Story

ಗೋಡೆ

“ಬುದ್ಧಿಯನ್ನೂ ಪ್ರೀತಿಯನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಬೇಡ ಕ್ಯಾಟಿ. ನನಗಿಷ್ಟವಾಗುವುದಿಲ್ಲ” ಹೇಳಿದವಳ ಕಣ್ಣಂಚಿನಲ್ಲಿ ನೀರಿತ್ತು. ಅರೆನಿಮಿಷದ ಮೌನ. ಮತ್ತೆ ಅವಳೇ ಮಾತನಾಡಿದಳು- “ಮನಸ್ಸಿನಿಂದ ಪ್ರೀತಿಸಿದ್ದೇನೆ ನಿನ್ನನ್ನು. ಬುದ್ಧಿಯಿಂದ ಅಳೆದು ತೂಗಿ ಹುಟ್ಟಿದ ಪ್ರೀತಿ ಇದಲ್ಲ. ಅಂತಹ ಪ್ರೀತಿಗೆ ಈಗ ಬುದ್ಧಿಯ ಸ್ಪರ್ಶ ಕೊಡಬೇಡ” ಎಂದವಳು ಸಂಪೂರ್ಣ ಕಣ್ಣೀರಾದಳು.

“ಆದರೆ ನಾನ್ಯಾವತ್ತೂ ನಿನ್ನನ್ನು ಮನಃಪೂರ್ವಕವಾಗಿ ಪ್ರೀತಿಸಿಲ್ಲ, ಮ್ಯಾಗಿ. ಈ ಸಮಾಜಕ್ಕಾಗಿ ನನಗೆ ನಿನ್ನೊಂದಿಗಿನ ಸಂಗಾತ ಬೇಕಿತ್ತು. ಪರಂಪರೆ ಸೃಷ್ಟಿಸಿದ ಗೋಡೆಗಳನ್ನು ಕೆಡವಿ ಹಾಕುವುದಕ್ಕಾಗಿಯೇ ನಾಲ್ಕು ಗೋಡೆಗಳ ಮಧ್ಯೆ ನಿನ್ನೊಂದಿಗೆ ಬದುಕಿದವ ನಾನು. ಮತ್ತೊಮ್ಮೆ ಹೇಳುತ್ತೇನೆ, ನಿನ್ನ ಪ್ರೀತಿಯನ್ನು ನಾನ್ಯಾವತ್ತೂ ನನ್ನ ಹೃದಯದೊಳಕ್ಕೆ ಬಿಟ್ಟುಕೊಂಡಿಲ್ಲ. ಮೆದುಳಿನ ತುಂಬೆಲ್ಲಾ ಸುತ್ತಾಡಿಸಿ, ಅಲ್ಲಿಂದಲೇ ಹೊರಕಳುಹಿಸಿದ್ದೇನೆ” ಗೋಡೆಯ ಕಡೆಗೆ ಮುಖ ಮಾಡುತ್ತಾ ನುಡಿದ ಕಾರ್ತಿಕ್‍ನಲ್ಲಿ ಅಳಿಸಲಾರದ ನಿರ್ಲಿಪ್ತತೆಯಿತ್ತು. “ನನ್ನ ಪ್ರೀತಿಯ...” ಏನೋ ಮಾತನಾಡುವುದಕ್ಕೆ ಹೊರಟವಳನ್ನು ದನಿಯೆತ್ತರಿಸಿದ ಅವನ ಮಾತು ತಡೆಯಿತು- “ಸುಟ್ಟುಹಾಕು ನಿನ್ನ ಮನಸ್ಸಿನಲ್ಲಿರುವ ಆ ಪ್ರೀತಿಯನ್ನು. ನಿಜ ಹೇಳುತ್ತೇನೆ- ಯುದ್ಧ ಗೆಲ್ಲುವುದಕ್ಕೆ ಹೊರಟವನ ಕೈಗೆ ಸಿಕ್ಕಿದ ಖಡ್ಗ ನೀನು. ನೀನು ನೆಪ ಮಾತ್ರ. ನನ್ನ ಬಾಳಿನಲ್ಲಿ ನೀನು ಏನೂ ಆಗಿರಲಿಲ್ಲ. ಅಂದಮೇಲೆ ಈಗ ಬಿಟ್ಟುಹೋಗುವುದರಲ್ಲೇನು ತಪ್ಪಿದೆ? ನೀನೇ ಹೇಳು” ಈಗಲೂ ಅವನು ಗೋಡೆಯತ್ತಲೇ ನೋಡುತ್ತಿದ್ದ.

