Poem

ಈ ರಾತ್ರಿ ಬುದ್ಧನಿಗಾಗಿ

ಈ ರಾತ್ರಿ ಬುದ್ಧನಿಗಾಗಿ ಕಾಯುತ್ತ ಕೂತೆ
ಬುದ್ಧ ಬರಲಿಲ್ಲ ನೀನು ಬಂದೆ
ಎಲೆಗಳು ಉದುರಿವೆ ಹಳದಿ ಚಿಟ್ಟೆಗಳಾಗಿ

ದೀಪ ಹೊತ್ತಿದ ಒಂಟಿಮನೆ ನಿನ್ನ ಡೇರೆಯಂತಲ್ಲ
ಕಾಡುಜೇನು ಕಾಡುಮೊಲ ಇಲ್ಲಿಲ್ಲ
ರಕ್ತ ಹಕ್ಕಳೆಗಟ್ಟಿದ ಸಮವಸ್ತ್ರ ಇನ್ನೂ ಸುಂದರವಾಗಿದೆ
ಹೆದರಬೇಡ ಔಷಧಿ ಕಟ್ಟುತ್ತೇನೆ ಗಾಯಕ್ಕೆ

ಕೈ ಬಿಟ್ಟರೆ ಹಿಡಿದುಕೊಳ್ಳಲು
ಇನ್ನೊಂದು ಕೈ ಇಲ್ಲ ನನಗೆ

ಒಂದು ಸಲ ಮಾತಾಡು ಒಂದೇ ನಿಮಿಷ ಮಾತಾಡು
ಎಂತಹ ಮುಳ್ಳಿಡಿದ ಮರಕ್ಕೂ
ಒಂದು ಕಾಲಕ್ಕೆ ಹೂ ಅರಳುತ್ತವೆ

ತೋಳದಿಂಬು ಮಡಿಲಹಾಸಿಗೆ ಹೆರಳಚಾದರ ಬೇಡ
ನಾನು ಬೇಡಿದ್ದು ಒಲವಿನ ಪಿಸುನುಡಿಗಳಿಗಾಗಿ
ಕೇವಲ ಒಂದು ನಿಮಿಷದ ಭಿಕ್ಷೆ
ಬೈಯಲ್ಲಿಕ್ಕಾದರೂ ಬಾಯಿ ತೆರಿ ಎಂದಿನಂತೆ

ಮಕ್ಕಳು ಕೇಳಿದರೆ
ಊರೂರಿಗೊಬ್ಬ ಚಂದ್ರ ಊರೂರಿಗೊಬ್ಬ ಸೂರ್ಯ ಎನ್ನುತ್ತಾರೆ
ನನ್ನ ಜೊತೆಗೊಬ್ಬ ಚಂದ್ರನಿದ್ದಾನೆಂದು ಯಾರಿಗೆ ಹೇಳಲಿ
ನನ್ನ ಜೊತೆಗೊಬ್ಬ ಸೂರ್ಯನಿದ್ದಾನೆಂದು ಹೇಗೆ ಹೇಳಲಿ

ಒಂದು ಮಂದಹಾಸಕ್ಕಾಗಿ
ಒಂದು ರೂಪಾಯಿ ಹಾಕಿದ ಹಾಗೆ ಭಿಕ್ಷುವಿಗೆ
ಒಮ್ಮೆ ಮಾತಾಡು
ದೀಪದ ಸುತ್ತ ಚಲಿಸುವ ಬೆಳಕಿನ ಮಣಿಗಳು
ಮಿಣುಕು ಹುಳುಗಳಾಗಿ ಹಾರುವ ಬುದ್ಧನ ಕಣ್ಣುಗಳು

ಈ ದೇಹಕ್ಕೆ ಸಂಬಂಧ ಅರ್ಥಗಳಿರುವುದಿಲ್ಲ
ದೇಹಗಳು ಬೆತ್ತಲಾದರೂ
ಮನಸುಗಳು ಬೆತ್ತಲಾಗಲಿಲ್ಲ
ಇಡೀ ವಿಶ್ವದಲ್ಲಿ ನಾವೆಷ್ಟು ಕುಬ್ಜರು

ಈ ಜಗತ್ತಿನಲ್ಲಿ ನಿನಗಾಗಿ
ಒಂದು ಬಾಗಿಲು ರೆಪ್ಪೆ ತೆರೆದೇ ಇದೆ
ಒಂದು ಕೈಯಲ್ಲಿ ರೊಟ್ಟಿ ಇನ್ನೊಂದು ಕೈಯಲ್ಲಿ ಕೋವಿ ಹಿಡಿದು
ಹುಚ್ಚು ಪಿರಂಗಿಯಂತೆ ಕಣ್ಮರೆಯಾಗದಿರು ಕಾಡಿನಲಿ

ಢಮ್..... ಢಮಾರ್....
ಏನೋ ಸುಟ್ಟವಾಸನೆ ಗಾಳಿಯಲಿ

ಆರಿಫ್ ರಾಜಾ

2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ  ಆರಿಫ್‌ ರಾಜ ಅವರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಆರಕೆರಾ ಗ್ರಾಮದವರಾದರು. 1983 ಡಿಸೆಂಬರ್‌ 6ರಂದು ಜನಿಸಿದ ಅವರು ರಾಯಚೂರಿನ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಬಾಗಲಕೋಟೆಯ ಗವರ್ನಮೆಂಟ್ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜ್, ಇಳಕಲ್ ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಇವರು ಬರೆದಿರುವ ಹಲವು ಕವಿತೆಗಳು ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. ದಿನಕರ ದೇಸಾಯಿ ಪ್ರಶಸ್ತಿ, ಬೇಂದ್ರೆ ಪುಸ್ತಕ ಬಹುಮಾನ, ಗುಲ್ಬರ್ಗ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ. ಇವರು ಅನುವಾದಿತ ಕವಿತೆಗಳು ಪರ್ಷಿಯನ್ ಭಾಷೆಯಲ್ಲಿ ರಚಿತವಾದ ಭಾರತದ ಸಮಕಾಲೀನ ಕವಿತೆಗಳು ಸಂಕಲನದಲ್ಲಿ ಪ್ರಕಟಗೊಂಡಿವೆ.

ಸೈತಾನನ ಪ್ರವಾದಿ (2006), ಜಂಗಮ ಫಕೀರನ ಜೋಳಿಗೆ (2009), ಬೆಂಕಿಗೆ ತೊಡಿಸಿದ ಬಟ್ಟೆ (2012), ನಕ್ಷತ್ರ ಮೋಹ(2017) ಎಂಬ ಹೆಸರಿನ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಭಾವನಾತ್ಮಕ ತಾಕಲಾಟವನ್ನು ಬಹುಸಂಸ್ಕೃತಿಯ ನೆಲೆಯಲ್ಲಿ ಪುನರ್‌ಸಂಘಟಿಸುವ ಇವರ ರಚನೆಗಳಲ್ಲಿ ಹೊಸ ನುಡಿಗಟ್ಟಿದೆ ಎಂದು ವಿಮರ್ಶಕರು ಗುರುತಿಸಿದ್ದಾರೆ.

More About Author