Story

ಹೀಗೊಂದು ಗ್ರಾಮ ಪುರಾಣ

ಶರಣರ ಹೋರಾಟದ ವಿಸ್ತಾರ ನಮ್ಮ ಅರಿವಿಗೆ ಮೀರಿ ಹಬ್ಬಿಕೊಂಡಿದೆ. ಹನ್ನೆರಡನೆಯ ಶತಮಾನದ ಚರಿತ್ರೆಯ ಪಾಲು ಎಲ್ಲರಿಗೂ ಸಲ್ಲುತ್ತದೆ. ಸಿದ್ಧರು, ಸಂತರು, ಶರಣರು ಮತ್ತು ಅನೇಕ ಪಂಥಿಯರು ಒಳಗೊಂಡಂತೆ ಇದ್ದುದು ಕಾಣುತ್ತದೆ. ಜಡತ್ವವನ್ನು ಕಿತ್ತೊಗೆಯುವುದಕ್ಕೆ ಸೋಲಾಗಿರಬಹುದು. ಏಕೆಂದರೆ ಆ ಸೋಲು ವರ್ತಮಾನದಲ್ಲಿ ನಮ್ಮನ್ನು ಕಾಡುತ್ತ ಗೆಲುವಿನ ರುಚಿಗಾಗಿ ಕಾತರಿಸುತ್ತಿದೆ.
ಶತಮಾನಗಳು ಮೀರಿದರೂ ಅವರ ಹೆಜ್ಜೆಗಳ ಸರಹದ್ದುಗಳು ಇನ್ನೂ ವಿಸ್ತಾರಗೊಳ್ಳಲು ಹವಣಿಸುತ್ತಲÉೀ ಇವೇ ಅಲ್ಲವೆ? ಹೋರಾಟಗಳ ದಾರಿಗಳಿಗೆ ಬೆಳಕನ್ನು ತೋರುತ್ತಲೇ ಬಂದಿದೆ. ಅದು ಕಲ್ಯಾಣದ ಹಾದಿಯ ಧೂಳನ್ನು ತಮ್ಮ ತಮ್ಮ ಕಾಲುಗಳಿಗೆ ಮೆತ್ತಿಕೊಂಡು ಹರವಿ ಹಂಚಿ ಹೋದರು. ಧೂಳು ಮಣ್ಣಾಗಿ ಫಲವತ್ತ ನೆಲವಾಗುವ ಸಂದರ್ಭಗಳಲ್ಲಿ ನಾವು ಮನುಷ್ಯರು, ಹುಲುಮಾನವರು ಮೌಲ್ಯಗಳನ್ನು ಹರಾಜು ಹಾಕಲು ಕಾಲಕ್ಕಾಗಿ ಅವಕಾಶಕ್ಕಾಗಿ ಎದುರು ನೋಡುತ್ತಲೇ ಇರುತ್ತೇವೆ.
ಈ ಹೋರಾಟಗಳನ್ನು ಮೆಲುಕು ಹಾಕಿ ಚರ್ಚಿಸುತ್ತಲೇ ಜಾಣತನದಿಂದ ಅದರತ್ತ ಕುರುಡುತನ ತೋರಿದ ಸಮಾಜ-ಸಮಸಮಾಜವಾಗಲಿಲ್ಲ. ಅದು ಬಿಟ್ಟು ಬಿರುಕುಗಳು ಹಾಗೇ ಅಂದು ಹೇಗಿತ್ತೋ ಅದರಂತೆ, ಅದಕ್ಕಿಂತ ಇನ್ನೂ ಹೆಚ್ಚಾಗಿವೆ. ಇನ್ನು ಆ ಎಲ್ಲ ಧೋರಣೆ ಧಾರಣವಾಗುವ ಬಗೆಯೆಂತು ಎಂದು ಆಲೋಚಿಸುತ್ತಲೇ ಮುಂದುವರೆಯಬೇಕು. ಇದು ಈ ಕಾಲದ ಮತ್ತು ಎಲ್ಲ ಕಾಲದ ತುರ್ತು ಆಗಿದೆ.
***
ಬೆಡಗಿನಹಳ್ಳಿ ಎಂಬೋ ಹಾಲು ಹೊಳೆಯ ದಂಡೆಯ ಮೇಲಿನ ಊರು. ಆ ಹಳ್ಳಿಯ ಫಲವತ್ತಾದ ಮಣ್ಣಿನಲ್ಲಿ ಅರಳಿದ, ಹಳ್ಳ-ಕೊಳ್ಳಗಳ ಆಸರೆ ಪಡೆದು ಹುಟ್ಟಿದ ನಾಗರಿಕ ಬದುಕು ಸೌಖ್ಯದಲ್ಲಿ ತೇಲುತ್ತಿತ್ತು. ಎಂಟುನೂರು ವರ್ಷಗಳ ಹಿಂದೆ ಶರಣರ ಚಳುವಳಿಗೆ ಏಟು ಬಿತ್ತು. ಬಿಜ್ಜಳ ದೊರೆ ಬಂಧಿಸಲ್ಪಟ್ಟ. ಸೋವಿದೇವ ಶರಣರನ್ನು ಅಟ್ಟಿಕೊಂಡು ಬರಲು ಆದೇಶ ನೀಡಿದ. ಆಗ ಅನೇಕರು ಅಲ್ಲಿಂದ ಪಲಾಯನಗೈದರು. ಅದರಲ್ಲಿ ಎಲ್ಲ ವರ್ಗದವರು ಇದ್ದರು. ಆ ಪೈಕಿ ಸಿದ್ಧರು, ಶರಣರಲ್ಲಿ ಕಲಬುರಗಿ ಕಲ್ಯಾಣಸಿದ್ಧನೂ ಒಬ್ಬ. ಅವನ ಜೊತೆಗೂಡಿ ಬಂದವರು ಅವನ ಅನುಯಾಯಿಗಳೋ. ಭಕ್ತರೋ ಆಗಿದ್ದರು. ಆಗ ಸುತ್ತಲೂ ಹಸಿರಿತ್ತು. ಹಳ್ಳದಲ್ಲಿ ತಿಳಿನೀರು ಹರಿಯುತ್ತಿತ್ತು. ಹೊಳೆಯಲ್ಲಿ ಹಾಲು ನೀರು. ಸಿದ್ಧನ ಜೊತೆಗೊಬ್ಬ ಸೂಫಿ ಪೀರಸಾಬನೋ ಇದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ ಸಿದ್ಧನಿಗೂ ಆ ಪೀರಸಾಬನಿಗೂ ಒಂದು ದೋಸ್ತಿಯಿತ್ತೆಂಬುದಕ್ಕೆ ಸಕಲ ಆಚರಣೆಗಳ ಪುರಾವೆಗಳಿದ್ದವು. ಬೆಡಗಿನಹಳ್ಳಿಯಲ್ಲಿ ಸಿದ್ಧನ ಭವ್ಯ ದೇಗುಲವಿದೆ. ಹಾಲು ಹೊಳೆಯ ದಂಡೆಯಲ್ಲಿ ಪೀರಸಾಬನ ದರ್ಗಾ ಇದೆ. ಆ ಹಾಲು ನದಿ ದಂಡೆಯ ನಾಗರೀಕ ಬದುಕು ಹಸನಾಗಿತ್ತು. ಇಂತಿಪ್ಪ ಈ ಬೆಡಗಿನಹಳ್ಳಿಯ ಕತೆಯು ಇತಿಹಾಸದಿಂದ ವರ್ತಮಾನಕ್ಕೋ ವರ್ತಮಾನದಿಂದ ಇತಿಹಾಸಕ್ಕೋ ನೆಗೆಯುವುದುಂಟು.
ವರ್ತಮಾನದಲ್ಲಿ ಆ ವಂಶಸ್ಥರು ಇಂದು ಅರ್ಚಕರು. ಕಲ್ಯಾಣ ಸಿದ್ಧನ ಪೂಜಾರಿಗಳು. ಅವರೀಗ ಆ ಸಿದ್ಧನ ಹಕ್ಕಿನ ಆಯಗಾರರು. ಪರಂಪರೆಯಲ್ಲಿ ಅರ್ಚನೆಯ ನೆಲೆಯಲ್ಲಿ ಆ ಪೂಜಾರಿ ವಂಶಜರಿಗೆ ಹಾಲಿನ ಮೇಲಿನ ಕೆನೆಯಂತಹ ವತನದ ಹೊಲಗದ್ದೆಗಳು ಮೀಸಲಿಡಲಾಗಿವೆ. ಕಲ್ಯಾಣ ಸಿದ್ಧನ ಸಂಗಡ ಬಂದವರು ನಾಲ್ಕು ಜನವಂತೆ! ನೂರಾರು ಮಳೆ, ಬಿಸಿಲುಗಳ ಓಘದಲ್ಲಿ ನಾಲ್ಕು ಬೊಡ್ಡಿಗಳಾಗಿ, ಬೊಡ್ಡಿಗಳಿಗೆ ನೂರಾರು ಮನೆತನಗಳಾಗಿ ಹಬ್ಬಿವೆ. ವರುಷಕ್ಕೊಂದಾವರ್ತಿ ಸಿದ್ಧನ ಸೇವೆಯ ನಡೆಸುವ ಅವರ ಸರತಿ. ಆ ಪೂಜಾರಿಗಳ ಬಗೆಗೆ ಊರ ಜನರಲ್ಲಿ ಆದರವೂ-ಅನಾದರಗಳೂ ಎರಡೂ ಮೇಳೈಸಿವೆÉ. ಒಂದು ಆದರ ಇರಲು ಅವರು ಸಾಕ್ಷಾತ್ ನಿತ್ಯ ದೇವರನ್ನೇ ಸ್ಪರ್ಶಿಸುವ, ಮುಟ್ಟುವ, ಪೂಜಿಸುವ ಪುಣ್ಯವಂತರು ಅಂತ. ಇನ್ನು ಅನಾದರಕ್ಕೆ ಇರುವ ಕಾರಣಗಳು ಉಳಿದ ಎಲ್ಲ ಜೀವಾತ್ಮರಂತೆ ಅವರಲ್ಲೂ ಮನೆ ಮಾಡಿದ ಆಸೆ, ಕಾಮ, ಕ್ರೋಧ, ಮದ, ಮತ್ಸರಾದಿಗಳು. ಲೋಲುಪತೆಗಳು. ಇಂತಹ ಇನ್ನೂ ಹತ್ತು ಹಲವು.
ಈ ಕಲ್ಯಾಣ ಸಿದ್ಧನು ಜಾಗೃತ ದೈವ ಎನ್ನುವ ಕಾರಣಕ್ಕೆ ಬಹು ಶ್ರದ್ಧಾ ಸ್ಥಳ ಎನ್ನುವುದು. ಸಿದ್ಧನ ಅರ್ಚನಾ ವಿಧಾನದಲ್ಲಿರುವ ನೈವೇದ್ಯದ ನಿತ್ಯದ ಘಮಘಮಿಸುವ ಜೀರಗಾ ಎಂಬ ಸಣ್ಣಕ್ಕಿಯ ಅಕ್ಕಿಯ ಅನ್ನ, ಬಟ್ಟಲು ತುಪ್ಪ, ಹಸಿರು ತರಕಾರಿಯ ವಿಧ ವಿಧದ ಪಲ್ಯ. ಸಂಡಿಗೆ, ಹಪ್ಪಳ ತಿಂದುಂಡು ಸೊಕ್ಕಿದವರು ಈ ಅರ್ಚಕರು ಅಂಬೋದು ಅಲ್ಲಿ ಹುಲು ಮಾನವರ ತಂಟೆ ತಕರಾರುಗಳು. ಅವು ಎಲ್ಲವೂ ಆಗಾಗ ಸಾಂದರ್ಭಿಕವಾಗಿ ಹಿತಾಸಕ್ತಿಯ ಕೇಂದ್ರ ಬಿಂದುಗಳಾಗಿ ಪ್ರಕಟಗೊಳ್ಳುತ್ತವೆ. ಒಮ್ಮೊಮ್ಮೆ ಆಸ್ಫೋಟಿಸುತ್ತವೆ.
