Story

ಹುಟ್ಟಿಸಿದ ದೇವರು

ಸಾಹಿತ್ಯ ಲೋಕದ ಪ್ರವೇಶದ ಸಂದರ್ಭದಲ್ಲೇ ಗಮನಸೆಳೆದವರು ಹೆಚ್.ಆರ್.ಸುಜಾತ. ಲೇಖಕಿ, ಅಂಕಣಗಾರ್ತಿ, ಕವಯತ್ರಿ, ಕಥೆಗಾರ್ತಿಯಾಗಿ ಅವರದ್ದು ಹೊಚ್ಚ ಹೊಸ ಹೆಜ್ಜೆ ಗುರುತು. ಅವರ ‘ಹುಟ್ಟಿಸಿದ ದೇವರು’ ಕತೆ ನಿಮ್ಮ ಓದಿಗಾಗಿ

"ನಾವು ಬಂದಿದ್ದು ರಾತ್ರಿ ಲೇಟಾಗಿತ್ತು ವಚನ. ಅರೆಗಣ್ಣು ಬಿಟ್ಕಂಡು ರಾತ್ರೋ ಅನ್ನೋ ರಾತ್ರೀನೆ ತಣ್ಣನೆ ಗಾಳೀಲಿ ಝೂಂಗುರಸ್ತಾ ಇತ್ತು. ನಮ್ಮ ಕಾರಿನ ಸದ್ದನ್ನೂ ಮೀರಿ ಜೋರಾಗಿ ಅಳೋ ಆಲಾಪನ ಒಂದು ಕೇಳುಸ್ತು. ಏನಪ್ಪಾ ಅಂತ ನೋಡಿದ್ರೆ ಬಸ್ ಶೆಲ್ಟ್ರಲ್ಲಿ ಒಂದು ಹುಡುಗಿ ಅಳ್ತಾ ಕೂತಿದ್ಲು. ಏನ್ ಮಾಡೋದು? ಇಳಿಯಣ ಅಂದ್ರೆ ಕೃತಿ ತೊಡೆ ಮೇಲೆ ಮಲಗ್ಬಿಟ್ಟಿದ್ಲು. ಆ ಹುಡುಗಿ ಏನ್ ಕೇಳುದ್ರೂ ಮಾತಾಡಲಿಲ್ಲ. ನನ್ನ ಗಂಡ ಇಳುದು ಕೊನೆಗೆ ಕಾರ್ ಹತ್ತಸಕಂಡು ಬಂದ್ರು. ಆ ಹುಡುಗಿಗೆ ಕುಡಿಯಕ್ಕೆ ಹಣ್ಣಿನ ರಸ ಕೊಟ್ಟು ಶೆಡ್ಡಲ್ಲಿ ಮಲಗ್ಸಿದ್ವಿ. ಈಗ ಎದ್ದು ಗಾರ್ಡನ್ನಲ್ಲಿ ಓಡಾಡತಾ ಇದಾಳೆ. ಮನೆಗೆ ಬೀಗ ಹಾಕ್ಕೊಂಡು ಬಂದಿದೀನಿ.

ನನ್ನ ಹಸ್ಭೆಂಡ್ ಸಾವಿರ ಸಲ ಹೇಳಿ ಹೋಗಿದಾರೆ. "ಅವಳಿಗೆ ಊಟ ತಿಂಡಿ ಆಚೆಗೆ ಕೊಟ್ಬಿಡು. ಯಾವುದಾದರೂ ಅನಾಥಾಶ್ರಮ ನೋಡಿ ಬರ್ತೀನಿ ಸಂಜೆ. ಗೊತ್ತುಗುರಿ ಇಲ್ಲದ ಹುಡುಗಿ, ಅವಳ ಕಷ್ಟಕ್ಕೆ ನಾವ್ ಏನ್ ಮಾಡಕಾಗುತ್ತೆ? ಪಾಪಾ! ಅಂತ ಮನೆ ವಳಗೆ ತಂದು ಬಿಟ್ಕಬೇಡ. ಒಬ್ಬಳೇ ಇರ್ತಿಯ. ಈಗ ಹೇಗೂ ಬಾಯಮ್ಮ ಬರ್ತಳಲ್ಲ. ಕೆಲ್ಸ ಮುಗುದ್ ಮೇಲೆ ಅವ್ಳನ್ನ ಮನೆಗೆ ಕಳಸಬೇಡ. ಅವಳನ್ನ ಇಲ್ಲೇ ಇಟ್ಕೊ. ನಂಗೆ ಮೀಟಿಂಗ್ ಇದೆ. ಬೇಗ ಹೋಗಲೇಬೇಕು" ಅಂತ ಹೋದರು. ಆ ಹುಡುಗಿಗೆ ಬೆಳಿಗ್ಗೆ ಕಾಫಿ ಕೊಟ್ಟಿದಿನಿ. ಇನ್ನೂ ತಿಂಡಿ ಕೊಟ್ಟಿಲ್ಲ. ನಾನೂ ತಿಂದಿಲ್ಲ. ಪಾಪು ಸ್ಕೂಲಿಗೆ ಕಳಸಿ ಇಲ್ಲಿಗೆ ಓಡಿ ಬಂದೆ. ಬನ್ನಿ ವಚನ. ಆ ಹುಡುಗಿ ನಿಮ್ಮತ್ರ ಏನಾದ್ರೂ ಮಾತಾಡತಾಳೋ ಏನೋ ಬಂದು ನೋಡಿ" ಇಂತಿಪ್ಪ ಕಥೇನ ಕನಿ ಅವಳಿಗೆ ಗೊತ್ತಿರುವ ಮಲಯಾಳ ಕನ್ನಡದ ಪರಿಭಾಷೆಯಲ್ಲಿ ಕೈಬಾಯಿ ತಿರುವುತ್ತಾ ತಿಳಿಸಿ ಹೇಳಿದಳು.

ಕನಿ ಕೇರಳದ ಹೆಣ್ಣುಮಗಳು. ಅವಳು ಈ ಸರ್ಕಾರೀ ಕ್ವಾರ್ಟ್ರಸ್ಗೆ ಬಂದು ನಾಕು ತಿಂಗಳು ಆಗಿದೆ. ನನಗಿಂತ ಚಿಕ್ಕವಳು. ಕನ್ನಡ ಭಾಷೆ ತಿಳಿಯದ ಹುಡುಗಿ. ಕೈ ಬಾಯಿ ಸನ್ನೇಲಿ ನನ್ನ ಜೊತೆ ಮಾತಾಡತಾ ಮಾತಾಡತಾ ಕನ್ನಡ ಕಲಿತವ್ಳು. ಎಂಥದೇ ಸಣ್ಣ ಸಲಹೇಗೂ ಈ ಸ್ನೇಹಿತೆ ನನ್ನಲ್ಲಿಗೆ ಓಡಿ ಬರೋವ್ಳು. ಅವಳ ತೊಂದರೆಗಳ ಪರಿಹಾರಕ್ಕೆ, ಬೇಸರವಾದಾಗ, ದೂರದಲ್ಲಿರುವ ತವರಿನ ತಂದೆ ತಾಯಿ ಸಂಕಟಗಳನ್ನು ಹೇಳಿಕೊಳ್ಳುವಾಗ ಹೀಗೆ….

ಅವಳು ತಂದೆ ತಾಯಿಯ ಒಬ್ಬಳೆ ಮಗಳು. ಅವರನ್ನು ಗಳಿಗೆಗೊಮ್ಮೆ ನೆನೆಯುತ್ತಿದ್ದಳು. ಸಾಧ್ಯವಾದಾಗೆಲ್ಲ ಸಾವಧಾನದ ಆ ಹಿರಿಯರು ತಮ್ಮ ಊರಿಂದ ಬಂದು ಇವಳೊಟ್ಟಿಗೆ ಇದ್ದು ಹೋಗುತ್ತಿದ್ದರು. ಆಗ ಅವರು ತಂದ ಕೆಂಪು ಬಾಳೆ ಹಾಗೂ ನೇಂದ್ರ ಬಾಳೆಹಣ್ಣಿನ ಉಪ್ಪುಕರಿ ತಂದು ನಮ್ಮ ಮನೆಗೆ ಕೊಟ್ಟು ಪ್ರೀತಿಯಿಂದ ನಮ್ಮನ್ನು ಮಾತನ್ನಾಡಿಸಿ ಹೋಗುತ್ತಿದ್ದರು. ಕನಿಯ ಗಂಡ ಡಾಕ್ಟರ್ ಆಗಿದ್ರು. ಗಂಡ ಹೆಂಡಿರಿಬ್ಬರೂ ಸಭ್ಯಸ್ತರು ಕೂಡ.

