Story

ಗಾಂಧಿ ಚಿತ್ರದ ನೋಟು

ಆರು ತಿಂಗಳ ಹಿಂದಷ್ಟೇ ತಾರಕ್ಕನ ಸಣ್ಣ ಮಗ ಸುಧೀರನ ಹೆಂಡತಿ ಲೇಖಾ, ಆಸ್ಪತ್ರೆಯಲ್ಲಿ ತುಂಬ ಪ್ರಯಾಸ ಪಟ್ಟು ಹೆರಿಗೆ ನೋವು ತಿನ್ನುತ್ತಿದ್ದಳು. ಆ ಗಾಬರಿಯಲ್ಲಿ ’ಸುರುಳೀತ ಒಂದು ಜೀವ ಎರಡಾದರೆ, ಈ ಸರ್ತಿಯ ಚೌತಿಯಲ್ಲಿ ಗಣಪತಿಗೆ ಹಂಬೆ ಪೂಜೆ ಕಟ್ಟಿಸ್ತೇನೆ’ ಎಂದು ತಾರಕ್ಕ ಹೇಳಿಕೆ ಮಾಡಿಕೊಂಡಿದ್ದಳಂತೆ. ಹಾಗಾಗಿ ಸುಧೀರ ಮನೆಯ ಹಬ್ಬಕ್ಕೆಂದು ಸಂಸಾರವನ್ನು ಕರೆತಂದು ಎರಡೇ ದಿನ ಕಳೆದಿತ್ತು. ’ಕೆಲಸಕ್ಕೆ ಬರುವ ಗೋಪಜ್ಜಿಯ ಮನೆಯಲ್ಲಿ ರಾಶಿ ಬಾಳೆ ಸಸಿ ಉಂಟು, ಪೂಜೆಗೆಂದು ನಾನು ಹೇಳಿಟ್ಟಿದ್ದೇನೆ, ಅವಳು ಕಡಿಸಿದ್ದಾಳೋ ನೀನೊಮ್ಮೆ ಹೋಗಿ ನೋಡಿಕೊಂಡು ಬಾ’ ಎಂದು ತಾರಕ್ಕ ಸುಧೀರನಿಗೆ ಹೇಳಿದಳು. ಅದನ್ನು ಕೇಳಿಸಿಕೊಳ್ಳುತ್ತ, ಮನೆಯಲ್ಲೇ ಅಂಗಡಿ ವ್ಯವಹಾರ ನೋಡಿಕೊಂಡಿರುವ ತಾರಕ್ಕನ ಹಿರೀ ಮಗ ಚಂದಣ್ಣ, ’ಸುಮ್ನೇ ಅವನಿಗ್ಯಾಕೆ ಕಳಿಸುತ್ತೀ ? ತಾನೇ ತಂದು ಕೊಡುತ್ತೇನೆಂದು ಹೇಳಿ ಹೋಗಿದ್ದಾಳೆ ಅವ್ಳು’ ಎಂದ. ’ಆದ್ರೂ ಇವ್ನು ಒಮ್ಮೆ ಹೋಗಿ ಬರ್‍ಲಿ, ಅವಳು ತಡ ಮಾಡಿದರೆ ನಂತರ ಎಲ್ಲದಕ್ಕೂ ತಡವಾಗಿ ಬಿಡ್ತದೆ, ಅವ್ಳಿಗೆ ಬೇಗ ಬಂದು ಕೂಸಿಗೂ ಮೀಯ್ಸಿಕೊಡು ಎಂದು ಹೇಳಿದ್ದೇನೆ’ ಅಂದಳು. ಅಮ್ಮನ ಮಾತು ಒಪ್ಪಿಕೊಂಡ ಸುಧೀರ, ತೊಟ್ಟಿದ್ದ ಪಾಯಿಜಾಮ ಬನಿಯನ್ನಿನ ಮೇಲೆ ಒಂದು ಟಾವೆಲ್ಲು ಹೊದ್ದುಕೊಂಡು ಹೊರಗಿದ್ದ ಯಾರದೋ ಹವಾಯಿ ಚಪ್ಪಲಿ ಮೆಟ್ಟಿ, ಒಂದೇ ಫರ್ಲಾಂಗು ದೂರದಲ್ಲಿರುವ ಗೋಪಜ್ಜಿಯ ಗುಡಿಸಲಿನ ಕಡೆ ಹೆಜ್ಜೆ ಹಾಕಿದ.

ನಾಯಿಗೀಯಿ ಸಾಕಿದ್ದಾಳೋ ಎಂಬ ಎಚ್ಚರಿಕೆಯಿಂದಲೇ ಅಲ್ಲಲ್ಲಿ ನಿಲ್ಲುತ್ತ ದೆಣಪೆಯಿಂದ ಒಳಹೋಗಿ ಗೋಪಜ್ಜಿಯ ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ಸುಧೀರ ತನ್ನ ಹೆಜ್ಜೆಯ ಶಕ್ತಿಯೇ ಕುಂದಿದಂತೆ ಒಂದುಕ್ಷಣ ದಂಗಾಗಿ ನಿಂತ. ಒಂದು ಮೊರದಲ್ಲಿ ತೊಯ್ದು ಹೋಗಿದ್ದ ಹಲವು ನೋಟಿನ ರಾಶಿಗಳು ಅಂಗಳದ ಚುರುಕು ಬಿಸಿಲಿಗೆ ಒಣಗುತ್ತಿದ್ದವು. ತಕ್ಷಣವೇ ಸಾವರಿಸಿಕೊಂಡ ಸುಧೀರ, ನೋಡಿದರೂ ನೋಡದವನಂತೆ ಸದ್ದು ಮಾಡದೇ ಹಿಂತಿರುಗಿ ಬಂದುಬಿಟ್ಟ. ಮನೆಗೆ ಬಂದು ಹೊರಕಟ್ಟೆಯ ಮೇಲೆ ಸುಮ್ಮನೇ ಕೂತಿದ್ದರೂ ಆ ತೊಯ್ದ ನೂರರ ನೋಟುಗಳ ಚಿತ್ರವೇ ಅವನನ್ನು ಮುತ್ತಿಕೊಳ್ಳಲಾರಂಭಿಸಿತ್ತು.

ನಾನು ನಿನ್ನೆಯಷ್ಟೇ ಕಳೆದುಕೊಂಡ ಆ ದುಡ್ಡು, ನೂರರ ಇಪ್ಪತ್ತು ನೋಟುಗಳಿದ್ದವು ಅವು. ಹಬ್ಬದ ಖರ್ಚಿಗೆಂದು ಅಣ್ಣನಿಗೆ ಕೊಡಲು ತಂದದ್ದು. ಎಲ್ಲಿ ಇಟ್ಟಿದ್ದೇನೆಂದೇ ಮರೆತು ಹೋಗಿ ಎಲ್ಲ ಕಡೆ ಹುಡುಕಿ, ಬಸ್ಸಿನಲ್ಲೇ ಕಳೆದು ಕೊಂಡೆನೇನೋ ಎಂಬ ಅನುಮಾನ ಕಾಡಿ, ನಿರಾಶನಾಗಿ ನಂತರ ಇನ್ನೆಲ್ಲೋ ಬ್ಯಾಗಿನಲ್ಲಿ ಸಿಕ್ಕಿದ ಐದು ನೂರನ್ನಷ್ಟೇ ಅಣ್ಣನ ಕೈಗೆ ಹಿಡಿಸಿ ಮುಜುಗರ ಪಡುವ ಪ್ರಸಂಗ ಒದಗಿ ಬಂದಿತ್ತು. ಆ ದುಡ್ಡು ಕಳೆದ ಸುದ್ದಿಯನ್ನೇ ಎಲ್ಲರೂ ದೊಡ್ಡದು ಮಾಡಿ ಹಬ್ಬದ ಸಡಗರಕ್ಕೆ ಮಂಕು ಕವಿಯಲು ಬಿಡುವ ಮನಸ್ಸಿಲ್ಲದೇ ಸುಧೀರ, ಆ ವಿಷಯವನ್ನು ಯಾರಿಗೂ ಹೇಳದೇ ತಾನೊಬ್ಬನೇ ಅನುಭವಿಸಿ ಮರೆತು ಬಿಡಬೇಕೆಂದುಕೊಂಡಿದ್ದ. ಆದರೆ ಆ ಕಳೆದು ಹೋದ ದುಡ್ಡು ಹಾಗೂ ಈಗ ಕಂಡ ಗೋಪಜ್ಜಿಯ ಮನೆಯಂಗಳದಲ್ಲಿ ಒಣಗುತ್ತಿರುವ ಆ ನೋಟುಗಳು ಒಂದೇ ಇರಬಹುದೆಂದು ಯಾಕೋ ಸುಧೀರನಿಗೆ ತೀವ್ರವಾಗಿ ಅನ್ನಿಸತೊಡಗಿತು. ಕಾಣೆಯಾದ ದುಡ್ಡಿನ ಪ್ರಕರಣ ಹೀಗೆ ಬೇರೆಯದೇ ದಿಕ್ಕು ಹಿಡಿದುಕೊಂಡದ್ದು ಸುಧೀರನಿಗೆ ಅಚ್ಚರಿಯನ್ನೇ ತಂದಿತ್ತು. ಹೊಟ್ಟೆಯಲ್ಲಿ ಏನೋ ಸಂಕಟ. ದುಡ್ಡು ದುಡ್ಡೇ ಅಲ್ಲವೇ?

