Story

ಹುಲಿ ಬೇಟೆ ಕರಿಯಪ್ಪ

ಕತೆಗಾರ, ನಟ ಶಿವರಾಜ್ ಡಿ.ಎನ್.ಎಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಡಿಯವರು. ಬರಹ-ಓದು-ನಟನೆ ಹಾಗೂ ಛಾಯಾಗ್ರಹಣ ಮುಖೇನ ಗುರುತಿಸಿಕೊಂಡಿರುವ ಶಿವರಾಜ್ ಡಿ.ಎನ್.ಎಸ್ ಅವರ ‘ಹುಲಿ ಬೇಟೆ ಕರಿಯಪ್ಪ’ ಕತೆ ನಿಮ್ಮ ಓದಿಗಾಗಿ..

ಹೋ... ಎಂದು ಆಕಾಶಕ್ಕೆ ಮುಖಮಾಡಿ ಗಂಟಲು ಹರಿದು ಚುಕ್ಕಿ ನಕ್ಷತ್ರಗಳಿಗೆ ಕೇಳುವಂತೆ ಕೂಗಿಕೊಂಡರು.. ಯಾರೊಬ್ಬರಿಗು ಕರಿಯಪ್ಪನ ಸದ್ದು ಕೇಳಲಿಲ್ಲ, ಇನ್ನೇನೊ ಕೋಳಿ ಕೂಗುವ ನಸುಕಿನ ಹೊತ್ತಾದರೂ ಆ ಮುಸುಕಿನ ಜೋಳದ ಹೊಲದಂಚಿನಲ್ಲಿ ಯಾರೊಬ್ಬರ ಸುಳಿವಿರಲಿಲ್ಲಾ, ಇಡೀ ರಾತ್ರಿ ಕೂಗಿ ಕೂಗಿ ಕರಿಯಪ್ಪನ ಗಂಡಲ ಧ್ವನಿ ಕಟ್ಟಿದ್ದರು ಆ ಕಟ್ಟಿದ ಕೀರಲೂ ಧ್ವನಿಯ ಸೂಲಿನೊಂದಿಗೆ ನರಳುತಿದ್ದ. ಬೆಳಿಗ್ಗೆ ಬಂದು ಹೊಲ ಸುತ್ತುತ್ತಿದ್ದಾಗ ‘ಮಾರ'ನಿಗೆ ಹಕ್ಕಿ ಪಕ್ಷಿಗಳ ಸದ್ದಿನೊಂದಿಗೆ ಈ ವಿಚಿತ್ರ ಧ್ವನಿಯು ಕೇಳಿತು, ಯಾವುದೀ ಪ್ರಾಣಿ ಬಹುಶಃ ಯಾರೊ ಹಾಕಿರುವ ಉಳ್ಳಿಗೆ ಮುಂಗುಸಿಯೊ ಮೊಲವೊ ತಗುಲ ಕೊಂಡಿರಬೇಕು ಎಂದು ಭಾವಿಸಿ ಜೋಳದೆಲೆ ತರಗನ್ನ ಸವರಿಸಿಕೊಂಡು ಕೈಯಲ್ಲಿ ಕುಡುಗೋಲು ಅರಕಡ್ಡಿ ಹಿಡಿದು ಹುಡುಕುತ್ತ ಬಗ್ಗಿ ಜೋಳದ ಹೊಲದೊಳಗೆ ಬಂದ, ಕರಿಯಪ್ಪನ ತೊಡೆ ಮೊಳದುದ್ದ ಸೀಳಿದ ವಿಕಾರತೆ ಮತ್ತು ಚಲ್ಲಿದ್ದ ರಕ್ತವನ್ನ ಕಂಡವನೆ ‘ಅಯ್ಯಯ್ಯೊ ಬನ್ರ್ಯೋ ಕರಿಯಪ್ಪ ಗೌಡನಿಗೆ ಏನೊ ಆಗಿದೆ ಬನ್ರಯೋ’ ಅಂತ ಲಬ್ಬೊ ಎಂದು ಜೋರಾಗಿ ಕೂಗಿ ಕರೆದ ಕ್ಷಣಾರ್ಧದಲ್ಲಿ ಕಾವಲು ಮುಗಿಸಿ ಊರಿನೆಡೆಗೆ ಸಾಗುತಿದ್ದ ಮಾದೇವನು ಓಡಿ ಬಂದ, ಅವನೊಂದಿಗೆ ಸೇರಿ ಕರಿಯಪ್ಪನ ತೊಡೆಗೆ ತನ್ನ ತಲೆಗೆ ಕಟ್ಟಿದ ಟವಲ್ಲು ಬಿಚ್ಚಿ ಬಿಗಿದು ಹೊತ್ತು ಊರಿಗೆ ಬಂದವರೆ ಸರಸರನೆ ಗಾಡಿ ಕಟ್ಟಿ ಕರಿಯಪ್ಪನ ತಮ್ಮ ಲೋಕಿಯನ್ನು ಕರೆದು ತಾಲೂಕಿನ ಆಸ್ಪತ್ರೆಗೆ ಹೊತ್ತೋಯ್ದರು.

ಹುಲಿಬೇಟೆ ಬಸವೇಗೌಡನ ಮನೆತನ ಎಂದು ಹೆಸರುವಾಸಿಯಾಗಿದ್ದ ಮನೆಯ ಬೆಟ್ಟೆಗೌಡನ ಹಿರಿ ಮಗನೆ ಈ ಕರಿಯಪ್ಪಗೌಡ, ಇಡೀ ಊರಿಗೂರೆ ಇವರ ಮನೆತನವನ್ನು ತಲತಲಾಂತರದಿಂದ ಗೌರವದಿಂದ ಕಾಣುತ್ತಿತ್ತು, ದಾನ ಧರ್ಮದಲ್ಲಿ ಎತ್ತಿದ ಕೈ ಅಲ್ಲವಾದರೂ ಕುಲಾ ಜಾತಿ ನೋಡಿ ಇಷ್ಟವಾದವರಿಗೆ ಕಷ್ಟ ಬಂದಾಗ ಮೂಟೆ ಗಟ್ಟಲೆ ಅಲ್ಲದಿದ್ದರು ಸೇರು ಪಾವುಗಟ್ಟಲೆ ಕೊಟ್ಟಿದ್ದುಂಟು. ಒಂದಾನೊಂದು ಕಾಲದಲ್ಲಿ ಒಂದೊತ್ತಿಗೆ ಮೂರು ಮುದ್ದೆ ಉಣ್ಣುತ್ತಿದ್ದ ಬಸವೆಗೌಡರು ದನ ಮೇಯಿಸಲು ಕಾಡಿಗೆ ಹೋಗಿದ್ದಾಗ ಹುಲಿಯೊಂದಿಗೆ ಕಾದಾಡಿ ಹೆಬ್ಬುಲಿಯೊಂದನ್ನ ಕೊಂದಿದ್ದರು ಎನ್ನುವಂತ ಕಥೆಗಳಿದ್ದವು, ಹಾಗಾಗಿ ಅವರ ಮನೆತನಕ್ಕೆ ಹುಲಿಬೇಟೆ ಬಸವೇಗೌಡರ ಮನೆತನ ಎನ್ನುವ ಹೆಸರಿತ್ತು, ಆ ಕಥೆಗಳ ಸತ್ಯ ಅಸತ್ಯತೆ ತಿಳಿಯಲೂ ಆಕಾಲದ ಯಾರೊಬ್ಬರು ಈಗಿರಲಿಲ್ಲ ಅದುಬೇರೆ ವಿಷಯ, ಒಟ್ಟಾರೆ ಆ ಊರಾದ ‘ದೊರೆ ದೊಡ್ಡಿ' ಗೆ ಒಂದುರೀತಿಯ ಟಿಪ್ಪು ಸುಲ್ತಾನನೆ ಆಗಿದ್ದಂತ ಬಸವೇಗೌಡರ ಮೊಮ್ಮಗನಾದ ಈ ಕರಿಯಪ್ಪ ಓದು ಬರಹ ತಲೆಗತ್ತಿಸಿ ಕೊಳ್ಳದೆ ಉಂಡು ತಿಂದು ಹೊಲಗದ್ದೆ ಅಂತ ಕಾಲ ಕಳೆಯುತ್ತಲೆ ಮದುವೆ ವಯಸ್ಸಿಗೆ ಬಂದಿದ್ದನು. ಬೆಟ್ಟೆಗೌಡರು ದೂರದ ಊರಾದ ‘ಸೂರಪುರ'ದ ಸೋಮೆಗೌಡನ ಮಗಳಾದ ಮಾದೇವಿ ಎನ್ನುವಂತ ಸುಂದರ ಹೆಣ್ಣೊಂದನ್ನ ನೋಡಿ ಮದುವೆಯ ಒಪ್ಪಂದ ಮಾಡಿಯಾಗಿತ್ತು. ಪರಿಸ್ಥಿತಿ ಇಂತಿಪ್ಪಿರುವಾಗ ಕರಿಯಪ್ಪ ಗೌಡನಿಗೆ ಆ ರಾತ್ರಿ ಅದೇನಾಯ್ತು ಎನ್ನುವ ವಿಚಾರ ಊರೂರಿಗೆ ಗುಸುಗುಸು ಎನ್ನುತ್ತಲೆ ಗುಲ್ಲೆಬ್ಬಿತು. ಅಧಿಕ ರಕ್ತಸ್ರಾವದಿಂದ ಸುಸ್ತಾಗಿ ಕರಿಯಪ್ಪ ಅತ್ತ ಎರಡು ದಿನಗಳ ಕಾಲ ಜ್ಞಾನವಿಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಮಲಗಿರುವಾಗ, ಇತ್ತ ಸುಮ್ಮನಾಗದ ಬೆಟ್ಟೆಗೌಡರು ಮತ್ತವರ ಹೆಂಡತಿ ಲಕ್ಷಮ್ಮನು ಗುರುಪಾದಪ್ಪನ ಬಳಿ ಶಾಸ್ತ್ರ ಕೇಳುವುದಾಗಿ ನಿರ್ಧರಿಸಿದರು.

