Story

“ಚಿರುತೆ ಎಲ್ಲಿ”

ಲೇಖಕ, ಕತೆಗಾರ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಅವರ ‘ಚಿರತೆ ಎಲ್ಲಿ’ ಕತೆ ನಿಮ್ಮ ಓದಿಗಾಗಿ....

ತುಮಕೂರು, ಪಾವಗಡ ಮುಂತಾದ ಕಡೆ ಚಿರುತೆ ಕಾಣಿಸಿತು, ದನವನ್ನೋ, ಮೇಕೆಯನ್ನೋ, ಮನುಷ್ಯರನ್ನೋ ಎಳೆದುಕೊಂಡು ಹೋಯಿತು ಎನ್ನುವ ಸುದ್ದಿ ಕೇಳಿದಾಗ ಮಸರದ ಜನ ಪಾಪ ಎಂದುಕೊಂಡರು, ಆದರೆ ಹತ್ತಿರದ ಹಿಂದೂಪುರದಲ್ಲಿ ಚಿರುತೆ ಕಾಣಿಸಿಕೊಂಡಿತು ಎಂದು ಕೇಳಿದಾಗ ಎದೆ ಬಾಯಿಗೆ ಬಂತು, ಊರಿಗೆ ಊರೇ ದಿಗ್ಗನೆದ್ದು ಕುಳಿತಿತು. ಹಿಂದೂಪುರಕ್ಕೆ ಬಂದಮೇಲೆ ಮಸರಕ್ಕೆ ಬಂದಹಾಗೆ ಎಂದು ಗಾಭರಿಕೊಂಡ ಜನ ಪಂಚಾಯಿತಿ ಅಧ್ಯಕ್ಷ ರಂಗಾರೆಡ್ಡಿ ಮನೆ ಹತ್ತಿರ ಜಮಾವಣೆಗೊಂಡರು.

ರಂಗಾರೆಡ್ಡಿ ಆಗತಾನೆ ಮುಖತೊಳೆದು, ಮನೆಯ ಮುಂದಣ ಕುರ್ಚಿಮೇಲೆ ಕುಳಿತು ಆಳು ರಾಮಯ್ಯನ ಹತ್ತಿರ ತಮ್ಮ ಕಾಲುನೋವಿಗೆ ಎಣ್ಣೆ ತೀಡಿಸಿಕೊಳ್ಳುತ್ತಿದ್ದರು. ಊರಜನ ಬೆಳ್ಳಂ ಬೆಳಿಗ್ಗೆ ಮನೆಯಹತ್ತಿರ ಬಂದಾಗ ವಿಷಯ ಊರೆಲ್ಲಾ ಹರಡಿದೆ ಎಂದುಕೊಂಡರು.

"ಏನಾಯಿತು ಕಾಲಿಗೆ" ಆಸ್ತೆಯಿಂದ ಕೇಳಿದರು ಬಂದ ಜನ

" ಏನಿಲ್ಲ, ಆ ಲಿಂಗೇಗೌಡನ ಹಡಬೆ ದನ ಗುಮ್ಮಿಬಿಡ್ತು"

"ಏ ನೀವ್ಯಾಕೆ ಅದರ ಜೊತೆ ಗುದ್ದಾಡಕ್ಕೆ ಹೋದ್ರಿ"
"ನಾನ್ಯಾಕೋ ಹೋಗ್ಲಿ, ಚೆಂಬು ತಗೊಂಡು ಹೋಗ್ತಾಯಿದ್ದರೆ, ಹಿಂದಿನಿಂದ ಬಂದು ಗುಮ್ಮಿಬಿಡ್ತು" ಎಂದ ರಂಗಾರೆಡ್ಡಿಗೆ ಇವರು ತನ್ನ ಯೋಗಕ್ಷೇಮ ವಿಚಾರಿಸಲು ಬಂದವರಲ್ಲ ಎಂದು ತಿಳಿದು "ಅದ್ಸರಿ ನೀವೇನು ಬಂದಿದ್ದು" ಎಂದರು."

ಏ ವಿಷಯ ಕೇಳ್ಲಿಲ್ವಾ, ಚಿರುತೆ ಹಿಂದೂಪುರಕ್ಕೆ ಬಂತಂತೆ"

"ಹಿಂದೂಪುರಕ್ಕೆ ಬಂದರೆ ಇಲ್ಲಿಗೆ ಬಂದಂಗಾಯಿತಾ? ಎಲ್ಲಾ ಹೆದರುಪುಕ್ಕಗಳು"

"ಅಂಗಲ್ಲಣ ಅಷ್ಟು ಹತ್ತಿರ ಬಂದಮೇಲೆ, ಇಲ್ಲಿಗೂ ಬರಬೋದಲ್ವಾ?"

