Story

ಕಾಡಾತ್ಮ

ಅಚ್ಚ ಹಸಿರ ಸುತ್ತಲ, ಕೆಂಪು ಮಣ್ಣಿನ ಮನೆಗಳು, ಬೀಡಿ ಸೊಪ್ಪಿನ ಚೂರು, ಹೊಗೆ ಸೊಪ್ಪಿನ ದಟ್ಟ ಗಾಟು, ಬೀಡಿ ಸುತ್ತುವ ಕನಕ ಬಣ್ಣದ ದಾರ, ಅಲ್ಲಲ್ಲಿ ಉದುರಿದ ಗೇರು ಹಣ್ಣು ಅವುಗಳ ಮೇಲೆ ಆಗ ತಾನೆ ಲಾಳ ಕಟ್ಟಿಸಿಕೊಂಡು ಬಂದ ಹಸುಗಳ ತುಳಿತ.. ಕಾಡು, ಕಾಡ ನಡುವೆ ಮಾನವ ವಾಸ್ತ್ಯಗಳ ಸುಳುಹು ಮತ್ತೆ ಯಾವೂದೋ ಪ್ರಾಣಿಯ ಹಸಿ ಸಗಣಿ.. ಒಂದಡಿ ಅಳತೆಯಲ್ಲಿ ಕಳಲೆ ಮೊಳಕೆ ಬಾಯಾಡಿಸುತ್ತಿರು ಕಾಡೆಮ್ಮೆ, ಒಂದಷ್ಟು ದೂರದಲ್ಲಿ ಕಂಡು ಕ್ಯಾಮೆರಾ ತೆಗೆಯುವಷ್ಟರಲಿ ಕಾಣೆಯಾಗುವ ಸಾರಂಗ.. ಕಾಡು-ಪ್ರಾಣಿ-ಮನುಷ್ಯ ಇವರುಗಳ ಪ್ರಪಂಚವದು, ಕಾಡ ಗರ್ಭದೊಳಗೆ ಈಜಿ ಈಜಿ ಸಾಗಿದಂತೆ ಸಿಗುತ್ತಿದ್ದ ಸರ್ಪದ ಸೀಳು ನಾಲಿಗೆಯಂಥ ದಾರಿ, ದಾರಿಗಳ ನಡುವೆ ಕವಲು.. ಭಯಂಕರ ಕವಲು, ಸಂಜೀವ ಮಲೆಕುಡಿಯರ ಜೊತೆ ಹೆಜ್ಜೆ ಹಾಕಲು ಸಾಧ್ಯವಾಗಲೇ ಇಲ್ಲ ಅವರು ಮುಂದೆ ಹೋದಂತೆ ನಾನು ಹಿಂದೆ ಹಿಂದೆ ಉಳಿದು ಹೋದೆ, ತಿರುಗಿ ನೋಡಿದ ಸಂಜೀವರು ‘ಓ ಅಕ್ಕರೇ ಹೀಗೆ ಹೆಜ್ಜೆ ಹಾಕಲಿಕ್ಕೆ ನೀವು ಪಿಕ್ನಿಕ್ ಗೆ ಬಂದುದಾ.. ಸರಸರ ಬನ್ನಿ ಮಾರ್ರೆ, ಇನ್ನು ಬಳಾ ದೂರ ಹೋಗ್ಲಿಕ್ ಉಂಟು’ ಎಂದು ಆಜ್ಞೆ ಮಾಡಿದರು. ಇದು ರಸ್ತೆಯಲ್ಲ ಕೈಲಾಸಕ್ಕೆ ನಿರ್ಮಿಸಿದ ಏಣಿಯಂತೆ ನಡೆದಷ್ಟು ಎತ್ತರ ಎತ್ತರಕ್ಕೆ ಬೆಟ್ಟ ಎಂದುಕೊಂಡು ಉಸಿರು ಬಿಟ್ಟೆ.