ಆಡು ಕುರಿ ದನದರಾಸು ಕಾಡಿಂದ ಹಿಂದಿರುಗಿ ಊರಿಗೆ ಬಂದ ಹೊತ್ತಿನಿಂದಲೂ ಕೆಚ್ಚಲು ಖಾಲಿಯಾಗಿ ಮರಿ ಕರಗಳೊಂದಿಗೆ ಬೆಚ್ಚಗೆ ಗೊತ್ತುಸೇರಿ ಮಂದಿಯಲ್ಲ ಬಾಗಿಲು ಜಡಿದು ಚಿಲಕ ಹಾಕುವ ಸದ್ದು ಕೇಳುವಂತ ಹೊತ್ತಾದರೂ ಗುರುಪಾದಪ್ಪ ಪಡಸಾಲೆಯಲ್ಲಿ ಕಂಬ ಹೊರಗಿ ಕೂತಲ್ಲೆ ಕೂತು ಮಗ್ನನಾಗಿದ್ದ, ಹೆಂಡತಿ ಸರಸ್ವತಮ್ಮ ಬಂದು : ಏನಾಅಂದ್ರ.‌. ಬನ್ನಿ ಇಟ್ಟಾರಾಗೋಕು ಮುಂಚೆ ಉಣ್ಕಳಿ, ಎಂದು ಎಚ್ಚರಿಸಿ ಕರೆದಾಗ ನಿಟ್ಟುಸಿರು ಬಿಟ್ಟು ಎದ್ದು ಒಳಗೋಗುವಂತ ಹೊತ್ತಿಗೆ ಸರಿಯಾಗಿ ಬೆಟ್ಟೆಗೌಡರು ಲಕ್ಷ್ಮಮ್ಮನು ಕೈಯಲೆರಡು ವಿಳ್ಯಾದೆಲೆ ಒದು ಜೊತೆ ಬಾಳೆಹಣ್ಣು ಹನ್ನೊಂದು ರೂಪಾಯಿ ಕಾಣಿಕೆ ಹಿಡಿದು ಬಂದಿದ್ದರು. ಗುರುಪಾದಪ್ಪ : ಏನ್ ಗೌಡ್ರೇ ಈಟೊತ್ತಲ್ಲಿ ಎಂದಾಗ ಬೆಟ್ಟೆಗೌಡ : ನಾಳ್ಗ ಯಾರ ದಿನ ಸರಿಯಿಲ್ಲ ಅಂದ್ರು ಅದ್ಕೆ ಇವತ್ತೆ ಕೇಳ್ಬುಡೌ ಕತ್ತಲಾದರೇನಾ ಅಂತ ಬಂದ್ವಿಕಣ್ ಬನ್ನಿ ಎಂದು ಪಡಸಾಲೆಯಲ್ಲಿ ಕೂತರು ಗುರುಪಾದಪ್ಪ: ಒಂಚೂರುಬತ್ತಿನಿ ತಡಿರಿ ಅಂತ ಒಳಗೋಗಿ ಬಂದು ಕೂತಂತೆ. ಲಕ್ಷ್ಮಮ್ಮ: ಮದ್ವ ಗೊತ್ತಾಗಿರೊ ಈ ಹೊತ್ತಲ್ಲಿ ನಾವೆತ್ತ ಮಗ್ನಿಗೆ ಯಾಕಿಂಗಾಯ್ತು ನೋಡಿ ಬುದ್ದಿ ಎಂದು ಮೌನವಾಗಿ ಕೂತರು, ಗುರುಪಾದಪ್ಪ ಏನೇನೊ ಲೆಕ್ಕಚಾರ ಹಾಕಿ ಹಳೆ ಪುಸ್ತಕ ಪಠಣಗಳನ್ನ ನೋಡಿ : ನಿಮ್ಮ ಮಗ್ನಿಗೆ ವ್ಯಾಘ್ರ ಕಂಠಕ ಅದೇ ಗೌಡ, ನಿಮ್ಮ ಮನೆತನದ ಮ್ಯಾಲೆ ಹುಲಿರಾಯನ ಕೆಂಗಣ್ಣು ಬಿದ್ದದೆ., ನಿಮ್ಮ ಹಿರಿರು ಭೇಟೆಯಾಡಿದ್ದ ಹೆಬ್ಬುಲಿ ವಂಶುದ್ ಪಡ್ಡೆ ಹುಲಿ ಒಂದು ನಿಮ್ಮ ಮಗ್ನ ರಕ್ತ ಹೀರಿ ಸೇಡು ತೀರಿಸಿಕೊಳಕ್ಕೆ ಸಂಚಾಕಿ ತಿರ್ಗ್ತಾದೆ, ಒಂದು ವೋಮ ಮಾಡುಸ್ಬಿ ಒಂದು ಅನ್ನದಾನ ಮಾಡ್ಸುಬುಡಿ ಕಂಠಕ ಕಳ್ದು ಎಲ್ಲಾ ಸರಿಹೋಯ್ತದೆ' ಒಂದೊಳ್ಳೆ ದಿನ ನೋಡಿ ಹೇಳ್ತಿನಿ ಎಲ್ಲಾ ಸಿದ್ದಮಾಡ್ಕಳಿ ಕಷ್ಟಕಾಲ ಕಳೆದು ಒಳ್ಳೆದಾಯ್ತದೆ ಹೋಗಿ, ಅಂತ ಹೇಳಿದ.

ನಂತರದ ದಿನಗಳಲ್ಲಿ, ಹೋಮ ಹವನ ಎಲ್ಲವು ಮುಗಿಯಿತು ಕರಿಯಪ್ಪ ಗೌಡನು ಆಸ್ಪತ್ರೆಯಿಂದ ಡಿಸ್ಚಾರ್ಜಾಗಿ ಬಂದನು ಗಾಯವೆಲ್ಲ ಮಾಯಿತಾದರೂ ಮೊದಲಿನಷ್ಟು ಆರಾಮವಾಗಿ ನೆಡೆಯಲಾಗುತ್ತಿರಲಿಲ್ಲ. ಬೆಟ್ಟೆಗೌಡನಿಗೆ ಹುಲಿ ಏರಿ ಎದೆಮೇಲೆ ಕೂತಂತ ಕನಸೊಂದು ಬಿದ್ದಂತಾಯ್ತು, ಸುತ್ತೆರಡು ಊರ ಜನರನ್ನೆಲ್ಲ ಒಗ್ಗೂಡಿಸಿ, ತಮಟೆ ವಾಧ್ಯದೊಂದಿಗೆ ಹೊಲ ಗದ್ದೆ ತೋಟವನೆಲ್ಲ ಸೋದಿಸಿ ಯಾವುದಾದರು ಹುಲಿ ಅಪ್ಪಿ ತಪ್ಪಿ ನಾಡಿಗೆ ಬಂದಿದ್ದರೂ ಅದು ಕಾಡು ಸೇರುವಂತೆ ಮಾಡಲು ಜನರನ್ನ ಜೊತೆ ಗೂಡಿಸಿ ಕೇಕೆಯಾಕಿಸಿ ಸದ್ದು ಗದ್ದಲಗಳೊಂದಿಗೆ ನರಿ ಮೊಲ ಹಂದಿ ಮುಳ್ಳಂದಿ ಸಮೇತ ಹೊಲ ಗದ್ದೆ ಬಿಟ್ಟು ಕಾಡಿಗೆ ಓಡುವಂತೆ ಮಾಡಿಸಿದ್ದ.