"ಸರಿ ನೋಡೋಣ ಏನ್ ಮಾಡೋದು ಅಂತ, ನೀವು ಈಗ ಹೋಗಿ, ಸಂಜೆ ಎಲ್ಲರನ್ನೂ ಬರೇಲಿ" ಎಂದು ರಂಗಾರೆಡ್ಡಿ ಒಳಹೊರಟರು. ಒಳಗೆ ಹೊರಡುತ್ತಾ ತಮ್ಮ ಆಳಿಗೆ "ನೀಕು ತೆಲಿಸೆರಾ" (ನಿನಗೆ ಗೊತ್ತೇನೋ) ಎಂದರು. ಅವ " ನಾಕು ಗೊತ್ತುಲೇದು" ಎಂದ. ಆಂಧ್ರ ಗಡಿಭಾಗವಾದ್ದರಿಂದ ಅಲ್ಲಿ ಕನ್ನಡ ಮಿಶ್ರಿತ ತೆಲುಗು ಎಲ್ಲಾರಿಗೂ ಬರುತಿತ್ತು.

ಬಂದ ಜನ ರಂಗಾರೆಡ್ಡಿ ಹೇಳಿದ ಮೇಲೆ ನಮ್ಮ ಜೀವ ಉಳಿದಂಗೆ ಎಂದು ಸಮಾಧಾನ ತಂದುಕೊಂಡು ಹೊರಟರು. ಒಳಗಡೆ ಭಯ ಇದ್ದೇ ಇತ್ತು.

ಅರಳಿತೊಂದು ಮನಸು ಅಲ್ಲಿ
ಸುರಿದಂಗೆ ಮಳೆಯು ಭುವಿಯಲ್ಲಿ
ರಂಗಾದ ಚಂದ್ರನು
ಸರಸಕ್ಕೆ ಕರೆದನು

ಎಂದು ಹಾಡುತ್ತಾ ಬರುತಿದ್ದ ಹನುಮನಿಗೆ ಊರಜನ ಎದುರಾದರು. "ಎಲ್ಲರೂ ಎಲ್ಲಿಗೆ ಹೊರಟಿರಿ ಅಣ್ಣ' ಎಂದು ಕೇಳಿದ. ಜನರಲ್ಲಿ ಒಬ್ಬ ಚಿರು ತೆಯ ವಿಷಯ ಹೇಳಿದ. ಒಮ್ಮೆಲೇ ಉತ್ಸುಕನಾಗಿಬಿಟ್ಟ ಹನುಮ, ಚಿತ್ರದಲ್ಲಿ ನೋಡಿದ್ದ ಚಿರುತೆಯನ್ನು ನೆನಪಿಸಿಕೊಂಡು "ನಿಜವಾ ನೋಡಕ್ಕೆ ಚಿರುತೆ ಎಷ್ಟು ಚನ್ನಾಗಿರುತ್ತೆ ಅಲ್ವಾ?' ಎಂದು ಎಲ್ಲರ ಮುಖ ನೋಡಿದ. ಯಾರೊಬ್ಬರಲ್ಲೂ ಏನೂ ಚಲನೆ ಕಾಣಲಿಲ್ಲ. ಅವರಲ್ಲಿ ಒಬ್ಬ ಹನುಮನ ತಲೆಗೆ ಮೊಟ್ಟಿ "ಹೋಗೋ" ಎಂದ. ಹನುಮ ತಲೆ ಉಜ್ಜುತ್ತಾ ಚಿರುತೆ ಕಾಣುವ ಖುಷಿಯಿಂದ ಅಲ್ಲಿಂದ ಹೊರಟ. ಊರಲ್ಲಿ ಬರೀ ದನ, ಕುರಿ, ಮೇಕೆ, ಕೋಳಿ, ಹಾವುಗಲ್ಲದೆ ಬೇರೆ ಪ್ರಾಣಿಗಳನ್ನು ನೋಡದ ಹನುಮನಿಗೆ ಹುಲಿ, ಸಿಂಹ ಚಿರತೆ ಎಂದರೆ ಗ್ರಹಾಂತರ ಪ್ರಾಣಿಗಳಾಗಿದ್ದವು.

ಸಂಜೆ ಎಲ್ಲರೂ ಊರ ಹೊರಗಿನ ಸಮುದಾಯ ಭವನದಲ್ಲಿ ಸೇರಿದರು. ವಿಷಯ ಎಲ್ಲರಿಗೂ ತಿಳಿದಿತ್ತು. ಎಲ್ಲರೂ ಗುಸ-ಪಿಸ ನಡೆಸುತಿದ್ದರು. ರಂಗಾರೆಡ್ಡಿ ಕುಳಿತಲ್ಲಿಂದ ಎದ್ದು ಕೈ ಎತ್ತಿ ಎಲ್ಲರನ್ನೂ ಸುಮ್ಮನಿರಿಸಿದರು.

"ನೋಡ್ರಪ್ಪಾ ಎಲ್ಲರಿಗೂ ವಿಷಯ ತಿಳಿದಿದೆ, ಈಗ ಏನ್ ಮಾಡೋಣ ಹೇಳಿ"

"ಮೊದಲು ದನಕರ ಉಳಿಸುಕೋಬೇಕು"

"ಇವತ್ನಿಂದ ಯಾರೂ ಹೊರಗೆ ದನಕರ ಕಟ್ಟಬೇಡಿ, ಮನೆ ಒಳ್ಗೆ ಕಟ್ಟಿ" ಎಂದರು ರಂಗಾರೆಡ್ಡಿ.