“ಅಂದರೆ ನನ್ನ ಭಾವನೆಗಳೊಂದಿಗೆ ಆಟವಾಡುವುದು ನಿನ್ನ ಯುದ್ಧದ ಒಂದು ಭಾಗವಾಗಿತ್ತೇನೋ?!” ಅವಳ ಪ್ರಶ್ನೆಯಲ್ಲಿ ವ್ಯಂಗ್ಯ ತುಂಬಿತ್ತು. “ಆ ಚರ್ಚೆಯೆಲ್ಲಾ ಈಗ ಬೇಡ ಮ್ಯಾಗಿ. ಇದನ್ನೆಲ್ಲ ನಾನೀಗಾಗಲೇ ನಿನಗೆ ವಿವರಿಸಿಯಾಗಿದೆ. ನನ್ನ ಬದುಕಿನ ಪಯಣದಲ್ಲಿ ನೀನು ಒಂದು ಭಾಗ ಮಾತ್ರ. ನೀನೇ ನನ್ನ ಬದುಕಲ್ಲ. ಹೊಸದೇನನ್ನೋ ಸಾಧಿಸಬೇಕೆಂದಿರುವ ನನಗೆ, ನೀನೆಂದಲ್ಲ, ಬೇರಾವ ಹುಡುಗಿಯೂ ನನ್ನ ಬದುಕಾಗುವುದಿಲ್ಲ. ಶಾಶ್ವತ ಸಂಬಂಧಗಳ ಸಂಕೋಲೆಯಲ್ಲಿ ಬಂಧಿಯಾಗಿ ಬದುಕುವ ಇಚ್ಛೆ ನನಗಿಲ್ಲ. ಆ ಸಂಕೋಲೆಯನ್ನು ಮೀರುವುದಕ್ಕಾಗಿಯೇ ನಿನ್ನನ್ನು ಆರಿಸಿಕೊಂಡವನು ನಾನು. ಅಷ್ಟಕ್ಕೂ ನಾನೇನೂ ನಿನ್ನನ್ನು ಮದುವೆಯಾಗುವ ಭರವಸೆ ನೀಡಿ ಮೋಸ ಮಾಡಿಲ್ಲ. ನಮ್ಮಿಬ್ಬರ ಸಂಬಂಧ ಸ್ಥಿರವಾದುದಲ್ಲ ಎನ್ನುವುದನ್ನು ಆರಂಭದಲ್ಲೇ ನಾನು ಹೇಳಿದ್ದೆ. ಇಷ್ಟುದಿನ ನಾವಿಬ್ಬರು ಬದುಕಿದ್ದೇ ಅಶಾಶ್ವತ ಸಂಬಂಧದ ನೆಪದಲ್ಲಿ. ನಮ್ಮಿಬ್ಬರ ಮಧ್ಯೆ ಪ್ರೀತಿ ಯಾವತ್ತೂ ಇರಲೇ ಇಲ್ಲ. ಇದ್ದಿದ್ದರೆ ದೈಹಿಕ ಆಕರ್ಷಣೆ ಮಾತ್ರ” ಅವನ ಧ್ವನಿಯಲ್ಲಿ ಹಿಂದಿಗಿಂತಲೂ ಹೆಚ್ಚಿನ ಖಚಿತತೆಯಿತ್ತು.

“ಹಾಗಿದ್ದರೆ ಅಂದು ನನಗೆ ವಾಟ್ಸಾಪಿನಲ್ಲಿ ಪ್ರೇಮಸಂದೇಶ ಕಳಿಸುತ್ತಿದ್ದ ಆ ಹಿಂದಿ ಯುವಕನನ್ನು ಹುಡುಕಿಕೊಂಡು ಹೋಗಿ ಹೊಡೆದೆಯಲ್ಲಾ, ಅದಕ್ಕೇನನ್ನುತ್ತೀಯಾ? ನಾನು ನಿನಗೆ ಮಾತ್ರ ಸೇರಿದವಳೆಂಬ ಪೊಸೆಸಿವ್‍ನೆಸ್ ನಿನ್ನಲ್ಲಿತ್ತು ತಾನೇ?” ತಮ್ಮಿಬ್ಬರ ಪ್ರೇಮವನ್ನು ರುಜುವಾತುಪಡಿಸುವ ಹಠವಿತ್ತು ಅವಳ ಧ್ವನಿಯಲ್ಲಿ.

“ಕಾಳಜಿಗೆ ಪ್ರೀತಿ, ಪೊಸೆಸಿವ್ನೆಸ್ನ ಮುಖವಾಡ ತೊಡಿಸಬೇಡ. ನೀನು ಇಷ್ಟಪಡದಮೇಲೂ ಅವನು ಮೆಸೇಜ್ ಕಳಿಸುತ್ತಿದ್ದ. ಅದನ್ನು ನನಗೆ ಸಹಿಸಿಕೊಳ್ಳಲಾಗಿಲ್ಲ. ಅದರರ್ಥ ನಿನ್ನ ಮೇಲೆ ಪ್ರೀತಿಯಿತ್ತು ಎಂದಲ್ಲ ಮ್ಯಾಗಿ”

“ಆದರೆ ನಾನು ನಿನ್ನನ್ನು ಪ್ರೀತಿಸಿದ್ದಂತೂ ನಿಜ ಕ್ಯಾಟಿ. ನಿನ್ನನ್ನು ಅಂದರೆ ನಿನ್ನ ದೇಹವನ್ನಲ್ಲ, ನಿನ್ನ ಮನಸ್ಸನ್ನು; ನಿನ್ನ ವ್ಯಕ್ತಿತ್ವವನ್ನು; ನಿನ್ನಲ್ಲಿರುವ ಸಾಧನೆಯ ತುಡಿತವನ್ನು” ಹೇಳಿದವಳು ಮಾತು ಮುಗಿಯಿತೆಂಬಂತೆ ತನ್ನ ಕೋಣೆಗೆ ನಡೆದಳು. ಅವಳ ಕಣ್ಣಿನ ನೀರು ಇಂಗಿತ್ತು. “ನಾನು ನಾಳೆ ಬೆಳಗ್ಗೆ ಹೊರಡುತ್ತಿದ್ದೇನೆ” ಹೇಳಿದ್ದು ಅವಳಿಗೆ ಕೇಳಿಸಿತೋ ಇಲ್ಲವೋ ಅವನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಹೋಗಲಿಲ್ಲ. ರಾತ್ರಿ ಹನ್ನೆರಡು ದಾಟಿರುವುದೂ ಆತನ ಗಮನಕ್ಕೆ ಬರಲಿಲ್ಲ. ಅದೆಷ್ಟೋ ಹೊತ್ತಿನವರೆಗೆ ಗೋಡೆಯನ್ನೇ ನೋಡುತ್ತಿದ್ದ. ಕಾರ್ತಿಕ್ ಮತ್ತು ಮೇಘನಾ. ಅವಳು ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಳು. ಅವನು ಫೆಲೋಶಿಪ್ ಪಡೆದುಕೊಂಡು ಸಂಶೋಧನೆ ನಡೆಸುತ್ತಿದ್ದ. ಇಬ್ಬರೂ ಪ್ರತಿಭಾನ್ವಿತರೇ.