ಈಗ ಈ ಕನಿ ನನ್ನ ಬಳಿಗೆ ಹೊಸ ಕಥೆ ಒಂದನ್ನ ತಂದಿದ್ಲು. ಸರಿ, ನಮ್ಮನೆಯ ಅಕ್ಕಿರೊಟ್ಟಿ ಅವಳಿಗೆ ಇಷ್ಟ ಅಂತ ನಮ್ಮನೇಲೇ ಇಬ್ಬರೂ ತಿಂಡಿ ತಿಂದು ಅವಳ ಮನೆಗೆ ಹೊರಟ್ವಿ. ಆ ಅಲೆಮಾರಿ ಹುಡುಗಿ ಗಾರ್ಡನಗೆ ಪೈಪ್ ಹಿಡದು ನೀರು ಹಾಕ್ತಿತ್ತು. ಅದರ ಒಂದು ಪಕ್ಕ ಮಾತ್ರ ನಮಗೆ ಕಾಣಸ್ತಿತ್ತು "ಕನಿ, ಒಳ್ಳೆ ಕೆಲ್ಸದ ಹುಡುಗಿ ಸಿಕ್ಕಳು. ಅವಳ ಹಿನ್ನಲೆ ವಿಚಾರ್ಸಿ ಸುಮ್ನೆ ಮನೇಲಿ ಇಟ್ಕೋ." ಅಂದೆ.

"ದೇವ, ಇದು ಸಾಧ್ಯವಾ? ಯಾರು ಅವರು ಅಂತ ತೆಳೆಯದೇ ಅದು ಹೇಗೇ ವಜನ, ಬೇಡಪಾ.... ಸಾಮಿ" ಮನೆ ಬಳಿಗೆ ಬಂದು ಬೀಗ ತೆಗೆದವಳ ಬಾಯಲ್ಲಿ ಆತಂಕದ ಉದ್ಗಾರವಿತ್ತು.

"ಏ, ಹುಡಗಿ ಇಲ್ಲೆ ಬಾ. ಇವಳು ನಣ್ಣ ಅಕ್ಕ ಇದ್ದಾಳೆ ಬಾ. ಇವಳಿಗೆ ಹೇಳು ಬಾ. ಇವಳು ಒಳ್ಳೆ ಅಕ್ಕ. ಆಯೆತಾ" ಅಂತ ಹುಡುಗಿಯನ್ನು ಪುಸಲಾಯಿಸಿದಳು.

ಮಾವಿನಮರದಲ್ಲಿ ತೂಗುಬಿದ್ದಿದ್ದ ಜೊಂಪೆ ಜೊಂಪೆ ಮಾವಿನ ಗೊಂಚಲು ಫಲದ ಸಿರಿಯನ್ನು ನೋಡತಿದ್ದ ನಾನು ತಿರುಗಿ ಆ ಹುಡುಗಿಯ ಮುಖ ನೋಡಿದೆ.

"ಏ ಕನಿ, ಇದು ಇಲ್ಲಿದೇ ಹುಡುಗಿ ಅಲ್ಲವಾ? ನಾ ನೋಡಿದಿನಿ ಇದನ್ನ. ನಗತಾ ನಗತಾ ಪಾರ್ಕಲ್ಲಿ ಮಕ್ಕಳನ್ನ ಆಟ ಆಡಸ್ಕಂಡು ಹೋಗ್ತಿತ್ತಲ್ಲ....ದಿನಾ ಮಾತಾಡದೆ ಅದರ ಪಾಡಿಗೆ ಅದು ಹೋಗ್ತಿತ್ತು. ಆಮೇಲೆ ನಮಗೆ ಗೊತ್ತಾಯ್ತು. ಇವಳೆಂಥ ಮಾತಾಡತಾಳೆ ನಿನ್ನ ಕೈಲಿ. ಅದು ಮೂಗಿ ಮಾರಾಯ್ತಿ. ನಮಗೂ ಎಷ್ಟೋ ದಿಸದ ಮೇಲೆ ಗೊತ್ತಾಗಿದ್ದು" ಅಂದೆ. ಆ ಹುಡುಗಿ ಪರಿಚಯದ ಸಣ್ಣ ವಿಷಾದದ ನಗೆ ಸುಳಿಸಿದಳು.

"ಓ ದೈವವೇ" ಕನಿ ಉದ್ಗಾರ ತೆಗೆದಳು.

"ಮೂಕಿ ಆಡರೇನು ವಜನ. ಅವಳಿಗೆ ಕಣ್ಣಡ ತಾನೇ ಗೊತ್ತು. ನೀನು ಕೇಳು. ಅದು ಯಾರದು ಹುಡಗಿ" ಇಂಥ ಮಲಯಾಳಿ ಹುಡುಗಿಯ ಸಂಘವನ್ನೇ ಮಾಡಿ ಜಯಸಿದ್ದರೂ ನನಗೆ ಈ ಹುಡುಗಿಯ ಜೊತೆಗೆ ಈಗ ನಿಜವಾದ ಪೀಕಲಾಟ ಶುರುವಾಯಿತು.

ಆದರೂ ಮನಸಲ್ಲಿ ಕುತೂಹಲ. ಯಾಕೆ? ಆ ಕಮರ್ಷಿಯಲ್ ಇಲಾಖೆಲಿದ್ದ ಹಿರಿಯ ಅಧಿಕಾರಿಯವರ ಮನೆಯಿಂದ ಈ ಹುಡುಗಿ ಹೊರ ಬಂದಿದ್ದಾಳೆ. ಯಾಕಿರಬಹುದು? ಮೂರ್ನಾಕು ವರ್ಷದಿಂದ ಅವಳು ಎಲ್ಲೂ ಹೋಗದೆ ಅವರ ಮನೇಲೆ ಇದ್ದಂತೆ ನೆನಪು. ನಾಕಾರು ಬೀದಿ ಆಚೆಗಿರುವ ಅವರಿಗೆ ಈ ನಮ್ಮ ಪಂಚಾಯತಿ ಗೊತ್ತಾದ್ರೆ ಏನಾದ್ರೂ ಅನ್ನಕಳಲ್ವಾ?....ಈ ಕ್ವಾರ್ಟ್ರಸ್ಸಲ್ಲಿ ಇರೋರು ಎಲ್ಲರಿಗೂ ಒಬ್ಬರಿಗೊಬ್ಬರಿಗೆ ಪರಿಚಯ ಬೇರೆ ಇರುತ್ತಲ್ಲಪ್ಪಾ..

ಏನ್ ಮಾಡೋದೀಗ? ನೋಡೋಣ...ಇದರ ನಡುವೆ ಆ ಹುಡುಗಿಯ ತಿಂಡಿ ಕಾಪಿ ಸಮಾರಾಧನೆ ಮುಗೀತು. ಕನಿ ಬಾ ಅಂತ ಕರೆದ ಕೂಡಲೇ ಅವಳು ಸನಿಹಕ್ಕೆ ಬಂದು ನಿಂತ್ಲು. ಹುಡುಗಿ ಲಕ್ಷಣವಾಗಿದ್ದಳು. ಅವಳ ಕಣ್ಣುಗಳು ನಕ್ಷತ್ರವನ್ನು ಪ್ರತಿನಿಧಿಸುವಂತಿದ್ದವು. ಮೂಕ ಭಾಷೆಯಲ್ಲಿ ವಾರ್ತೆ ಓದುವವರು ನೆನಪಾದರು. ತುಟಿಯ ಚಲನೆ ಹಾಗೂ ಕೈ ಬೆರಳುಗಳ ಸನ್ನೆಯಲ್ಲಿ ಅವರ ಸುದ್ಧಿ ಸಮಾಚಾರಗಳು ಬಿತ್ತರವಾಗುತ್ತಿದ್ದುದು ಮನಸ್ಸಿಗೆ ಬಂತು.