ಕೆಲವರು "ಹೌದು ಹೌದು" ಎಂದರು, ಇನ್ನೂ ಕೆಲವರು "ನಮಗೇ ಮನೇಲಿ ಜಾಗವಿಲ್ಲ ಇನ್ನು ದನಕರ ಎಲ್ಲಿ ಕಟ್ಟುವುದು" ಎಂದರು. ಅದಕ್ಕೆ ರಂಗಾರೆಡ್ಡಿ "ಜಾಗ ಇಲ್ಲದೋರು ನಮ್ಮ ಶೆಡ್ಡಲ್ಲಿ ಕಟ್ಟಿ, ಅಲ್ಲಿ ಸುತ್ತಲೂ ಮುಳ್ಳು ಬೇಲಿ ಇದೆ" ಎಂದರು.

" ಸರಿ" ಎಂದು ಎಲ್ಲರೂ ತಲೆತೂಗಿದರು.

"ಇನ್ನು ಜನ ಯಾರೂ ಒಬೊಬ್ಬರೇ ಹೊರಗಡೆ ಹೋಗಬೇಡಿ, ಕೈಯಲ್ಲಿ ಒಂದು ದಪ್ಪ ಕೋಲು ಇರಲಿ, ಹಗಲೊತ್ತು ಚಿರುತೆಯ ತೊಂದರೆ ಇರಲಿಕ್ಕಿಲ್ಲ" ಎಂದರು.

"ಚಿರುತೆ ಹತ್ತಿರದೂರಿಗೆ ಬಂದರೆ, ರಾತ್ರಿ ಊರನ್ನು ಕಾಯಬೇಕಾಗುತ್ತೆ" ಒತ್ತಿ ಹೇಳಿದರು.

ಆದಿನ ರಾತ್ರಿ ಕೂಡ ಕೆಲಜನ ಎಂದಿನಂತೆ ಅವರವರ ಮನೆಯ ಮುಂದೆ ಮಲಗಿಕೊಂಡರು. ಪಕ್ಕದಲ್ಲಿ ಕೋಲನ್ನು ಇಟ್ಟುಕೊಳ್ಳುವದನ್ನು ಮರೆಯಲಿಲ್ಲ, ಸೆಕೆ ಹೆಚ್ಚಾಗಿ ಇದ್ದುದ್ದರಿಂದ ಮನೆ ಒಳಗಡೆ ಮಲಗಲು ಕಷ್ಟವಾಗುತಿತ್ತು.

ರಾತ್ರಿ ಸುಮಾರು ಒಂದು ಗಂಟೆಯ ಸಮಯ, ಯಾರೋ "ಚಿರುತೆ ಚಿರುತೆ' ಎಂದು ಕೂಗಿದರು, ಮನೆಗಳ ಮುಂದೆ ಮಲಗಿದ್ದ ಎಲ್ಲರೂ ಎದ್ದು ಚೆಲ್ಲಾಪಿಲ್ಲಿಯಾಗಿ ಸಿಕ್ಕ ಸಿಕ್ಕ ಮನೆಗಳ ಒಳನುಗ್ಗಿದರು. ಕೆಲವರು ನಿಂತಲ್ಲೇ ಹೊದ್ದುಕೊಂಡಿದ್ದ ಕಂಬಳಿ, ರಗ್ಗನ್ನು ಹಿಡಿದು, ಎತ್ತಿ ತೂರುತ್ತಾ ಹೋ ಹೋ ಎಂದು ಅರಚತೊಡಗಿದರು. ಊರೆಲ್ಲಾ ಹೋ ಹೋ ಶಬ್ದದಲ್ಲಿ ಮುಳುಗಿಹೋಯಿತು. ಆ ರಾತ್ರಿ ಜನ ಯಾರೂ ಮಲಗಲಿಲ್ಲ, ಚಿರು ತೆಯೂ ಕಾಣಿಸಿಕೊಳ್ಳಲಿಲ್ಲ.

