Poem

ಇವರು ಮನುಷ್ಯರಲ್ಲ

ಅವರು
ಚಾಕು ಚೂರಿ ಹುಡುಕುತ್ತಿದ್ದರು
ಯಾರನ್ನೋ ಕೊಲ್ಲುವ ಬಗ್ಗೆ
ಆಕ್ರೋಶದಿಂದ ಮಾತಾಡುತ್ತಿದ್ದರು

ಮತ ಅಪಾಯದಲ್ಲಿದೆ
ಅದನ್ನು ಉಳಿಸಬೇಕಿದೆ
ಅದಕ್ಕೆ ಅವರನ್ನು ಬಿಡಬಾರದು
ಹೀಗೆ,ಹೀಗೆ ಇನ್ನೂ ಅನೇಕ
ವಿಷಯಗಳನ್ನ ಪ್ರಸ್ತಾಪಿಸುತ್ತಿದ್ದರು

ಆ ಕ್ರೌರ್ಯದ ಮಾತುಗಳು
ನನ್ನ ಕಿವಿಗೆ ಬೀಳುತ್ತಿದ್ದವು
ಕೆಲವು ಮನುಷ್ಯರು ಯಾಕಿಷ್ಟು
ಕ್ರೂರಿ ಮನಸ್ಥಿತಿಯವರು
ಅವಾಗ್ಲೇ ಈ ತರಹದ ಭಾವನೆ
ತಲೆಯಲ್ಲೆಲ್ಲ ಓಡುತಿತ್ತು

ರಾತ್ರಿ ಹನ್ನೊಂದು
ಅಷ್ಟೋತ್ತಾದರೂ
ಚಾಕು ಚೂರಿ ಹುಡುಕಿ
ಅವುಗಳನ್ನು ಮಸೆಯುವ
ಶಬ್ದ ಜೋರಾಗೆ ಕೇಳುತ್ತಿತ್ತು

ಅಷ್ಟೊತ್ತಿನಲ್ಲಿ
ಚಾಕು ಚೂರಿ ಮಸೆಯುವನ
ಮನೆಯಿಂದ ನೋವಿನ
ಸುದ್ದಿಯೊಂದು ಬಂತು
ಅವನ ಹೆಂಡತಿ ಮಗುವಿಗೆ
ಜನ್ಮ ನೀಡುವಾಗ ಮಗುವಿನ ಜೊತೆಯಲ್ಲಿ
ತಿರಿಹೋದಳೆಂದು

ಇನ್ನೇನು ನೋವಿನ ಕಣ್ಣೀರು
ಸುರಿಸ್ಬೇಕು ಅನ್ನುವಷ್ಟರಲ್ಲಿ
ಅವನಿಂದಿದ್ದ ಗುಂಪಿನ ಗುರು
"ಧರ್ಮಕ್ಕಿಂತ ಮತ್ಯಾವುದು ಮುಖ್ಯವಲ್ಲ"
ಎಂದೇಬಿಟ್ಟ
ಅವಾಗ ಅವನು ಚಾಕು ಚೂರಿಯನ್ನು
ಮತ್ತಷ್ಟು ವೇಗವಾಗಿ ಮಸೆಯಲು
ಶುರುಮಾಡ್ದ

ನಾನಂದುಕೊಂಡೆ
ಇವರು ಬದಲಾಗಲ್ಲ
ಕುಟುಂಬದ ಅರಿವು ಇವರಿಗಿಲ್ಲ
ಇವರ್ಯಾರು ಮನುಷ್ಯರಲ್ಲ
ಹೊಡೆದಾಡ್ತಾರೆ ಹೊಡೆದಾಡಿ
ಬಾಯಿಗೆ ಮಣ್ಣು ಹಾಕಿಸಿಕೊಳ್ತಾರೆ

- ಜಿ.ಎಸ್.ಶರಣು

ಜಿ.ಎಸ್.ಶರಣು

ಕವಿ ಜಿ.ಎಸ್.ಶರಣು ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಎಂ. ಗುಡದೂರುನವರು. ಪುಸ್ತಕ ಓದುವುದು, ಕವಿತೆ, ಕಥೆ, ಲೇಖನ ಬರೆಯುವುದು, ಫೋಟೋಗ್ರಫಿ ಮತ್ತು ಎಡಿಟಿಂಗ್ ಅವರ ಆಸಕ್ತಿಯ ವಿಚಾರವಾಗಿದೆ.

ಪ್ರಶಸ್ತಿ : ಭೀಮ್ ಪೌಂಡೇಶನಿಂದ 'ಭೀಮಸೇವಾ ರಾಜ್ಯಪ್ರಶಸ್ತಿ'

More About Author