ಆ ಘಟನೆ ಮಾಸಿದ ಕೆಲವು ದಿನಗಳ ನಂತರ ಕರಿಯಪ್ಪ ಗೌಡನ ಮದುವೆಯು ಆಯಿತು ಸೂರಪೂರದ ಮಾದೇವಿಯು ಹುಲಿ ಬೇಟೆ ಬಸವೇಗೌಡರ ಮನೆತನದ ಸೊಸೆಯಾದಳು, ಒಂದೊಳ್ಳೆ ದಿನ ನೋಡಿ ಸೂರಪುರದಲ್ಲೆ ಕರೀಗೌಡ ಮಾದೇವಿಯ ಪ್ರಸ್ತಕ್ಕೆ ಸಿದ್ದವಾಗಿತ್ತು, ಸೋಮೆಗೌಡರು ಮದುವೆಗೆ ಮಾಡಿಸಿದ್ದ ಮೈಸೂರು ಪಾಕ ಮುಗ್ಗಿದ್ದರು ಶಾಸ್ತ್ರಕ್ಕಾಗಿ ಎಂಬಂತೆ ಕೋಣೆಯಲ್ಲಿ ಒಂದು ಪ್ಲೆಟಿನಲ್ಲಿ ತುಂಬಿಟ್ಟಿದ್ದರು, ಕೋಣೆಯೆಲ್ಲ ಘಮ್ ಎಂದು ರಂಗೇರಿತ್ತು, ಮೊದಲ ರಾತ್ರಿಯಲ್ಲಿ ಕರಿಯಪ್ಪ ಗೌಡ ಎಲ್ಲರೊಳಗು ಇರುವಂತ ಆಸೆಗಳಂತೆ ಪುಳಕದಿಂದಲೇ ಕಾಯುತ್ತ ಕೂತಿದ್ದ, ಮಾದೇವಿಯು ಮಲ್ಲಿಗೆ ಮುಡಿದು ಚಂಬಿನ ತುಂಬ ತಂದ ಹಾಲನ್ನು ಕೈಯಲ್ಲಿಡಿದು, ಮುಂದೇನು ಮಾಡುವುದು ಎನ್ನುವಗಿಂದಲದಲ್ಲೆ, ಹಿರೀಕರು ಹೇಳಿದ್ದ ಮಾತು ಮತ್ಯಾವುದೊ ಸಿನಿಮಾ ದೃಶ್ಯದಲ್ಲಿ ಕಂಡಿದ್ದನ್ನೆಲ್ಲ ನೆನೆದು, ಧೀರ್ಘ ಉಸಿರೊಮ್ಮೆ ಎಳೆದು ಬಿಟ್ಟು, ಧ್ವನಿ ಸರಿಪರಿಸಿಕೊಂಡವನಂತೆ ಸದ್ದೊಂದನ್ನ ಮಾಡಿ, ಧೈರ್ಯದಿಂದ ಕೈಲಿದ್ದ ಹಾಲನ್ನ ತೆಗೆದುಕೊಂಡು ಅರ್ಧ ಹೀರಿ ಮಾದೇವಿಗೂ ತುಸು ಕೊಟ್ಟವನೆ ದುಂಬಿಯಂತೆ ಮಕರಂದ ಹೀರಲು ಅಣಿಯಾಗಿ ದೀಪ ಹಾರಿಸಿದಕೂಡಲೆ ಮಾದೇವಿಯು ಮಾತು ಶುರುಮಾಡಿದಳು.. : ರೀ ಏನಾ.. ನಾ ನಿಮ್ನೊಂದ್ ಕ್ಯೋಳ್ಲ್ಯಾ ರೀ, ನಾ ನಿಮ್ಮನೊಂದ್ ಕ್ಯೊಳ್ಯ.? ಎನ್ನುವಾಗ, ಆಗೀಗೊಮ್ಮೆ ಬಂದೋಗಿ ಮಾದೇವಿಯೊಂದಿಗೆ ಮಾತಿನ ಸಲಿಗೆ ಬೆಳಿಸಿದ್ದ ಕರಿಯಪ್ಪ : ಅದೇನ ಕೇಳ' ಅದ್ಕ್ಯಾನ, ಎನ್ನುತ್ತಿದ್ದಂತೆ ಕೆಲ ದಿನಗಳಿಂದ ಅವಳೊಳಗೆ ಕುತೂಹಲಕಾರಿಯಾಗಿ ಕಾಡುತ್ತಿದ್ದ, ಕರಿಯಪ್ಪನ ತೊಡೆ ಸೀಳಿದ ಹುಲಿ ಕಥೆ ಹೇಳುವಂತೆ ಕೇಳಿದಳು ‘ : ಆವತ್ತು ಅದೇನಾಯ್ತು ಅಂದ್ರೆ..? ಹುಲಿ ಯಂಗ್ ನಿಮ್ಮ ತವ ಕಾದಟ್ಟಕ್ಕಿಳಿತು, ನಿವ್ಯಾನ್ ಮಾಡುದ್ರಿ ಅದುಯಂಗ್ ನಿಮ್ನ ಬುಟ್ಟೊಯ್ತು ರಿ. ಎಂದು ಪ್ರಶ್ನೆ ಮೇಲೆ ಪ್ರಶ್ನೆಹಾಕಿ ಹುಲಿಕಥೆಯನ್ನ ಕೆದಕಿ ಕೇಳಲು ಶುರುವಿಟ್ಟಳು. ಕರಿಯಪ್ಪ : ಈಗ ಈಟೊತ್ತಲ್ಲಿ ಅದು ಮುಖ್ಯವ ಮುಂದೊದಿನ ಯೋಳ್ತಿನಿ ಮನಿಕ, ಎಂದು ಮಾತು ಮರೆಯುವಂತೆ ಮಾಡಿದ, ಕರಿಯಪ್ಪನ ಮೊದಲ ರಾತ್ರಿ ಒಂದುರೀತಿಯ ಹುಲಿ ಸ್ವಪ್ನದಲ್ಲೆ ಕಳೆಯುವಂತಾಯ್ತಾದರು ಕಥೆ ಹೇಳುವುದಾಗಲಿ ಕೇಳುವುದಾಗಲಿ ಯಾವುದೇ ಪ್ರಸಂಗ ನೆಡೆಯಲಿಲ್ಲ, ಅರ್ಧ ರಾತ್ರಿಯಾದರೂ ಮಾದೇವಿಗೆ ಆ ಕಥೆ ಮೇಲಿದ್ದ ಕುತೂಹಲದಿಂದ ಮತ್ತೆ ಮತ್ತೆ ಕೆದಕುತ್ತಲಿದ್ದಳು, ಕರಿಯಪ್ಪ :ಅದೂ..ಇದೂ.. ಅದೇನಾಯ್ತು ಅಂತಂದ್ರೆ ಅಂತ ಬೆಬಗುಡುತ್ತಲೆ ‘ನಾಳೆಯೋಳ್ತಿನಿ ಮನಿಕ' ಎಂದಿದ್ದ.

ದೊರೆ ದೊಡ್ಡಿಯಲ್ಲಿ ಕರಿಯಪ್ಪ ಗೌಡನ ಸಂಭ್ರಮಗಳೆಲ್ಲ ಕಳೆದು ವಾರವಾಗುತ್ತ ಬಂತು, ಪ್ರತಿ ದಿನ ರಾತ್ರಿ ಕರಿಯಪ್ಪನ ಹೆಂಡತಿಯು ಕಥೆ ಹೇಳಿ ಅಂದ್ರೆ.. ಆ ಕಥೆ ಹೇಳಿ ಅಂದ್ರೆ.. ಎನ್ನುತ ಕುತುಹೂಲದಿಂದ ಕೇಳುವುದರಲ್ಲೆ ಕರಿಯಪ್ಪನ ಕುತೂಹಲದ ರಸಿಕತೆಯು ಬಾಡಿದ ಹೂವಂತಾಗಿ ಬೆಳಗಾಗುತಿತ್ತು. ಇತ್ತ ಹೊರಗಡೆಯ ಊರ ಜನರೆಲ್ಲಾ ಕೂತಲ್ಲಿ ನಿಂತಲ್ಲಿ ಟೀ ಅಂಗಡಿಯಿಂದ ಹಿಡಿದು ಬೋರನ ಸಾರಾಯಿ ಗಡಾಂಗಿನ ವರೆಗು ಎಲ್ಲಾ ಕಡೆಯು ಹುಲಿ ಕಥೆಹೇಳು ಕರಿಯಪ್ಪ ಆ ಹುಲಿ ಕಥೆಹೇಳು ಎನ್ನುತ್ತಲಿ ಪೀಡಿಸುತ್ತಿದ್ದನ್ನ ಕೇಳಿ ಕೇಳಿ ಕರಿಯಪ್ಪನು ರೋಸಿ ಹೋಗಿದ್ದ. 'ನಂಗೊಂಚುರ್ ಕೆಲ್ಸದ ಹೊಲ್ಕೋಗಿದ್ ಬತ್ತಿನ್ ತಡಿರಿ, ದನಕ್ಕ ಮೇವ್ ತರ್ಬೇಕು ಬತ್ತಿನ್ ತಡಿರಿ ಎಂದು ಪ್ರತಿ ಬಾರಿಯು ತಲೆ ತಪ್ಪಿಸಿ ಕೊಳ್ಳುತ್ತಿದ್ದನಾದರು ರಾತ್ರಿ ಹೆಂಡತಿಯ ಬಳಿ ಬಂದಾಗ ಒಂದು ರೀತಿಯ ಪೀಕಲಾಟಕ್ಕೆ ಸಿಲುಕಿ ಕೊಳ್ಳುತ್ತಿದ್ದ. ಹೀಗೆ ಕರಿಯಪ್ಪನು ತಿಂಗಳು ಕಳೆದು ಬೇಸತ್ತಿರುವಾಗ ಒಂದು ರಾತ್ರಿ ಮಡದಿ ಮಾದೇವಿಯು : ರೀ..ರೀ, ಏನಾ,. ಅದೇನಾಯ್ತು ಅಂತ ಹುಲಿ ಕಥೆ ಯೋಳ್ಬಾರ್ಧ' ಎಂದಾಗ ಕರಿಯಪ್ಪ : ಹುಲಿ ಕಥೆನು ಇಲ್ಲಾ ಇಲಿ ಕಥೆನು ಇಲ್ಲ ಬಿತ್ಕಳಮಿ ಎಂದು ರೇಗಿಬಿಟ್ಟ. ಮಾದೇವಿಗೂ ರೋಸ ಬಂದು ರೀ ನಿವು ಹುಲಿ ಕಥೆ ಯೋಳಿದ್ ಮ್ಯಾಲೆ ಬಂದು ನನ್ನ ಮಗ್ಗಲಲ್ಲಿ ಮನಿಕಳಿ ಅಲ್ಲಿ ಗಂಟಾ ನನ್ನ ಮೈ ಏನಾರ ಮುಟ್ಟಕ್ ಬಂದ್ರೆ ನಾ ನಮ್ಮಪ್ಪನ್ ಮನಗೊಯ್ತಿನಿ ಎಂದು ಮುನಿಸಿಕೊಂಡಳು. ಹೀಗೆ ಮೂರ್ನಾಲ್ಕು ದಿನ ಕಳೆದರು ಮಾದೇವಿ ಕರಿಯಪ್ಪನನ್ನ ಗಮನಿಸಲೇ ಇಲ್ಲ. ದಿನೆ ದಿನೇ ಕರಿಯಪ್ಪನಿಗೆ ಹುಲಿ ಕಥೆಯ ಕಾಟ ಹೆಚ್ಚಾಯ್ತು.