ಮಾರನೆಯ ದಿನ ಬೆಳಿಗ್ಗೆ ಸುಮಾರು ಹತ್ತು ಗಂಟೆಗೆ ಮೂರು ಜನ ತಮ್ಮ ಜೀಪಿನಲ್ಲಿ ಬಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷರ ಮನೆ ಎಲ್ಲಿ ಎಂದು ಕೇಳಿ ರಂಗಾರೆಡ್ಡಿ ಮನೆಗೆ ಬಂದರು. ತಾವು ದೂರದೂರಿನವರೆಂದೂ , ಮಿಲ್ಟ್ರಿಯಲ್ಲಿ ಕೆಲಸ ಮಾಡಿದ್ದೇವೆ ಎಂದೂ, ತಾವು ಚಿರುತೆ ಹಿಡಿವುದರಲ್ಲಿ ಪ್ರವೀಣರೆಂದೂ , ಬೇಕಿದ್ದರೆ ಚಿರುತೆಗೆ ಗುಂಡು ಹೊಡೆಯಬಲ್ಲವು ಎಂದೂ ಹೇಳಿ ತಮ್ಮಲ್ಲಿರುವ ತರಾವರಿ ಬಂದೂಕುಗಳನ್ನು ತೋರಿಸಿದರು. ತಾವು ರಾತ್ರಿ ಕಾವಲು ಕಾಯುವೆವೆಂದು, ನಮಗೆ ಊರಲ್ಲಿ ಇರಲು ಸ್ಥಳ ಕೊಟ್ಟರೆ ಸಾಕೆಂದೂ, ತಮಗೆ ಸರ್ಕಾರದಿಂದ ಸಹಾಯ ಧನ ಬರುವುದೆಂದೂ, ಒಂದೇ ಉಸಿರಿನಲಿ ಹೇಳಿದರು.

ಆದಿನ ಊರಿನ ಹಿರಿತಲೆಗಳನ್ನು ಸೇರಿಸಿ ಮಾತನಾಡಿದಮೇಲೆ ಒಪ್ಪಿಗೆ ಕೊಟ್ಟರು ರಂಗಾರೆಡ್ಡಿ.

ಅಂದಿನಿಂದ ಆ ಮೂವರು ಊರನ್ನು ಕಾಯತೊಡಗಿದರು. ರಾತ್ರಿಯೆಲ್ಲಾ ಎದ್ದು ಓಡಾಡುತ್ತಿದ್ದರು. ಹಗಲಲ್ಲಿ ಬಂದೂಕಿನಿಂದ ದೂರದ ನಿಶಾನೆಗೆ ಹೊಡೆದು ತಮ್ಮ ಸಾಮರ್ಥ್ಯವನ್ನು ಊರ ಜನರಿಗೆ ತೋರಿಸುತ್ತಿದ್ದರು. ಒಂದೊಂದು ಬಂದೂಕು ಸಾವಿರಾರು ರೂಪಾಯಿ ಎಂದೂ, ಗುಂಡುಗಳು ನೂರಾರು ರೂಪಾಯಿ ಎಂದೂ ಹೇಳಿ ಹಳ್ಳಿ ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು. ಇಷ್ಟು ದುಡ್ಡು ಖರ್ಚು ಮಾಡಿ ನಾವು ಕೊಡುವ ಊಟಕ್ಕೆ ನಮಗೆ ಸಹಾಯ ಮಾಡುತ್ತಿದ್ದಾರಲ್ಲ ಎಂದು ಅವರ ಮೇಲೆ ಗೌರವ ಮೂಡಿತು. ಅದಲ್ಲದೆ ಅವರು ಮಿಲ್ಟ್ರಿಯಲ್ಲಿ ಕೆಲಸಮಾಡಿ ಈಗ ಜನರ ಸಹಾಯಕ್ಕೆ ನಿಂತು ಸಮಾಜ ಸೇವೆ ಮಾಡುತ್ತಿದ್ದೇವೆ ಎಂದು ಹೇಳಿದ್ದು ಜನರಿಗೆ ಇನ್ನೂ ವಿಸ್ಮಯಕಾರಿಯಾಗಿತ್ತು. ಇಂತಹ ಜನ ಈಗಲೂ ಇದ್ದಾರಲ್ಲ ಅದಕ್ಕೆ ಸ್ವಲ್ಪವಾದರೂ ಮಳೆ ಬೆಳೆ ಆಗುತ್ತಿರುವುದು ಎಂದು ಕೊಂಡರು.

ಇದಲ್ಲದೆ ಊರ ಮಕ್ಕಳಿಗೆ ಸಾಯಂಕಾಲ ಟ್ಯೂಷನ್ ಮಾಡತೊಡಗಿದರು. ಮಕ್ಕಳಿಗೆ ಬೇರೆ ಬೇರೆ ಆಟಗಳನ್ನು ಆಡಿಸುತ್ತಿದ್ದರು. ಹೀಗೆ ಊರ ಜನಗಳ ಜೊತೆ ಬೆರೆತು ಊರಿನವರೇ ಆದರು.

