Poem

ಗಲ್ಲದಗುಂಟ ತಿಳಿನೀರ ಹೊತ್ತು ದೂರಾದೆಯ ಹಂಸ..

ದೂರವೆಂದರೆ ಬಲು ದೂರೇನೂ ಅಲ್ಲಬಿಡು
ಹತ್ತಿರವಿದ್ದ ದೂರವಷ್ಟೇ ಎಂದು ಹೇಳಬೇಡ ಹಂಸ

ಇದು ಇನ್ನೂ ಅಪಾಯ ಎಲುವಿಲ್ಲದ ನನ್ನ ನಾಲಿಗೆ
ವಟವಟ ಒದರುವ ಹೊಂಡದ ಕಪ್ಪೆಯಂತೆ ಹಂಸ

ಪಂಚತಂತ್ರದ ಮೊಲವನು ನೋಡು ಹಿಂಗಾಲಿನ ಸಗತಿ
ಮುಂಗಾಲ ನೋಡಿ ಅಳುತಿದೆ ಹಂಸ

ಅವರವರ ಬುತ್ತಿ ಅವರವರೇ ಉಣ್ಣಬೇಕು
ದಕ್ಕಿದಷ್ಟು ದಾರಿಯಲಿ ಎಂದು ಹೇಳಬೇಡ ಹಂಸ

ದೂರ ಬಲು ದೂರ ಹೋಗುವುದೇ ನಿಜವಾದರೆ
ದಿನಕ್ಕೆ ಒಂದೇ ಸಲ ನೆಪ್ಪಾಗು ನನಗೂ ಕರುಳಿವೆ ಹಂಸ

'ಸಂಗ' ಬೇಕಾದರೆ ನಿನ್ನ ನಿರೀಕ್ಷೆ ಹುಸಿ ಮಾಡಿದ
ಹುಂಬತನಕೆ ಬೈದು ಜೊತೆಯಾಗು ಹಂಸ

-ಸಹಿ

 

ಸಂಗನಗೌಡ ಹಿರೇಗೌಡ

ಸಂಗನಗೌಡ ಹಿರೇಗೌಡ ಅವರು ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಂಬರಖೇಡದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ತತ್ವಪದಗಳ ಕಾವ್ಯ ಮೀಮಾಂಸೆ’ ವಿಚಾರದಲ್ಲಿ ಸಂಶೋಧನ ಕೈಗೊಂಡಿದ್ದಾರೆ. ಓದು, ಬರವಣಿಗೆ ಇವರ ಹವ್ಯಾಸ

More About Author