ಕರಿಯಪ್ಪ ಇಲ್ಲ ಇದಕ್ಕೊಂದು ಗತಿ ಕಾಣಿಸಲೇ ಬೇಕು ಎಂದು ನಿರ್ಧರಿಸಿ ಹಿರಿಯನು ಬುದ್ದಿವಂತನೂ ಊರಿಗೆ ಹಿರಿಕನೂ ಆಗಿದ್ದ ಗುರುಪಾದಪ್ಪನ ಬಳಿ ಹೋದವನೆ : ಬುದ್ದಿಯ್ಯೊ ಏನ ಸ್ವಾಮಿ ಇದು ನನ್ನ ಕಥಾ.. ಜನಾ ಎಲ್ಲೊದ್ರು ಅವತ್ತು ಅದೇನಾಯ್ತು ಆ ಹುಲಿ ಯಂಗಿತ್ತು ಏನ್ಮಾಡ್ತು ಅಂತ ತಲತಿಂತರಲ್ಲ ನಾ ಯಾನ್ ಯೋಳ್ನಿ..? ಅವತ್ತು ಹುಲಿ ಬದಿತ್ತು ಅಂತ ಯಾವ್ ಬೋಳಿ ಮಗ ಯೋಳ್ದ ಯೋಳಿ ಇವ್ರೆಗೆಲ್ಲ, ಅವನೇನಾದ್ರು ನನ್ನ ಕೈಲಿ ಸಿಕ್ಕುದ್ರ ಒಂದ್ ಗತಿ ಕಾಣುಸ್ತಿನಿ ಅಂದ. ಗುರುಪಾದಪ್ಪ ತಲೆಕೆರೆದು ಕೊಂಡವನೇ : ಅಯ್ಯೊ ಅದ್ಕ್ಯಾಕ ಗೌಡ ಅಷ್ಟು ತಲೆ ಕೆಡ್ಸ್ಕಂದಿದಯ್ ಬುಟ್ಟಾಕು.. ಜನಾ ಇವತ್ ಕ್ಯೋಳ್ತರ ನಾಳುಗ್ ಸುಮ್ನಾಯ್ತಾರ. ಅಷ್ಟು ಕಷ್ಟವಾದ್ರ ನಿನ್ನ ಬಾಯಿಗ್ ಬಂದದ್ ಏನೊ ಒಂದ್ ಯೋಳಿ ಸುಮ್ನಾಗದಪ.. ನಿನ್ನ ಬುದ್ದಿಗಿಷ್ಟು' ಎಂದ. ಕರಿಯಪ್ಪ : ಅಲ್ಲಾ ಬುದ್ದಿ ಬೇರೆಯವ್ರ ಕಥಾ ಬುಡಿ ನನ್ನೆಡ್ತಿಯು ಜಿನಾ ಅದ್ನೆ ಕ್ಯೋಳ್ತಳಲ್ಲ ನಾ ಯಾನ್ ಯೋಳ್ನಿ ಎಂದ. ಗುರುಪಾದಪ್ಪನಿಗು ನಿಜಕ್ಕೂ ಆದಿನ ಏನಾಗಿತ್ತು ಎಂಬುದರ ಕುತೂಹಲ ವಿದ್ದುದರಿಂದ : ಅದ್ಸಾರಿ ಅವತ್ತು ಕವಳ್ದಲಿ ಅದೇನಾಯ್ತು ಗೌಡ..? ಎಂದು ಕೇಳಿದ. ಕರಿಯಪ್ಪನು : ಬುದ್ದಿ ಏನೊ ಆಯ್ತು ಹೋಯ್ತು ಬುಡಿ ಬುದ್ದಿ, ಎಂದ. ಗುರುಪಾದಪ್ಪನ ಕುತೂಹಲ ಯಾಕೊ ಮತ್ತಷ್ಟು ಹೆಚ್ಚಾಗಿ : ಅದೇನಾಯ್ತು ಯೋಳಯ್ಯ ಅಂತದೇನಾದ್ರೂ ಇದ್ರ..ನಾ ಯಾರ್ತವು ಯೋಳಲ್ಲ, ಅಲ್ಲದ್ಯೆ ಅವತ್ತೇನಾಯ್ತು ಅಂತ ನೀ ಯೋಳುದ್ರ ಈ ಇಚಾರಕ್ಕೇನಾದ್ರೂ ಒಂದು ಉಪಾಯ ಯೋಳ್ಬೋದು ನೋಡಪ, ಎಂದಾಗ ಕರಿಯಪ್ಪಾ : ಬುದ್ದಿ ನೀವು ದೊಡ್ಡೋರು ಅಂತ ನಿಮ್ಮ ತವ ಹೇಳ್ತಿನಿ ನೀವೆಯ ಏನಾರು ಒಂದ್ ದಾರಿ ತೋರ್ಸಿ ಪುಣ್ಯಕಟ್ಕಳಿ ಬುದ್ದಿ, ಅಂತ ಕಥೆ ಹೇಳಿಕೊಳ್ಳಲು ಶುರುಮಾಡಿದ.. ಬುದ್ದೆ ಅವತ್ತು ಅಟ್ಟಿಲಿ ಬಾಡ್ನೆಸ್ರು ಮಾಡಿದ್ರು ಜೆನೆಲ್ಲಾ ಕಮ್ಮಿ ಆದ್ಮೇಲ ಬೋರನ ಅಂಗಡಿ ಗೋಗಿ ನಾನು ಒಂಚೂರ್ ಬುಟ್ಕಂಡು ಉಣ್ಕಂದು ಹೊಲ್ಕ ಮನಿಕಳಕ ಅಂತ ಒಯ್ತಿದ್ದಿ, ಮಾರುನ್ ಕಬ್ಬುನ್ ಗದ್ದ ದಾಟ್ತ ಹೋಗಾಗ ಬಲ್ಚೊರಿ ಏನೋ ಸದ್ದಾದಂಗಾಯ್ತು, ನಾನು ಏನಪ ಅಂತ ತಿರುಗ್ ನೋಡುದ್ರ ಒಂದು ಹಂದಿ ಯೋಳ್ ಮರಿ ಹಂದ್ಗೊಳೊಂದ್ಗ ಬಕ್ಕಂದ್ ಹೋಯ್ತಾ ಇತ್ತು, ನಾ ಸುಮ್ನಿದ್ರ ಅದೂ ಅದ್ರು ಪಾಡ್ಗ ಅದೋಗದೇನೊ.. ನಾನು ಅದು ಹೆದ್ರುಕಂದ್ ಹೋಡೊಯ್ತದೆ ಅನ್ಕಂದು ‘ಅಕ್ಯಾಕ್ ಉದೂಯ್ ಅಂತ ಕೇಕೆ ಆಕ್ಬುಟ್ಟಿ, ಆ ಹಂದಿ ಸರಿಯಾಗಿತ್ತು, ಬುದ್ದೆ ನಾನು ಅದುರ್ ಕಣ್ಗಾ ಅದೆಂಗ್ ಕಂಡ್ನೊ ಏನೊ ತಿರಿಕಂದು ಒಂದ್ಸತಿ ದುರ್ಗುಟ್ಕಂದ್ ನೋಡುದ್ದೆ ಒದಿಕ ಬಂತು.. ನಾನು ಎದ್ನೊ ಬಿದ್ನೊ ಅಂತ ಜ್ವಾಳುದ್ ಗದ್ದವಳಕ ಓಡೋದಿ ಅಲ್ಲಿಗೂ ಅಟ್ಡುಸ್ಕಂದ್ ಬಂದು ಗುದ್ದಿದ್ದೆ ಕೆಳಕ್ ಬಿದ್ದೋದಿ ಬುದ್ದಿ, ಎಷ್ಟ್ ಅರ್ಚಕಂಡ್ರು ಬುಡ್ದೆ ಎರಿಕಂದು ಕ್ವಾರಲಿ ತೊಡನೆ ಸಿಗ್ದಾಕಿ ತಿರ್ಗ್ ನೋಡ್ದಂಗ್ ಒಂಟೋಯ್ತು. ನಂಗ ಮ್ಯಾಕು ಎದ್ರಕಾಗ್ದಂದಾಗಿ ಬಿದ್ದಲ್ಲೆ ಬಿದ್ದು ಅರ್ಚಿ ಅರ್ಚೀ ಸಾಕಾಗೊಗಿದ್ದಿ. ಒತ್ನಂತೆ ಮಾರ ಬಂದು ನೋಡ್ನಿಲ್ಲ ಅಂದಿದ್ರ ಅದೇನ್ ಕಥ ಆಗೋನೊ ನಾನು, ಏಡ್ ಜಿನ ಗ್ಯಾನಿಲ್ದೆ ಶಿವನೆ ಬದಿಕಂದನಲಪ್ಪ ಅಂತ ಆಸ್ಪತ್ರಯಿಂದ ಸುದ್ರಾಯ್ಸ್ಕ ಬರಗಂಟಾ, ಊರ್ಲೆಲ್ಲಾ ಜನಾ ಹುಲಿ ವಂದ್ಗ ಜಗಳ ಆಡುದ್ನಂತ ಕರಿಯಪ್ಪ, ಹುಲಿ ವಂದ್ಗ ಜಗಳ ಆಡುದ್ನಂತ ಕರಿಯಪ್ಪ ಅಂತ ಮಾತಾಡ್ಕಳಕ್ ಸುರುಮಾಡ್ಕಂದಿದ್ರು, ಇನ್ನ್ಯಾನ್ ಮಾಡದು ಬುದ್ದಿ ನಾನು ಮಾತ್ ಮಾತ್ಗು ಯಾರೊಂದಾಗಾದ್ರೂ ಜಗಳ ಕಲಾ ಆದಾಗೆಲ್ಲ ಹುಲಿ ಬೇಟೆ ಬಸವೇಗೌಡನ ವಂಶ ನಮ್ದು, ಹುಲಿಬೇಟೆ ಬಸವೇಗೌಡ್ರ ವಂಶ ನಮ್ದು ಅಂತ ತೊಡ ತಟ್ಟಿ ಜಂಬಕೊಚ್ಕದಿದ್ದವ ಹಂದಿ ಬಂದು ಗುದ್ದಿಂಗ್ ಮಾಡ್ಬುಡ್ತು ಅಂತ ಯೋಳುದ್ರ ಮಾನ ಓಯ್ತದಲಾ ಅಂತ ಯಾರೊಂದ್ಗು ಯಾನು ಯೊಳ್ಕನಿಲ್ಲಾ, ಎನ್ನುತ್ತ ತನ್ನ ಟವಲ್ನಿಂಡ ಮೂಗಿನ ನೀರೊರೆಸಿಕೊಳ್ಳುತ್ತ, ಇಂಗಿರಾಗ ಜನಾ ಸಿಕ್ಕ್ ಸಿಕ್ಕುತವೆಲ್ಲ ಕೇಳುದ್ರ ನಾ ಏನ್ ಮಾಡ್ಲಿ ನಾ ಯಾನ್ ಯೋಳಿ, ನಂಗೂ ಸಬೂಬ್ಯೋಳಿ ಸಾಕಾಗೊಗದ ಬುದ್ದಿಯೊ ಇಂಗೆ ಆದ್ರ ನಾಕ್ ಜನದೊಂದ್ಗ ಅವತ್ತು ನೆಡದ್ದೇನಾ ಅಂತ ಯೋಳ್ಕ ಬುಡವ್ ಅಂತಾವ್ನಿ. ಅಂತ ಬೇಸರದಿಂದ ಕರಿಯಪ್ಪ ಗೌಡ ಗುರಪಾದಪ್ಪನ ಬಳಿ ತನ್ನ ಪರಿಸ್ಥಿತಿಯನ್ನ ಬಿಡಿಸಿ ಹೇಳಿದ. ಗುರುಪಾದಪ್ಪ ಅವನ ಕತೆಕೇಳಿ ಗಹಗಹಿಸಿ ನಕ್ಕಿಬಿಟ್ಟನಾದರೂ ಮುಂದಾಗುವ ಪರಿಣಾಮದ ಬಗ್ಗೆ ಯೋಚಿಸಿದ..