ಹೀಗಿರಲು, ಬಾಬಯ್ಯನ ಹಬ್ಬ ಬಂದೇ ಬಿಡ್ತು, ಊರ ಜನ ಖುಷಿಯಾಗಿಬಿಟ್ರು . ಮೊಹರಂ ಅನ್ನು ಬಾಬಯ್ಯನ ಹಬ್ಬ ಎಂದು ಮಸರದ ಜನ ಕರೆಯುತ್ತಾರೆ. ಬಾಬಯ್ಯ ಎಂದರೆ ಬಂಗಾರ ಬಣ್ಣದ ದುಂಡಗಿನ ತಟ್ಟೆಯಂತೆ ಕಾಣುವ ಲೋಹದ ಆಕಾರಗಳು , ಆ ಆಕಾರಕ್ಕೆ ಒಂದರಿಂದ ಏಳರವರೆಗೆ ಚೂಪಾದ ಬಿಲ್ಲೆಗಳನ್ನು ಅಂಟಿಸಿ, ಆಕಾರದ ಹಿಂದೆ ಒಂದು ಕೋಲು ಕಟ್ಟಿರುತ್ತಾರೆ. ಆ ಕೋಲಿನ ಸಹಾಯದಿಂದ ಬಾಬಯ್ಯಗಳನ್ನು ಗೋಡೆಗೆ ಆನಿಸಿ ನಿಲ್ಲಿಸುತ್ತಾರೆ. ಅವುಗಳನ್ನು ಇಡೀ ವರುಷ ಬಾವಿಯ ನೀರಿನಲ್ಲಿ ಮುಳುಗಿಸಿರುತ್ತಾರೆ, ಹಬ್ಬ ಹತ್ತಿರ ಬಂದಾಗ ತೆಗೆಯುತ್ತಾರೆ. ಬಾಬಯ್ಯಗಳನ್ನು ಊರ ಚಾವಡಿಯಲ್ಲಿ ಇಟ್ಟು ಹಬ್ಬ ಮುಗಿಯುವವರೆಗೂ ದೇವರಂತೆ ಪೂಜಿಸಲಾಗುತ್ತದೆ. ದೇವರುಗಳ ಪೂಜಾರಿ ಎನಿಸಿಕೊಂಡ ದಾದಾ ಪೀರ್ ಬಾಬಯ್ಯಗಳನ್ನು ನಿಲ್ಲಸಿ, ಹೂವಿನ ಹಾರ ಹಾಕಿ, ಕುಂಕುಮ ಹಚ್ಚಿ, ಅವುಗಳ ಮುಂದೆ ಕಡ್ಲೆಪುರಿ ಯನ್ನು ಇಟ್ಟು, ಊದುಗಡ್ಡಿ ಹಚ್ಚಿ ಪೂಜೆಮಾಡಿ, ಕಡ್ಲೆಪುರಿಯನ್ನು ಪ್ರಸಾದಂತೆ ಹಂಚುತ್ತಾನೆ. ಇದು ಹಿಂದೂ ಮುಸಲ್ಮಾನರು ಸೇರಿ ಮಾಡುವ ಹಬ್ಬ. ಅನೇಕ ದಿನಗಳ ವರೆಗೆ ನಡೆಯುತ್ತದೆ.

ಚಾವಡಿಯ ಮುಂದೆ ಒಂದು ದೊಡ್ಡ ಗುಂಡಿ ತೋಡಲಾಗುತ್ತದೆ. ಅದಕ್ಕೆ ಅಲಾವ್ ಎನ್ನುತ್ತಾರೆ, ಅಲ್ಲಿ ಒಣಕಟ್ಟಿಗೆ ಜೋಡಿಸಿ ಬೆಂಕಿ ಹಾಕಲಾಗುತ್ತದೆ, ಗುಂಡಿಯ ಸುತ್ತಾ ತಮಟೆ ಶಬ್ದಕ್ಕೆ ಊರ ಜನ ಕುಣಿಯುತ್ತಾರೆ.

ಗುಂಡಿ ತೋಡಲು ಮೊದಲು ಗುದ್ದಲಿ ಪೂಜೆ ಮಾಡಬೇಕು, ಅದು ಚಂದ್ರ ಕಾಣಿಸಿದ ಮೊದಲ ದಿನ ಮಾಡಲಾಗುತ್ತದೆ. ಗುದ್ದಲಿ ಪೂಜೆ ಮೊದಲು ಮಾಡಲು ಎರಡು ಪ್ರಬಲ ಜಾತಿಯವರು ಹೊಡೆದಾಡಿಕೊಂಡಿದ್ದುಂಟು. ಸರ್ಕಾರದವರು ರಸ್ತೆಗೆ ಹಾಕಿದ್ದ ಚಿಕ್ಕ ಚಿಕ್ಕ ಕಲ್ಲುಗಳನ್ನು ಒಬ್ಬರಿ ಗೊಬ್ಬರು ತೂರಿಕೊಂಡು ಖಾಲಿ ಮಾಡಿ ಕೊನೆಗೆ ರಸ್ತೆ ಆಗದಂತೆ ಮಾಡಿಕೊಂಡಿದ್ದೂ ಉಂಟು. ಊರಿನ ಹಳೆ ಪೈಲವಾನ್ ಎನ್ನಿಸಿಕೊಂಡಿದ್ದ ಲಿಂಗೇಗೌಡ ಕಚ್ಚೆ ಹಾಕಿ ನೇಗಿಲನ್ನು ಎತ್ತಿಕೊಂಡು ಹೊಡೆಯಲು ಬಂದಾಗ, ಅದನ್ನೇ ಕಿತ್ತು ಕತ್ತಿಗೆ ಒಂದು ಕೊಟ್ಟಾಗ ಅಯ್ಯೋಪ್ಪೂ ಎಂದು ಅಲ್ಲಿಂದ ಓಡಿದ್ದು ನೆನೆಸಿಕೊಂಡು ಜನ ಈಗಲೂ ನಗಾಡುತ್ತಾರೆ. ಅಂತೂ ಇಂತೂ ಪಂಚಾಯಿತಿ ಮಾಡಿ ಇಬ್ಬರ ಜಾತಿಯವರು ಒಂದೊಂದು ವರ್ಷ ಗುದ್ದಲಿ ಪೂಜೆ ಮಾಡಿ ಎಂದು ತೀರ್ಪು ಮಾಡಿದ್ದರು.