ಕಾರ್ತಿಕ್‍ನಲ್ಲಿ ಆಧುನಿಕ ಚಿಂತನೆಗಳ ಪ್ರಭಾವ ಗಾಢವಾಗಿತ್ತು. ಡಿಗ್ರಿ ಮುಗಿಸಿದ ಬಳಿಕ ತನ್ನ ಸುತ್ತಲಿನ ಸಮಾಜದ ಬಗೆಗೆ ಮತ್ತಷ್ಟು ಆಳವಾಗಿ ತಿಳಿದುಕೊಳ್ಳುವ ಸಲುವಾಗಿಯೇ ಸಮಾಜಶಾಸ್ತ್ರದಲ್ಲಿ ಎಂ. ಎ. ಮಾಡುವ ನಿರ್ಧಾರ ಕೈಗೊಂಡಿದ್ದ. ಇಂತಹ ಮನೋಭಾವದ ಕಾರ್ತಿಕ್‍ನನ್ನು ಮೊದಲ ಮಾತಿನಲ್ಲಿಯೇ ಆಕರ್ಷಿಸಿದ್ದು ಅವನದೇ ತರಗತಿಯ ಮೇಘನಾ. ಅವಳು ಸಂಪ್ರದಾಯಸ್ಥ ಕುಟುಂಬದಿಂದ ಬಂದವಳಾಗಿದ್ದಳು. ಶ್ರೀಮಂತ ಕುಟುಂಬದವಳು. ಕಾರ್ತಿಕ್‍ನಂತೆಯೇ ಅವಳಲ್ಲೂ ಆಧುನಿಕತೆಗೆ ತುಡಿಯುವ ಪ್ರವೃತ್ತಿ ಇತ್ತು. ಪ್ರಬಂಧ ಮಂಡನೆಯ ಸಮಯದಲ್ಲಿ ವಿಚಾರವೊಂದನ್ನು ವಿವರಿಸುತ್ತಾ ಆಕೆ ಸಂಪ್ರದಾಯಸ್ಥ ಸಮಾಜವನ್ನು ಟೀಕಿಸಿದ ಪರಿ ಕಾರ್ತಿಕ್‍ನಿಗೆ ಇಷ್ಟವಾಗಿತ್ತು. ತರಗತಿ ಮುಗಿದ ಮೇಲೆ ಅವಳನ್ನು ಅಭಿನಂದಿಸಿದ್ದ. ಊಟಕ್ಕೆ ಕ್ಯಾಂಟೀನ್‍ಗೆ ಹೊರಟುನಿಂತಿದ್ದ ಅವಳು ಇವನನ್ನೂ ಕರೆದಳು. ಖುಷಿಯಿಂದಲೇ ಹೊರಟ. ಊಟದ ಸಂದರ್ಭದಲ್ಲಿ ನಡೆದ ಚರ್ಚೆಗಳೆಲ್ಲಾ ಸಮಾಜ, ಸಂಪ್ರದಾಯ, ಆಧುನಿಕತೆಗಳ ಕುರಿತಾಗಿಯೇ. ತಮ್ಮಿಬ್ಬರದ್ದೂ ಸಮಾನ ಮನಸ್ಸು ಎಂದು ತಿಳಿಯುವುದಕ್ಕೆ ಅವರಿಬ್ಬರಿಗೂ ಹೆಚ್ಚು ಸಮಯ ಬೇಕಾಗಲಿಲ್ಲ.

ಎಂ. ಎ. ಮಾಡುತ್ತಿದ್ದ ಎರಡು ವರ್ಷಗಳಲ್ಲಿ ಅವರು ತೀರಾ ಹತ್ತಿರವಾಗಿದ್ದರು. ಅವನು ಅವಳ ಪಾಲಿಗೆ ಕ್ಯಾಟಿಯಾಗಿದ್ದ. ಅವಳು ಮ್ಯಾಗಿಯಾಗಿದ್ದಳು. ಗ್ರಂಥಾಲಯದಲ್ಲಿ ತಾನು ಓದಿದ ಪುಸ್ತಕದಲ್ಲಿದ್ದ ವಿಚಾರಗಳನ್ನು ಅವನು ಅವಳ ಜೊತೆ ಚರ್ಚಿಸುತ್ತಿದ್ದ. ಅವಳಿಗೆ ಇವನಂತೆ ಓದುವ ಹುಚ್ಚಿರಲಿಲ್ಲ. ಅವನು ವಿವರಿಸುತ್ತಿದ್ದಾಗ ಅವಳು ಕಿವಿಯಾಗುತ್ತಿದ್ದಳು. ಅವನು ಮಂಡಿಸಿದ ತರ್ಕಗಳು ಒಪ್ಪಿಗೆಯಾಗದೇ ಇದ್ದಾಗಲೂ ಅದನ್ನು ಸಾರಾಸಗಟಾಗಿ ವಿರೋಧಿಸುತ್ತಿರಲಿಲ್ಲ. ಪುಸ್ತಕ, ಓದು, ಸಮಾಜ, ಸಿದ್ಧಾಂತ ಇವೆಲ್ಲವನ್ನೂ ಮೀರಿದ ಖಾಸಗಿತನದಲ್ಲಿ ಅವಳಿಗೆ ಹೆಚ್ಚು ನಂಬಿಕೆಯಿತ್ತು. ಎಲ್ಲಾ ಸಿದ್ಧಾಂತಗಳಿಗೂ ಪ್ರಾಕ್ಟಿಕಲ್ ಆಗುವ ಸಾಮರ್ಥ್ಯ ಎನ್ನುವ ಕಾರ್ತಿಕ್‍ನ ಚಿಂತನೆ ಕೆಲವೊಮ್ಮೆ ಅವಳಿಗೆ ಇಷ್ಟವಾಗುತ್ತಿರಲಿಲ್ಲ. “ಸಿದ್ಧಾಂತಗಳನ್ನೆಲ್ಲಾ ಮೀರಿದ, ಸಿದ್ಧಾಂತಗಳ ಪರಿಧಿಗೆ ಒಳಪಡದ ಬದುಕೂ ಅಸ್ತಿತ್ವದಲ್ಲಿದೆ ಕ್ಯಾಟಿ. ಅದಕ್ಕೂ ಮೌಲ್ಯವಿದ್ದೇ ಇದೆ” ಎಂದಿದ್ದಳು ಒಮ್ಮೆ. ಅವನಿಗೆ ಅವಳ ಈ ತರ್ಕ ಇಷ್ಟವಾಗಿರಲಿಲ್ಲ. ವಾದಿಸಿದ್ದ. ಅವಳು ನಸುನಗುತ್ತಲೇ ಮೌನವಾಗಿ ಕುಳಿತು ಅವನು ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡಿದ್ದಳು.