ಬೆಟ್ಟೆಗೌಡನಿಗೆ ತಾನೇಳಿದ ವ್ಯಾಘ್ರ ಕಂಠಕ ಮಾಡಿಸಿದ ಹೋಮ ಎಲ್ಲಾ ನೆನಪಿಗೆ ಬಂದು ಈ ವಿಚಾರ ಊರಿನ ಜನಕ್ಕೆಲ್ಲ ಗೊತ್ತಾದ್ರೆ ತನ್ನ ಶಾಸ್ತ್ರ ಹೇಳುವ ಭವಿಷ್ಯಕ್ಕೆ ಬೆಂಕಿ ಬಿಳಿವುದಲ್ಲದೆ ಈ ಊರಿನಲ್ಲಿ ಬೆಟ್ಟೆಗೌಡ ನನ್ನ ನೆಟ್ಟಗೆ ಬದಕಲು ಬಿಡಲಾರ ಎಂದು ಯೋಚಿಸಿದವನೆ ಉಪಾಯಮಾಡಿ ಕರಿಯಪ್ಪ ಗೌಡನಿಗೆ ಕಿವಿ ಮಾತೊಂದನ್ನ ಹೆಳಿದ : ನೋಡು ಕರಿಗೌಡ ನೀ ಹೇಳ್ದಂಗೆ' ಆದದ್ದಾಯ್ತು ಓದುದ್ದೊಯ್ತು ಕಣಯ್ಯ, ನೀ ಏನು ಚಿಂತ ಮಾಡ್ಬ್ಯಾಡ ಎಲ್ಲ ಸರಿ ಹೋಯ್ತಾ ನೋಡು ನೀ ಅಪ್ಪಿ ತಪ್ಪಿ ಈ ಹಂದಿ ವಿಚಾರನ ನಾಕ್ ಜನದೊಂದ್ ಹೇಳ್ದ ಅಂತ ಇಟ್ಕಾ.., ಇಷ್ಟದಿನ ಹುಲಿ ಬೇಟೆ ಬಸವೇಗೌಡರ ವಂಶ ಅಂತ ಕರ್ಸಕತಿದ್ದ ನಿಮ್ ಮನ್ತನ ಮಾನ ಮರ್ವಾದೇ ಏನಾಗ್ಬ್ಯಾಡ ಆಮೇಲ್ ಇನ್ಮುಂದ ನಿನ್ನ ಪೀಳಿಗೆಯಿಂದ ನಿಮ್ಮಟ್ಟಿ ಪೈಕಿನ ಹಂದಿ ಕರಿಯಪ್ಪನ ಮನ್ತನ ಹಂದಿ ಕರಿಯಪ್ಪನ್ ಮನ್ತನ ಅಂತ ಕರಿಯಕ್ ಶುರುಮಾಡ್ಕತರ ಕಣಯ್ಯ, ನೋಡು ಜನದೊಂದ್ಗ ನೀನೆ ಇಂಗಾ ಒಂದ್ ಸಣ್ಣ ಕತ ಕಟ್ಟಿ ಯೋಳ್ಕಾ, ಹುಲಿ ಬಂದು ಕಣ್ಣೆದ್ರು ನಿಂತು ಗುಟ್ರಾಕ್ತಿತ್ತು, ನಾನು ಕಾದಟಕ್ಕ ಇಳ್ದೆಬುಟ್ಟಿ, ಅದರ ಬಾಯಿಗೆ ಕೈ ಹಾಕಿ ನಾಲ್ಗಾ ಇರಿಯವ್ ಅಂತಿದ್ದಿ ಅಷ್ಟ್ರುಲಿ ಅದೇ ನನ್ನ ಮ್ಯಾಲ ಎಗರಿ ತೊಡೆ ಬಗ್ದು ಇಂಗಾಗೋಯ್ತು. ಹಿಂಗ್ ನೀ ಯೋಳ್ಕಂದ್ರ ನಿನ್ನ ಘನತನು ಹೆಚ್ಚುತ್ತ ಮನೆತನದ ಹೆಸ್ರು ಮರ್ಯಾದಿ ಎಲ್ಲ ಉಳ್ಕತ್ತ, ಎಂದು ಗುರುಪಾದಪ್ಪನೆ ಇನ್ನೊಂದು ಹೊಸ ಕಥೆ ಕಟ್ಟಿ ಕರಿಯಪ್ಪನಿಗೆ ಹೇಳಿ ಕಳಿಸಿದ. ಕರಿಯಪ್ಪ ಗೌಡನಿಗೆ ತಲೆ ಬಾರವೆಲ್ಲಇಳಿದು, ಒಂದು ರೀತಿಯ ಸಮಾಧಾನ ವಾದಂತಾಯ್ತು, ನಿರಳಾನಾಗಿದ್ದ ಕರಿಯಪ್ಪ ಹೋಟಲಿನ ಕಡೆ ಹೋಗಿ ಒಂದು ಚಾ ಕುಡಿದು ಹೋಗುವ ಅಂತ ನೆಡೆದ, ಹೊಟೆಲಿನಲ್ಲಿ ನಾಲ್ಕು ಮಂದಿಯೊಂದಿಗೆ ಮಾರನು ಕುಳಿದ್ದವನೆ : ಯಂಗಿದರಿ ಕರಿಯಪ್ಪನೋರೆ ಆರಾಮ ಅಂತ ಕೇಳಿದ, ಕರಿಯಪ್ಪ : ಹು ಆರಾಮು ಅಂದದ್ದೆ,. ಅವತ್ತು ಅದೇನಾಯ್ತು ಗೌಡ ನೀನು ಅಪಾಟಿ ರತ್ತ ಸುರಿಸ್ಕ ಬಿದ್ದಿದ್ ನೋಡಿ ನೀ ಉಳ್ದಯೊ ಇಲ್ವೊ ಅನ್ಕಂದಿದ್ನಿ, ರಾಸು ಯಂಗಿತ್ತು ಮಾರಯ ಅಂತ ಮಾರನು ಹೇಳಿದ್ದೆ.. ಗುರುಪಾದಪ್ಪ ಹೇಳಿದಂತೆ ಆ ಹುಲಿಯ ಕಟ್ಟು ಕಥೆನ್ನ ಹೇಳಿ ಟವಲ್ಲು ಒದರಿಕೊಂಡು ಮನೆಕಡೆ ನೆಡೆದ. ಒಂದೇ ದಿನದಲ್ಲಿ ಅವನೇಳಿದ ಕಥೆಗೆ ಮತ್ತಷ್ಟು ಮಸಾಲೆ ಸೇರಿಸಿ ಕರಿಯಪ್ಪನನ್ನ ಯಾವೋದೊ ಸಿನಿಮಾದ ನಾಯಕನ ಹಂತಕ್ಕೆ ಏರಿಸಿ ದೊರೆದೊಡ್ಡಿ ಊರಾದ ಊರಿಗೆ ವಿಚಾರ ಹಬ್ಬಿ ಗಬ್ಬೆದ್ದು ಹೋಯ್ತು. ರಾತ್ರಿ ಎಂದಿನಂತೆ ಊಟ ಬಡಿಸುವಾಗಲೇ ಯೋಚಿಸಿದ ಮಾದೇವಿ ಕರಿಯಪ್ಪ ಗೌಡ ಇವತ್ತಾದರೂ ಹುಲಿ ಕಥೆ ಹೇಳಬಹುದೇನೊ ಎನ್ನುವಂತ ನಿರಿಕ್ಷೆಯಲಿದ್ದು ಕರಿಯಪ್ಪ ಮಂಚಕ್ಕೆ ಬಂದೊಡನೆ ಎದೆ ಮೇಲೆ ಮಗುವಿನ ಹಾಗೆ ಹೊರಗಿ : ರೀ ರೀ.. ಅದೇನಾಯ್ತು ಅಂತ ಹೇಳ್ಬಾರ್ದ ಅಂದ್ರೆ' ನಾನು ಏಟ್ ದಿನದಿಂದ ಕೇಳ್ತಿವ್ನಿ ನೀವ್ ಯಾಕ್ ಯಾನು ಯೋಳ್ತಿಲ್ಲ' ಎನ್ನುತ್ತ ಪ್ರೀತಿಯಿಂದ ಕೇಳಿದಳು, ಕರಿಯಪ್ಪ ಗುರುಪಾದಪ್ಪ ಹೇಳಿದ್ದ ಕಟ್ಟು ಕತೆಯನ್ನ ಅವಳಿಗೂ ಹೇಳಿದನಾದರೂ ಯಾಕೊ ಮನಸೊಪ್ಪದೆ ಕೊನೆಯಲ್ಲಿ ಸತ್ಯವನ್ನ ಯಾರಿಗೂ ಹೇಳಬೇಡ ಎಂದು ನೆಡೆದ ಘಟನೆಯನ್ನು ವಿವರವಾಗಿ ಹೇಳಿಬಿಟ್ಟ.