ಬಾಬಯ್ಯನ ಹಬ್ಬ ಎಂದರೆ ಕುಣಿತ, ಏಳೆಂಟು ಜನ ತಮಟೆ ಹೊಡೆದು ಹಿಂದೆ ಹಿಂದೆ ಹೋಗುತ್ತಿದ್ದರೆ , ಅವರ ಮುಂದೆ ಆರೇಳು ಸಾಲು ಮಾಡಿಕೊಂಡು ಉತ್ಸಾಹಿ ಜನ ತಮಟೆ ತಾಳಕ್ಕೆ ತಕ್ಕಂತೆ ಜಗ್ ಜಗ್ಗಣಿಕ ಜಗ್, ಜಗ್ಗಣಿಕ ಜಗ್, ಜಗಣ ಜಗಣ ಜಗ್ಗಣಿಕ ಜಗ್ ಎಂದು ಕುಣಿಯುತ್ತಾ ಮುಂದೆ ಮುಂದೆ ಹೋಗುತ್ತಿರುತ್ತಾರೆ. ಅವರಷ್ಟು ಜೋರಾಗಿ ಕುಣಿಯಲಾಗದವರು ಕೊನೆ ಸಾಲು ಮಾಡಿಕೊಂಡು ನಿಧಾನವಾಗಿ ಕುಣಿಯುತ್ತಾರೆ. ಎಲ್ಲದಕ್ಕೂ ಕೊನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಕುಣಿಯುತ್ತಾರೆ. ಕೆಲವು ಗಂಡಸರು ಹೆಣ್ಣಿನ ವೇಷ ಹಾಕಿಕೊಂಡು ಕುಣಿಯುತ್ತಾರೆ, ಕೆಲವು ಕಪ್ಪಗಿನ ಗೊರವಯ್ಯನ ವೇಷ ಹಾಕಿಕೊಂಡು ದಾರಿಯಲೆಲ್ಲಾ ಕುಪ್ಪಳಿಸಿ ಮಕ್ಕಳನ್ನು ಹೆದರಿಸುತ್ತಿರುತ್ತಾರೆ. ಹೀಗೆ ಒಂದು ಗುಂಪು ಕಟ್ಟಿಕೊಂಡು ಬೇರೆ ಬೇರೆ ಊರುಗಳಿಗೆ ಹೋಗಿ ಕುಣಿದು ಬರುತ್ತಾರೆ. ಅವರು ಊರಿಗೆ ತಿರುಗಿ ಬಂದಾಗ ಯುದ್ಧಕ್ಕೆ ಹೋಗಿ ಗೆದ್ದು ಬಂದ ರಾಜರಿಗೆ ಸಿಗುತ್ತಿದ್ದ ಆತಿಥ್ಯ ಸಿಗುತ್ತ ದೆ. ಹೀಗೆ ಕೆಲವುದಿನ ಹಬ್ಬ ನಡೆಯುತ್ತದೆ, ಕೊನೆಯದಿನ ಗುದ್ದಲಿ ಪೂಜೆ ಮಾಡಿ ತೋಡಿದ್ದ ದೊಡ್ಡ ಗುಂಡಿಗೆ ಬೆಂಕಿ ಹಾಕಿ ಸುತ್ತಲೂ ಬೆಳಗಿನಜಾವದವರೆಗೂ ಕುಣಿಯುತ್ತಾರೆ. ನಂತರ ಬಾಬಯ್ಯಗಳನ್ನು ಊರ ಹೊರಗಡೆ ತೆಗೆದು ಕೊಂಡು ಹೋಗಿ ಯುದ್ಧ ಮಾಡಿದಂತೆ ಮಾಡಿ, ಯುದ್ಧದಲ್ಲಿ ಬಾಬಯ್ಯಗಳು ಸತ್ತವೆಂದು ಅಲ್ಲಿಯೇ ಮಲಗಿಸಿ, ಮೊಸರನ್ನವನ್ನು ತಿಂದು, ಬಾಬಯ್ಯಗಳ್ಳನ್ನು ಬಟ್ಟೆಯಲ್ಲಿ ಸುತ್ತಿ, ಅಲ್ವಿದಾಯೋ ಎಂದು ದುಃಖಭರಿತರಾಗಿ ಹಾಡಿಕೊಳುತ್ತಾ ಊರಿಗೆ ಬಂದು ಬಾಬಯ್ಯಗಳನ್ನು ಬಾವಿಯಲ್ಲಿ ಹಾಕುತ್ತಾರೆ. ಮುಂದಿನ ವರುಷದವರಿಗೆ ಅವುಗಳ ವಾಸ ಬಾವಿಯಲ್ಲಿ.