ನಿನ್ನೆ ಲೇಖಾ ಒಗೆಯಲು ಹಾಕಿದ ಆ ಕಪ್ಪು ಪ್ಯಾಂಟಿನ ಕಿಸೆಯಲ್ಲೇನಾದರೂ ಆ ದುಡ್ಡಿತ್ತೋ ಏನೋ ಅಂದುಕೊಂಡರೂ ಅದು ನನ್ನದೇ ದುಡ್ಡು ಅಂತ ನಾನು ಗೋಪಜ್ಜಿ ಅಪಹರಿಸಿದ್ದು ಕಣ್ಣಾರೆ ನೋಡದೇ ತೀಮಾನಿಸುವುದು ಹೇಗೆ? ಎಂದು ಕೊಳ್ಳುತ್ತ ಆ ಯೋಚನೆಯನ್ನೇ ತಲೆಯಿಂದ ಕೊಡವಿ ಹಾಕಲು ಪ್ರಯತ್ನಿಸುತ್ತ ಕೂತ ಸುಧೀರ.

ಚಂದಣ್ಣ ನಿನ್ನೆಯಷ್ಟೇ ಗಣಪತಿಯನ್ನು ತಂದು ಕೂಡಿಸಿದ ಟೇಬಲ್ಲಿನಲ್ಲಿದ್ದ ನಿನ್ನೆಯ ಗರಿಕೆ ಹೂವು ಅಗರಬತ್ತಿಯ ಬೂದಿಗಳೆಲ್ಲವನ್ನೂ ಕೊಡವಿ ಸ್ಡಚ್ಛಗೊಳಿಸುತ್ತಿದ್ದ. ತಾರಕ್ಕ ಎಣ್ಣೆ ಜಿಗುಟಿನ ಆರತಿ ತಟ್ಟೆ ಹಿತ್ತಾಳೆಯ ನೀಲಾಂಜನ ಗಂಟೆ ದೇವರ ತಂಬಿಗೆ ತಟ್ಟೆಗಳೆಲ್ಲವನ್ನೂ ಹುಣಸೆ ಹಣ್ಣಿನ ಮುದ್ದೆಯೊಂದಿಗೆ ಹೊರತಂದು ತಿಕ್ಕಲು ಇಡುತ್ತಿದ್ದಳು. ಆಗಷ್ಟೇ ಸ್ನಾನ ಮುಗಿಸಿ ಬಂದ ವಾಣಿ ಅತ್ತಿಗೆ ಅಡುಗೆ ಕೋಣೆಯಲ್ಲಿ ತೆಂಗಿನಕಾಯಿ ಒಡೆದು ಗ್ರೈಂಡರ್ ತೊಳೆದು ಮೊದಲ ಕಂತಿನ ಕೆಲಸ ಪ್ರಾರಂಭಿಸಿದ್ದಳು. ಚಂದಣ್ಣನ ಆರೇಳು ವರ್ಷದ ಸಣ್ಣ ಮಗ ದೀಪು ಹಾಸಿಗೆಯಿಂದೆದ್ದರೂ ಇನ್ನೂ ಸೋಫಾದಲ್ಲಿಯೇ ಬಿದ್ದು ಹೊರಳಾಡುತ್ತಿದ್ದ. ಹೈಸ್ಕೂಲಿಗೆ ಹೋಗುವ ದೊಡ್ಡ ಮಗ ಸಂತುವನ್ನು ಚಂದಣ್ಣನೇ ಗಣಪತಿಯ ಹಂಬೆ ಕಟ್ಟುವ ಕೆಲಸಕ್ಕೆಂದು ರೈತನಾದ ಬೀರನನ್ನು ಕರೆಯಲು ಒಕ್ಕಲ ಕೊಪ್ಪಕ್ಕೆ ಸೈಕಲ್ಲು ಕೊಟ್ಟು ಕಳಿಸಿದ್ದ.

ಸುಧೀರನ ಪತ್ನಿ ಲೇಖಾ ಆಗಷ್ಟೇ ಎಚ್ಚರಗೊಂಡ ತನ್ನ ಮಗುವಿಗೆ ಮೊಲೆಯೂಡಿಸಿ ಹೊರಕೋಣೆಯ ಒಂದು ಮೂಲೆಗೆ ಹಾಸಿದ ಚಾಪೆಯಲ್ಲಿ ಮಗುವನ್ನೆತ್ತಿ ಹಾಕಿ, ದೀಪುವನ್ನು ಎಬ್ಬಿಸುತ್ತ ’ಚೂರು ಪಾಪುವನ್ನು ಆಡಿಸುತ್ತ ಕೂಡೋ’ ಎಂದು ಕೇಳಿಕೊಳ್ಳುತ್ತಿದ್ದಳು. ಅವರೆಲ್ಲರಿಂದ ಬೇರೆಯಾಗಿ ಕೂತಿದ್ದ ಸುಧೀರನ ಒಳಗೊಂದು ವಿಚಿತ್ರವಾದ ಜಗತ್ತು ಸೃಷ್ಟಿಯಾಗುತ್ತಿತ್ತು.

ಸ್ವಲ್ಪ ಹೊತ್ತಿನ ಬಳಿಕ ಉದ್ದುದ್ದ ಸೀಳಿದ ಬಾಳೆ ತಿರುಳಿನ ಹೊರೆಯನ್ನು ತಲೆಯ ಮೇಲೆ ಹೊತ್ತು ಬಂದ ಗೋಪಜ್ಜಿ ಅದನ್ನು ಗೋಡೆಗೆ ಆದಾರವಾಗಿಟ್ಟು ಸುಧೀರ ಕೂತಲ್ಲಿ ನಿಧಾನ ನಡೆದು ಬಂದಳು. ಒಳಗೆ ಆ ದುಡ್ಡಿನ ಸಂಗತಿ ಕೋಲಾಹಲವನ್ನೇ ಎಬ್ಬಿಸುತ್ತಿದ್ದರೂ ಸುಧೀರ ಒಮ್ಮೆಲೇ ಅವಳನ್ನು ಗಮನಿಸದವನಂತೆ ಬೇರೆಲ್ಲಿಯೂ ನೋಡಿದ. ’ಒಡೆಯಾ ನೋಡಿ ಬಾಳೆ ಹಂಬೆ ತಂದಿತ್ತೆ’ ಎನ್ನುತ್ತಲೇ ತನ್ನ ಸೆರಗಿಗೆ ಕಟ್ಟಿಕೊಂಡು ಬಂದ ನೋಟುಗಳನ್ನು ಮೃದುವಾಗಿ ಬಿಚ್ಚಿ ನಡುಗುವ ಹಸ್ತದಿಂದಲೇ ಸುಧೀರನ ಮುಂದೆ ಚಾಚುತ್ತ ’ಈ ದುಡ್ಡು ನಿಮ್ಮದೇರಾ ಒಡೆಯಾ, ಶೆಳೀಲಿಕ್ಕೆ ಬಿದ್ದ ನಿಮ್ಮ ಪ್ಯಾಂಟಿನ ಕಿಸೀಲೇ ಇತ್ತಿದು. ಚಿಕ್ಕಮ್ಮನೋರು ಹಂಗೇ ನೆನೆಸಿ ಹಾಕಿತ್ರು, ಬಿಸ್ಲಲ್ಲಿ ಒಣಗ್ಸಿ ತರ್‍ವಾ ಹೇಳಿ ಮನೇಗೋದಿದ್ದೆ, ಎಷ್ಟೀತು ಎಣಸ್ಕೊಳಿ’ ಅಂತೆಲ್ಲ ಹೇಳಿ ಮುಗಿವಾಗಲೇ ಗೋಪಜ್ಜಿಯ ಮುಖದಲ್ಲಿ ಒಂದು ರೀತಿಯ ವಿಲಕ್ಷಣ ನಿಷ್ಠುರ ಭಾವ ಆವರಿಸಿತ್ತು.

ಅಷ್ಟು ನಿಷ್ಠೆಯಿದ್ದರೆ ನಿನ್ನೆಯೇ ಅದನ್ನು ತೋರಿ ಹಿಂದಿರುಗಿಸುತ್ತಿದ್ದಳಲ್ಲವೇ? ಅನ್ನಿಸಿ ಸುಧೀರನಿಗೆ ಅಸಮಾಧಾನ ಕಾಡಿದರೂ ತಕ್ಷಣ ಬೇರೇನೂ ಯೋಚಿಸದೇ ’ನಿನಗೆ ಅಷ್ಟು ಹಣದ ಅಗತ್ಯ ಇದ್ರೆ ಇದನ್ನು ನೀನೇ ಇಟ್ಟುಕೋ, ನಿನ್ನ ಮಗ ಚೊಲೋ ದುಡಿಯಲು ಆರಂಭಿಸಿದ ನಂತ್ರ ನಿಧಾನ ವಾಪಸ್ಸು ಮಾಡುವಿಯಂತೆ’ ಎನ್ನುತ್ತ ಅದನ್ನು ಗೋಪಜ್ಜಿಯ ಕೈಗೇ ಹಿಂತಿರುಗಿಸಿಬಿಟ್ಟ. ಆಕಸ್ಮಿಕ ಎದುರಾದ ಈ ಸ್ಥಿತಿಗೆ ಗೋಪಜ್ಜಿ ಇನ್ನಷ್ಟು ಗಲಿಬಿಲಿಗೊಂಡು ಏನು ಹೇಳಬೇಕೆಂದೇ ತಿಳಿಯದೇ ನಿಂತಿದ್ದಾಗಲೇ ತಾರಕ್ಕ ಒಳಖೋಲಿಯ ಕಿಟಕಿಯಿಂದ ಕಂಡವಳೇ ಕುತೂಹಲದಿಂದಲೇ ಹೊರಬಂದಳು.