“ಮದುವೆಯ ಬಗ್ಗೆ ನಿನಗೇನನ್ನಿಸುತ್ತದೆ ಮ್ಯಾಗಿ?” ಅದೊಂದು ಸಂಜೆ ಗ್ರಂಥಾಲಯದೆದುರಿನ ಕಲ್ಲುಬೆಂಚಿನ ಮೇಲೆ ಕುಳಿತು ಮಾತನಾಡುತ್ತಿದ್ದಾಗ ಪ್ರಶ್ನಿಸಿದ್ದ. ಮೇಘನಾಳಿಗೆ ಇವನ ಪ್ರಶ್ನೆ ಸರಿಯಾಗಿ ಅರ್ಥವಾಗಿರಲಿಲ್ಲ. ಅವಳ ಮುಖದಲ್ಲಿರುವ ಗೊಂದಲವನ್ನು ತಕ್ಷಣ ಅರ್ಥೈಸಿಕೊಂಡ ಕಾರ್ತಿಕ್ ತನ್ನ ಪ್ರಶ್ನೆಯನ್ನು ಮತ್ತಷ್ಟು ಸ್ಪಷ್ಟಪಡಿಸಿದ- “ಅಂದರೆ, ಈ ಸಮಾಜ ಸೃಷ್ಟಿಸಿದ ರೀತಿಯಲ್ಲೇ ಗಂಡು ಹೆಣ್ಣು ಮದುವೆ ಆಗಬೇಕು. ಅದೇ ಕಟ್ಟುಪಾಡುಗಳ ಒಳಗೇ ಬದುಕಬೇಕು ಎನ್ನುವ ಈ ವ್ಯವಸ್ಥೆ ಸರಿಯಿದೆಯಾ ಅಂತ ಕೇಳುತ್ತಿದ್ದೇನೆ.” ಅವಳಿಗೆ ಉತ್ತರ ಕೊಡುವುದಕ್ಕೆ ಕಷ್ಟವಾಯಿತು. ವಾಸ್ತವವಾಗಿ ಅವಳಲ್ಲಿ ಆ ಬಗೆಯ ಚಿಂತನೆಗಳೇ ಇರಲಿಲ್ಲ. ಅವನನ್ನೇ ಮರುಪ್ರಶ್ನಿಸಿದ್ದಳು- “ನಿನಗೇನನ್ನಿಸುತ್ತದೆ? ಅದನ್ನು ಮೊದಲು ಹೇಳು.” “ಸಂಪ್ರದಾಯಬದ್ಧವಾಗಿ ಮದುವೆಯಾಗಿ ಕೊನೆವರೆಗೂ ಜೊತೆಯಾಗಿ ಬದುಕುವ ನಾಟಕವಾಡುವುದರಲ್ಲಿ ನನಗೆ ನಂಬಿಕೆ ಇಲ್ಲ. ಒಂದು ಸಂಬಂಧವನ್ನು, ಅದರ ಪವಿತ್ರತೆಯನ್ನು ಜೀವನಪೂರ್ತಿ ಕಾಯ್ದುಕೊಳ್ಳಲಾಗುತ್ತದೆ ಎಂಬ ಮಾತೇ ಸುಳ್ಳು, ಅಪ್ರಾಯೋಗಿಕ. ಗಂಡು- ಹೆಣ್ಣಿನ ಸಂಬಂಧಕ್ಕೆ ಮದುವೆ ಎನ್ನುವುದು ಕಟ್ಟುಪಾಡು. ಲಿವಿಂಗ್ ಟುಗೆದರ್ ಸರಿ ಎನ್ನಿಸುತ್ತದೆ ನನಗೆ.” ಅವಳೇನೋ ಹೇಳಲು ಉತ್ಸುಕವಾಗಿರುವುದನ್ನು ಗಮನಿಸಿ ಮಾತು ನಿಲ್ಲಿಸಿದ. “ಮದುವೆ ಆಗಿರುವವರು ಜೊತೆಯಾಗಿ ಬದುಕುತ್ತಿರುವಂತೆ ನಟಿಸುತ್ತಾರೆ ಎಂದು ನೀನಂದುಕೊಂಡಿರುವುದೇ ದೊಡ್ಡ ತಪ್ಪು. ನಿಜವಾದ ಪ್ರೀತಿಯೂ ಇರಬಹುದಲ್ಲಾ?” ಅವಳ ಮಾತು ನಿಜ ಎನಿಸಿತು ಕಾರ್ತಿಕ್‍ನಿಗೆ. ಎಲ್ಲರನ್ನೂ ಒಂದೇ ಬಗೆಯಲ್ಲಿ ಅಳೆದ ಮೂರ್ಖತನ ಆತನಲ್ಲಿ ನಾಚಿಕೆಯನ್ನು ಹುಟ್ಟಿಸಿತು. “ಹಾಗಾದರೆ ಲಿವಿಂಗ್ ಟುಗೆದರ್ ಬಗ್ಗೆ ಏನನ್ನುತ್ತೀಯಾ?” ಪ್ರಶ್ನಿಸಿ, ಅವಳುತ್ತರಕ್ಕೆ ಆಸಕ್ತಿಯಿಂದ ಕಾದುಕುಳಿತ. ಗ್ರಂಥಾಲಯದ ಓದನ್ನು ಖಾಲಿ ಮಾಡುವುದಕ್ಕೆ ಕಿವಿಯಾಗಿ ಮೇಘನಾಳನ್ನು ಬಳಸಿಕೊಳ್ಳುತ್ತಿದ್ದ ಕಾರ್ತಿಕ್ ಅವಳ ಮಾತಿಗಾಗಿ ತಾನು ಮೌನವಾದದ್ದು ಈ ಎರಡು ವರ್ಷಗಳಲ್ಲಿ ಇದೇ ಮೊದಲು. “ಈಗಾಗಲೇ ಮದುವೆ ಆಗಿರುವವಳಲ್ಲಿ ಲಿವಿಂಗ್ ಟುಗೆದರ್ ಬಗ್ಗೆ ಕೇಳುತ್ತೀಯಲ್ಲೋ ಪೆದ್ದ” ಹೇಳಿದವಳು ಮೆತ್ತಗೆ ಅವನ ತಲೆ ಮೇಲೆ ಕುಟ್ಟಿದಳು. “ನಿನಗೆ ಮದುವೆ ಆಗಿದೆಯಾ? ಮತ್ತೆ ತಾಳಿ?” ಕಾರ್ತಿಕ್‍ನಿಗೆ ಹುಚ್ಚು ಹಿಡಿದಂತಾಗಿತ್ತು. “ಆಧುನಿಕ ಮನೋಭಾವದವಳು ನಾನು. ತಾಳಿ ಕಟ್ಟಿಕೊಂಡು ತಿರುಗಾಡುವುದರಲ್ಲಿ ನನಗೆ ನಂಬಿಕೆಯಿಲ್ಲ” ಹೇಳಿ ನಿಲ್ಲಿಸಿದವಳು ಪೆಚ್ಚಾದ ಅವನ ಮುಖ ನೋಡುತ್ತಲೇ ಮಾತು ಮುಂದುವರಿಸಿದಳು- “ಕ್ಯಾಟಿ, ಬಾಲ್ಯವಿವಾಹ ನನ್ನದು. ಆಗಿನ್ನೂ ಮನೆಯವರನ್ನು ವಿರೋಧಿಸುವ ಧೈರ್ಯ ನನ್ನಲ್ಲಿರಲಿಲ್ಲ. ನನಗೆ ಹದಿನಾರು ವರ್ಷ. ನನ್ನನ್ನು ಮದುವೆ ಆದವನಿಗೆ ಮೂವತ್ತೈದು. ಮದುವೆ ಆಗಿ ಮೂರು ವರ್ಷಗಳಲ್ಲೇ ಎರಡು ಮಕ್ಕಳು. ಅದಾಗಿ ಒಂದೇ ವರ್ಷಕ್ಕೆ ನನ್ನನ್ನು ಬಿಟ್ಟುಹೋದ. ನನ್ನ ಮನೆಯವರು, ಸಂಬಂಧಿಕರೆಲ್ಲಾ ನನ್ನದೇ ತಪ್ಪು ಎನ್ನುತ್ತಿದ್ದಾರೆ. ಗಂಡ ಬಿಟ್ಟ ನನ್ನನ್ನು ತಂದೆ- ತಾಯಿ ಮನೆಯೊಳಕ್ಕೂ ಸೇರಿಸಿಕೊಂಡಿಲ್ಲ. ಈಗ ಮನೆ- ಮಕ್ಕಳು ಎಲ್ಲಾ ನನ್ನ ಜವಾಬ್ದಾರಿ. ಕೆಲವೊಮ್ಮೆ ಬೆಳಗ್ಗೆ ತರಗತಿಗೆ ಹಾಜರಾಗುವಾಗ ತಡವಾಗುವುದು ಇದೇ ಕಾರಣಕ್ಕೆ. ಇಬ್ಬರು ಮಕ್ಕಳಿಗೂ ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ, ತಿಂಡಿ ತಿನ್ನಿಸಿ ಬರಬೇಕು” ಎಂದವಳು ಕೈಗಳಿಂದ ಮುಖ ಮುಚ್ಚಿಕೊಂಡು ತಲೆ ಬಗ್ಗಿಸಿ ಕುಳಿತಳು. ಅಳುತ್ತಿದ್ದಾಳೆ ಎಂದುಕೊಂಡ ಕಾರ್ತಿಕ್. ನಿಜಕ್ಕೂ ಅವನಿಗೆ ಖೇದವೆನಿಸಿತು. ಸಮಾಜ, ತಪ್ಪುಗಳು, ಪರಿವರ್ತನೆ, ಸುಧಾರಣೆ ಎಂದೆಲ್ಲಾ ಬೊಬ್ಬೆ ಹೊಡೆಯುವ ತಾನು ತನ್ನ ಜೊತೆಗಾತಿಯ ಕಷ್ಟವನ್ನೇ ತಿಳಿದುಕೊಂಡಿಲ್ಲವಲ್ಲ! ಇಲ್ಲ, ಗಂಡ ಬಿಟ್ಟಿರುವ ಅವಳನ್ನು ತಾನು ಮದುವೆಯಾಗಿ ಸಮಾಜಕ್ಕೊಂದು ಸಂದೇಶ ಕೊಡಬೇಕು. ಅವನು ಯೋಚಿಸುತ್ತಿದ್ದಾಗಲೇ ಮೇಘನಾಳ ಜೋರಾದ ನಗು. ಬಾಯಿಯನ್ನು ಕೈಗಳಿಂದ ಅದುಮಿಕೊಂಡರೂ ನಗು ತಡೆಯಲಾಗುತ್ತಿಲ್ಲ ಅವಳಿಗೆ. ಕಾರ್ತಿಕ್‍ನಿಗೆ ಅಚ್ಚರಿಯಾಯಿತು, ವಿಚಿತ್ರವೆನಿಸಿತು.

