Poem

ಗಾಯಗೊಂಡ ಪತಂಗವೊಂದರ ಪತ್ರ


ನನ್ನ ಕನಸಿನ ಓಣಿಯ ಆ ತಿರುವಿನಲ್ಲಿ
ನೀನು ನನಗಾಗಿ ಕಾಯುತ್ತಾ ನಿಂತಿರುತ್ತಿ
ನಾನು ಬಣ್ಣ ಬಣ್ಣದ ಗಾಯಗಳ ಹೆಜ್ಜೆಯೂರುತ್ತಾ
ನೀನಿರುವಲ್ಲಿಗೆ ಬಂದರೆ ಅಲ್ಲಿ ನೀನಿರುವುದಿಲ್ಲ
ನಿನ್ನ ಬಿಸಿ ಬಿಸಿಯಾದ ನೆನಪುಗಳಿರುತ್ತವೆ

ಚಂದಿರ ಲೋಕದ ತಾರೆಯರು
ನಾನು ಬರೆದ ವಿರಹಗೀತೆಯ ರಾಗವಾಗಿ ಹಾಡುತ್ತಾ
ಸಕಲ ಕಲ್ಲು ದೇವರಿಗೆ
ಈ ಶಬ್ದಹಬ್ಬದಲಿ ಕಣ್ಣೀರು ತರಿಸುತ್ತಾರೆ
ಈ ಚರ್ಮಸುಲಿಯುವ ಚಳಿಗಾಲದಲಿ
ನಿನ್ನ ಹೆರಳ ಕತ್ತಲ ಕಾಡಿನಲಿ ಕರಿಗೂಳಿಯಾಗಿ
ದಿಕ್ಕಾಪಾಲಾಗಿ ಓಡಬೇಕೆನ್ನುವ ನನ್ನ ಬಯಕೆಗೆ
ನಾಳೆಯ ಸೂರ್ಯನೂ ಆಶೀರ್ವದಿಸುತ್ತಿಲ್ಲ

ಹಸಿದಾಗ ನಿನ್ನ ರಸವತ್ತಾದ ಮುತ್ತು
ಬೇಕಾದಾಗಲೆಲ್ಲ ನಿನ್ನ ಒಂದು ಗಟ್ಟಿ ಆಲಿಂಗನ
ಬಹುದುಬಾರಿಯಾಗಿರುವ ಈ ಬದುಕಿನಲಿ
ಸೂರ್ಯ ಚಂದಿರ ತಾರೆಗಳೆಲ್ಲ
ಮುನಿಸಿಕೊಂಡು ದೂರ ದೂರ ಹೊರಟಿದ್ದಾರೆ
ಕತ್ತಲೋ ಹಗಲೋ
ಇಲ್ಲೀಗ ಯಾರ ಮುಖ ಯಾರಿಗೂ ಕಾಣುತ್ತಿಲ್ಲ
ಇನ್ನು ನನ್ನ ಹೃದಯದ ಮುಖ ನೀನು
ನಿನ್ನ ಹೃದಯದ ಮುಖ ನಾನು
ಹೇಗೆ ತಾನೆ ಕಾಣೋಣ
ಹುಣ್ಣಿಮೆ ಅಮವಾಸ್ಯೆ ಒಂದಾಗಿರುವ ಈ ದಿನ

ನನ್ನೆದೆಯೊಳಗೊಂದು
ಅಮಾಯಕ ಹೃದಯದ ದೀಪ ಉರಿಯುತ್ತಿದೆ
ಎಂದು ತೋರಿಸಿದವಳು ನೀನು
ಕಣ್ಣಹನಿಗಳ ಉಳಿಯಿಂದ ಈ
ಮೆದು ಹೃದಯವ ನಾದಿ ಕಟೆದು ಕೆತ್ತಿ ಕಲಾಕೃತಿಯಾಗಿಸಿ
ನಿನ್ನ ಪಾದಕ್ಕರ್ಪಿಸುವ ಕನಸಿನ ಹುಡುಗ ನಾನು

ಅಷ್ಟು ಆ ಲೋಕದಷ್ಟು ದೂರವಿರುವ
ನಿನ್ನೆದೆಯೊಳಗಿನ ಹೂದೋಟಕ್ಕೆ
ಉರಿಗೊಳ್ಳಿಯ ಕಾಡ ನಡುವಿನಿಂದ ಹಾರಿ ಬಂದು
ದಾಳಿ ಮಾಡುವ ಸಂಚು ರೂಪಿಸುತ್ತಿದ್ದಾರೆ
ನನ್ನಾಸೆಯ ಸಾವಿರದ ಅಂತರಂಗದ ಪತಂಗ

ಬಂದೊಮ್ಮೆ ಬಿಗಿದಪ್ಪಿಕೊಳಬಾರದೆ ನೀನು
ಸೂರ್ಯ ಚಂದಿರನಷ್ಟು ದೂರವೇನಿಲ್ಲ ನೀನು ನಾನು

ವೀರಣ್ಣ ಮಡಿವಾಳರ

ವೀರಣ್ಣ ಮಡಿವಾಳ ಅವರು ಸೆಪ್ಟೆಂಬರ್ 01, 1983ರಂದು ಜನಿಸಿದರು. ಕಲಿವಾಳ, ಕಲಕೇರಿ, ಸಿರಿಗೆರೆ, ಮುಂಡರಗಿ, ಕೊಪ್ಪಳ ಮತ್ತು ಗುಲ್ಬರ್ಗದಲ್ಲಿ ವಿದ್ಯಾಭ್ಯಾಸ. 2007 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸವಣೂರು ತಾಲ್ಲೂಕಿನ ಮೆಳ್ಳಾಗಟ್ಟಿ ಪ್ಲಾಟ್ ನಲ್ಲಿ ಸೇವೆ ಆರಂಭ. ಸದ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಾವಡ್ಯಾನವಾಡಿಯಲ್ಲಿ ವೃತ್ತಿ. ಗುಲ್ಬರ್ಗಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2010ರಲ್ಲಿ 'ನೆಲದ ಕರುಣೆಯ ದನಿ' ಕವನ ಸಂಕಲನ ಮತ್ತು ಆಡಿಯೋ ಬುಕ್ ಪ್ರಕಟವಾಗಿದೆ. ಚಿತ್ರ ಮತ್ತು ಫೊಟೋಗ್ರಫಿಯಲ್ಲೂ ಕವಿತೆಯನ್ನೇ ಹುಡುಕುತ್ತಿರುವ ವೀರಣ್ಣ 2013 ರಲ್ಲಿ ಗುಲ್ಬರ್ಗದಲ್ಲಿ ಸಾಂಗ್ಸ್ ಆಫ್ ಸೈಲೆನ್ಸ್ ಎಂಬ ಛಾಯಾಚಿತ್ರ ಪ್ರದರ್ಶನ ನಡೆಸಿದ್ದಾರೆ. 

ಕನ್ನಡದ ಚೊಚ್ಚಲ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ , ಬೇಂದ್ರೆ ಗ್ರಂಥ ಬಹುಮಾನ, ಇಂಚಲ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಅರಳು ಪ್ರಶಸ್ತಿ, ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಮತ್ತು ಕಾವ್ಯಸ್ಪರ್ಧೆಗಳಿಂದ ಪುರಸ್ಕೃತರಾಗಿರುವ ವೀರಣ್ಣರ ಕವಿತೆ ಇತರ ಭಾಷೆಗಳಿಗೆ ಅನುವಾದಗೊಂಡಿವೆ ಮತ್ತು ಪಠ್ಯದಲ್ಲಿ ಸೇರಿವೆ. 

More About Author