Poem

ಚಂಪಾ

ಚಂಪಾ ಚಂಪಾಕಲಿ ಅಲ್ರಿ
ಚಂಪೆ‌ ಮ್ಯಾಲಿನ‌ ಕೆಂಪುರಿ
ಮುಖದ ಮ್ಯಾಗಳ ಬೆವರ್ರಿ
ಮಾವಿನೊಳಗಿನ ಸಿಹಿರ್ರಿ

ಬಜ್ಜಿ ಗಿರ್ಮಿಟ್ ಮೆಣ್ಸಿಕಾಯ್
ಬಾಯಾಗ್ ಬಿದ್ದಾಂಗ ಕಾರ
ಚಪ್ಪರ್ಸಿ ಬಿಟ್ಟಾಂದ್ರ ಮುಗೀತ್ರಿ
ಖರೆ ಸಂಕ್ರಾಂತಿ ಸಂಕ್ರಮಣ

ಮುಂಜಾನಿ ಮುಂಗಾರು
ಹಗಲೆಲ್ಲಾ ತುಂತುರು
ಕುಂತ್ರು ನಿಂತ್ರು ನಿಲ್ಲದ
ಒಂದ್ನಮೂನೆ ಗುಡುಗು

ಪೀಠದ್ ಮ್ಯಾಲಿನ ಜ್ಞಾನವ
ಕಾಲೆಳ್ದು ಕೆಳಗಾ ಬೀಳ್ಸಿ
ಹೊಟ್ಟೆ ಹುಣ್ಣಾಗೋವಷ್ಟ್ ನಕ್ಕು
ಮುಲಾಮು ಹಚ್ಚಿದ ಹಕೀಮ್ರಿ

ಸುತ್ತಿ‌‌ ಬಳಸಿ ಅಲ್ಲಿಗೇ ಬಂದ್ರು
ಬಿಡಾವಲ್ದು ಹೊಸ ಖಬ್ರ
ಗದ್ದಿಗಿ ಮ್ಯಾಲೆ ಕುಂತವ್ರ
ಸೊಂಟ ಮುರ್ದ ಬಂಡಾಯ್ಗಾರ

ಉದುರಿ ಹೋಗಾಕ ಚಂಪಾ
ಮತ್ತೊಂದು ಎಲೆಯೇನು?
ಮರ ಐತಿ ಹೆಮ್ಮರ ಐತಿ
ಆಕಾಶಕ್ಕೂ ವ್ಯಂಗ್ಯ ತಪ್ದಿನ್ನು

ಪ್ರಶ್ನೆಗೊಂದ್ ಉತ್ರ ಇರೋಮಟ
ಉತ್ರ ಇಲ್ದಿರೋ ಪ್ರಶ್ನೆ ಕಾಣೋಮಟ
ಚಂಪಾ‌ ನಮ್ಸಂಗ್ಡ ಇಲ್ಲೇ ಇರ್ತಾರ್ರೀ
ಕುತ್ಗಿ ಹಿಡಿದ್ ದಬ್ಬುದ್ರು ಹೋಗಂಗಿಲ್ರೀ

- ವಿಕಾಸ್ ಆರ್ ಮೌರ್ಯ

ವಿಕಾಸ್ ಆರ್ ಮೌರ್ಯ

ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊಸಹಳ್ಳಿ. ಬೆಳೆದದ್ದು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳ ಸಂಗ್ರಹ ‘ಚಮ್ಮಟಿಕೆ’ ಕೃತಿಯನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಜೊತೆಗೆ ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಕಪ್ಪು ಕುಲುಮೆ'ಯನ್ನೂ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ.  ಹಾಗೇ 'ನೀಲವ್ವ' ಎಂಬ ಕತಾಸಂಕಲನ ಹಾಗೂ 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು' ಎಂಬ ಅನುವಾದಿತ ಕೃತಿ ಹಾಗೂ ಎಲಿನಾರ್ ಝೆಲಿಯೇಟ್ ಅವರ 'Ambedkar's World: The making of Babasaheb Ambedkar and the Dalit movement' ಕೃತಿಯನ್ನು 'ಅಂಬೇಡ್ಕರ್ ಜಗತ್ತು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಜೀರುಂಡೆ ಪುಸ್ತಕ ಪ್ರಕಾಶನ ಪ್ರಕಟಿಸಿದೆ. ಇವರ ಕವಿತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಬರೆದ ಬುದ್ಧಬೆಳಕು ನಾಟಕ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ಕರ್ನಾಟಕದಲ್ಲಿ ಕೋಮವಾದದ ವಿರುದ್ಧ ನಡೆದ ಬಹುಮುಖ್ಯ ಚಳುವಳಿ ಚಲೋ ಉಡುಪಿಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ದಲಿತ ಸಂವೇದನೆಯನ್ನು ಅಕ್ಷರಮುಖಿ ನಿರ್ವಚನದ ಆಚೆಗೂ ಪಡಿಮೂಡಿಸುತ್ತಿದ್ದಾರೆ.

More About Author