“ನಾಡಿದ್ದು ಮೂರ್ಖರ ದಿನಾಚರಣೆಗೆ ನಾನು ಫ್ರೀ ಇರುತ್ತೇನೋ, ಇಲ್ಲವೋ ಗೊತ್ತಿಲ್ಲ. ಅದಕ್ಕೆ ಇವತ್ತೇ ನಿನ್ನನ್ನು ಮೂರ್ಖನನ್ನಾಗಿಸಿದ್ದು.” ಹೇಳಿದವಳು ಮತ್ತೂ ಜೋರಾಗಿ ನಗತೊಡಗಿದಳು. ಆಗಸ ಕೆಂಬಣ್ಣಕ್ಕೇರಿತ್ತು. ನಗುವಿನಿಂದಾಗಿ ಮತ್ತಷ್ಟು ದುಂಡಾಗಿ ಹೊಳೆಯುತ್ತಿದ್ದ ಅವಳ ಕೆನ್ನೆಗಳನ್ನು ಕಚ್ಚಿ ತಿನ್ನಬೇಕೆನಿಸಿತ್ತು ಕಾರ್ತಿಕ್‍ನಿಗೆ...ಎಂ. ಎ. ಮುಗಿಸಿದ ಬಳಿಕ ಇಬ್ಬರಿಗೂ ಬೆಂಗಳೂರಿನ ಕಾಲೇಜುಗಳಲ್ಲಿ ಕೆಲಸ ದೊರಕಿತ್ತು. ಇದ್ದ ಆಧುನಿಕ ಮನೋಭಾವಕ್ಕನುಗುಣವಾಗಿ ನಡೆದುಕೊಳ್ಳಲು ಉತ್ತಮ ಅವಕಾಶ ಅದೆಂದು ಭಾವಿಸಿದ ಅವರು ಜೊತೆಗೇ ಬದುಕುವ ನಿರ್ಧಾರ ಕೈಗೊಂಡಿದ್ದರು. ಮದುವೆ ಆಗಿರಲಿಲ್ಲ. ಎರಡೇ ವರ್ಷಗಳಲ್ಲಿ ಕಾರ್ತಿಕ್ ಪಿಎಚ್. ಡಿ. ಗೆ ಅವಕಾಶ ಗಿಟ್ಟಿಸಿಕೊಂಡರೆ, ಮೇಘನಾ ಉಪನ್ಯಾಸಕಿಯಾಗಿಯೇ ಮುಂದುವರಿದಿದ್ದಳು...“ನನ್ನನ್ನು ಬಿಟ್ಟುಹೋಗಲು ಈಗಲೂ ನಿನಗೆ ಬೇಸರ ಆಗುತ್ತಿಲ್ಲ ಎನ್ನುತ್ತೀಯಾ ಕ್ಯಾಟಿ?” ಹೊರಟುನಿಂತವನ ಕಣ್ಣುಗಳನ್ನೇ ನೋಡಿಕೊಂಡು ಪ್ರಶ್ನಿಸಿದಳು ಮೇಘನಾ. ‘ಇಲ್ಲ’ ಎಂಬಂತೆ ತಲೆಯಾಡಿಸಿದವನು ಅವಳ ಕಣ್ಣೋಟಕ್ಕೆ ಬೆದರಿದವನಂತೆ ಕಂಡುಬಂದ.