’ಏನೇ ಗೋಪಿ ಬಾಳೆ ಹಂಬೆ ತಂದೆಯೇನೇ?’ ಎನ್ನುತ್ತಲೇ ಗೋಪಿಯ ಹಸ್ತ ತುಂಬಿದ ಹಣವನ್ನು ಎಂಥದೋ ಆಸಕ್ತಿಯ ಭಾವದಿಂದ ದಿಟ್ಟಿಸುತ್ತ ’ಅದೆಂಥದೇ ಕೈಯಲ್ಲಿ ಅಷ್ಟೊಂದು ದುಡ್ಡು?’ ಕೇಳಿದಳು. ಗೋಪಜ್ಜಿ ಆಗಷ್ಟೇ ತಲೆಗೇರಿದ ಭಾವೋದ್ವೇಗದಿಂದ ಎಲ್ಲವನ್ನೂ ವಿವರಿಸತೊಡಗಿದಳು. ಗೋಪಜ್ಜಿಯ ಮಾತನ್ನೆಲ್ಲ ಮೌನವಾಗಿ ಹಿಂದಕ್ಕೆ ಕೈ ಕಟ್ಟಿ ಕೇಳಿಸಿ ಕೊಳ್ಳುತ್ತಿದ್ದಂತೆಯೇ ತನ್ನ ಅಮ್ಮನ ಮುಖ ಚಹರೆ ಬದಲಾಗುತ್ತಲೇ ಹೋಗುತ್ತಿದ್ದುದನ್ನು ವೀಕ್ಷಿಸಿದ ಸುಧೀರನಿಗೆ ಈಗ ಏನೋ ಅನಾಹುತವಾಗಲಿದೆಯೆಂದು ತಿಳಿದು ಹೋಯಿತು. ಆಗಲೇ ತಾರಕ್ಕನ ಮುಖದಲ್ಲಿ ರಾಹು ಕೇತುಗಳೆಲ್ಲ ಒಮ್ಮೆಲೇ ನರ್ತಿಸತೊಡಗಿದ್ದವು.

’ಹಾಗೆ ದುಡ್ಡು ಕಂಡ ಕೂಡ್ಲೇ ನಿನ್ನೆಯೇ ತೆಗೆದು ನನ್ನ ಹತ್ರ ತಂದು ಕೊಡಬೇಕಿತ್ತು ನೀನು, ಯಾರಿಗೂ ಹೇಳ್ದೇ ಮನೆಗೆ ಒಯ್ದದ್ದೂ ಅಲ್ಲದೇ ಈಗ ರಾಶಿ ಸಂಭಾವಿತಳ ನಾಟ್ಕ ಬೇರೆ, ಒಮ್ಮೆ ನಮ್ಮ ದುಡ್ಡು ಲಪಟಾಯಿಸುವ ವಿಚಾರ ಬಂದಿದೆ ನಿಂಗೆ ಅಂದ ಮೇಲೆ ನಿನ್ನಂಥವಳನ್ನು ಹೇಗೆ ನಂಬುವುದು? ಎಂದೆಲ್ಲ ಅಮ್ಮ ರೋಷ ತುಂಬಿದ ಆವೇಶದಲ್ಲಿ ಬಾಯಿಗೆ ಬಂದದ್ದೇ ಮಾತಾಡತೊಡಗಿದ್ದನ್ನು ಕೇಳಿದ ಸುಧೀರ ’ಇರ್‍ಲಿಇರ್‍ಲಿ ಈಗ ಜಾಸ್ತಿ ಗದ್ದಲ ಮಾಡ್ಬೇಡಿ. ಅವಳಿಗೆ ವಾಪಸ್ಸು ತಂದು ಕೊಡಬೇಕೂ ಎಂಬ ಬುದ್ದಿ ಬಂದಿದೆಯಲ್ಲ? ಆದರೂ ಆ ಹಣ ನನಗೆ ಬೇಡ’ ಎನ್ನುತ್ತ ಅಲ್ಲೇ ಸರಿ ಮಾಡಲು ನೋಡಿದ ಸುಧೀರ.

ಮಗನ ಮಾತು ಆಲಿಸುತ್ತ ಇನ್ನೇನು ಹಣ ಕೈಬಿಟ್ಟೇ ಹೋಗ್ತದೆ ಎಂದರಿತ ತಾರಕ್ಕ ಕೋಪ ಹಾಗೂ ಅವಸರದಲ್ಲಿ ಗೋಪಜ್ಜಿಯ ಕೈಯಲ್ಲಿದ್ದ ದುಡ್ಡಿನ ಕಟ್ಟನ್ನು ಹಾರಿ ಕಸಿದು ಕೊಂಡಳು. ಈ ದೃಶ್ಯವನ್ನು ಕಣ್ಣಾರೆ ನೋಡಿದ ಸುಧೀರನಿಗೆ ಅಮ್ಮನ ಕುರಿತಾಗಿ ಸಣ್ಣ ಕೋಪ ಆವರಿಸಿಕೊಂಡಿತು. ಸುಧೀರನಿಗೂ ಆ ಕ್ಷಣ ಏನು ಮಾಡಬೇಕೆಂದು ಹೊಳೆಯಲಿಲ್ಲ. ಈ ಅಮ್ಮನನ್ನು ಏನು ಹೇಗೆ ಎತ್ತ ಹೇಳಿ ಸಮಾಧಾನ ಮಾಡಬೇಕು ಅಂದರಿಯದೇ ಎದ್ದು ಸರಸರನೆ ಅಟ್ಟವೇರಿ ತನ್ನ ಕೋಣೆ ಸೇರಿ ಒಂದು ಪುಸ್ತಕ ಹಿಡಿದು ಕೂತುಬಿಟ್ಟ. ಆದರೂ ಎಲ್ಲೋ ದೂರದಲ್ಲಿ ಕೇಳಿದಂತೆ ಅಮ್ಮನ ಬೈಗುಳಗಳ ಮಳೆ ಗೋಪಜ್ಜಿಯ ಮೇಲೆ ನಿರಂತರ ಪ್ರಹಾರ ನಡೆಸಿಯೇ ಇತ್ತು.

’ಇಲ್ಲಾ ಅಮ್ನೋರೇ, ತಪ್ಪಾಯ್ತು ನಂದು, ಇನ್ಯಾವಗೂ ಹೀಂಗೆ ಮಾಡೂದಿಲ್ಲ, ನನ್ನ ಘೋರ ತಪ್ಪು ಹೊಟ್ಟೇಲಿ ಹಾಕ್ಕೋಳ್ಳಿ, ಕೆಲ್ಸಾ ಮಾತ್ರ ಬಿಡ್ಸಬೇಡಿ’ ಎಂದೆಲ್ಲ ಅಂಗಲಾಚುತ್ತ ನಿಂತೇ ಇದ್ದಳು ಗೋಪಜ್ಜಿ. ’ಇಂಥವರನ್ನು ಕೆಲಸಕ್ಕೆ ತೊಗೋಳ್ಳೋದೇ ತಪ್ಪು, ನಮ್ಮ ಅತ್ತೆ-ಮಾವನ ಕಾಲದಿಂದ ಇವರನ್ನು ನೋಡುತ್ತ ಬಂದಿದ್ದೇನೆ, ಇವರ ಕುಲ ಕಸುಬೇ ಅದು, ಎಲ್ಲ ಗೊತ್ತಿದೆ ನಂಗೆ, ಇವ್ಳು ಎಂದಿದ್ದರೂ ಅಪಾಯಕಾರಿಯೇ. ಮನೆಗೆ ಹೋಗೀಗ, ನಂಗೆ ನಿನ್ನ ಮುಖ ಕಾಣಿಸಬೇಡ’ ಹೀಗೆ ಇನ್ನೂ ಜೋರಾಗುತ್ತಿದ್ದ ಅಮ್ಮನ ಸ್ವರ ಕೇಳಿದ ಚಂದಣ್ಣ-ವಾಣಿಯರೆಲ್ಲ ಈಗ ಒಬ್ಬೊಬ್ಬರಾಗಿ ಹೊರ ಬಂದು ನಿಂತು ಘಟನೆಯನ್ನು ಆಸಕ್ತಿಯಿಂದ ಕೇಳಿ, ’ಅಬ್ಬಾ!’ ಎಂದು ಗದ್ದದ ಮೇಲೆ ಬೆರಳನ್ನಿಟ್ಟುಕೊಂಡರು.

ತುಂಬಿದ ಅಸಹಾಯಕತೆಯಿಂದ ಗೋಪಜ್ಜಿ ಮುದ್ದೆಯಾಗಿ ಗೋಡೆಗೊರಗಿ ನಿಂತು ಕಣ್ಣೀರು ವರೆಸಿಕೊಳ್ಳುತ್ತಿದ್ದರೂ, ಎಲ್ಲ ಹೊರ ಬಂದು ಒಬ್ಬೊಬ್ಬರು ಒಂದೊಂದು ವಿಷಯ ಕೆದಕುತ್ತಿರುವಾಗಲೇ ಗೋಪಜ್ಜಿಯಲ್ಲಿ ಎಂಥದೋ ಹುಂಬತನದ ಛಾಯೆ ಒಳಹೊಕ್ಕು ’ನೀರಲ್ಲಿ ತೋಯ್ದಿದ್ದ ಆ ನೋಟುಗಳನ್ನು ನಿನ್ನೆ ಸುಧೀರ ಒಡೆಯರಿಗೆ ನಾನು ಕಾಣಿಸಿಕೊಂಡೇ, ಬಿಸಿಲಲ್ಲಿ ಒಣಗಿಸಿ ತರಲು ಮನೆಗೆ ಒಯ್ದಿದ್ದೆ’ ಎಂದು ಹೇಳಲಾರಂಭಿಸಿದಳು.