ನನ್ನ ಸಂಶೋಧನಾ ಪ್ರಬಂಧ “ಬುಡಕಟ್ಟು ಜನಾಂಗದ ಮೇಲೆ ಟೀವಿ ಪ್ರಭಾವ”ಕ್ಕೆ ಸ್ಯಾಂಪಲ್ ಟೆಸ್ಟಿಂಗ್ ಗೆ ಸವನಾಳು ಮಲೆಕುಡಿಯ ಜನಾಂಗವನ್ನು ಆಯ್ಕೆ ಮಾಡಿಕೊಂಡಿದ್ದೆ, ಪ್ರಶ್ನಾವಳಿಯ ಸಂದರ್ಶನಕ್ಕೆ ಸಂಜೀವ ಮಲೆಕುಡಿಯರ ಜೊತೆ ಕುದುರೆಮುಖ ಹುಲಿ ಸಂರಕ್ಷಣಾ ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಮಲೆಕುಡಿಯರ ಮನೆಗಳಿಗೆ ಹೋದೆವು. ಮಲೆಕುಡಿಯರ ಈಗಿನ ತಲೆಮಾರುಗಳು ಯಾವೂ ಮನೆಯಲ್ಲಿ ಇರಲಿಲ್ಲ, ಬಿಎಡ್, ಡಿಗ್ರಿ, ಡಿಪ್ಲಮೊ ಮಾಡುತ್ತಾ ಪೇಟೆ ಸೇರಿದ್ದವು. ಹಳಬರು ಹೊಸದೊಂದು ಪ್ರಯೋಗಕ್ಕೆ ಸಿದ್ಧರಿಲ್ಲದಂತೆ ಬಂದವರ ಎದುರು ಸಿಡಿಮಿಡಿಯಾಗುತ್ತಿದ್ದರು. ಹೊರಗಿನಿಂದ ಬರುವ ಎಲ್ಲಾ ಮನುಷ್ಯರು ಅಪಾಯಕಾರಿ ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ನನ್ನ ಪ್ರಶ್ನೆಗಳಿಗೆ ಹೌದು-ಇಲ್ಲ ಉತ್ತರಗಳನ್ನು ಗುರುತುಹಾಕಿಕೊಂಡು ಎದ್ದು ಬಂದೆವು.

ಹಿಂತಿರುಗುತ್ತಾ ಕಣಿವೆಗಳ ಮಧ್ಯ ನಡೆಯುವಾಗ ಘಟ ಕಾಡೆಮ್ಮೆ ಸಿಕ್ಕಿ ಬೆಚ್ಚಿ ಮೆಲ್ಲ ದನಿಯಲ್ಲಿ ಕೇಳಿದೆ “ಸಂಜೀವರೇ ನಮ್ಮ ಎಡಗಡೆ ಮಾರು ದೂರಕ್ಕೆ ಒಂದು ಕಾಡೆಮ್ಮೆ ಇದೆ ನೋಡಿ ತೊಂದರೆ ಇಲ್ವ, ನಾವು ಸ್ವಲ್ಪ ನಿಂತು ಅದು ಹೋದ ಮೇಲೆ ಮುಂದುವರೆದರೆ ಹೇಗೆ ಎಂದು ಕೇಳಿದೆ. ‘ಹೋ ನಾವು ಈಗ ಬನದ ಮದ್ಯೆಗೆ ಬಂದುದಲ್ಲ ಆವು ಎಡವಿದ ಹೆಜ್ಜೆಗೆ ಮೂರು ಸಿಕ್ಕತವೇ, ಅಲ್ಲಿ ಗೇರು ಹಣ್ಣಿಗೆ ಬಾಯಿಹಾಕಿರ್ತವೆ, ನಾವು ಪಕ್ಕದಲ್ಲಿ ಹೋಗುವ, ಎಂದು