“ಹೌದು, ಕೆಂಪಾದ ನಿನ್ನ ಕಣ್ಣುಗಳೇ ಹೇಳುತ್ತಿವೆ ನಿನಗೆ ಬೇಸರವಾಗಿಲ್ಲವೆಂದು. ನೀನು ಅಳುತ್ತಿದ್ದ ಸದ್ದು ನನ್ನ ಹೃದಯಕ್ಕೆ ಸ್ಪಷ್ಟವಾಗಿ ಕೇಳಿಸಿದೆ. ತಮಾಷೆಗಾಗಿ ಸೃಷ್ಟಿಸಿಕೊಂಡ ಸಂಬಂಧಗಳೂ ಕೂಡಾ ನಮ್ಮ ಮನದ ಮೂಲೆಯಲ್ಲಿ ಜಾಗ ಪಡೆದೇ ಪಡೆಯುತ್ತವೆ. ಕೆಲವು ಸಂಬಂಧಗಳನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ ಕ್ಯಾಟಿ.” ಅವನ ಮೌನ ಅವಳನ್ನು ಕೆರಳಿಸಿತು. “ನನ್ನೊಂದಿಗೇ ಸಂಪೂರ್ಣ ಬದುಕನ್ನು ನಡೆಸಬೇಕೆಂದು ನಿನಗ್ಯಾವತ್ತೂ ಅನಿಸಿಲ್ಲ ಅನ್ನುತ್ತೀಯಾ ಹಾಗಾದರೆ? ನಿನ್ನ ಮನಃಸ್ಸಾಕ್ಷಿಯನ್ನು ಪ್ರಶ್ನಿಸಿಕೋ. ಉತ್ತರ ಸಿಗುತ್ತದೆ”

