Poem

ಭವ ಬಂಧನ ಆಕ್ರಂದನ

ಕಷ್ಟ ಕೋಟಲೆಗೆ ಸಿಲುಕಿ
ನಷ್ಟವಾಗುತಿದೆ ಬದುಕು
ದುಷ್ಟ ಕೂಟದ ನಡುವೆ
ಭ್ರಷ್ಟ ಚೋರರ ಒಡನೆ
ಎಷ್ಟು ದೂರ ಸಾಗುವುದು
ಇಷ್ಟು ಸಾಕೆನಗೆ ಕಡುಕಷ್ಟ
ಬಿಟ್ಟು ಬಿಡು ಮಹರಾಯ
ಕಳಿಸಿಬಿಡು ಆ ಜವರಾಯ

ಸೋತು ಸತ್ತವಗೆ ಇಲ್ಲಿಲ್ಲ ಉಳಿಗಾಲ
ಒಳಿತಿಗೆ ಕವಡೆ ಕಿಮ್ಮತ್ತಿಲ್ಲದ ಕಲಿಗಾಲ

ಪಾಪದ ದುಡ್ಡ ಅಡ್ಡಡ್ಡ ನುಂಗುವವನ
ಹೆಣ್ಣು ಹೆಂಡದ ಜೊಲ್ಲು ಕೀಚಕನ
ದ್ರವ್ಯ ದ್ರೋಹ ಚಿಂತಕ ನಯ ವಂಚಕನ
ಲೋಕ ಕಂಟಕ ಕೊಲೆಗಡುಕನ
ಬೃಹನ್ನಳೆ ಅಧಿಕಾರ ಕಿತ್ತು ಕಪ್ಪ ನೆಕ್ಕುವವನ
ಉಪ್ಪು ತಿಂದವಗೆ ಪಾನಕ ಕುಡಿಸುವವನ
ಒಪ್ಪತ್ತು ಹೋಳಿಗೆ ಇಟ್ಟು ಬದುಕಿನ ಮುದ್ದೆ ಕದಿವವನ
ಮತ್ತೆ ಮತ್ತೆ ದೊಡ್ಡ ಪಟ್ಟಕೇರಿಸಿ ಭಾರೀ ಸ್ಥಾನ ಮಾನ

ಸನ್ಮಾರ್ಗದಲಿ ಬರೀ ತೊಡರು ಆಪತ್ತು
ಕಡು ಪಾಪಿಗೇ ಎಲ್ಲ ಧನ ಕನಕ ಸಂಪತ್ತು

ಬೆಲ್ಲದ ಮಾತಾಡಿ ಬಿಳಿಹಾಲ ವಿಷವುಣಿಸಿ
ಬೆಂಗಾವಲಿಗಿದ್ದು ಬೆನ್ನಲಿ ಚಾಕು ತೂರಿಸಿ
ಕೊಲ್ಲುವ ಕಾಮ ಕೋಮು ಕೆಂಡಮಳೆ ಸುರಿಸಿ
ಸೊಲ್ಲಡಗಿಸಿ ಸತ್ಯ, ನ್ಯಾಯದ ಕಣ್ಣು ಮುಚ್ಚಿಸಿ
ಗೆಲ್ಲುವ ಮೆಟ್ಟಿಲಾಗಿ ಮುಗ್ಧ ಹೆಣಗಳ ಮಲಗಿಸಿ
ಮೆಲ್ಲ ಮೆಲ್ಲನೆ ವಂಶಕ್ಕೆಲ್ಲ ಕಂತೆ ಕಂತೆ ಗಳಿಸಿ
ಎಲ್ಲ ಸಾಧಿಸಿದ ಯಶವಂತ ತಾನೆನೆಸಿ
ಬಲ್ಲ ಬಲ್ಲಿದ ಮೆರೆವ ಮಾಯಾ ಜಾಲ ಬೀಸಿ

ಬೆಡಗು ಬಣ್ಣದ ಲೋಕದಿ ಬದುಕು ಕಪಟ ನಾಟಕ
ಬೆವರ ಮಾಯೆ ಬಣ್ಣವಳಿಸೆ ಮತ್ತದೆ ಖಾಲಿ ಪುಸ್ತಕ

ಸುಖದ ಅಮಲು ತಲೆಯ ತೀಡಿ
ಆತ್ಮ ಸಾಕ್ಷಿಗೆ ಮೋಸ ಮಾಡಿ
ಅವನ ಕೊಂದು ಇವನ ಕಾಡಿ
ಅವಳ ತಿಂದು ಇವಳ ದೂಡಿ
ಕಾಡಿ ಬೇಡಿ ಆಸೆಬುರುಕ ಮಾನಗೇಡಿ
ಹೆಸರಿಗಾಗಿ ಹಚ್ಚಿಕೊಂಡು ಮೈಗೆ ರಾಡಿ
ಗೆದ್ದ ಭ್ರಮೆಯದು ಮಾಯಾ ಮೋಡಿ
ಮೌಢ್ಯತೆಯ ಮಬ್ಬರಿಯಿತು ಬೆಳ್ಳಿ ಮೂಡಿ