ಅವಳ ಮಾತು ಕೇಳಿದ ತಾರಕ್ಕನಿಗೆ ಈಗ ಇನ್ನಷ್ಟು ಕೋಪ ಉಕ್ಕಿ ಬಂತು. ’ಯಾಕೆ? ನೋಟು ಒಣಗಿಸಲು ಇಲ್ಲಿ ನಮ್ಮ ಮನೆ ಅಂಗಳಕ್ಕೆ ಬಿಸಿಲು ಬರುವುದಿಲ್ಲವೇ ? ಮಾತು ಹೇಗೆ ಬದಲಿಸುತ್ತೀ ನೋಡು ನೀನು’ ಎನ್ನುತ್ತ ಮತ್ತೆ ಮತ್ತೆ ಕಸಿವಿಸಿಗೆ ಒಳಪಡಿಸಿದ ತಾರಕ್ಕನಿಂದ ಉಳಿಯುವ ದಾರಿಕಾಣದೇ ಗೋಪಜ್ಜಿ, ತನ್ನ ಪ್ರಾಮಾಣಿಕತನದಿಂದ ಉಂಟಾದ ಈ ಮುಖಭಂಗವನ್ನು ಸಮರ್ಥಿಸಿಕೊಳ್ಳಲೋಸುಗವೇ ಒಂದಾದ ನಂತರ ಇನ್ನೊಂದು ಸುಳ್ಳಿನ ದಾರಿ ಹಿಡಿದಳು. ಸ್ವಾಭಿಮಾನ ಕಳಚುವ ಹೊತ್ತಿಗೆ ಅವಳಿಗೆ ಬೇರೆ ಯಾವ ಬೆಳಕೂ ಕಾಣಲಿಲ್ಲ.

’ಹಣ ಸಿಕ್ಕ ಕೂಡಲೇ ನಾನು ಸುಧೀರ ಒಡೆಯರಿಗೆ ಒಯ್ದುಕೊಟ್ಟಿದ್ದೆ. ನಿಮ್ಮ ಮನೆ ಅಂಗಳದಲ್ಲಿ ಚೊಲೋ ಬಿಸಿಲು ಬರ್‍ತದೆ, ಒಣಗಿಸಿ ತಾ ಎಂದು ಅವರೇ ನನಗೆ ಕೊಟ್ಟಿದ್ದು’ ಎಂದೇ ಎಂಥದೋ ದರ್ಪ ತುಂಬಿದ ಮುಖ ಹೊತ್ತು ಈಗ ಪಟ್ಟು ಹಿಡಿದು ವಾದಿಸತೊಡಗಿದಳು ಗೋಪಜ್ಜಿ. ನಿಂತಲ್ಲೇ ಬದಲಾದ ಗೋಪಜ್ಜಿಯ ಈ ಹೊಸ ವರಸೆಗೆ ರೌದ್ರಾವತಾರ ತಾಳಿದ ತಾರಕ್ಕ ’ಗಳಿಗೆಗೊಂದು ಮಾತಾಡ್ತೀ ನೀನು ಎಷ್ಟು ನಾಲಿಗೆಯಿದೆಯೇ ನಿಂಗೆ? ಎಲ್ಲಿ ಹೋದಾ ಅವ್ನು? ಕರೀ ಅವನನ್ನು, ಇಲ್ಲೇ ಹೌದು-ಅಲ್ಲ ಮಾಡಿಸಿಯೇ ಬಿಡ್ವ’ ಎನ್ನುತ್ತ ಸುಧೀರನನ್ನು ಕರೆಯಲು ಮೊಮ್ಮಗ ದೀಪುವನ್ನು ಅಟ್ಟಕ್ಕೆ ಓಡಿಸಿದಳು. ದೀಪು ಸುಮಾರು ಹೊತ್ತು ’ಕಾಕಾ.. ಕಾಕಾ.. ಅಜ್ಜಿ ಕರೀತಿದಾಳೆ’ ಅನ್ನುತ್ತ ಬಾಗಿಲು ಬಡಿದೇ ಬಡಿದ. ಇವರ ಇಂಥ ಗೋಜಲೇ ಬೇಡವೆಂದು ಸುಧೀರ ಸುಮ್ಮನೇ ಚಿಲಕ ಜಡಿದು ಒಳಗೆ ಕೂತಿದ್ದ. ವರಾಂಡದಲ್ಲಿ ಸರ್ವಾಲಂಕಾರಗೊಳ್ಳಬೇಕಾದ ಗಣೇಶನ ವಿಗ್ರಹ ಇವೆಲ್ಲವನ್ನೂ ವೀಕ್ಷಿಸುತ್ತ ಮೌನವಾಗಿ ಕೂತಿತ್ತು.

ಸುಧೀರ ಹೊರಬಾರದಿದ್ದುದನ್ನು ನೋಡಿದ ಗೋಪಜ್ಜಿ ’ಹೀಂಗೇ ಆದದ್ದು, ಬೇಕಿದ್ದರೆ ಸುಧೀರ ಒಡೆಯನನ್ನು ಕರೆದು ಕೇಳಿ’ ಎಂದೀಗ ದೊಡ್ಡ ಸ್ವರದಲ್ಲಿ ಹೇಳತೊಡಗಿದ್ದಳು. ಈಗ ಮಾತ್ರ ತಾರಕ್ಕ ತನ್ನ ಸ್ವರವನ್ನು ತಾರಕಕ್ಕೇರಿಸಿ ’ಒಂದು ಗಳಿಗೆಯೂ ನೀನು ನಮ್ಮ ಅಂಗಳದಲ್ಲಿ ನಿಲ್ಲಬೇಡ, ಈಗಿಂದೀಗಲೇ ಹೊರಡು’ ಎಂದು ಬಾಯಿ ಮಾಡುತ್ತ ಗೋಪಜ್ಜಿಯನ್ನು ದೆಣಪೆಯ ಹೊರಗೆ ಅಟ್ಟಿಬಿಟ್ಟಳು. ನಂತರ ಸೋತು ಹೋದಂತಾದ ತನ್ನ ಕಾಲುಗಳನ್ನು ಮಡಚಿ ತಾರಕ್ಕ ಅಲ್ಲಿಯೇ ಮೆಟ್ಟಿಲ ಮೇಲೆಯೇ ಕುಳಿತು ಚಂದಣ್ಣನ ಬದಿಗೆ ತಿರುಗಿ ’ನೋಡೋ ಎಷ್ಟು ಬೇಗ ಮಾತು ಬದ್ಲಸ್ತದೆ ಅದು, ಅಂಥವಳಿಗೆ ಈ ದುಡ್ಡು ಬೇರೆ ಕೊಟ್ಟು ಬಿಡಬೇಕಂತೆ, ನಿನ್ನ ತಮ್ಮ ಹೇಳೋದು ನೋಡೋ’ ಎನ್ನುತ್ತ ಅಮ್ಮ ಅಳುವ ಸ್ವರ ತೆಗೆದದ್ದೇ ಚಂದಣ್ಣನಿಗೆ ಅಚ್ಚರಿ ಕಾಡಿತು.

’ದುಡ್ಡು! ಅವಳಿಗ್ಯಾಕೆ ಕೊಡಬೇಕಂತೆ? ಎಷ್ಟಿದೆ ನೋಡುವಾ ತಾ’ ಎನ್ನುತ್ತ ಅಮ್ಮನ ಕೈಯಿಂದ ಕಸಿದು ಎಣಿಸುತ್ತ ಎರಡು ಸಾವಿರ ಉಂಟು, ಇದನ್ನು ಗೋಪಜ್ಜಿ ಕದ್ದದ್ದೇ ನಿಜ, ಯಾಕೆಂದರೆ ನಿನ್ನೆ ಹಬ್ಬದ ಖರ್ಚಿಗೆಂದು ಐನೂರು ಕೊಟ್ಟು ಇಷ್ಟೇ ಇರೋದು ನನ್ನ ಬಳಿ ಅಂತ ಸಣ್ಣ ಮುಖ ಮಾಡಿದ್ದ. ನಾನೂ ಹೋಗಲಿ ಪಾಪ ಏನು ತೊಂದರೆಯೋ ಅಂತ ಸುಮ್ಮನಿದ್ದೆ, ಆದರೂ ಅವ ಈ ದುಡ್ಡು ಕಾಣೆಯಾದ ಬಗ್ಗೆ ಬಾಯಿ ಬಿಟ್ಟಿರಲೇ ಇಲ್ಲ ನೋಡು, ಯಾರದು? ಪ್ಯಾಂಟಿನಲ್ಲಿಯ ದುಡ್ಡಿನ ಸಮೇತ ಒಗೆಯಲು ಹಾಕಿದ್ದು? ಎಂದು ಕೂತಲ್ಲೇ ದನಿಯೇರಿಸಿದ್ದ ಚಂದಣ್ಣ.