ಈ ಕಲಬುರಗಿ ಕಲ್ಯಾಣ ಸಿದ್ಧನು, ಪೀರಸಾಬನೂ ಗಳಸ್ಯ ಕಂಠಸ್ಯರೆಂಬ ಬಲವಾದ ನಂಬಿಕೆ. ಅದು ಊರೆಂಬ ಊರನ್ನು ಒಂದಾಗಿಸಿ ಮಾನವತೆಯ ತೆಕ್ಕೆಗೆ ತಂದೊಡ್ಡಿ ಹೆಣಿಗೆ ಹೆಣೆದಿತ್ತು, ಹೀಗಿರಲು ಉರುಸು, ಮೊಹರಮ್ ಆಚರಣೆಗೆ ಮುಸ್ಲಿಮೇತರರು-‘ಧೂಲ ಧೂಲೆನ್ನಿರೊ ಆಯಿಮೋಧೂಲ ಧೂಲ ಧೂಲೆನ್ನಿರೋ/ ಅಲಾವಿ ಆಡುಣು ಅಂಗದೊಳಗ ಶ್ರೀಧ್ಯಾನದ ಗುಂಗಿನೊಳಗ/ ಅಂಗಲಿಂಗಸಂಗ ಬಿಟ್ಟು ನಿಸ್ಸಂಗಾಗಿ ನಿತ್ತಾಗೊಮ್ಮಿ/ ಅನುಭವದಿಂದ ತನುವಗೂಡಿ ಮನವ ಅಂಬು ಮಸೂತಿ ಮಾಡಿ/ನೆನೆವ ಅಂಬುಪೀಠನ ಕುಣಿಸಿ ಘನಶೋಕಂಬು ಆಟ ಆಡಿ/ಪೀರ ಪೀರ ಇದರನ್ನಿಟ್ಟು ಉದಾರನಂಬು ಊದಸುಟ್ಟು/ಪಂಚತ್ವದ ಘಾತಿಕೊಟ್ಟು ಸಿದ್ಧ ಅಂಬುದು ಶಿವನ ಹೆಸರಾ/ಸಳನೆ ಹೋಗುದು ಒಳನೆ ಬರುವದು ಗೊತ್ತಿ ಕುಡಿವದು ಸತ್ತುಹುಟ್ಟಿ/ ಪಸರದಂಗಡಿನಿರದ ಕೂಟಿನಾ ತತ್ವ ಆತ್ಮನಿತ್ತಾಗೊಮ್ಮಿ/ ಸ್ಥೂಲಸೂಕ್ಷ್ಮ ಕಾರಣ ದಾಟಿ ಮಕ್ಕಾಕಾರಣ ಮಾಡಿ ಉಲಾಚಿ/ ಅತಿ ಕಾರಣ ಆಗಿಗಟ್ಟಿ ಗುರತ ಹಿಡಿ ಮನದೊಳು ಘಟ್ಟಿ/’ಹಾಡುತ್ತ ಆಲಾವಿ ಆಡುವುದು ಒಂದು ಯೌಗಿಕ ಕ್ರಿಯೆ. ಮತ್ತು ಕೆಂಡ ತುಳಿದದ್ದೂ ಇದೆ.
ದಸರೆ, ದೀವಳಿಗೆಗೆ ಹಿಂದೂಗಳೇತರರು ಕಲ್ಯಾಣ ಸಿದ್ಧನ ಪಲ್ಲಕ್ಕಿಯ ಉತ್ಸವದಲ್ಲಿ ‘ಚಾಂಗ ಬೊಲೊ’ ಎಂದು ಆಚರಿಸುತ್ತ ಭಾವೈಕ್ಯ ಬದುಕು ಜೀವಿಸುತ್ತಿದ್ದರು. ಕಲ್ಯಾಣ ಸಿದ್ಧನ ನಸುಕಿನ ಮತ್ತು ಸಂಜೆ ಪೂಜೆಯಲ್ಲಿ ಗುಡಿಯ ಹಿಂದೆ ಹೂದೋಟದಲ್ಲಿರುವ ಪೀರಸಾಬನ ದರ್ಗಾದ ಪ್ರತಿಕೃತಿ ರೂಪದ ಪುಟ್ಟ ದರ್ಗಾಕ್ಕೂ ನಿತ್ಯ ಪೂಜೆ ಸಲ್ಲುತ್ತಿತ್ತು.
ಹೀಗಿರಲು ಬರತೊಡಗಿದವು ಏನೋ ಒಂದೊಂದು ಅಜೆಂಡಾಗಳು. ಗ್ರಾಮದ ಬಾರಾ ಬಲೂತೆದಾರ ವ್ಯವಸ್ಥೆಯ ಆಯಗಾರರು ಪರಂಪರಾಗತ ತಮಗೆ ಒದಗಿ ಬಂದ ಕಾಯಕದಲ್ಲಿ ನಿರತರು. ಅಂಥದ್ದರಲ್ಲಿ ತಮಗೆ ತಾವು ಉಚ್ಚ ವಿಭೂಷಿತ ಶರಣ ಧಾರಣರಾದ ಲಿಂಗಾಯತರು, ಮಿಥ್ಯಾ ದೇವರೆಂಬ ಪರಿಕಲ್ಪನೆಯಲ್ಲಿ ನಂಬಿಕೆಯಿಟ್ಟೂ ಇಡದ ಜೈನರು. ಸ್ವತಃ ಕ್ಷತ್ರೀಯರೆಂದು ಕರೆಯಿಸಿಕೊಂಡರೂ ಸ್ಥಳಿಯರ ಬಾಯಲ್ಲಿ ‘ಆರೇರ’ಅಂತ ಅನಿಸಿಕೊಳ್ಳುವ ಮರಾಠರು, ಕುಲಕಸುಬು ಮಾಡಿಕೊಂಡು ಸಕಲರ ಜೊತೆ ಬೆರೆತು ಬದುಕುವ ಮುಸ್ಲಿಮರು, ಮತ್ತಿಷ್ಟು ಉಳಿದ ತಳಸಮುದಾಯಗಳೆಲ್ಲವೂ ಈ ಸಿದ್ಧನ ಕಣ್ಣಂಜಿಕೆಯ, ಮೂಗಂಜಿಕೆಯ ಭಯಭಕುತಿಯಲ್ಲಿ ವಾಸಿಸುತ್ತಿದ್ದರು. ಪ್ರಬಲ ಕೋಮಿನ ಸ್ಥಿತಿವಂತ ಅಹಿಂಸಾ ಪರಮೋ ಧಮಃ ಎಂಬುವರು; ಹರಹರ ವiಹಾದೇವ ಎನ್ನುವವರ ಮಧ್ಯೆಯೂ ಒಮ್ಮೆ ದಸರೆಯ ಹಬ್ಬದಲ್ಲಿ ಪುಟ್ಟ ಕಾಳಗವೊಂದು ಏರ್ಪಟ್ಟಿತು. ಬಲಿಷ್ಟ ಇವೆರಡೂ ಕೋಮಿನವರು ಅವರೂ,ಇವರೂ ತಮಗೆ ಬೇಕಾದ ರೀತಿಯಲ್ಲಿ ತಳಸಮುದಾಯದ ಪಂಗಡದ ತೋಳ್ಬಲ ಇರುವ ಪುಂಡರನ್ನು ಬಳಸಿಕೊಂಡರು. ಈ ದಸರೆಯ ಪಲ್ಲಕ್ಕಿ ಉತ್ಸವದಲ್ಲೊಂದು ಹೀಗೇನಾದರೂ ಘಟಿಸುತ್ತದೆಂದಾದರೆ ಅದು ಮುಂಬರುವ ಕುರ್ಚಿಗಳ ಚದುರಂಗದಾಟವೇ ಸೈ!. ಈ ಪ್ರಸ್ತುತ ಕಾಳಗವು ಸಹ ಮುಂಬರುವ ಶುಗರ್ ಫ್ಯಾಕ್ಟರಿಯ ಹಿಡಿತ ಸಾಧಿಸಲು ಇಟ್ಟ ಹೆಜ್ಜೆಯೆಂದು ಊರ ಅರಿವುಳ್ಳ ನಾಗರೀಕರ ಬಾಯಲ್ಲಿ ತಾಂಬೂಲಾಗಿ ಪಚಕ್ಕೆಂದು ಉಗುಳಿದಾಗ ಆ ಕೆಂಬಣ್ಣಲ್ಲಿ ಜನವೆಂಬೋ ಜನವು ತಮ್ಮ ಇರವನ್ನು ಅರ್ಥೈಸಿಕೊಂಡರು.
ಈ ಸಿಹಿ ಸಕ್ಕರೆ ಬೆಳೆವವನಿಗೆ ನಿಗದಿಸಿದ ದರ ಕಹಿ ಬೇವು. ಪ್ರತಿಬಾರಿಯೂ ಬೆಳೆದು ಬೆಲೆಕೊಡಿಯೆಂದು ಭಿಕ್ಷುಕನಂತೆ ಅಂಗಲಾಚುವ ಪರಿ ಯಾವ ವೈರಿಗೂ ಬೇಡ. ಆದರೆ ಜನಸಾಮಾನ್ಯ ಬೆಳೆಗಾರ ಮಾತ್ರ ಕಂಗಾಲು. ಆ ಸಂಘಟನೆಗಳೋ ಸಮಸ್ಯೆ ಬಗೆಹರಿಸಿದ ಉದಾಹರಣೆಗಳು ಎಷ್ಟು? ಗೊತ್ತಿಲ್ಲ. ವಿವಿಧ ರಾಜಕೀಯ ಪಕ್ಷಗಳವರು ಸಕ್ಕರೆ ಕಾರಖಾನೆಗಳ ಮಾಲೀಕರೋ ಇಲ್ಲವೊ ಸಹಕಾರಿ ಸಕ್ಕರೆ ಕಾರಖಾನೆಗಳ ಚೇರ್‍ಮನ್ರೋ ಆಗಿದ್ದಾರೆ. ಇಂತಿಪ್ಪ ಪಡಿಪಾಟಲಿರಲು ಹರಹರ ಮಹಾದೇವ ಘೋಷವಾಕ್ಯದ ಮಾಧವರಾವ ಶಿಂದೆ ಎಂಬಾತ ಸಕ್ಕರೆ ಕಾರಖಾನೆಯ ಚೇರ್ಮನ್ನನೂ ತನ್ನ ಪಕ್ಷದಲ್ಲಿ ಹುಕುಂ ನಡೆಸುವವನೂ ಆಗಿದ್ದ. ಅವನ ಬಂಟನಂತಿರುವವರ ಗುಂಪುಗಳಲ್ಲಿ ಒಬ್ಬನೂ, ಕಲಬುರಗಿ ಕಲ್ಯಾಣ ಸಿದ್ಧನ ಅರ್ಚಕ ವಂಶಸ್ಥನಾದ ಅಜಾನುಬಾಹು ಮಲಗೌಡ ಪೂಜಾರಿ, ಮತ್ತಿತರರು ಯಾವತ್ತೂ ಮಾಧವರಾವ ಶಿಂದೆ ಪಟಾಲಂನಲ್ಲಿ ಇರುತ್ತಿದ್ದರು. ಕಬ್ಬಿನ ದರಕ್ಕೆ ಉತ್ತಮ ಬೆಲೆ ಸಿಗಲೇಬೇಕೆಂಬ ಹೋರಾಟಗಳು ಜರುಗುತ್ತಿರುವಾಗ ವiಹಾರಾಷ್ಟ್ರದಿಂದಲೂ ರೈತ ಸಂಘಟನೆಯ ನೇತಾರರು ಬಂದು ಚಳುವಳಿಯನ್ನು ಬಿರುಸುಗೊಳಿಸುತ್ತಿದ್ದರು. ರೈತರು ಬಹು ನಿರೀಕ್ಷೆಗಳನ್ನಿಟ್ಟುಕೊಂಡು ಪಾಲ್ಗೊಳ್ಳುತ್ತಿದ್ದರು. ಸರ್ವಸಮ್ಮತವಾದ ಯೋಗ್ಯ ಬೆಲೆ ದೊರೆಯುವ ಆಶಾವಾದ ಎಲ್ಲರಲ್ಲಿತ್ತು.
