Poem

ಗಜಲ್- ಮುಳ್ಳುಗಳ ಪಹರೆಯಲಿ

ಮುಳ್ಳುಗಳ ಪಹರೆಯಲಿ ಮಂದಾರ ತಣಿಯುತಿದೆ
ಸೀಮೆಗಳು ದಾಟಿ ಪ್ರೀತಿ ಸುಗಂಧ ಪಸರಿಸುತಿದೆ

ಉಸಿರು ಬಂಧಿಸುವ ವ್ಯರ್ಥ ಪ್ರಯತ್ನ ನಡೆಯುತಿದೆ
ಗಾಳಿಗೆ ಬಿರುಗಾಳಿಯಾಗಿಸುವ ಕ್ರಿಯೆ ಸಾಗುತಿದೆ

ಮರ್ಯಾದಾ ಹತ್ಯೆ ಒಲುಮೆಗೆ ಕಫನ್ ತೊಡಿಸುತಿದೆ
ಅಲೌಕಿಕ ಅನುಭೂತಿಗೆ ಜಾತಿ ನಂಜು ಸವರುತಿದೆ

ಅಗೋ ಅಲ್ಲಿ ಆ ದಮನಿತರ ಗುಡಿಸಲು ಸುಡುತಿದೆ
ಮಕ್ಕಳು ಕೂಡಿ ಆಡಿದ ತಪ್ಪಿಗೆ ಹಿಂಸೆ ವಿಜೃಂಭಿಸುತಿದೆ

ಮುಗ್ಧರನ್ನ ಶಿಕ್ಷಿಸುವ ಫರಮಾನ್ ಜಾರಿಯಾಗುತಿದೆ
ಪ್ರೇಮಿಗಳು ಸತ್ತರು ಅದೇ ಇತಿಹಾಸ ಮರುಕಳಿಸುತಿದೆ

ಅನುರಾಗಿಗಳ ದಾರಿಗೆ ಮುಳ್ಳಿನ ಮಳೆ ಸುರಿಯುತಿದೆ
ಎಷ್ಟೇ ತುಳಿದರೂ ಬಿಡದೇ ಪವಿತ್ರ ಪುಷ್ಪ ಅರಳುತಿದೆ

- ಅಶ್ಫಾಕ್ ಪೀರಜಾದೆ

ಅಶ್ಫಾಕ್ ಪೀರಜಾದೆ

ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು. 

ಕೃತಿಗಳು: ಪ್ರೇಮವೆಂದರೆ, ಜನ್ನತ್ ಮತ್ತು ಇತರ ಕಥೆಗಳು (ಕಥಾಸಂಕಲನಗಳು), ಮನೋಲೋಕ, ಒಂದು ಜೋಡಿ ಕಣ್ಣು, ನನ್ನೊಳಗಿನ ಕವಿತೆ (ಕವನ ಸಂಕಲನಗಳು)  

More About Author