮೊಗ್ಗದ ರಂಗ ಕಲಾವಿದರ ಒಕ್ಕೂಟದಿಂದ ಬಹುಮಾನ. ಬೆಂಗಳೂರು ಕಿರು ನಾಟಕೋತ್ಸವದಲ್ಲಿ `ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ. ಹಶ್ಮಿ ಥಿಯೇಟರ್ ನಡೆಸಿದ ಎನಾಕ್ಟ್ ರಾಷ್ಟಿçÃಯ ರಂಗೋತ್ಸವದಲ್ಲಿ ಅತ್ಯುತ್ತಮ ನಾಟಕಕಾರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

More About Author