ಧೈರ್ಯ ಹೇಳಿದರು. “ಪಕ್ಕದಲ್ಲಿ! ಅಷ್ಟೂ ಸರಾಗವಾಗಿ ನಾವು ಹೋಗ್ಬಹುದಾ ನಮ್ನ ಬೆದರಿಸಿಕೊಂಡು ಬಂದರೇ? ಎಂದು ನಾನು ಆತಂಕದಿಂದ ಕೇಳಿದೆ. “ಎಂಥ ಮೇಡಮ್ಮು ಸುಮ್ಮನೆ ಬೆದರಿಸಿಕೊಂಡು ಬರಲಿಕ್ಕೆ ಅದೇನು ಜನವಾ, ಅದು ಪ್ರಾಣಿ ತುಂಬ ಒಳ್ಳೆದಿರ್ತದೆ.” ಎಂದು ತತ್ವ ಹೇಳಿದರು. ಒಂದೆರಡು ನಿಮಿಷ ಸುಮ್ಮನಾದೆ ಪಕ್ಕ ನಡೆದು ಹೋದರು ಯಾವೂದೇ ಗೋಜು ಇಲ್ಲದೆ ಪಿಳಿಪಿಳಿ ಕಣ್ಣು ಬಿಟ್ಟು ಹಸಿಹಸಿ ಸೊಪ್ಪು ತಿನ್ನುತಿತ್ತು, “ಹೌದು ನೋಡಿ ಪ್ರಾಣಿ ತುಂಬ ಒಳ್ಳೆಯದು” ಎಂದುಕೊಂಡು ಸಂಜೀವರ ಕಡೆ ತಿರುಗಿ ನೋಡಿದೆ. ಅವರು ನನ್ನ ಪೆದ್ದು ಬಾತುಕೋಳಿಯಂತೆ ನೋಡಲು ಶುರು ಮಾಡಿದರು. ಅವರ ಯೋಚನಾ ಲಹರಿ ತಪ್ಪಿಸಲು, ಕಾಡಿನ ಮಧ್ಯೆ ಗೇರು, ರಬ್ಬರ್ ಮರಗಳು ಹೇಗೆ ಬರ್ತವೆ? ಎಂದು ಕೇಳಿದೆ. ಸಂಜೀವ ಮಲೆಕುಡಿಯರು ನುಸಿನಕ್ಕು “ಹೇಗೆ ಅಂದರೆ ಹೀಗೆ ಅಂತ ಹೇಳಿಕೆ ಅಗ್ತದಾ? ನಿಮ್ಮಗೆ ಹಿಡಿಸುವ ಇತಿಸಾಹ ಹೇಳ್ತೇನೆ. ನೋಡಿ ಬ್ರಿಟಿಷ್ನವರು ಇಲ್ಲಿಗೆ ಬಂದಿದ್ರಲ್ಲ ಆಗ ನಡೆಸಿ ಹೋದ್ದು” ಎಂದು ಗೇಲಿಮಾಡತೊಡಗಿದರು. ನಾನು ನಂಬದವಳ ಹಾಗೆ ಅವರ ಮುಖ ನೋಡಿ ಕಣ್ಣು ಕೊಂಕಿಸಿ ಗುರಾಯಿಸತೊಡಗಿದೆ. ಮತ್ತೆ ನನ್ನ ಕೆರಳಿಸ ಹತ್ತಿದರು “ಹೌದು ಅಕ್ಕ ನಿಮ್ಗೆ ಹಳೆ ಕಾಲದ ಯಾವುದಾದರು ವಿಚಿತ್ರ ನೋಡಿದರೆ ಬ್ರಿಟಿಷರೇ ಮಾಡಿಸಿಟ್ಟರಬೇಕು ಅಂದುಕೊಳ್ಳತ್ತೀರಲ್ಲ ಅದಕ್ಕೆ ಹೇಳಿದೆ.” ಎಂದರು. ಮತ್ತಷ್ಟು ರೇಗಿ ಹೋಗಿ “ಮರಗಳಿಗೂ ಹಳೆ ಇತಿಹಾಸಕ್ಕೂ ಏನು