Poem

ಕೋವಿಡ್ ಗುಮ್ಮ

(ಪಂಜೆಯವರ ಕ್ಷಮೆ ಕೋರಿ)

ಬಂತೈ ಬಂತೈ ಇದೊ ಇದೊ ಬಂತೈ
ಗುಡು ಗುಡು ಗುಮ್ಮ ಕೋವಿಡ್ ಗುಮ್ಮ\

ಗಂಟಲನುಬ್ಬಿಸಿ ಕೆಮ್ಮಿಸಿ ದಮ್ಮಿಸಿ
ಪುಪ್ಪುಸಗಳ ಕಲುಷಿತಗೊಳಿಸಿ
ಎಂಟಿಂಚಿನ ಎದೆ ಝಲ್ಲೆನಿಸಿ

ಬಂತೈ ಬಂತೈ ಇದೊ ಇದೊ ಬಂತೈ
ಗುಡಗುಡು ಗುಮ್ಮ ಕೋವಿಡ್ ಗುಮ್ಮ

ಸುಡುಸುಡು ಜ್ವರ ಫಕಫಕ ಕೆಮ್ಮು
ಅಪ್ಪಗೆ ಅಮ್ಮಗೆ ತಾತಗೆ ಅಜ್ಜಿಗೆ
ಕುಡಿ ಕೂಸಿಗೆ ಆಡು ಮಕ್ಕಳಿಗೆ

ಬಂತ್ಯ ಬಂತೈ ಇದೊಇದೊ ಬಂತೈ
ಗುಡುಗುಡು ಗುಮ್ಮ ಕೋವಿಡ್ ಗುಮ್ಮ

ಬಡಗಲದಿಂದ ಬಂದಿಹ ಪೆಡಂಭೂತ
ಇದು ನಿಜದ ಗುಮ್ಮ
ಮೃತ್ಯು ಇದರ ಮರ್ಮ

ಬಂತೈ ಬಂತೈ ಇದೊಇದೊ ಬಂತೈ
ಗುಡುಗುಡು ಗುಮ್ಮ ಕೋವಿಡ್ ಗುಮ್ಮ

ಬಡವ ಬಲ್ಲಿದ ಜಾತಿಧರ್ಮಗಳ ಭೇದವ ಅಳಿಸಿ
ಸಿಎಂ ಸಿದ್ದು ಶಾ ಮಾಲತಿ ಕೀರುತಿ ಬ್ಯಾರಿ
ಅಯ್ಯೋ ಯಾರನೂ ಬಿಡದ ಹೆಮ್ಮಾರಿ

ಬಂತೈ ಬಂತೈ ಇದೊ ಇದೊ ಬಂತೈ
ಗುಡು ಗುಡು ಗುಮ್ಮ ಕೋವಿಡ್ ಗುಮ್ಮ,

ಹೊಸತಿದು ಬೇನೆ ಚೀನೀ ಸೋಂಕಿದು
ಮದ್ದಿಲ್ಲ ಇದಕೆ: "ಅಯ್ಯಯ್ಯೋ"
ಬರಬೇಕಿದೆ ಹೊಸ ಮದ್ದು.

ಜನ ಕಂಗಾಲಾದರು ವಿಹ್ವಲರಾದರು ಜನ ನಾಯಕರು
ಕೆಂಪುಕೋಟೆ ಬಾರಿಸಿತು ಅಪಾಯದ ಗಂಟೆ
ಚಪ್ಪಾಳೆ ಮೋಂಬತ್ತಿ ಶಂಖ ಜಾಗಟೆ ಮೊಳಗಿದವು

ಬಂತೈ ಬಂತೈ ಇದೊ ಇದೊ ಬಂತೈ
ಗುಡು ಗುಡು ಗುಮ್ಮ ಕೋವಿಡ್ ಗುಮ್ಮ

ಪ್ರಧಾನಿಗಳು ಸೇನಾನಿಯಾದರು
ಮುಖ್ಯ ಮಂತ್ರಿಗಳು ಹಿಂಬಾಲಕರಾದರು
ಮೊಳಗಿತು ಪಾಂಚಜನ್ಯ:"ಲಾಕ್ ಡೌನ್ ಲಾಕ್ ಡೌನ್"

ದಿಲ್ಲಿಯ ರಾಜಬೀದಿಗಳಲ್ಲಿ ಊರು ಕೇರಿಗಳಲ್ಲಿ
ಬೀಗಗಳ ಜಡಿದರು, ಬೀದಿಗಳು ಬರಿದಾದವು
ಗೃಹಬಂದಿಗಳಾದರು ಮಂದಿ

ಬಂತೈ ಬಂತೈ ಇದೊ ಇದೊ ಬಂತೈ
ಗುಡು ಗುಡು ಗುಮ್ಮ ಕೋವಿಡ್ ಗುಮ್ಮ

ಬೀದಿಗೆ ಬಿದ್ದರು ವಲಸಿ ಕೂಲಿ ಕಾರ್ಮಿಕರು
ಮಾಯಾನಗರಿಯ `ಮಾಯೆ' ತೊರೆದು
ಮಣ್ಣಿನರಮನೆಗೆ ಅವರ ಪಯಣ

ಕಾದುನಿಂತರು
ಚುಕುಬುಕು ರೈಲು ಬುಸುಬುಸು ಬಸ್ಸು ಬಂದೀತೆ?
ಎಂದು ಕೈಮರದಲ್ಲಿ ಕಾದು ನಿಂತರು

ಬಂತೈ ಬಂತೈ ಇದಿ ಇದೊ ಬಂತೈ
ಪಂಜೆಯವರ ಗಾಳಿಯ ನಾಚಿಸಿ
ಬಂತೈ ಬಂತೈ ಇದೊ ಇದೊ ಬಂತೈ
ಗುಡುಗುಡು ಗುಮ್ಮ ಕೋವಿಡ್ ಗುಮ್ಮ.