ಅಂದಿನ ರಾತ್ರಿ ನಿತ್ಯದಂತಿರಲಿಲ್ಲ. ನಕ್ಷತ್ರಗಳ ಮಿಣುಕು ಮಿಂಚು ಕಳೆಗುಂದಿತ್ತು. ನಾಯಿಗಳು ಘೀಳಿಡುತ್ತಿದ್ದವು. ನಡು ಇರುಳು ಕಿರ್ ಎಂದು ಕಿರುಚಿತ್ತಿತ್ತು. ಆ ಕಾಳ ಇರುಳಿನ ಸಮಯದಲ್ಲಿ ಕೆಲ ಪುಂಡರು ಮಸೀದಿಯನ್ನು ಹೊಕ್ಕರು. ಮಸೀದಿ ದುರಸ್ತಿ ಮಾಡುತ್ತಿರುವವರ ಮೇಲೆ ಏಕಾಏಕಿ ಹಲ್ಲೆ ನಡೆಸಿದರು. ಮತ್ತು ಬೆಂಕಿ ಹಚ್ಚಲು ಯತ್ನಿಸಿ ಪಲಾಯನಗೈದರು. ಹಲ್ಲೆಗೊಳಗಾದವರು ಪುಂಡರಲ್ಲಿ ಕೆಲವರನ್ನು ಗುರುತಿಸಿದ್ದರು. ಅದಲ್ಲದೆ ಇದನ್ನು ಅಪರಿಚಿತ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದ. ಮರುದಿನ ಮಿಡಿಯಾಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಗೆ ಬಿಡುಗಡೆ ಮಾಡಿದ್ದ. ಹಾಗೆಯೇ ಮಸೀದಿಯಲ್ಲಿದ್ದ ಖಾದರ್ ಮತ್ತು ಕಾಶೀಮ್‍ರು ಕೆಲವರು ಹಿಂಸೆಗಿಳಿದವರನ್ನು ಗುರುತಿಸಿದ್ದರಲ್ಲದೇ, ಅವರ ವಿವರ ಬಹಿರಂಗಗೊಳಿಸಿದರು. ಹಗಲು ಹೊತ್ತು ಊರತುಂಬ ಗುಸು ಗುಸು ಮಾತುಗಳು. ಖಾದರ್ ಹಾಗೂ ಕಾಶೀಮ್ ಪೋಲಿಸ್ ಠಾಣೆಗೆ ಹೋಗಿ ಕಂಪ್ಲೆಂಟ್ ಕೊಟ್ಟರು. ಅಂದು ನಡುರಾತ್ರಿ ಪೋಲಿಸ್‍ರು ಬಂದು ಏಳೆಂಟು ಸಂಶಯಿತರನ್ನು ಮನೆಹೊಕ್ಕು ಸಿಹಿ ನಿದ್ದೆಯಲ್ಲಿದ್ದವರನ್ನು ಒದ್ದು ಎಬ್ಬಿಸಿ ದಸ್ತಗಿರಿ ಮಾಡಿಕೊಂಡು ತೆಗೆದುಕೊಂಡು ಹೋದರು. ಅವರಲ್ಲಿ ಮಲಗೌಡನ ಹೆಸರೂ ಇತ್ತು. ಆದರೆ ಮುಂಚೆಯೇ ಆತ ಮಾಧವರಾವ ಶಿಂದೆ ಅವರ ಸೂಚನೆಯಂತೆ ಊರುಬಿಟ್ಟು ಹೋಗಿದ್ದ. ಅವರು ತಮ್ಮ ಪ್ರಭಾವ ಬಳಿಸಿದರು. ಎಫೈಅರ್‍ನಿಂದ ಹೇಗೋ ಉಳಿದುಕೊಂಡ. ಆಗ ಈ ಕೋಮು ಗಲಭೆ ಮುನ್ನೆಲೆಗೆ ಬಂದಿತು. ಕಬ್ಬು ಬೆಳೆಗಾರರ ಹೋರಾಟದ ಬಿಸಿ ಬಿಸಿ ಚರ್ಚೆ ಸಾಮಾಜಿಕ ಜಾಲತಾಣ ಮತ್ತು ಮಿಡಿಯಾಗಳಿಂದ ದೂರವಾಯಿತು. ಮತ್ತು ನಿಧಾನ ತಣ್ಣಗಾಯಿತು.
ಕಲ್ಯಾಣ ಸಿದ್ಧನ ಮತ್ತು ಪೀರಸಾಬನ ಅನ್ಯೊನ್ಯತೆಯ ಸೂಫಿತ್ವ ಎದ್ದುಕಾಣುತ್ತಿದ್ದ ಕುರುಹುಗಳು ಮಸುಕಾಗಲು ತೊಡಗಿದ್ದವು. ಇದು ಆರಂಭಗೊಂಡಿದ್ದು ಬಾಬರಿ ಮಸೀದಿಯ ಧ್ವಂಸವಾದ ದಿನದಿಂದ ಇರಬಹುದು. ಅದರಿಂದ ಉಂಟಾದ ಮತ ಧರ್ಮಗಳ ಕ್ಷೋಭೆ, ಉನ್ಮಾದದಿಂದ ಬೆನಕನಹಳ್ಳಿಯ ಮುಸ್ಲಿಮರಲ್ಲಿ ಅಸುರಕ್ಷತೆ ಕಾಡತೊಡಗಿತು. ಈ ಮೊದಲು ಆಯಗಾರರಾಗಿ ಮುಖ್ಯವಾಹಿನಿಯಲ್ಲಿದ್ದವರು ಈಗ ಅಚಾನಕ್ಕಾಗಿ ಬದಲಾಗತೊಡಗಿದ್ದರು. ಊರಿನ ಸಾಮಾನ್ಯ ಒಬ್ಬ ವರ್ತಕನೊ, ರೈತನೊ, ಕುಲಕಸುಬುಗಾರನೊ ಆಗಿದ್ದವನ ದಿರಿಸು, ಭಾಷೆ, ಇರುವಿಕೆ ಎಲ್ಲವೂ ಎಲ್ಲರಂತಿದ್ದವು. ಈಗ ಅವರದ್ದೇ ಅನನ್ಯತೆಯತ್ತ ಹೊರಳುತ್ತಿದ್ದವು. ಮನುಷ್ಯರು ಮತ್ತು ಸಮಾಜದ ನಡುವೆ ಬಿರುಕುಗಳು ಕಾಣತೊಡಗಿದವು. ಹಸಿರು, ಕೇಸರಿ, ನೀಲಿ ಹೀಗೆ ವಿಭಿನ್ನ ಬಣ್ಣಗಳ ವಾರಸುದಾರರು ಹುಟ್ಟಿಕೊಂಡರು.
***
ಇಂತಿಪ್ಪ ಚರಿತ್ರೆಯ ಬೆಡಗಿನಹಳ್ಳಿಯಲ್ಲಿ ಮಲಗೌಡ ಪೂಜಾರಿಯ ಸೋದರ ಚಂದ್ರಕಾಂತ ಉರ್ಫ್ ಚಂದೂನ ಸರತಿಗೆ ಈ ಬಾರಿಯ ದಸರೆಯ ಪೂಜಾರಿಕೆಯ ಪಾಳೀ ಬಂದಿದೆ. ಚಂದೂ ಸರಕಾರಿ ನೌಕರನು. ತಿಂಗಳುಗಂಟ ರಜೆ ಹಾಕಿರಲು ವಾಸ್ತವದಲ್ಲಿ ಸಾಧ್ಯವಿಲ್ಲ. ಆ ಕಾರಣ ಅವನ ಸೋದರರಿಗೆ ಪೂಜೆ ಮಾಡಿಕೊಡಲು ಕೇಳಿಕೊಂಡಿದ್ದ. ಚಂದೂನ ಇಬ್ಬರು ಸೋದರರು-ಸಣ್ಣವ ಮಲಗೌಡ ಮತ್ತು ದೊಡ್ಡವ ಅಣ್ಣ ಬಸಗೌಡನು. ಊರಲ್ಲೇ ಇರುವುದರಿಂದ ಮಾಡಿಕೊಡಲು ಒಪ್ಪಿದ್ದರು. ಆದರೂ ಮಲಗೌಡ ದೊಡ್ಡಣ್ಣ ಬಸಗೌಡ ಬೇಡ ಎಂತಲೂ, ಅಣ್ಣ ಬಂದರೆ ಜೊತೆಗಿಟ್ಟುಕೊಂಡ ಸಹಾಯಕ್ಕಿರುವ ಅರ್ಚಕ ಹುಡುಗರು ಸಹಕರಿಸದೇ ಓಡಿ ಹೋಗುವರೆಂಬ ಪುಟ್ಟ ಬೆದರಿಕೆ ಒಡ್ಡಿದ್ದ. ಇದಕ್ಕೆ ಕಾರಣ ಅಣ್ಣ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವವ ಮತ್ತು ಅನುಸರಿಸುವವ ಆಗಿದ್ದ. ಹಾಗೂ ಪ್ರಾಮಾಣಿಕನೂ ಕೂಡ. ಚಂದೂನಿಗೆ ಅಣ್ಣನನ್ನು ಇಟ್ಟುಕೊಳ್ಳುವುದು ಬೇಕಿತ್ತು. ಆದರೆ ಮಲಗೌಡನಿಗೆ ಬೇಕಿರಲಿಲ್ಲ. ಅವನು ಹಿಂದೆಂದೂ ಇರದ ನಿಯಮಗಳು ಈಗ ಚಾಲ್ತಿಯಲ್ಲಿ ಬಂದಿವೆ. ಹೀಗೆಂದು ಹೇಳಿದ್ದ. ಚಂದೂನ ಮಡದಿ, ತಂಗಿಯರು ಯಾರೂ ಬರಬಾರದೆಂಬ ಅಲಿಖಿತ ನಿಯಮಗಳನ್ನು ಹಾಕಿದ್ದ. ಆತನ ವರ್ತನೆ ಮತ್ತು ನಿಲುವುಗಳು ವಿಚಿತ್ರವೆನಿಸಿದವು. ಚಂದೂ ತನ್ನ ಅಣ್ಣತಮ್ಮಂದಿರನ್ನು ಬಹಳ ನಂಬಿದ್ದ.