ಸಂಬಂಧ? ಈ ಮರ ತೀರ ಹಳೆ ಕಾಲದಲ್ಲ” ಎಂದು ಸಿಟ್ಟುಮಾಡಿಕೊಂಡೆ. ಸಮಾಧಾನ ಮಾಡುವವರಂತೆ “ಸರಿ ಹಾಗದರೆ ಮತ್ತೊಂದು ಕಥೆ ಹೇಳ್ತೇನೆ ಕೆಲವು ಕೊಡವ ದಂಡ ನಾಯಕರು ಬ್ರಿಟಿಷರಿಗೆ ಅಕ್ಕಪಕ್ಕ ರಾಜ್ಯದ ಗುಟ್ಟುಗಳನ ಹೇಳಿಕೊಟ್ಟು ಚಮಚಗಿರಿ ಮಾಡ್ತಿದ್ರಂತೆ. ಈ ನಿಮ್ಮ ಶ್ರೀರಂಗಪಟ್ಟಣದ ಟಿಪ್ಪು ಇದ್ದಾನಲ್ಲ ಅವನು ಚಾಡಿಕೋರ ಕೊಡವ ದಂಡ ನಾಯಕರನ್ನ ಹಿಡಿದು ತಂದು ಗಡಾಯಿಕಲ್ಲು ಬೆಟ್ಟದಿಂದ ತಳ್ಳಿಸುತ್ತಿದನಂತೆ. ಶ್ರೀರಂಗಪಟ್ಟಣ್ಣ-ಹಾಸನ-ಸಕಲೇಶಪುರದಿಂದ ಶಿರಾಡಿ ಘಾಟ್ಗೆ ಬಂದು ಗಡಾಯಿಕಲ್ಲು ಬೆಟ್ಟ ತಲುಪುತಿದ್ದ. ಆವಾಗ ಇದೇ ಕಾಡಿನ ಮಧ್ಯದಿಂದ ಹೋಗತ್ತಿದನಲ್ಲ, ಬೇಜಾರು ಅಂತ ಒಂದೇರಡು ರಬರ್, ಗೇರು ಗಿಡ ನಡೆಸಿ ಹೋದಂತೆ” ಎಂದು ಹಟಹಿಡಿದ ಮಗುವಿಗೆ ಕಥೆ ಹೇಳುವಂತೆ ಕಾಗೆಗುಬ್ಬಿ ಕಥೆ ಕಟ್ಟಿದರು.

ನನ್ನ ಸಣ್ಣ ಪ್ರಶ್ನೆಗೆ ಉತ್ತರಿಸಲಾಗದೆ ಪ್ರಶ್ನೆಯನ್ನ ಗೇಲಿ ಮಾಡುತ್ತಿರುವುದಾದರು ಯಾಕೆ ಎಂದು ಅರ್ಥವಾಗದೆ. ಮತ್ತೆ ಕೇಳಿದೆ. “ಇದು ಐದು ವರ್ಷದ ಕಳಗೆ ನೆಡಸಿದಂತೆ ಕಾಣುತ್ತೆ, ನೋಡಿ ಟೀಕ್ ಮರಗಳು ಇವೆ, ರಿಸರ್ವ್ ಫಾರೆಸ್ಟ್ ನಲ್ಲಿ ನಾಟ ನಡಿತಿದೆ!! ವಾರದ ಹಿಂದೆ ಬೆಳೆದ ಮರಗಳನ್ನ ಕುಯ್ದಿರುವ ಗುರುತು ಇದೆ. ದಪ್ಪ ಮರಗಳ ಬೊಡೆ ತೋರಿಸಿ ಹೇಳಿದೆ. ಸ್ವಲ್ಪ ಚಿಕಿತರಾಗಿ “ಹೌದು ಇದು ಸಂರಕ್ಷಿತ ಅರಣ್ಯ ಯಾವ ಐಎಫ್ಎಸ್ ಅಧಿಕಾರಿ ಯಾವ ಮರವನ್ನಾದರೂ ಕುಯ್ಯಬಹುದು. ಯಾವ ಭದ್ರತಾಪಡೆ ಏನು ಬೇಕಾದರೂ ಮಾಡಬಹುದು” ಎಂದವರೆ ಸರಸರ ನಡೆದು ಹೋದರು. ನಾನು ನಲ್ಲಿ ನೀರಿಗೆ ಕಾಯ್ದು ಕೂರುವ ಕೊಡದಂತೆ ಅವರ ಮಾತು ನಿರೀಕ್ಷಿಸುತ್ತಿದ್ದೆ. ಒಂದು ಮಾರು ಮೌನವಾಗಿ ನಡೆದು ಯಾವುದೋ ಮರ ನೋಡಿ ಓ ಇಲ್ಲಿ ನೋಡಿ ಅಕ್ಕ ದೋಡ್ಡನೇರಲೆ ಹಣ್ಣು ಎಂದವರೆ ಕೀಳಲು ಮುಂದಾದರು, ನಾನು ಹಣ್ಣು ನೋಡಿ ಖುಷಿಯಾಗಿ “ಹಳೆ ಮೈಸೂರು ಕಡೆ ಪನ್ನೀರಣ್ಣು ಅನ್ನ್ತೀವಿ ತುಂಬ ರುಚಿ ಅಲ್ವ” ಅಂದೆ. ಇಬ್ಬರು ಹಣ್ಣು ತಿನ್ನುತ್ತಾ ಬೆಟ್ಟ ಮಧ್ಯೆ ಕೂತೆವು.

ಉತ್ತರಕ್ಕೆ ಕಾಯುತ್ತಿರುವ ನನ್ನ ಬೆಕ್ಕು ಕಣ್ಣುಗಳ ನೋಡಿ ಕನಿಕರಿಸಿದವರಂತೆ. “ನಮ್ಮ ಕಡೆ ನೋಡಿದವೆಲ್ಲವಕ್ಕೂ ಇತಿಹಾಸ-ಹಿನ್ನೆಲೆ ಸಿಗಲ್ಲ ಕೇಳಲು ಹೋಗಬೇಡಿ, ಪ್ರಜಾಪ್ರಭುತ್ವ ಅಲ್ಲ ಇದು ಸರ್ಕಾರ ಆಡಳಿತ.. ಲಾ ಆ್ಯಂಡ್ ಆರ್ಡರ್ ತುಂಬಾ ಚೆನ್ನಾಗಿ (!) ಕೆಲಸ ಮಾಡುತ್ತೇ, ಇಂಥ ಪ್ರಶ್ನೆಗಳು “ಪಡೆ”ಗಳ ಕಿವಿಗೆ ಬೀಳಬಾರದು. ಸರ್ಕಾರದ ಪ್ರಕಾರ ಇಲ್ಲಿ ಮನುಷ್ಯರು ಯಾರು ಇಲ್ಲ, ಒಂದಷ್ಟು ಕಾಡೆಮ್ಮೆ, ಕಡವೆ-ಜಿಂಕೆ, ಮಲೆಕುಡಿಯರು, ಅವು ಇವು ಉಡಿಪ್ರಾಣಿ ಪಕ್ಷಿಗಳಿವೆ. ಹುಲಿ ಸಂರಕ್ಷಿತಾ ಅರಣ್ಯ ಮಾಡ್ತಿದ್ದಾರೆ ಅಕ್ಕರೇ” ಎಂದ್ರು. ಗಾಬರಿಗೊಂಡತೆ “ಮಲೆಕುಡಿಯ” ಮನುಷ್ಯ ಜಾತಿ ಪಟ್ಟಿಗೆ ಸೇರಿಲ್ಲವೇ ಎಂದೆ. “ಮನುಷ್ಯ ಅದರೊಳಗೆ ಜಾತಿ? ತಣ್ಣಗೆ ನಕ್ಕರು. ಇಲ್ಲಿ ಮನುಷ್ಯರಾರು ಇರ ಬಾರದಂತೆ, ಸೇನಾ ಪಡೆ ಬಂದಿದೆ, ಒಕ್ಕಲು ಒಕ್ಲು ಎಬಿಸ್ತಿದ್ದಾರೆ ಅಕ್ಕರೇ, ನಮ್ಮಲ್ಲಿ ಕೆಲವರು ಒಂದಷ್ಟು ನೋಟು-ಬಂದಾ ತೆಕೊಂಡು ಬೆಳ್ತಂಗಡಿ ಅಚೆಗೆ ಮನೆ ಮಾಡಿಕೊಂಡು ಹೊದ್ರು ಇನ್ನೂ 15 ಕುಟುಂಬ ಇವೆ ಇಲ್ಲಿ. ಅವ್ರು ಹೊಗುದಿಲ್ವಂತೆ, ಅರ್ಧ ರಾತ್ರಿಯಲ್ಲಿ ಬಂದು ಬೆಳೆದ ಅಡಿಕೆ ಗಿಡಗಳಿಗೆ ಅವ್ರದೇ ಸರ್ಕಾರಿ ಸಿಮ್ಮೇಣ್ಣೆ ಸುರಿದು ಬೆಂಕಿ ಹಚ್ಚಿ ಹೋಗ್ತರೆ, ಮನೆಮೇಲಿನ ಹುಲು ಇಜಿ ಹಾಕ್ತಾರೆ, ಯಾಕೆ ಏನೂ ಅಂತ ಯಾವ ಗಂಡ್ಸು ಪ್ರಶ್ನೆ ಮಾಡುವ ಹಾಗಿಲ್ಲ ಆ ಪಡೆಗಳ ಮುಂದೆ, ಬಹಳ ಶಿಸ್ತಿನ ಪಡೆಗಳು ಅಕ್ಕರೇ, ಸರ್ಕಾರ ಹೇಳಿದ ಕೆಲಸ ತುಂಬ ಶ್ರದ್ಧೆಯಲ್ಲಿ ಮಾಡುತ್ತವೆ, ಜಿಲ್ಲಾಡಳಿತ ವೋಟು ಚೀಟಿ, ರೇಷನ್ ಕಾರ್ಡ್, ಎಲ್ಲ ಕೊಟ್ಟಿದೆ, ವೋಟು ಹಾಕೋವರೆಗೆ ಗ್ರಾಮ ಪಂಚಾಯತಿ ಒಳಗೆ ಇರ್ತಿವಿ, ರೇಷನ್ ತರ್ಲಿಕ್ಕೆ ಹೋದ್ರೆ ನೀವು ಬೇರೆ ಗ್ರಾಮ ಪಂಚಾಯತಿ ಸೇರ್ತಿರೀ, ಅಲ್ಲೇ ಹೋಗಿ ಕೇಳಿ ಅಂದ್ರು, ಅಲ್ಲಿ ಹೋಗಿ ಕೇಳಿದ್ರೆ ನಿಮ್ಮಗಳ ಹೆಸರು ಇನ್ನು ಸೇರ್ಪಡೆಗೊಂಡಿಲ್ಲ ಅಂದ್ರು, ಎಲ್ಲೂ ನಾಲಕ್ಕು ಕಾಳು ಅಕ್ಕಿ ಸಿಗಲಿಲ್ಲ, ಬೆಟ್ಟದೊಳಗೆ ಕೃಷಿ ಮಾಡುವ ಹಾಗೂ ಇಲ್ಲ, ಈ ವಾರದಿಂದ ಕರೆಂಟು ಲೈನು ತೆಗೆದಿದ್ದಾರೆ, ಸಂರಕ್ಷಿತ ಅರಣ್ಯದಲ್ಲಿ ಅವೆಲ್ಲ ಇರಬಾರದಂತೆ. ಇಲ್ಲಿಯ ಮಲೆಕುಡಿಯರಿಗೆ ಅವರ ಕರೆಂಟೆ ಅಭ್ಯಸನೇ ಆಗಿಲ್ಲ ಬಿಡಿ, ವರ್ಷದಲ್ಲಿ ಎರಡೇ ದಿನ ಕರೆಂಟು ಇರ್ತಿತ್ತು, ಎಲ್ಲಾ ಕಂದಿಲು ಮನೆ ಸುತ್ತ ಹಚ್ಚಿಟ್ಟರೇ, ನಿಮ್ಮ ಮೈಸೂರು ಅರಮನೆ ಕಾಣ್ತೀರಿ ನೀವು ಎಂದು ನಕ್ಕು.. ನಮ್ಮ ಅಣ್ಣಪ್ಪ, ಪಿಳಿಕುಳ ತಾಯೇ ಕಾಪಾಡಬೇಕು ಎಂದು ಧೀರ್ಘ ಉಸಿರೆಳೆದು ಮೌನವಾದರು.