ನೂರು ರೂಪಾಯಿಗಳ ಇಪ್ಪತ್ತು ನೋಟಿನ ಕಟ್ಟನ್ನು ಕೈಯಾಡಿಸಿಯೂ ನೋಡದೇ ಹಾಗೇ ಬಕೇಟಿನಲ್ಲಿಯ ಸರ್ಫ ಪೌಡರಿನ ನೀರಲ್ಲಿ ನೆನೆಯಿಟ್ಟ ಸುಧೀರನ ಪ್ರೇಮದ ಮಡದಿ ಲೇಖಾ, ತನ್ನ ಆರು ತಿಂಗಳ ಮಗು ತನುವಿನ ಉಚ್ಚೆ ಬಟ್ಟೆಯನ್ನು ಬದಲಿಸುತ್ತ ತನಗಿಷ್ಟವಾದ ಯಾವುದೋ ಹಿಂದೀ ಹಾಡಿನ ಟ್ಯೂನನ್ನು ಹಿಡಿದು ಗುನುಗುನಿಸುತ್ತಿದ್ದಳು. ತನ್ನ ಸಣ್ಣಸೊಸೆಯ ಮೇಲೆ ಇದ್ದಕ್ಕಿದ್ದಂತೆ ಏರಿ ಹೋದ ತಾರಕ್ಕ, ’ನಿನ್ನೆ ನಿನ್ನ ಗಂಡನ ಪ್ಯಾಂಟು ನೆನೆ ಹಾಕುವಾಗ ಅದರಲ್ಲಿ ಏನಿದೆ-ಏನಿಲ್ಲ ಅಂತ ಪರೀಕ್ಷಿಸದೇ ಹಾಕಿ ಬಿಟ್ಟಿದ್ದೆ ನೀನು, ನೋಡು ಅದರಲ್ಲಿ ಈ ದುಡ್ಡಿತ್ತು’ ಎಂಬ ಅತ್ತೆಯ ಜೋರಿಗೆ ಲೇಖಾ, ’ಅಯ್ಯೋ ಹೌದೇ? ನನಗೆ ಗೊತ್ತೇ ಆಗಲಿಲ್ಲ, ಅವರು ಯಾವಾಗಲೂ ದುಡ್ಡನ್ನು ಬ್ಯಾಗಿನಲ್ಲಿ ಇರಿಸಿ ಕೊಳ್ಳುತ್ತಿದ್ದರಲ್ಲ?’ ಎಂದಷ್ಟೇ ಹೇಳಿ ಪುನಃ ಮಾತು ಬೆಳೆಸದೇ ಲೇಖಾ ಕಾಲ ಮೇಲೆ ಹಾಕಿಕೊಂಡ ಮಗಳ ಸುಕೋಮಲ ಮೈಗೆ ಮೃದುವಾಗಿ ಎಣ್ಣೆ ನೀವ ತೊಡಗಿದಳು.

ಇವಳ ಬಳಿ ಹೇಳಿಕೊಂಡು ಏನೂ ಪ್ರಯೋಜನವಿಲ್ಲವೆಂದು ತಿಳಿದ ತಾರಕ್ಕ, ’ದುಡ್ಡಿನ ಮೇಲೆ ಅಕ್ಕರಾಸ್ತೆ ಇಲ್ಲದ ಗಂಡ-ಹೆಂಡತಿ ಇವ್ರು, ಊರಲ್ಲಿ ಎಲ್ಲೂ ಇಲ್ಲದ ವಿಶೇಷ ಜೋಡಿಯಿದು, ದುಡ್ಡಿನ ಬೆಲೆ ಗೊತ್ತಿಲ್ಲದ ಕೋಡಿಗಳು’ ಎಂದೆಲ್ಲ ಒಟಗುಡುತ್ತ ಅಲ್ಲಿಂದ ಬೇಗ ಜಾರಿಕೊಂಡಳು. ಎಣ್ಣೆ ಹಚ್ಚಿದ ಮಗುವನ್ನು ಎತ್ತಿಕೊಂಡು ವಾಣಿಅಕ್ಕ ಸೂಚಿಸಿದಂತೆ ಸ್ವಲ್ಪ ಹೊತ್ತು ಎಳೆ ಬಿಸಿಲಿಗೆ ಹಿಡಿದು ನಿಲ್ಲಲು ಹೊರತಂದ ಲೇಖಾಳನ್ನು ಉದ್ದೇಶಿಸಿ ಚಂದಣ್ಣ, ’ಹಣ ಕಳೆದು ಹೋದ ವಿಷಯವನ್ನು ಸುಧೀ ನಿನ್ನೆ ನಿನಗೇನಾದರೂ ಹೇಳಿದ್ದನೇ?’ ಎಂದು ಕೇಳಿದ. ಆ ಕೂಡಲೇ ಗಲಿಬಿಲಿಗೊಂಡ ಲೇಖಾ ’ಯಾವ ಹಣ? ಯಾವಾಗ? ನನಗೇನೂ ಗೊತ್ತಿಲ್ಲ, ನನ್ನ ಬಳಿ ಎರಡುನೂರು ಉಂಟು, ಅದೂ ತನುವಿನ ಕೈಯಲ್ಲಿ ಅವರಿವರು ಹಿಡಿಸಿದ್ದು. ನಿಮಗೆ ಬೇಕಾದರೆ ತಂದು ಕೊಡುವೆ’ ಅಂದಳು.

’ಹ್ಞಾ! ದುಡ್ಡು! ನನಗೆ ಬೇಡ. ನಿನ್ನ ಗಂಡನಿಗೆ ಬೇಕಾದರೆ ತೆಗೆದು ಕೊಡು, ಊರವರಿಗೆಲ್ಲ ಹಂಚಲಿ ಅವನು’ ಎಂದು ಸಿಡುಕಿದ ಭಾವಯ್ಯನ ಮಾತೊಂದೂ ಅರ್ಥವಾಗದೇ ಲೇಖಾ, ವಾಣಿಅಕ್ಕನನ್ನು ಮಿಕಿಮಿಕಿ ನೋಡುತ್ತ ಬಿಸಿಲಲ್ಲಿ ಹಿಡಿದದ್ದು ಸಾಕಲ್ಲ? ಸ್ನಾನ ಹಾಕಿ ಬಿಡೋಣವೇ?’ ಎಂದು ಕೇಳುತ್ತ ಮಗುವನ್ನು ಜಾರದಂತೆ, ಅಪ್ಪಿ ಹಿಡಿದು ಒಳನಡೆದಳು. ಎಣ್ಣೆ ಬೆತ್ತಲ ಮೈಯಲ್ಲಿ ತನ್ನ ಎರಡೂ ಮುಷ್ಠಿಯಿಂದ ಎರಡೂ ಕಣ್ಣುಗಳನ್ನು ತಿಕ್ಕಿಕೊಳ್ಳುತ್ತ ಕುಸುಕುಸು ಮಾಡುತ್ತಿದ್ದ ತನು ಯಾಕೋ ದೊಡ್ಡದಾಗೇ ಅಳಲು ಶುರು ಮಾಡಿದಳು. ವಾಣಿ ಕೂಸಿಗೆ ನೀರು ಹಾಕಲು ಸುಮ್ಮನೇ ಬಚ್ಚಲಿಗೆ ನಡೆದಳು.

’ಇವಳು ಅವನಿಗಿಂತ ಹೆಚ್ಚಿನವಳು, ಇವರಿಗೆಲ್ಲ ಹಣದ ಬೆಲೆಯೇ ಗೊತ್ತಿಲ್ಲ, ಇನ್ನೂ ಜವಾಬ್ದಾರಿಯೇ ಬಂದಿಲ್ಲ. ಉಗುರಿಗೆ ಹಚ್ಚುವ ಬಣ್ಣ ತಂದು ಮಕ್ಕಳಿಗೆಲ್ಲ ಹಚ್ಚಿ ತಾನೂ ಹಚ್ಚಿಕೊಂಡು ಖುಷಿ ಪಡುವುದೊಂದೇ ಗೊತ್ತು ಇವಳಿಗೆ’ ಎಂದೇನೋ ಜರಿಯುತ್ತ ಅಮ್ಮನ ಬಳಿ ತಿರುಗಿದ ಚಂದಣ್ಣ.

ಬೀರಜ್ಜ ಬಂದದ್ದರಿಂದ ಬಾಳೆ ತಿರುಳನ್ನು ನೀಟಾಗಿ ಕತ್ತರಿಸುವ ಕೆಲಸ ಆರಂಭಗೊಂಡಿತು. ಮುಳ್ಳಿನ ಗಿಡದ ಮುಳ್ಳುಗಳನ್ನು ಬೀರಜ್ಜನೇ ಸಂಗ್ರಹಿಸಿ ತಂದಿದ್ದ. ಗಣಪತಿಯ ಎದುರು ಎರಡು ಕಂಬ ಕಟ್ಟಿ ಅಷ್ಟ ಕೋನಾಕೃತಿಯಲ್ಲಿ ಬಾಳೆ ಕಾಂಡದ ಪಟ್ಟಿಗಳನ್ನು ಅಲ್ಲಲ್ಲಿ ಮುಳ್ಳು ಚುಚ್ಚುತ್ತ ಒಂದಕ್ಕೊಂದು ಸೊಗಸಾಗಿ ಹೆಣೆಯಲಾಯಿತು. ಎಲ್ಲೆಡೆ ಚೂರು ಸಂಭ್ರಮ ತುಂಬಿಕೊಂಡಿತು.