ಇನ್ನು ಈ ದಸರೆಯ ಸರತಿಯೋ ಒಂದು ಬೊಡ್ಡೆಯ ಮನೆತನಕ್ಕೆ ಒಂದಾವರ್ತಿಯಂತೆ ದಶಕದಲ್ಲಿ ಒಂದು ಬಾರಿ ಬರುವ ಅವಕಾಶ. ಅದು ಬಂದರೆ ಸಾಕು ಕುಟುಂಬವೊಂದಕ್ಕೆ ಒಂದು ವರ್ಷಕ್ಕಾಗುವಷ್ಟು ದವಸ ಧಾನ್ಯಾದಿಗಳು, ಒಂದೆರಡು ಲಕ್ಷ ರೂಪೈ ಅಷ್ಟು ಧನವೂ ಸೇರಿ ಸಂಗ್ರಹವಾಗುತ್ತದೆ. ಹಬ್ಬಕ್ಕೆ ಭಕ್ತರಿಂದ ಹರಕೆಯ ಎಣ್ಣೆ ಹಾಕಿ ಸಂಗ್ರಹಗೊಂಡ ಎಣ್ಣೆಯ ನೂರಾರು ಡಬ್ಬಿಗಳೂ, ತುಂಬುವ ತುಪ್ಪದ ಕೊಡಗಳು, ಚೀಲಗಟ್ಟಲೇ ಸಕ್ಕರೆ, ಸಾವಿರಾರು ತೆಂಗಿನಕಾಯಿ, ಒಣ ದ್ರಾಕ್ಷಿ, ಬದಾಮು, ಗೋಡಂಬಿ, ಬೆಳ್ಳಿ ತುರಾಯಿ-ಒಮ್ಮೊಮ್ಮೆ ಚಿನ್ನವೂ ಸೇರಿದಂತೆ ಇತ್ಯಾದಿ ತರಾವರಿ ವಸ್ತುಗಳನ್ನು ಈ ಕಲ್ಯಾಣ ಸಿದ್ಧನ ಭಕುತರು ನೀಡುವುದು ತಲೆತಲಾಂತರದಿಂದ ನಡೆದುಕೊಂಡು ಬಂದ ವಾಡಿಕೆ, ಪದ್ಧತಿ.
ಹಬ್ಬಕ್ಕೆ ಮಾಡಿದ ಫರಾಳ ಪದಾರ್ಥಗಳೂ ರಾಶಿಯಾಗಿ ಸಂಗ್ರಹ! ಅವುಗಳನ್ನು ಆಯಗಾರರಿಗೆ ಕೊಡುವುದು ಪ್ರತಿ ಹಬ್ಬದಲ್ಲಿ ನಡೆಯುತ್ತ ಬಂದಿದೆ. ಈಗ ದಸರೆಯಲ್ಲಿ ಮಾಡುವ ಕರ್ಚಿಕಾಯಿ, ತರಗ, ಚಕ್ಕುಲಿ, ಶಂಕರಪಾಳಿ ಮುಂತಾದವು ಹಾಗು ಹಬ್ಬದ ಹೋಳಿಗೆ, ಅನ್ನ ವಿವಿಧ ಪಕ್ವಾನ್ನಗಳು ಸಹ ರಾಶಿಯಾಗಿ ಸಂಗ್ರಹಗೊಂಡಿರುತ್ತಿತ್ತು. ಕಲ್ಯಾಣ ಸಿದ್ಧನ ಭಕ್ತರು ದೇವರ ನೈವೇದ್ಯ ರೂಪದಲ್ಲಿ ತಂದವು. ಅವುಗಳನ್ನು ಆಯಗಾರರಾದ ಕರಂಡೊಳ್ಳು ವಾದಕರು, ತಾಳಶೆ ವಾದನದ ನದಾಫರು, ಸನಾಯಿ ನುಡಿಸುವ ಕೊರವರು, ಟಿಮಕಿ ಬಾರಿಸುವ ಮಾದಿಗರ ಹೊಳೆಪ್ಪ, ಅಗಸರ ಗೋವಿಂದ, ತಳವಾರರ ಜಯಪ್ಪ ಮುಂತಾದವರಿಗೆ ಮರೆಯದೆ; ಇವೆಲ್ಲ ಫರಾಳ ಮತ್ತು ನೈವೇದ್ಯವನ್ನು ಬುಟ್ಟಿ ಬುಟ್ಟಿ ಆಹಾರ ಪದಾರ್ಥಗಳನ್ನು ನೀಡಲಾಗುವುದು.ಇದನ್ನು ಮಹಾಲಯ ಅಮವಾಸ್ಯೆ ದಿನ, ಅಷ್ಟಮಿ, ನವಮಿ ಮತ್ತು ದಶಮಿಯಂದು ಭರಪೂರ ಪ್ರಮಾಣದಲ್ಲಿ ಸಂಗ್ರಹವಾಗುತಿದ್ದುದನ್ನು ನೀಡುವ ಪ್ರಕ್ರಿಯೆ ಇತ್ತು.
ಅದಕ್ಕೆ ಎಲ್ಲರ ಕಣ್ಣು ದಸರೆಯ ಪೂಜೆಯ ಮೇಲೆಯೇ. ಬೆಲ್ಲದ ಪೇಂಟಿಗೆ ಇರುವೆ ಮುಕ್ಕರಿದಂತೆ. ಮಲಗೌಡ ಗುಡಿಯ ಪಡಸಾಲೆಯೊಳಗೆ ಮಹಿಳೆಯರಿಗೆ ಅವಕಾಶವಿಲ್ಲ ಎಂದಿದ್ದಕ್ಕೆ ಅನೇಕ ಊಹೆಗಳು! ಅದಕ್ಕೆ ಪ್ರಾರಂಭದಲ್ಲಿ ಚಂದೂ ಹೆಚ್ಚಿನ ಮಹತ್ವ ನೀಡಿರಲಿಲ್ಲ. ಆದರೆ ಹಿರಿತನದ ದೃಷ್ಟಿಯಿಂದ ಅಣ್ಣ ಬಸಗೌಡನ ಅಗತ್ಯತೆ ಮಾತ್ರ ತೀವ್ರವಾಗಿ ಎದ್ದು ಕಾಣುತ್ತಿತ್ತು. ದಸರೆಯ ಸಂಪ್ರದಾಯದ ಆಚರಣೆಗಳು ಅವರ ತಂದೆಯ ಬಳಿಕ ಆತನಿಗೇ ಅಧಿಕ ಪರಿಚಯದವುಗಳಾಗಿದ್ದವು. ಹೀಗಾಗಿ ಮಲಗೌಡನ ಮನಸ್ಸು ಒಲಿಸಿ ಬಸಗೌಡನನ್ನು ನಿರ್ದಿಷ್ಟ ಕಾರ್ಯಗಳಿಗೆ ತೆಗೆದುಕೊಳ್ಳುವುದೆಂದು ತೀರ್ಮಾನಿಸಲಾಗಿತ್ತು. ಅದಕ್ಕೆ ಮಲಗೌಡ ಅರೆಮನಸ್ಸಿನಿಂದ ಒಪ್ಪಿದ್ದ. ಚಂದೂನ ಸರತಿಯ ದಿನಾಂಕ ಬರುವ ಮುನ್ನ ಆತ ಮಲಗೌಡನಿಗೆ ಫೋನ್‍ನಲ್ಲಿ,- ‘ನನಗ ನೌಕರಿ ಬಿಟ್ಟ ಬರಾಕ ಆಗೋದಿಲ್ಲ ಮಲ್ಲು. ದೀಡ ತಿಂಗಳ ಪೂಜಾ ಐತಿ. ಎಲ್ಲಿ ರಜಾ ಸಿಗಬೇಕು. ಕೊನಿಗಿ ವಿಜಯದಶಮಿಯ ಸಿಲಂಗಡಿಗಿ ನಾಕ ದಿನ ರಜಾ ಹಾಕತ್ಯಾನ,ಮತ್ತ ಬರತ್ಯಾನ. ನಿಮ್ಮ ವೈನೀನ ಪೈಲೇನ ಕಳಿಸಿಕೊಡತ್ಯಾನ. ಈ ಸಲದ ಮಾನಮಿ ನೀನ ಅಣ್ಣಾನ ಸಂಗಾಟ ಮಾಡಿ ಕೊಡಬೇಕ ನೋಡಪ್ಪ. ನಿನಗ ಬಂದ ದುಡ್ಡದೊಳಗ ಸ್ವಲ್ಪ ರೊಕ್ಕಾನು,ಕಾಳ ಕಡೀನೂ ಕೊಡತ್ಯಾನ,,,’ ಅಂದಿದ್ದ. ವಿಜಯದಶಮಿಯ ಸಿದ್ಧರಾಯನ ಪಲ್ಲಕ್ಕಿ ಉತ್ಸವಕ್ಕೆ ಸಿಲಂಗಡಿ ಎಂದು ಇಲ್ಲಿ ಕರೆಯುವರು.
ಆ ಮಾತಿಗೆ ಮಲಗೌಡ ಅರೆಮನಸ್ಸಿನಿಂದ ಉತ್ತರಿಸಿದ್ದ. ‘ನೀವ ಯಾರನ್ನಾದರನ ನೋಡಿಕೋಳ್ರಿ, ನಿಮ್ಮ ರೊಕ್ಕನೂ ಬ್ಯಾಡಾ, ಕಾಳೂನು ಬ್ಯಾಡಾ ನನ್ನ ಕಡಿಂದ ಯಾನ ಆಗೋದಿಲ್ಲ.’ಅಂತ ಕಡ್ಡಿ ಮುರಿದ ಹಾಗೆ ಅಂದಿದ್ದ.
ಅವನು ಸಕ್ಕರೆ ಕಾರಖಾನೆ ಚೇರಮನ್ ಮಾಧವ ಶಿಂದೆಯ ಬಲಗೈ ಬಂಟನಾಗಿದ್ದ. ಚಂದೂ ಅವರಿಂದ ಒಂದು ಮಾತು ಹೇಳಿಸಿದರೆ ಕೇಳಿಯಾನು ಅಂತ ಹೇಳಿಸಿದ್ದ. ಆದರೆ ಆ ಮಾಧವ ಶಿಂದೆಯ ಬಳಿ ಮಲಗೌಡನೇ ಹೋಗಿ ಅಣ್ಣತಮ್ಮಂದಿರನ್ನೆಲ್ಲ ಕರೆಯಿಸಿ ‘ತನಗೇ ಈ ಸಾರಿಯ ದಸರೆಯ ಪಾಳಿ ಕೊಡಿಸಬೇಕೆಂದು’ ಕೇಳಿಕೊಂಡಿದ್ದ. ಆದರೆ ಮಾಧವ ಶಿಂದೆ ಮಾತ್ರ-‘ನಿಮ್ಮ ದೇವರ ವಿಷಯದಲ್ಲಿ ತಾನು ಭಾಗಿಯಾಗುವುದಿಲ್ಲ. ಅದನ್ನು ನೀವ ಕುಂತ ಬಗಿಹರಿಸಿಕೋರಿ,ಯಾನಾರ ಸಮಸ್ಯೆ ಆದರ ನಾ ಇರತ್ಯಾನು’ ಎಂದು ನೇರವಾಗಿ ಮಲಗೌಡನಿಗೆ ನಿರಾಶನಾಗಿಸುವ ಬಗೆಯಲ್ಲಿ ಉತ್ತರಿಸಿದ್ದ. ಹೇಗಿದೆ ದೇವರಾಟ ಮತ್ತದರ ಸುತ್ತಲಿನ ರೊಕ್ಕದಾಟ! ಮಾಧವ ಶಿಂದೆ ಈ ಬಗೆಯ ಊರವರ ತಂಟೆ ತಕರಾರುಗಳನ್ನು ತನ್ನದೇ ಶೈಲಿಯಲ್ಲಿ ನಿಭಾಯಿಸುತ್ತಿದ್ದ. ಒಟ್ಟಾರೆ ಬಸಗೌಡ ಮತ್ತು ಚಂದೂ ಇಬ್ಬರೂ ಸೇರಿ ಮಲಗೌಡನಿಗೆ ವಯಕ್ತಿಕವಾಗಿ ಬಹಳ ವಿನಂತಿಸಿಕೊಂಡಾಗ ಒಪ್ಪಿದ್ದ. ಆದರೆ ಕೆಲವು ಕಂಡಿಶನ್‍ಗಳನ್ನು ಹಾಕಿದ್ದ.