ಮತ್ತೆ ನಾನು ಯಾವ ಪ್ರಶ್ನೆಗಳನ್ನು ಕೇಳಲಿಲ್ಲ. ಒಂದಷ್ಟು ಮೌನದ ಬಳಿಕ ಮತ್ತೆ ಕಣ್ಣಲ್ಲಿ ನೀರು ತರಿಸಿಕೊಂಡು ಹೇಳಿದರು “ದಾದೇ ಹುಲಿ ಅಕ್ಕರೇ. ನಾನು ಹುಟ್ಟಿದಾಗನಿಂದ ನಮ್ಮ ಕಾಡೊಳಗೆ ನೋಡಲೇ ಇಲ್ಲ. ನಮ್ಮ ಆಕ್ರೋಶಗಳು ಮಾವೋವಾದಿತನಗಳಲ್ಲ. ಕನಿಷ್ಠ ಹಣೆಬರಹವು ಇಲ್ಲದ ಅಲೆಮಾರಿಯಾಗಿದ್ದೇವೆ. ಎನ್ನುತ್ತಿದ್ದಂತೆ ಅವರು ಕಂಠ ಗದ್ದಗರಿತವಾದವು. ಮೊನ್ನೆ ನಾರಾವಿಯಲ್ಲಿ ನಮ್ಮವರ ಮನೆಗಳ ಕೆಡವಿಸಿದರು. ಉಳಿದವರನ್ನ ಒಕ್ಕಲೆಬಿಸುತ್ತಿದ್ದಾರೆ. ಪ್ರತಿಭಟಿಸಿದ ನಮ್ಮ ಹುಡುಗನೊಬ್ಬನ ಅರೆಸ್ಟ್ ಮಾಡಿದ್ದಾರೆ. ಅವನ ಮನೆಯಲ್ಲಿ ಮಾವೋವಾದಿ ಕರಪತ್ರ ಸಿಕ್ಕವಂತೆ ಇದು ಯಂಥ ಆರೋಪ ಹೇಳಿ? ಇದಕ್ಕೆಲ್ಲಾ ಯಾರು ಹೊಣೆ?  “ಬಂಡಾಯ ನಮ್ಮ ಕಾನೂನಿನಲ್ಲಿ ಅಪರಾಧ!!”  ಉಸಿರಿಲ್ಲದ ನಮಗೆ ದನಿ ಬೇಕು. ಇದು ನಮ್ಮ ಕಾಡು ನಾವು ಕಾಪಿಟ್ಟ ಕಾಡು. ‘ಮಲೆಕುಡಿಯರು ಪ್ರಾಣಿಗಳು ಎಂದಾರೂ ಸಂರಕ್ಷಿಸಿ’ ಮಲೆ ಮಕ್ಕಳ ಉಳಿಸಲು ನಕ್ಸಲ ಕಾಡಾತ್ಮ ಬೇಕು ಎನ್ನವಂಥ ಅನಿವಾರ್ಯತೆ ತಂದವರಾರು ಹೇಳಿ? ಎನ್ನುತ್ತಾ ಕೆಲ ಕ್ಷಣ ಮೌನವಾದರು. ಮತ್ತೆ ಏನೋ ಯೋಚಿಸಿ “ಬಲೆಬಲೆ ಅಕ್ಕ ಸಂಜೆ ಒಳಗೆ ಬೆಟ್ಟದ ಕೆಳಗೆ ತಲುಪಬೇಕು. ಸಂಜೆ ಯಾಗುತ್ತಲೇ ಇಲ್ಲ ಯಾರನ್ನು ಬಿಡುವುದಿಲ್ಲ. ನಕ್ಸಲ್ ಚಟುವಟಿಕೆ ಇದೆಯಂತೆ ಇಲ್ಲಿ ನಕ್ಸಲ್ ಚಟುವಟಿಕೆ” ಎನ್ನುತಾ ಎದ್ದರು.

