Poem

ಎರಡು ಜೀವ ಹನಿಗಳು

1.ದಿವ್ಯ ಕಾಮ

ಲಾರೆನ್ಸನ ಹಾವು
ನಮ್ಮಿಬ್ಬರನು ಬಿಗಿಯಾಗಿ ಬಳಸಿ
ಎರಡೆಳೆ ನಾಲಿಗೆಯಿಂದ
ಅಂಗುಲಂಗುಲ
ಮೈಯ್ಯ ನೆಕ್ಕುತ್ತಾ ಹೋದಂತೆ
ಪುಳಕಿತ
ಅಂಗುಲದಹುಳು
ಅತ್ಯುದ್ದಿಷ್ಟ ದಶಾಂಗುಲ ಚಾಚಿ
ಒದ್ದಾಡುತ್ತಿತ್ತು
ಪರಕಾಯ ಪ್ರವೇಶಕ್ಕೆ.

2. ನಿರೀಕ್ಷೆ

ಒಂದು ಸಾವಿನ ಸುದ್ದಿ
ಮೊದಲ ಪುಟದಲ್ಲಿ ಫಕ್ಕನೆ ತಲೆ ಎತ್ತಿ
ಏಳನೆ ಪುಟದ ಏಳನೇ ಕಾಲಮ್ಮಿನಲ್ಲಿ
ಬೆಳೆಯುತ್ತಾ ಹೋದಂತೆ
ಓದೋದುತ್ತಾ
ಕಾಯುತ್ತ
ಕುಳಿತಿದ್ದೇನೆ
ನನ್ನ ಸರದಿಗಾಗಿ-
ಪ್ರಜ್ಞೆ ಭಗ್ಗೆಂದು
ದಾಸರ ಎರವಿನ ಸಂಸಾರದ
ನೀರ ಮೇಲಣ ಗುಳ್ಳೆಗಳೊಡೆವ ಪರಿಯ
ಬೆರಗು ಕಂಗಳಿದ
ನೋಡುತ್ತಾನವನು..

-ಜಿ.ಎನ್.ರಂಗನಾಥ ರಾವ್

ಜಿ.ಎನ್. ರಂಗನಾಥರಾವ್

ಹಿರಿಯ ಲೇಖಕ, ಪತ್ರಕರ್ತ ಜಿ.ಎನ್.ರಂಗನಾಥ ರಾವ್ ಹುಟ್ಟಿದ್ದು 1942 ರಲ್ಲಿ, ಬೆಂಗಳೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಅವರು ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದಾರೆ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದಾರೆ. ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧಗಳನ್ನು ರಚಿಸಿರುವ ಅವರದು ತೂಕಬದ್ಧ ಸಾಹಿತ್ಯ ವಿಮರ್ಶೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಅವರು ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಮಹತ್ವದ ಕೃತಿ ರಚನೆ ಮಾಡಿದ್ದಾರೆ. ಲೇಖಕರು ವಾರ್ತಾ ಭಾರತಿ ದಿನಪತ್ರಿಕೆಯಲ್ಲಿ ’ನೇಸರ ನೋಡು ನೇಸರ ನೋಡು’ ಎಂಬ ಅಂಕಣ ಬರೆಯುತ್ತಿದ್ದರು.

ಕೃತಿಗಳು; ಹೊಸ ತಿರುವು, ಮಾಸ್ತಿಯವರ ನಾಟಕಗಳು, ಒಳನೋಟ, ಹಿಂದಣ್ಣ ಹೆಜ್ಜೆ, ಅನ್ಯೋನ್ಯ, ಗುಣ- ದೋಷ ಮುಖ್ಯ (ವಿಮರ್ಶಾ ಕೃತಿಗಳು). ಶೇಕ್ಸ್ ಪಿಯರ್‍ನ ರೋಮಿಯೋ ಜೂಲಿಯಟ್ ಮತ್ತು ಆಂಟನಿ ಕ್ಲಿಯಾಪಾಟ್ರ, ಬ್ರೆಕ್ಟಮ ಕಕೇಷಿಯನ್ ಚಾಕ್ ಸರ್ಕಲ್, ಅನ್ವಿಯ ಅಂತಿಗೊನೆ, ಜೀನ್ ಜೆನೆಯ ದಿ ಬ್ಲ್ಯಾಕ್ಷ್, ಟಾಲ್ ಸ್ಟಾಯ್ನ ಡೆತ್ ಆಫ್ ಇವಾನ್ ಇಲಿಚ್, ಸೋಲ್ಜೆನಿತ್ಸಿನ್ನ ಇವಾನ್ ದೆನಿಸೊವಿಚ್, ಕಾಫ್ಕ ಕತೆಗಳು, ಓ ಹೆನ್ರಿ ಕತೆಗಳು, ಜೆ.ಡಿ ಬರ್ನಾಲ್ನ ಸೋಶಿಯಲ್ ಸೈನ್ಸ್ ಇನ್ ಹಿಸ್ಟರಿ, ರಾಮಚಂದ್ರ ಗುಹ ಅವರ ಇಂಡಿಯಾ ಆಫ್ಟರ್‍ ಗಾಂಧಿ(ಬಾಪೂ ನಂತರದ ಭಾರತ), ಮೇಕರ್ಸ್ ಆಫ್ ಮಾಡರ್ನ್ ಇಂಡಿಯಾ(ನವಭಾರತದ ನಿರ್ಮಾಪಕರು), ಪೇಟ್ರಿಯೆಟ್ಸ್ ಅಂಡ್ ಪಾರ್ಟಿಸಾನ್ಸ್( ದೇಶಪ್ರೇಮಿಗಳು ಮತ್ತು ಪಕ್ಷಪಾತಕರು. ಗಾಂಧಿ ಬಿಫೋರ್‍ ಇಂಡಿಯಾ( ಗಾಂಧಿ ಮಹಾತ್ಮರಾದುದು) ಮತ್ತು ಖಲೀಲ್ ಗಿಬ್ರಾನ್ರ ಕಾಲಾತೀತ ವಿಖ್ಯಾತ ಖಲೀಲ್ ಗಿಬ್ರಾನ್( ಅನುವಾದಿತ ಕೃತಿಗಳು)

ಪ್ರಶಸ್ತಿ ಪುರಸ್ಕಾರಗಳು: ಅವರಿಗೆ 2009ನೇ ಸಾಲಿನ ಖಾದ್ರಿ ಶಾಮಣ್ಣ ಪ್ರಶಸ್ತಿ ಹಾಗೂ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಕುವೆಂಪು ಭಾಷಾಭಾರತಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ಟೀಎಸ್ಸಾರ್‍ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಸಾಹಿತ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಸಂದಿದೆ.

More About Author