***
ದಸರೆಯ ಹಬ್ಬದಲ್ಲಿ ಇಪ್ಪತ್ನಾಲ್ಕು ಗಂಟೆ ಅವಧಿಗೆ ವಿಧಿ ವಿಧಾನಗಳಿವೆ. ಹತ್ತಾರು ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಪುರುಷರ ಅವಶ್ಯಕತೆಯಿದೆ. ಅದರಲ್ಲಿ ಕಡಿಮೆ ಬೀಳುವ ಸಾಧ್ಯತೆ ಸಹ ಇರುತ್ತದೆÉ. ಗರ್ಭಗುಡಿ, ಪಡಸಾಲೆಯಲ್ಲಿ ಮಡಿಯುಟ್ಟವರು ಮತ್ತು ಬಾಕಿ ಕೆಲಸ ಕಾರ್ಯಗಳಿಗೆ ಸಾಮಾನ್ಯರ ಉಪಸ್ಥಿತಿ ಇದೆ. ಹೀಗಿರಲು ಭಕ್ತರನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು. ಆಗ ಅಭಿಷೇಕ ಮತ್ತು ಅರ್ಚನೆಯ ಹಣ ದೊಡ್ಡ ಪ್ರಮಾಣದಲ್ಲಿ ಈ ನವರಾತ್ರಿಗಳಲ್ಲಿ ಬರುತ್ತಿರುತ್ತದೆ. ಮತ್ತು ನಿರಂತರ ಸಾಲಾಗಿ ದರುಶನಕ್ಕೆ ಆಗಮಿಸುವ ಭಕ್ತರು ತಟ್ಟೆಯಲ್ಲಿಡುವ ದಕ್ಷಿಣೆಗಳು ಸಹ ಭರಪೂರ. ಬೆವರಿಳಿಯುವಷ್ಟು ಶ್ರಮ.
ಇದರಲ್ಲಿ ಕೆಲಸಕ್ಕೆಂದೇ ಇಟ್ಟುಕೊಂಡ ಅರ್ಚಕರ ಬಂಧುಗಳ ಹುಡುಗರು ದುಡ್ಡನ್ನು ಕೊಳ್ಳೆ ಹೊಡೆದ ಉದಾಹರಣೆಗಳೂ ಇವೆ. ಅದನ್ನು ಆಡುವುದಕ್ಕೂ ಸುಮ್ಮನಿರುವುದಕ್ಕೂ ಆಗದೇ ತೆಪ್ಪಗಿರಬೇಕಾದ ಅನಿವಾರ್ಯತೆ ಪೂಜೆ ಬಂದಂಥ ಅರ್ಚಕನ ಸ್ಥಿತಿ ಅರ್ಥಾತ್ ಚಂದೂನ ಸ್ಥಿತಿಯೂ ಹೌದು. ಮಲಗೌಡ ಮಧ್ಯಾಹ್ನ ಊಟಕ್ಕೆಂದು ಗುಡಿಯ ನೈವೇದ್ಯ ಖೋಲಿಗೆ ಹೋಗದೇ ತನ್ನ ಮನೆಗೆ ಹೋಗುತ್ತಿದ್ದ. ಒಮ್ಮೆ ಹೋಗುವಾಗ ಪ್ಲಾಸ್ಟಿಕ್ ಚೀಲವೊಂದರಲ್ಲಿ ಹಣವಿತ್ತು ಎನ್ನುವುದನ್ನು ನೋಡಿದವರೊಬ್ಬರು ಚಂದೂನಿಗೆ ಹೇಳಿದರು. ಚಂದೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮತ್ತು ನಂಬಲಿಲ್ಲ. ಒಂದು ಪಕ್ಷ ಮಲಗೌಡನೇ ಒಯ್ದಿದ್ದರೇ ‘ತಮ್ಮನೇ ತಗೊಂಡಿರುತ್ತಾನೆ ಬಿಡು’ ಎಂದು ಸುಮ್ಮನಾಗುವ ಸ್ವಭಾವದವ. ಆದರೆ ಈ ವಿಷಯ ಮನೆಯಲ್ಲಿ ಚಂದೂನ ಮಡದಿ ರವಿನಾ ಮತ್ತು ತಂಗಿ ಶಾರದಾರ ಕಿವಿಗೆ ಬಿತ್ತು. ಅದಕ್ಕವರು ಮಲಗೌಡ ಯಾಕೆ ಗುಡಿಯಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ! ಅಂತ ಸುಳ್ಳು ಫರಮಾನು ತೆಗೆದಿದ್ದ ಎಂಬುದರ ಹಿನ್ನೆಲೆ ಢಾಳವಾಗಿ ಅರ್ಥವಾಯಿತು. ಬಸಗೌಡನಿಗೆ ಇದು ಗೊತ್ತಾಗಿತ್ತು. ಚಂದೂ ಮತ್ತು ಬಸಗೌಡ ಇಬ್ಬರು ಜಾಣತನ ಮೆರೆದರು. ಈಗ ಇದಾವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ವಿಷಯ ಎತ್ತಿದರೆ ಜಗಳಾಡಿ ಇಡೀ ಪೂಜಾರ್ಚನೆಗೆ ನಿಗದಿಯಾದ ಅವನೇ ಕರೆತಂದ ಆ ತಂಡವನ್ನೆಲ್ಲ ಕರೆದುಕೊಂಡು ಹೊರಟು ಹೋಗಿಬಿಟ್ಟರೇ? ‘ಹೂಡಿದ ನೊಗದಿಂದ ಎತ್ತುಗಳು ಬಳಗ ತೆಗೆದ ಹಾಗೆ’ಆಗಿಬಿಟ್ಟು ಹೋದರೆ; ಆಗುಂತಕವಾಗಿ ಯಾರನ್ನು ಎಲ್ಲಿಂದ ತರುವುದು? ಪೂಜಾರಿಗಳ ಈ ಸಮುದಾಯದಲ್ಲಿ ವಿವಿಧ ಬೊಡ್ಡಿಗಳಲ್ಲಿ ದಾಯಾದಿ ಕಲಹಗಳು ಹೇರಳವಾಗಿವೆ. ತುರ್ತಿನಲ್ಲಿ ಯಾರೊಬ್ಬರೂ ಯಾರಿಗೂ ನೆರವಿಗೆ ಬರುವುದಿಲ್ಲ. ಅದಕ್ಕೆ ಮಲಗೌಡ ಮತ್ತು ಬಸಗೌಡ ಸುಮ್ಮನಾದರು. ಈ ಕಾರಣಗಳಿಂದ ಚಾಣಾಕ್ಷತೆ ಮೆರೆದ ಚಂದೂ ಹೆಚ್ಚು ಸಮಯ ಗುಡಿಯಲ್ಲೇ ಇರತೊಡಗಿದ. ಕಣ್ಣೆದುರು ಇದ್ದರೆ ಯಾವುದೂ ನಡೆಯದು ಎಂದು.
ಜಾಗರಣೆ ಅಷ್ಟಮಿಯ ಮಹತ್ವದ ಆಚರಣೆ. ಅವತ್ತು ಗರ್ಭಗುಡಿಯ ನಂತರದ ಪಡಸಾಲೆ ಆವರಣದಲ್ಲಿ ವಿಶೇಷ ಅರ್ಚನೆಗಳು ಮುಗಿದ ಬಳಿಕ; ದೇಸಗತಿ ಬ್ರಾಹ್ಮಣ ಸಮುದಾಯದ ವಾಡೆಯ ನಿರ್ದಿಷ್ಟ ಮನೆತನದವರಿಗೆ, ದೀವಟಿಗೆ ಹಿಡಿದ ಜೈನ ಸಮುದಾಯದ ಹಕ್ಕಿನ ಮನೆಯವರಿಗೆ, ಮಂಗಳವಾದ್ಯದ ಕರಂಡೋಳ್ಳು, ಸನಾಯಿ, ಕೈತಾಳದವರಿಗೆ ನೀಡಬಹುದಾದ ಎಲೆ ಅಡಿಕೆಯ ವ್ಯವಸ್ಥೆ ಮಾಡಲು ಮಲಗೌಡನಿಗೆ ಹೇಳಲಾಗಿತ್ತು. ಚಂದೂ ಮತ್ತು ಬಸಗೌಡ ಒಳಗಿನ ಗರ್ಭಗುಡಿಯ ಮತ್ತು ಒಳಪಡಸಾಲೆಯ ಉಸ್ತುವಾರಿಯಲ್ಲಿರುವುದೆಂದು ಯೋಜಿಸಲಾಗಿತ್ತು. ಗರ್ಭಗುಡಿ ಮತ್ತು ಒಳಪಡಸಾಲೆಯಲ್ಲಿ ಮಧ್ಯರಾತ್ರಿ ನಡೆವ ವಿಧಿಗಳೂ ಮುಗಿಯುವಷ್ಟರಲ್ಲಿ ನಡುರಾತ್ರಿ ಎರಡು ಗಂಟೆಯಾಗಿರುತ್ತಿತ್ತು. ಇದು ಪ್ರತಿ ವರ್ಷ ನಡೆಯುವ ಪೂಜಾ ಕ್ರಮಗಳು. ಅಲ್ಲಿ ಕಡ್ಡಾಯವಾಗಿ ಮದುವೆಯಾದವರು ಊರು ಆಯಗಾರರ ಬೆರಳೆಣಿಕೆಯವರು ಮಾತ್ರ ಭಾಗವಹಿಸುವದು. ಸಿಂಪಿಯ ಸಿಂಪಿಗೇರ,ಜೈನರ ಪಾಟೀಲರು,ದೇಸಗತಿಯ ಬ್ರಾಹ್ಮಣರು,ಗೋಂಧಳೇರು... ಹೀಗೆ ಕೆಲವರೆ ಇರುವ ರಿಚ್ಯುವಲ್. ಆಗ ಎರಡು ಗಂಟೆ ಮೀರಿ ವಾದ್ಯವಾದನೊಟ್ಟಿಗೆ ಪಲ್ಲಕ್ಕಿ ಮೆರವಣಿಗೆ. ಸಿದ್ಧನ ಪುಟ್ಟ ಉತ್ಸವ ಮೂರ್ತಿಯು ಅಲಂಕೃತಗೊಂಡು ಪಲ್ಲಕ್ಕಿಯಲ್ಲಿರುತ್ತದೆ. ಅದು ಗುಡಿಯೊಳಗೆಯೆ ಒಂದು ಸುತ್ತು ಪ್ರದಕ್ಷಣಕ್ಕÉ ಎರಡು ತಾಸು ತೆಗೆದುಕೊಳ್ಳುತ್ತದೆ. ಒಳ ಪಡಸಾಲೆಯಲ್ಲಿ ಆರತಿ, ಧೂಪಗಳು, ಕರ್ಪೂರಗಳಿಂದ ಎಲ್ಲರು ಬೆವೆತು ಬೆಂದು ಕಪ್ಪಾಗಿ ಹೋಗಿರುತ್ತಾರೆ. ಮೈಯಲ್ಲಿ ಧಾರಾಕಾರ ಬೆವರು. ಹೊರಗೆ ಸುರಗಿ ಹುಲ್ಲಿನ ದರ್ಬೆ ಸುಡುವುದು ಮುಗಿದ ಬಳಿಕ ಆ ವಿಧಿಗಳ ಆಚರಣೆ ಮುಕ್ತಾಯ. ಈ ಸಂದರ್ಭದಲ್ಲಿ ಎಲೆ ಅಡಕಿ ಬೇಕಾಗುತ್ತವೆ. ಆಗ ಎಲೆ ಅಡಿಕೆ ಕಟ್ಟುಗಳೆಲ್ಲಿ? ಎಂದು ಬಸಗೌಡ ಚಂದೂ ಶೋಧಿಸತೊಡಗಿದರು. ಮಲಗೌಡ ಯಾವ ಬಗೆಯಲ್ಲೂ ಅದರ ವ್ಯವಸ್ಥೆಯನ್ನು ಮಾಡದೇ ಅಸಹಕಾರ ತೋರಿದಂತೆ ಮನೆಗೆ ಮಲಗಲು ಹೋಗಿದ್ದ, ಈ ಅವನ ಬೇಜವಾಬ್ದಾರಿ ವರ್ತನೆಗೆ ಬಸಗೌಡ ಮತ್ತು ಚಂದೂನಿಗೆ ಸಿಟ್ಟು ನೆತ್ತಿಗೇರಿತ್ತು. ಬೇಕೇಂದೇ ಹೀಗೆ ಆತ ಮಾಡಿದ್ದ. ಅದರ ವ್ಯವಸ್ಥೆ ಮಾಡಲು ಚಂದೂ ಮತ್ತು ಬಸಗೌಡರಿಗೆ ಕಣ್ಣೀರು ಕೆನ್ನೆಗುದುರಿತ್ತು.