ಅವಳ ವಾದದೆದುರು ಅವನ ಮೌನ ಸೋತಿತು. “ಹೌದು. ನಿನ್ನನ್ನು ಮದುವೆಯಾಗಬೇಕು, ನಿನ್ನ ಕೈ ಹಿಡಿದು ಜೀವನ ಸಾಗರವನ್ನು ಈಜಬೇಕೆಂದು ನನಗನ್ನಿಸಿದೆ. ಅಂದು ನೀನು ಯುನಿವರ್ಸಿಟಿಯ ಕಲ್ಲುಬೆಂಚಿನ ಮೇಲೆ ಗಂಡ ಬಿಟ್ಟುಹೋದವಳಂತೆ, ಇಬ್ಬರು ಮಕ್ಕಳನ್ನು ಸಾಕಲು ಕಷ್ಟಪಡುತ್ತಿರುವಂತೆ ತಮಾಷೆಗಾಗಿ ನಟಿಸಿದೆಯಲ್ಲಾ, ಅಂದು ನಿನ್ನನ್ನು ಮದುವೆಯಾಗಬೇಕೆಂಬ ಯೋಚನೆ ನನ್ನ ತಲೆಗೆ ಬಂದಿತ್ತು. ನಿನ್ನನ್ನು ಜರಿದ ಸಮಾಜದ ಎದುರೇ ನಿನ್ನ ಕೈಹಿಡಿದು ಅವರ ಬಾಯಿ ಮುಚ್ಚಿಸಬೇಕೆಂಬ ಹಠ ಆ ಎರಡು ನಿಮಿಷಗಳಲ್ಲಿ ನನ್ನ ಮನವನ್ನು ಹೊಕ್ಕಿತ್ತು. ಮತ್ಯಾವತ್ತೂ ಅಂಥ ಯೋಚನೆ ಬಂದಿಲ್ಲ...” ಅರೆನಿಮಿಷದ ಮೌನ. “ನಾನು ಹುಚ್ಚ ಎನಿಸಿರಬೇಕಲ್ಲ ನಿನಗೆ? ವೈಯಕ್ತಿಕ ಆಸಕ್ತಿಗಳನ್ನು ತೊರೆದು ಸಮಾಜೋದ್ಧಾರಕ್ಕೆ ಹೊರಟವರೆಲ್ಲ ಲೋಕದ ಕಣ್ಣಿಗೆ ಎಂದೆಂದೂ ಹುಚ್ಚರೇ” ಬಿರುಸುಗತಿಯಲ್ಲಿ ನುಡಿದವನು ಕೊನೆಗೆ ಹೀಗಳಿಕೆಯಿಂದ ನಕ್ಕಂತೆ ನಕ್ಕ. “ಅಪ್ಪ- ಅಮ್ಮ ಬೇರೆ ಬೇರೆ ಜಾತಿಯಾದದ್ದಕ್ಕೆ ನನ್ನನ್ನು ಪರಕೀಯನನ್ನಾಗಿಸಿ ತಮಾಷೆ ನೋಡಿದ ಈ ಸಮಾಜದ ಸಂಪೂರ್ಣ ಪರಿಚಯ ನಿನಗಿಲ್ಲ ಮ್ಯಾಗಿ. ಗಾಳಿಯಾಡುವ, ತುಂಬು ಬೆಳಕಿನ ಲೈಬ್ರೆರಿಯಲ್ಲಿ ಕುಳಿತು ಜಾತಿವಾದ, ಜಾತಿ ತಾರತಮ್ಯಗಳನ್ನು ನೀನು ಓದಿದ್ದೀಯಾ. ಆದರೆ ನಾನು ಅವುಗಳನ್ನು ಸ್ವತಃ ಅನುಭವಿಸಿದ್ದೇನೆ. ಕರಿಗತ್ತಲೆಯಲ್ಲಿ, ಉಸಿರುಗಟ್ಟಿಸುವ ಕೋಣೆಯಲ್ಲಿ ಕುಳಿತು ಅವುಗಳನ್ನು ನೆನೆಸಿಕೊಂಡು ಬಿಕ್ಕಿದ್ದೇನೆ...” ಇಷ್ಟೂ ವರ್ಷಗಳಲ್ಲಿ ತನ್ನ ಕ್ಯಾಟಿಯನ್ನು ಇಷ್ಟೊಂದು ಭಾವನಾತ್ಮಕವಾಗಿ ಮೊದಲ ಬಾರಿಗೆ ನೋಡುತ್ತಿದ್ದ ಮೇಘನಾಳಿಗೆ ಅಚ್ಚರಿಯಾಗಿತ್ತು. “ಈ ಸಮಾಜ ಸೃಷ್ಟಿಸಿದ ಗೋಡೆಯನ್ನು ಒಡೆದುಹಾಕುವವರೆಗೂ ನಾನು ವಿರಮಿಸುವುದಿಲ್ಲ ಕ್ಯಾಟಿ, ಖಂಡಿತಾ ವಿರಮಿಸುವುದಿಲ್ಲ...” ಹೇಳಿದವನ ಮುಷ್ಠಿ ಬಿಗಿಯಾಗಿತ್ತು.