ಸಜ್ಜನಿಕೆ ಸೋತು ಸದ್ದಡಗಿದೆ
ದುರ್ಮಾರ್ಗವೇ ಗೆದ್ದು ನಗುತಿದೆ

ಕಲ್ಲಾಯ್ತು ಕೋಮಲ ಹೃದಯ
ಎದುರಿಸಿ ತಿಂದು ತುಳಿವ ಕ್ರೂರಿಯ
ಕದ ಹಾಕಿದೆ ಬದುಕಿನ ದಾರಿಯ
ಎಲ್ಲಿಯೂ ಸಲ್ಲದೆ ಶಪಿಸಿದೆ ವಿಧಿಯ
ಮರೆತು ನೊಂದಿದೆ ಆತ್ಮನ ನಾಳೆಯ
ನರಕವೆಂದಿದೆ ದುರುಳ ಪ್ರಬಲರ ಇಳೆಯ
ಬದುಕಿ ಬದುಕಿಸಲು ಸಹಬಾಳ್ವೆಯ,
ಉಳಿವಿಗೆ ಹೋರಾಡಿ ಸೋತಿದೆ ಕಾಯ

ನನ್ನದಲ್ಲದ ಜೀವ, ನನ್ನದಲ್ಲದ ಜೀವನ
ನನ್ನದಲ್ಲದ ದೇಹ, ನನ್ನದಲ್ಲದ ಬಂಧನ

ಧರ್ಮಾಂಧರ ಜಾತಿ ವಿಷ ಬೀಜ ಪ್ರಯೋಗ
ಅಣ್ವಸ್ತ್ರ ಜೈವಿಕ ಶೀತಲ ಸಮರಾಗ್ನಿಗಾಹುತಿ ಜಗ
ಜೀವಂತ ಜನರ ಚಿತೆ ಜ್ವಾಲೆ ಬಿಸಿಯೂಟ ಯೋಗ
ತಿರುಕನ ತಟ್ಟೆ ತುತ್ತು ಕಿತ್ತು ವಿಕೃತ ಭೋಗ
ಪ್ರಕೃತಿ ಕೊಲೆಪಾತಕನಿಂದ ರುದ್ರ ಪ್ರಳಯ ರಾಗ
ಜಗದ ಬದುಕು ದುರುಳ ರಕ್ಕಸತನದ ವಶವೀಗ
ಬಂಧ ಮುಕ್ತನಾಗುವಾಸೆ ಸಾತ್ವಿಕ ಮನಕೀಗ
ಬೆಳಕಿನ ವಶವಾಗಿ ಬೆಳಗುವುದು ಯಾವಾಗ

ದುರಾಸೆ ಸ್ವಾರ್ಥ ಮೋಸ ಮೋಹ ಮಾಯೆ ಅಳಿಯದೆ
ಧರೆ ಶಾಂತಿ ಧರ್ಮ ಸತ್ಪಥದ ಸಜ್ಜನ ಸ್ವರ್ಗವಾಗುಳಿವುದೆ?


✍️ ರವಿನಾಗ್ ತಾಳ್ಯ

ರವಿನಾಗ್‌ ತಾಳ್ಯ

ರವಿನಾಗ್‌ ತಾಳ್ಯ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ ಜೂನಿಯರ್ ಪ್ರೋಗ್ರಾಮರ್ ಆಗಿ ಗುತ್ತಿಗೆ ಆಧಾರದ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಆನ್ ಲೈನ್ ಕವಿಗೋಷ್ಠಿಗಳಲ್ಲಿ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳು ಆಯೋಜಿಸುವ ಸಾಹಿತ್ಯಕ ಗೋಷ್ಠಿಗಳನ್ನು ಪಾಲ್ಗೊಳ್ಳುವುದು ಅವರ ಹವ್ಯಾಸ. ಅವರ ಕವನಗಳು  ನಾಡಿನ ವಿವಿಧ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟಗೊಂಡಿವೆ. 

More About Author