***
ಚಂದೂ ದಸರೆಯಲ್ಲಿ ಬಂದಿದ್ದ ತೊಂಬತ್ತು ಎಣ್ಣೆಯ ಡಬ್ಬಿ, ಎರಡು ಸಾವಿರ ತೆಂಗಿನಕಾಯಿ, ಎರಡು ಚೀಲದಷ್ಟು ಸಕ್ಕರೆಯನ್ನು ಜಾಧವ ಕಿರಾಣಿ ಅಂಗಡಿಗೆ ಗೂಡ್ಸ್ ಟೆಂಪೋದಲ್ಲಿ ಕಳಿಸಿದ. ಈ ಮುಂಚೆಯೇ ತೆಂಗಿನಕಾಯಿಯ ನೂರಾರು ಕಾಯಿಗಳು ಒಂದು ಬಾರಿ ಅಂಗಡಿಗೆ ಹೋಗಿ ಮರಳಿ ಗುಡಿಗೆ ಬರುತ್ತಿದ್ದವು. ದೇಗುಲಗಳಲ್ಲಿ ಈ ಬಗೆಯ ರೀ ಸೈಕಲ್ ಆಗುವ ಪ್ರಕ್ರಿಯೆ ಸಹಜ. ಮನೆಗೆ ಬೇಕಾಗುವಷ್ಟು ಅಕ್ಕಿ, ಕಡಲಿಬೇಳೆ, ಗೋದಿ, ಹಿಟ್ಟು, ಸಕ್ಕರೆ ಮತ್ತು ಎಣ್ಣೆಯ ಕೆಲ ಪಾಕೀಟುಗಳನ್ನು ಇಟ್ಟುಕೊಂಡು ಆಪ್ತ ಬಂಧುಗಳಿಗೆಲ್ಲರಿಗೂ ಹಂಚಿದ್ದ. ಅಂಗಡಿಗೆ ಕಳಿಸುವಾಗ ಜೊತೆಗೆ ಅಣ್ಣ ಬಸಗೌಡ ಬಂದಿದ್ದ. ಅಣ್ಣನೇ ಜಾಧವರ ಅಂಗಡಿಯನ್ನು ಸೂಚಿಸಿದ್ದ. ಅಲ್ಲಿ ಈ ಸಾಮಾನುಗಳನ್ನು ತೆಗೆದುಕೊಳ್ಳುವ ಕುರಿತು ಮಾಹಿತಿ ನೀಡಿದ್ದ. ತೆಂಗಿನಕಾಯಿ ಎಣಿಸಿಕೊಂಡರು. ಇಬ್ಬರು ಎಲ್ಲ ಸಾಮಾನುಗಳ ತೂಕ ಮಾಡಿ ಚೀಟಿಯಲ್ಲಿ ಬರೆಯಿಸಿಕೊಂಡರು. ಸ್ವಾಭಾವಿಕವಾಗಿ ಅಂಗಡಿಯವ ಕಡಿಮೆ ದರದಲ್ಲಿಯೇ ತೆಗೆದುಕೊಳ್ಳುವವ. ಆದರೆ ಇವರಿಬ್ಬರೂ ದರ ಹಚ್ಚುವ ಸಂದರ್ಭದಲ್ಲಿ ಯೋಗ್ಯ ದರಕ್ಕಾಗಿ ಹಟ ಹಿಡಿದು ಚರ್ಚಿಸಿ ಅಂತಿಮಗೊಳಿಸಿದರು. ಮೊತ್ತ ತೊಂಬತ್ತೆರಡು ಸಾವಿರವಾಗಿತ್ತು. ಅದರಲ್ಲಿ ಇಪ್ಪತ್ತು ಸಾವಿರ ಮುಂಗಡ ಕೊಟ್ಟು ಉಳಿದ ಹಣವನ್ನು ನಾಲ್ಕು ದಿನಗಳಲ್ಲಿ ಅಕೌಂಟ್‍ಗೆ ಹಾಕುವುದಾಗಿ ಜಾಧವ ಹೇಳಿದ. ಚಂದೂನ ಅಕೌಂಟ್ ಡಿಟೇಲ್ಸ್ ತೆಗೆದುಕೊಂಡ.
“ಜಾಧವ ಅವರ, ನನಗ ನೀವು ಕೊಟ್ಟ ತಾರೀಖಿಗಿ ಹಣ ಹಾಕಲೇ ಬೇಕು. ನಂದು ಅಡಚಣಿ ಭಾಳದಾವು. ನನ್ನ ಕೆಲಸ ಬೆಂಗಳೂರಿನ್ಯಾಗ ಅದ... ನಾನಲ್ಲೇ ಇರತ್ಯಾನ. ತಪ್ಪಿಸೇರಿ ಮತ್ತ...” ಅಂತ ಎಚ್ಚರ ನೀಡಿದ್ದ.
“ಸಾಹೇಬರ ಅದರ ಕಾಳಜೀನ ಬಿಡ್ರಿ... ಕೇಳ್ರಿ ಬೇಕಾದರ ನಿಮ್ಮಣ್ಣ ಅವರಿಗಿ. ನಮದೆಲ್ಲ ಹೆಂಗ ಚೊಕ್ಕ ಇರತೈತಿ ಅಂತ...”ಜಾಧವ ಅಂದ. ಚಹಾ ತರಿಸಿದರು. ಹರಟುತ್ತ ಕುಡಿದರು. ಮತ್ತು ಮನೆಗೆ ಬಂದರು.
ಮನೆಯಲ್ಲಿ ಚಂದೂನ ಮಡದಿ ರವಿನಾ, ತಂಗಿ ಶಾರದಾ ಕಾಳುಕಡಿ, ಬೆಲ್ಲ, ಹಿಟ್ಟು, ಎಣ್ಣೆ ಪಾಕೀಟುಗಳನ್ನು ಗಂಟೆಗಟ್ಟಲೇ ಕುಳಿತು ವಿಂಗಡಿಸಿದರು. ಆನಂತರ ಮಲಗೌಡನಿಗೆ ಕೊಡಲು ಅವನ ಮನೆಗೆ ಹೋದಾಗ ಅವನ ಹೆಂಡತಿ ಪಾರು ನಿರಾಕರಿಸಿದಳಂತೆ. ‘ಅಯ್ಯ ಬ್ಯಾಡ ಬಿಡ್ರಿ ಅಕ್ಕಾರ, ನಾವ ತಿನ್ನಾವರ ಮನ್ಯಾಗ ನಾಲ್ಕ ಮಂದಿ...ಅವರಿಗಿ ಸಕ್ಕರಿ ರೋಗ ಬ್ಯಾರೆ, ಸುಳ್ಳ ನಾಸ ಆಗತೇತಿ...’ ಅಂತ ಮೂಗ ಮುರಿದಂಗ ನಖರಾ ಮಾಡಿ ಪಾರು ಅಂದಿದ್ದಳು. ಪಾರು ತಿಳಿದಷ್ಟು ಸುಲಭದ ಹೆಣ್ಣುಮಗಳಲ್ಲ. ಮಲಗೌಡ ಸಂಪೂರ್ಣ ಅವಳ ಗುಲಾಮನಂತೆ ವರ್ತಿಸುತ್ತಿದ್ದ. ಅದಕ್ಕೆ ಕಾರಣ ಮದುವೆ ಸಂಗಡ ತಂದ ಆಸ್ತಿ. ಅವರ ಮಗ ಶಿವುನ ತಲೆ ಕೆಡಿಸಿದವಳು, ಆ ಹುಡುಗನನ್ನು ಚಿಕ್ಕದೊಡ್ಡಪ್ಪರ ಸಂಗಡ ಸರಿಯಾಗಿ ಮಾತಾಡದ ಹಾಗೆ ಮಾಡಿದ ಬಲು ಘಾಟಿ ಹೆಣ್ಣಮಗಳು ಆ ಪಾರು. ರವಿನಾ, ಶಾರದಾ ಗುಡಿಯ ನೈವೇದ್ಯ ಖೋಲಿಯಲ್ಲಿರುವಾಗ ಅತ್ತ ತನ್ನ ಮನೆಗೆ ಉತ್ತತ್ತಿ, ಬದಾಮು, ಗೋಡಂಬಿ ಸಾಗಿಸಿ ‘ತನಗೇನೂ ಬೇಡಪ್ಪ’ ಎಂದು ನಯ ನಾಜೂಕತನ ಮಾಡಿದವಳು. ಹಾಗೆ ಗುಡಿಯೊಳಗೆ ಪಡಸಾಲೆಯಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಅಂತ ಅವನ ಪೊಳ್ಳು ಆದೇಶಕ್ಕೆ ಕಾರಣವಾದವಳು; ರವಿನಾ, ಶಾರದಾ ಅವರು ಗುಡಿಯೊಳಗೆ ಆಗಾಗ ಬಂದರೆ ಎಷ್ಟೆಷ್ಟು, ಏನೇನು ಬಂತು ಹೋಯಿತು ಎಂಬುದರ ಮಾಹಿತಿ ಸಿಗಬಹುದೆಂದು! ಹೇಳಿದಂತೆ ಮಲಗೌಡ ಹಾಗೆ ಸುಳ್ಳು ಪುಕಾರು ಎಬ್ಬಿಸಿದ್ದ. ಅವರೆಲ್ಲ ಬರದಂತೆ ತಡೆದಿದ್ದ.