“ನಿನ್ನ ಆ ಹೋರಾಟಕ್ಕೆ ನಾನು ಅಡ್ಡಿ ಬರುತ್ತೇನೆ ಎಂದುಕೊಂಡಿದ್ದೀಯಾ ಕ್ಯಾಟಿ? ನಾವು ಜೊತೆಯಾದರೆ ನಮ್ಮ ಹೋರಾಟ ಮತ್ತಷ್ಟು ಬಲಿಷ್ಠವಾಗುತ್ತದೆ ಎಂಬ ಭರವಸೆ ನನಗಿದೆ. ಈಗಲಾದರೂ ನಿನ್ನ ಮನಸ್ಸನ್ನು ಬದಲಾಯಿಸಿಕೋ” ಅವಳ ಕಣ್ಣಲ್ಲಿ ಅಪಾರ ಆಶಾವಾದವಿತ್ತು. ಮುಚ್ಚಿಡುವುದಕ್ಕೆ ಸಾಧ್ಯವಾಗದ ಅಸಹಾಯಕತೆಯಿತ್ತು.

“ಇಲ್ಲ ಮ್ಯಾಗಿ. ನಿನ್ನನ್ನು ಮದುವೆಯಾದರೆ ನನ್ನ ಹೋರಾಟದ ಮೊದಲ ಹೆಜ್ಜೆಯಲ್ಲಿಯೇ ನಾನು ಎಡವಿಬಿದ್ದಂತಾಗುತ್ತದೆ. ಸಮಾಜ ಸೃಷ್ಟಿಸಿದ ಚೌಕಟ್ಟಿನೊಳಗೆ ಬಂಧಿಯಾದಂತಾಗುತ್ತದೆ. ಎರಡು ವರ್ಷ ಜೊತೆಯಲ್ಲಿ ಬದುಕಿದವಳನ್ನು ಮದುವೆಯಾಗಿ ಸಮಾಜಕ್ಕೆ ನಾನೇನೂ ಸಂದೇಶ ನೀಡಬೇಕಾಗಿಲ್ಲ. ಗಂಡು- ಹೆಣ್ಣು ಮದುವೆಯಾಗಿ ಜೊತೆ ಬದುಕುವುದೇ ನೈತಿಕತೆ, ಅದನ್ನು ಎಲ್ಲರೂ ಪಾಲಿಸಬೇಕೆಂಬ ಸಮಾಜದ ರೂಢೀಗತ ವ್ಯವಸ್ಥೆಯನ್ನು ನನಗೆ ಮುರಿಯಬೇಕಿದೆ. ಅದಕ್ಕಾಗಿ ಇಷ್ಟುದಿನ ನಿನ್ನೊಂದಿಗೆ ಬದುಕಿದ್ದೇನೆ. ಈಗ ತೊರೆದು ಹೋಗುತ್ತಿದ್ದೇನೆ” ಹೇಳಿದವನಲ್ಲಿ ನಿರ್ಲಿಪ್ತತೆ ಹಿಂದಿನ ದಿನಕ್ಕಿಂತಲೂ ಗಾಢವಾಗಿತ್ತು. “ನಾವು ಹೀಗೆ ಬದುಕಿದ್ದೇವೆ ಎಂದು ಯಾರಿಗೆ ಗೊತ್ತಿದೆ ಕ್ಯಾಟಿ? ನಮ್ಮ ಮನೆಯವರಿಗೂ ತಿಳಿದಿಲ್ಲ. ನೀನ್ಯಾರಿಗೆ ಸಂದೇಶ ನೀಡಹೊರಟಿದ್ದಿಯಾ?”

“ಬೇರೆಯವರಿಗೆ ಗೊತ್ತಾಗದಿದ್ದರೂ ನನ್ನ ಮನಸ್ಸಿಗೆ ಗೊತ್ತಿದೆ. ಅಷ್ಟು ಸಾಕು. ಈ ಸಣ್ಣ ಗೆಲುವು ನನ್ನಲ್ಲಿ ಆತ್ಮತೃಪ್ತಿ ನೀಡಿದೆ. ಪ್ರವಾಹದೆದುರು ದಿಟ್ಟವಾಗಿ ಈಜುವ ಭರವಸೆ ಹುಟ್ಟಿಸಿದೆ. ಮುಂದೆ ದೊಡ್ಡ ಹೆಜ್ಜೆಗಳನ್ನಿಡಲು ಇದು ನನ್ನನ್ನು ಪ್ರೇರೇಪಿಸುತ್ತದೆ” ಎಂದವನು ಕೋಣೆಯಲ್ಲಿ ಉಳಿದಿದ್ದ ತನ್ನ ಅಂಗಿಯೊಂದನ್ನು ತಂದು ಬ್ಯಾಗಿನೊಳಕ್ಕೆ ತುರುಕಿದ.

“ಹೋಗಿಬರುತ್ತೇನೆ ಮ್ಯಾಗಿ. ಇಷ್ಟು ದಿನಗಳ ಸಂಗಾತಕ್ಕಾಗಿ ಥ್ಯಾಂಕ್ಸ್” ಹೇಳಿದವನು ಕಣ್ಣೀರಿನ ಆಹ್ವಾನಕ್ಕೆ ಸಿದ್ಧವಾಗಿದ್ದ ಅವಳ ಕಣ್ಣುಗಳ ಜೊತೆಗೆ ತನ್ನ ಕಣ್ಣುಗಳು ಮಿಲನಗೊಳ್ಳುವುದನ್ನು ಬಲವಂತವಾಗಿ ತಪ್ಪಿಸಿದ. ಬ್ಯಾಗ್ ಎತ್ತಿಕೊಂಡವನು ಹೊರಟೇಹೋದ. ಬಿರುಸಾಗಿ ನಡೆಯುತ್ತಿದ್ದ ಅವನ ಕಾಲುಗಳ ವೇಗಕ್ಕೆ ಅಂಗಳದಿಂದೆದ್ದ ಧೂಳಿನ ಕಣಗಳು ಎದುರಿನ ಬಲಿಷ್ಠ ಗೋಡೆಯನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿದ್ದವು...

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.

More About Author