ಮಾದೇವಿಯ ಕುತೂಹಲಕ್ಕೆ ಭ್ರಮಿಸಿಕೊಂಡಿದ್ದ ಕಥೆಗೆ ಬಹುದೊಡ್ಡ ಆಶಾಭಂಗ ವಾದಂತಾಯ್ತು, ಇಷ್ಟಕ್ಕೆ ಇಷ್ಟುದಿನ ಸತಾಯಿಸ ಬೇಕಿತ್ತೆ ಇವರು, ಎನ್ನುತ್ತ ಗೊಣಗುತ್ತಲೆ ಮುಗ್ದೆ ಮಾದೇವಿ ಮಂಕಾಗಿ ಏನೋ ಯೋಚಿಸುತ್ತ ಮಲಗಿದಳು. ಬೆಳಿಗ್ಗೆ ಎದ್ದವಳೆ ತನ್ನೆಲ್ಲ ಕೆಲಸ ಮುಗಿಸಿ ಅದೇ ತಾನೆ ಎದ್ದ ಕರಿಯಪ್ಪನ ಕೈಗೆ ಕಾಪಿ ಲೋಟವಳೆ : ರೀ ಯಾಕೋ ಅಪ್ಪ ಅವ್ವನ ಗ್ಯಾನ ಆಯ್ತದೆ ನೋಡ್ಬೆಕು ಅನುತ್ತೆ ಬನ್ರಿ ಊರಿಗೋಗಿದ್ ಬರವ್ ಅಂತ ಕರಿಯಪ್ಪನ ವಿನಯದಿಂದ ಕೇಳಿದಳು, ಇನ್ನು ಮದುವೆಯಾಗಿದ್ದ ಹೊಸತಾಗಿದ್ದರಿಂದ ಕರಿಯಪ್ಪನು ಸರಿ ಆಯ್ತು ಅಂತ ಸೈಕಲಿನಲ್ಲಿ ಕೂರಿಸಿಕೊಂಡು ಸೂರಪೂರದತ್ತ ಪಯಣ ಬೆಳೆಸಿ ತಾಲೋಕಿನ ಟೆಂಟಿನಲ್ಲಿ ಹಾಕಿದ್ದ ಡಾಕ್ಟರ್ ರಾಜ್ಕೂಮಾರ್ ರವರ ಗುರಿ ಸಿನಿಮಾ ತೋರಿಸಿಕೊಂಡು ಜಾಲಿಯಾಗಿ ಮಾತನಾಡುತ್ತ ಸೈಕಲ್ ತುಳಿಯುತ್ತ ಹೊರಟ. ದಾರಿಯಲ್ಲಿ ಹೋಗುತ್ತ ಆ ದಿನ ರಾತ್ರಿ ನಿಜವಾಗಿ ನಡೆದ ಘಟನೆಯನ್ನ ನಿನ್ನೊಬ್ಬಳೊರತಾಗಿ ನಾನು ಯಾರಿಗೂ ಹೇಳಿಲ್ಲ ನೀನು ಯಾರಿಗೂ ಹೇಳಬೇಡ ಎಂದು ಕೇಳಿಕೊಂಡನು ಮಾದೇವಿಯು ಹು ಅಂದಳು' ಆದರೆ ಮಾದೇವಿ ಯಾಕೊ ಮಂಕಾಗಿದ್ದಳು ಎರಡು ಗಂಟೆಯೊತ್ತಿಗೆ ಸೂರಪುರ ತಲುಪಿದರು, ಮಗಳು ಅಳಿಯ ಬಂದರು ಎಂದು ಸೋಮೆಗೌಡನು ಆಳಿಗೆ ಹೇಳಿಕಳಿಸಿ ತಾಲೋಕಿನಿಂದ ಬಾಡು ತರಿಸಿ ಅಚ್ಚು ಕಟ್ಟಾಗಿ ಸತ್ಕರಿಸಿದನು, ಕರಿಯಪ್ಪ ಸರಿ ಹೊರಡೋಣ ಎಂದಾಗ ಮಾದೇವಿಯು : ಏ ಇದೆ ತಾನೆ ಹೊಸ್ದಾಗಿ ಇಬ್ರು ಊರಗ ಮೊದ್ಲುಸತಿ ಬಂದಿವಿ ಇಂಗ್ಬಂದು ಅಂಗೋದ್ರೆ ಅಪ್ಪ ಅವ್ವ ಊರ್ ಜನಾ ಎಲ್ಲಾ ಏನ್ ಅನ್ಕಳಲ್ಲ ಯೋಳಿ ಹೋಗಗಂಟ ಯಂಗೂ ಕವಳ ಆಯ್ತದ ಒಂದ್ ದಿನ ಇಲ್ಲೆ ಇದ್ದು ಹೋಗವ್ ಎಂದು ಕೇಳಿದಳು. ಊರಲ್ಲಿ ದನ ಕರ ನೊಡಿಕೊಳ್ಳಲು ತಮ್ಮನಾದ ಲೋಕೇಶನು ಇದಾನೆ ಅವ್ವ ಅಪ್ಪನಿಗೂ ಹೇಳಿ ಬಂದಿರುವುದರಿಂದ ತೊಂದರೆ ಏನಿಲ್ಲ ಎಂದು ಯೋಚಿಸಿದ ಕರಿಯಪ್ಪ ಗೌಡನು ಸರಿ ಎಂದು ಒಪ್ಪಿಕೊಂಡನು.