***
ಚಂದೂ ತನ್ನ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದ. ತನ್ನ ಮಿತ್ರನ ಮನೆಯಲ್ಲಿ ಉಳಿದುಕೊಂಡಿದ್ದ. ಅವತ್ತು ಕಿರಾಣಿ ಅಂಗಡಿಯ ಜಾಧವ ಚಂದೂನ ಅಕೌಂಟಿಗೆ ಬಾಕಿ ಹಣವನ್ನು ಟ್ರಾನ್ಸ್‍ಫರ್ ಮಾಡುವವನಿದ್ದ. ಅವನು ಕೊಟ್ಟ ತಾರೀಖಿತ್ತು. ಚಂದೂ ಗೆಳೆಯನ ಸಂಗಡ ಬೆಳಗಿನ ತಿಂಡಿ ಮುಗಿಸಿದ. ಅವನ ಗೆಳೆಯ ತನ್ನ ಕಚೇರಿಗೆ ಹೋದ. ಚಂದೂ ಮರಳಿ ಗೆಳೆಯನ ಮನೆಗೆ ಬಂದ. ಅಕೌಂಟಿಗೆ ಹಣ ಟ್ರಾನ್ಸ್‍ಫರ್ ಆದ ಬಳಿಕ ಬರುವ ಎಸ್‍ಎಮ್ಮೆಸ್‍ಗಾಗಿ ಆಗಾಗ ಮೊಬೈಲ್ ಒಪನ್ ಮಾಡಿ ನೋಡುತ್ತ ಕಾಯುತ್ತಿದ್ದ. ಮಧ್ಯಾಹ್ನ ಎರಡು ಗಂಟೆಯಾದರೂ ಮೆಸೇಜು ಬರಲಿಲ್ಲ. ವಿಚಾರಿಸಲು ಹೊರಳಿ ಜಾಧವ ಅವರಿಗೆ ಫೋನ್ ಮಾಡಿದ. ಫೋನ್ ಸ್ವಿಚ್ ಆಫ್ ಬರತೊಡಗಿತು. ಆತಂಕದಿಂದ ಅಣ್ಣ ಬಸಗೌಡನಿಗೆ ಕಾಲ್ ಮಾಡಿ ವಿಷಯ ತಿಳಿಸಿದ. ಅಲ್ಲಿಗೆ ಹೋಗಿ ತಪಾಸಣೆ ನಡೆಸಲು ಕೋರಿದ.
ಬಸಗೌಡ ಅಂಗಡಿಗೆ ಹೋದವನೆ ವಿಷಯ ತಿಳಿಸಿದ-
“ಇವತ್ತ ಹಣ ಅವನ ಅಕೌಂಟಿಗಿ ಹಾಕತಿನಿ ಅಂದಿದ್ರಿ, ಬೆಂಗಳೂರಿನಲ್ಲಿ ನನ್ನ ತಮ್ಮ ಕಾಯತಿದಾನ. ಮತ್ತವನು ಫೋನ್ ಮಾಡಿದರ ನಿಮ್ಮದು ಸ್ವಿಚ್ ಆಫ್ ಬರತದ. ಯಾಕ?” ಅಂತಂದ. ಜಾಧವನಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಧರ್ಮಸಂಕಟ.
“ರೀತಿಪ್ರಕಾರ ಚಂದೂನಿಗ ರೊಕ್ಕ ಇವತ್ತ ಅಕೌಂಟಿಗಿ ಹಾಕಬೇಕಿತ್ತು ಅದ ಖರೆ. ಆದರ”... ಹೀಗೆಂದು ಸಪ್ಪಗೆ ಮುಖ ಮಾಡಿ ಸುಮ್ಮನೆ ನಿಂತ.
ಬಸಗೌಡನಿಗೆ ಸಿಟ್ಟು ಬರತೊಡಗಿತು. “ಅಲ್ಲ...ಇವತ್ತ ದುಡ್ಡ ಅವಗ ಹಾಕತೀನಿ ಅಂತ ಹೇಳೇರಿ. ಅವ ಅಲ್ಲಿ ದೂರದ ಬೆಂಗಳೂರಿನ್ಯಾಗ ಕಾಯಕ್ಕತ್ತಾನ... ಅವನಿಗಿ ಅಲ್ಲಿ ರೊಕ್ಕ ಕೊಟ್ಟ ದಗದ ಮಾಡಿಸಿಕೋದು ಐತಿ. ಮತ್ತಿಲ್ಲಿ ನೀವ ಹಿಂಗ ಕತಿ ಹೇಳಾಕತ್ತೀರಿ...ಯಾನ ಭಾನಗಡಿ?” ಜಾಧವನ ಮೇಲೆ ರೇಗಿದ. ಜಾಧವ ವ್ಯವಹಾರಸ್ಥ ವ್ಯಕ್ತಿ. ವಿಷಯ ಬಚ್ಚಿಟ್ಟು ಪ್ರಯೋಜನವಿಲ್ಲ ಎಂದರಿತು. ಇರುವ ಸತ್ಯವನ್ನು ಹೇಳಿದ-
“ನಿಮ್ಮ ತಮ್ಮ ಮಲಗೌಡ ರೊಕ್ಕ ಕೊಡಬ್ಯಾಡ್ರಿ ಅಂತ, ತಡೆ ಹಿಡಿಲಿಕ್ಕಿ ಮಜಬೂರ ಮಾಡ್ಯಾಣ. ಅವನ ಬಾಸ್ ಮಾಧವರಾವ ಶಿಂದೆ ಕಡಿಂದ ನನಗ ಕೊಡಬ್ಯಾಡ್ರಿ ಅಂತ ಹೇಳಿಸಿ ಪ್ರೆಶರ್ ತಂದಾನ. ಚಂದೂನ ಕರೆಸಿ ನ್ಯಾಯ ಮಾಡ್ತೀನಿ ಅಂದಾರಂತ...ಅಲ್ಲಿ ತನಕ ಕೊಡಬ್ಯಾಡ್ರಿ ಅಂದಾನಂತ... ಯಾನ ಮಾಡಲಿ? ನೀವ ಹೇಳ್ರಿ...” ಅಂತಂದು ಕೈಚೆಲ್ಲಿದ್ದರ ಕಾರಣ ಹೇಳಿದ. ಬಸಗೌಡನಿಗೆ ಜಾಧವನ ಈ ನಡೆ ಸರಿಯೆನಿಸಲಿಲ್ಲ. ಸಿಟ್ಟು ಇಳಿಯಲಿಲ್ಲ.
“ಜಾಧವ ಅವರ, ಮಾಲು ತಂದು ನಾವ ಕೊಟ್ಟೀವಿ, ಮಲಗೌಡ ಅಲ್ಲ ಮತ್ತ ಶಿಂದೆಯವರೂ ಅಲ್ಲ... ನ್ಯಾಯವಾಗಿ ನೀವ ನಮ್ಮ ಹಣ ನಮಗ ಕೊಡಬೇಕು...ಬ್ಯಾರೆಯವರದ್ದು ಕೇಳೂ ಅಗತ್ಯವಿಲ್ಲ...” ಜೋರು ಮಾಡಿ ಅಂದ.
“ಈಗ ಚಂದೂನ ಸಂಗಾಟ ಮಾತಾಡ್ರಿ, ಅವಗ ಯಾನ ಹೇಳತೀರಿ ಹೇಳ್ರಿ...” ಹೀಗೆಂದ ಬಸಗೌಡ ತನ್ನ ಮೊಬೈಲ್‍ನಿಂದ ಕಾಲ್ ಮಾಡಿ ನಡೆದಂಥ ವಿಷಯವನ್ನು ಸಂಕ್ಷಿಪ್ತವಾಗಿ ಚಂದೂಗೆ ಹೇಳಿದ. ಮಾತಾಡಲು ಚಂದೂನ ಕೈಗಿತ್ತ. ಅಣ್ಣನ ಮಾತು ಕೇಳಿ ಚಂದೂನ ತಲೆಕೆಟ್ಟಿತು. ಅವನ ಪಿತ್ಥನೆತ್ತಿಗೇರಿತು. ಮಾತಿನ ಮೇಲಿನ ಕಂಟ್ರೋಲ್ ಕಳಕೊಂಡವನೇ ಜಾಧವನ ಮೇಲೆ ಎಗರಾಡಿದ.
“ಹೌ ಡೇರ್ ಯೂ... ನನ್ನ ಹಣ ನನಗ ಕೊಡಾಕ ಯಾವೂರ ದಾಸಯ್ಯನ ಮಾತ ನಾನ್ಯಾಕ ಕೇಳಬೇಕೂರೀ? ಅದೆಲ್ಲ ಕತಿ ಬ್ಯಾಡ, ನನ್ನ ರೊಕ್ಕ ನನಗ ಬೇಕು ಅಂದರ ಬೇಕು ಅಷ್ಟ. ಇಲ್ಲದಿದ್ದರ ಪೋಲಿಸ್ ಕಂಪಲೆಂಟ್ ಕೊಡತೀನಿ...ಇಲ್ಲಿಂದಲೇ! ನನ್ನ ಮಿತ್ರ ಐಜಿಪಿ ಅದಾರ.. ಒಂದ ಫೋನ್ ಸಾಕು...” ಅಂತ ಒಂದೇ ರಭಸದಲ್ಲಿ ಒದರಾಡಿದ ಚಂದೂ. ಅವನ ತಾಳ್ಮೆ ಕೆಟ್ಟಿತ್ತು. ಆತ ಮಲಗೌಡನಿಗೆ ಹೇಳಿದ್ದ. ಜಾಧವನ ಅಂಗಡಿಯಿಂದ ದುಡ್ಡು ಬಂದೊಡನೆ ಕೊಡುವುದಾಗಿ ಅರುಹಿದ್ದ. ಆದರೂ ಮಲಗೌಡ ಆ ಪುಢಾರಿ ಶಿಂದೆ ಕಡೆಯಿಂದ ಜಾಧವರ ಮೇಲೆ ಒತ್ತಡ ತಂದಿದ್ದ. ಉಗುರಿಂದ ಹೋಗುವುದಕ್ಕೆ ಕೊಡಲಿ ಎತ್ತಿದಂಗಾಗಿತ್ತು.
“ಸಾವುಕಾರ ನಾ ಯಾನ ಮಾಡಲಿ? ಶಿಂದೇನ ವಿರೋಧ ಕಟಕೊಂಡ ಊರಾಗ ಬಾಳೇ ಮಾಡಾಕ ಆಗತೈತೇನು? ನೀವ ವಿಚಾರ ಮಾಡ್ರಿ...” ಬಸಗೌಡನೆದುರು ಜಾಧವ ಗಳಗಳಿಸಿದ. “ಒಂದ ಮಾತು ಮಲಗೌಡ ಇಲ್ಲ ಶಿಂದೆ ಅಣ್ಣ ಹೇಳಲಿ, ಇಲ್ಲೇ ನಿಮ್ಮ ಕೈಯಾಗನ ರೊಕ್ಕಾ ಕೊಟ್ಟಬಿಡತ್ಯಾನ...” ಜಾಧವ ಅಸಹಾಯಕತನದಿಂದ ಅಂದ. ಇದು ಒಳ್ಳೆಯ ಫಜೀತಿ ಆಯತಲ್ಲ! ಅಂತಂದುಕೊಂಡು ಬಸಗೌಡ ಹೇಳಿದ-“ಯಾನ ಇರಲಿ, ಹಿಂಗ ಮಾಡೋದು ನಿಮ್ಮ ವ್ಯವಹಾರ ಅಲ್ಲ! ನಾನ ಚಂದೂಗ ನಿಮ್ಮ ಅಂಗಡಿಗಿ ಹಾಕ ಅಂತ ಹೇಳಿ ತಪ್ಪು ಮಾಡೇನಿ...ಬ್ಯಾರೆಯವರು ತಗೋಳ್ಳಾಕ ತಯಾರಿದ್ದರು.” ಅಂದವನೇ ಸಿಟ್ಟಿನಿಂದ ಸಟ್ಟನೇ ಅಲ್ಲಿಂದ ಹೊರಬಿದ್ದ.