ಅತ್ತ ಕಟ್ಟಗಿನ ಅಪರೂಪದ ಹಂಡೆ ನೀರಿನ ಸ್ನಾನದಿಂದ ಲೇಖಾಳ ಮಗು ತನು, ಗಡದ್ದಾಗಿ ನಿದ್ರಿಸಿಬಿಟ್ಟಿತು. ಅಡುಗೆ ಖೋಲಿಯಲ್ಲಿ ಪಂಚಕಜ್ಜಾಯ ಮೋದಕಗಳು ಸಿಹಿ ಅಡುಗೆಗಳು ಮೂರೂ ಹೆಂಗಸರ ಕೈ ಹಚ್ಚಿ-ಹಚ್ಚಿ ತಯಾರಾಗತೊಡಗಿದವು. ಚಂದಣ್ಣನ ಸಣ್ಣ ಮಗ ದೀಪು ನೈವೇದ್ಯಕ್ಕಿಂತ ಮುಂಚೆಯೇ ಒಂದು ಮೋದಕ ಹಾರಿಸಿ ತಿಂದು ಬಾಯಿ ವರೆಸಿಕೊಂಡು ಹೊರಹೋದ. ವಾಣಿ ಮತ್ತು ಲೇಖಾ ನಗುತ್ತ ’ದೀಪೂನೇ ಒಬ್ಬ ಜೀವಂತ ಗಣಪತಿ’ ಎಂದು ಸಣ್ಣ ದನಿಯಲ್ಲೇ ತಮಾಷೆ ಮಾಡಿದರು. ಮಾತಿನ ಮಧ್ಯೆ ಲೇಖಾ ವಾಣಿ ಅಕ್ಕನಿಗೆ ’ನೀನೂ ನನ್ನ ಹಾಗೆ ಚೂಡಿದಾರ ಹಾಕಬೇಕು’ ಎಂದಳು. ವಾಣಿ ನಗುತ್ತ ’ನೈಟ್‌ಡ್ರೆಸ್ ಹಾಕಿಕೊಳ್ಳಲೇ ವಿರೋಧ ಉಂಟು ಇಲ್ಲಿ’ ಎನ್ನುತ್ತ ಆ ಮಾತನ್ನು ಅಲ್ಲೇ ಹಾರಿಸಿ ಹಾಕಿದಳು.

ಮಧ್ಯೆ ಮಧ್ಯೆ ನೆನಪಾದಾಗ ತಾರಕ್ಕ ’ಅವ್ಳು ಸುಳ್ಳು ಯಾಕೆ ಹೇಳಬೇಕಿತ್ತು? ಅವ್ಳು ಯಾಕೆ ಮಾತು ತಿರುಗಿಸಬೇಕಿತ್ತು? ಅಬ್ಬಾ!’ ಎನ್ನುತ್ತ ಪುನಃ ಪುನಃ ಬಡಬಡಿಸಿದಳು. ’ಗೋಪಜ್ಜಿ ಅಂಥವಳಲ್ಲ, ಏನೋ ಎಡವಟ್ಟಾಗಿದೆ ಅನಸ್ತಿದೆ’ ಎಂದು ವಾಣಿ ಒಮ್ಮೆಯಷ್ಟೇ ಬಾಯಿಬಿಟ್ಟಳು. ತಕ್ಷಣವೇ ’ನಿನಗೇನು ಗೊತ್ತಿದೆ ನನ್ನಷ್ಟು ಈ ಊರಿನ ಜನರ ವಿಷಯ? ಅವಳನ್ನು ಅಂಥವಳಲ್ಲ ಎಂದು ತೀರ್ಮಾನ ಕೊಡಲು ನೀನೇನು ವಕೀಲಳೇ ?’ ಎಂದು ಅತ್ತೆಯಿಂದ ಗದರಿಸಿಕೊಂಡು ಸೆರಗಿನ ತುದಿ ತಿರುಪುತ್ತ ಸುಮ್ಮನಾಗಿದ್ದಳು ವಾಣಿ.

ನೀರಲ್ಲಿ ನೆಂದು ಅರ್ಧಂಬರ್ಧ ಒಣಗಿ, ಗರಿಗರಿಯನ್ನು ಕಳಕೊಂಡು ನರಂ ಆದ ನೋಟುಗಳ ಕಟ್ಟು ಎಲ್ಲರಿಗೂ ಕಾಣುವಂತೆ ಶೋಕೇಸಿನಲ್ಲಿ ಸುಮ್ಮನೆ ಕೂತಿತ್ತು. ಆ ವರ್ಷವೇ ಹೈಸ್ಕೂಲು ಮೆಟ್ಟಿಲು ಹತ್ತಿದ ಸಂತು, ಅಪ್ಪನ ಬಳಿ ಸಣ್ಣ ದನಿಯಲ್ಲಿ ’ನೋಟಿಗೆ ಇಸ್ತ್ರೀ ಹಾಕಿದರೆ ಗರಿಗರಿಯಾಗ್ತದೆ’ ಅಂದ. ಚಂದಣ್ಣ ಮಗನನ್ನು ’ನಿನಗೆ ಹ್ಯಾಗೆ ಈ ಐಡಿಯಾ ಬಂತೋ, ನೀನ್ಯಾವಾಗಾದರೂ ಹೀಗೆ ನೀರಲ್ಲಿ ನೆನೆಯಿಟ್ಟು ಇಸ್ತ್ರೀ ಹಾಕೆದ್ದೆಯೋ’ ಅಂತ ಗದರಿಕೊಂಡೇ ಬಂದ ಅಪ್ಪನಿಂದ ’ಇಲ್ಲ-ಇಲ್ಲ ನಂಗೊತ್ತಿಲ್ಲಪ್ಪ’ ಎನ್ನುತ್ತ ತಪ್ಪಿಸಿಕೊಂಡು ಓಡಿದ. ಅಡುಗೆ ಮನೆ ಕೆಲಸ ಕೊನೆಯ ಹಂತದಲ್ಲಿದ್ದಾಗ, ತನು ಎದ್ದು ಅಳತೊಡಗಿದ್ದರಿಂದ ಲೇಖಾ, ಅಡುಗೆ ಮನೆ ಕೆಲಸ ಅರ್ಧಕ್ಕೆ ಬಿಟ್ಟು, ಮಗುವಿಗೆ ಸೆರಿಲ್ಯಾಕ್ ಕಲೆಸಿಕೊಂಡು ಹೊರ ಹೋಗಬೇಕಾಯಿತು.

’ನನ್ನ ಕಿವಿಯ ಹಳೇ ಕುಡುಕೊಂಡು ಮುರಿದು ಹೋಗಿದೆ, ನಾನು ಇವರಿಗ್ಯಾಕೆ ಪಾಪ ತ್ರಾಸುಕೊಡ್ಬೇಕು ಎಂದು ಅವೆಲ್ಲ ಖರ್ಚಿನ ವಿಷಯ ಹೇಳದೇ ಸುಮ್ಮನಿದ್ದೆ. ಅಂಥದ್ದರಲ್ಲಿ ಅಷ್ಟೆಲ್ಲ ದುಡ್ಡು ಗೋಪಜ್ಜಿಗೆ ಕೊಡಲು ತಯಾರಾಗಿದ್ದ ಇವ್ನು’ ಎನ್ನುತ್ತ ತಾರಕ್ಕ ತನ್ನಷ್ಟಕ್ಕೇ ತಾನು ಹೇಳಿಕೊಂಡಳು. ಸುಧೀ ಅಮ್ಮನ ಕಣ್ಣು ತಪ್ಪಿಸಿ ತಪ್ಪಿಸಿ ಅಲ್ಲಿ ಇಲ್ಲಿ ತಿರುಗಿದ.

ಸ್ನಾನ ಮುಗಿಸಿ ಮಡಿಯುಟ್ಟು ಬಂದ ಚಂದಣ್ಣನಿಂದ ಎಲ್ಲ ಪೂರ್ವತಯಾರಿ ಆದ ನಂತರ ಪೂಜೆ ಶುರುವಾಯಿತು. ಸುಧೀ ಎಂದಿನಂತೆ ಮೌನವಾಗಿ ಆರತಿ ತಟ್ಟೆಗೆ ಎಣ್ಣೆ ಬತ್ತಿ ಹಕಿ ಅಣ್ಣನ ಕೈಯಲ್ಲಿ ಹಿಡಿಸತೊಡಗಿದ. ಒಂದಾದ ನಂತರ ಒಂದು ಒಟ್ಟೂ ಹನ್ನೊಂದು ಆರತಿಗಳನ್ನು ಎಣಿ-ಎಣಿಸಿ ಗಣಪತಿಗೆ ಬೆಳಗಲಾಯಿತು. ಸಂತು ಮತ್ತು ದೀಪು ಜಾಗಟೆ ಸಂಕ ತಾಳ ಭಾರಿಸುವದಕ್ಕಾಗಿ ಸಣ್ಣ ಜಗಳ ಮಾಡಿದರು. ಕೊನೆಗೂ ಶಂಕ ತನ್ನ ಸರಿಯಾದ ಶಬ್ದ ಬಿಟ್ಟುಕೊಡದೇ ಸತಾಯಿಸಿದಾಗ ಸಂತು ಅದನ್ನು ಅಲ್ಲಿಯೇ ಬಿಸಾಕಿ ತಮ್ಮನಿಂದ ಜಾಗಟೆಯನ್ನು ಕಸಿದು ಬಾರಿಸತೊಡಗಿದ. ಜಾಗಟೆ ಭಾರಿಸಿ ಕೈ ಸೋತು ಬಂದ ದೀಪು ಈಗ ತಾಳವನ್ನು ತಟ್ಟುತ್ತ ತಂಗೀಪಾಪು ತನುವಿನ ಕಿವಿಯ ಹತ್ತಿರ ಭಾರಿಸಲು ಹೋಗಿ, ಲೇಖಾ ಕಾಕೂಳಿಂದ ಕಣ್ಣಿನಲ್ಲೇ ಗದರಿಸಿಕೊಂಡ. ವಾಣಿ ಒಳಗಿನಿಂದ ಕುಡಿಬಾಳೆಲೆ ಮುಚ್ಚಿದ ನೈವೇಧ್ಯ ತಂದಿರಿಸಿದಳು. ತಾರಕ್ಕ ಗಂಭೀರವಾಗಿ ಕೈ ಮುಗಿದು ನಿಂತೇ ಚಂದಣ್ಣ ಪ್ರತಿ ವರ್ಷ ಮರೆತು ಬಿಡುವ ಪೂಜಾ ವಿಧಾನವನ್ನು ನೆನಪಿಸುತ್ತಿದ್ದಳು.