ಶುರುವಾಯಿತು ನಮ್ಮ ಮೂಕ ಭಾಷೆಯ ಪಯಣ. ಅವಳ ಕೈಬಾಯಿ.. ನಮ್ಮ ಕೈಬಾಯಿಗಳು...ಯುದ್ಧದ ಕತ್ತಿಗಳಂತೆ ಅಲ್ಲಾಡಿ ಹೋದವು. ಅವಳ ನಾಲಿಗೆ ಹಾಗೂ ಕಣ್ಣು ಹುಬ್ಬುಗಳ ಚಲನೆಯಲ್ಲಿ ಆಕಾರ, ವಿಕಾರಗಳಲ್ಲಿ ಕೈ ಹಾಗೂ ಕತ್ತುಗಳ ಒನೆದಾಟದಲ್ಲಿ ಒಂದು ವಾಕ್ಯ ಹುಟ್ಟಿಕೊಳ್ಳುತಿತ್ತು. ನಮ್ಮ ಮಾತಿಗೆ ಅವಳ ಗಂಟಲಲ್ಲಿ ಅಕ್ಷರದ ಸ್ವರಗಳು ಹುಟ್ಟಲಾರದೆ ಕೇವಲ ಗಾಳಿಯ ಮರ್ಮರದಂಥ ಏರಿಳಿತಗಳಲ್ಲಿ ಅವಳ ದುಃಖ ಹಾಗೂ ಸಂತೋಷದ ಪ್ರಮಾಣವನ್ನು ಗುರುತಿಸಬಹುದಾಗಿತ್ತು.

ತುಟಿ ಒಂದಾಗಿ, ಬಾಯಿ ಅಗಲವಾಗಿ ನಾಲಿಗೆ ಅಲ್ಲಿ ಹೊರಳಾಡುತ್ತಿದ್ದರೂ ಪದಗಳು ಮೇಲೇಳದೆ ಜಡವಾಗಿ ಗಂಟಲಿಂದ ಧ್ವನಿಯ ಅಲೆ ಮಾತ್ರ ಕಿವಿಗೆ ತಾಕುತಿತ್ತು. ಅದರ ಏರಿಳಿತಗಳಲ್ಲಿ ಅವಳ ಮಾತಿನ ಅರಿವಿರುತಿತ್ತು. ಆ ಅರಿವು ನಮ್ಮ ಅರಿವಿಗೆ ಮೀರಿದ್ದಾಗಿತ್ತು. ನಮ್ಮ ಮಾತಿಗೆ ಅವಳು ಸ್ಪಂದಿಸುತಿದ್ದಳು. ಆದರೆ ಅವಳ ಪದಗಳಿಲ್ಲದ ಸ್ಪಂದನ ನಮಗೆ ಗೊಂದಲವಾಗುತ್ತಿತ್ತು. ಆದರೂ ಕೆಲವು ವಿಚಾರಗಳು ತಿಳಿದವು.

ಅದು ಏನಪ್ಪಾ ಅಂದ್ರೆ...ಅವಳನ್ನು ಅವಳ ಯಜಮಾನತಿ ನಡುನೀರಿನಲ್ಲಿ ಕೈಬಿಟ್ಟು ಹೋಗಿದ್ದಳು. ಮಾತಿಗೆ ಮುಂಚೆ ಮೂಗುತಿಯನ್ನು ಅವಳ ಕೈಗಳು ದೂರು ಹೇಳುವ ಸ್ವರದೊಂದಿಗೆ ತೋರಿಸುತ್ತಿದ್ದವು. ಇದು ಸ್ಪಷ್ಟವಾಗಲೆಂದು ಕೊನೆಗೆ ನಾವು ಒಂದು ತೀರ್ಮಾನಕ್ಕೆ ಬಂದೆವು. ಅವಳೊಂದಿಗೆ ಅತ್ಮೀಯವಾಗಿದ್ದ ಅವಳಿಗಿಂತ ನಾಕಾರು ವರುಷ ದೊಡ್ಡವಳಾದ ಪಕ್ಕದ ಮನೆಯ ಕೆಲ್ಸದ ಹುಡುಗಿ ಮಾಲಾಳೊಂದಿಗೆ ವಿವರಗಳನ್ನು ಕೇಳಿ ತಿಳಿದುಕೊಳ್ಳೋದು.

ಸಧ್ಯಕ್ಕೆ ಬೀಸೋ ದೊಣ್ಣೆ ತಪ್ಪಿತ್ತು. ಅವಳಿಂದ ಅಪಾಯ ಇಲ್ಲ ಅಂತ ತಿಳಿದಿದ್ದೇ ಕನಿ ನಿರಾಳವಾದಳು. ಸಂಜೆಯಾಯಿತು. ಪಾರ್ಕನಲ್ಲಿ ಇಬ್ಬರೂ ಬಂದು ಕೂತ್ವಿ. ಆ ಹುಡುಗಿಯ ಗೆಳತಿಯನ್ನು ಕರೆತರಲು ಅವಳನ್ನೇಕಳಿಸಿದ್ದೆವು. ಸ್ನೇಹಿತೆ ಮಾಲಳನ್ನು ಹುಡುಗಿ ಕರೆ ತಂದಳು. ಕಣ್ಣಲ್ಲಿ ನೀರಹನಿಯ ನೆರಳಿತ್ತು.

ನಾಕಾರು ವರುಷ ವಯಸ್ಸಿನ ಅಂತರವಿರುವ ಹುಡುಗಿಯರು. ನಡು ಮಧ್ಯೆ ಒಂದೇ ಗೋಡೆಯಿರುವ ಅಕ್ಕಪಕ್ಕದಲ್ಲಿ ಇರುವ ಮನೆಗಳಲ್ಲಿ ಇಬ್ಬರೂ ದುಡಿಮೆಗೆ ಬಂದು ನಿಂತವರು. ಬಂದವಳೇ ಮಾಲಾ ನಮ್ಮೊಡನೆ ಬೇರೆಯದೆ ತಿರುಳಿರುವ ಒಂದು ಕಥೆ ಬಿಚ್ಚಿಟ್ಟಳು. ಅದನ್ನು ಕೇಳಿ ನಾವು ಅಕ್ಷರ ಸಹಾ ನಡುಗಿ ಹೋದೆವು.

"ಈ ಹುಡುಗಿ ಹುಟ್ಟಾ ಮೂಗಿ. ಹೆಸರು ಹರಿಣಿ. ಒಂದು ಲಂಬಾಣಿ ತಾಂಡಾದವಳು. ಈಗ ಇವ್ಳಿದ್ದ ಮನೆಯ ಒಡೆಯರು ಗುಲ್ಬರ್ಗಾದಲ್ಲಿದ್ದಾಗ, ಹುಡುಗಿಯನ್ನು ಅವರಪ್ಪನೇ ತಂದು ಇವರ ಮನೆಗೆ ಬಿಟ್ಟುಹೋಗಿದ್ದ. ಆಗಿನ್ನೂ ಇದು ಚಿಕ್ಕ ಬಾಲೆ. ಅವರಪ್ಪ ಇನ್ನೊಂದು ಮದುವೆಯಾಗಿದ್ದ. ಯಾಕೇ ಅಂದ್ರೆ ಈ ಹುಡುಗಿಯ ಅವ್ವ ತೀರಿಕೊಂಡಿದ್ಲು.

ಈ ಹುಡುಗಿಗೆ ಅವನು ದಿನಾ ರಾತ್ರಿ ಹೊಡೆದರೆ ಮಾತ್ರ ಹೊಸ ಹೆಂಡತಿ ಅವನನ್ನು ಪಕ್ಕಕ್ಕೆ ಬಿಟ್ಟುಕೊಳ್ಳುತಿದ್ದಳು. ಅವನು ದಿನವೂ ಕುಡಿದು ಬರುತ್ತಿದ್ದ. ಅವಳೊಂದಿಗೆ ಮಲಗುವುದಕ್ಕೋಅಥವಾ ಕುಡಿತದ ಅಮಲಿಗೋ, ಹೊಸ ಹೆಂಡತಿಯನ್ನು ಓಲೈಸುವುದಕ್ಕೋ ಏನೋ ಒಂದು ಕಾರಣ ಈ ಹುಡುಗಿ ಅವರಪ್ಪನಿಂದ ದಿನವೂ ಏಟು ತಿನ್ನುತ್ತಿತ್ತು.