ಆ ರಾತ್ರಿ ಅದೇನೊ ಯೋಚಿಸಿದ ಮಾದೇವಿ : ರೀ ರೀ ನಂಗ ಯಾಕೊ ನಿಮ್ಮ ಹುಲಿ ಕತಕ್ಯೋಳಿ ಸಮಾಧಾನ ಆಯ್ತಿಲ್ಲ ಕಣಾ, ಏನಾ ಒಂದ್ ರೀತಿ ಸಂಕ್ಟ ಅಂದಳು, ಕರಿಯಪ್ಪನು : ಹುಲಿ ಕತ ಕ್ಯೋಳಿದ್ದಕ್ಕೊ ಹಂದಿ ಕಥೆಕ್ಯೋಳಿದ್ದುಕ್ಕೊ ಎಂದು ನಗುತ್ತಲೆ ಕೇಳಿದ, ಮಾದೇವಿಯು ಕೊಪದಲ್ಲಿ ಹ್ಮ್ ಎರಡಕ್ಕೂ ಎಂದಳು. ಕರಿಯಪ್ಪ ಸರಿ ಅದ್ಕ ಈಗ್ ನನ್ನ ಏನ್ ಮಾಡು ಅಂದೈ ಎಂದ, ಮಾದೇವಿ : ಅದೇನ್ ಮಾಡ್ಡರ್ಯೊ ನಂಗೊತ್ತಿಲ್ಲಾ ನೀವ್ ನಿಮ್ಮ ತೊಡ ಸೀಳಿದ್ ಹಂದಿಯ ಎದೆ ಸೀಳ ಗಂಟ ನನ್ನ ಈ ಸಂಕ್ಟ ಕಡ್ಮಿ ಆಗಲ್ಲ ಅನ್ಸುತ್ತ, ಆ ಹಂದಿ ಸಾವುನ್ ಸುದ್ದಿ ಕ್ಯೋಳತನ್ಕ ನಾನು ಇಲ್ಲೆ ಇರ್ತೀನಿ ನೀವು ಬೇಕಾರ ನಾಳ ಊರ್ಗೋಗಿ ಎಂದಳು. ಕರಿಯಪ್ಪನಿಗೆ ಕೋಪ ಬಂದರೂ ಏನು ಮಾತ ನಾಡುವಂತಿಲ್ಲ ಮಾವನ ಮನೆ, ಕರಿಯಪ್ಪ : ಮಾದೇವಿ ನಿನ್ನ ದಮ್ಮಯ್ಯ, ನಿನ್ನ ಕಾಲು ಬೇಕಾದ್ರೂ ಕಟ್ನಿನಿ ಅಂಗನ್ಬೆಡ, ನಮ್ಮ ಮನೆತನದ ಮಾನ ಮರ್ವಾದೆ ಎಲ್ಲ ನಿನ್ನ ಕೈಲದಾ ನಾ ನಿನ್ನತವ ಸುಳ್ಳ್ಯೋಬಾರ್ದು ಅಂತ ಇರ ನಿಜ ಯೋಳ್ಕಂದಿ, ನೀ ನನ್ನ ಮರ್ವಾದಿನೆಲ್ಲ ಮೂರ್ಕಾಸ್ಗಾ ಅರಜಾಕ್ಬೇಡ ಕಮ್ಮಿ ದಮ್ಮಯ್ಯ, ಎನ್ನುತ್ತ ಮಾದೆವಿಯನ್ನ ಅಂಗಲಾಚಿ ಬೇಡಿಕೊಳ್ಳುವಾಗ. ರೀ ಚೇ' ಏನ ಇದು ಯಾಕಿಂಗ್ ಅಡ್ತಿದರಿ ನಾನು ಯಾರ್ಗು ಯಾವ್ ಇಚಾರನು ಹೇಳಲ್ಲಾ, ಆದ್ರ ನನ್ನ ಮನಸ್ಸಾಮಾಧಾನಕ್ಕ ನೀವಿ ಕೆಲಸ ಮಾಡ್ಲೆ ಬೇಕು, ನಮ್ಮಟ್ಟಿ ಇತ್ತಲಲ್ಲಿ ಆ ಹಂದಿಬಾಡು ಬೇಯೊಗಂಟ ನನ್ನ ಸಂಕಟ ಬೇಯ್ತಲೆ ಇರ್ತದ ಎಂದಳು. ಕರಿಯಪ್ಪನು : ಸರಿ ಆಯ್ತು ಆದ್ರ ನೀನು ದೊರೆದೊಡ್ಡಿಗೆ ಬರದೆ ಉಳಿಬೇಡ ಅಷ್ಟೆ' ನೀ ಯೋಳ್ದಂಗೆ ಕ್ಯೋಳ್ತಿನಿ’ ಅಂತ ಗಂಡ ಹೆಂಡತಿಯ ಮದ್ಯೆ ಒಳ ಒಪ್ಪಂದಗಳು ನೆಡೆದವು.

ಹೀಗೆ ದಿ‌ನ ಕಳೆದ ದೊರೆದೊಡ್ಡಿಯಲ್ಲಿ ಒಂದು ರಾತ್ರಿ ಮಾದೇವಿಯು ಕರಿಯಪ್ಪನಿಗೆ ಆ ವಿಚಾರವನ್ನ ಮತ್ತೆ ನೆನಪಿಸಿದಳು, : ರೀ' ರೀ, ಏನಾ ನೀವು ಆ ಹಂದಿಕೊಂದು ತಂದ್ಕೊಡ ಬಾಡ್ನೆಸ್ರು ನಮ್ಮಿತ್ತಲ ಒಲಲಿ ಬೆಂದಮ್ಯಾಕೆ ಈ ಅಟ್ಟಿ ಕ್ವಾಣಲ್ ನಿಮ್ಗ ಮನಿಕಳಕ್ ಜಾಗ, ಅಲ್ಲಿ ಗಂಟ ಹೊಲದಲ್ಲೆ ಮನಿಕಳಿ' ಎಂದು ರಗ್ಗು ಮಡಚಿ ಕರಿಯಪ್ಪನ ಕೈ ಗಿಟ್ಟಳು. ಕರಿಯಪ್ಪ ಎಷ್ಟೆ ಹೇಳಿದರೂ ಮಾದೇವಿ ಒಪ್ಪಲಿಲ್ಲ, ಕೊನೆಗೆ : ನಿಮ್ಮಪ್ಪ ನಿಂಗ ಮಾದೇವಿ ಅಂತ ಹೆಸರಿಡ್ದೆ ಮೂದೇವಿ ಅಂತಿಡ್ಬೇಕಿತ್ತು ಲೌಡಿ ಮಗಳೆ ಅಂತ' ಬೈದು ಗೊಣಗಿಕೊಳ್ಳುತ್ತ ವಿಧಿಯಿಲ್ಲದೆ ಹೊಲಕ್ಕೆ ಹೊರಟನು. ಹೀಗೆ ಕರಿಯಪ್ಪ ಗೌಡ ಪ್ರತಿ ದಿನ ಮಲಗಲು ಹೊಲಕ್ಕೆ ಹೋಗುತ್ತಿದ್ದು ಯಾರಿಗೂ ಹೇಳಿಕೊಳ್ಳಲಾಗಂದ ಒಂದಷ್ಟು ವೇದನೆ ಅನುಭವಿಸುತ್ತ ನಾಲ್ಕಾರು ದಿನ ಹೊಲದ ಸುತ್ತ ಭರ್ಜಿ ಇಡಿದು ಕಾದಾಡಿದ ಒಂದು ಮರಿ ಹಂದಿಯು ಅವನ ಕಣ್ಣಿಗೆ ಕಾಣಲಿಲ್ಲ.