ಜಿ.ಎನ್. ರಂಗನಾಥ ರಾವ್

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.  

ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದರು. ತೂಕಬದ್ಧ ಸಾಹಿತ್ಯ ವಿಮರ್ಶೆಗೂ ಹೆಸರಾಗಿದ್ದ ಅವರು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರೂ ಹೌದು. ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕಲಿಕೆಗೆ ಸಹಾಯವಾಗುವ ಮಹತ್ವದ ಕೃತಿಗಳನ್ನೂ ರಚಿಸಿದ್ದಾರೆ. ಅವರು ವಾರ್ತಾ ಭಾರತಿ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ ’ನೇಸರ ನೋಡು ನೇಸರ ನೋಡು’ ಎಂಬ ಅಂಕಣ ಅಷ್ಟೇ ಖ್ಯಾತಿಗಳಿಸಿತ್ತು. 81ವರ್ಷಗಳ ತುಂಬು ಜೀವನ ನಡೆಸಿದ ರಂಗನಾಥರಾವ್ ವಯೋಸಹಜ ಅನಾರೋಗ್ಯದಿಂದ  2023 ಅಕ್ಟೋಬರ್ 09ರ ಸೋಮವಾರದಂದು ನಿಧನರಾದರು.

ಕೃತಿಗಳು: ಹೊಸ ತಿರುವು, ಮಾಸ್ತಿಯವರ ನಾಟಕಗಳು, ಒಳನೋಟ, ಹಿಂದಣ್ಣ ಹೆಜ್ಜೆ, ಅನ್ಯೋನ್ಯ, ಗುಣ- ದೋಷ ಮುಖ್ಯ (ವಿಮರ್ಶಾ ಕೃತಿಗಳು). ಶೇಕ್ಸ್ ಪಿಯರ್‍ನ ರೋಮಿಯೋ ಜೂಲಿಯಟ್ ಮತ್ತು ಆಂಟನಿ ಕ್ಲಿಯಾಪಾಟ್ರ, ಬ್ರೆಕ್ಟಮ ಕಕೇಷಿಯನ್ ಚಾಕ್ ಸರ್ಕಲ್, ಅನ್ವಿಯ ಅಂತಿಗೊನೆ, ಜೀನ್ ಜೆನೆಯ ದಿ ಬ್ಲ್ಯಾಕ್ಷ್, ಟಾಲ್ ಸ್ಟಾಯ್ನ ಡೆತ್ ಆಫ್ ಇವಾನ್ ಇಲಿಚ್, ಸೋಲ್ಜೆನಿತ್ಸಿನ್ನ ಇವಾನ್ ದೆನಿಸೊವಿಚ್, ಕಾಫ್ಕ ಕತೆಗಳು, ಓ ಹೆನ್ರಿ ಕತೆಗಳು, ಜೆ.ಡಿ ಬರ್ನಾಲ್ನ ಸೋಶಿಯಲ್ ಸೈನ್ಸ್ ಇನ್ ಹಿಸ್ಟರಿ, ರಾಮಚಂದ್ರ ಗುಹ ಅವರ ಇಂಡಿಯಾ ಆಫ್ಟರ್‍ ಗಾಂಧಿ(ಬಾಪೂ ನಂತರದ ಭಾರತ), ಮೇಕರ್ಸ್ ಆಫ್ ಮಾಡರ್ನ್ ಇಂಡಿಯಾ(ನವಭಾರತದ ನಿರ್ಮಾಪಕರು), ಪೇಟ್ರಿಯೆಟ್ಸ್ ಅಂಡ್ ಪಾರ್ಟಿಸಾನ್ಸ್( ದೇಶಪ್ರೇಮಿಗಳು ಮತ್ತು ಪಕ್ಷಪಾತಕರು. ಗಾಂಧಿ ಬಿಫೋರ್‍ ಇಂಡಿಯಾ( ಗಾಂಧಿ ಮಹಾತ್ಮರಾದುದು) ಮತ್ತು ಖಲೀಲ್ ಗಿಬ್ರಾನ್ರ ಕಾಲಾತೀತ ವಿಖ್ಯಾತ ಖಲೀಲ್ ಗಿಬ್ರಾನ್( ಅನುವಾದಿತ ಕೃತಿಗಳು)

ಪ್ರಶಸ್ತಿ ಪುರಸ್ಕಾರಗಳು: ಅವರಿಗೆ 2009ನೇ ಸಾಲಿನ ಖಾದ್ರಿ ಶಾಮಣ್ಣ ಪ್ರಶಸ್ತಿ ಹಾಗೂ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಕುವೆಂಪು ಭಾಷಾಭಾರತಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ಟೀಎಸ್ಸಾರ್‍ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಸಾಹಿತ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಸಂದಿದೆ.

 

More About Author