ದಿನಾ ಬೆಳಗಾದರೆ ನಿದ್ದೆಯಿಂದ ಎದ್ದಾಗ ಜ್ನಾನೋದಯವಾಗಿದ್ದೇ... ಆ ಹುಡುಗಿಯ ಬಾಸುಂಡೆಗಳನ್ನು ನೋಡಿ ಹೊಡೆದ ತಂದೆಯೇ ಬೇಸರ ಪಟ್ಟುಕೊಳ್ಳುತ್ತಿದ್ದ. ಅದಕ್ಕೆ ಇರಬೇಕು ಎಲ್ಲೋ ಒಂದು ಕಡೆ ಇದ್ದು ಬಾಳು ಕಟ್ಟಿಕೊಳ್ಳಲಿ ಅಂತ ಅವರಪ್ಪನೇ ತಂದು ಈ ಹುಡುಗಿಯನ್ನು ಇವರ ಮನೆಗೆ ಬಿಟ್ಟುಹೋಗಿದ್ದ.

ಹುಡುಗಿ ಮನೆಕೆಲಸದಲ್ಲಿ ಅತೀ ನಿಫುಣೆ. ಬರುಬರುತ್ತ ಮನೆಯೊಳಗಿನ ಬದುಕು ಅನ್ನೋದು ಅವಳದ್ದೇ ಒಂದು ಸಾಮ್ರಾಜ್ಯವಾಯಿತು. ಮೊದಮೊದಲು ಯಜಮಾನಿ ಟೇಪ್ ರೆಕಾರ್ಡನಲ್ಲಿ ಹಾಕಿದ ಹಾಡುಗಳನ್ನು ಬಾಯಿ ಬಿಟ್ಕಂಡು ನೋಡತಾ ನಿಲ್ಲುತ್ತಿದ್ದವಳು, ಕೊನೆಗೆ ಗುರುತಿಸಿ ಟೇಪ್ ಹಚ್ಚುವ ಮಟ್ಟಿಗೆ ಸೂಕ್ಷ್ಮಮತಿಯಾಗಿದ್ದಳು.

ಯಜಮಾನಿಯ ತುಟಿ ಚಲನೆಯಲ್ಲಿಯೇ ಅವಳ ಇಡೀ ಜಗತ್ತು ಚಲಿಸುತಿತ್ತು. ಆ ಜಗತ್ತಿನ ಎಲ್ಲವೂ ಇವಳಿಗೆ ತಿಳಿಯುತಿತ್ತು. ಹೊಟ್ಟೆಬಟ್ಟೆಗಂತೂ ಕೊರತೆಯಿರಲಿಲ್ಲ. ಹೊಡೆತದ ಕಾಟವಂತೂ ಇಲ್ಲೇಇಲ್ಲ. ಹುಡುಗಿ ತನ್ನ ಕೆಲಸಕಾರ್ಯಗಳಲ್ಲಿ ಆ ಮನೆಯ ಚಲನೆಯಲ್ಲಿ ಲೀನವಾಗಿದ್ದಳು.

ಯಜಮಾನತಿ ತನ್ನ ಒಡತಿಯ ಬಳಿ ಆಗಾಗ ಮೆಚ್ಚುಗೆಯಿಂದ ಹರಿಣಿಯ ಬಗ್ಗೆ ಹೇಳುವುದನ್ನು ಮಾಲಾ ಕೇಳಿಸಿಕೊಂಡಿದ್ದಳಂತೆ. "ಯಜಮಾನರನ್ನು ಕಂಡಾಗ ಅವರಪ್ಪನನ್ನೇನೋಡಿದಂತೆ ಆಗುತ್ತದೆ " ಎಂದು ಮಾಲಾಳ ಬಳಿ ಹರಿಣಿ ಹೇಳಿಕೊಳ್ಳುತ್ತಿದ್ದಳಂತೆ. "ಹಾಗೇ ಯಜಮಾನತಿ ಕೂಡ ಇವಳ ಮಲತಾಯಿಗಿಂತ ಒಳ್ಳೆಯವಳೇ ಆಗಿದ್ದಳು“ ಅಂತಾನೂ ಹರಿಣಿ ಹೇಳುತ್ತಿದ್ದಳಂತೆ.

ಇದನ್ನು ಕೇಳಿ ಕನಿ ಮಾಲಾಳನ್ನು ಕೇಳಿದಳು

"ಸರಿ ಮಾಲ, ಅಂದ ಮೇಲೆ ಇವಳಣ್ಣು ಯಾಕೆ ಬಿಡ್ಡು ಹೋದರು ಅವರು. ತಪ್ಪಲ್ಲವಾ ಇದು ಣೀನೆ ಹೇಳು. ಇವಳ ಭಾಷೆ ನಿಣಗೆ ತಿಳಿಯಿತ್ತಾ? ಅಯ್ಯ....ಓ ಮೋಳೆ ?" ಹರಿಣಿ ಕಡೆ ತಿರುಗಿ ಅನುತಾಪ ಪಟ್ಟಳು.

ನನ್ನ ಹಾಗೂ ಮಾಲಾಳ ಕನ್ನಡ ಭಾಷೆಯ..ಕನಿಯ ಕಣ್ಣಡ ಮಲಯಾಳದ ಪರಿಭಾಷೆಯ. ಹರಿಣಿಯ ಮೂಕ ಭಾಷೆಯ.. ಸಂಚಲನವೊಂದು ನಮ್ಮ ನಡುವೆ ಗಾಳಿಯೊಂದಿಗೆ ತಿರುಗುತ್ತಾ ಸುಳಿದಾಟ ನಡೆಸಿತ್ತು. ಮತ್ತೆ ಮಾಲಾಳ ಕಥೆ ಮುಂದುವರೀತು. ಹರಿಣಿ ಜಿಂಕೆ ಕಣ್ಣಲ್ಲಿ ಅವಳ ಕಥೆಯನ್ನು ಇದು ಬೇರೆಯವರ ಕಥೆಯೇನೋ ಎಂದು ಕೇಳುವಂತೆ ನೋಟ ಬೀರುತ್ತಾ ಇವಳ ಮಾತಿಗೊಮ್ಮೆ ತಲೆ ಆಡಿಸುತಿದ್ದಳು.

ಆಗಾಗ ಗೆಳತಿಯ ಸಹಾಯಕ್ಕೋ... ಅವಳ ಸಂಕಷ್ಟಕ್ಕೋ....ಪರಿಹಾರಕ್ಕೋ ಎಂಬಂತೆ ಧ್ವನಿಯ ಉದ್ಗಾರಗಳು ಸಾಥಿ ಕೊಡುತ್ತಾ ಉಕ್ಕಿದ ಕಣ್ಣ ಜಲ ಅವಳ ಕಣ್ ತುಂಬಿಕೊಳ್ಳುತ್ತಿತ್ತು. "ಏನ್ ಗೊತ್ತಾಕ್ಕಾ… ಇವಳಂಗೆ ಮನೆ ಸಾವುರ್ಸರು ಅವ್ರುಗೂ ಬೇಕಲ್ಲ. ಇಲ್ಲಿ ಕಚ್ಚಾಟ ಏನಿರಲಿಲ್ಲ. ಹರಿಣಿ ಯಜಮಾನ್ರಿಗೆ ಇಬ್ರು ಮಕ್ಳಿದ್ರಾ? ಒಬ್ಬ ಮಗಳದ್ದು ಮದ್ವೆ ಆಗಿ ಎರಡು ಮಕ್ಕಳು ಆಗಿದಾರೆ. ಆ ಮಕ್ಕಳನ್ನೂ ಇವಳೇ ಸಾಕ್ಕೊಟ್ಟಿದಾಳೆ. ಇವ್ರು ಇಲ್ಲಗ ಬಂದು ನಾಕು ವರುಷ ಆಯ್ತು. ಅದಕ್ಕೆ ಮೊದ್ಲು ಗುಲ್ಬರ್ಗದಲ್ಲಿದ್ರಂತೆ. ಅಲ್ಲಿಗೆ ಇವಳು ಸೇರಕೊಂಡು ಎರಡು ವರ್ಷ ಆಗಿತ್ತಂತೆ.