ಕರಿಯಪ್ಪ ಗೌಡ ಒಂದು ದಿನ ಮಾರನನ್ನ ಜೊತೆಗೂಡಿಸಿಕೊಂಡು ಒಂದು ಹಂದಿ ಹೇಗಾದರು ಹೊಡೆದುರುಳಿಸುವ ವಿಚಾರ ಮಾಡಲೆಬೇಕೆಂದು ನಿರ್ಧರಿಸಿದವನೆ, ಬೋರನ ಗಡಾಂಗಿನಿಂದ ಎರಡು ಬಾಟ್ಲಿಯನ್ನ ತಗೆದು ಕೊಂಡು ಮಾರನನ್ನು ಜೊತೆಯಲ್ಲಿ ಕರೆದುಕೊಂಡು ಬಂದು ಹೊಲದಲ್ಲಿ ಕುಡಿಯುತ್ತ ಕುಳಿತಿದ್ದ. ಕುಡಿದು ಬಾಟಲಿ ಖಾಲಿಯಾಗಿ ಕರಿಯಪ್ಪ ಇನ್ನೇನೊ ಆ ವಿಚಾರ ಕುರಿತು ಮಾತನಾಡಲು ಶುರುಮಾಡ ಬೇಕು ಎನ್ನುವಷ್ಟರಲ್ಲಿ ಮಾರನ ಕಬ್ಬಿನ ಗದ್ದೆಯಲ್ಲಿ ಏನೊ ಸರ ಸರನೆ ಸದ್ದಾದಂತಾಯ್ತು, ಮಾರ ಕರಿಯಪ್ಪ ಗೌಡ ಇಬ್ಬರು ಆಲಿಸಿದರು.. ಕಬ್ಬಿನ ತರಗಿನ ಸದ್ದಿನೊರತಾಗಿ ಮತ್ಯಾವ ಸದ್ದು ಕೇಳಲಿಲ್ಲ, ಮಾರ ಮನಸಿನಲ್ಲಿ : ಆ ಪಡ್ಡೆ ಹುಲಿ ತಿರ್ಪುನ ಏನಾರೂ ಮತ್ತೆ ಬಂದ್ಗಿಂತಾ.. ಎಂದು ಆಲೊಚಿಸುತ್ತ ಆತಂಕದಲ್ಲಿದ್ದ. ನನ್ನ ನಿದ್ದ ಜೊತ್ಗ ನೆಮ್ಮದಿ ಆಳ್ಮಾಡುದ್ ಆ ಬೊಡ್ಡಿ ಹಂದಿ ಪುನಾ ಏನಾರೂ ಬಂತಾ.. ಎನ್ನುವ ಆಲೊಚನೆಯಲ್ಲಿಯೆ ಕರಿಯಪ್ಪ ಗೌಡ ಕೈಯಲ್ಲಿ ಲಾಟಿನು ಭರ್ಜಿ ಎರಡನ್ನು ಹಿಡಿದು ಸರಸರನೆ ಇಳಿದು ಬಂದ, ಬರುವಷ್ಟರಲ್ಲಿ ಒಂದು ಪಡ್ಡೆ ಹಂದಿ ಒಂದು ದೊಡ್ಡ ಹಂದಿಗಳೆರಡು ಕಬ್ಬಿನ ಗದ್ದೆ ಕಡೆಯಿಂದ ಬರುತ್ತಿದ್ದನ್ನ ಕಂಡವನೆ ಕರಿಯಪ್ಪಗೌಡ ಕೇಹು ಎಂದು ಕೇಕೆಯಾಕುತ್ತ ಅಟ್ಟಾಡಿಸಿ ಭರ್ಜಿಯನ್ನ ಬೀಸಿ ಎಸೆದ, ಒಂದು ಹಂದಿ ಪೆಟ್ಟು ತಿಂದು ಕೊಂಯ್ಯಗರಿಯುತ್ತ ಓಡಿದರು ಕರಿಯಪ್ಪ ಅದರ ಹಿಂದೆಯೆ ಓಡಿ ಮತ್ತೊಮ್ಮೆ ಬೀಸಿ ಭರ್ಜಿ ಎಸೆದಾಗ ದೊಡ್ಡ ಹಂದಿ ದಬ್ಬೆಂದು ಬಿದ್ದು ಅರಚುವ ಸದ್ದು ಕೇಳುತಿತ್ತು ಅಷ್ಟರಲ್ಲಿ ಮಾರನೂ ಬಂದ..

ಹಂದಿ ಗೊರೆಯುತ್ತ ನರಳುತ್ತ ಬಿದ್ದಿತ್ತು ಇದನ್ನ ಕಂಡ ಕರಿಯಪ್ಪನಿಗೆ ಏನೊ ಸಾಧಿಸಿದ ಖುಷಿಯಾಯ್ತು.. ಮನದಲ್ಲಿ ಸೇಡಿನ ಕಿಚ್ಚು ಆರಿದಂತಾಯ್ತು.. ಹೆಂಡತಿಯಾ ಆಸೆ ಈಡೇರಿಸಿದ ಸರ್ತಕತೆಯಿಂದ ಆ ದಿನ ತೊಡೆ ಸೀಳಿಸಿಕೊಂಡು ಬಿದ್ದಿದ್ದಾಗ ಕೂಗಿದಂತೆಯೆ ‘ಓ….ಓಹೋ ಎಂದು ಜೋರಾಗಿ ಕೂಗಿ ಕರಿಯಪ್ಪ ಗೌಡ ತನ್ನ ವೇಧನೆಯನ್ನ ಹೊರ ಹಾಕಿ ಸಮಾಧಾನಿಸಿಕೊಂಡ. ಬೆಳಿಗ್ಗೆ ಮಾರ ಕರಿಯಪ್ಪಗೌಡ ಇಬ್ಬರು ಹಂದಿಯನ್ನ ಅಡ್ಡದಸಿಕಟ್ಟಿ ಊರಿನತ್ತ ಹೊತ್ತೊಯ್ದರು, ಮಾರನು ಆ ಹಂದಿಯನ್ನ ಕೂಯ್ದು ಪಾಲಕಿದ, ಕರಿಯಪ್ಪ ಗೌಡನು ಒಂದು ಪಾಲು ಹೆಚ್ಚೆ ಹಿಡಿದು ಮನೆ ಕಡೆ ನೆಡೆದವನೆ ಹೆಂಡತಿ ಮಾದೇವಿಗೆ ವಿಷಯ ತಿಳಿಸಿದನು ಆಕೆಯು ಖುಷಿ ಪಟ್ಟು ಸಂಭ್ರಮದಿಂದ ಒಳ್ಳೆ ಕಾರ ಆಡಿಸಿ ಹಂದಿ ಬಾಡು ಬೇಯಿಸಲು ಇತ್ತಲಲ್ಲಿ ಅಣಿಯಾದಳು, ಅತ್ತ ಮಾರನು ಊರಿಗೆಲ್ಲ ಹಂದಿ ಬಾಡಿನ ಪಾಲು ಹಂಚುವುದರ ಜೊತೆಗೆ ಕರಿಯಪ್ಪ ಗೌಡನು ಹಂದಿ ಬೇಟೆಯಾಡಿದ ಪರಿಯನ್ನ ಮಾಸ್ ಮಸಾಲೆ ಸೇರಿಸಿ ಘಟನೆಯನ್ನ ರೋಚಕ ಸಿನಿಮಾ ಕಥೆಯಂತೆ ವಿವರಿಸಿದ. ಹೀಗೆ ಕಾಲಾಂತರದಲ್ಲಿ ದೋರೆದೊಡ್ಡಿಯ ಪ್ರಖ್ಯಾತ ಹುಲಿ ಬೇಟೆ ಬಸವೇಗೌಡರ ಮನೆತನದ ಹೆಸರು ಹಂದಿ ಬೇಟೆ ಕರಿಗೌಡನ ಮನೆತನ ಎಂದು ಪರಿವರ್ತನೆ ಗೊಂಡಿದ್ದು ವಿಪರ್ಯಾಸ.

ಶಿವರಾಜ್ ಡಿ.ಎನ್.ಎಸ್

ಶಿವರಾಜ್ ಡಿ.ಎನ್.ಎಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ದಾಸನಹುಂಡಿಯವರು. ಬರಹ-ಓದು-ನಟನೆ ಹಾಗೂ ಛಾಯಾಗ್ರಹಣ ಅವರ ಹವ್ಯಾಸ. ಕಲರ್‍ಸ್ ಕನ್ನಡದ ‘ಕಾಮಿಡಿ ಕಂಪನಿ’ಶೋ ನಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಅವರ ಆಸಕ್ತಿ ಕ್ಷೇತ್ರ.

More About Author