***
ಮರುದಿನ ಅಣ್ಣ ಬಸಗೌಡ ಚಂದೂನಿಗೆ ಕಾಲ್ ಮಾಡಿದ. ನಿನ್ನೆಯ ದಿನ ಮಲಗೌಡ ಗುಡಿಯಲ್ಲಿ ಗದ್ದಲ ಮಾಡಿದ ಸುದ್ದಿ ಹೇಳಿದ. ಅಲ್ಲಿರುವ ಚಿಕ್ಕ ಮಹಾದೇವ ಗುಡಿಯ ಎದುರು ಮಲಗೌಡ ಎದೆಎದೆ ಬಡಿದುಕೊಂಡು ರೋಧಿಸತೊಡಗಿದ. ‘ನನಗ ಅನ್ಯಾಯ ಮಾಡ್ಯಾರು, ಕೊಡಬೇಕಾದ ರೊಕ್ಕಾನ ಕೊಡತಾ ಇಲ್ಲ, ಮೋಸಾ ಮಾಡ್ಯಾರು...’ಈ ಬಗೆಯ ಅವನ ರಂಪಾಟಕ್ಕೆ ಜನ ಜಾತ್ರೆ ಕೂಡಿದರಂತೆ. ಬಸಗೌಡನಿಗೆ ಇದನ್ನು ತಹಬದಿಗೆ ತರಲು ಸಾಕು ಬೇಕಾಯಿತಂತೆ. ಇದೆಲ್ಲ ಕಿವಿ ಊದುವ ಕೆಲಸ ಮಾಡಿದ್ದು ಮಲಗೌಡನ ಮಡದಿಯಿರಬಹುದು.
ಅದಕ್ಕೆ ಈ ತಂಟೆಯನ್ನು ಬಗೆಹರಿಸಲು ಅವನ ಮತ್ತು ಚಂದೂನ ನಡುವೆ ಒಪ್ಪಂದಕ್ಕೆ ಬರುವ ವಿಚಾರವಾಗಿ ಬಸಗೌಡ ಕ್ರಮತೆಗೆದುಕೊಂಡ. ಅವನನ್ನು ಕರೆದುಕೊಂಡು ಮನೆಗೆ ಹೋಗಿ, ‘ಶಿಂದೆ ಕಡೆ ವ್ಯವಹಾರ ಒಯ್ಯಬಾರದಿತ್ತು ಎಂತಲೂ, ಚಂದೂ ನಿನಗೆ ಹಣ ಕೊಡಲು ತಯಾರಿದ್ದಾಗ ದುಡುಕಿದ್ದು ಸರಿಯಲ್ಲ ಎಂತಲೂ, ಈಗ ನಿನಗೆ ಚಂದೂ ಪ್ರಾಮೀಜ್ ಮಾಡಿದ ಹಣ ಜಾಧವ ಕಡೆಯಿಂದ ಕೊಡಿಸುವುದಾಗಿ ಮತ್ತು ಇಲ್ಲಿಯೇ ಈ ವಿಷಯ ಇತ್ಯರ್ಥಮಾಡಿ ಮುಕ್ತಾಯಗೊಳಿಸಲು...’ಬುದ್ಧಿ ಹೇಳಿ ಒಪ್ಪಿಸಿದ. ಮಲಗೌಡನು ತಿಳುವಳಿಕೆಯಿಲ್ಲದೆ ಉಂಟು ಮಾಡಿದ ಪ್ರಕರಣಕ್ಕೆ ಬಸಗೌಡ ಅಂತ್ಯ ಹೇಳಿದ.
ಮಲಗೌಡನ ಪಾಲು ಹೋಗಿ ಚಂದೂನ ಹಣ ನಿರಾಂತಕವಾಗಿ ಬಸಗೌಡನ ಮಧ್ಯಸ್ತಿಕೆಯಿಂದ ಅಕೌಂಟಿಗೆ ಜಮಾ ಆಯಿತು. ಕೊನೆಗೆ ಚಂದೂನಿಗೆ ಭಾಸವಾಗಿದ್ದು- ಇಷ್ಟೆಲ್ಲ ಶರಣರು, ಸಿದ್ಧರು, ಸಂತರು, ಸೂಫಿಗಳು ತಮ್ಮ ವಚನ, ಓವಿ, ಪ್ರವಚನ ಮೂಲಕ ತಿಳಿವು ನೀಡಿದರೂ ಅವರನ್ನೆಲ್ಲ ಜಂಗಮವಾಗಿಸದೇ ಸ್ಥಾವರಗೊಳಿಸಿದರಲ್ಲ. ಮೌಢ್ಯತೆ ಮತ್ತು ಜಾತ್ಯಾಂಧತೆಯೇ ನೆಲದ ಬೇರುಗಳಿಗೆ ಇಂಗುತ್ತಿದೆಯೆಂದು ಅನಿಸಿತು. ಇವೆಲ್ಲವೂ ಇತಿಹಾಸದಿಂದ ವರ್ತಮಾನಕ್ಕೋ, ವರ್ತಮಾನದಿಂದ ಇತಿಹಾಸಕ್ಕೋ ಒಂದೂ ಅರಿಯದಾದ.

ಕಲಾಕೃತಿ: ಎಸ್. ವಿ. ಹೂಗಾರ

ಡಿ.ಎಸ್.ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು. 

1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ಗಾಂಧಿ’, ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನವುಂಟು ಮಾಡಿತು. ’ಗಾಂಧಿ-ಅಂಬೇಡ್ಕರ’, ’ಪೇಯಿಂಗ್ ಗೆಸ್ಟ್’, ’ಕಿರವಂತ’, ‘ಶುದ್ಧ ’ಚದುರಂಗ ಮತ್ತು ಕತ್ತೆ’, ’ಶುದ್ಧವಂಶ’, ‘ಸತ್ಯ ಶೋಧಕ’ ಮುಂತಾದ ನಾಟಕಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ‘ನೆರಳುಗಳು’ (ಕಾದಂಬರಿ), ’ನಿನ್ನ ಮೇಲೆ ಸಿಟ್ಟಿಲ್ಲ ಮಾಯಿ’, ಆಯ್ದ ಮರಾಠಿ ಕತೆಗಳು, ’ಮರಾಠಿ ಕೈದಿಗಳ ಕವಿತೆಗಳು’ಇವು ಪ್ರಮುಖ ಅನುವಾದಿತ ಕೃತಿಗಳು.

’ವಾರಸಾ’, ’ಒಡಲ ಉರಿಯ ಹೊತ್ತು’, ‘ಚೌಗಲೆ ಕತೆಗಳು’, ’ಜಂಗು ಹಿಡಿದ ಬ್ಲೇಡು’, ‘ಸೀಮೆಗೊಂದು ಅಟಾಟಿ’ ಅವರ ಕಥಾ ಸಂಕಲನಗಳು. 'ಸುಡುಕಾವಿನ ಒಣ ಎಲೆ' ಕವನ ಸಂಕಲನ, 'ಕನ್ನಡ-ಮರಾಠಿ ಆಧುನಿಕ ರಂಗಭೂಮಿ' ಸಂಶೋಧನ ಕೃತಿ, ಮರಾಠಿ ಚಿತ್ರಕ್ಕೆ ಕನ್ನಡ ಸಂಭಾಷಣೆ ಬರೆದಿರುವರು. ಚಿತ್ರಕಲಾವಿದರಾದ ಇವರ ಪ್ರಮುಖ ಚಿತ್ರಕಲಾ ಪ್ರದರ್ಶನಗಳು ಬೆಂಗಳೂರು, ಮುಂಬಯಿ, ಪುಣೆ, ಕೊಚ್ಚಿನ, ಚೆನ್ನೈ ಹಾಗೂ ಹೈದರಾಬಾದಿನಲ್ಲಿ ನಡೆದಿವೆ. 2017 ರಲ್ಲಿ ಟರ್ಕಿ ದೇಶದ ಎಸ್ಕಿಸೆಹರ್‌ನ ಹ್ಯಾನ್‌ನಲ್ಲಿ ಹತ್ತು ದಿನಗಳವರೆಗೆ ಜರುಗಿದ ಅಂತರಾಷ್ಟ್ರೀಯ ಚಿತ್ರಕಲಾ ಸಿಂಪೋಜಿಯಮ್‌ನಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರಕಲೆ ಮತ್ತು ರಂಗಭೂಮಿ ಕುರಿತು ಹಲವು ಕೃತಿಗಳನ್ನು ರಚಿಸಿರುವ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ 'ನಾಟಕಕಾರ ಪ್ರಶಸ್ತಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ದಿಶಾಂತರ ನಾಟಕಕ್ಕೆ ಪ್ರತಿಷ್ಠಿತ 'ಚದುರಂಗ' ಪ್ರಶಸ್ತಿ ಮತ್ತು ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿಗಳು ಸೇರಿ ಹದಿನಾರು ಪುರಸ್ಕಾರಗಳು ಸಂದಿವೆ. ಕನ್ನಡ-ಮರಾಠಿ ರಂಗಭೂಮಿ ಸೇವೆಗೆ ಮುಂಬೈ ಕರ್ನಾಟಕ ಸಂಘದ 'ವರದರಾಜ ಆದ್ಯ' ಪ್ರಶಸ್ತಿ ಸೇರಿದಂತೆ 16 ಪುರಸ್ಕಾರಗಳು ಇವರಿಗೆ ಸಂದಿವೆ. ‘ಕಾಳಾಚಾ ಪಾವುಲಖುಣಾ’ ಆಯ್ದ ಮರಾಠಿಗೆ ಅನುವಾದಗೊಂಡ ಚೌಗಲೆಯವರ ಕತೆಗಳು. ಅವರು ಮುಂಬೈ ವಿಶ್ವವಿದ್ಯಾಲಯದ ಜಾನಪದ ರಂಗಭೂಮಿ ವಿಭಾಗ ಮತ್ತು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ ನಾಟಕ ವಿಭಾಗದ ರಂಗತಜ್ಞರಾಗಿದ್ದಾರೆ. 'ದಿಶಾಂತರ', 'ವಖಾರಿಧೂಸ, 'ಉದ್ದಷ್ಟ' ನಾಟಕಗಳು ಮರಾರಿ ಮತ್ತು ಇಂಗ್ಲಿಷ್‌ಗೆ ಅನುವಾದಗೊಂಡಿವೆ. ಟರ್ಕಿ ದೇಶದಲ್ಲಿ ನಡೆದ ವಿಶ್ವಕಲಾ ಮೇಳದಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ರಂಗ ಸಮಾಜದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮರಾಠಿ ಭಾಷೆಯ ‘ಕ್ಯಾರಿ ಆನ್ ಮರಾಠಾ’ ಚಲನಚಿತ್ರಕ್ಕೆ ಕನ್ನಡ ಸಂಭಾಷಣೆ ರಚಿಸಿರುವರು. ಕನ್ನಡದ ಮೊದಲ ಮಹಿಳಾ ದಲಿತ ಆತ್ಮಕತೆ ಆಧರಿಸಿದ ಚಿತ್ರ ‘ಮಾತಂಗಿ ದೀವಟಿಗೆ’ಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. 

 

More About Author