ಹತ್ತು ವರ್ಷದ ಹುಡುಗೀನ ಅವರಪ್ಪ ತಂದು ಬಿಟ್ಟೋನು ಇವತ್ತಿನವರ್ಗೂ ಇತ್ಲ ಕಡೆ ತಲೇನೆ ಹಾಕಿಲ್ಲ. ಪಾಪಾ! ದಿಕ್ಕಿಲ್ಲದಿರೋ ಈ ಹುಡುಗಿ ಆರು ವರ್ಷದಿಂದ ತನ್ನದೇ ಮನೆ ಅನ್ನಂಗೆ ಇತ್ತಾ..ಎಲ್ಲಿ ಎಡವಟ್ಟು ಆಯ್ತಪ್ಪಾ ಅಂದ್ರೆ..ಅವರ ಮಗ ಇಲ್ಲಿವರ್ಗೂ ಹಾಸ್ಟೆಲ್ನಲ್ಲಿ ಇದ್ದೋನು ಮನೆಗೆ ಬಂದ. ಇಂಜಿನಿಯರ್ರು ಅಕ್ಕ ಅವನು. ಐದಾರು ತಿಂಗಳಿಂದ ಇಲ್ಲೇ ಮನೇಲೆ ಇದ್ದನಲ್ಲಪ್ಪಾ..

ಮೊದಮೊದಲು ಇವ್ಳಿಗೂ ಗೊತ್ತಾಗಿಲ್ಲ ಮಂಗಂಗೆ. ಕೊನೆಗೆ ಎಡವಟ್ಟು ಆಗೋಗಿದೆ ಕಣಕ್ಕಾ. ಒಳ್ಳೆ ಎಮ್ಮೆ ಇದ್ದಂಗೆ ಇದಾನೆ ನೋಡಕ್ಕೆ. ನೀವು ನೋಡಬೇಕು. ಅವರಮ್ಮ ಅಲ್ಲಿ ಇಲ್ಲಿ ಹೋದಾಗ ಕಣ್ಮುಚ್ಚ್ಕಂಡು ಹಾಲ ನೆಕ್ಕಬಿಟ್ಟವನೆ ತಗಳಿ. ಕಾದು ಕೆನಗಟ್ಕಂದು ಹಾರು ಹೊಡಕಂದು ಕೂತಿದ್ರೆ ಬಿಟ್ಟುಬುಡ್ತಾವ ಕಳ್ಳಬೆಕ್ಕಿನ ಕಣ್ಣು ಸುಲಭಕ್ಕೆ. ನೆಕ್ಕಿ ನೆಕ್ಕಿ ಮುಗುಸುಬುಟ್ಟಿದಾನೆ ಕಣಕ್ಕ ಇವ್ಳನ.

"ಹೋಗಿ ಬಂದು ಮೂಗಿ ತಕ ಹೋದ" ಅಂತ ಮೊದ್ಲೇ ಗಾದೆ ಮಾತಿಲ್ವಾ? ಹಂಗಾಯ್ತು ಇದೂವೆ. ಇವಳಿಗೆ ಬಾಯಿಲ್ಲ. ಅವನಿಗೆ ನೀತಿನೇಮ ಇಲ್ಲ. ಯಾರ್ಗಾರ ಹೇಳತಳೆ ಅನ್ನೋಭಯವಂತೂ ಮೊದ್ಲೇ ಇಲ್ಲ. ಇಬ್ರಗೂ ವಯಸ್ಸಿನ ಚಪಲ. ತೀರಸಕಂಡವರೆ. ಆದ್ರೆ ಆ ನನ್ ಮಗಂಗೇನು ಕಷ್ಟ? ಗಂಡಸು. ಮದ್ವೆ ಮಾಡ್ಕತನೆ ಇಲ್ಲಾಂದ್ರೆ.. ಇನ್ನೊಭ್ಳು ತಕೆ ಹೋಯತನೆ. ಇವಳಿಗೆ ತಾನೆ ಇರದು ಈಗ ಹಬ್ಬ. ಹರುಷದ ಕೂಳಿಗೆ ವರುಷದ ಕೂಳು ಕಳಕಂಡಂಗ ಆಯ್ತಲ್ಲ. ಈಗ ಎಲ್ಲಿಗೆ ಹೋತಳಕ್ಕ ನೀವೆ ಹೇಳಿ? ಈಗ ನಾಕು ತಿಂಗಳು ತುಂಬಿ ಐದನೇ ತಿಂಗಳು."

ಇದುವರೆಗೂ ಕಥೆ ಕೇಳ್ತಿದ್ದ ನಾವು ಹೌಹಾರಿ ಹೋದೆವು. ರಸ್ತೆಯಲ್ಲಿ ಕಾಲಿಗೆ ಸಿಕ್ಕಿದ ತೊಡರು ಬಳ್ಳಿ ಗಂಡಾಂತರವನ್ನು ತಂದು ಈಗ ನಮ್ಮ ಕುತ್ತಿಗೆಗೆ ಗಂಟು ಹಾಕುತಿತ್ತು.

"ಅಲ್ಲ ಕಣೆ, ಮೂಕಿ ಅಂತ ಇಂಥ ಸಂಗತಿ ಮೂಗು ಮುಚ್ಕತವೇನೆ? ಬಸ್ರು ಎಲ್ಲಾರ ಮುಚ್ಚಿಡಕ್ಕಾಗತ್ತಾ? ಆ ಹುಡುಗಿಗೆ ಸಧ್ಯಕ್ಕೆ ಹೊಟ್ಟೆ ಕಾಣ್ಸತಿಲ್ಲ ಪುಣ್ಯ. ಯಾವತ್ತಿದ್ರೂ ಇಂಥದೆಲ್ಲ ಗೊತ್ತಾಗೇ ಆಗುತ್ತೆ. ಮುಚ್ಚಿಡದಂತು ಸುಳ್ಳು! ಬಿಟ್ ಬಿಡು. ನೀನಗಾದ್ರೂ ಇದೆಲ್ಲ ಗೊತ್ತಿತ್ತಲ್ಲ! ಏನಾರ ಮಾಡಬೇಕು ತಾನೆ. "

" ಅಯ್ಯೋ...ಇವ್ಳಿಗೆ ಹೇಳುದ್ರೆ ತಿಳಿಬೇಕಲ್ಲ. ಗಳಿಗ್ಗೊಂದ್ಸಲ ಅವನತ್ರಕ್ಕೆ ಓಡೋಗಳು. ಅವರಮ್ಮಂಗೆ ಕಾಣಸದಂಗೆ. ಅವರಮ್ಮ ಮನೇಲಿ ಇಲ್ಲ್ದಿದ್ರಂತೂ ಹೊರಗೆ ಬರ್ತಿರಲಿಲ್ಲ. ಕೊನೆಗೆ ಕೈ ಮೀರಿ ಹೋಗಿದೆ ಕಣಕ್ಕ. ನಾ ಹೇಳುದ್ರೆ ಕೇಳಬುಡತಾಳ? ಏನಾದ್ರೂ ಬುದ್ದಿ ಹೇಳಕಂತ ಹೋದ್ರೆ ಸಾಕು....

ಪ್ರಾಣ ಕೈಲಿ ಹಿಡ್ಕಂಡಂಗೆ ಪ್ರಾಣಪದಕವೊಂದ ಅಂಗೇ ಎದೆಲಿ ಹಿಡ್ಕಳಳು. ಅಲ್ನೋಡಿ! ಅವನೊಂದು ಪದಕ ತಂದು ಕೊಟ್ಟಿದಾನೆ ಎಲ್ಲಿಂದ್ಲೋ... ಅದ ಕತ್ತಿಂದ ಏನ್ಕಾರಣಕ್ಕೂ ಬಿಚ್ಚಿಡಲ್ಲ ಅಂತಳೆ. ಬಿಚ್ಚುಸಿ ನೋಡಣ. ಹೂ.... ಹು...ಕತ್ತಲ್ಲಿ ಇದೆ ನೋಡಿ ಬೇಕಾದ್ರೆ. ಅವನ ಕಂಡ್ರೆ ಅಷ್ಟೇ ಇಷ್ಟ. ಪಾಪಾ! ಏನಾದ್ರೂ ಹೇಳಕ್ಕೆ ಅಂತ ಹೋದ್ರೆ ಸಾಕು, ಕಣ್ಣೀರು ತುಂಬ್ಕಂಡು ಕೂರವಳು.