ಪೂಜೆಯ ಸದ್ದಿಗೆ ಆಗಾಗ ಬೆಚ್ಚಿ ಬೀಳುತ್ತಿರುವ ತನುವಿನ ಎರಡೂ ಕಿವಿಗಳನ್ನು ಮುಚ್ಚಿ ಹಿಡಿದು ಲೇಖಾ, ಚಾಪೆಯ ಮೇಲೆ ಕೂತೇ ಆಟ ವಾಡಿಸುತ್ತಿದ್ದಳು. ಪ್ರಸಾದ ಹಂಚಲು ತೊಡಗಿದ ಸುಧೀರ, ಕವಳ ಹಾಕಿ ಕುಕ್ಕರುಗಾಲಲ್ಲಿ ಕೂತ ಬೀರಜ್ಜನನ್ನು ’ಕವಳ ಯಾಕೆ ಹಾಕಿದಿ ಊಟ ಮಾಡುವುದಿದೆ ಈಗ’ ಎಂದು ಎಚ್ಚರಿಸಿದ.

’ದುಡ್ಡಿದೆ ಅಂದಾಕ್ಷಣ ದಾರಿಯಲ್ಲಿ ಹೋಗುವವರಿಗೆಲ್ಲ ದಾನ ಮಾಡಲು ನೀನೇನು ದೊಡ್ಡ ಮಹಾತ್ಮನೇ ? ನಿನ್ನ ಶಾಲೆ ಕಾಲೇಜು ಅಂತೆಲ್ಲ ಕಲಿಯ ಬೇಕಾದಾಗ ನಾನು ಹೊಟ್ಟೆ ಬಟ್ಟೆ ಕಟ್ಟಿ ಎಷ್ಟು ತ್ರಾಸು ಮಾಡಿಕೊಂಡಿದ್ದೇನೆ ಗೊತ್ತೋ ನಿನಗೆ ?’ ತಾರಕ್ಕ ಈಗ ಸುಧೀರನಿಗೆ ಕೇಳುವಂತೆ ಹೇಳಿದಳು. ಬೀರಜ್ಜ ಆ ಮಾತು ಅರ್ಥವಾಗದೇ ’ಏನಂತೆ ಅಮ್ನೋರು?’ ಎಂದು ಕೇಳಿದವನಿಗೆ ವಾಣಿ ’ಏನಿಲ್ಲ.. ಏನಿಲ್ಲ..’ ಅನ್ನುತ್ತಲೇ ಬೀರಿಬಿದ್ದ ಅಕ್ಷತೆ ಒಟ್ಟು ಗೂಡಿಸುತ್ತಿದ್ದಳು.

ಗಣಪತಿಯ ಎದುರೇ ಸಾಲಾಗಿ ಎಲ್ಲರೂ ಬಾಳೆಲೆ ಹಾಸಿ ಊಟಕ್ಕೆ ಕೂತರು. ಆ ಸಮಯದಲ್ಲೇ ತನು ಯಾಕೋ ರಾಶಿ ಕಿರಿಕಿರಿ ಶುರು ಮಾಡಿದ್ದರಿಂದ ಲೇಖಾ ಅವಳನ್ನು ಎತ್ತಿಕೊಳ್ಳಬೇಕಾಯಿತು. ಹಾಗಾಗಿ ವಾಣಿಯೊಬ್ಬಳಿಗೇ ಬಡಿಸಲು ಸ್ವಲ್ಪ ಗಡಿಬಿಡಿಯಾಯಿತು. ಸಂತುವನ್ನು ಚಂದಣ್ಣ ’ನೀರಿಡು, ಉಪ್ಪಿನಕಾಯಿ ಬಡಿಸು, ನಮ್ಮ ಸಂತು ಭಾಳ ಜಾಣ, ಉಪ್ಪಿನಕಾಯಿಯನ್ನು ಎಲೆಯ ಯಾವ ತುದಿಗೆ ಬಡಿಸಬೇಕೆಂಬ ಸಂಪ್ರದಾಯ ಈಗಲೇ ಗೊತ್ತಿದೆ ನೋಡು ಅವನಿಗೆ’ ಎಂಥೆಲ್ಲ ಹುರಿದುಂಬಿಸಿದ. ಸುಧೀರ ಅನ್ನ ಕಲಸಿ ಬಾಯಿಗೆ ಹಾಕುವಾಗಲೇ ತಾರಕ್ಕ ’ಚಂದಣ್ಣನಿಂದ ಕಲೀ ನೀನು, ದುಡ್ಡು ಹೇಗೆ ಖರ್ಚು ಮಾಡಬೇಕು ಎಂಬ ಸೂಕ್ಷ್ಮವನ್ನು, ಅವನು ರಾಶಿ ಕಷ್ಟ-ನಷ್ಟ ಅನುಭವಿಸಿ ಬೆಳೆದವ. ನಿನಗೆ ಸಣ್ಣವನಿದ್ದಾಗಿನಿಂದ ಯಾವ ಬಿಸಿಯೂ ತಟ್ಟಲಿಲ್ಲ’ ಅಂದಳು. ಸುಧೀರ ಗಂಟಲಲ್ಲಿ ಅನ್ನ ಸಿಕ್ಕಿಕೊಂಡು ನೆತ್ತಿ ತಟ್ಟಿಕೊಳ್ಳುತ್ತ ಗಟ-ಗಟ ನೀರು ಕುಡಿದ. ಊಟದ ನಂತರ ಆತ ಸುಮ್ಮನೇ ದೆಣಪೆಯ ಬಳಿಯಲ್ಲಿ ಹೋಗಿ ನಿಂತು ರಸ್ತೆ ನೋಡಿದ. ಎಲ್ಲರೊಂದಿಗೆ ಪೂಜಿಸಿಕೊಂಡ ಗಣಪತಿ ವಿಗ್ರಹ ಕೋಣೆಯ ಮಧ್ಯೆ ಮಂದಹಾಸ ಬೀರುತ್ತ ನಿರುಪಾಯವಾಗಿ ಕೂತಿತ್ತು.

ಮಧ್ಯಾಹ್ನ ತುಸು ಅಡ್ಡಾದ ಚಂದಣ್ಣ ತನ್ನ ಬಳಿಯಲ್ಲೇ ಬಂದು ಕೂತ ವಾಣಿಯನ್ನು ಕುರಿತು ’ಅಮ್ಮ ಹೇಳುವುದು ಸರೀ ಉಂಟು, ಒಂದೊಂದು ನೈಯಾಪೈಸೆಗೂ ಈ ಕಾಲದಲ್ಲಿ ಎಷ್ಟೊಂದು ಬೆಲೆಯಿರಬೇಕಾದರೆ, ಇವನು ಊರಿನ ಕಳ್ಳಕಾಕರಿಗೆಲ್ಲ ದುಡ್ಡು ಹಂಚುತ್ತಾನಂತೆ’ ಅಂದ. ಅದಕ್ಕೆ ವಾಣಿ ಹುಬ್ಬು ಗಂಟಿಕ್ಕುತ್ತ ’ಸುಧೀ ಏನು ಮಾಡಿದರೂ ಅದು ಸರೀ ಇರ್‍ತದೆ, ತಾನು ದುಡಿದದ್ದು ಬಡವರಿಗೂ ಒಂದಿಷ್ಟು ಸಹಾಯವಾಗಲಿ ಅನ್ನುವ ಒಳ್ಳೆಯ ಮನಸ್ಸಿದೆ ಅವನಿಗೆ’ ಎಂದು ಮೈದುನನ ಪರವಾಗಿ ತನ್ನ ಮೈಹೊಕ್ಕ ಯಾವುದೋ ಧೈರ್ಯದಿಂದ ಹೇಳಿದ್ದಳು. ಮಲಗಿದ್ದ ಚಂದಣ್ಣ ಥಟ್ಟನೆ ಎದ್ದು ಕೂತು ’ಎಂಥದದು, ಒಳ್ಳೇ ಮನಸ್ಸು ಒಳ್ಳೇ ಮನಸ್ಸು ಅನ್ನೋ ರಾಗ ನಿಂದು? ಒಳ್ಳೇ ಮನಸ್ಸಿದ್ದವರ ಹೂಸಿಗೂ ಒಳ್ಳೇ ಪರಿಮಳವಿರ್‍ತದೆ ಅನ್ನೋ ಹಾಗೇ ಮಾತಾಡ್ತೀಯಲ್ಲ? ದುಡ್ಡು ದುಡ್ಡೇ ತಿಳ್ಕೋ’ ಅಂತ ಅಸಂಬಂಧವಾಗಿ ಹೆಂಡತಿಯನ್ನು ಗದರಿದ್ದ.