ಕಾಡಿನ ನೆಮ್ಮದಿಯ ಸಂಭ್ರಮದಲ್ಲಿದ್ದ ನನಗೆ ಬೆಳಕಿದ್ದರು ಸುಧೀರ್ಘ ಕತ್ತಲು ಅವರಿಸುತ್ತಿರುವಂತೆ ಭಾಸವಾಗ ತೊಡಗಿತ್ತು. ಅಪರಿಚಿತ ಭಾವ ಪಕ್ಕದ ಮರಗಳಿಗೆ, ಅಡಿ ಅಡಿಗಳು ಬೆಳೆದು, ಒಂದು ತಬ್ಬಿಗೆ ಸಿಗದ ಹೆಮ್ಮರಗಳ ಮುಖವೇ ಕಾಣುತ್ತಿರಲಿಲ್ಲ, ತಲೆಯೆತ್ತಿ ನೋಡಿದರೆ ಅಷ್ಟು ಎತ್ತರ ಕಳೆದರೂ ತುದಿಯಿಲ್ಲ. ರೆಂಬೆ ರೆಂಬೆಗಳು ವಸೆದುಕೊಂಡು ಯಾವ ರೆಂಬೆ ಯಾವ ಮರದ್ದು ಎನ್ನುವಷ್ಟು ಒಗ್ಗಟ್ಟು ತೋರುತ್ತಿದ್ದವು. ಎಲೆಗಳ ಕಿಂಡಿಯಲ್ಲಿ “ಕಾಡಾತ್ಮ” ನಮ್ಮ ಮಾತುಕೇಳುತ್ತಾ ದನಿಬೆಳಕ ಭರವಸೆ ಮೂಡಿಸಿದವು.

ಕಲಾಕೃತಿಗಳು: ಡಾ. ಅಶೋಕ ಶೆಟಕಾರ

ಹರವು ಸ್ಫೂರ್ತಿಗೌಡ

ಕವಿ, ಪತ್ರಕರ್ತೆ ಹರವು ಸ್ಫೂರ್ತಿಗೌಡ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರವು ಗ್ರಾಮದಲ್ಲಿ. ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ, ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕಬ್ಬು’, ‘ಕೋಳಿ ಅಂಕ’ ಸಾಕ್ಷಿಚಿತ್ರ ನಿರ್ದೇಶನ. ಕನ್ನಡ ಪುಸ್ತಕ ಪ್ರಾದಿಕಾರದಿಂದ ‘ಹುಣಸೆ ಹೂ’ ಮೊದಲ ಕವನ ಸಂಕಲನ ಪ್ರಕಟಣೆ, ‘ಋಣ’ ಅವರ ಎರಡನೆ ಕವನ ಸಂಕಲನ, ಸೂಲಂಗಿ ಕಾದಂಬರಿ ಅಚ್ಚಿನಲ್ಲಿದೆ. ಜನಶ್ರೀ, ಪ್ರಜಾಟಿವಿ, ಬಿಗ್ ಬಾಸ್, ಸೂಪರ್ ಮಿನಿಟ್, ಕನ್ನಡಪ್ರಭದಲ್ಲಿ ಕಾರ್ಯನಿರ್ವಹಣೆ. ಸದ್ಯ ಪ್ರಜಾವಾಣಿಯಲ್ಲಿ ಉಪ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author