ಏನ್ ಮಾಡದು? ಇವಳ ಆಸೆ ನೋಡಿ ನೋಡಿ, ಅದ್ಕೇದೇವರು ಇಳದು ಬಂದು ಕೊನೆಗೆ ಪ್ರಸಾದ ಕೊಟ್ಟಂಗೆ ಅವನೇ ಕೊಟ್ಟಿದನಲ್ಲ.....ವರವಾ! "

"ಅವ್ರಿಗೆ ಯಾವಾಗ ಗೊತ್ತಾಯ್ತು ಇದೆಲ್ಲಾ?" ನನ್ನ ಪ್ರಶ್ನೆಗೆ ಅವಳು ಇನ್ನೊಂದು ನೈತಿಕ ಪ್ರಶ್ನೆ ಎತ್ತಿದಳು.

"ನಾಕು ತಿಂಗಳಾದಾಗ... ಆದ್ರೆ.. ತೆಗ್ಸಕ್ಕೆ ಆಗಿಲ್ಲ. ಆಗ ಆ ಅಮ್ಮಾರ ಕೈಯ್ಯಿಂದ ಸಿಟ್ಟು ತಡಯಕಾಗದೇ ತಗೋ ಹೊಡೆತ ಶುರುವಾದ್ವು ಇವ್ಳಿಗೆ. ತಕ್ಷಣನೆ..ಆಯಪ್ಪ, ಉಪಾಯ ಮಾಡಿ ಮಗನ್ನ ಡೆಲ್ಲಿಗೆ ಕಳುಸುದ್ರಂತೆ ನೋಡಿ. ಒಂದಿಪ್ಪತ್ತು ದಿಸದಲ್ಲಿ ಎಲ್ಲ ಮುಗ್ದೋಗಿದೆ.

ಅದೇನೋ ಐ.ಎ.ಎಸ್ ಪಾಸ್ ಮಾಡಕ್ಕಂತೆ ಕಣಕ್ಕಾ. ಇವ್ರಿಗೆ ಟ್ರಾನ್ಸ್ಫರ್ ಆಗೋಗಿದೆ. ಮೊನ್ನೆ ಹೊರಡತೀವಿ ಅಂತಿದ್ರಪ್ಪ. ಸಾಮಾನು ಕಟ್ಟಿ ಕಳಿಸಿದ್ದನ್ನ ನಿನ್ನೆ ನಾನು ನೋಡದೆ. ಮೊನ್ನೆ ದಿನ ನಮ್ಮಕ್ಕಾರು ಅವ್ರನ್ನ ಊಟಕ್ಕೂ ಕರೆದಿದ್ರು. ಈಗ ಹರಿಣಿ ಬರುವಾಗ ಎಲ್ಲ ಹೇಳಕಬಂದ್ಲು ಅಕ್ಕ. ರಾತ್ರೀನೆ ಹೊರಟು ಹೋಗಿದಾರೆ ನೋಡಿ ಅಕ್ಕ ಅವ್ರು.

ಜೋತೇಲಿ ಕರಕಂಡು ಹೋದೋರು ಇವಳ್ನ ಗುಲ್ಬರ್ಗಾ ಬಸ್ ಹತ್ತುಸಿದ್ರಂತೆ. ಟಿಕೇಟ್ ಕೈಲಿಟ್ಟು ಬಟ್ಟೆಬರೆ ಬ್ಯಾಗ್ ಕೊಟ್ಬಿಟ್ಟು ಒಂದೈದು ಸಾವ್ರ ಪರ್ಸ್ಗಾಕಿ ಕೊಟ್ಟು ನಿಮ್ಮಪ್ಪನತ್ರಕ್ಕೆ ಹೋಗು ಅಂದ್ರಂತೆ. ಇವ್ಳು ಇಳುದು ರಾತ್ರೀನೆ ಸಿಟಿ ಬಸ್ ಹತ್ತಿ ವಾಪಾಸ್ ಬಂದುಬಿಟ್ಟಿದಳೆ. ತರಕಾರಿ ತರಕೆ ಆಗಾಗ ಮಾರ್ಕೆಟ್ಟಿಗೆ ಬರ್ತಿದ್ಲಲ್ಲ ನನ್ನ ಜೊತೆ. ನಮ್ಮ ಏರಿಯ ಬಸ್ ಗುರ್ತು ಗೊತ್ತು ಅವ್ಳಿಗೆ.

ರಾತ್ರಿ ಇಲ್ಲಿದ್ರೆ..ಬೆಳಿಗ್ಗೆಲಾದ್ರೂ ನಾ ಸಿಕ್ಕೇಸಿಕ್ತೀನಿ ಅಂತ ವಾಪಾಸ್ ಬಂದುಬಿಟ್ಟಿದಾಳೆ. ಈವಕ್ಕನ ಕೈಗೆ ಸಿಕ್ಕಿದಳೆ ಸರ ಹೋಯ್ತು. ಇಲ್ಲಾಂದ್ರೆ ಏನ್ ಮಾಡಬೇಕಾಗಿತ್ತು? ಅವರು ಬಚಾವಾಗಕ್ಕೆ ಈ ಹುಡುಗಿನ ನಡುನೀರಲ್ಲಿ ಬಿಟ್ಟು ಹೋಗ್ಬಿಟ್ಟಿದಾರೆ ನೋಡಿ ಅಕ್ಕ. ಏನಾದ್ರೂ ಒಂದು ನೆಲೆ ಮಾಡಬೇಕು ತಾನೆ. ಇಷ್ಟು ದಿವ್ಸ ದುಡಸ್ಕಂದವ್ರಲ್ಲ! ಮನುಷ್ಯರಾ ಅವ್ರು? ಮೋಸಗಾರರು... ಅವರ ಮಕ್ಳಿಗೆ ಒಳ್ಳೇದಾಗುತ್ತಾಕ್ಕ... ಹೇಳಿ? ನೀವೇ ಏನಾದ್ರೂ ಮಾಡಿ ಅಕ್ಕ. ನಮ್ಮನೇಲಿ ಅತ್ತೆಮಾವ ಎಲ್ಲಾ ಅವ್ರೆ. ಮೊದ್ಲೇ ನಾವು ಕಾಳು ಆಯ್ಕಂಡು ತಿನ್ನೋರು."

ಈಗ ಅವ್ರು ಬಿಟ್ಟು ಹೋದ ಜವಾಬ್ದಾರಿ ಕನಿ ಗಂಡನ ಹೆಗಲ ಮೇಲೇರಿತು. ಅವನು ಡಾಕ್ಟರಲ್ವಾ? ಪರೀಕ್ಷೆ ಮಾಡಿ ನೋಡಿದ್ದೆ ಬಸಿರು ನಿಜವೆಂದ. ಹುಡುಕಿ ತಡಕಿ ಕೊನೆಗೆ ಯಾವುದೊ ಕ್ರಿಶ್ಚಿಯನ್ ಮಿಷನ್ ಅವರ ನೆರವಿನಿಂದ ಒಂದು ವಾರದಲ್ಲಿ ಅವಳನ್ನು ಕೊಂಡು ಹೋಗಿ ನಾವಿಬ್ಬರೂ ಅಲ್ಲಿ ಬಿಟ್ಟು ಬರುವಾಗ ನಮ್ಮ ನಿಟ್ಟುಸಿರು ಬಿಡುಗಡೆಯಾಗಿತ್ತು.