’ಸಾಕು ಸಾಕು ಈ ಕೆಟ್ಟ ಉದಾಹರಣೆ ಬಿಟ್ಟರೆ ನಿಮಗೆ ಇನ್ನೇನೂ ಸಿಗಲಿಲ್ಲ, ದೇವರಿದೆ ಮನೆಯಲ್ಲಿ, ಒಳ್ಳೇ ಮಾತಾಡಿ’ ಸಿಡುಕುತ್ತ ಎದ್ದ ವಾಣಿ, ಗೋಪಜ್ಜಿ ಒಗೆಯಬೇಕಾದ ಬಟ್ಟೆಯನ್ನು ತಾನೇ ಒಗೆಯಲು ಬಾವಿಯ ಬಳಿ ಹೋದಳು. ಸಂತು ದೀಪು ಇಬ್ಬರೂ ಕೋಪದಲ್ಲಿರುವ ಅಪ್ಪನ ಭಯಕ್ಕೆ ತಮ್ಮ-ತಮ್ಮ ಶಾಲೆಯ ಪುಸ್ತಕ ಹಿಡಿದು ಪರಸ್ಪರ ಕಣ್ಸನ್ನೆ ಬಾಯ್ಸನ್ನೆ ಮಾಡುತ್ತಲೇ ಏನೋ ಬರೆಯುತ್ತ ಕೂತಂತೆ ನಟಿಸುತ್ತಿದ್ದರು.

ದೆಣಪೆಯಿಂದ ಸುಧೀರ ಒಳಸರಿದು ಬಂದದ್ದನ್ನು ಗಮನಿಸಿದ ತಾರಕ್ಕ ’ಇವನು ದುಡೀತಾನೆ, ಇವನಿಗೂ ಹೆಂಡತಿ ಮಕ್ಕಳಾದರು ಇವನಿಗೂ ಮನೆಯಾಯ್ತು ಅಂದ ತಕ್ಷಣ ಇವನು ಮನಸ್ಸಿಗೆ ಬಂದಂತೆ ಮಾಡಬಹುದು ಅಂದುಕೊಂಡಿದ್ದಾನೆ’ ಎಂದೇನೋ ಹೇಳಲು ಬಾಯಿ ತೆರೆದಳು. ಸುಧೀರನಿಗೆ ಈಗ ತಾಳ್ಮೆ ಮೀರಿ ಹೋದಂತೆನಿಸಿತು. ಶೋಕೇಶಿನಲ್ಲಿ ಕೂತ ಆ ಹಾಳು ನೋಟುಗಳು ಎಂಥದೋ ವಿಷ ವರ್ತುಲ ನಿರ್ಮಿಸುತ್ತಿದ್ದಂತೆ ಅನ್ನಿಸತೊಡಗಿತು. ’ಇನ್ನೂ ಮುಗಿಯಲಿಲ್ಲವೇ ನಿನ್ನದು? ಇರು ಇರು, ಆ ಹಣ ಯಾರಿಗೂ ಬೇಡ ಇಲ್ಲಿ, ಅದನ್ನು ಗಣಪತಿಗಿಂತ ಮುಂಚೆಯೇ ಕಳಿಸಿ ಬಿಡ್ತೇನೆ’ ರೌದ್ರಾವತಾರದಲ್ಲಿ ಬಾಯಿ ಮಾಡುತ್ತ ದುಡ್ಡಿನ ಕಟ್ಟನ್ನು ಗಬಕ್ಕನೆ ಎತ್ತಿಕೊಂಡು ಸರಸರನೆ ಹೆಜ್ಜೆ ಹಾಕಿದವನೇ ಬಾವಿಯ ಬಳಿಸಾರಿದ ಸುಧೀರ, ಎಲ್ಲ ಅಲ್ಲಲ್ಲಿ ನಿಂತು ನೋಡುತ್ತಿರುವಾಗಲೇ, ಬಾವಿಯಲ್ಲಿ ಬಿಸಾಕಿ ಮರಳಿಬಿಟ್ಟಿದ್ದ, ಆವೇಶದ ಭರದಲ್ಲಿದ್ದ ಸುಧೀರನಿಗೆ ಸ್ವತಃ ತಾನು ಏನು ಮಾಡಿದೆನೆಂದೇ ಅರೆಕ್ಷಣ ನಂಬಲಾಗಲಿಲ್ಲ.

ಹಿಂದಿರುಗಿದ ಸುಧೀರನ ಬರಿಗೈ ನೋಡಿ ’ಎಲ್ಲಿ ಹಾಕಿದಿ ದುಡ್ಡನ್ನು?’ ಗಾಬರಿಯಿಂದ ಕೇಳಿದಳು ತಾರಕ್ಕ. ಚಂದಣ್ಣನಿಗೆ ಎಲ್ಲವೂ ತಿಳಿದು ಹೋಗಿತ್ತು. ಆತ ಆಗಲೇ ಅವಸರಿಸಿ ಹೊರಹೋಗಿ ಬಾವಿಯಲ್ಲಿ ಇಣುಕಿ ಹಾಕಿ ’ಅಯ್ಯೋ ಅಯ್ಯೋ ಇವನ ಪೌರುಷ ನೋಡು’ ಎಂದು ಥಕಧಿಮಿ ಶುರು ಮಾಡಿದ್ದ. ’ಆ ಹಣ ಗಣಪತಿ ಹಬ್ಬದ ಖರ್ಚಿಗೆಂದೇ ತಂದಿದ್ದು, ಈಗ ಸರಿಯಾಗಿದೆ ಬಿಡು’ ಎನ್ನುತ್ತ ನಿರಾಳನಾಗಿ ಸುಧೀರ ಕುರ್ಚಿಯಲ್ಲಿ ಒಂದು ಪುಸ್ತಕ ಹಿಡಿದು ಕೂತ. ನೋಡು ನೋಡುತ್ತಿರುವಂತೆಯೇ ಬಾವಿಯಲ್ಲಿ ಗಾಂಧೀ ಚಿತ್ರಗಳನ್ನು ಹೊತ್ತ ನೋಟುಗಳು ಇಡೀ ಮನುಷ್ಯ ಲೋಕದ ಒಂದು ವ್ಯಂಗ್ಯದಂತೆ ಚಲ್ಲಾಪಿಲ್ಲಿಯಾಗಿ ತೇಲ ತೊಡಗಿದ್ದವು.

ಬೀರಜ್ಜನನ್ನೇ ಬಾವಿಗೆ ಇಳಿಸಿದ ಚಂದಣ್ಣ ಖಾಲಿ ಬಕೇಟಿಗೆ ಕಟ್ಟಿದ ಹಗ್ಗ ಇಳಿ ಬಿಟ್ಟು ಒಂದೊಂದೇ ನೋಟು ಸಿಕ್ಕಿದ ಕೂಡಲೇ ಜಗ್ಗಿ ತೆಗೆದು ಕಟ್ಟೆಯ ಮೇಲಿರಿಸಿಕೊಳ್ಳತೊಡಗಿದ. ಕೆಳಗಿಳಿದು ನಿಂತ ಬೀರಜ್ಜನಿಗೆ ದುಡ್ಡಿನ ಬಾವಿಯಲ್ಲೇ ತಾನಿರುವಂತೆ ಅನ್ನಿಸಿ ವಿಚಿತ್ರ ನಗುವೊಂದು ಉಕ್ಕಿ ಬಂತು. ಚುರುಕು ಬಿಸಿಲಿಗೆ ಗೋಪಜ್ಜಿ ಒಣಗಿಸಿದಾಗ ತುಸುವೇ ಗರಿಗರಿಯಾದ ನೋಟುಗಳು ಈಗ ಎರಡನೇ ಬಾರಿ ಅರ್ಧಂಬರ್ಧ ನೀರು ಹೀರಿಕೊಂಡು ಬಣ್ಣವೆಲ್ಲ ಮಾಸುವುದರಲ್ಲಿತ್ತು. ಚಂದಣ್ಣ ಕಟ್ಟೆಯ ಮೇಲಿರಿಸಿಕೊಂಡ ನೋಟುಗಳಲ್ಲಿ ಕೆಲವು ಬೀಸಿ ಬಂದ ಗಾಳಿಗೆ ಪುನಃ ಹಾರಿ ಬಾವಿಗೆ ಬಿದ್ದವು. ಹಾಗಾಗಿ ತೆಗೆದ ನೋಟನ್ನೇ ಮತ್ತೆ ಮತ್ತೆ ತೆಗೆಯುವಾಗ ಚಂದಣ್ಣನ ಲೆಕ್ಕ ತಪ್ಪಿ ಹೋಗಿ ಎರಡು ಸಾವಿರಕ್ಕಿಂತ ಜಾಸ್ತಿಯೇ ಇದ್ದಂತಹ ಭ್ರಮೆಯಾಗಿಸಿತ್ತು.

ವಿಡಿಯೋ

ಸುನಂದಾ ಕಡಮೆ

ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು  ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವು ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು ಇವು ನಾಲ್ಕು ಕಾದಂಬರಿಗಳು. ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳು ಹೊರಬಂದಿವೆ. ಇವರಿಗೆ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಛಂದ ಪುಸ್ತಕ ಬಹುಮಾನ, ಎಂ.ಕೆ. ಇಂದಿರಾ ಬಹುಮಾನ, ಕಲೇಸಂ ಸುಧಾಮ ದತ್ತಿನಿಧಿಯ 'ತ್ರಿವೇಣಿ' ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ದೊರೆತಿದೆ. 

 

 

More About Author