ಈ ಸಲ ಚಿರುತೆ ಕಾಟದಿಂದ ಬಾಬಯ್ಯನ ಹಬ್ಬ ಮಾಡುವುದೋ, ಬೇಡವೋ ಎಂದು ಯೋಚಿಸುತಿದ್ದ ಊರ ಜನರಿಗೆ ಧೈರ್ಯ ಹೇಳಿದವರು ಊರಿಗೆ ಬಂದಿದ್ದ ಆ ಮೂವರು. ಆ ದೈರ್ಯದಿಂದ ಬಾಬಯ್ಯನ ಹಬ್ಬವನ್ನು ಅದ್ಧೂರಿಯಾಗಿ ಮಾಡಿ ಮುಗಿಸಿದರು.

ಹಬ್ಬ ಮುಗಿದ ಮೂರನೇ ದಿನ ಬೆಳ್ಳಿಗ್ಗೆ ಬೇವಿನ ಮನೆಯ ಹನುಮಕ್ಕ ಓ ಎಂದು ಕೂಗಿಕೊಳ್ಳುತ್ತ ಚೀರಾಡುತ್ತಿದ್ದುದು ಊರ ಜನರ ಕಿವಿಗೆ ಬಿತ್ತು, ಏನು ಎಂದು ವಿಚಾರಿಸಿದಾಗ ತಿಳಿದಿದ್ದು, ಹನುಮಕ್ಕನ ಮೇಕೆ ಕಾಣೆಯಾಗಿದೆ ಎಂದು. ಇದು ಚಿರುತೆ ಕೆಲಸ ಎಂದು ತಿಳಿದ ಊರಜನ ಕಂಗಾಲಾಗಿ ನಡುಗಿ ಬಿಟ್ಟರು. ಮತ್ತೆರೆಡು ದಿನದಲ್ಲಿ ಬೇರೆ ಬೇರೆ ಮನೆಯ ಹಸು, ಕರು ಮಾಯವಾದವು.

ಊರಜನ ಆಂಜನೇಯ ದೇವಸ್ಥಾನದಲ್ಲಿ ಸಭೆ ಸೇರಿದರು. ಆದಿನ ಊರ ಪೂಜಾರಿಗೆ ದೇವರು ಬರುವ ದಿನವಾದ್ದರಿಂದ, ದೇವರ ಸಹಾಯವನ್ನು ಕೇಳಲು ನಿರ್ಧರಿಸಿದರು. ಮೊದಲ ಪೂಜೆ ಮುಗಿದಮೇಲೆ, ಕೆಳಗೆ ಕುಳಿತ ಪೂಜಾರಪ್ಪ ನಿಧಾನವಾಗಿ ತಲೆ ತಿರುಗಿಸ ತೊಡಗಿದ, ಆಗಾಗ ಹೂಂಕಾರ ಹಾಕತೊಡಗಿದ. ತಲೆ ತಿರಗಿಸುವುದು ಒಂದು ಹದಕ್ಕೆ ಬಂದಮೇಲೆ ರಂಗೇಗೌಡರು ಎದ್ದು ನಿಂತು "ಸ್ವಾಮೀ" ಎಂದರು.

"ಏನು ಹೇಳು"

" ನಿನಗೆ ತಿಳಿದಿದೆಯಲ್ಲಾ ಸ್ವಾಮೀ, ಚಿರುತೆ ವಿಷಯ, ಏನು ಮಾಡೋದು"

" ನನ್ನ ಸವಾರಿ ಮಾಡಿ ತುಂಬಾ ದಿನ ಆಯಿತು, ಹಬ್ಬ ಮಾಡಿ, ನನ್ನನ್ನು ಆಭರಣಗಳಿಂದ ಸಿಂಗಾರ ಮಾಡಿ, ಊರಮೆರವಣಿಗೆ ಮಾಡಿ, ಎಲ್ಲಾ ಸರಿಹೋಗ್ತದೆ'

" ಸರಿ ಸ್ವಾಮೀ'

ಸ್ವಾಮಿಯ ಅಪ್ಪಣೆಯಂತೆ ಊರಜನ ಹಬ್ಬಕ್ಕೆ ಸಿದ್ಧವಾದರು. ಊರ ಪೂಜಾರಪ್ಪ ರಂಗೇಗೌಡರ ಜತೆ ಸೇರಿ ಕೊಡಿಗೇನಹಳ್ಳಿ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದ ದೇವರ ಬಂಗಾರದ ಆಭರಣಗಳನ್ನು ತಂದರು. ಹಬ್ಬದ ದಿನ ಬಂದೇ ಬಂತು. ದೇವರಿಗೆ ಸಿಂಗಾರಮಾಡಿ, ಊರಲ್ಲಿ ಮೆರವಣಿಗೆ ಮಾಡಲಾಯಿತು. ರಾತ್ರಿ ದೇವರಿಗೆ ಮಹಾ ಮಂಗಳಾರತಿ ಮಾಡಿ ನೈವೇದ್ಯ ಇಡಲಾಯಿತು. ಆ ನಡುವೆ ಯಾವುದೇ ಅಪಾಯ ಕಾಣಿಸಲಿಲ್ಲ, ದೇವರ ಪೂಜೆ ಅಂದುಕೊಂಡಿದ್ದು. ಅಪಾಯ ಆಗದಿದ್ದದ್ದು ಜನರಿಗೆ ಧೈರ್ಯ ತಂದು ಕೊಟ್ಟಿತು.