ಆ ಮೂಕಿ ಹುಡುಗಿಯ ದನಿ ಗೊಗ್ಗರಾಗಿತ್ತು. ಕಣ್ಣು ತುಂಬಿ ಹರಿಯುತ್ತಿದ್ದವು. ಅವಳೆದೆಯ ಪದಕವನ್ನು ಆಧಾರಕ್ಕೆಂಬಂತೆ ಎರಡೂ ಕೈಲಿ ಗಟ್ಟಿಯಾಗಿ ಹಿಡಿದು ಅನಾಥಾಶ್ರಮದಲ್ಲಿ ನಿಂತಿದ್ದಳು. ಮುಂದಿನ ವರುಷದಲ್ಲಿ ನಾವು ಮನೆ ಬದಲಾಯಿಸಿದೆವು. ಕನಿ ಕೂಡ ಬೇರೆ ಮನೆಗೆ ಹೋದಳು. ಆ ಮೂಕ ಹುಡುಗಿ ನಮ್ಮ ಕಣ್ಣಿಂದ ದೂರ ದೂರ ದೂರವಾದಳು.
2

ನಾಕಾರು ವರುಷ ಕಳೆದ ಮೇಲೆ ಕೇರಳ ಪ್ರವಾಸಕ್ಕೆ ಹೋಗಿದ್ದೆವು. ಗುರುವಾಯೂರಿಂದ ಅಲ್ಲೇ ನಾಕಾರು ಮೈಲಿ ದೂರದಲ್ಲಿರುವ ಕನಿ ತಂದೆತಾಯಿಯನ್ನು ಮಾತಾಡಿಸಿ ಬರೋಣ ಎಂದು ನಾವು ಅವರ ಮನೆಗೆ ಹೋದ್ವಿ. ಹೋದಾಗ ಅವರ ಮನೆ ಒಳಗಿಂದ ಬಂದು ಬಾಗಲು ತೆಗೆದವಳು ಹರಿಣಿ. ನಮ್ಮನ್ನು ನೋಡಿದ್ದೆ ನಿಜವಾದ ಹರಿಣಿಯಂತೆ ಕುಣಿಯುತ್ತಾ ಓಡಿ ಬಂದು ತಬ್ಬಿಕೊಂಡ್ಲು.

ಅವಳ ಪ್ರಾಣಪದಕ ನನ್ನ ಎದೆಗೆ ತಾಕಿ ಒತ್ತಿತ್ತು. "ಹಾಂ..." ಎಂಬ ನನ್ನ ಉದ್ಗಾರಕ್ಕೆ ಎಚ್ಚೆತ್ತವಳೆ ಸಿರಿಯಿಂದ ಮುಖವನ್ನು ಭೂಮಾಕಾಷದವರೆಗೂ ಹಿಗ್ಗಿಸಿ ಅದಕ್ಕೆ ಹಾಕಿಸಿಕೊಂಡ ಚಿನ್ನದ ಕಟ್ಟನ್ನು ಎತ್ತಿ ತೋರಿಸಿದಳು. ವಾಲೆ, ಮೂಗುತಿ, ಉಂಗುರಗಳನ್ನು ಕಣ್ಣರಳಿಸಿ ಉಲ್ಲಾಸದಿಂದ ತೋರಿದಳು. ಇದನ್ನೆಲ್ಲ ತನ್ನ ಮಗಳಿಗೆ ಕೂಡಿಡುತಿದ್ದೇನೆ ಎಂದು ಅಭಿನಯ ಮಾಡಿ ಗಂಟಲಿಂದ ಸಂಭ್ರಮದ ಸ್ವರ ಹೊರಡಿಸಿದಳು. ಅವಳಮ್ಮನ ದುಪ್ಪಟ್ಟಾ ಹಿಡದು ಅವಳಂಥದ್ದೇ ಚಿಗುರುಕಂಗಳ ಬಾಲೆಯೊಂದು ಕಣ್ ಕಣ್ ಬಿಡುತ್ತಾ ನಿಂತಿತ್ತು. ಅವಳ ಹಾಗೆ ಸುಂದರವಾಗಿತ್ತು. ಆದರೆ ಅದು ಹರಳು ಹುರಿದಂತೆ ಪಟಪಟನೆ ಬಾಲಭಾಷೆಯಲ್ಲಿ ತನ್ನ ಪ್ರಪಂಚವನ್ನು ಹಿರಿಹಿರಿ ಹಿಗ್ಗಿಸುತ್ತಾ ಮಾತನಾಡುತಿತ್ತು. ನಮ್ಮನ್ನು ಯಾರು ಎಂದು ಕೇಳುತಿತ್ತು.

ಓಡಿಹೋಗಿ ಹಾಸಿಗೆ ಮೇಲಿಂದ ಏಳಲಾರದ ಕನಿಯ ಅಪ್ಪನಿಗೆ "ಅಚ್ಚಾ...ಅಚ್ಚಾ...." ಎಂದು ಕೂಗುತ್ತಾ ನಮ್ಮ ವಿಚಾರ ತಿಳಿಸಿತು. ಓದಲು ಪೇಪರ್ ತಂದು ಕೊಡುತಿತ್ತು. ಅವರು ಹೇಳಿಕೊಡುತ್ತಿದ್ದ ಅಕ್ಷರ ಪಾಠಕ್ಕೆ ತಿರುಗಿ ಉತ್ತರಿಸುತಿತ್ತು. ಹರಿಣಿ ಮಲಯಾಳದ ಹಾಡಿನ ಪದಗಳನ್ನು ಮಗಳ ಬಾಯಿಂದ ಹಾಡಿಸಿ ತೋರಿಸಿ ಗಂಟಲಿಂದ ದೊಡ್ಡದೊಂದು ಉದ್ಗಾರ ತೆಗೆದು ನಮ್ಮ ಹೊಗಳಿಕೆಗೆ ನಕ್ಕಳು. ನಾವಲ್ಲಿರುವವರೆಗೂ ಅದು ಥೇಟ್! ಹರಿಣದ ಮರಿಯಂತೆ ಆ ವನದಲ್ಲಿ ಕಂಗೊಳಿಸುತಿತ್ತು. ಹುಟ್ಟಿಸಿದ ದೇವರು ದಯಾಮಯಿಯಾಗಿದ್ದ. ಅದಕ್ಕೆ ಮಾತಿನ ಹರಳನ್ನು ಹುರಿವ ತೆಳು ನಾಲಿಗೆಯನ್ನು ದಯಪಾಲಿಸಿದ್ದ. ಅದರ ಮಾತನ್ನು ನೋಡಿ ನಲಿಯುತ್ತ ನಮಗೆ ಅದನ್ನು ತೋರಿಸುವಾಗ ಹರಿಣಿಯ ಹೊರಳಾಡುವ ಜಡ ನಾಲಿಗೆ ಮೇಲೇಳದೆ ನುಲಿಯುತ್ತಿತ್ತು.

ಕನಿಯ ಅಮ್ಮ ನಗುತ್ತಾ ನಮಗೆ ಉಪಚಾರ ಮಾಡುತಿದ್ದರು. ಹರಿಣಿ ನಮ್ಮೊಡನಿದ್ದವಳು ತಕ್ಷಣವೇ ಅವಳ ಹಣೆ ಹಣೆ ಬಡಿದುಕೊಂಡು ಹೋಗಿ ಕೈಯ್ಯಿಂದ ಅವರ ಬಳಿ ಪಾತ್ರೆ ಕಿತ್ತುಕೊಂಡಳು. ನಮ್ಮ ಹತ್ರ ಮಾತನಾಡು ಹೋಗು ಎಂದು ಜೋರು ಮಾಡಿ ಅವರನ್ನು ನಮ್ಮ ಬಳಿ ಕಳುಹಿದ ರೀತಿಗೆ ನಾವು ಜೋರಾಗಿ ಅವರ ಮನೆಯಲ್ಲಿ ನಗು ಚೆಲ್ಲಾಡಿದವು. ವ್ರುದ್ಧ ದಂಪತಿಗಳ ನಡುವೆ ಮನೆಯೊಡತಿಯಂತೆ..ಒಂದು ಊರುಗೋಲಂತೆ...ಅವಳೇ ಒಂದು ನೆರಳಾಗುವ ಮರದಂತೆ....ಅವಳು ಮಗಳು ಇಬ್ಬರೂ ಆ ಹಸಿರಿನ ನಡುವೆ ತಮ್ಮ ಬೇರು ಹರಿಸುತ್ತಾ ನೆಲೆ ನಿಂತಿದ್ದರು. "ಒಳ್ಳೇ ಮೋಳೇ" ಎಂದು ಕನಿಯ ಅಮ್ಮ ನಗುತ್ತಾ ಬಂದು ನಮ್ಮೊಂದಿಗೆ ಮಾತಿಗೆ ಕೂತರು.

ಭಾಷೆಯಿರದ ಮೂಕ ಅಮ್ಮನ ಮಗಳಿಗೆ ಅವರು "ಪ್ರಕ್ರುತಿ" ಎಂಬ ಹೆಸರಿಟ್ಟಿದ್ದರು. ಇಂದಿಗೆ ಮಲಯಾಳ ದೇಶದ ಭಾಷೆ ಅವಳದಾಗಿತ್ತು. ಅಚ್ಚನ ಇಂಗ್ಲೀಷ್ ಪದಗಳು ಕ್ಯಾಟ್, ಡಾಗ್, ಬರ್ಡ್ಗಳೆಲ್ಲಾ ಅವಳೊಂದಿಗೆ ಆಟವಾಡುತ್ತಿದ್ದವು. ಕನ್ನಡದ ಒಂದೇ ಒಂದು ಪದದ ಗಂಧವೂ ಇದ್ದಂತಿರಲಿಲ್ಲ. ಹುಟ್ಟು ಭಾಷೆ ಅದಕ್ಕೆ ಏನೆಂದು ಗೊತ್ತಿರಲಿಲ್ಲ. ಹರಿಣಿಯ ನೆಲೆಯಿಂದ ನಾವು ಹೊರಟು ನಿಂತೆವು. ಅವಳ ಅಂಗೈಯ ಹಿಡಿಯಲ್ಲಿ ಅವಳೇ ಸಂಭ್ರಮಿಸಿ ಕೊಯ್ದು ತಂದ ಕನಿಯ ತೋಟದ ನೇರಳೆ ಹಣ್ಣಿನ....ಸ್ಟ್ರಾಬೆರಿ ಹಣ್ಣಿನ.....ಪೊಟ್ಟಣಗಳು ನಮಗಾಗಿ ಕಾಯುತ್ತಿದ್ದವು.

ಇದ್ದಕ್ಕಿದ್ದಂತೆ ಭೇಟಿಯಾದ ನಮ್ಮನ್ನು ನೋಡಿದ್ದಕ್ಕೋ....ಹಳೆಯದೊಂದು ತಂತು ಬಂದು ತಾಕಿದ್ದಕ್ಕೋ......ಅವಳ ಮಗಳನ್ನು ನಾವು ಕಂಡದ್ದಕ್ಕೋ...ಆ ಮಗುವಿನ ಮಾತನ್ನು ನಾವು ಕೇಳಿದ್ದಕ್ಕೋ....ಬಿಟ್ಟು ಹೋದ ಹಳೆಯ ನಂಟಿನ ಮಿಂಚೊಂದು ತಾಕಿ ಹೊರಟಿದ್ದಕ್ಕೋ ಹರಿಣಿಯ ತುಟಿಯಲ್ಲಿ ಸಣ್ಣ ನಗೆಯ ಜೊತೆಗೆ ಬಗೆ ಹರಿಯದ ಕಣ್ಣೀರಿನ ಮೋಡವೊಂದು ದುಮ್ಮಿಕ್ಕಲು ಸಜ್ಜಾಗಿತ್ತು.

ತುಟಿಯಂಚಲ್ಲಿ ತುಳುಕಾಡುತ್ತಿದ್ದ ಕಾಮನ ಬಿಲ್ಲಿನ ಕೊನೆಯನ್ನು ನಾವು ಕಣ್ಣಿಂದ ಮುಟ್ಟದೇ ತಿರುಗಿ ನೋಡದೆ ಬಂದು ಕಾರು ಹತ್ತಿದೆವು. ಕಿಟಕಿಯಲ್ಲಿ ನಮಗೆ ಬಗ್ಗಿ ವಿದಾಯ ಹೇಳಿತಿದ್ದ ಕನಿಯ ತಾಯಿಯ ಮುಖ ಹಾಗೂ ಅವರ ಬೆನ್ನು ಹರಿಣಿಯನ್ನು ಮರೆ ಮಾಡಿತ್ತು. ಗೇಟಿನವರೆಗೂ ಓಡಿ ಬಂದ ಪ್ರಕ್ರುತಿ ನಮಗೆ ಕೈ ಬೀಸುತ್ತ ನಿಂತಿತ್ತು.

"ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ" ಎಂಬ ನಲ್ನುಡಿ ಹಸಿರು ಸಿರಿಯನ್ನು ಸೂಸುತ್ತಾ, ಕಾರಿನ ಚಕ್ರ ಓಡುವ ದಾರಿಯಲ್ಲಿ ನಮ್ಮ ಕಣ್ಣನ್ನು ತುಂಬುತಿತ್ತು. ದನಗಳು ಉಲ್ಲಾಸದಲ್ಲಿ ಹಸಿರು ಮೇಯುತ್ತಿದ್ದವು. ಕೊರಳಿನ ಗಂಟೆಯ ದನಿ ಹಸಿರಲ್ಲಿ ಉರುಳಾಡಿ ಸದ್ದು ಮಾಡುತಿತ್ತು ಪೊರೆವವನ ಕರೆವಂತೆ...

ಹೆಚ್. ಆರ್. ಸುಜಾತಾ
೮. ೪. ೧ ೬

ಹೆಚ್.ಆರ್. ಸುಜಾತಾ

ಸಾಹಿತ್ಯ ಲೋಕದ ಪ್ರವೇಶದ ಸಂದರ್ಭದಲ್ಲೇ ಗಮನಸೆಳೆದವರು ಹೆಚ್.ಆರ್.ಸುಜಾತ. ಲೇಖಕಿ, ಅಂಕಣಗಾರ್ತಿ, ಕವಯತ್ರಿ, ಕಥೆಗಾರ್ತಿಯಾಗಿ ಅವರದ್ದು ಹೊಚ್ಚ ಹೊಸ ಹೆಜ್ಜೆ ಗುರುತು. ಹಾಸನ ಜಿಲ್ಲೆ ಆಲೂರು ತಾಲೂಕಿನ ಮರಸುಹೊಸಹಳ್ಳಿ ಸುಜಾತರ ಹುಟ್ಟೂರು. ಓದಿದ್ದು ಬಿಎಸ್ಸಿ, ಆದರೆ ಆಸಕ್ತಿ ಮಾತ್ರ ಅಪ್ಪಟ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ. ಮಕ್ಕಳ ರಂಗಭೂಮಿ, ಪತ್ರಿಕೋದ್ಯಮ ಅನುಭವ, ಮಲೆನಾಡ ಬದುಕಿನ ಗಾಢ ಅನುಭವಗಳೇ ಬರಹಕ್ಕೆ ಸ್ಪೂರ್ತಿ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಅಂಕಣಬರಹಗಳ ಆಯ್ದ ಸಂಗ್ರಹ, ‘ನೀಲಿ ಮೂಗಿನ ನತ್ತು’ ಸುಜಾತ ಅವರ ಚೊಚ್ಚಲ ಕೃತಿ. ಮೊದಲ ಕೃತಿಗೆ ಅಮ್ಮ ಪ್ರಶಸ್ತಿ ಪುರಸ್ಕೃತರು. ಮಂಗಳೂರು ವಿವಿ ಪಠ್ಯಪುಸ್ತಕದಲ್ಲೂ ಸೇರ್ಪಡೆ. ‘ಕಾಡುಜೇಡ ಹಾಗೂ ಬಾತುಕೋಳಿ ಹೂ’ ಕವನ ಸಂಕಲನ. ಪ್ರಸ್ತುತ ಕೆಂಡಸಂಪಿಗೆ ಡಾಟ್ ಕಾಮ್ ನಲ್ಲಿ ‘ಸುಜಾತಾ ತಿರುಗಾಟದ ಕಥನ’. ಅಂಕಣ ಬರಹದಲ್ಲಿ ನಿರತರಾಗಿದ್ದಾರೆ. ಕೃಷಿಸಂತ ಎಲ್.ನಾರಾಯಣರೆಡ್ಡಿ ಅವರ ಬದುಕಿನ ಕುರಿತ ಸಾಕ್ಷ್ಯಚಿತ್ರದ ನಿರ್ದೇಶಕರೂ ಆಗಿರುವ ಸುಜಾತಾ ಅವರ ಚೊಚ್ಚಲ ಕೃತಿಗೆ ಸಾಹಿತ್ಯ ಅಕಾಡೆಮಿಯ ದತ್ತಿನಿಧಿ ಬಹುಮಾನ ಲಭಿಸಿದೆ. 

More About Author