ಆದರೆ ಆ ದಿನ ರಾತ್ರಿ ಪಕ್ಕದ ಊರಿನಿಂದ ವಿಷಯ ಬಂತು, ಚಿರತೆ ಕಾಣಿಸಿತು ಎಂದು. ಎಲ್ಲಾ ಕಡೆ ಸುತ್ತುತ್ತಿದೆ, ಯಾವ ಊರಿಗಾದರೂ ಬರಬಹದು ಎಂದು. ಊರಜನ ಮತ್ತೆ ಸೇರಿದರು. ಊರನ್ನು ಕಾಯುತಿದ್ದ ಮೂವರು, "ನಾವು ರಾತ್ರಿಯೆಲ್ಲಾ ಊರ ಸುತ್ತಾ ತಿರುಗುತ್ತಾ ಕಾವಲು ಕಾಯುತ್ತೇವೆ,ಚಿರುತೆ ಕಾಣಿಸಿದರೆ ತಮ್ಮ ಬಂದೂಕಿನಿಂದ ಸುಡುತ್ತೇವೆ, ಆದರೆ ಊರಜನ ಯಾರೂ ಹೊರಗಡೆ ಇರಬಾರದು, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಬಾಗಿಲು ಭದ್ರ ಪಡಿಸಿಕೊಂಡು ಇರಬೇಕು. ಯಾವುದೇ ಗಲಾಟೆ ಮಾಡಬಾರದು. ಬಂದೂಕಿನ ಶಬ್ದ ಕೇಳಿದರೂ ಹೊರಗೆ ಬರಬಾರದು. ನಮ್ಮ ಬಂದೂಕಿನ ಗುಂಡು ಯಾರಿಗಾದರೂ ತಗುಲಬಹುದು, ನಮ್ಮ ಜೀಪಿನ ಶಬ್ದ ಕೇಳಿದರೂ ಹೊರಗಡೆ ಬರಬೇಡಿ" ಎಂದರು.

ಊರಜನ ಸರಿ ಎಂದು, ಊರೆಲ್ಲಾ ಡಂಗೂರ ಬಾರಿಸಿದರು. ರಾತ್ರಿ ಎಲ್ಲರೂ ತಮ್ಮ ತಮ್ಮ ಮನೆ ಸೇರಿಕೊಂಡರು. ಪೂಜಾರಪ್ಪ ದೇವಸ್ಥಾನಕ್ಕೆ ಬೀಗ ಹಾಕಿ ಮನೆ ಸೇರಿಕೊಂಡ.

ರಾತ್ರಿ ಒಂದು ಹೊತ್ತಲ್ಲಿ ನಾಲ್ಕೈದು ಸಲ ಗುಂಡಿನ ಶಬ್ದ ಕೇಳಿಸಿತು. ಜನ ಚಿರುತೆ ಕಥೆ ಮುಗಿಯಿತು ಎಂದುಕೊಂಡರು. ಆಗಾಗ ಜೀಪಿನ ಶಬ್ದವೂ ಕೇಳಿಸಿತು. ಬೆಳಗಿನ ಜಾವದ ಹೊತ್ತಿಗೆ ಎಲ್ಲವೂ ಶಾಂತವಾಯಿತು, ಬೆಳಕು ಹರಿದಾಗ ಜನ ಒಬೊಬ್ಬರಾಗಿ ಮನೆಯಿಂದ ಹೊರಗೆ ಬಂದರು. ಎಲ್ಲರೂ ಹೊರ ಬಂದು ನೋಡಿದಾಗ ಜೀಪಾಗಲೀ , ಆ ಮೂವರು ಮಿಲ್ಟ್ರಿಯವರಾಗಲಿ ಕಾಣಿಸಲಿಲ್ಲ. ಎಲ್ಲರಿಗೂ ಅನುಮಾನವಾಯಿತು, ಪೂಜಾರಪ್ಪ ದೇವಸ್ಥಾನದ ಹತ್ತಿರ ಓಡಿದ. ಅಲ್ಲಿ ನೋಡಿದರೆ ದೇವಸ್ಥಾನದ ಬಾಗಿಲು ಪೂರಾ ತೆರೆದಿತ್ತು, ದೇವರ ಮೇಲಿದ್ದ ಆಭರಣಗಳು ಮಾಯವಾಗಿದ್ದವು.

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,

More About Author